ಅಭಿಸಾರಿಕೆಯಾಗಿ ಒದಗದ ‘ಅಪ್ಪನ ಪ್ರೇಯಸಿ’
ಡಿ ಎಸ್ ರಾಮಸ್ವಾಮಿ
ಕತೆಗಾರರಾಗಿ, ಕವಿಯಾಗಿ ಈಗಾಗಲೇ ಖ್ಯಾತರಾಗಿರುವ ವಿ.ಆರ್.ಕಾರ್ಪೆಂಟರ್ರ್ ‘ಅಪ್ಪನ ಪ್ರೇಯಸಿ’ ಎಂಬ ಕ್ಯಾಚೀ ಶೀರ್ಷಿಕೆಯ ಕಾದಂಬರಿ ಪ್ರಕಟಿಸಿದ್ದಾರೆ. ಶೀರ್ಷಿಕೆ ತಕ್ಷಣಕ್ಕೆ ಹುಟ್ಟಿಸುವ ಕುತೂಹಲ, ಕಾದಂಬರಿಯಲ್ಲಿ ಇರಬಹುದಾದ ಹೊಸತನ ಮತ್ತು ಸದ್ಯೋ ವರ್ತಮಾನದ ಸಾಂಸ್ಕೃತಿಕ ಪಲ್ಲಟಗಳಿಗೆ ಲೇಖಕ ಕೊಡಬಹುದಾದ ವ್ಯಾಖ್ಯೆಯನ್ನರಸಿ ಕಾದಂಬರಿ ಓದಿ ಮುಗಿಸಿದರೆ ಅಷ್ಟೇನೂ ನಿರಾಸೆಯಾಗುವುದಿಲ್ಲ. ಹೊಸ ತಲೆಮಾರಿನ ಅಶೋಕ ಹೆಗಡೆ, ಸುನಂದಾ ಪ್ರಕಾಶ ಕಡಮೆ, ಗುರುಪ್ರಸಾದ ಕಾಗಿನೆಲೆ ಮುಂತಾದವರು ಕನ್ನಡ ಕಾದಂಬರೀ ಪ್ರಕಾರಕ್ಕೆ ಕೊಟ್ಟ ನವ ಸ್ಪರ್ಶ ಕಾರ್ಪೆಂಟರ್ ಅವರ ಈ ಕಾದಂಬರಿಯಲ್ಲಿ ಬೇರೆಯದೇ ದಿಕ್ಕು ಮತ್ತು ಆಶಯವನ್ನು ಹೊತ್ತು ನಿಂತಂತಿದೆ.
ಕನ್ನಡ ಪುಸ್ತಕಗಳನ್ನು ಓದುವವರಿಲ್ಲ, ಕೊಳ್ಳುವವರಿಲ್ಲ ಚರ್ಚಿಸುವವರಂತೂ ಇಲ್ಲವೇ ಇಲ್ಲ ಎಂದು ಸೆಮಿನಾರುಗಳಲ್ಲಿ ಗೋಳಿಡುವ ಯೂನಿವರ್ಸಿಟಿ ಪಂಡಿತರ ಮಾತುಗಳನ್ನು ಧಿಕ್ಕರಿಸುವಂತೆ ಇತ್ತೀಚಿನ ಬರಹಗಾರರ ಎಲ್ಲ ಬಗೆಯ ಬರಹಗಳನ್ನೂ ಕನ್ನಡದ ಓದುಗ ಸ್ವೀಕರಿಸಿದ್ದಾನೆ, ಬೆನ್ನು ತಟ್ಟಿ ಹಾರೈಸಿದ್ದಾನೆ. ಬ್ಲಾಗುಗಳ ಬಣ್ಣದ ಲೋಕವಂತೂ ಸಾಮಾನ್ಯ ಅನುಭವದಾಚೆಗಿನ ಅಪ್ಪಟ ಸತ್ಯವನ್ನು ಅನಾವರಣಗೊಳಿಸುತ್ತಲೇ ಸಾಹಿತ್ಯಪ್ರಕಾರಕ್ಕೆ ಹೊಸ ಬಗೆಯ ಸಂವೇದನೆಯನ್ನೂ ದಿಕ್ಕು ದೆಶೆಗಳನ್ನೂ ಕಾಣಿಸುತ್ತಲೇ ಇದೆ.
ಕತೆ, ಕವಿತೆ, ಕಾದಂಬರಿಗಳಿಗೆ ಸಾಹಿತ್ಯ ಚರಿತ್ರೆ ನೀಡಿದ್ದ ವ್ಯಾಖ್ಯೆಯನ್ನು ಪುನರವಲೋಕಿಸುವ ಕಾಲ ಸನ್ನಿಹಿತವಾಗಿದೆ. ನವೋದಯದ ರಮ್ಯತೆ, ಪ್ರಗತಿಶೀಲರ ಸಾಮಾಜಿಕ ಕಳಕಳಿ, ನವ್ಯರ ಸ್ವಾನುಭವದ ಪರಿಪಾಕ, ಬಂಡಾಯದ ಕೆಂಬಾವುಟಗಳೆಲ್ಲವನ್ನೂ ಆವಿರ್ಭವಿಸಿಕೊಂಡ ಸಂಕ್ರಮಣದ ಕಾಲ ಇದು. ಕವಿತೆಗೆ ಇಪ್ಪತ್ತೈದು ಸಾಲನ್ನು ಪ್ರಬಂಧ ಕತೆಗಳಿಗೆ ಸಾವಿರ ಪದಗಳ ಮಿತಿ ಹೇರಿ ಸ್ಪಧರ್ೆ ನಡೆಸುವ ಪತ್ರಿಕೆಗಳ ಕಾಲ ಇದು. ಹೇಳುವುದನ್ನು ಅನ್ಯಥಾ ವಿಸ್ತರಿಸದೇ ಸಂಕ್ಷೇಪಿಸಿ ಆದರೆ ಹೇಳಬೇಕಾದ್ದನ್ನು ಎಸೆಮ್ಮೆಸ್ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸುವ ಕಲೆ ಈ ಕಾಲದ ಬರಹಗಾರರಿಗೆ ಸಿದ್ಧಿಸಿದೆ. ಪರಂಪರೆಯ ಅರಿವಿದ್ದೂ ಅದನ್ನು ತನ್ನ ಮಿತಿಯಲ್ಲೇ ಪ್ರಶ್ನಿಸುವ, ವಿವಿಧ ಉದ್ಯೋಗದಲ್ಲಿದ್ದೂ ಸಾಹಿತ್ಯದ ಆಸಕ್ತಿಯಿಟ್ಟುಕೊಂಡ ಬರಹಗಾರ ಈ ಕಾಲದವನು. ಆ ಕಾರಣದಿಂದಲೇ ಸಾಹಿತ್ಯದ ಸ್ಥಾಪಿತ ಮೌಲ್ಯಗಳನ್ನು ಹೀನಾಯವಾಗಿ ಸೋಲಿಸಿದ ಮತ್ತೊಂದು ಮಜಲನ್ನು ಸಾಹಿತ್ಯ ಚರಿತ್ರೆಯಲ್ಲಿ ನಿಜವಾದ ಓದುಗ ಕಂಡುಕೊಂಡಿದ್ದಾನೆ.
‘ಅಪ್ಪನ ಪ್ರೇಯಸಿ’ ಮುನ್ನುಡಿಯ ಆಶೀರ್ವಚನದ ಹಂಗಿಗೂ ಒಳಗಾಗದೇ ಓದುಗನನ್ನು ನೇರ ಕಥಾ ಹಂದರದೊಳಕ್ಕೇ ಎಳೆದೊಯ್ಯುತ್ತದೆ. ನಾಪತ್ತೆಯಾದ ಅಪ್ಪನ ಅರಸುವಿಕೆಯಲ್ಲಿ ಬದುಕಿನ ಹಲವು ಮುಖಗಳನ್ನು ಅನಾವರಣಗೊಳಿಸುತ್ತಲೇ ನಿರೂಪಕ ನೀಳ್ಗತೆಯಂತಿರುವ ಈ ಕಾದಂಬರಿಯ ನಾಯಕನಾಗಿಯೂ ವಿಜೃಂಭಿಸಿದ್ದಾನೆ. ಬೆಂಗಳೂರೆಂದರೆ ಸಿಲಿಕಾನ್ ಸಿಟಿಯೆಂಬ ಮೋಹ ತುಂಬಿದ ಉದ್ಗಾರಕ್ಕೆ ಬೆಂಗಳೂರು ಹೀಗೂ ಇದೆ ಎನ್ನುವ ಸ್ಪಷ್ಟ ಉತ್ತರ ಈ ಬರಹದ ತುಂಬ ತುಂಬಿ ಕೊಂಡಿದೆ. ಬಹುಸಂಖ್ಯಾತರಾಗಿದ್ದೂ ಸಾಂಸ್ಕೃತಿಕ ಚರಿತ್ರೆಯ ನಿಮರ್ಾಣದಲ್ಲೆಂದೂ ಪ್ರವೇಶ ಪಡೆಯದ, ಬರಹವೆಂಬ ವ್ಯಾಪ್ತಿಗೆ ದೂರದಿಂದಲೇ ಸಲಾಮು ನಜರೆಗಳನ್ನೊಪ್ಪಿಸುತ್ತಿದ್ದ, ಸಾಹಿತ್ಯ ಕಾಣಿಸಿದ ಅನಂತತೆಗಳನ್ನು ಅನುಭವದ ಪಾರಮ್ಯದಿಂದ ತಮ್ಮದಾಗಿಸಿಕೊಂಡ ಅಥರ್ಿಕವಾಗಿ ಅಷ್ಟೇನೂ ಸಧೃಢರಾಗದಿದ್ದರೂ ಪಾರಂಪರಿಕ ನಡೆ, ನುಡಿ, ಆಚಾರ, ವಿಚಾರಗಳಿಂದ ನಿತ್ಯವನ್ನು ಹೊಸತೆಂಬಂತೆ ನೋಡುವ ಕಣ್ಣುಗಳ ದಿವಿನಾದ ಬರಹ ಈ ಕಾದಂಬರಿ.
ನೀಳ್ಗತೆ ಅಂತಲೇ ಇದನ್ನು ಕರೆಯಬಹುದಿತ್ತು. ಕೇವಲ ತೊಂಭತ್ತೂ ಚಿಲ್ಲರೆ ಪುಟಗಳುದ್ದಕ್ಕೆ ಚಾಚಿಕೊಂಡಿರುವ ಕಥಾ ಹಂದರ ಈವರೆಗಿನ ಕಾದಂಬರಿ ಸ್ವರೂಪಕ್ಕೆ ಹಿಗ್ಗಿಸಿದ ಕ್ರಮದಿಂದಾಗಿ ಅಲ್ಲಲ್ಲಿ ಹಿಂಜಿದಂತಾಗಿದೆ. ಆಫ್ರಿಕನ್ ಮತ್ತು ದಕ್ಷಿಣಮೆರಿಕೆಯ ಬರಹಗಾರರ ರೀತಿಯನ್ನು ಕಾಪರ್ೆಂಟರ್ ತಮ್ಮದೇ ಅನ್ನುವ ಶೈಲಿಗೆ ಒಗ್ಗಿಸಿಕೊಂಡಿದ್ದಾರೆ. ನಿತ್ಯದ ಬದುಕಿಗೆ ತತ್ವಾರವಿದ್ದೂ ಸುಖಲೋಲುಪತೆಗೆ ಬಡಿದಾಡುವ ಶ್ರೀಸಾಮಾನ್ಯನ ಬದುಕು-ಬವಣೆಗಳೇ ಈ ಕಾದಂಬರಿಯುದ್ದಕ್ಕೂ ಮೆರವಣಿಗೆ ಸಾಧಿಸಿವೆ. ಸಾಹಿತ್ಯ ಸೃಷ್ಟಿಗೆ ತಮ್ಮ ಅನುಭವದ ಬೇರುಗಳಾಳಕ್ಕೆ ಇಳಿಯುವ ಕಾದಂಬರಿಕಾರ ಬದುಕನ್ನು ಗ್ರಹಿಸಿದ ರೀತಿ ಆಪ್ತವೆನ್ನಿಸುತ್ತದೆ. ಅನವಶ್ಯಕ ತತ್ವ, ಸಿದ್ಧಾಂತಗಳ ಮಂಡನೆಗೆ ಹೋಗದೇ ಕಣ್ಣಿಗೆ ಕಂಡುದನ್ನು ಕಂಡಂತೆಯೇ ಅಭಿವ್ಯಕ್ತಿಸುವ ಕ್ರಮ ಕೂಡ ಹಿತವೆನ್ನಿಸುತ್ತದೆ.
ಹಾಗೆ ನೋಡಿದರೆ ಕಾದಂಬರಿಯ ವಸ್ತು ಮತ್ತು ವಿಚಾರ ಕನ್ನಡದ ಮಟ್ಟಿಗೆ ಹೊಸತೇನೂ ಅಲ್ಲ. ಕಳೆದವರನ್ನು ಹುಡುಕಿಕೊಂಡು ಹೊರಟವರೇ ನಿರೂಪಕರಾಗಿ, ಆ ಹುಡುಕುವಿಕೆಯ ಕ್ರಮದಲ್ಲೇ ಸಾಮಾಜಿಕ ಅಸಮತೆಯನ್ನು, ಭೌಗೋಳಿಕ ನೆಲೆಗಳನ್ನು, ಪ್ರಾದೇಶಿಕ ಸೊಗಡುಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದವರಿದ್ದಾರೆ. ಆದರೆ ಕಾಪರ್ೆಂಟರ್ ಈ ಕಾದಂಬರಿಯ ಮೂಲಕ ಬೆಂಗಳೂರಿಗೆ ತಗುಲಿದಂತೇ ಇರುವ ಯಲಹಂಕ, ಯಶವಂತಪುರ, ಬ್ಯಾಟರಾಯನಪುರ ಮುಂತಾದ ಊರುಗಳಲ್ಲಿ ನಡೆದಿರಬಹುದಾದ ಅಲ್ಲಲ್ಲ ನಡೆದೇ ಇರುವ ಘಟನೆಗಳನ್ನು ನಿರೂಪಕನ ಯಾತ್ರೆಯ ಮೂಲಕ ದಾಖಲಿಸಿದ್ದಾರೆ. ಮಧ್ಯಮ ಮತ್ತು ಮೇಲ್ಮಧ್ಯಮವರ್ಗದವರಿಗೆ ಎಂದಿಗೂ ದೊರೆಯದ ಅನುಭವದ ಪಾತಳಿ ಮತ್ತು ಬದುಕಿನ ಗಹನ ಪ್ರಶ್ನೆಯಾದ ಅನ್ನದ ಪ್ರಶ್ನೆ ಹೊಸ ರೀತಿಯಲ್ಲಿ ಇಲ್ಲಿ ದಾಖಲಾಗಿದೆ. ತನ್ನ ಇಬ್ಬರು ತಂಗಿಯರು, ತಾಯಿ, ಅಪ್ಪ, ಅಜ್ಜಿ, ಮಾವ, ಗೆಳೆಯರು, ಮುಂತಾದ ಪಾತ್ರಗಳ ಮೂಲಕ ನಿರೂಪಕ ಹೊಸದೊಂದು ಲೋಕವನ್ನೇ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ. ಹಾವು ಹಿಡಿಯುವ ಪಾಮ್ಲೋನು, ಸೆಂಟ್ರಿಂಗ್ ಕೆಲಸದ ವೆಂಕಟೇಶಿ, ಉದ್ಯಾನ್ ಟ್ರೈನ್ ಅಪಘಾತ, ಕೂಲಿಕೆಲಸದವರ ಹಾದರದ ಘಟನೆಗಳು, ಕಥಾ ವಿಸ್ತರಣಕ್ಕೆ ಸೆಲೆಯೊದಗಿಸಿವೆ. ಅಪ್ಪನ ಪ್ರೇಯಸಿಯ ಹುಡುಕಾಟದಲ್ಲಿ ನಿರೂಪಕ ತನ್ನ ಬದುಕಿನ ಹಲವು ಸಂದರ್ಭಗಳನ್ನು ಫ್ಲಾಷ್ ಬ್ಯಾಕ್ ತಂತ್ರದ ಮೂಲಕ ಯಶಸ್ವಿಯಾಗಿ ಹಿಡಿದಿಟ್ಟಿದ್ದಾರೆ. ಆದರೆ ಆ ಘಟನೆಗಳನ್ನು ಪೋಣಿಸುವಾಗ ಕೊಂಚ ಹೆಚ್ಚೇ ಆದ ಆತ್ಮ ಮರುಕತನದಲ್ಲಿ ಓದುಗನ ಸಿಂಪಥಿಗಾಗಿ ಪರಿತಪಿಸುವ ಕಾರಣ ಅದನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಕಥಾ ಹಂದರಕ್ಕೆ ಅಗತ್ಯವಿಲ್ಲದೆಯೂ ತೂರಿಬರುವ ರೌಡಿ ನಾಗನ ಪಾತ್ರ, ನಿರೂಪಕ ಪಡೆಯಲು ವಿಫಲನಾದ ಇಬ್ಬಿಬ್ಬರು ಹುಡುಗಿಯರನ್ನು ಅವನಪ್ಪ ಪಟಾಯಿಸಿದ ಕ್ರಮ ಅಷ್ಟೇನೂ ವಿವರವಾಗಿ ಬಾರದಿದ್ದರೂ ಕಾದಂಬರಿಯ ಶೀಷರ್ಿಕೆಗಾಗಿ ಹೂಡಿರುವ ಆಟವೆಂದು ಗೊತ್ತಾಗುತ್ತದೆ.
ಕಾದಂಬರಿಯಲ್ಲಿ ಬರುವ ನಿರೂಪಕನ ಪಾತ್ರವನ್ನು ಸೋಸಿದರೆ ಹೆಚ್ಚೆಂದರೆ ಇಪ್ಪತ್ತು-ಇಪ್ಪತ್ತೆರಡರ ಹರೆಯದ ಈ ಕಥಾನಾಯಕ ತಲೆಮರೆಸಿಕೊಂಡ ಅಪ್ಪನ ಮಗ. ಅಂದರೆ ಅಪ್ಪನ ವಯಸ್ಸು ಕನಿಷ್ಠ ನಲವತ್ತೆರಡು ನಲವತ್ತಮೂರು. ನಿರೂಪಕನ ಗೆಳತಿಯರು ಅಜಮಾಸು ಅವನ ವಾರಿಯೆಯವರೇ. ತಮ್ಮ ತಂದೆಯ ವಯಸ್ಸಿನ ಗಂಡಿಗೆ ಯಾವ ಹುಡುಗಿ ತಾನೆ ಒಲಿದಾಳು?, ಒತ್ತಾಯವಿಲ್ಲದೆ. ಈ ಸಣ್ಣ ಹೊಳಹು ಓದುಗನಿಗೆ ಬಂದರೆ ಕಾದಂಬರಿಯ ಆಶಯವೇ ತಲೆಕೆಳಗಾಗುತ್ತದೆ ಮತ್ತು ತನ್ನ ಸಾಚಾತನವನ್ನು ಒರೆಗೆ ಹಚ್ಚಿಕೊಳ್ಳಲು ನಾಯಕ ನಿರೂಪಿಸುವ ಘಟನೆಗಳೆಲ್ಲವೂ ಅವನ ದೌರ್ಬಲ್ಯಗಳಾಗಿಯೇ ಉಳಿದುಬಿಡುವುದು ದುರಂತ.
ಸತ್ತ ಬ್ಯಾಟರಿಗಳಿಗೆ ಜೀವ ತುಂಬುವ ಉಪಾಯ, ಇಲಿ ಬೇಟೆ, ಸಾರಾಯಿ ಅಂಗಡಿಯ ಕಷ್ಟ-ಸುಖ, ಹೂವಿನ ವ್ಯಾಪಾರ ಮುಂತಾದವು ಕುತೂಹಲ ಹುಟ್ಟಿಸಿದರೆ, ರೈಲು ಅಪಘಾತಗಳ ಸಂದರ್ಭದಲ್ಲಿ ಸಂತ್ರಸ್ತರ ಮೈ ಮೇಲಿನ ಆಭರಣ ಹಣಕಾಸು ಕದ್ದು ದೊಡ್ಡವರಾದವರ ಘಟನೆ, ಕುಷ್ಠ ದಂಪತಿಗಳ ದಹನ, ದೇವಸ್ಥಾನದ ಜೀಣರ್ೊದ್ಧಾರ ಮುಂತಾದವು ಪರಿಸ್ಥಿತಿಯ ವ್ಯಂಗ್ಯವಾಗಿ ಮೂಡಿಬಂದಿವೆ. ಅಗತ್ಯವಿಲ್ಲದೆಯೂ ಮಧ್ಯೆ, ಮಧ್ಯೆ ಸೇರಿಕೊಂಡಿರುವ ಅನ್ಯರ ಮೇಲಿನ ಆಪಾದನೆಗಳು ಬರಹಗಾರನ ನೈತಿಕತೆಯನ್ನು ಪ್ರಶ್ನಿಸುವಂತೆಯೂ ಮಾಡುತ್ತವೆ.
ಘಟನೆಗಳನ್ನು ಜೋಡಿಸುವ ಕ್ರಮ, ತಲೆಮಾರುಗಳ ಅಂತರದ ವೈರುಧ್ಯ, ಸಾಂಸ್ಕೃತಿಕ ಸಂಗತಿಗಳನ್ನು ವಿಶ್ಲೇಷಿಸುವಾಗ ಇರಬೇಕಾಗುವ ತಾದಾತ್ಮತೆಯನ್ನು ಈ ಲೇಖಕ ತಪಸ್ಸಿನಿಂದ ಪಡೆಯಬೇಕಿದೆ. ಹಾಗಾದಾಗ ಅವರು ನಿರ್ವಚಿಸಿರುವ ಕಾದಂಬರಿಯ ರಚನಾ ಕ್ರಮದಲ್ಲಿ ತೋರಿರುವ ತಂತ್ರ ಸಫಲವಾಗುತ್ತದೆ. ಹಾಗಾಗಲಿ ಮತ್ತು ಓದು ಬರಹಗಳಿಂದ ವಂಚಿತವಾದವರ ಬದುಕಿನ ಹಲವು ವಿವರಗಳನ್ನು ಈ ಲೇಖಕರು ಧ್ಯಾನಿಸಿ ದಟ್ಟವಾಗಿ ಓದುಗರಿಗೆ ಮುಟ್ಟಿಸಲಿ.
ಕಾದಂಬರಿ: ಅಪ್ಪನ ಪ್ರೇಯಸಿ ಲೇಖಕ:
ವಿ.ಆರ್. ಕಾರ್ಪೆಂಟರ್
ಪ್ರಕಾಶನ: ಅಭಿನವ, ಬೆಂಗಳೂರು
ಪುಟಗಳು: 112,
ಬೆಲೆ ರೂ.75/-







Olanotagala baraha…
ಡಿಯರ್ ರಾಮಸ್ವಾಮಿಯವರೇ, ನಿಮ್ಮ ಪ್ರೀತಿಗೆ ಧನ್ಯವಾದಗಳು! ಓದುಗನಿಗರಬೇಕಾದ ನಿಜವಾದ ಮನಸ್ಸು ವಿಮರ್ಶಕನಿಗೂ ಇದ್ದಾಗ ಮಾತ್ರ ಇಂತಹ ಬರಹಗಳು ದಕ್ಕುತ್ತವೆ ಎನ್ನುವುದನ್ನು ನಿರೂಪಿಸಿದ್ದೀರಿ. ನಿಮ್ಮ ಎಲ್ಲ ಸಲಹೆಗಳನ್ನು ಸೂಚನೆಗಳನ್ನು ಹೊಗಳಿಕೆಯ ಮೇಲೆ ಹೊತ್ತುಕೊಳ್ಳುತ್ತೇನೆ.
ಕಾಂದಂಬರಿ ಬರೆಯುವುದು ಕಷ್ಟದ ಕಾರ್ಯ. ವಿ.ಆರ್.ಕಾರ್ಪೆಂಟರ್ ‘ಅಪ್ಪನ ಪ್ರೇಯಸಿ’ ಕಾದಂಬರಿ ರಚನೆ ಮೂಲಕ ಈ ಕಷ್ಟದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಇದು ಇವರ ಮೊದಲ ಕಾದಂಬರಿ ಇವರಿಂದ ಇನ್ನಷ್ಟು ಕಾದಂಬರಿಗಳು ಹೊರಬರಲಿ. ಓದುಗರಿಗೆ ಸಿಗುವಂತಾಗಲಿ ಎಂದು ಆಶಿಸುತ್ತೇನೆ.
-ಗುಂಡೇನಟ್ಟಿ ಮಧುಕರ, ಬೆಳಗಾವಿ.
ಮೊ:9448093589