ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ತಕರಾರು’ ತೆಗೆಯುತ್ತಲೆ ಮರೆಯಾದ ಗೆಳೆಯ..

-ಆರ್ ಜಿ ಹಳ್ಳಿ ನಾಗರಾಜ

ಅಯ್ಯೋ, ನಿಜವೆ? ಸುದ್ದಿ ತಿಳಿದು ನೋವಾಯಿತು. ಹೋಗಿಬಾ ಗೆಳೆಯ.

ನಿನ್ನ “ಬುಗುರಿ” ಕನ್ನಡ ಸಾಹಿತ್ಯದ ಕಥಾ ಪರಂಪರೆಯಲ್ಲಿ ತಿರುಗುತ್ತಲೆ ಕಚಗುಳಿ ಇಡುತ್ತದೆ. ನೀನು “ಅಗ್ನಿ” ವಾರಪತ್ರಿಕೆಯಲ್ಲಿ ಬರೆದ ಅಂಕಣದ ಶೈಲಿ, ನಿನ್ನ “ತಕರಾರುಗಳು” (ನಂತರ ಪುಸ್ತಕ ರೂಪದಲ್ಲೂ ಬಂದಿತು) ಕನ್ನಡ ಸಾಹಿತ್ಯದಲ್ಲಿ ದಾಖಲಿಸಿ ಹೋದೆ. ನೀನು ನಮ್ಮಗಳ ಚರ್ಚೆಯಲ್ಲೆ ಜೀವಂತವಾಗಿರುವೆ.

ನಿನ್ನ ಉಳಿಸಿಕೊಳ್ಳಲು ಅನೇಕ ಸಂವೇದನಾಶೀಲ ಮಿತ್ರರು ಪ್ರಯತ್ನಿಸಿದರು. ಡಾ. ಸ್ವಾಮಿ ಆನಂದ, ಡಾ. ವೆಂಕಟೇಶಯ್ಯ ನೆಲ್ಲುಕುಂಟೆ, ಡಾ. ಬಂಜಗೆರೆ ಜಯಪ್ರಕಾಶ್ ಮೊದಲಾದವರು ನಿನ್ನ ಆರೋಗ್ಯ ರಕ್ಷಣೆಗೆ ಶ್ರಮಿಸಿದರು. ಎಲ್ಲವೂ ಕೈಮೀರಿ ಹೋಯಿತು.

ನೀನು ನನಗಿಂತ ಚಿಕ್ಕವನು. ಶಿಕ್ಷಣ ವಂಚಿತ ಕುಟುಂಬದಿಂದ ಬಂದ ಪ್ರತಿಭಾವಂತ. ನೀನು ಮೈಸೂರು ಸರಸ್ವತಿಪುರಂ 5ನೇ ಮುಖ್ಯ ರಸ್ತೆಯ ರೂಂನಲ್ಲಿ ಮಿತ್ರರ ಜೊತೆ ಇದ್ದು ಓದುವಾಗಲೆ ಕವಿತೆ ಬರೆದು ಓದುತ್ತಿದ್ದೆ. ಚರ್ಚೆ, ವಾದಗಳಿಂದ ನಮ್ಮನ್ನು ಒಳಗೊಳ್ಳುವಂತೆ ಮಾಡುತ್ತಿದ್ದೆ. ಹಂಪಿ ಕನ್ನಡ ವಿವಿಗೆ ಹೋದ ನಂತರ ಬದಲಾದೆ. ನಮ್ಮಿಂದ ಅಂತರ ಕಾಪಾಡಿದೆ. ಸಿಕ್ಕಾಗ ಅಪ್ಪುಗೆಯ ಪ್ರೀತಿ ಇತ್ತಾದರೂ ಹಲವು ಲೇಖಕರ ಬಗ್ಗೆ ಅಸಮಧಾನದ ಉರಿ ಇರುತ್ತಿತ್ತು. ಇದು ಸಹಜ. ಕನ್ನಡ ಸಾಹಿತ್ಯ ಇಂಥ ಕಟು ವಿಮರ್ಶೆ ಪಡೆದೆ ಗಟ್ಟಿಕಾಳುಗಳಾಗಿ ಉಳಿದಿದೆ.

ನಿನ್ನಂತೆ ಡಿ‌.ಆರ್. ನಾಗರಾಜರು ವಿಮರ್ಶೆಯಲ್ಲಿ ತಕರಾರು ತೆಗೆಯುತ್ತಿದ್ದರು. ಅವರು ಜೊತೆಗಿದ್ದವರನ್ನೆ “ಅವನೊಬ್ಬ ಊಳ!” ಅನ್ನುತ್ತಿದ್ದರು. ಅಲ್ಲಿ ಅವರಲ್ಲಿನ ವ್ಯಂಗ್ಯದ ದನಿಯನ್ನು ಗಮನಿಸಿದ್ದೆ. ನಿನ್ನ ಮಾತಲ್ಲು, ಬರಹದಲ್ಲು ಕಟುವಾದ ಮಾತು, ತಿರಸ್ಕೃತ ವಿಚಾರ ಇರುತ್ತಿತ್ತು. ಏಕೆಂದರೆ ನೀನು ಪುಸ್ತಕದ ಹುಳುವಾಗಿದ್ದೆ. ಅಕ್ಷರ ಮೋಹಿಯಾಗಿದ್ದೆ. ಬರಹದಲ್ಲಿ ಅಕ್ಷರ ದೋಷ ಇದ್ದರೂ ಹೇಳುವುದನ್ನು ಹೇಳಿಬಿಡುತ್ತಿದ್ದೆ. ಕತೆಗಳನ್ನು ಬರೆದು ಎಲ್ಲೋ ಇಟ್ಟಾಗ ಮಿತ್ರರೆ ಅದನ್ನು ತಪ್ಪಿಲ್ಲದೆ ನಕಲು ಮಾಡಿ ಪತ್ರಿಕೆಗೆ ಕಳುಹಿಸಿದ್ದು ಇದೆ. ಅದೇನು ದೋಷವಲ್ಲ. ನಿನ್ನ ಪ್ರತಿಭೆ ಮೆಚ್ಚಿದ ಮಿತ್ರರ ಸಹಾಯ ಅದಾಗಿತ್ತು.

ಇಷ್ಟು ಬೇಗ ಹೋಗಿಬಿಟ್ಟೆಯೆಲ್ಲ ಅದೇ ನನ್ನ “ತಕರಾರು”.

‍ಲೇಖಕರು Admin

5 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading