ಅನುಪಮಾ ಪ್ರಸಾದ್
ನೀಲು ಊಟದ ತಾಟು ಮೇಜಿನ ಮೇಲಿಟ್ಟು ಸಿಂಕಿನಲ್ಲಿ ಕೈ ತೊಳೆದು ಬಾಯಿ ಒರೆಸಿಕೊಳ್ಳುತ್ತ ಕನ್ನಡಿಯಲ್ಲಿ ಮುಖ ನೋಡಿಕೊಂಡಳು. ಹೊಟ್ಟೆ ಕೆಳಗೆ ಜಗ್ಗುತ್ತಿತ್ತು. ಕಳೆಕಳೆಯಾಗಿ ಹೊಳೆಯುತ್ತಿದ್ದ ಮುಖದ ಚರ್ಮವನ್ನು ಮತ್ತೆ ಮತ್ತೆ ಮುಟ್ಟಿ ಖುಷಿ ಪಟ್ಟಳು. ಆಕೆ ಸ್ವಂತದ ಮೂರು ಮಕ್ಕಳನ್ನು ಹೆತ್ತಿದ್ದರೂ ಒಮ್ಮೆಯೂ ಮೈ-ಕೈ ತುಂಬಿಕೊಂಡು ಮುಖದಲ್ಲಿ ಹೊಳಪು ಕಂಡವಳಲ್ಲ. ತಿಂಗಳು ತುಂಬಿ ಹೊಟ್ಟೆ ಕೆಳಕ್ಕೆ ಜಗ್ಗುತ್ತಿದ್ದಾಗಲೂ ಸೂರ್ಯ ರೈಲು ಪಟ್ಟಿಯ ಆಚೆಯ ಮಸೀದಿಯ ಗುಮ್ಮಟದ ಹಿಂದಿನಿಂದ ಇಣುಕುವ ಮೊದಲೇ ಪ್ಲಾಸ್ಟಿಕ್ ಚೆಂಬಿನೊಂದಿಗೆ ರೈಲು ಪಟ್ಟಿಯ ಈಚೆ ಭಾಗದಲ್ಲಿರುವ ಮುಳ್ಳು ಮಟ್ಟಿಯ ಹಿಂದೆ ಕುಳಿತು ಬೆಳಗಿನ ಕೆಲಸ ಮುಗಿಸಿ, ತರಕಾರಿ ಗಾಡಿ ತಳ್ಳಿಕೊಂಡು ಹೊರಡುವ ಗಂಡನಿಗೆ, ಬಗ್ಗಿದ ಬೆನ್ನಿನಲ್ಲೇ ಜಲ್ಲಿ ಗುಡಿಸುವ ಕೆಲಸಕ್ಕೆ ಹೋಗುವ ಮುದುಕಿ ಅತ್ತೆಗೆ ರೊಟ್ಟಿ ಬೇಯಿಸಿಕೊಡಬೇಕಿತ್ತು.
ಜೊತೆಗೆ ಎರಡು ಮಕ್ಕಳನ್ನೂ ಎಬ್ಬಿಸಿ ರಗಳೆ ತೆಗೆಯುತ್ತಿದ್ದ ಅವುಗಳನ್ನು ರಮಿಸಿ ಕೇಳದಿದ್ದಾಗ ಬೆನ್ನಿಗೆರಡು ಗುದ್ದಿ ರೊಟ್ಟಿ ಕೊಟ್ಟು ಮುದುಕಿ ಬೈಯುತ್ತಿದ್ದರೂ ಕೇಳಿಸಿಕೊಳ್ಳದೆ ಅವಳ ಹಿಂದೆಯೇ ಕಳಿಸಬೇಕಿತ್ತು. ನಂತರ ತನ್ನ ಪಾಲಿನ ರೊಟ್ಟಿ ತಿಂದು ಶೀಟು ಹೊದೆಸಿದ ವಾಸದ ಕೋಣೆಯ ತಗಡಿನ ಬಾಗಿಲಿಗೆ ಬೀಗ ಸಿಕ್ಕಿಸಿ ಅಗರಬತ್ತಿ ಕಾರ್ಖಾನೆಗೆ ದಿನಗೂಲಿ ಕೆಲಸಕ್ಕೆ ಒಂದು ದಿನವೂ ತಪ್ಪಿಸದೆ ಓಡಬೇಕಿತ್ತು. ಹಾಗೆ ಓಡಲಾರಂಭಿಸಿದ ಕಾಲುಗಳು ಮತ್ತೆ ಚಾಚುತ್ತಿದುದು ಪಡುವಣದಲ್ಲಿ ಸೂರ್ಯ ಇಳಿದು ಹೋಗಿ ಅವನ ಮಾಸಲು ಬೆಳಕನ್ನೂ ಇರುಳು ನುಂಗಿದ ಮೇಲೆಯೇ. ಅಂತ ಇರುಳಲ್ಲೇ ಆಕೆಗೆ ಮೂರನೆಯ ಬಾರಿಯ ಹೆರಿಗೆಯ ನೋವು ಸುರುವಾಗಿತ್ತು.
ಕಂಪೌಂಡ್-ಗೇಟುಗಳಿಲ್ಲದ ಅಕ್ಕ ಪಕ್ಕದ ಶೆಡ್ಡಿನ ಮನೆಗಳಲ್ಲಿ ವಾಸಿಸುತ್ತಿರುವವರು ಓಡಿ ಬಂದು ಆಕೆಯನ್ನು ಅದೇ ಏರಿಯಾದಲ್ಲಿರುವ ಮಧ್ಯಮ ವರ್ಗದವರ-ಬಡವರ ಕೈಗೆಟುಕುವ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿಯ ಡಾಕ್ಟ್ರಮ್ಮ ನೀಲೂಗೆ ಹೊಸಲೋಕದ ಪರಿಚಯ ಮಾಡಿಕೊಟ್ಟಿದ್ದರು. ಆಕೆಯ ಗಂಡನನ್ನೂ, ಅತ್ತೆಯನ್ನೂ ಕರೆದು ಕೂರಿಸಿ ಪಾಠ ಮಾಡಿದ್ದರು. ಬಾಡಿಗೆ ತಾಯಿಯಾಗುವ ಪ್ರತಿಯೊಂದು ಹಂತವನ್ನು ವಿವರಿಸಿ ಅರ್ಥ ಮಾಡಿಸಿದ್ದರು. ಸೃಷ್ಠಿ ಸೆಂಟರಿನ ಸಂಪರ್ಕಾಧಿಕಾರಿ ತನ್ನ ಲ್ಯಾಪ್ಟಾಪ್ ಸಹಿತ ಇವರಿದ್ದ ಆಸ್ಪತ್ರೆಗೇ ಬಂದು ಅದರಲ್ಲಿ ಚಿತ್ರಗಳ ಸಹಿತ ಈ ಮೊದಲೇ ಬಾಡಿಗೆ ತಾಯಿಯಾದವರ ಅನುಭವಗಳನ್ನು ಅವರದೇ ಮಾತುಗಳ ಮೂಲಕ ತೋರಿಸಿದಾಗಲಂತು ನೀಲೂ ತಾನು ಬಾಡಿಗೆ ತಾಯಿಯಾಗುವವಳೇ ಎಂದು ನಿರ್ಧರಿಸಿಯಾಗಿತ್ತು.
ತರಕಾರಿ ಮಾರುವ ಗಾಡಿಯನ್ನ ಬಾಡಿಗೆಗೆ ಪಡೆಯುತ್ತಿದ್ದ ನೀಲೂ ಗಂಡನಿಗೂ ಬಾಡಿಗೆ ಭಾಷೆಯಲ್ಲೇ ಡಾಕ್ಟ್ರಮ್ಮನೂ ಅಧಿಕಾರಿಯೂ ವಿವರಿಸಿದ್ದರಿಂದ ಬಾಡಿಗೆ ಗರ್ಭಾಶಯದ ವ್ಯವಹಾರವೆಂದರೆ ತಾನು ಗಾಡಿ ಬಾಡಿಗೆ ಪಡೆಯುವುದು ಎಷ್ಟು ವ್ಯವಹಾರಿಕವೋ ಇದೂ ಅಷ್ಟೆಯಾ ಅನಿಸಿತ್ತು. ಮತ್ತೊಮ್ಮೆ ಡಾಕ್ಟ್ರಮ್ಮ ಪಾಠ ಆರಂಭಿಸುವ ಹೊತ್ತಿಗೆ ಅವನೂ ದನಿ ಸೇರಿಸಿದ್ದ. ಅದೆಂತದ್ದೂ ಇಲ್ಲವ್ವೋ. ನೀರು ನಿಲ್ತಿದ್ದಂಗೇ ಕೆಲವು ಹೆಂಗಸ್ರಿಗೆ ಮೈ ಇಳೀತದಲ್ಲ. ಅದ್ಕೇ ಆಸ್ಪತ್ರೇನಲ್ಲೇ ಅಂತ ಐಬಿರೋ ಗಂಡ-ಹೆಂಡ್ರ ಪಿಂಡ ತಯಾರ್ ಮಾಡಿ ಗಟ್ ಮುಟ್ಟಾಗಿ ಹೆರಿಗೆ ಮಾಡ್ಕೊಂಡ ಹೆಂಗಸಿನ ಗರ್ಭ ಚೀಲದೊಳ್ಗೆ ಆ ಪಿಂಡ ಹಾಕಿಡ್ತಾರೆ. ಅದನ್ನ ಹೆತ್ಕೊಡೋವರ್ಗೂ ಈ ಹೆಂಗ್ಸು ಆಸ್ಪತ್ರೆ ಹಾಸ್ಟೆಲ್ಲಿನಲ್ಲೇ ಇರ್ಬೇಕು. ಈಕಿ ಊಟ-ಉಪಚಾರ ಎಲ್ಲ ಅವರೇ ನೋಡ್ಕೊತ್ತಾರೆ. ತಿಂಗ್ಳೀಗೆ ಮೂರ್ಸಾವ್ರ ದುಡ್ಡು ಕೊಡ್ತಾರೆ. ಆ ಕಾರ್ಖಾನೆಯೋರು ಕೊಡೋದು ಒಂದೂವರೆ ಸಾವ್ರ. ಮಗಾ ಹುಟ್ಟಿದ್ಮೇಲೆ ಬಾಡ್ಗೆ ದುಡ್ಡು ಅಂತ ಎರ್ಡ್ ಲಕ್ಷ ಕೊಡ್ತಾರೆ. ಇನ್ನೇನವ್ವಾ. ಹೊಟ್ಟೆ ತುಂಬ ಉಣ್ಬೋದು. ಮಕ್ಳಿಗೆ ಇಸ್ಕೂಲ್ಗೂ ಕಳಸ್ಬೋದು. ಈಕಿ ಮಗಾ ಹೆತ್ಕೊಟ್ಟು ಬರೋತಂಕ ನಿನ್ನ ಮೊಮ್ಮಕ್ಳನ್ನ ಸುಧಾರ್ಸ್ಕೊಳ್ಳವ್ವ. ಆ ಜಲ್ಲಿ ಗುಡ್ಸೋಕ್ಹೋಗೋದನ್ಬುಟ್ಬುಡು. ತಾಯಿಗೆ ಗಾಳ ಹಾಕಿ ಒಪ್ಪಿಸಿಬಿಟ್ಟಿದ್ದ.
ಹೋಯ್..ಇದೆಲ್ಲ ಆಗ್ಬೇಕು ಅಂದ್ರೆ ಮೊದ್ಲು ಈ ಮಗೂಗೆ ಒಂದ್ವರ್ಷ ಆಗ್ಬೇಕು. ಮಗೂ ಎದೆ ಹಾಲು ಕುಡಿಯೋದನ್ನ ಬಿಡ್ಬೇಕು. ಈಕೆ ನಾವು ಹೇಳಿದಾಗೆಲ್ಲ ಆಸ್ಪತ್ರೆಗೆ ಬಂದು ಚೆಕಪ್ ಮಾಡಿಸ್ಕೊಬೇಕು. ಅದರ ಮಧ್ಯೆ ಏನಾದ್ರೂ ಬಸುರಾದ್ರೆ, ಆರೋಗ್ಯ ಕೆಟ್ಟೋದ್ರೆ ಬಾಡಿಗೆ ತಾಯಿಯಾಗೋಕೆ ಬರೋದಿಲ್ಲ ನೋಡು ಡಾಕ್ಟ್ರಮ್ಮ ಗದರಿಸಿದ್ದಳು.
ಅಂತು ಒಂದು ವರ್ಷ ಕಳೆದು ತಿಂಗಳಾಗುತ್ತಿದ್ದಂತೆ ನೀಲೂ ಸೃಷ್ಠಿ ಸೆಂಟರಿನ ಮೆಟ್ಟಿಲೇರಿ ಅಲ್ಲಿಯ ದೊಡ್ಡ ಡಾಕ್ಟ್ರ ಮುಂದೆ ಕುಳಿತಿದ್ದಳು. ಆ ಡಾಕ್ಟ್ರು ಇವಳ ದೈಹಿಕ ಪರೀಕ್ಷೆ ಮಾಡಿ ಬೇರೆ ಬೇರೆ ಲ್ಯಾಬ್ ಟೆಸ್ಟ್ಗಳನ್ನೆಲ್ಲ ಮಾಡಿಸಿ ಏನೇನೋ ಚೀಟಿ ಬರೆದು ಫೈಲಿಗೆ ಹಾಕುತ್ತ; ಒಳ್ಳೇ ಕೆಲ್ಸ ಮಾಡ್ದೆ ನೀಲು. ಮಕ್ಳನ್ನ ಹೆರಲಿಕ್ಕೆ ಆಗದಿದ್ದೋರ ಮಡಿಲು ತುಂಬಿದ ಪುಣ್ಯ ಬರ್ತದೆ ನಿಂಗೆ ಅಂದಾಗ ನೀಲೂ ಮುಖ ಸಿಂಡರಿಸಿ ನಾವೇನ್ ಪುಣ್ಯ ಸಂಪಾದ್ನೆ ಮಾಡಾಕ್ ಬಂದಿಲ್ಲ ಡಾಕ್ಟ್ರಮ್ಮ. ಅವ್ರಿಗೊಳ್ಳೆದಾಗ್ಲಿ ಅನ್ಕೊಂಡು ಬಂದ್ವಾ? ಮಗಾ ಹೆತ್ಕೊಟ್ರೆ ಕಾಸು ಬರುತ್ತೆ. ಅದ್ಕೇ ಬಂದ್ವೀ ಅಂದಿದ್ದಳು.

ಮುಂದೆ ನಾಲ್ಕೈದು ತಿಂಗಳಲ್ಲಿಯೇ ನೀಲೂಳ ಗರ್ಭದೊಳಗೆ ಗೂಡುಕಟ್ಟಿಕೊಳ್ಳಲಿರುವ ಭ್ರೂಣದ ಅಪ್ಪ-ಅಮ್ಮ ಮತ್ತು ನೀಲೂಳ ಗಂಡ ಹೊರಗೆ ನಿಂತಿದ್ದಂತೆ ಡಾಕ್ಟ್ರಮ್ಮ ಎ.ಸಿ.ಕೋಣೆಯೊಳಗೆ ಭಯ ಹುಟ್ಟಿಸುವ ಯಂತ್ರಗಳ ಮಧ್ಯೆ ಇರುವ ಲೇಬರ್ ಮಂಚದಲ್ಲಿ ಮೊಣಕಾಲುಗಳನ್ನು ಮಡಿಸಿ ಅಂಗಾತ ಮಲಗಿದ ಅವಳ ಗರ್ಭಾಶಯದೊಳಗೆ ಭ್ರೂಣವನ್ನು ತಳ್ಳುವ ಸಿದ್ಧತೆ ನಡೆಸುತ್ತ ಇವತ್ತಿಂದ ಒಂಭತ್ತು ತಿಂಗ್ಳು ಈ ಬೇಬಿಗೆ ನಿನ್ನ ಗರ್ಭಚೀಲ ಬೇಬಿ ಸಿಟ್ಟಿಂಗ್ ನೀಲೂ. ಒಂಭತ್ತು ತಿಂಗ್ಳಾದ್ಮೇಲೆ ಈ ಪಾಪು ಹೊರಗೆ ಬರುತ್ತಲ್ಲ. ಆವಾಗ ನಿನ್ಕೈಗೆ ಎರ್ಡ್ ಲಕ್ಷ ಇಟು ಅದ್ರ ಅಪ್ಪ-ಅಮ್ಮ ಬಂದು ಕರ್ಕೊಂಡ್ಹೋಗ್ತಾರೆ. ನಿಂಗೆ ಎದೆ ಹಾಲು ಇಂಗ್ಲಿಕ್ಕೆ ನಾವು ಔಷಧಿ ಕೊಡ್ತೀವಿ. ನೀನು ನಿನ್ನ ಮಕ್ಕಳನ್ನ ಚೆನ್ನಾಗಿ ಓದಿಸ್ಬಹುದು ನೋಡು ಅಂದಿದ್ದಳು. ಕನಸಿನ ಲೋಕಕ್ಕೆ ತೇಲಿ ಹೋಗುತ್ತ ನೀಲೂ ಹೂಂಗುಟ್ಟಿದ್ದಳು.
ಮುಂದಿನ ದಿನಗಳಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಿದ್ದ ದಿನಚರಿಯಾಗಿತ್ತು ಅವಳದು. ಮಂಚದ ಮೇಲೆ ಮೆತ್ತಗಿನ ಹಾಸಿಗೆಯಲ್ಲಿ ಮಲಗಿದಾಗ ನಿದ್ದೆ ಬಂದಿರಲಿಲ್ಲ. ಮಧ್ಯರಾತ್ರಿ ಎದ್ದು ನೆಲದ ಮೇಲೆ ಹಾಸಿಕೊಂಡು ಮಲಗಿದ್ದಳು. ಪಳಪಳ ಹೊಳೆಯುವ ಪಾಯಿಖಾನೆ ನೋಡಿದಾಗ ಅಲ್ಲಿ ಕುಳಿತು ಗಲೀಜು ಮಾಡುವುದು ಹೇಗಪ್ಪ ಅನಿಸಿತ್ತು. ದುಡಿತವಿಲ್ಲದೆ ಸುಮ್ಮನಿರುವುದು ಹೇಗೆಂದೇ ಗೊತ್ತಿಲ್ಲದವಳಿಗೆ ಸಮಯ ಸಮಯಕ್ಕೆ ತಂದು ಕೊಡುವ ಬೇರೆ ಬೇರೆ ರುಚಿಯ ಆಹಾರ ತಿನ್ನುವುದು, ಅವರು ಹೇಳಿದಂತೆ ಯೋಗ-ವ್ಯಾಯಾಮ ಅನ್ನುತ್ತ ಬೇರೆ ಬೇರೆ ರೀತಿ ಉಸಿರಾಡುವುದು, ಇನ್ನೆಂತೆಂದೋ ಕೈ-ಕಾಲು ತಿರುಗಿಸುವುದು ಮತ್ತೆ ವಾಕಿಂಗ್ ಎಂದು ಆಸ್ಪತ್ರೆಯ ಕಾರಿಡಾರಿನಲ್ಲೊಂದಿಷ್ಟು, ಹೂತೋಟದಲ್ಲೊಂದಿಷ್ಟು ನಡೆಯುವುದು-ಇದೆಲ್ಲ ಮೊದಮೊದಲು ರಗಳೆ ಅನಿಸಿದರೂ ಬಂಗ್ಲೆ ಮನೆಯಲ್ಲಿರುವವರು, ಮಹಡಿ ಮನೆಯಲ್ಲಿರುವವರು ಬೆಳಗ್ಗೆ ಕೈಬೀಸಿ ನಡೆಯುವುದನ್ನು ಇನ್ನೇನೇನೋ ಕಸರತ್ತುಗಳನ್ನು ಮಾಡುವುದನ್ನು ನೋಡಿದ್ದರಿಂದ ತನ್ನ ಹೊಟ್ಟೆಯಲ್ಲಿ ಬಂಗ್ಲೆಲಿರೋರ ಮಗು ಬೆಳಿತಿರೋದ್ರಿಂದ ತಾನೂ ಇದನ್ನೆಲ್ಲ ಮಾಡಬೇಕು ಅನ್ನುವುದು ಅರ್ಥವಾಗಿತ್ತು.
ಸ್ವಂತದ ಮೂರು ಮಕ್ಕಳನ್ನು ಹೆರುವಾಗಲೂ ಆಸ್ಪತ್ರೆ ಮುಖ ಕಂಡಿದ್ದು ಅರ್ಧ ಹೆರಿಗೆ ನೋವು ತಿಂದಾದ ಮೇಲೆಯೇ. ಆದರೆ, ಈಗ ಡಾಕ್ಟ್ರಮ್ಮ ಹೇಳಿದಾಗಲೆಲ್ಲ ಅದೆಂತೆತದೋ ಚೆಕಪ್ ಆಗಬೇಕಿತ್ತು. ಎರಡು ತಿಂಗಳಿಗೆ, ನಾಲ್ಕು ತಿಂಗಳಿಗೆ ಒಂಭತ್ತು ತಿಂಗಳಿಗೆ ಹೊಟ್ಟೆ ಮೇಲೆಲ್ಲ ಅಂಟು ಹೊಯ್ದು ಮಿಷನ್ನು ಓಡಿಸಿ ಸ್ಕ್ಯಾನಿಂಗ್ ಮಾಡೋರು. ಅದನ್ನೆಲ್ಲ ಆ ಮಗುವಿನ ವಾರೀಸುದಾರರಿಗೆ ವರದಿ ಒಪ್ಪಿಸೋರು. ತಿಂಗಳು ತಿಂಗಳು ದುಡ್ಡು ಕೊಂಡು ಹೋಗಲು ಬರುವಾಗ ಡಾಕ್ಟರಮ್ಮನ ಆಜ್ಞೆಯಂತೆ ಅವಳ ಗಂಡ ಮಕ್ಕಳನ್ನು ಕರೆತರುತ್ತಿದ್ದ. ಹಾಗೆ ಬರುವಾಗ ಮಕ್ಕಳನ್ನು ಲಕ್ಸ್ ಸಾಬೂನಿನಿಂದ ಸ್ನಾನ ಮಾಡಿಸಿ ಒಳ್ಳೆ ಬಟ್ಟೆ ಹಾಕಿಸಿ ತಾನೂ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟುಕೊಂಡಿರುತ್ತಿದ್ದ. ಮಕ್ಕಳು ಅಪ್ಪ ಹೋಟ್ಲಿಂದ ಕಟ್ಟಿಸಿ ತಂದುಕೊಡುತ್ತಿದ್ದ ತಿಂಡಿಯನ್ನು ಬಣ್ಣಿಸಿದಾಗೆಲ್ಲ ಖುಷಿ ಪಡುತ್ತಿದ್ದಳು. ಗಂಡನ ನೆನಪಾಗಿದ್ದೇ ಅವನ ಸಂಗ ಸುಖ ಬೇಕೆನಿಸಿತು. ಅಲ್ಲ ಇದ್ಯಾವ ಜೈಲಿಗೆ ಬಂದು ಸೇರ್ಕಂಡಂಗಾತು. ಯಾವಳ ಮಗ್ಗುಲು ಸೇರ್ಕೊಂಡು ಮೈ ಕಾಯಿಸ್ಕೊಳ್ತಿದ್ದಾನೋ ಪುಣ್ಯಾತ್ಮ ಅಂದುಕೊಳ್ಳುತ್ತ ಹಾಸಿಗೆಯಲ್ಲಿ ಮುದುಡಿದಳು.
ಬೆಳಗ್ಗೆ ಆಸ್ಪತ್ರೆಯ ಅಂಗಣದ ಹುಲ್ಲು ಹಾಸಿನ ಮೆಲೆ ಅತ್ತಿತ್ತ ನಡೆಯುತ್ತಿದ್ದಳು ನೀಲೂ. ಅಲ್ಲೇ ಪಾತಿ ಸರಿಪಡಿಸುತ್ತಿದ್ದ ಅಜ್ಜಮ್ಮನ ಜೊತೆ ಹರಟೆ ಹೊಡೆಯುತ್ತಿದ್ದ ನೈಟ್ ಡ್ಯೂಟಿ ನರ್ಸಮ್ಮ ಇವಳನ್ನು ನೋಡಿದ್ದೇ ಇನ್ನೊಂದೆರಡು ದಿವ್ಸದಲ್ಲಿ ಹೆರಿಗೆ ಆಗ್ಬಿಡುತ್ತೆ ನೀಲವ್ವ. ಹೆರಿಗೆ ಆದ್ಮೇಲೆ ನಿಂಗೇನು ಮಗು ತೋರ್ಸೋದಿಲ್ಲ ಬಿಡು. ಅಂತ ಆಸೆ ಎಲ್ಲ ಇಟ್ಗೊಬೇಡ. ನರ್ಸಮ್ಮ ಮಾತು ಮುಗಿಸುವ ಮೊದಲೇ ಆವರಣದೊಳಗೆ ಅಟೋ ಬಂದು ನಿಂತಿತು.
ಅದರೊಳಗಿಂದ ಇಳಿದ ಹುಡುಗಿಯರಿಬ್ಬರಲ್ಲಿ ಒಬ್ಬಾಕೆ ಹೊಟ್ಟೆ ಹಿಡಿದುಕೊಂಡು ಅರೆಬಗ್ಗಿಕೊಂಡು ನರಳುತ್ತಿದ್ದರೆ ಮತ್ತೊಬ್ಬಳು ಅವಳನ್ನು ಆಧರಿಸಲು ಪ್ರಯತ್ನಿಸುತ್ತಿದ್ದಳು. ನರ್ಸಮ್ಮ ಇವರನ್ನು ನೋಡಿದ್ದೇ `ಸ್ಟ್ರೇಚರ್..ಸ್ಟ್ರೇಚರ್..’ ಎಂದು ಕಿರುಚಿದಳು. ಅಷ್ಟರಲ್ಲಿ ಒಳಗಿನಿಂದ ಮತ್ತೊಬ್ಬರು ಸ್ಟ್ರೇಚರ್ ತಳ್ಳಿಕೊಂಡು ಬಂದಾಗಿತ್ತು. ಅಜ್ಜಮ್ಮ ಆ ಹುಡಿಗಿಯರನ್ನು ನೋಡಿದವಳೇ ಇವರು ನಿನ್ನೆ ಬಂದವರಲ್ವ? ಇದು ಮೊಟ್ಟೆ ಕೇಸು ಅಲ್ವಾ ನರ್ಸಮ್ಮ? ಆಯ್ತು ಇವತ್ತು ಇನ್ನು ಪೋಲೀಸ್ನೋರು ಬರ್ತಾರೆ ಬಿಡು ಅಜ್ಜಮ್ಮ ಮಾತು ಮುಗಿಸುವ ಮೊದಲೇ ನರ್ಸಮ್ಮ; ಈ ಹುಡ್ಗಿ ಸತ್ತೋಗ್ತದೆ ಅಂತ ಭವಿಷ್ಯ ಹೇಳ್ತಿದ್ದೀಯ? ಹಂಗೇನಾದ್ರು ಆದ್ರೆ ನಮ್ಮ ಡಾಕ್ಟ್ರು ಈ ಸರ್ತಿ ಏನೇನ್ ಕಸರತ್ತು ಮಾಡ್ಬೇಕೋ ಅಂದಳು.

ಮೊಟ್ಟೆ ಕೇಸು ಅಂದ್ರೆ ಏನಜ್ಜಮ್ಮಾ? ಅದ್ಯಾಕೆ ಪೋಲೀಸ್ನೋರು ಬರ್ತಾರೆ? ನೀಲೂ ಗಾಬರಿಯಿಂದ ಕೇಳಿದಳು. ಯಾಕೆ? ನೀನೂ ಮೊಟ್ಟೆ ಮಾರ್ಬೇಕು ಅಂತಿದ್ದೀಯ ಹೇಗೆ? ಒಂದು ತಿಳ್ಕೊ. ಮಗು ಹೆತ್ಕೊಡೋದ್ರಲ್ಲಿ ಅಪಾಯ ಎಂತದ್ದೂ ಇಲ್ಲ. ಮೊಟ್ಟೆ ಮಾರೋದು ಅಂದ್ರೆ ಕೆಲವೊಮ್ಮೆ ಜೀವಕ್ಕೇ ಆಪತ್ತು. ಆ ಹುಡ್ಗೀರ್ನ ನಿನ್ನೆ ನೋಡಿದ್ಕೂಡ್ಲೆ ಗೊತ್ತಾಗಿತ್ತು ಇವ್ರು ಮೊಟ್ಟೆ ಮಾರೋಕೆ ಬಂದಿರೋವು ಅಂತ. ಈ ವಯಸ್ನಲ್ಲಿ ಇದೆಲ್ಲ ಮಾಡ್ಬಾರ್ದು ಅಂತ ಗಿಣಿಗ್ಹೇಳ್ದಂಗೆ ಹೇಳಿದ್ರೆ ಅವ್ರೆಲ್ಲಿ ಕೇಳ್ತವೆ. ನನ್ನ ಮೊಟ್ಟೆ. ನಾನು ಮಾರ್ಕೊಳ್ಳೋಳು. ಮಧ್ಯೆ ನಿಂದೇನು ಅಂದ್ರು. ಗರ್ಭದೊಳ್ಗಿಂದ ಮೊಟ್ಟೆ ತೆಗಿಯೋದು ಅಂದ್ರೆ ಸಸಾರವಾ? ಸ್ವಲ್ಪ ಹೆಚ್ಕಮ್ಮಿ ಆದ್ರೂ ಹದ್ದು ಕಾಯ್ತಾ ಇರುತ್ತೆ. ಒಂದು ಮೊಟ್ಟೆಗೆ ಸಾವ್ರ ಸಾವ್ರ ದುಡ್ಡಿದೆ. ಅದ್ಕೇ ಬರ್ತವೆ. ಮೊಟ್ಟೆ ಮಾರ್ಲಿಕ್ಕೆ ಬರೋರು ಕಷ್ಟ ಬಂದಿದೆ ಅಂತ ಮಾರೋದಕ್ಕಿಂತ ಮಜಾ ಮಾಡ್ಲಿಕ್ಕೆ ದುಡ್ಡು ಬೇಕು. ಅದ್ಕೇ ಮಾರ್ತಾರೆ. ಅಪ್ಪ-ಅಮ್ಮಂಗೆ ಹೇಳೋದು ಬೇಡ ಏನೂ ಬೇಡ. ಅಪಾಯ ಆದರೆ ಮಾತ್ರ ಹೆತ್ತೋರಿಗೆ ಏನೋ ಒಂದು ಸುದ್ದಿ ಕೊಡೋದು. ನಾಲ್ಕ್ ವರ್ಷದ ಹಿಂದೆ ಒಬ್ಳು ಹಿಂಗೇ ಸತ್ತೋದ್ಲು. ಮತ್ತೊಂದು ಕೇಸನ್ನ ಡಾಕ್ಟ್ರಮ್ಮ ಇನ್ನೆಲ್ಲಿಗೋ ಕಳ್ಸಿದ್ರು. ಬುದ್ವಂತ್ರು ಅಂತ ಎಂತೆಂತದೋ ಮಾಡೋದು ಸರಿಯಾ?
ನರ್ಸ್ ಮಾತಾಡುತ್ತಿದ್ದಾಗಲೇ ನೀಲೂಗೆ ಹೊಟ್ಟೆಯೊಳಗಿಂದ ಚಿಲ್ಲನೆ ಹೊರಟ ನೋವು ಅಂಗಾಲಿನವರೆಗೂ ಸಂಚರಿಸಿತು. ಅವಳ ಮುಖ ನೋಡಿಯೇ ಅಜ್ಜಮ್ಮ ಈಕೆಗೇನೋ ಆಗ್ತಿದೆ ನರ್ಸಮ್ಮ. ಒಳಗೆ ಕಳಿಸ್ಬಿಡು ಅಂದಳು.
****
ಹುಟ್ಟಿದ ಮಗು ಎಲ್ಲಿದೆಯೆಂದು ಯಾರೂ ನೀಲೂಗೆ ಹೇಳಲಿಲ್ಲ. ಅವಳೂ ಕೇಳಲಿಲ್ಲ. ನೀನು ಬಹಳ ಗಟ್ಟಿಗಿತ್ತಿ ನೀಲೂ. ಇನ್ನೊಮ್ಮೆ ಬಾಡಿಗೆ ತಾಯಿಯಾಗುವ ಶಕ್ತಿ ನಿಂಗೆ ಇದೆ ಅನ್ನುತ್ತಲೇ ಎದೆ ಹಾಲು ಇಂಗಲು ಗುಳಿಗೆ ಕೊಟ್ಟಿದ್ದರು ಡಾಕ್ಟ್ರಮ್ಮ. ಆಸ್ಪತ್ರಯಿಂದ ಕರೆದೊಯ್ಯಲು ಅವಳ ಗಂಡ ಬಂದಿದ್ದ. ಕೈಗೆ ಲಕ್ಷದ ಗಂಟು ಸಿಕ್ಕಿತ್ತು. ಆಸ್ಪತ್ರೆಯಿಂದ ಮನೆಗೆ ಹೋಗಲು ಬಾಡಿಗೆ ರಿಕ್ಷಾ ಮಾತಾಡಿದ್ದ. ಇಷ್ಟು ದಿನ ತಿಂಗಳು ತಿಂಗಳು ಉಳಿಸಿದ ದುಡ್ಡನ್ನು ಬ್ಲೇಡ್ ಬಡ್ಡಿಗೆ ಬಿಟ್ಟು ದುಡ್ಡು ಜಾಸ್ತಿ ಮಾಡುತ್ತಿರುವುದನ್ನು ಹೇಳುತ್ತಿದ್ದ. ಕೈಯಲ್ಲಿರುವ ದುಡ್ಡಿನಲ್ಲಿ ಒಂದು ಪಾನ್ ಮಸಾಲ ಡಬ್ಬಿ ಅಂಗಡಿ ಇಟ್ಟು ಉಳಿದಿದ್ದನ್ನು ಬಡ್ಡಿಗೆ ಬಿಟ್ಟರೆ ವರ್ಷದಲ್ಲೇ ನಮ್ಮ ದುಡ್ಡು ಡಬಲ್ ಆಗ್ತದೆ ಅನ್ನುತ್ತಿದ್ದ. ಅವಳಿಲ್ಲದೆ ತಾನು ಎಷ್ಟು ಕಷ್ಟ ಪಟ್ಟೆ ಅನ್ನುವುದನ್ನು ವಿವರಿಸುತ್ತಿದ್ದ. ಮಾತ್ರೆ ತಿಂದಿದ್ದರೂ ನೀಲೂಳ ಬಿಗಿದ ಮೊಲೆಗಳಲ್ಲಿ ನೋವು ಅನುಭವಕ್ಕೆ ಬರುತ್ತಿತ್ತು. ಒಂದೆರಡು ದಿನದಲ್ಲಿ ಎಲ್ಲಾ ಸರಿಯಾಗುತ್ತದೆಂದಿದ್ದರು ಡಾಕ್ಟ್ರಮ್ಮ.
ರಿಕ್ಷಾ ಶೆಡ್ಡಿಗೆ ಬರುವಷ್ಟರಲ್ಲಿ ತಾಸೆರಡು ಕಳೆದಿತ್ತು. ಎದೆಯೊಳಗೆಲ್ಲ ಮುಳ್ಳು ಚುಚ್ಚುವ ಅನುಭವ. ನೋವಿನ ಹಿಂಸೆ ತಡೆಯುವುದು ಕಷ್ಟವೆನಿಸಿದಾಗ ಸತ್ತರೂ ಇನ್ನೊಮ್ಮೆ ಹೋಗುವುದು ಬೇಡವೆನಿಸಿತು. ಶೆಡ್ಡಿನೆದುರು ರಿಕ್ಷಾದಿಂದ ಇಳಿಯುತ್ತಿದ್ದಂತೆ ಮುದುಕಿ ಮಕ್ಕಳೊಂದಿಗೆ ಚೆಂಬು ಹಿಡಿದುಕೊಂಡು ರೈಲುಪಟ್ಟಿಯ ಮುಳ್ಳುಮಟ್ಟಿಯಾಚೆಯಿಂದ ಬರುತ್ತಿರುವುದು ಕಂಡು ಕಂಗಾಲಾಗಿ ನಿಂತಳು. ಮೊದಲು ಆ ದುಡ್ಡಿನಲ್ಲಿ ಶೆಡ್ಡಿನ ಹಿಂದೆ ತಗಡಿನ ಗೋಡೆ ಮಾಡಿ ಒಂದು ಪಾಯಿಖಾನೆ ಕಟ್ಟಬೇಕು. ಮುಂದಿನ ಬಾರಿ ಮಗಾ ಹೆತ್ತುಕೊಟ್ಟು ದುಡ್ಡು ಬಂದಾಗ ಶೆಡ್ಡಿಗೆ ಹಂಚು ಹಾಕಿದರಾಯ್ತೆಂದುಕೊಂಡಳು. ಆದರೆ, ಅವಳ ಗಂಡ ಆಗಲೇ ದುಡ್ಡಿನ ವ್ಯವಸ್ಥೆಗೆ ನಡೆದಿದ್ದ. ಇವಳನ್ನು ನೋಡಿದ್ದೇ ಬದಿಯ ಶೆಡ್ಡಿನ ಪಾರೀ ಚೀರಿ ಚೀರಿ ಅಳುತ್ತಿದ್ದ ತನ್ನ ಎಳೆಗೂಸನ್ನು ಹಿಡಿದುಕೊಂಡೇ ಓಡಿ ಬಂದಳು. ಮಗುವನ್ನು ನೋಡಿದ್ದೇ ಗಬಕ್ಕನೆ ಅವಳ ಕೈಯಿಂದ ಮಗುವನ್ನು ಕಸಿದುಕೊಂಡ ನೀಲೂ ತೊಟ್ಟಿದ್ದ ರವಿಕೆಯ ಗುಂಡಿ ಬಿಚ್ಚಿ ಚೀರುತ್ತಿದ್ದ ಮಗುವನ್ನು ಎದೆಗೊತ್ತಿ ಹಿಡಿದಳು. ಅರೆಕ್ಷಣ ಕೊಸರಾಡಿದ ಮಗು ಹಾಲಿನ ವಾಸನೆ ಹಿಡಿದದ್ದೇ ಬಾಯಿ ಹಾಕಿಯೇಬಿಟ್ಟಿತು. ಕೀವು ತುಂಬಿದ ಹುಣ್ಣಿಗೆ ಸೂಜಿ ಚುಚ್ಚಿದಂತಾಗಿ ಛಿಲ್ಲನೆ ರೆಸಿಕೆ ಹೊರ ಹರಿಯಲಾರಂಭಿಸಿದ ಅನುಭವ. ತಡೆಯಲಾರದ ನೋವಿನೊಂದಿಗೇ ಸುಖವಾಗಿ ನರಳಿದಳು.







ಬಾಡಿಗೆ ತಾಯಂದಿರ ಒಳಮನದ ತುಡಿತವನ್ನು ಅಭಿವ್ಯಕ್ತಗೊಳಿಸುವಲ್ಲಿ ಲೇಖಕಿ ಸಫಲತೆಯನ್ನು ಪಡೆದಿದ್ದಾರೆ. ಆಡು ಭಾಷೆಯ ಬಳಕೆ ಸೊಗಸನ್ನು ಹೆಚ್ಚಿಸಿದೆ-ಡಾ||ಲಕ್ಷ್ಮಿ ಜಿ ಪ್ರಸಾದ