ಶ್ರೀ ಎಸ್. ಜಿ. ಶಿವಶಂಕರ್ ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ನಾಟಕಕಾರ, ಸಾಹಿತಿ, ಉಪನ್ಯಾಸಕ, ನಟ, ನಿರ್ದೇಶಕ ಮತ್ತು ಚಿಂತಕ. ಪ್ರತಿಷ್ಠಿತ ಸಾರ್ವಜನಿಕ ಬೃಹತ್ ಉದ್ಯಮನೊಂದರಲ್ಲಿ ಧಿರ್ಘಕಾಲ ಸೇವೆ ಸಲ್ಲಿಸಿ, ವೃತ್ತಿ ಯಾಂತ್ರಿಕವೆನಿಸಿದಾಗ ಅದನ್ನು ತೊರೆದು ಅಧ್ಯಾಪಕ ವೃತ್ತಿಯನ್ನು ಕೈಗೊಂಡವರು. ತನ್ನ ವೃತ್ತಿಯ ಹೊರಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ, ಜೀವದ ಸೆಲೆಯನ್ನು ಹುಡುಕುತ್ತಾ, ತಮ್ಮ ಪ್ರತಿಭೆಯ ಮೂಕತಾಣದ ಅನ್ವೇಷಣೆಯಲ್ಲಿರುವವರು. ಇವರ ಪ್ರತಿಭೆ ಬಹುಮುಖವಾದದ್ದು.
ಸುಮಾರು ಹದಿನೈದು ನಾಟಕಗಳನ್ನು ಬರೆದಿರುವ ಶ್ರೀ ಶೀವಶಂಕರ್ 1970ರ ಕೊನೆಯಲ್ಲಿ ಮತ್ತು 1985ರವರೆಗಿನ ಅವಧಿಯಲ್ಲಿ ಅತ್ಯಂತ ಜನಪ್ರಿಯ ನಾಟಕಕಾರರಾಗಿದ್ದವರು. ತಾವು ಬರೆದ ನಾಟಕಗಳನ್ನು ಸ್ವತಃ ತಾವೇ ನಿರ್ದೇಶಿಸಿದವರು. ಅವರು ಹುಟ್ಟು ಹಾಕಿದ ತಂಡ ‘ರಂಗವರ್ಷ’ ನಾಟಕ ತಂಡ ಬೆಳ್ಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದೆ. ಅವರ ನಾಟಕಗಳನ್ನು ಕರ್ನಾಟಕದಾದ್ಯಂತ ಹರಡಿಕೊಂಡಿರುವ ಹವ್ಯಾಸಿ ತಂಡಗಳು ಬಹಳ ಪ್ರೀಯಿಂದ ಅಭಿನಯಿಸಿ ಯಶಸ್ಸು ಕಂಡಿದ್ದಾರೆ; ಅವರನ್ನು ಆಗ್ರಹಪಡಿಸಿ ಹೊಸ ನಾಟಕಗಳನ್ನು ಬರೆಸಿಕೊಂಡಿದ್ದಾರೆ.
ಐದು ಕಾದಂಬರಿಗಳು ಇವರ ಲೇಖನಿಯಲ್ಲಿ ಮೂಡಿಬಂದಿವೆ. ಇವರ ‘ಈಜಿಪ್ಟಿಯನ್ ಮಮ್ಮಿ’ ಎಂಬ ರೋಚಕ ಕಾದಂಬರಿಯೊಂದು ಜನಪ್ರಿಯ ವಾರಪತ್ರಿಕೆ ‘ಕರ್ಮವೀರ’ದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಓದುಗರನ್ನು ರಂಜಿಸಿದೆ. ಇವರ ಕತೆಗಳು, ಹಾಸ್ಯಲೇಖನಗಳು ‘ಸುಧಾ’, ‘ತರಂಗ’, ಕರ್ಮವೀರ’ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿವೆ.
ಸೊನ್ನೆ, ಅಕ್ಟೋಪಸ್, ಡಾಂಬರಿನ ಹೂವು ಇವರ ಕವನ ಸಂಕಲನಗಳು ಕಾವ್ಯಪ್ರೇಮಿಗಳ ಮನಮುಟ್ಟಿವೆ. ಕನ್ನಡದ ಜನಪ್ರಿಯ ಪತ್ರಿಕೆಗಳಲ್ಲಿ ಬಿಡಿಬಿಡಿಯಾಗಿ ಪ್ರಕಟವಾಗಿರುವ ಎಲ್ಲ ಹಾಸ್ಯ ಲೇಖನಗಳು ಒಟ್ಟಾಗಿ ‘ರೈಲು ಬಿಡುವವರು!’ ಎಂಬ ಶೀರ್ಷಿಕೆ ಹೊತ್ತು ಪ್ರಕಟವಾಗುತ್ತಿದೆ.
ಇವರ ಆಸಕ್ತಿ ಹರವು ವಿಸ್ತಾರವಾದದ್ದು. ಆಧ್ಯಾತ್ಮಕ, ಯೋಗ, ಸಮಾಜಸೇವೆ, ಅಧ್ಯಾಪನ, ಸಾಹಿತ್ಯಗಳ ಸಾಗರದಲ್ಲಿ ವೀಯುತ್ತಿರುವ ಶ್ರೀ ಶೀವಶಂಕರ್ ಇನ್ನೂ ಬೆಳೆಯಬಲ್ಲರು, ಬರೆಯಬಲ್ಲರು.
ಪ್ರಕಾಶಕರು







0 Comments