ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್: ಕನ್ನಡಿಯ ಸೂರ್ಯ

-ಜೀವಯಾನದ ಮಂಜುನಾಥ

ಕವಿ ಎಚ್.ಎಸ್.ವಿ ಅವರಿಗಿರುವ ವ್ಯುತ್ಪತ್ತಿ ಕನ್ನಡದ ಕವಿಗಳಲ್ಲೀಗ ಅಪರೂಪದ್ದು. ಕಾವ್ಯದ ಶಬ್ದ ಭಂಡಾರ, ಲಯಗಾರಿಕೆ, ಭಾವನೆಗಳ ಅಪೂರ್ವತೆ, ಮತ್ತು ವೈವಿಧ್ಯ ಇವುಗಳೆಲ್ಲವೂ ಎಚ್.ಎಸ್.ವಿ ಕಾವ್ಯವನ್ನು ಶ್ರೀಮಂತಗೊಳಿಸಿವೆ. ಅವರ ಕಾವ್ಯದಲ್ಲಿ ಕನ್ನಡ ಕಾವ್ಯಪರಂಪರೆಯ ಅಭ್ಯಾಸ ಮತ್ತು ಅರಿವು ನಿಚ್ಚಳವಾಗಿ ಗೋಚರಿಸುವಂತಿವೆ. ಕಾವ್ಯ ಪರಂಪರೆಯಿಂದ ಹೀರಿಕೊಳ್ಳಬಹುದಾದಷ್ಟು ಹೀರಿಕೊಂಡು, ಸತ್ವವನ್ನೂ ಸೌಷ್ಠವವನ್ನೂ ಎಲ್ಲಕ್ಕಿಂತ ಹೆಚ್ಚಾಗಿ ಸಾತತ್ಯವನ್ನೂ ಎಚ್.ಎಸ್.ವಿ ಕಾವ್ಯ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಸ್ವಂತ ಪ್ರತಿಭೆಯಿಂದ ಪರಂಪರೆಯನ್ನು ಸದ್ಯತನದ ನವೀನತೆಯಿಂದ ಬೆಳಗುವಂತಿದೆ. ಎಚ್.ಎಸ್.ವಿ ಯವರ ಈಚಿನ ಕವಿತೆಗಳನ್ನು ಓದುವುದೆಂದರೆ ಹಿಂದಿರುಗಿ ಸಾಲುಮರಗಳಿಂದ ತುಂಬಿದ ಈ ದಾರಿಯನ್ನು ಬೆಳಕು ಹಾಯಿಸಿ ನೋಡಿದಂತೆ, ಮತ್ತು ಅದೇ ಬೆಳಕಲ್ಲಿ ಮುಂದಿನ ಹೆಜ್ಜೆಯನ್ನಿಡುತ್ತಾ ಸಾಗಿದಂತೆ ಅನ್ನಿಸುತ್ತದೆ.

ಇಂದಿನ ಕನ್ನಡ ಕವಿತೆಯ ಸೌಷ್ಠವವನ್ನು ಕುಗ್ಗಿಸಿರುವುದು ನಮ್ಮ ಆಧುನಿಕ ಕಾಲದ ಸಂಕುಚಿತ ವೈಚಾರಿಕತೆ ಇರಬೇಕು. ಆ ವೈಚಾರಿಕತೆಗೆ ಭಾವದೀಪ್ತಗೊಳಿಸುವ ಭಾಷೆಯಾಗಲೀ ಅದರ ಲಯವಾಗಲೀ ಅಗತ್ಯ ಬೀಳುವುದಿಲ್ಲ. ಅಭಿಪ್ರಾಯವನ್ನು ತಿಳಿಸುವುದೇ ಕವಿತೆಯ ಉದ್ದೇಶವೂ ಆದಾಗ ಅದಕ್ಕೆ ಗದ್ಯಕವಾದ ಭಾಷೆ ಮತ್ತು ಲಯವೇ ಸಾಕೆನಿಸುತ್ತದೆ. ಹೆಚ್ಚಿನದು ಅನಗತ್ಯ ಅಲಂಕಾರವೆಂದೋ ಲಕ್ಷುರಿಯೆಂದೋ ಅನಿಸಿಬಿಡುತ್ತದೆ.

ಇಂಥ ಸಂದರ್ಭದಲ್ಲಿ ವೆಂಕಟೇಶಮೂರ್ತಿಯವರ ಕವಿತೆ ತನ್ನ “ನೈಸರ್ಗಿಕತೆ”ಯಿಂದ ಒಡೆದು ನಿಲ್ಲುತ್ತದೆ. ಅದನ್ನು ನೈಸರ್ಗಿಕ ಎಂದು ಕರೆಯುವುದೇಕೆಂದರೆ , ಸಿಪ್ಪೆ, ತಿರುಳು, ಬೀಜ ಎಲ್ಲವನ್ನೂ ಒಳಗೊಂಡ ಹಣ್ಣಿನ ಹಾಗೆ ಅದು. ಸಿಪ್ಪೆ-ತಿರುಳು-ಬೀಜಗಳನ್ನೆಲ್ಲಾ ಹೊರತುಪಡಿಸಿ ಅದರ ರಸವನ್ನಷ್ಟೇ ತೆಗೆದು ಪ್ಯಾಕೆಟ್ಟಿನಲ್ಲಿ ಕೊಡುವಂತೆ ಅಲ್ಲ. ಅಂದರೆ ಮನುಷ್ಯ ಪ್ರಯತ್ನದ “ಕಲೆ”ಯ ವಿಭಾಗವನ್ನು ಈ ಕಾವ್ಯ ನಿರ್ಲಕ್ಷಿಸುವುದು ಎಂದಲ್ಲ. ಮೊದಲೇ ಹೇಳಿದಂತೆ ಪರಂಪರೆಯನ್ನು ಹೀರಿಕೊಳ್ಳುವುದರಲ್ಲಿ ಮತ್ತು ಅದನ್ನು ವಿಶೇಷ ಎಚ್ಚರದಿಂದ ತಮ್ಮ ಕವಿತೆಯಲ್ಲಿ ಹಾಜರುಪಡಿಸುವಲ್ಲಿ ಕಾವ್ಯದ ಕಲೆಯನ್ನು ಗರಿಷ್ಠ ಪ್ರಮಾಣದಲ್ಲಿ ಮೈಗೂಡಿಸಿಕೊಂಡಿರುವ ಕವಿ ಎಚ್.ಎಸ್.ವಿ. ಹಾಗಿರುವ ಕಾರಣದಿಂದ ಅವರ ಕವಿತೆಗಳು ಅವರವು ಮತ್ತು ಅವರವು ಮಾತ್ರ ಅಲ್ಲ-ಕನ್ನಡದವು ಎಂದೆನಿಸುವಂತೆ ಇವೆ.

ಅವರ ಕವಿತೆಗಳಿಗೆ ಒದಗಿರುವ ಜೀವ ಸ್ಪರ್ಶವೇನೋ ಅವರ ಕೊಡುಗೆ, ಇನ್ನುಳಿದಿದ್ದೆಲ್ಲಾ ಭಾಷೆಯದೇ ಎನ್ನಿಸುವ ಸಹಜತೆಯ ಹದದಲ್ಲಿ ಎಚ್ ಎಸ್ ವಿ ಕವಿತೆಗಳಿವೆ.

ಸಂಸ್ಕೃತಿಯ ಉತ್ಕೃಷ್ಟ ಮೌಲ್ಯಗಳಿಗೆ ತೆರೆದ ಮನಸ್ಸು ಈ ಕವಿಯದು. ಆಧುನಿಕ ಕಾಲದ ತಿಳುವಳಿಕೆಯಂತೆ ಸಂಸ್ಕೃತಿಯೆನ್ನುವುದು ಇಂಡಿಯಾದ ಏಕಾಕಾರವಲ್ಲ. ಮತ್ತು ಭಾರತೀಯ ಸಂಸ್ಕೃತಿಯೆಂದು ನಾವು ಸಾಮಾನ್ಯೀಕರಣ ಮಾಡಬಹುದಾದ್ದೊಂದು ಇಲ್ಲ. ಮತ್ತು ಇಲ್ಲಿನ ಪ್ರಬಲ ಸಂಸ್ಕೃತಿಯೆನ್ನುವುದು ಹಲವು ತೆರನ ಶೋಷಣೆಯ ಮುಖವುಳ್ಳದ್ದು-ಎಂಬುದೆಲ್ಲ ನಿಜವಾದರೂ, ಎಚ್.ಎಸ್.ವಿ.ಯವರಂಥ ಕವಿ ಶೋಧಿಸುವುದು ಮನುಷ್ಯನ ಎಲ್ಲ ಸಂಸ್ಕೃತಿಗಳ ಆಂತರ್ಯವೆನ್ನಬಹುದಾದ ತಿಳಿನೀರಿನಂಥ ಅಂತಃಕರಣದ ನೆಲೆಯನ್ನು. ಅವರಿಗೆ ಮುಖ್ಯವೆನ್ನಿಸುವುದು ಒಂದು ಸಂಸ್ಕೃತಿಯ ಜೀವಪರತೆ ಮತ್ತು ಸೃಜನಶೀಲತೆಗಳು ಮಾತ್ರ. ಮತ್ತೆ ಯಾವುದೇ ಸಂಸ್ಕೃತಿಯೂ ಜೀವಪೋಷಕವಾದ ಉತ್ತಮಾಂಶಗಳನ್ನು ಹೊಂದಿರದೇ ಇರದು ಅಂಬ ಸಹಾನುಭೂತಿಯುಳ್ಳ ಗ್ರಹಿಕೆ ಇಂಥ ಕಾವ್ಯದ್ದು. ಹಾಗಾಗಿ ಅದು ರಾಜಕೀಯ ಪ್ರಣಾಳಿಕೆಯಂಥ ಕ್ರಾಂತಿಕಾರಕತೆಯನ್ನು ತೋರಿಸದಿದ್ದರೂ, ಕಾವ್ಯಕ್ಕೆ ಸಾಧ್ಯವಾದ ನಿಜ ಅರ್ಥದ ಚಲನಶೀಲತೆಯನ್ನು ಹೊಂದಿರುವಂಥದೇ ಆಗಿರುತ್ತದೆ.

ರಾಮ, ಕೃಷ್ಣ, ಮಹಾಭಾರತ -ಇತ್ಯಾದಿ ಉಲ್ಲೇಖಗಳು ಕಾವ್ಯದಲ್ಲಿ ಪದೇ ಪದೇ ಬರುವುದರಿಂದ ಮೇಲ್ನೋಟಕ್ಕೆ ಆ ಕಾವ್ಯ ಸಾಂಪ್ರದಾಯಿಕವೆಂದು ಕಾಣುತ್ತದೆ. ಅದು ಸಾಂಪ್ರದಾಯಿಕವೇ ಇರಬಹುದಾದರೂ ಸಂಪ್ರದಾಯವಾದಿ ಆಗಿರುವುದಿಲ್ಲ. ಮತ್ತು ನಿಜ ರೀತಿಯಲ್ಲಿ ಸಾಂಪ್ರದಾಯಿಕವಾದ್ದು ಸಹಿಷ್ಣುತೆಯನ್ನು ಒಳಗೊಂಡು ಅನುಕಂಪವನ್ನೇ ತನ್ನ ಹೃದಯವಾಗಿ ಉಳ್ಳದ್ದು ಆಗಿರುತ್ತದೆ. ತನ್ನ ನೆಲೆಯಲ್ಲಿ ನಿಂತು ತೆರೆದ ಮನಸ್ಸಿನದಾಗಿರುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ, ಸಂಪ್ರದಾಯದೊಳಗಡೆಯೇ ಬೇರೆ ನೋಟಗಳು, ಪ್ರತಿಭಟನೆಯ ದನಿಗಳನ್ನು ಎಚ್.ಎಸ್.ವಿ ಕಾವ್ಯ ಮುನ್ನೆಲೆಗೆ ತರುತ್ತದೆ. ಅದನ್ನು ಕಾವ್ಯದ ಸೃಜನಶೀಲತೆಯ ಪ್ರಶ್ನೆಯಾಗಿ ಕಾಣುತ್ತದೆ. ಹಾಗಾಗಿ ಸಂಪ್ರದಾಯದೊಂದಿಗೆ ಸಮ್ಮತಿ-ಅಸಮ್ಮತಿಗಳ ಅರ್ಥಪೂರ್ಣ ಸಂಬಂಧವನ್ನು ಉಳಿಸಿಕೊಳ್ಳಲು ಈ ಕಾವ್ಯ ಹವಣಿಸುತ್ತದೆಯೇ ಹೊರತು, ಸಂಬಂಧದ ಹಂಗು ಹರಿದುಕೊಂಡ ಕ್ರಾಂತಿಕಾರಕ ವಿರೋಧದ ನೆಲೆಯಲ್ಲಿ ನಿಲ್ಲುವುದರಲ್ಲಿ ಇದಕ್ಕೆ ನಂಬಿಕೆಯಿಲ್ಲ.

ರಾಮ, ಕೃಷ್ಣ ಇತ್ಯಾದಿ ಪಾತ್ರಗಳು ವೆಂಕಟೇಶಮೂರ್ತಿಯವರ ಕಾವ್ಯದಲ್ಲಿ ಪ್ರತಿಮೆಗಳಾಗಿ ಬರುವುದಿಲ್ಲ. ಅಂದರೆ, ಸ್ವತಃಸಿದ್ಧವಾದ ಅರ್ಥ-ಭಾವಗಳ ಗುಚ್ಛವಾಗಿ, ನಮ್ಮ ಈ ಕಾಲದ ಅನುಭವವನ್ನು ಹೊಳೆಯಿಸಲು ಬಳಸಿಕೊಳ್ಳಬಹುದಾದ ಸರಕುಗಳಾಗಿ ಅವು ಇಲ್ಲ. ಈ ಅಂಶದಲ್ಲಿ ಎಚ್.ಎಸ್.ವಿ ಅಡಿಗರಂತೆ ಅಲ್ಲ. ನಮ್ಮ ಸುತ್ತಲೇ ಉಸಿರಾಡುವ ವ್ಯಕ್ತಿಗಳಂತೆ ಅವರ ರಾಮ, ಕೃಷ್ಣರು ಇದ್ದಾರೆ. ಯುಧಿಷ್ಠಿರ ಯುದಿ ಎಂದೂ, ಘಟೋತ್ಕಚ ಘಟು ಎಂದೂ ಕರೆಯಲ್ಪಡುತ್ತಾರೆ. ಆ ಪೌರಾಣಿಕ ವ್ಯಕ್ತಿಗಳ ದೈವೀಕತೆಗಿಂತಲೂ ಅವರ ಸಾಮಾಜಿಕತೆಯ ಬಗ್ಗೆಯೇ ಕವಿಗೆ ಹೆಚ್ಚು ಆಸಕ್ತಿ. ಆ ರೀತಿಯಲ್ಲಿ ಎಚ್.ಎಸ್.ವಿ ಕಾವ್ಯದಲ್ಲಿ ಎಲ್ಲವೂ ಮುಕ್ತವಾದ ಅನುಭವವಾಗಿರುತ್ತದೆ. ಯಾಕೆಂದರೆ , ಕವಿಗೆ ಎಲ್ಲ ನಂಬಿಕೆಗಿಂತಲೂ ಈ ಭವ ಪ್ರಪಂಚದಲ್ಲಿ ಆಗುವುದು ಮುಖ್ಯವೆನ್ನಿಸುತ್ತದೆ. ಕವಿತೆಯನ್ನು ಅಂಥ ಸಾಧನೆಯ ಮಾಧ್ಯಮವಾಗಿಯೇ ಕವಿ ನೆಚ್ಚಿಕೊಂಡಿದ್ದಾರೆ. ಈ ಬಗೆಯಲ್ಲಿ ಕನ್ನಡದ ಉತ್ತಮ ಕವಿಗಳೆಲ್ಲರೂ , ಅದು ಪುತಿನ ಆಗಿರಲಿ, ಕುಮಾರವ್ಯಾಸ ಆಗಿರಲಿ, ನಂಬಿಕೆ ಅಥವಾ ಭಕ್ತಿ ಇವುಗಳನ್ನು ಕಾವ್ಯಾನುಭವವಾಗಿ ಶೋಧಿಸಿರುವವರೇ ಹೊರತು ನಂಬಿಕೆ-ಭಕ್ತಿಯನ್ನು ನಿಗಧಿತ ಠೇವಣಿಯಾಗಿ ಹೊಂದಿರುವ ಭಕ್ತ ಕವಿಗಳಲ್ಲ. ಮತ್ತು ಕ್ರಾಂತಿ-ಭಕ್ತಿ ಎರಡನ್ನೂ ಒಂದೇ ಆಗಿ ಕಂಡಿರುವುದೇ ಕನ್ನಡದ ನಿಜ ಮನಸ್ಸು ಎನಿಸುತ್ತದೆ.

ಪರಂಪರೆಗೆ, ಕಾವ್ಯ ಪರಂಪರೆಗೆ ವಿಮರ್ಶಾಪೂರಿತವಾದ ವಿನಯದಿಂದಲೇ ನಮಿಸುವ ಎಚ್.ಎಸ್.ವಿ.ಕಾವ್ಯ ಮುಂದಿನ ಕನ್ನಡ ಕವಿತೆಗೆ ಏನನ್ನು ಸೂಚಿಸುತ್ತದೆ ಎಂಬುದು ಮಹತ್ವದ ಸಂಗತಿ. ಕವಿತೆಯ ಆಶಯದ , ಆಕಾರದ ರೂಢಿಗಳನ್ನು ಭಂಗಿಸುವ ಪ್ರಯೋಗಗಳು ಕನ್ನಡದಲ್ಲಿ ಅಪರೂಪವೇನಲ್ಲ. ಆದರೆ ಅನುಭವಕ್ಕೇ ಇರುವ ಲಯದ (ಅನುಭವದ ಆಂತರಿಕ ಸಮಂಜಸತೆ) ಹಂಗನ್ನು ಮಾನ್ಯ ಮಾಡದಿದ್ದಲ್ಲಿ-ನದಿಗೆ ಪಾತ್ರದ ಹಂಗೇ ಸ್ವಾತಂತ್ರ್ಯವಾದ್ದರಿಂದ-ಕವಿತೆ ಸಂವಹನಶೀಲವಾಗದೆ, ನೆಲದಲ್ಲಿ ಬೇರೂರಿದ್ದಾಗದೆ, ಅಂತರದಲ್ಲೇ ಉಳಿಯುವ ಪದಾರ್ಥವಾಗಬಹುದು-ಎಂಬ ಎಚ್ಚರದ ಸೂಚನೆಯಂತಿದೆ ಎಚ್.ಎಸ್.ವಿ ಕಾವ್ಯ. ಪರಂಪರೆಯೊಂದಿಗಿನ ಅರ್ಥಪೂರ್ಣ ಅನುಸಂಧಾನದಿಂದಷ್ಟೇ ಸಾಂಸ್ಕೃತಿಕವಾಗಿ ಮುಖ್ಯವೆನಿಸುವಂಥದು ಫಲಿಸಲು ಸಾಧ್ಯವೆಂಬುದಕ್ಕೆ ಸಾಕ್ಶಿಯಂತಿದೆ ಅದು.

(ಉದಯವಾಣಿ)

 

 

‍ಲೇಖಕರು G

18 July, 2011

1 Comment

  1. Laxminarasimha

    ಎಂದಿನಂತೆ ಜೀವಯಾನದ ಮಂಜುನಾಥ್ ಅವರ ಬರಹ ಚೇತೋಹಾರಿಯಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading