ತಬ್ಬಿಬ್ಬುಗೊಳಿಸುವ ಕವಿ ಢಸಲ್!

ಡಾ. ಸತ್ಯಪ್ರಕಾಶ್ ಎಂ ಆರ್

ಫೆಬ್ರವರಿ ೧೫ ಖ್ಯಾತ ದಲಿತ ಕವಿ ನಾಮ್‌ದೇವ್ ಢಸಲ್ ಜನ್ಮದಿನ.

ಮರಾಠಿ ಭಾಷೆಯಲ್ಲಿ ನಾಮದೇವ್ ಢಸಲ್ ಬಹುದೊಡ್ಡ ಕವಿ. ಆದರೆ ಮಹಾರಾಷ್ಟ್ರದ ಹೊರಗೆ ಅಪರಿಚಿತ. ಢಸಲ್ ನಮ್ಮನ್ನು ತಬ್ಬಿಬ್ಬುಗೊಳಿಸುವ ಕವಿ. ದಲಿತ್ ಪ್ಯಾಂಥರ್ಸ್ ನ ಸಂಸ್ಥಾಪಕ, ಹೋರಾಟಗಾರ, ಎಡಪಂಥೀಯ ವಿಚಾರಧಾರೆ ಹೊಂದಿದ್ದರೂ ಶಿವಸೇನೆಯೊಂದಿಗೆ ಗುರುತಿಸಿಕೊಂಡಿದ್ದ ಸಂಕೀರ್ಣ ವ್ಯಕ್ತಿತ್ವ. ಮುಂಬೈ ನಗರದ ‘ರೆಡ್ ಲೈಡ್’ ಪ್ರದೇಶದ ರೂಪಕ ‘ಗೋಲ್ಪಿತಾ’ ನಾಮ್‌ದೇವ್ ಅವರ ಕಾವ್ಯಪ್ರಪಂಚವೂ ಹೌದು, ಸ್ಫೂರ್ತಿಯೂ ಹೌದು. ತಮ್ಮ ಪ್ರತಿ ಕವಿತೆಯಲ್ಲಿಯೂ ಸ್ಥಾಪಿತ ಕಾವ್ಯಾಭಿರುಚಿಯನ್ನು ಬುಡಮೇಲು ಮಾಡುವ ಗೆರಿಲ್ಲಾ ಕವಿ ಢಸಲರ ಆಯ್ದ ಕವನಗಳ ಅನುವಾದ ಇಲ್ಲಿದೆ.

* * * * * *

ಕ್ರೌರ್ಯ

ಮಿಥುನದ ಮತ್ತಿನಿಂದ ತಗುಲಿದ ರೋಗ ತಂದ ನೋವು ನಾನು.
ನೂರಾರು ಸಾವಿರಾರು ದುಃಖದ, ದೈನ್ಯದ ಕಣ್ಣುಗಳನು
ಕಂಡು ನಲುಗಿದ ಚೇತನ ನಾನು.
ನನ್ನೊಳಗೆ ಸ್ಫೋಟಿಸಿದ ಕ್ರಾಂತಿಯಲಿ ತತ್ತರಿಸಿದ ತಲ್ಲಣ ನಾನು.
ಚಂದ್ರನ ಬೆಳಕು ಇಲ್ಲೆಲ್ಲೂ ಇಲ್ಲ;
ಹನಿ ನೀರಿನ ಕುರುಹೂ ಇಲ್ಲ.
ನನ್ನ ಮಾಂಸವ ಕಿತ್ತು ತಿನ್ನುತಿದೆ ಕ್ಷುದ್ರ ಮೃಗ;
ನನ್ನ ಮೈಮನದಿಂದಾಚೆಗೆ ಹಬ್ಬುತಿದೆ ಕ್ರೌರ್ಯದ ವಿಷ.

ನನ್ನ ಯಾತನೆಯ ಅಸ್ತಿತ್ವಕೆ ಮುಕ್ತಿ ಕೊಡು.
ನಕ್ಷತ್ರಗಳನು ಪ್ರೇಮಿಸಲು ನನ್ನನು ಬಿಟ್ಟುಬಿಡು.
ದಿಗಂತದ ಕಡೆಗೆ ತೆವಳುತಿದೆ ಅರಳುತಿರುವ ಈ ಹೂವು.
ಛಿದ್ರಗೊಂಡ ಮುಖದಾಳದಿಂದ ಪುಟಿಯುತಿದೆ ಓಯಸಿಸ್ಸಿನ ಒಲವು.
ಅಂಕೆಗೆ ನಿಲುಕದ ಸೃಷ್ಟಿಯ ಬಾಗಿಲಲಿ ಸುತ್ತುತಿದೆ ಚಂಡಮಾರುತ.
ನೋವಿನ ಕೂದಲನು ನೇವರಿಸಲಾರಂಭಿಸಿದೆ ಬೆಕ್ಕು.
ನನ್ನೆಲ್ಲ ಆಕ್ರೋಶಕೆ ನೆರಳಾಯಿತು ರಾತ್ರಿ.
ಕಿಟಕಿಯ ಕಣ್ಣಿನಾಚೆ ಕುಣಿಯಲಾರಂಭಿಸಿದೆ ಬೀದಿನಾಯಿ.
ರಾಡಿಯ ಎದೆಬಗಿಯುತಿದೆ ಆಸ್ಟ್ರಿಚ್ಚಿನ ಬಾಯಿ.
ಅನುಭವದ ಸತ್ಯವನು ತಿಂದು ತೇಗುತಿದೆ ಈಜಿಪ್ಟಿನ ಕ್ಯಾರೆಟ್.
ಹೂತ ಹೆಣವೊಂದನು ಬಡಿದೆಬ್ಬಿಸುತಿದೆ ಕಾವ್ಯ.
ರಭಸವಾಗಿ ಮುಚ್ಚಿಹೋಗುತ್ತಿವೆ ನನ್ನೊಳಗಿನ ಬಾಗಿಲು.
ಅನ್ವರ್ಥಗಳ ಒಳಗೆಲ್ಲಾ ಓಕುಳಿಯ ವಿದ್ಯುತ್ ಸಂಚಾರ.
ವ್ಯಾಕರಣದ ಗೋಡೆಗಳಾಚೆ ವ್ಯಾಪಿಸುತಿದೆ ನನ್ನ ಹಗಲು.
ವಸುಧೈವ ಕುಟುಂಬದ ಮೇಲೆ ಚೆಲ್ಲುತಿದೆ ದೇವರ ಹೇಲು.
ಒಂದೇ ಅಗ್ನಿ ಕುಂಡದಲಿ ಬೇಯುತಿದೆ ನೋವು, ಮತ್ತು ರೊಟ್ಟಿ.
ಪುರಾಣಗಳಲಿ, ಜನಪದಗಳಲಿ ಉರಿಯುತಿದೆ ನಗ್ನರ ಜ್ವಾಲೆ.
ಜೀವದ ಬೇರುಗಳೊಳಗೆ ಸೇರುತಿದೆ ಹಾದರದ ಕಲ್ಲುಬಂಡೆ.
ನಿಶ್ಯಕ್ತ ಕಾಲುಗಳ ಮೇಲೆ ನಿಂತಿದೆ ನಿಟ್ಟುಸಿರು.
ಶುರುವಾಗಿದೆ ಈಗ ಸೈತಾನನ ಶೂನ್ಯದ ಬಸಿರು.
ಬಯಕೆಯ ಹೊಸ್ತಿಲಲಿ ನಿಂತಿಹಳು ಯಾರೂ ಮುಟ್ಟದ ಹೆಣ್ಣು.
ಮರುಹುಟ್ಟು ಪಡೆಯುತಿದೆ ಹತಾಷೆಯ ಮಣ್ಣು.
ಅಮರತ್ವದ ಪ್ರತಿಮೆಯನು ದೂಡುತಿದೆ ಹುಚ್ಚು ಕ್ರೌರ್ಯ.
ಬದುಕಿನ ಕವಚವನು ತೆಗೆದೆಸೆಯುತಿದೆ ಮಣ್ಣು.
ಕಳಚಿಕೊಳ್ಳುತಿದೆ ಕತ್ತಲಿನ ಮುಂಡಾಸು.
ನೀವು, ನಿಮ್ಮ ಕಣ್ಣು ತೆರೆಯಿರಿ; ಇವೆಲ್ಲವೂ ಹಳೆಯ ಪದಗಳು.
ಪುಟಿದೇಳುತಿರುವ ಅಲೆಗಳ ಒಡಲೊಳಗೆ ಬೆರೆಯುತಿದೆ ಸಣ್ಣ ಸೆಲೆ.
ತನ್ನ ತೀರವ ಮುಟ್ಟುತಿದೆ ಪ್ರತಿಯೊಂದು ಅಲೆ.
ಆದರೂ, ನನ್ನ ಮೈಮನದಿಂದಾಚೆಗೆ ಹಬ್ಬುತಿದೆ ಕ್ರೌರ್ಯದ ವಿಷ.
ನರ್ಮದೆಯ ನೀರಿನಂತೆ: ಇದು ಶಾಂತ, ಪ್ರಶಾಂತ.

ಕಾಮಾಟಿಪುರ

ಶತಮಾನಗಳಿಂದ ಗುಪ್ತರೋಗದ ಗಾಯಕೆ ತುತ್ತಾಗಿರುವ
ರಾತ್ರಿಪಾಳಿಯ ಮುಳ್ಳುಹಂದಿಯೊಂದು
ದುಷ್ಟದಿನಗಳನು ದೂಡುತಾ
ಸಿಹಿಕನಸುಗಳನು ಕಾಣುತಾ
ಮನಮೋಹಕ ಹೂಗುಚ್ಛದಂತೆ ಇಲ್ಲಿ ಒರಗಿಕೊಂಡಿದೆ

ಮಾತು ಮರೆತು ಮೂಕನಾದ ಮಾನವನ
ದೈವವಿಲ್ಲಿ ಹೇಲುವ ಅಸ್ಥಿಪಂಜರ
ಈ ಬಿಗುಮೌನಕೆ ಎಂದಾದರೊAದು ದಿನ ಮಾತು ಬರುವುದೇ?

ನಿಮ್ಮ ಶನಿದೃಷ್ಟಿಯನಿಲ್ಲಿ ಬೇಕಾದರೆ ಬೀರಬಹುದು
ಕಣ್ಣೀರೇನಾದರೂ ಇದ್ದರೆ ಘನವಾಗಿ ಉಳಿಸಿಕೊಳ್ಳಬಹುದು
ಮನಮೋಹಕ ಹೂಗುಚ್ಛವ ನೋಡಿ ತಲ್ಲಣಗೊಳ್ಳುವ ಮುನ್ನ
ಈ ಮುಳ್ಳುಹಂದಿ
ಚAಗನೆ ಹಾರಿ
ಮೈಮೇಲೆ ಎರಗಿ
ಹರಿತವಾದ ಮುಳ್ಳುಗಳಿಂದ ಚುಚ್ಚಿ ನೋಯಿಸುವುದು ದಿಟ
ರಾತ್ರಿರಾಣಿ ಮದುಮಗನಿಗಾಗಿ ಅಣಿಯಾಗುವ ವೇಳೆಗೆ, ಗಾಯಗಳು ಅರಳುವವು
ಎಡೆಬಿಡದೆ ಹೂವುಗಳು ಮೈನರೆಯುವವು
ನವಿಲುಗಳು ಕುಣಿದು ರಮಿಸುವವು

ಇದು ನರಕ
ಪಾತಾಳಕೆ ದೂಡುವ ಘೋರ ನರಕ
ಸದಾ ಕಾಡುವ ಯಾತನೆಯ ನರಕ
ನರ್ತಕಿಯ ಗೆಜ್ಜೆ ತೊಟ್ಟ ಸುಂದರ ನರಕ!

ನಿಮ್ಮ ಚರ್ಮದ ಹೊದಿಕೆಯನು ಸುಲಿದು ಹೊರಬನ್ನಿ
ಆತ್ಮರತಿಯನನುಭವಿಸಿ ರಮಿಸಿ ಬನ್ನಿ
ವಿಷತುಂಬಿದ ಅಮರ ಗರ್ಭಗಳು ಛಿದ್ರವಾಗಲಿ ಬಿಡಿ
ಈ ಮಾಂಸದ ಮುದ್ದೆಯ ಬಣ್ಣ ಮಾತ್ರ ಬಯಲಾಗದಿರಲಿ
ಒಮ್ಮೆ ರುಚಿ ನೋಡಿ
ಪೊಟಾಷಿಯಂ ಸಯನೈಡ್ ಇದು!
ಕ್ಷಣಮಾತ್ರದಲಿ ಸಾವನ್ನಪ್ಪುವ ಮುನ್ನ ನೀವು
ಸದಾ ಕೀಳಾಗುವ ಕರಾಳತೆಯನು ಬರೆದಿಡಿ

ಸಿಹಿಯಾದ ಕಳೇಬರಗಳ ರುಚಿಯನು
ಸವಿಯಲು ಸಾಲುಗಟ್ಟಿ ನಿಲ್ಲುವರು ಇಲ್ಲಿ
ಸಾವಿನ ಮನೆಯಿದು, ಪದಗಳ ತಾಣವಿದು
ಇನ್ನೇನು ಭೋರ್ಗರೆವ ಮಳೆಯಾಗಲಿದೆ ಇಲ್ಲಿ

ಮಣ್ಣಿನ ಮೇಲೆ ಕುಳಿತ
ಓ ಕಾಮಾಟಿಪುರವೇ
ಎಲ್ಲ ಋತುಗಳನು ತೋಳತೆಕ್ಕೆಯಲಿ ಬಂಧಿಸಿರುವ
ಓ ಕಾಮಾಟಿಪುರವೇ
ಹಾದರದ ತಲ್ಲಣ-ತೆವಲುಗಳಾಚೆಗೆ
ಇದೇ ಮಣ್ಣಿನೊಳಗಿನಿಂದ ಅರಳುವ
ತಾವರೆಯ ಹೂವಿಗಾಗಿ ನಾ ಕಾಯುವೆ
ಅವಳು ಹೋದ ಆ ದಿನ

ಅವಳು ಹೋದ ಆ ದಿನ,
ನನ್ನ ಮುಖಕ್ಕೆ ಮಸಿ ಬಳಿದುಕೊಂಡೆ.
ತಿಕ್ಕಲು, ಕ್ರೂರ ಗಾಳಿಯ ಕಪಾಳಕ್ಕೆ ಹೊಡೆದೆ.
ನನ್ನ ಹರಕು-ಮುರುಕು ಬದುಕನು ಕೈಗೆತ್ತಿಕೊಂಡೆ.
ಒಡೆದ ಕನ್ನಡಿಯ ಮುಂದೆ ನಗ್ನನಾಗಿ ನಿಂತೆ.
ನನ್ನ ಮೇಲೆಯೇ ನನಗೆ ಕಿಚ್ಚು.
ಗತ್ತಿನಿಂದ ಸೂರ್ಯನನು ‘ಮುಠ್ಠಾಳ’ ಎಂದೆ.
ರAಗಿನ ಲೋಕದ ಹರಿಕಾರರಿಗೆ ಹುಡುಕಿ ಹುಡುಕಿ ಥೂ! ಎಂದೆ.
ಪೂರ್ವದಿAದ ಪಶ್ಚಿಮಕ್ಕೆ ಬರಿಗಾಲಲಿ ನಡೆದೆ.
ದಾರಿಯಲಿ ಬಿದ್ದ ಕಲ್ಲುಗಳನೆತ್ತಿ ತೂರಿಕೊಂಡೆ.
ಸAಭ್ರಮದ ಸ್ಫೂರ್ತಿಯಲಿ ಬೆಟ್ಟಗುಡ್ಡಗಳನು ಸೀಳಿ
ಹರಿವ ನೀರಿಗೆ ಯಾವ ಸಾಗರವ ಸೇರುವ ಹಂಬಲವೋ?
ಅಥವಾ, ಮಂದಗತಿಯಲಿ ಮರಳಿನ ಒಡಲೊಳಗೆ
ಇಳಿಯುವ ತವಕವೊ?
ನನ್ನೊಳಗೆ ನಾನಿಲ್ಲವೆಂಬ ಪ್ರಶ್ನೆ.
ಅವಳ ಹೆಣವನು ಬಾಚಿ ತಬ್ಬಿ
ರೋಧಿಸುವುದಿನ್ನೆಲ್ಲಿ?
ಅವಳು ಹೋದ ಆ ದಿನ,
ನನ್ನ ಮುಖಕ್ಕೆ ಮಸಿ ಬಳಿದುಕೊಂಡೆ.

ದರ್ಗಾದ ದಾರಿಯಲ್ಲಿ

ಸುಟ್ಟು ಕರಕಲಾಗಿ
ಸೋರುತಿರುವ ಸೂರ್ಯ
ರಾತ್ರಿಯಾಲಿಂಗನದಲಿ ಮೈಮರೆತ ದಿನ
ಚಿಂದಿ ಹರಡಿಕೊಂಡ
ಬೀದಿ ಬದಿಯಲಿ
ನಾ ಹುಟ್ಟಿದಾಗ-
ಹುಟ್ಟಿ ಅನಾಥನಾದಾಗ-
ನನಗೆ ಜನ್ಮವಿತ್ತವಳು ಸ್ವರ್ಗದಲ್ಲಿರುವ
ನಮ್ಮ ‘ತಂದೆ’ಯ ಬಳಿ ಹೋದಳು
ಬೀದಿಯಲಿ ದೆವ್ವಗಳನು ಪೀಡಿಸಿ
ಹೈರಾಣಾಗಿದ್ದಳು ಅವಳು
ತನ್ನ ಸೀರೆ ಸೆರಗಿನಲಿ ಕತ್ತಲನು
ಅಳಿಸಬಯಸಿದ್ದಳು ಅವಳು
ಈ ಮಧ್ಯೆ, ದರ್ಗಾದ ದಾರಿಯಲ್ಲಿ
“ಐದು ಪೈಸೆ ಕೊಡಿ
ಐದು ಶಾಪ ಪಡಿ” ಎನ್ನುತಾ
ಬೀದಿಯ ಕೊಳಕಿನ ಮೇಲೆ
ತನ್ನ ಫ್ಯೂ಼ಸ್ ಕಳೆದುಕೊಳ್ಳುವ
ಮನುಷ್ಯನಂತೆ,
ನಾ ಬೆಳೆದೆ

ದಿನ ಬರುವುದು, ದಿನ ಕಳೆವುದು

ನಡೆಯಬಾರದ ದಾರಿಯಲಿ
ನಡೆದೆವು ನಾವು

ನಡೆಯುತಾ ಹೋದಂತೆ
ಒಡನಾಡಿಯಾಯಿತು ಕತ್ತಲು
ನಗರದ ಆತ್ಮಕಥನದೊಳಗೆ
ತೂರಿ ತಲ್ಲಣಿಸಿತು ಒಂಟಿ ಬಿರುಗಾಳಿ,
ದಗಾಕೋರ ನಂಬಿಕೆಗಳು
ಎಲ್ಲ ನೋವುಗಳ ಬೇರಿನ ಹುಡುಕಾಟ ಈಗ

ನಿನ್ನೆ ಕತ್ತಲೆಯೊಂದೇ
ಸಾವಿರ ಎಲೆಗಳು ಸರಿದ ಸದ್ದು ಮಾಡುತ್ತಿತ್ತು ಇಲ್ಲಿ
ಇಂದು, ಅಂತರAಗದ ಜಗತ್ತು ಬೆಕ್ಕಸ ಬೆರಗಾಗಿದೆ
ಹಲವು ಯುಗಗಳು ಕಳೆದ ಮೇಲೆ
ಅಸ್ಪೃಶ್ಯ ನೆಲದ ಮೇಲೆ ಮಳೆ ಸುರಿಯುತಿದೆ

ಬಂದ ಹಾಗೆ ದಿನಕಳೆದೆವು ನಾವು
ದಿನಕಳೆದ ಹಾಗೆ ಅದನಟ್ಟಿದೆವು ನಾವು

ಕೃಪೆ: ದಿಲೀಪ್ ಚಿತ್ರೆ ಅನುವಾದಿಸಿರುವ “ನಾಮ್‌ದೇವ್ ಢಸಲ್: ಪೊಯೆಟ್ ಆಫ಼್ ದಿ ಅಂಡರ್‌ವರ್ಲ್ಡ್,”

ನವಯಾನ ಪ್ರಕಾಶನ.

# # #

‍ಲೇಖಕರು avadhi

February 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. prathibha nandakumar

    ನಾಮದೇವ್ ಢಸಲ್ ಮಹಾರಾಷ್ಟ್ರದ ಹೊರಗೆ ಅಪರಿಚಿತ!!!!!!!!!! ಇದನ್ನು ನಿಮಗೆ ಯಾರು ಹೇಳಿದ್ದು?

    ಪ್ರತಿಕ್ರಿಯೆ
    • ಸತ್ಯಪ್ರಕಾಶ್ ಎಂ. ಆರ್

      ಕೆಲವರಿಗೆ ಅಪರಿಚಿತ ಎಂದಾಗಬೇಕಿತ್ತು. Generalized ಹೇಳಿಕೆ ತಪ್ಪು. ಕ್ಷಮಿಸಿ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: