ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ.ಶ್ರೀಧರ ಉಪ್ಪೂರ ಇನ್ನಿಲ್ಲ: ಶಿಷ್ಯನ ನೆನೆದ ವಿವೇಕ ರೈ

ಬಿ ಎ ವಿವೇಕ ರೈ

ನನ್ನ ವಿದ್ಯಾರ್ಥಿ ಡಾ. ಶ್ರೀಧರ ಉಪ್ಪೂರ ಅವರು ಇವತ್ತು ನಿಧನರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಮಂಗಳ ಗಂಗೋತ್ರಿಯಲ್ಲಿ ಕನ್ನಡ ವಿಭಾಗದಲ್ಲಿ ಎಂಎ ಮಾಡುವ ಕಾಲದಲ್ಲಿ ಎರಡು ವರ್ಷ ಅವರು ನನ್ನ ವಿದ್ಯಾರ್ಥಿ ಆಗಿದ್ದರು.

ಎಂಎ ವಿದ್ಯಾರ್ಥಿ ಆಗಿರುವಾಗಲೇ ಅವರು ಯಕ್ಷಗಾನ ಪ್ರಸಂಗವನ್ನು ರಚನೆಮಾಡಿ ನನಗೆ ತೋರಿಸಿದ್ದರು. ಶ್ರೀಧರ ಉಪ್ಪೂರರು ಬಡಗುತಿಟ್ಟಿನ ಹಿರಿಯ ಪರಂಪರೆಯ ಭಾಗವತ ನಾರ್ಣಪ್ಪ ಉಪ್ಪೂರರ ಮಗ. ಅವರು ಕೊಣಾಜೆಗೆ ವಿದ್ಯಾರ್ಥಿ ಆಗಿ ಬರುವಾಗಲೇ ಯಕ್ಷಗಾನ ಹವ್ಯಾಸಿ ಭಾಗವತರು ಆಗಿದ್ದರು.

ಶ್ರೀಧರ ಉಪ್ಪೂರರು ಕನ್ನಡ ಎಂಎ ಮುಗಿಸಿದ ಬಳಿಕ ಬಸ್ರೂರಿನ‌ ಶಾರದಾ ಕಾಲೇಜಿನಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಲ್ಲಿ ಕನ್ನಡದ ಮತ್ತು ಯಕ್ಷಗಾನದ ಅಭಿರುಚಿಯನ್ನು ಬೆಳೆಸಿದ್ದರು. ಶ್ರೀಧರ ಉಪ್ಪೂರರು ನನ್ನ ಮಾರ್ಗದರ್ಶನದಲ್ಲಿ ಪಿಎಚ್ ಡಿ ಪದವಿ ಪಡೆದ ಕೊನೆಯ ವಿದ್ಯಾರ್ಥಿ ಎನ್ನುವುದನ್ನು ನೆನಪಿಸಿಕೊಳ್ಳುತ್ತಿದ್ದೇನೆ.

ನಾನು ಮಂಗಳೂರು ವಿವಿಯಿಂದ ಕನ್ನಡ ವಿವಿ ಹಂಪಿಗೆ ಹೋಗುವ ಸಂದರ್ಭದಲ್ಲಿ ಅವರು ‘ಬಡಗುತಿಟ್ಟು ಯಕ್ಷಗಾನ: ಪರಂಪರೆ ಮತ್ತು ಪ್ರಯೋಗ’ ಎಂಬ ವಿಷಯದ ಬಗ್ಗೆ ಪಿಎಚ್ ಡಿಗೆ ಅಧ್ಯಯನ ನಡೆಸಿ ೨೦೦೮ ರಲ್ಲಿ ಪಿಎಚ್ ಡಿ ಪದವಿಯನ್ನು ಪಡೆದರು.

ಮುಂದೆಯೂ ನನ್ನ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದರು. ನನ್ನ ಪುಸ್ತಕ ಬಿಡುಗಡೆಯ ಕೆಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು. ಅವರ ತಂದೆ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪಿನ ಸಂಪುಟ ‘ಶತಸ್ಮೃತಿ’ ಗೆ ನಾನು ಮುನ್ನುಡಿ ಬರೆಯಲು ಅವರ ಪ್ರೀತಿ ಒತ್ತಾಸೆ ಕಾರಣ.

ಆ ಗ್ರಂಥದ ಬಿಡುಗಡೆಯನ್ನು ನಾನೇ ಮಾಡಬೇಕು ಎನ್ನುವ ಅವರ ಕೋರಿಕೆಯಂತೆ ಸುಮಾರು ಎರಡು ವರ್ಷಗಳ ಹಿಂದೆ ಸಾಲಿಗ್ರಾಮ – ಕೋಟದ ಬಳಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಂಥ ಬಿಡುಗಡೆ ಮಾಡಿ ಮಾತಾಡಿದ್ದೆ. ಆ ದಿನ‌ ಶ್ರೀಧರ ಉಪ್ಪೂರರು ತುಂಬಾ ಸಂಭ್ರಮದಿಂದ ಓಡಾಡಿ ತಮ್ಮ ತಂದೆಯ ಸಾಂಸ್ಕೃತಿಕ ಋಣವನ್ನು ತೀರಿಸಿದ್ದರು.

ಮೆದು ಮಾತಿನ, ಸಜ್ಜನಿಕೆ ನಡವಳಿಕೆಯ ಡಾ.ಶ್ರೀಧರ ಉಪ್ಪೂರರು ಇನ್ನಿಲ್ಲ ಎನ್ನುವ ನೋವು ಅವರನ್ನು ಹತ್ತಿರದಿಂದ ಬಲ್ಲವರಿಗೆ ಎಲ್ಲರಿಗೂ ಅನುಭವವೇದ್ಯವಾಗುತ್ತದೆ.

ಅಧ್ಯಾಪಕರಾದ ನಾವು ನಮ್ಮ ವಿದ್ಯಾರ್ಥಿಗಳ ನಿಧನದ ಸುದ್ದಿಯನ್ನು ಕೇಳುವುದು ಬಹಳ ಸಂಕಟದ ಸಂಗತಿ. ಅವರ ಕುಟುಂಬದವರ ದುಃಖದಲ್ಲಿ ನಾವೆಲ್ಲಾ ಪಾಲುದಾರರು ಎಂದಷ್ಟೇ ಹೇಳಲು ಸಾಧ್ಯ.

‍ಲೇಖಕರು Avadhi

11 January, 2021

1 Comment

  1. Shyamala Madhav

    ಗುಣಿಶು ನ ಚ ಲಿಂಗಂ ನ ಚ ವಯಹ ಎಂಬಂತೆ ಶಿಷ್ಯನ ಬಗೆಗಿನ ಮೆಚ್ಚುನುಡಿ ಮನವನ್ನು ತಟ್ಟಿತು.
    ವಂದನೆ ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading