ಇಲ್ಲೊಂದು ವಿಡಿಯೋ ಇದೆ
ಯಕ್ಷಗಾನದ್ದು
ಅಯ್ಯೋ ಯಕ್ಷಗಾನ ಬೇಕಾದಷ್ಟು ನೋಡಿದ್ದೀವಿ ಬಿಡಿ ಅಂತೀರಾ
ನೋ ನೋ
ನೀವು ಈ ಯಕ್ಷಗಾನ ವಿಡಿಯೋ ನೋಡಲೇಬೇಕು
ನಿಮಗೇನನ್ನಿಸುತ್ತೆ
ಇದು ಸರೀನಾ ತಪ್ಪಾ
ಯಕ್ಷಗಾನ ಹೇಗಿರಬೇಕು
ಬರೆದು ತಿಳಿಸಿ ಚರ್ಚೆ ಆರಂಭವಾಗಲಿ ಎಂದು ಕೇಳಿದ್ದೆವು.
ಅದಕ್ಕೆ ಬಂದ ಮೊದಲ ಪ್ರತಿಕ್ರಿಯೆ ಇಲ್ಲಿದೆ ಬನ್ನಿ ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ
ಚೈತ್ರಾ
“ಸಂಪೂರ್ಣ ಕಲೆ”, ಪೂರ್ಣ, ಎಲ್ಲವನ್ನೂ ಒಳಗೊಂಡಿದೆ. ಮನರಂಜನೆಗೇನು ಬೇಕು ಎಲ್ಲವೂ ಇಲ್ಲಿದೆ. ನವರಸಗಳು, ಇಂಪಾದ ಗಾನ ವೈಭವ, ಕಣ್ಣಿಗೆ ತಂಪೆರೆಯುವ ನಾಟ್ಯ, ಮಾತುಗಾರಿಕೆ, ಬಣ್ಣ-ವೇಷ,ಈ ವೈಭವವೇ ಇದನ್ನು “ಯಕ್ಷ-ಗಾನ”ವಾಗಿಸಿದೆ. ಇದು ಜಾನಪದ ಲೋಕದ ರಾಜ. ಅದೆಷ್ಟು ಕಲಾವಿದರು ಇಂದು ಯಕ್ಷಲೋಕದಲ್ಲಿ ತಮ್ಮದೇ ರಂಗೇರಿಸಿದ್ದಾರೆ. “ಗಂಡುಕಲೆ”ಯಾದ ಯಕ್ಷಗಾನ ಒಂದು ಕಾಲದಲ್ಲಿ ಕೇವಲ ಗಂಡಸರ ಕಲೆಯಾಗಿ ಇದೀಗ ಗಂಡಸರೊಡನೆ ಸೆಣಸಿ ಮಹಿಳೆಯರು ಪ್ರಶಸ್ತಿ ಗೆಲ್ಲುವ ವರೆಗೆ ಬಂದು ತಲುಪಿದೆ.
ಈ ಯಕ್ಷ ಲೋಕ ಅದೆಷ್ಟು ಹಳೆಯದು, ಇದರ ಹುಟ್ಟು ಬೆಳವಣಿಗೆ ತಾಳ ಲಯಗಳು, ಪ್ರಸಂಗ ಇದೆಲ್ಲದರ ಬಗ್ಗೆ ಹೇಳುವುದು ಎಂದರೆ ಒಂದು ದೊಡ್ಡ ಅಧ್ಯಯನವೇ ಸರಿ. ಅಷ್ಟು ಪ್ರಾಚೀನವಾದ ನಮ್ಮ ಯಕ್ಷಗಾನ ತನ್ನದೇ ಆದ ಒಂದು ಸ್ಕ್ರಿಪ್ಟ್ ಮಾಡದೇ ಕೇವಲ ಕೆಲವೊಂದು ನಿಯಮಗಳ ಚೌಕಟ್ಟಿನಲ್ಲಿ ಪ್ರದರ್ಶಿತಗೊಳ್ಳುತ್ತಿದೆ.
ಎಲ್ಲ ಕ್ಷೇತ್ರಗಳೂ ತಮ್ಮನ್ನು ತಾವು ಬದಲಾವಣೆಗೆ ಒಡ್ಡಿಕೊಳ್ಳುವಂತೆ ತಾನೂ ಬದಲಾವಣೆಗೊಳ್ಳುತ್ತ, ಅದೇ ಸಮಯದಲ್ಲಿ ಜಗತ್ತಿಗೆ ತೆರೆದುಕೊಳ್ಳುತ್ತಿದೆ. ಶಿವರಾಮ ಕಾರಂತರು, ಕೆರೆಮನೆ ಹೆಗಡೆಯವರು, ಇತ್ತೀಚಿಗಷ್ಟೆ ನಮ್ಮನ್ನಗಲಿದ ಕಣ್ಣಿಮನೆಯವರು ಹೀಗೆ ಹೆಸರನ್ನುಲ್ಲೇಖಿಸುತ್ತಾ ಹೋದರೆ ಯಾವಾಗ ತನ್ನನ್ನು ಬದಲಾವಣೆಗೆ ತೆರೆದುಕೊಂಡಿತು ಎಂಬುದರ ಸಣ್ಣ ಎಳೆ ಸಿಗಬಹುದೇನೋ !
ಹೊಸ ಪ್ರಯೋಗಗಳನ್ನು, ಬದಲಾವಣೆಗಳನ್ನು ಎಲ್ಲರೂ ಸ್ವೀಕರಿಸಬಹುದು, ಸಂಪ್ರದಾಯವಾದಿಗಳು ಮೂಗು ಮುರಿಯಲೂ ಬಹುದು.
ಆದರೆ ಇತ್ತೀಚಿಗೆ ಜಾತ್ರೆಗಳಲ್ಲಿ ನಿಲ್ಲಿಸುವ ತಟ್ಟಿರಾಯನ ಜಾಗದಲ್ಲಿ ವೇಷ ಕಟ್ಟಿ ನಿಲ್ಲುವವರನ್ನು ನೋಡಿದರೆ ನಿಜಕ್ಕೂ ಮನದಾಳದಲ್ಲಿ ನೋವಾಗುವುದಂತೂ ಸತ್ಯ! ತನ್ನದೇ ಆದ ಚೌಕಟ್ಟಿನಲ್ಲಿ, ಕಲೆಯ ಬೆಲೆಯನ್ನು ಕಳೆಯದೆ ಅದರ ಗೌರವ ಹೆಚ್ಚಿಸುವತ್ತ ಕಲಾವಿದರು ಗಮನ ಹರಿಸಿವುದುತ್ತಮ ಎಂಬುದು ನನ್ನ ಅಭಿಪ್ರಾಯ.





Thank you avadhi