ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ಎಸ್ ನಾಗಭೂಷಣ್ ರಿಂದ ಅನಿರೀಕ್ಷಿತವಾಗಿ ಬಂದ ಒಂದು ಪತ್ರ..

ಎಂ ಜಿ ಚಂದ್ರಶೇಖರಯ್ಯ

1976ರಲ್ಲಿ ಡಿ.ಎಸ್.ನಾಗಭೂಷಣ್ ಅವರ ಪರಿಚಯ ಆಯ್ತು. ಆಗ ನಾನು ಪದವಿ ವಿದ್ಯಾರ್ಥಿ. 1979ರಲ್ಲಿ ಅವರು ‘ಮಾನವ’ ಪತ್ರಿಕೆಯ ಸಂಪಾದಕರಾಗಿದ್ದರು. ಅದು ಮೈಸೂರಿನ ನೆಲಮನೆ ಪ್ರಕಾಶನದಿಂದ ಪ್ರಕಟವಾಗುತ್ತಿತ್ತು. ಆಗ ಮೈಸೂರಿನಲ್ಲಿ ಕನ್ನಡ ಎಂ.ಎ. ವಿದ್ಯಾರ್ಥಿಯಾಗಿದ್ದ ನಾನು ಪತ್ರಿಕೆಗೆ ಸಣ್ಣಪುಟ್ಟ ಲೇಖನ ಬರೆಯುತ್ತಿದ್ದೆ. 1988ರಲ್ಲಿ ಬೆಂಗಳೂರು ಆಕಾಶವಾಣಿಗೆ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಬಂದ ಅವರಿಂದ ಅನಿರೀಕ್ಷಿತವಾಗಿ ಒಂದು ಪತ್ರ ಬಂತು.

ಆಕಾಶವಾಣಿಯ ಜನಪ್ರಿಯ ಬೆಳಗಿನ ಕಾರ್ಯಕ್ರಮ ‘ಚಿಂತನ’ಕ್ಕೆ ಮೂರು ಕಂತುಗಳಲ್ಲಿ ಪ್ರಸಾರ ಮಾಡಲು ಬೇರೆಬೇರೆ ವಿಷಯ ಕುರಿತು ಬರೆದು ತರಲು ಹೇಳಿದ್ದರು. ನಿಗದಿತ ದಿನ ಸಮಯಕ್ಕೆ ಸರಿಯಾಗಿ ಹೋದೆ. ಭೇಟಿಯಾಗಿ ಐದಾರು ವರ್ಷ ಕರೆದಿದ್ದರೂ ಅದೇ ಗಡಸು ಪಪ್ರಸಿರುವಿಿಸಿರುವಿಸಿರುವಯ ಮಾತು. ನಾನು ಕರೆದುಕೊಂಡು ಹೋದದ್ದನ್ನು‌ ಅವರಿಗೆ ಕೊಟ್ಟೆ. ಓದಿದವರೆ, “ನೋಡಿ, ಸಮಾಜವಾದಿಗಳಾದ ನಾವು ‘ನನ್ನ ಅಭಿಪ್ರಾಯ, ನನ್ನ ಪ್ರಕಾರ…. ಇತ್ಯಾದಿ ಹೇಳಬಾರದು.‌ ನಮ್ಮ ಪ್ರಜ್ಞೆ ಸಮಾಜದಿಂದ ಪ್ರೇರಿತ ಎಂಬ ಎಚ್ಚರಿಕೆ ಇರಬೇಕು. ಆ ಮಾತುಗಳನ್ನು ಬದಲಿಸುವುದಾದರೆ, ಬದಲಿಸಿ” ಎಂದರು. ಅವರ ಮಾತು ಸರಿಯಿತ್ತು.

ನಂತರ ಅವರು ಭದ್ರಾವತಿ ಆಕಾಶವಾಣಿಗೆ ಹೋದರು. ಅಲ್ಲಿ ಗೆಳೆಯರ ಜೊತೆ ಸೇರಿ ‘ಸಂವಾದ’ ಪತ್ರಿಕೆ ತಂದರು. ಅಪಾರ ಓದಿನ ಮತ್ತು ತೀಕ್ಷ್ಣ ಮತಿ ಆಗಿದ್ದ ಅವರು ನಮ್ಮ ಸಮಾಜ ಮತ್ತು ರಾಜಕೀಯ ವ್ಯವಸ್ಥೆ ಬಗ್ಗೆ ವ್ಯಗ್ರರಾಗಿದ್ದರು.

ಸ್ವಯಂ ನಿವೃತ್ತಿ ಹೊಂದಿದ ಅವರು ತಮ್ಮ ಪತ್ನಿ ಕವಯತ್ರಿ ಸವಿತಾ ನಾಗಭೂಷಣ ಅವರ ನೆರವು ಪಡೆದು ‘ಹೊಸ ಮನುಷ್ಯ’ ಪತ್ರಿಕೆಯನ್ನು ಹತ್ತು ವರ್ಷಗಳ ಕಾಲ ನಡೆಸಿದರು. ಆರೋಗ್ಯ ಸಹಕರಿಸುತ್ತಿಲ್ಲ ಎಂದು ತಿಳಿದು ಪತ್ರಿಕೆ ನಿಲ್ಲಿಸಿದರು. ಚಂದಾದಾರರು ನೀಡಿದ ಹಣದ ಬಾಬ್ತು ಪೂರಾ ಮುಗಿಯುವವರೆಗೆ ಪತ್ರಿಕೆ ಕಳಿಸಿಕೊಟ್ಟವರು ಕನ್ನಡದಲ್ಲಿ ಅವರೊಬ್ಬರೆ ಇರಬೇಕು.

ನಾಲ್ಕು ವರ್ಷಗಳ ಹಿಂದೆ ಪತ್ರಿಕೆ ನಿಲ್ಲಿಸುತ್ತೇನೆ ಎಂದಾಗ ನಾವು ಕೆಲವರು ಗೆಳೆಯರು ಶಿವಮೊಗ್ಗಕ್ಕೆ ಹೋಗಿ ನಿಲ್ಲಿಸದಂತೆ‌ ಒತ್ತಾಯಿಸಿದಾಗಲೂ ಅವರು ಹಠ ಬಿಡಲಿಲ್ಲ. ಪತ್ರಿಕೆ ನಿಲ್ಲಿಸಿ, ಮತ್ತೆ ಸ್ವಲ್ಪ ಸಮಯದ ನಂತರ ಮೂರು ವರ್ಷ ನಡೆಸಿದರು.

ಹೊಸ ಮನುಷ್ಯ ಪತ್ರಿಕೆ ಕನ್ನಡದ ಅತ್ಯುತ್ತಮ ಮನಸ್ಸುಗಳು ಬರೆಯುತ್ತಿದ್ದ, ಓದುತ್ತಿದ್ದ, ಕನ್ನಡ ಪ್ರಜ್ಞೆಯ ಹೊಸ ಮನಸ್ಸುಗಳನ್ನು ರೂಪಿಸುತ್ತಿದ್ದ ಪತ್ರಿಕೆಯಾಗಿತ್ತು.

2018ರಲ್ಲಿ ದೊಡ್ಡಬಳ್ಳಾಪುರದಲ್ಲಿ ಕೆಲವು ಗೆಳೆಯರು ಸೇರಿ ಹಮ್ಮಿಕೊಂಡ ಶಿಬಿರಕ್ಕೆ ಬಂದು ಕುವೆಂಪು ಕುರಿತು ಮಾತನಾಡಿದರು. ಆ ಬಗ್ಗೆ ಪತ್ರಿಕೆಯಲ್ಲಿ ಬರೆದು ಮೆಚ್ಚುಗೆ ಸೂಚಿಸಿದರು.

ಅನೇಕರಿಗೆ ಅವರು ಶೀಘ್ರಕೋಪಿ, ದೂರ್ವಾಸ ಮುನಿ, ಜಗಳಗಂಟ…. ಆದರೆ ನನಗೆ ಎಂದೂ ಅನುಭವ ಆಗಲಿಲ್ಲ. ಅವರ ಸಿಟ್ಟು ಯಾವತ್ತೂ ಸಕಾರಣವಾಗಿರುತ್ತಿತ್ತು. ಯಾರನ್ನೂ ವಿಮರ್ಶಿಸದೆ ಒಪ್ಪದ, ಒಬ್ಬ ವ್ಯಕ್ತಿಯ ಗುಣ ನೋಡಿ ಗೌರವಿಸುವ ಅಥವಾ ಟೀಕಿಸುವ ಅವರ ನಿಲವು ಮೆಚ್ಚವಂಥದ್ದೇ.

ತೇಜಸ್ವಿ, ಲಂಕೇಶ್, ಅನಂತಮೂರ್ತಿ ಅವರ ನಂತರ ರಾಜಕೀಯ ಲೆಕ್ಕಾಚಾರ ಇಲ್ಲದೆ ಸಾಮಾಜಿಕ ಜವಾಬ್ದಾರಿ ಮತ್ತು ಸಾರ್ವಜನಿಕ ಚಿಂತಕರಾಗಿ ಅವರು ನಿರ್ವಹಿಸಿದ ಪಾತ್ರ ದೊಡ್ಡದು. ಅವರ ಅಗಲಿಕೆ ದೀರ್ಘಕಾಲದವರೆಗೆ ಒಂದು ನಿರ್ವಾತ ಸೃಷ್ಟಿಸುತ್ತದೆ.

ನಮನಗಳು….

‍ಲೇಖಕರು Admin

19 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading