ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ.ವಿ.ಜಿ. ಶೈಲಿಯಲ್ಲಿ

ಮಂಕಿಲ್ಲದ ತಿಮ್ಮನ ಕಗ್ಗ

ಡಿ.ವಿ.ಜಿ.ಯವರ ಶೈಲಿಯಲ್ಲಿ
ಅಣಕು ಬರಹ ರಚನೆ : ಚಿತ್ರಾ ರಾಮಚಂದ್ರನ್

ಪರಬೊಮ್ಮನಿಗೆ ನಮನ

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನ ನಮಿಸಿ ,
ಪೂಜ್ಯ ಶ್ರೀ ಡಿ.ವಿ.ಜಿ.ಯವರ ಕ್ಷಮೆ ಯಾಚಿಸಿ ,
ಅಪರಂಜಿಗೆ ಸಲ್ಲಿಸುತ್ತಿರುವ ‘ಮಂಕಿಲ್ಲದ ತಿಮ್ಮನ ಕಗ್ಗ’.

ಪ್ರಕೃತಿ ರಸ ಸೌಂದರ್ಯ

ತೆರೆಯುರುಳಿ ಹೊರಳುವ ಗೋದಾವರಿ ತೀರದಿ ,
ವಟವೃಕ್ಷದ ಶಾಖೆಯೊಳು ಗೂಡು ಕಟ್ಟಿ ,
ಸುಖಿಸಿದ್ದ ಶುಕಪರಿವಾರದ ಗಾಥೆಯ
ಸಹನೆಯಿಂದಾಲಿಸು ಮಂಕುತಿಮ್ಮ .

ಪ್ರಕೃತಿ ವಿಕೋಪ

ಕಾರ್ತಿಕ ಮಾಸದ ಭೋರ್ಗರೆವ ಮಳೆಯೋಳ್
ತೊಯ್ದು ನಡುನಡುಗಿದ ತಿಮ್ಮ ಸೈನ್ಯವದು ,
ಆಶ್ರಯವನರಸಿ ವಟವೃಕ್ಷದ ಬಳಿ ಬಂದು
ಅಡಗಿ ಕುಳಿತಿತು ಬುಡದಿ – ಮಂಕುತಿಮ್ಮ

ಶುಕ ಪ್ರಶ್ನೆ

‘ಮಂದಾಕ್ಷಿ ನಮಗಿಹುದು, ಅರೆಗಣ್ಣು ನಮದೆಂದು ,
ಕೊರಕೊರಗಿ ಕುಳಿತಲ್ಲಿ ಗೂಡಿನಾಶ್ರಯ ದಕ್ಕುವುದೆ ಎಮಗೆ ?
ತೋಳ್ಗಳೆರಡು ಇರ್ದು, ಕರಕುಶಲಕಲೆ ಕಲಿತು
ನೆಲೆ ರಚಿಸದಿಹುದೇಮ್ ಮಂಕುತಿಮ್ಮ ? ‘

ವಿಧಿವಿಧಾನ

ಕಾಲಚಕ್ರ ತಿರುತಿರುಗಿ ಪರಿಪರಿಯ ರೂಪ ಧರಿಸಿ ,
ಕಡೆಗೊಮ್ಮೆ ನರರೂಪ ತಾಳಿ ಬಂದನಾ ವಾನರ .
ತರಿದೊಗೆದು ವೃದ್ಧ ವಟವೃಕ್ಷವ, ಬಲಿಕೊಟ್ಟು ಶುಕ ಖಗವ ,
ಮನೆಯಮೇಲೆ ಮನೆ ಮಾಡಿ ‘ಮಂಕಿಲ್ಲದ ತಿಮ್ಮ ನಾ’ನೆಂದ – ಮಂಕುತಿಮ್ಮ

ನೀತಿ

ಒಳಿತನೆಸಗುವೆನೆಂದು ಮೂರ್ಖರಿಗೆ
ಉಪದೇಶ ನೀಡುವುದೆ ಅನರ್ಥಕ್ಕೆ ಕಾರಣ.
ನಿನ್ನಯ ಜ್ಞಾನ ನಿನಗೇ ದಾರಿ ದೀಪ,
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

‍ಲೇಖಕರು avadhi

25 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading