ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ. ವಿಷ್ಣುವರ್ಧನ್ ನಂಗೆ ಹೀಗೆ ಹೇಳಿದ್ರು..

ರಾಜ್ ಗೆ ಕಣ್ಣೀರ ವಿದಾಯ 

ಅಂದು ವರನಟ ಡಾ. ರಾಜ್ ಅಂತ್ಯಸಂಸ್ಕಾರ. ಕಂಠೀರವ ಸ್ಟುಡಿಯೋದಲ್ಲಿ ಅದಕ್ಕಾಗಿ ಸಿದ್ಧತೆ ನಡೆದಿತ್ತು. ನಮ್ಮ ತಂಡ ಕೂಡ ಅಲ್ಲೇ ಠಿಕಾಣಿ ಹೂಡಿತ್ತು. ನಿರಂತರವಾಗಿ ಕವರೇಜ್ ಅಂದು ಇತ್ತು. ಜನ  ಬೆಳಿಗ್ಗಿನಿಂದಲೇ ಅಲ್ಲಿ ಜಮಾಯಿಸಿದ್ರು. ನಿಧಾನವಾಗಿ ಸಮಯ ಕಳೆಯುತ್ತಿದ್ದಂತೆ ಆ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಆಗಲೇ ಮಧ್ಯಾಹ್ನ ಕಳೆದಿತ್ತು. ಡಾ. ರಾಜ್ ಪಾರ್ಥೀವ ಶರೀರ ಕಂಠೀರವ ಸ್ಟುಡಿಯೋ ಬಳಿ ಆಗಮಿಸುತ್ತಿದ್ದಂತೆ ಜನಸಾಗರವೇ ಹರಿದು ಬಂತು. ಮತ್ತೆ ಜನರನ್ನು ನಿಯಂತ್ರಿಸೋದು ಕಷ್ಟವಾಯಿತು. ಡಾ. ರಾಜ್ ಕುಟುಂಬ ವಿನಂತಿಸಿದರು ಜನ ಕಿವಿಗೊಡುವ ಸ್ಥಿತಿಯಲ್ಲಿ ಇದ್ದಂತೆ ಕಾಣಲಿಲ್ಲ. ಎಲ್ಲರಿಗು ಡಾ. ರಾಜ್ ಪಾರ್ಥೀವ ಶರೀರ ನೋಡಬೇಕೆಂಬ ಕಾತರ.

Jyothi column low resಕೆಲವರು ಮರ ಹತ್ತಿದ್ರು. ಇನ್ನು ಕೆಲವರು ಸುತ್ತುವರಿದಿದ್ರು. ಪಾರ್ಥೀವ ಶರೀರ ಹತ್ತಿರ ಬರುತ್ತಿದ್ದಂತೆ ಜನ ಒಂದೇ ಸಮನೆ ನುಗ್ಗಲಾರಂಭಿಸಿದ್ರು. ಪೋಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ರು. ಗೋಲಿಬಾರ್ ನಡೆಸಲಾಯಿತು. ನಿಯಂತ್ರಣ ತಪ್ಪಿ ಹೋದ ಹಾಗೆ ಭಾಸವಾಗುತ್ತಿತ್ತು. ಅಂತಹ ಸವಾಲಿನ ಪರಿಸ್ಥಿತಿಯನ್ನು ನಿಭಾಯಿಸುವ ಕಷ್ಟ ಏನೆಂಬುದು ಅರಿವಾಗಿತ್ತು.

ಕ್ಯಾಮರಾ ತಂಡ ವರದಿಗಾರರು ಎಲ್ಲಾ ವಾಹನಗಳ ಒಳಗಡೆ. ನೂಕು ನುಗ್ಗಲು ಹಾಗೆ ಮುಂದುವರೆದಿತ್ತು. ಸ್ವಲ್ಪವೇ ದೂರದಲ್ಲಿ ಕೆಲವರು ಗೋಲಿಬಾರ್ ಗೆ ಮೃತಪಟ್ಟಿದ್ದರು. ಆ ದ್ರಶ್ಯಗಳನ್ನು ಕಂಡವರು ಬೆಚ್ಚಿಬಿದ್ದಿದ್ರು. ಈ ಉದ್ವಿಗ್ನ ಪರಿಸ್ಥಿತಿ ಯಾವಾಗ ಸರಿಯಾಗುತ್ತೋ ಅಂತಹ ಮನಸ್ಸಿನಲ್ಲೇ ಯೋಚಿಸಿದೆ. ಪರಿಸ್ಥಿತಿ ಕೈತಪ್ಪಿ ಹೋದ ಹಾಗೆ  ಮತ್ತೆ ಭಾಸವಾಗುತ್ತಿತ್ತು.

ಕೊನೆಗು ರಾಜ್ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಆರಂಭವಾಗಿತ್ತು. ಹಾಗೆಯೇ ಮುಗಿದಿತ್ತು ಕೂಡ. ಬಹುಶಹ ನನ್ನ ವೃತ್ತಿ ಜೀವನದಲ್ಲಿ ಇಷ್ಟೊಂದು ಕಠಿಣ ಸವಾಲಿನ ನಡುವೆ ಕರ್ತವ್ಯ ನಿಭಾಯಿಸುವ ಅವಕಾಶ ಮತ್ತೆಂದಿಗು  ಬರಲೇ ಇಲ್ಲ.

ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದವು ಆ ಕ್ಷಣಗಳು. ಡಾ. ರಾಜ್ ನಿಧನದ ಸಂದರ್ಭದಲ್ಲಾದ ನೂಕು ನುಗ್ಗಲು ಭಾವೋದ್ವೇಗದ ಅಭಿವ್ಯಕ್ತಿ ಆಮೇಲೆ ನಾನಂತು ಕಂಡಿಲ್ಲ. ನಟನೊಬ್ಬ ಇಷ್ಟು ಜನರ ಬೆಂಬಲ ಪಡೆದ ರೀತಿಯೇ ಅದ್ಭುತ ರೋಮಾಂಚಕ ಅನ್ನಿಸುತ್ತದೆ. ರಾತ್ರಿ ಮತ್ತೆ ಅಂತ್ಯಸಂಸ್ಕಾರದ ಜಾಗಕ್ಕೆ ತೆರಳಿ ಕಚೇರಿಗೆ ವಾಪಾಸಾದೆವು. ಅವತ್ತು ಗಲಾಟೆ ಗೊಂದಲವಿದ್ದದ್ದರಿಂದ ಕಚೇರಿ ತಲುಪುವುದು ಕಷ್ಟದ ವಿಚಾರವಾಗಿತ್ತು.

ಹೀಗೆ ವರನಟನ ಆಗಮನ ನಿರ್ಗಮನ ಎರಡನ್ನ ಕವರೇಜ್ ಮಾಡಿದ್ದು ವೃತ್ತಿಜೀವನದ ಅತ್ಯಂತ ಚಾಲೆಂಜಿಗ್ ಅನುಭವ. ಆಗಮನದಲ್ಲಿ ಖುಷಿಯ ಕಣ್ಣೀರಿದ್ದರೆ ನಿರ್ಗಮನದ ವೇಳೆ ಕಳೆದುಕೊಂಡ ಅಗಲುವಿಕೆಯ ಕಣ್ಣೀರಿತ್ತು. ಕಣ್ಣೀರು ಕಣ್ಣೀರೆ ಆಗಿತ್ತು ಆದರೆ ಒಂದರಲ್ಲಿ ಖುಷಿ ಬೆರೆತು ಹೋಗಿತ್ತು. ಇನ್ನೊಂದರಲ್ಲಿ ನೋವು ಆವರಿಸಿತ್ತು.

……

ಈಟಿವಿ ವೃತ್ತಿಬದುಕಿನಲ್ಲಿ ಅತಿ ಹೆಚ್ಚಿನ ಅನುಭವವನ್ನು ಕೊಟ್ಟಿತು. ಬೇರೆ ಬೇರೆ ಕ್ಷೇತ್ರದ ಬಗ್ಗೆ ತಿಳಿಯಲು ಅದು ಸಹಾಯಕಾರಿಯಾಗಿತ್ತು. ನನ್ನ ಮೆಚ್ಚಿನ ಜಗಜೀತ್ ಸಿಂಗ್ ಗಜಲ್ ಕೇಳುವ ಅವಕಾಶವು ದಕ್ಕಿತ್ತು.ಅದ್ಯಾಕೋ ಗೊತ್ತಿಲ್ಲ ಗಜಲ್ ಅಂದ್ರೆ  ಕಾಲೇಜ್ ದಿನಗಳಿಂದಲು ಒಂಥರಾ ಹುಚ್ಚು. ಕೇಳಿದಷ್ಟು ಕಳೆದುಹೋಗುವ ಲೋಕ ಈ ಗಜಲ್ ಲೋಕ ..

ಹಾಗೆ ಹಲವಾರು ನಟ ನಟಿಯರನ್ನು ನೋಡುವ  ಅವಕಾಶ. ಬಾಲಿವುಡ್ ನ ಹಲವಾರು ಹೀರೋ ಹೀರೋಯಿನ್ ಗಳನ್ನು ನೋಡಿ ಸಿನಿಮಾದಲ್ಲು ನೋಡುವಾಗ ಎಷ್ಟೊಂದು ವ್ಯತ್ಯಾಸವಲ್ಲ ಅಂತ ಟೀಮ್ ಜೊತೆ ಮಾತಾಡಿದ್ದುಂಟು.

ಐಶ್ವರ್ಯ ರೈ ನೋಡಿದಾಗ ಎಷ್ಟೊಂದು ತೆಳ್ಳಗೆ ಅಂತ ಅಲ್ಲಿದ್ದವರೆಲ್ಲಾ ಉದ್ಘರಿಸಿದ್ರು. ನಂದಿತಾ ದಾಸ್ ನ್ನು ನೋಡಿ ನಿಜವಾಗಿಯು ಎಷ್ಟು ಸುಂದರಿ ಎಂದು ಉದ್ಗರಿಸಿದ್ದೆ. ಆಕೆಯ ಚಿಂತನೆಗಳು ಯಾವಾಗಲು ನನಗೆ ಹಿಡಿಸಿದ್ದು ಇದೆ. ನಟಿಯರೆಂದ್ರೆ ಕೇವಲ ನಟನೆ ಅಲ್ಲ ಪ್ರಬುದ್ಧತೆ, ಕೆಲವೊಂದು ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯು ಬಹುಮುಖ್ಯವೆನಿಸುತ್ತದೆ. ಹಾಗಾಗಿ ನಂದಿತಾ ದಾಸ್ ನನಗೆಂದು ಇಷ್ಟವಾದ ನಟಿ.

ಇನ್ನು ಕೆಲವರು ಮಾತಾಡದೆ ಇದ್ದರೆ ಚಂದವೇನು ಅನ್ನಿಸಿಬಿಡುತ್ತದೆ. ಯಾಕಂದ್ರೆ ಅವರು ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ರೀತಿ ಹಾಗೇನೆ  ಕೆಲವೊಂದು ವಿಷಯಗಳನ್ನು ಸಮರ್ಥಿಸುವ ವಿಧಾನ ಅಪ್ರಬುದ್ದತೆಯನ್ನು ಪ್ರತಿಬಿಂಬಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಇದು ಯಾಕೋ ಹೆಚ್ಚಾದಂತೆಯು ತೋರುತ್ತದೆ. ರಾಜಕೀಯ ಸ್ಥಾನಮಾನದ ಉಪಯೋಗಕ್ಕೋ ಇನ್ಯಾವುದೋ ಹುದ್ದೆಯ ಆಕಾಂಕ್ಷೆಯೋ ನಟ ನಟಿಯರು ಕೆಲವರು ವರ್ತಿಸುತ್ತಿರುವ ರೀತಿ ಲಾಭಕ್ಕಾಗಿ ಏನು ಬೇಕಾದ್ರು ಮಾಡ್ತಾರೇನು ಅನ್ನೋ ಕಲ್ಪನೆ ಮೂಡೋದಕ್ಕೆ ಕಾರಣವಾಗುತ್ತಿದೆ. ಹಳೆಯದನ್ನು ಕೆದಕಲು ಹೊರಟು ವರ್ತಮಾನದ ವಸ್ತುಸ್ಥಿತಿಯನ್ನು ವಿಶ್ಲೇಷಣೆ ಮಾಡಲು ಹೊರಟೆನೇನು ಅನ್ನಿಸುತ್ತಿದೆ. ಮತ್ತೆ ವಿಷಯಕ್ಕೆ ಬರೋಣ..

ಡಾ. ವಿಷ್ಣುವರ್ಧನ್ ನಂಗೆ ಹೀಗೆ ಹೇಳಿದ್ರು

ಊರು ಬಿಟ್ಟು ನೀವು ಇಲ್ಲಿಗ್ಯಾಕೆ ಬಂದ್ರಿ?

…………

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಹೊಂದಿದ ನಟ ವಿಷ್ಣುವರ್ಧನ್. ಚಿಕ್ಕಂದಿನಲ್ಲಿ  ನಮ್ಮಕ್ಕ ವಿಷ್ಣುವರ್ಧನ್ ಬಗ್ಗೆ ಆಡುತ್ತಿದ್ದ ಮಾತು ಆಕೆಯ ಅಭಿಮಾನ ಹಿಡಿದ ಕೈಗನ್ನಡಿಯಾಗಿತ್ತು.

ಅಂದು ವಿಷ್ಣುವರ್ಧನ್ ಜನುಮದಿನವಾಗಿತ್ತು ಕವರೇಜ್ ಗೆ ಮನೆಗೆ ತೆರಳಿದ್ದೆ. ಮನೆ ಒಳಗೆ ಹೋಗುತ್ತಿದ್ದಂತೆ ಅಕ್ಕನ ಅಭಿಮಾನದ ಮಾತುಗಳು ನೆನಪಾಯಿತು. ಚಿಕ್ಕಂದಿನಲ್ಲಿದ್ದ ಥ್ರಿಲ್ಲಿಂಗ್ ಖಂಡಿತವಾಗಿಯು ನನ್ನಲ್ಲಿ ಇರಲಿಲ್ಲ. ವಾಸ್ತವ ಜಗತ್ತಿನ ನೈಜತೆ ಅರಿವಾದಾಗ ಥ್ರಿಲ್ಲಿಂಗ್  ಹೋಗಿಬಿಡುತ್ತದೆ ಸ್ವಲ್ಪಮಟ್ಟಿಗೆ.

ishwarya raiವಿಷ್ಣುವರ್ಧನ್ ನನ್ನ ಮಾತಾಡಿಸಿದ್ರು. ನಾನೆಲ್ಲಿಯವಳು ಅಂದ್ರು. ನನ್ನ ಹಳ್ಳಿ ಬಗ್ಗೆ ಹೇಳಿದೆ. ಮೂಡಬಿದರೆ ಬಗ್ಗೆ ಮಾತಾಡಿದ್ರು. ನಿಸರ್ಗದ ಬಗ್ಗೆ ಕಳೆದುಹೋದಂತೆ ಬಣ್ಣಿಸಿದ್ರು. ನಿಮ್ಮ ಕನ್ನಡ ಶುದ್ಧವಾಗಿದೆ ಅಂದ್ರು.

ನೀವ್ಯಾಕೆ ಬಂದ್ರಿ ಬೆಂಗಳೂರಿಗೆ. ಇಲ್ಲಿ ಹಚ್ಚ ಹಸುರು ಕಣ್ಮರೆಯಾಗಿದೆ. ಊರಲ್ಲಿ ಶುದ್ಧ ಗಾಳಿ ಹಸುರು ಎಲ್ಲವು ಇದೆಯಲ್ಲ ಅಂದ್ರು.

ನನಗೆ ಬೇಕಾದ ಉದ್ಯೋಗ ದೊರೆಯೋದಿಲ್ಲ ಅದಕ್ಕೆ ಬಂದೆ ಅಂದೆ. ನಿಜವಾಗಿಯು ಊರನ್ನು ಪ್ರತಿ ದಿನ ನೆನಯದೆ ದಿನ ಸರಿಯೋಲ್ಲ. ಹಳ್ಳಿಯ ಜೊತೆ ನನ್ನ ನಂಟು ಹಾಗೇನೆ. ಅದೇನೋ ಪ್ರತಿ ಗಿಡ ಮರ..ಮಣ್ಣು ಮೆಲ್ಲನೆ ಕಿವಿಯಲ್ಲೇನು ಉಸುರಿದಂತೆ ಭಾಸವಾಗುತ್ತದೆ. ನನ್ನ ಮೌನ ಮಾತುಗಳನ್ನು ಆಲಿಸಿಕೊಂಡಂತೆ ಅರಿವಾಗುತ್ತದೆ. ಏಕಾಂತತೆ, ಆತ್ಮವಲೋಕನ, ನನ್ನೊಗಿನ ಅನ್ವೇಷಣೆ ಎಲ್ಲದಕ್ಕು ಜಾಗವೊಂದನ್ನು ಕೊಟ್ಟದ್ದು ನಾ ಹುಟ್ಟಿದ, ನಡೆದ ಉಸಿರಾಡಿದ ಉಸಿರೇ ಆಗಿರೋ ನಮ್ಮ ಹಳ್ಳಿ.

ಹಾಲು ಕರೆಯಲು, ಗೊಬ್ಬರ ಹೊರಲು, ನೇಜಿ ನೆಡಲು, ಹುಲ್ಲು ಹೊತ್ತುಕೊಂಡು ಬಂದು ದನಕರುಗಳಿಗೆ ಹಾಕಲು, ಅಂಗಳ ಗುಡಿಸಲು ಸೆಗಣಿ ಸಾರಿಸಲು ಇನ್ನೇನನ್ನು ಕಲಿಸಿದ ಹಳ್ಳಿ..ನನ್ನ ಮೊದಲ ಮತ್ತು ಕೊನೆಯ ಪ್ರೀತಿ…

ವಿಷ್ಣುವರ್ಧನ್ ಹೇಳಿದ ಮಾತು ನಿಜವಾಗಿತ್ತು. ಆದರೆ ಉದ್ಯೋಗದ ಅನಿವಾರ್ಯತೆ ಬೆಂಗಳೂರಿಗೆ ತಳ್ಳಿತ್ತು…

ಅಂದ ಹಾಗೆ ಭಾರತೀ ವಿಷ್ಣುವರ್ಧನ್ ಅವರನ್ನು ನಂತ್ರ ಮಾತಾಡಿಸಿದೆ. ವಿಷ್ಣು ಅವರಿಗೆ ತಿಳಿ ಸಾಂಬಾರ್ ತುಂಬಾ ಇಷ್ಟ ಅಂತೆ.ಹೀಗಂತ ವಿಷ್ಣು ಅವರ ಇಷ್ಟ ಕಷ್ಟಗಳ ಬಗ್ಗೆ ಭಾರತಿಯವರು ಅನಿಸಿಕೆಯನ್ನು ಹಂಚಿಕೊಂಡ್ರು…

ಇದು ಸದ್ಯಕ್ಕೆ ನೆನಪಾದ ವೃತ್ತಿಬದುಕಿನ ಫ್ಲ್ಯಾಶ್ ಬ್ಯಾಕ್….ಮುಂದಿನ ವಾರ ಮತ್ತೊಂದಿಷ್ಟು ನೆನಪುಗಳೊಂದಿಗೆ ವಾಪಾಸು ಬರ್ತೀನಿ,,

ಆರಾಮವಾಗಿರಿ ಖುಷಿಯಾಗಿರಿ…

ಅವಧಿಗಾಗಿ

ಇರ್ವತ್ತೂರಿನಿಂದ 

ಜ್ಯೋತಿ ..

 

 

‍ಲೇಖಕರು Admin

4 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading