ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಪ್ಪದೆ ಓದಿ ಅಡಿಗರ ’ಹುಲ್ಲಿನ ದಳಗಳು’, ಹೃದಯ ಶಿವ ಹೇಳ್ತಾರೆ

ಹೃದಯ ಶಿವ

1819ನೇ ಇಸವಿ ನ್ಯೂಯಾರ್ಕ್ ನಗರಕ್ಕೆ ಸುಮಾರು ಮೂವತ್ತು ಮೈಲಿ ದೂರದಲ್ಲಿರುವ ಲಾಂಗ್ ಐಲ್ಯಾಂಡ್ ಎಂಬ ದ್ವೀಪದ ಮೇಲೆ, ವೆಸ್ಟ್ ಹಿಲ್ಸ್ ಎಂಬಲ್ಲಿ ಇದ್ದ ಒಂದು ಸಣ್ಣ ರೈತಸಮಾಜದಲ್ಲಿ ಜನಿಸಿದ ವಾಲ್ಟ್ ವಿಟ್ ಮನ್, ಕವಿ, ಕತೆಗಾರ, ಪತ್ರಕರ್ತ. ಹಳ್ಳಿಗಳ ಶಾಲೆಗಳಲ್ಲಿ ಪಾಠ ಹೇಳಿಕೊಟ್ಟ ಮೇಷ್ಟ್ರು.

ಈ ಮಹತ್ವದ ಕವಿ 1855ರಲ್ಲಿ ಪ್ರಕಟಿಸಿದ ಕೃತಿಯೇ ‘ಲೀವ್ಸ್ ಆಫ್ ಗ್ರಾಸ್’. ಆ ಕೃತಿಯನ್ನು ನಮ್ಮ ಗೋಪಾಲಕೃಷ್ಣ ಅಡಿಗರು ‘ಹುಲ್ಲಿನ ದಳಗಳು’ ಎಂಬ ಹೆಸರಿನಡಿ 1966ರಲ್ಲೇ ಕನ್ನಡಕ್ಕೆ ತಂದಿದ್ದಾರೆ. ಈ ಅನುವಾದದ ಮೂಲಕ ವಿಟ್ ಮನ್ ಅನ್ನು ಕನ್ನಡಕ್ಕೆ ಆಪ್ತವಾಗಿ ತಂದಿದ್ದಾರೆ. ಸಾಹಿತ್ಯ ಅಕಾದೆಮಿ ಪ್ರಕಟಿಸಿದೆ.
ದೀರ್ಘಕಾಲ ರೋಗಗ್ರಸ್ತನಾಗಿದ್ದ ವಿಟ್ ಮನ್ ತೀರಿಕೊಂಡಿದ್ದು 1892ನೇ ಇಸವಿ ಮಾರ್ಚಿ 27ರಂದು.
ಅಂದಹಾಗೆ, ಒಟ್ಟು ನೂರಾ ಒಂದು ಕವಿತೆಗಳಿರುವ ಈ ‘ಹುಲ್ಲಿನ ದಳಗಳು’ ಕೃತಿಯನ್ನು ನಾನು 2009ನೇ ಇಸವಿ ಸೆಪ್ಟಂಬರ್ 20ರಂದೇ ಕೊಂಡು ತಂದಿದ್ದರೂ ಈವರೆಗೆ ಗಂಭೀರವಾಗಿ ಓದಿರಲಿಲ್ಲ. ಆಗಾಗ ಯಾವುದೋ ಪುಟ ತೆರೆದು, ಯಾವುದೊ ಒಂದು ಪದ್ಯವನ್ನು ಓದಿ ಸುಮ್ಮನಾಗಿ ಬಿಡುತ್ತಿದ್ದೆ. ಶ್ರದ್ಧೆಯಿಂದ ಇಲ್ಲಿನ ಕವಿತೆಗಳ ಆಳಕ್ಕೆ ಇಳಿಯುತ್ತಿರಲಿಲ್ಲ. ವಿಟ್ ಮನ್ನನ ಕಾವ್ಯಾಧ್ಯಯನದ ಸುಖವನ್ನು ಅನುಭವಿಸುತ್ತಿರಲಿಲ್ಲ.
ಆದರೆ, ಇದಕ್ಕೆ ಅಪವಾದವೆನ್ನುವಂತೆ ಕಳೆದ ರಾತ್ರಿ ಪೂರ ವಿಟ್ಮನ್ ನನ್ನನ್ನು ಆವರಿಸಿದ್ದ. ತನ್ನ ತೆಕ್ಕೆಗೆ ಸಂಪೂರ್ಣ ಎಳೆದುಕೊಂಡು, ತನ್ನ ಕವಿತೆಗಳ ಮಾಂತ್ರಿಕತೆ ಎಂಥಾದ್ದು ಅಂತ ಬೆಚ್ಚಿ ಬೀಳಿಸಿದ್ದ. ಅಯ್ಯೋ, ಇಂಥದೊಂದು ಕೃತಿಯನ್ನು ನೆಟ್ಟಗೆ ಓದದೆ ಇಷ್ಟು ಕಾಲ ಸುಮ್ಮನೆ ಮನೆಯಲ್ಲಿ ಇಟ್ಟುಕೊಂಡು ತಪ್ಪು ಮಾಡಿದೆನಲ್ಲಾ ಅನ್ನಿಸುವಂತೆ ಮಾಡಿಬಿಟ್ಟಿದ್ದ.

ಹಾಗಾಗಿ, ‘ಹುಲ್ಲಿನ ದಳಗಳು’ ಪ್ರತಿಯೊಬ್ಬರೂ ಓದಬೇಕಾದ ಕಾವ್ಯಗುಚ್ಛ. ಈ ಕೃತಿಯ ಕೆಲವು ಕವಿತೆಗಳು ಇಲ್ಲಿವೆ…

ಮೂಲ : ವಾಲ್ಟ್ ವಿಟ್ಮನ್
ಕನ್ನಡಕ್ಕೆ : ಗೋಪಾಲಕೃಷ್ಣ ಅಡಿಗ
 
ಇದು ನನಗೆ ಸಾಧ್ಯವಿದ್ದಿದ್ದರೆ
ಮಹಾಕವಿಗಳೊಡನೆ ತಾಳೆ ನೋಡಲು ನನಗೆ ಸಾಧ್ಯವಿದ್ದಿದ್ದರೆ
ಅವರ ಭವ್ಯ ಭಾವಚಿತ್ರಗಳನ್ನು ರೂಪಿಸಲು, ಅವರೆಲ್ಲರೊಡನೆ ಬೇಕಾದಾಗ್ಗೆ ಸ್ಪರ್ಧಿಸಲು ಸಾಧ್ಯವಿದ್ದಿದ್ದರೆ,
ಹೋಮರನೊಡನೆ ಅವನ ಯುದ್ಧಯೋಧರ ಜೊತೆಗೆ, ಹೆಕ್ಟರ್, ಅಖಿಲೀಸ್, ಅಜಾಕ್ಸ್ ಇವರೊಡನೆ,
ಅಥವಾ ಷೇಕ್ಸ್ ಪಿಯರನ ಸಂಕಟಸಂಲಗ್ನ ಹ್ಯಾಮ್ಲೆಟ್, ಲಿಯರ್, ಒಥೆಲೋರೊಡನೆ,
ಟೆನಿಸನ್ನನ ಸುಂದರ ಸ್ತ್ರೀಯರೊಡನೆ, ಅತ್ಯುತ್ತಮವಾದ ಛಂದಸ್ಸು, ಚತುರೋಕ್ತಿ,
ಪರಿಪೂರ್ಣ ಪ್ರಾಸಗಳಲ್ಲಿ ಬಳಸಬಲ್ಲಂಥ ಅತ್ಯುಚ್ಚ ವಿಚಿತ್ರ ಕಲ್ಪನೆಯೊಡನೆ
ಪ್ರತಿಸ್ಪರ್ಧೆ ಸಾಧ್ಯವಿದ್ದಿದ್ದರೆ ;
ಈ ಇವುಗಳನ್ನು, ಓ ಸಮುದ್ರ, ಸಂತೋಷದಿಂದ ವಿನಿಮಯವಾಗಿ ನೀಡುತ್ತೇನೆ,
ನೀ ನನಗೆ ನಿನ್ನೊಂದು ತೆರೆಯೇಳು ಬೀಳನ್ನು ಅದರ ಕಲೆಯನ್ನು ವರ್ಗಾಯಿಸಿದರೆ,
ಅಥವಾ ನನ್ನ ಪದ್ಯದ ಮೇಲೆ ನಿನ್ನೊಂದು ಉಸುರನ್ನು ನೀನೂದಿಬಿಟ್ಟರೆ,
ಊದಿ ಕಂಪನ್ನಲ್ಲಿ ಬಿಟ್ಟ ಪಕ್ಷಕ್ಕೆ.
 
ನಾನು ಹಾಡುತ್ತೇನೆ ವ್ಯಕ್ತಿಸ್ವತ್ವವ ಕುರಿತು
ನಾನು ಹಾಡುತ್ತೇನೆ ವ್ಯಕ್ತಿಸ್ವತ್ವವ ಕುರಿತು, ಸರಳ, ಪ್ರತ್ಯೇಕ ಪುರುಷನ ಕುರಿತು ;
ಆದರೂ ಉಚ್ಚರಿಸುತ್ತೇನೆ ಪ್ರಜಾಪ್ರಭುತ್ವ ಜನಸಮುದಾಯ- ಈ ಪದಗಳನ್ನು.
 
ಹಾಡುತ್ತೇನೆ ದೇಹವಿಜ್ಞಾನವನ್ನು ಅಡಿಯಿಂದ ಮುಡಿವರೆಗೆ,
ಶರೀರ ಸಾಮುದ್ರಿಕ ಅಷ್ಟೇ ಅಲ್ಲ, ಮೆದುಳು ಅಷ್ಟೇ ಅಲ್ಲ ಸರಸ್ವತಿಗೆ ಅರ್ಹ,
ಪರಿಪೂರ್ಣ ಆಕಾರ ಅರ್ಹತರ ಎನುವೆ,
ಗಂಡನ್ನು ಕುರಿತೆಷ್ಟೋ ಅಷ್ಟೇ ಹೆಣ್ಣಿನ ಕುರಿತು ನಾನು ಹಾಡುತ್ತೇನೆ.
 
ಭಾವೋದ್ವೇಗದಲ್ಲಿ, ನಾಡಿಯಲ್ಲಿ, ಬಲದಲ್ಲಿ ಬೃಹತ್ತಾದ ಬದುಕನ್ನು ಕುರಿತು,
ದೈವಶಾಸನದಂತೆ ಸ್ವತಂತ್ರತಮಕೃತಿಗಾಗಿ ಆಕೃತಿಗೊಂಡ, ಅಂತೆ ಅಹ್ಲಾದಮಯ,
ಆಧುನಿಕ ಮಾನವನ ಕುರಿತು ಹಾಡುತ್ತೇನೆ.
 
ನಿನಗೆ
ಅಪರಿಚಿತ, ನೀ ದಾರಿಯಲ್ಲಿ ಸಂಧಿಸಿ ನನ್ನ, ಮಾತಾಡಬಯಸಿದರೆ,
ಏಕೆ ನೀ ನನ್ನೊಡನೆ ಮಾತಾಡಬಾರದು?
ಅಲ್ಲದೆ, ನಾ ನಿನ್ನ ಜೊತೆಗೇಕೆ ಮಾತಾಡಬಾರದು?
 

‍ಲೇಖಕರು G

5 March, 2014

1 Comment

  1. maheshwari.u

    anuvaadadalluu adigatanada tejassu, layada sogasu-oh, chennagide.thanks.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading