ಡೈಲಿ ಬುಕ್ : ಡಾ ಸಿ ಓಂಕಾರಪ್ಪ ಅವರ ’ಕುಮಾರವ್ಯಾಸ ಭಾರತ’

ಡಾ ಬಿ ಆರ್ ಸತ್ಯನಾರಾಯಣ

ವಿಶ್ವವಿದ್ಯಾನಿಲಯ: ಪುಣೆ
ಕ್ಷೇತ್ರ: ಭಾಷಾ ವಿಜ್ಞಾನ
ವಿಷಯ: ಲಿಂಗ್ವಿಸ್ಟಿಕ್ ಅನಾಲೈಸಿಸ್ ಆಫ್ ಕುಮಾರವ್ಯಾಸ ಭಾರತ
ಮಾರ್ಗದರ್ಶಕರು: ಡಾ. ಹೆಚ್.ಎಸ್. ಬಿಳಿಗಿರಿ.
ಸಂಶೋಧಕರು: ಸಿ. ಓಂಕಾರಪ್ಪ.
ಮೌಲ್ಯಮಾಪಕರು: ಡಾ. ಡಿ.ಎಲ್. ನರಸಿಂಹಚಾರ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಟಿ. ಬರೋ.
ಪಿಹೆಚ್.ಡಿ. ಪ್ರಧಾನವಾದ ವರ್ಷ: ೧೯೬೮.

ಇಂತಹ ಒಂದು ಕೃತಿ ಕನ್ನಡಕ್ಕೂ ಅನುವಾದಗೊಂಡು ಸಿದ್ಧವಾಗಿದ್ದು, ಬಿಡುಗಡೆಗೆ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಕಾಯಬೇಕಾಯಿತು ಎನ್ನುವುದೇ ಒಂದು ವಿಷಾದದ ವಿಷಯ. ಮೊದಲ ಬಾರಿಗೆ ಬೆಳಕಿಗೆ ಬಂದಿದ್ದು ೧೯೯೪ರಲ್ಲಿ. ಈಗ ಅದರ ಎರಡನೆಯ ಮುದ್ರಣ ನಿಮ್ಮ ಕೈಯಲ್ಲಿದೆ. ಅದೂ ಸರಿಯಾಗಿ ಇಪ್ಪತ್ತು ವರ್ಷಗಳ ನಂತರ! ಇದು ಕನ್ನಡ ನಾಡಿನಲ್ಲಿ ಕನ್ನಡ ಭಾಷಾ ಅಧ್ಯಯನಕ್ಕೆ, ಸಂಶೋಧನೆಗೆ ಸಿಗುತ್ತಿರುವ ಮನ್ನಣೆ!
ಕುಮಾರವ್ಯಾಸನಂಥ ಒಬ್ಬ ಅಪ್ಪಟ ದೇಸಿಕವಿಯ ಮಹಾಕಾವ್ಯವೊಂದನ್ನು ಯಾವಾವ ರೀತಿಯಲ್ಲಿ ದರ್ಶಿಸಬಹುದು ಎಂಬುದು ಹಾಗೂ, ಶ್ರೀ ಸಿ. ಓಂಕಾರಪ್ಪ ಅವರ ರೀತಿಯಲ್ಲೂ, ಭಾಷಾ ವೈಜ್ಞಾನಿಕ ನೆಲೆಯಿಂದಲೂ ದರ್ಶಿಸಿ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಈ ಕೃತಿ.
ಕುವೆಂಪು ಅವರು ಒಂದು ಸಂದರ್ಭದಲ್ಲಿ ರಾಮಾಯಣ ಪೂರ್ಣದೃಷ್ಟಿಯ ಪೂರ್ಣದರ್ಶನಕ್ಕೆ, ಪೂರ್ಣಪ್ರತಿಮೆ. ಅದು ಒಂದು ದುಂಡಾದ ಗಾಜಿನ ಬುರುಡೆಯಂತೆ; ಆ ಗೋಳದಲ್ಲಿ ಮೊದಲೆಲ್ಲಿ, ತುದಿ ಎಲ್ಲಿ? ಮೇಲೆ ಯಾವುದು, ಕೆಳಗೆ ಯಾವುದು? ಮುಖ್ಯವೇನು ಅಮುಖ್ಯವೇನು? ಎಲ್ಲಾ ಒಂದೇ; ಯಾವ ಕಣಕ್ಕೆ ಕೈಯಿಟ್ಟರೂ ಪೂರ್ಣದೆಡೆಗೆ ಸಾಗುತ್ತೇವೆ. ಎಂದು ಕೃತಿ ಸಾಕ್ಷಾತ್ಕಾರದ ಬಗ್ಗೆ ಹೇಳಿದ್ದರು. ಪ್ರತಿಯೊಂದು ಭಾಷೆಯೂ ಒಂದು ಆರ್ಕೆಸ್ಟ್ರಾ ಇದ್ದ ಹಾಗೆ. ಅವಕ್ಕೆ ಅದರದೇ ಆದ ಸಂಗೀತ ಇರುತ್ತದೆ…. ಆ ಭಾಷೆ, ಆ ಭಾಷೆಯನ್ನಾಡುವ ಜನರ ವ್ಯಕ್ತಿತ್ವ, ಅವರ ಮಾತಿನ ಧಾಟಿ, ಇವೆಲ್ಲದರ ಸಮ್ಮಿಳನ ಆ ಭಾಷೆಯ ಸಂಗೀತ, ಅಥವಾ ಛಂದಸ್ಸಂಗೀತ ಎನ್ನುವ ಕುವೆಂಪು ಅವರ ಮಾತಿನಂತೆ, ಕುಮಾರವ್ಯಾಸನಿಗೆ ಕನ್ನಡ ಭಾಷೆಯ ಛಂದಸ್ಸಂಗೀತ ಪೂರ್ಣವಾಗಿ ಸಿದ್ಧಿಸಿತ್ತು. ಆದ್ದರಿಂದಲೇ ಕುಮಾರವ್ಯಾಸಭಾರತದಂತಹ ಕೃತಿಗಳನ್ನು ಅನ್ಯಭಾಷೆಯವರು ಓದಿ ಅರ್ಥೈಸಿಕೊಳ್ಳಲಾಗಲೀ ಅನುವಾದ ಮಾಡಲಾಗಲೀ ಕಷ್ಟಸಾಧ್ಯವಾಗಿರುವುದು. ಆ ಕೆಲಸಗಳು ಸ್ವತಃ ಕನ್ನಡಿಗರಿಂದಲೇ ಆಗಬೇಕು ಅಷ್ಟೆ.
ಇಲ್ಲಿ ಶ್ರೀಯುತ ಓಂಕಾರಪ್ಪನವರು ಭಾಷಾ ವೈಜ್ಞಾನಿಕ ಹಿನ್ನೆಲೆಯಲ್ಲಿ ಕುಮಾರವ್ಯಾಸನನ್ನು ಸ್ಪರ್ಶಿಸಿದ್ದಾರೆ, ಅದರರ್ಥ ಅವರು ಕುಮಾರವ್ಯಾಸ ಕವಿಯ ಕಾವ್ಯದ ರಸಗ್ರಹಣ ಮಾಡಿಲ್ಲವೆಂದಲ್ಲ. ಕಾವ್ಯದ ರಸಗ್ರಹಣವಾಗದೆ, ಮನಸ್ಸು ಅದರ ಭಾಷಾ ಸೌಂದರ್ಯದೆಡೆಗೆ ಹೊರಳುವುದಿಲ್ಲ. ನಮ್ಮ ನಮ್ಮ ಮಾತೃಭಾಷೆಯಲ್ಲೇ ಕಥೆ ಕಾವ್ಯಗಳನ್ನು ಓದುವಾಗ ಅವುಗಳು ಅರ್ಥವಾಗುವ ಮೊದಲೇ ರಸಾನುಭವ ಆಗುವುದು ಈ ಕಾರಣದಿಂದಲೆ. ರಸಗ್ರಹಣದ ಮೊದಲ ಹಂತವನ್ನು ದಾಟಿ ಮುಂದಿನ ಭಾಷಾ ವೈಜ್ಞಾನಿಕ ಹಂತದಲ್ಲಿ ಕುಮಾರವ್ಯಾಸನನ್ನು ಸ್ಪರ್ಶಿಸಿ ಸಾಕ್ಷಾತ್ಕಾರ ಮಾಡಿಕೊಳ್ಳುವ ಯಶಸ್ವೀ ಪ್ರಯತ್ನವೇ ಈ ಕೃತಿ! ಇದನ್ನೇ, ಮೊದಲ ಮುದ್ರಣದ ಅರಿಕೆಯಲ್ಲಿ ಶ್ರೀಯುತ ಓಂಕಾರಪ್ಪನವರು ಭಗವಂತನ ಸೃಷ್ಟಿಯಲ್ಲಿ ಯಾವ ದಿಕ್ಕಿನಲ್ಲಿ ಹೊರಟರೂ ಅವನ ಅನಂತತೆಯನ್ನು ಕಂಡೆ ಚಕಿತರಾಗಿ ನಾವು ಹಿಂದಿರುಗಬೇಕಲ್ಲವೆ? ಎಂದು ಪ್ರಶ್ನಿಸಿಕೊಂಡಿದ್ದಾರೆ. ಪ್ರಶ್ನೆಗೆ ಉತ್ತರ ಈ ಕೃತಿಯ ಪೂರ್ಣತೆಯಲ್ಲಿಯೇ ಇದೆ ಎಂಬುದನ್ನು ಸಹೃದಯರು ಮನಗಾಣಬಹುದಾಗಿದೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಣಿಗಳ ಶರೀರ ಅಂಗರಚನಾ ಶಾಸ್ತ್ರವನ್ನು ಬೋಧಿಸುವಾಗ, ಪ್ರಯೋಗಿಕವಾಗಿ ನಿರ್ಜೀವ ದೇಹವನ್ನು ಹಲವು ಬಗೆಯಲ್ಲಿ ಛೇದಿಸಿ ತೋರಿಸಲಾಗುತ್ತದೆ. ಈಗಂತೂ ದೇಹವೊಂದನ್ನು ಸಹಸ್ರ ಸಹಸ್ರ ಸೀಳುಗಳಾಗಿ ಛೇದಿಸಿ ಅದರ ಪ್ರತಿಯೊಂದು ಪದರಿನ ಕಣ ಕಣದ ವಿವರಗಳನ್ನು ಬಹು ಆಯಾಮಗಳಲ್ಲಿ ತೋರಿಸಿ ಮನದಟ್ಟಾಗುವಂತೆ ಮಾಡುವ ಡಿಜಿಟಲೈಸ್‌ಡ್ ವಿಧಾನಗಳು ಬಂದಿವೆ. ಹಾಗೆಯೇ, ಕಲಾಕೃತಿಯೊಂದನ್ನು ಬಹು ಆಯಾಮದಿಂದ ಅದನ್ನು ಪೂರ್ಣವಾಗಿ ಅಭ್ಯಾಸ ಮಾಡುವ, ಅದರ ಪ್ರತಿಯೊಂದು ಪದ, ವಾಕ್ಯ, ಸಂಧಿ, ಸಮಾಸ ಮೊದಲಾದ ವ್ಯಾಕರಣದ ಅಂಶಗಳನ್ನು (ಛಂದಸ್ಸಂಗೀತವನ್ನು) ಕೂಲಂಕಷವಾಗಿ ಅಧ್ಯಯನಕ್ಕೆ ಒಳಪಡಿಸಿರುವ ಈ ವಿಧಾನ ಮೈಕ್ರೊ ಸ್ಟಡಿ (ಸೂಕ್ಷ್ಮ ಅಧ್ಯಯನ) ಮಾದರಿಗೊಂದು ಅತ್ಯುತ್ತಮ ಉದಾಹರಣೆ ಎನ್ನಬಹುದು.
ಕನ್ನಡದ ಮಹಾಕವಿಗಳಲ್ಲಿ ಒಬ್ಬನಾದ ಕುಮಾರವ್ಯಾಸನ ಮಹಾಕಾವ್ಯದ ಬಗ್ಗೆ ಇಂತಹುದೊಂದು ಸೂಕ್ಷ್ಮ ಅಧ್ಯಯನ ನಡೆದು ಸುಮಾರು ನಲವತ್ತೈದು ವರ್ಷಗಳೇ ಕಳೆದಿವೆ. ಇಂಗ್ಲಿಷಿನಲ್ಲಿ ನಡೆದ ಈ ಅಧ್ಯಯನದ ಫಲಶೃತಿ ಕನ್ನಡಕ್ಕೂ ಬಂದಿದೆ. ಆದರೆ ಇಂತಹುದೇ ಇನ್ನೊಂದು ಸೂಕ್ಷ್ಮ ಅಧ್ಯಯನ ಯಾವ ಕವಿಯ ಕಾವ್ಯದ ಬಗ್ಗೆಯೂ ಇದುವರೆಗೆ ಕನ್ನಡದಲ್ಲಿ ನಡೆದಿಲ್ಲ ಎನ್ನುವುದು ಮಾತ್ರ ಕನ್ನಡಭಾಷೆಯ ದುರಂತ. ಪಾಶ್ಚಾತ್ಯರಲ್ಲಿ ಭಾಷಾ ವಿಜ್ಞಾನಕ್ಕೆ ಸಿಕ್ಕಿರುವಷ್ಟು ಮಾನ್ಯತೆ ನಮ್ಮ ದೇಶದಲ್ಲಿ ಯಾವುದೇ ಭಾಷೆಗೆ ಇದುವರೆಗೂ ಸಿಕ್ಕಿಲ್ಲ. ಮುಂದೆ ಸಿಗುವ ಭರವಸೆಯೂ ಇಲ್ಲ ಎಂಬುದನ್ನು ವಿಷಾದದಿಂದ ಹೇಳಬೇಕಾಗಿದೆ. ಸರಾಸರಿ ನೂರು ವರ್ಷಗಳ ಅಂತರದ ಕವಿಗಳ ಕಾವ್ಯಗಳನ್ನು ಇಂತಹ ಒಂದು ಅಧ್ಯಯನಕ್ಕೆ ಒಳಪಡಿಸಿದ್ದರೆ, ಸಾವಿರ ವರ್ಷಗಳ ಕನ್ನಡ ಭಾಷಾ ಬೆಳವಣಿಗೆಯನ್ನು ವೈಜ್ಞಾನಿಕವಾಗಿ ಅತ್ಯಂತ ಖಚಿತವಾಗಿ ಅರ್ಥ ಮಾಡಿಕೊಳ್ಳುವ ಅವಕಾಶವಿತ್ತು. ಕನಿಷ್ಠ ಕನ್ನಡದ ಬಾಷೆಯ ಮಹಾಕವಿಗಳ ಕೃತಿಗಳನ್ನಾದರೂ ಇಂತಹುದೊಂದು ಅಧ್ಯಯನಕ್ಕೆ ಒಳಪಡಿಸಬಹುದಾಗಿತ್ತು.
ಇಂದಿಗೂ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷಾಚರಿತ್ರೆಯನ್ನು ಬೋಧಿಸಲಾಗುತ್ತಿದೆ. ಆದರೆ ಅದಕ್ಕೆ ಹೆಚ್ಚಿನ ಮಹತ್ವವೇನಿಲ್ಲ. ಕೆಲವು ವಿಶ್ವವಿದ್ಯಾಲಯಗಳಲ್ಲಿ, ಐವತ್ತು ಅಂಕಗಳ ಭಾಷಾ ಚರಿತ್ರೆ ಪತ್ರಿಕೆಯ ಜೊತೆಗೆ ಐವತ್ತು ಅಂಕಗಳ ಛಂದಸ್ಸು ಪತ್ರಿಕೆಯನ್ನೂ ಜೋಡಿಸಿ ನೂರು ಅಂಕಗಳ ಪತ್ರಿಕೆಯನ್ನಾಗಿ ಮಾಡಲಾಗಿದೆ. ನಲವತ್ತು ಅಂಕ ಪಡೆದರೆ ಸಾಕು ಎನ್ನುವಷ್ಟು ಮನೋಭಾವ ಇರುವುದರಿಂದ ಯಾರೂ ಭಾಷಾ ವಿಜ್ಞಾನದ ಕಡೆಗೆ ಹೆಚ್ಚು ಒಲವು ತೋರುತ್ತಿಲ್ಲ ಎಂಬುದು ವಾಸ್ತವಿಕ ಸತ್ಯ. ಇನ್ನು ಭಾಷಾ ವಿಜ್ಞಾನದಲ್ಲೇ ಉನ್ನತ ಸಂಶೋಧನೆ ಮಾಡುವವರ ಸಂಖ್ಯೆ ಒಂದಂಕಿ ದಾಟುವುದಿಲ್ಲ ಎಂಬುದು ಅಷ್ಟೇ ಅತ್ಯ.
ಹೌದು. ಭಾಷಾ ವಿಜ್ಞಾನ ಮೊದಲ ಓದಿಗೇ ತಲೆಗೆ ಹತುವುದು ಕಷ್ಟ. ಅದರಲ್ಲೂ ಪರೀಕ್ಷಾ ದೃಷ್ಟಿಯಿಂದ ಅದನ್ನು ಓದಲು ಹೋದರೆ ಉಳಿದದ್ದು ಮರೆತುಹೋಗುತ್ತದೆ. ಅಲ್ಪ ಸ್ವಲ್ಪ ಆಸಕ್ತಿಯಿದ್ದು, ಜೊತೆಗೆ ಪರಿಶ್ರಮವನ್ನು ಹಾಕಿದರೆ ಭಾಷಾ ವಿಜ್ಞಾನಕ್ಕೆ ಪ್ರವೇಶ ದೊರಕಿಸಿಕೊಳ್ಳಬಹುದು. ಆನಂತರವೂ ನಿರಂತರ ಅಧ್ಯಯನ ಸಂಶೋಧನೆ ಮೈಗೂಡಿಸಿಕೊಂಡರೆ ಮಾತ್ರ ಭಾಷಾ ವಿಜ್ಞಾನದ ಸಾಕ್ಷಾತ್ಕರವಾಗುವುದು. ಅಂತಹ ಸಾಕ್ಷಾತ್ಕರ ಮಾಡಿಕೊಂಡವರಲ್ಲಿ ಶ್ರೀಯುತ ಓಂಕಾರಪ್ಪನವರೂ ಒಬ್ಬರು ಎಂಬುದು ಈ ಕೃತಿಯ ಓದುಗರೆಲ್ಲರಿಗೂ ಪೂರ್ಣ ಮನದಟ್ಟಾಗುತ್ತದೆ ಎಂಬ ನಂಬಿಕೆ ನನ್ನದು.
ಗೆಳೆಯ ಸೃಷ್ಟಿ ನಾಗೇಶ ಒಂದು ದಿನ, ಕುಮಾರವ್ಯಾಸ ಭಾರತದ ಒಂದು ಪುಸ್ತಕ ಇದೆ. ಎಡಿಟ್ ಮಾಡಿಕೊಡಿ ಎಂದಾಗ, ಮತ್ತೊಮ್ಮೆ ಕುಮಾರವ್ಯಾಸ ಸಮುದ್ರದಲ್ಲಿ ವಿಹರಿಸಬಹುದೆಂಬ ಆಸೆಯಿಂದ ಒಪ್ಪಿಕೊಂಡಿದ್ದೆ. ಆದರೆ ಕೈಗೆ ಬಂದ ಹಸ್ತಪ್ರತಿಯನ್ನು ನೋಡಿದಾಗ ಗಾಬರಿ ಬಿದ್ದಿದ್ದು ಸುಳ್ಳೇನಲ್ಲ. ಆದರೆ ಒಂದೊಂದೇ ಪುಟವನ್ನು ಓದುತ್ತಾ ಹೋದಾಗಲೆ ಹಾಗೆ, ಕುಮಾರವ್ಯಾಸ ಭಾರತದ ಸಾಕ್ಷಾತ್ಕಾರಕ್ಕೆ ಇದೂ ಒಂದು ಮಾರ್ಗ ಎಂದು ನನಗನ್ನಿಸಿದ್ದು. ಪ್ರತಿ ನಡೆಯಲ್ಲೂ ಓಂಕಾರಪ್ಪನವರ ಶ್ರಮ, ತನ್ಮಯತೆ ಎದ್ದು ಕಾಣುತಿತ್ತು. ಅದೇ ನನ್ನನ್ನು ಈ ಕೃತಿಯ ಸಂಪಾದನೆಯ ಉದ್ದಕ್ಕೂ ಚಕಿತಗೊಳಿಸಿದ್ದು ಹಾಗೂ ಕೈಹಿಡಿದು ನಡೆಸಿದ್ದು.
ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿವುದು ಎಂಬ ಕವಿವಾಣಿಯನ್ನು ಕೇಳಿದಾಗ, ಕುಮಾರವ್ಯಾಸ ಹಾಡಿದ್ದನೆ? ಬರೆದಿದ್ದಲ್ಲವೆ? ಎಂಬ ಸಣ್ಣ ಅನುಮಾನ ಚೊಚ್ಚಲೋದುಗರನ್ನು ಕಾಡಿದ್ದರೆ ಆಶ್ಚರ್ಯವೇನಿಲ್ಲ. ನಾವು ಬಾಯಿಯಲ್ಲಿ ಉಚ್ಛರಿಸುವುದನ್ನೆಲ್ಲಾ ಬರವಣಿಗೆಗೆ ಇಳಿಸಲು ಹೋದಾಗ ಕೈ ಓಡುವುದಿಲ್ಲ. ನಿತ್ಯ ಆಡುಭಾಷೆಯನ್ನೇ ಬರವಣಿಗೆಯಲ್ಲಿ ಬಳಸಬೇಕೆಂದರೆ ಎಷ್ಟೊಂದು ಕಷ್ಟ! ಕುಮಾರವ್ಯಾಸ ನಾಡನುಡಿಯನ್ನೇ ಹಾಡಾಗಿಸಿದ ಮಹಾಕವಿ. ಕನ್ನಡ ಭಾಷೆಯ ಛಂದಸ್ಸಂಗೀತವನ್ನು ಪರಿಪೂರ್ಣವಾಗಿ ಅರಿತಿದ್ದ ಮಹಾಕವಿಯೂ ಹೌದು! ನಿಜವಾಗಿಯೂ ಕುಮಾರವ್ಯಾಸ ತನ್ನ ಕಾವ್ಯವನ್ನು ಹಾಡಿದ್ದು ಸತ್ಯ ಎಂಬುದು ಮನದಟ್ಟಾಗುವುದು ಶ್ರೀ ಒಂಕಾರಪ್ಪನವರ ಈ ಕೃತಿಯಿಂದ. ಕುಮಾರವ್ಯಾಸನ ಹಿಂದಿನ ಪಂಪ, ರನ್ನ, ಜನ್ನ, ಹರಿಹರ-ರಾಘವಾಂಕರ ಹಾಗೂ ಈಚಿನ ಲಕ್ಷ್ಮೀಶ, ರತ್ನಾಕರವರ್ಣಿ, ಕುವೆಂಪು-ಬೇಂದ್ರೆಯವರ ಕಾವ್ಯಗಳನ್ನು ಈ ಮಾದರಿಯಲ್ಲಿ ಅಧ್ಯಯನ ನಡೆಸಿದ್ದರೆ, ಕನ್ನಡ ಭಾಷೆಯ ವೈಜ್ಞಾನಿಕ ಅಧ್ಯಯನ ನ ಭೂತೋ ನ ಭವಿಷ್ಯತಿ ಆಗುತ್ತಿತ್ತು.
 

‍ಲೇಖಕರು G

February 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. maheshwari.u

    ಪುಸ್ತಕದ ಬಗ್ಗೆ ಕುತೂಹಲ ಮೂಡುತ್ತದೆ. ಮಾಹಿತಿಗಾಗಿ ಧನ್ಯವಾದಗಳು.

    ಪ್ರತಿಕ್ರಿಯೆ
  2. Anonymous

    ಸಿ.ಓಂಕಾರಪ್ಪ ಹೆಚ್ಚು ಜನ ಸೇರಿದವರಲ್ಲ. ತಮ್ಮದೇ ಗುಂಗಿನಲ್ಲಿ ಇರುತ್ತಿದ್ದವರು. ಕ್ಲಾಸ್ ನಲ್ಲಿ ಆವೇಶ ಪೂರ್ಣವಾಗಿ ಪಾಠಮಾಡುತ್ತದ್ದರು. ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು ಎಂಬುದನ್ನೂ ನೋಡದೆ. ಆಕ್ಕ ಪಕ್ಕದ ಕೊಠಡಿಯ ಶಿಕ್ಷಕರು ಗೊಣಗಿದ್ದೂ ಉಂಟು. ಈವರ ಬಗ್ಗೆ ಯಾವುದೇ ಸಂಭಾವನಾ ಗ್ರಂಥ ಬಂದಿರುವುದು ಕಾಣದು. ಇವರು ಪ್ರಚಾರ ಪ್ರಿಯರಲ್ಲ. ಇನ್ಯಾವದೋ ಕೃತಿ ರಚಿಸುತ್ತದ್ದಂತೆ ಕಾಣಿಸಿತು. ಈವರ ವ್ಯಕ್ತಿ ಪರಿಚಯ ಕೃತಿ ಪರಿಚಯ ಿರುವ ಸಣ್ಣ ಹೊತ್ತಿಗೆ ಬರಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: