
ರಾಜಾರಾಂ ತಲ್ಲೂರು
“ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯ ಅಲ್ಲ” ಅನ್ನುವ ಒಂದು ಸಂದೇಶ ಕಾಂಗ್ರೆಸ್ಸಿನಲ್ಲಿ, ಅದರಲ್ಲೂ ಮೂಲ ಕಾಂಗ್ರೆಸ್ಸಿನಲ್ಲಿ ಒಂಥರಾ ಬೀಜಮಂತ್ರ ಇದ್ದ ಹಾಗೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಬಂಡೆದ್ದಿರುವವರ ನಾಯಕರಲ್ಲಿ ಒಬ್ಬರಾದ ಶ್ರೀನಿವಾಸ್ ಪ್ರಸಾದ್ ಅವರು ಹೈಕಮಾಂಡಿನ ಪ್ರತಿನಿಧಿ ಆಸ್ಕರ್ ಫರ್ನಾಂಡೆಸ್ ಅವರನ್ನು ಬುಧವಾರ ಭೇಟಿ ಮಾಡಿದ ಬಳಿಕ ಇಂತಹದೊಂದು ಮಾತು ಶ್ರೀನಿವಾಸ ಪ್ರಸಾದ್ ಅವರ ಬಾಯಿಂದ ಮಾಧ್ಯಮಗಳಿಗೆ ಹೊರಹೊಮ್ಮಿದೆ ಎಂದರೆ, ಪರಿಸ್ಥಿತಿ ಸಿದ್ಧರಾಮಯ್ಯನವರ ಮಟ್ಟಿಗೆ ಗಂಭೀರವಾಗಿದೆ ಎಂದೇ ಅರ್ಥ.
ಸಿದ್ಧರಾಮಯ್ಯ ಕಳೆದ ಮೂರು ವರ್ಷಗಳಲ್ಲಿ ಲೆಕ್ಕಾಚಾರ ಮಾಡಿ ಇಡುತ್ತಾ ಬಂದ ಹೆಜ್ಜೆಗಳು, ಅವರನ್ನು ಚಾಣಾಕ್ಷರೆಂದು ಬಿಂಬಿಸುತ್ತಾ ಹೋಗಿರುವ ಬೆನ್ನುಬೆನ್ನಲ್ಲೇ ಅವರ ಕಟ್ಟಾ ಬೆಂಬಲಿಗರನ್ನು ಒಬ್ಬೊಬ್ಬರನ್ನಾಗಿ ಅವರಿಂದ ದೂರ ಮಾಡುತ್ತಲೂ ಸಾಗಿದೆ. ಈ ಹಂತದಲ್ಲಿ ಸಿದ್ಧರಾಮಯ್ಯನವರದು ಅಭಿಮನ್ಯುವಿನ 
ಹೋರಾಟದಂತೆ ಕಂಡುಬರುತ್ತಿದೆ. ಈವತ್ತು ಬ್ರೇಕು, ಕ್ಲಚ್ಚು ಇಲ್ಲದೆ ಬರಿಯ ಸ್ಟಿಯರಿಂಗ್ ವೀಲ್ ಹಿಡಿದು ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಮುನ್ನಡೆಸುತ್ತಿರುವ ಸಿದ್ಧರಾಮಯ್ಯನವರ ಸುತ್ತ ನೆರೆದು ನಿಂತಿರುವ ಮೂಲ ಕಾಂಗ್ರೆಸ್ಸಿಗರು, ಅಂತಿಮವಾಗಿ ತಮ್ಮ ಬೀಜಮಂತ್ರವನ್ನು ತೋರಿಸಿ – ಅಂದರೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು – ಕೈ ಎತ್ತಿ ನಿಲ್ಲುವವರೇ ಆಗಿದ್ದಾರೆ.
ಇಲ್ಲಿ ಮಾಸ್ಟರ್ ಸ್ಟ್ರೋಕ್ ಕೇಂದ್ರದ ಕಾಂಗ್ರೆಸ್ ನಾಯಕ ಖರ್ಗೆ ಅವರದು. ಈವತ್ತು ಪುತ್ರವ್ಯಾಮೋಹಿ ಎಂದು ಜರೆತಕ್ಕೆ ಒಳಗಾಗಿರುವ ಖರ್ಗೆ, ಪರಿಸ್ಥಿತಿಗಳೆಲ್ಲ ಮೂಲ ಕಾಂಗ್ರೆಸ್ಸಿನ ಸ್ಕ್ರಿಪ್ಟ್ ಪ್ರಕಾರ ನಡೆದರೆ, ಈಗಾಗಲೇ ಓವರ್ ಡ್ಯೂ ಆಗಿರುವ ದಲಿತ ಕೋಟಾದಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ, ಡಿ.ಕೆ. ಶಿವಕುಮಾರ್ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅದರ ಮೂಲ ರೂಪದಲ್ಲಿ ಮುಂದಿನ ಚುನಾವಣೆಯೆಡೆಗೆ ಮುನ್ನಡೆಸಿದರೆ ಅಚ್ಚರಿಯೇನಿಲ್ಲ.
ಬಿಜೆಪಿ, ಜನತಾದಳ ಸೇರಿದಂತೆ ಪ್ರಮುಖ ಪಕ್ಷಗಳೆಲ್ಲ 2018ರ ಚುನಾವಣೆಗೆ ತಮ್ಮ ತಮ್ಮ ರನ್ ಅಪ್ ಆರಂಭಿಸಿರುವುದು ಬಹಿರಂಗವಾಗಿಯೇ ಕಾಣಿಸುತ್ತಿರುವಾಗ, ಕಾಂಗ್ರೆಸ್ ಹೈಕಮಾಂಡ್ ಸಿದ್ಧರಾಮಯ್ಯನವರನ್ನು ಹೆಚ್ಚೇನೂ ಮಿಸುಕಾಡಲು ಸ್ಕೋಪ್ ಸಿಗದಂತೆ ಬದಿಗೊತ್ತಿ, ತನ್ನ ಮಗ್ಗುಲು ಬದಲಾಯಿಸುವ ಲಕ್ಷಣಗಳೆಲ್ಲ ಸ್ಪಷ್ಟವಾಗಿ ಗೋಚರಿಸುತ್ತಿವೆ. ಆದರೆ ಹತ್ತನೇ ಕಲ್ಲಿಗೆ ಉದುರುವ ಮಾವಿನ ಹಣ್ಣು ಒಂದನೆಯದೋ ಎರಡನೆಯದೋ ಕಲ್ಲಿಗೆ ಉದುರಲಾರದು ನೋಡಿ! ಅಷ್ಟರ ಮಟ್ಟಿಗೆ ಕರ್ನಾಟಕ ಇನ್ನು ಸ್ವಲ್ಪಕಾಲ “ನಾಟಕ” ಕರ್ನಾಟಕಕ್ಕೆ ಮನೆಯಾಗಲಿದೆ.
ಈಗ ಉಳಿದಿರುವ ಕುತೂಹಲ – ಸಿದ್ಧರಾಮಯ್ಯನವರ ಮುಂದಿನ ಹೆಜ್ಜೆ. ಅವರ ರಾಜಕೀಯ ಹಿನ್ನೆಲೆ ಗಮನಿಸಿದರೆ, ಅವರೇನೂ ಬಡಪಟ್ಟಿಗೆ ಸಿಕ್ಕಿಹಾಕಿಕೊಳ್ಳುವ ಎದುರಾಳಿ ಅಲ್ಲ. ಒಂದುವೇಳೆ ಈ ಸೆಟ್ಟನ್ನೂ ಸಿದ್ಧರಾಮಯ್ಯ ಗೆದ್ದರೆಂದಿಟ್ಟುಕೊಳ್ಳಿ, ಅದೂ ಕೂಡ ಮೂಲ ಕಾಂಗ್ರೆಸ್ಸಿಗರಿಗೆ, ತಮ್ಮ ಗುರಿಯತ್ತ ಇನ್ನೊಂದು ಹೆಜ್ಜೆ ಅಷ್ಟೇ.
ಹೊರಗಿನಿಂದ ನೋಡುವವರಿಗೆ ಒಂದು ವಿಚಾರ ಸ್ಪಷ್ಟ: ಈ ಕಾಂಗ್ರೆಸ್ಸಿಗೆ ತನ್ನ ಕಾಲಿಗೆ ತಾನೇ ಹೊಡೆದುಕೊಳ್ಳುವ ಕಲೆ ಕರತಲಾಮಲಕ!




0 Comments