– ಸ್ಮಿತಾ ಅಮೃತರಾಜ್
2011 ರ ಸಾಲಿನ ಯಕ್ಷಗಾನ ಬಯಲಾಟವತಿಯಿಂದ ಪ್ರಶಸ್ತಿ ಪುರಸ್ಕೃತವಾದ ಡಾ.ಪ್ರಭಾಕರ ಶಿಶಿಲರ ಮತ್ಸಗಂಧಿ, ಮಹಾಭಾರತ ಕತೆಯನ್ನಾಧರಿಸಿದ ಕೃತಿ.ಈ ಹಿಂದೆ ಅವರ ಪುಂಸ್ತ್ರಿ ಕಾದಂಬರಿ ಅಂಬೆಯನ್ನು ಪ್ರಧಾನ ಭೂಮಿಕೆಯಲ್ಲಿಟ್ಟು ರಚಿಸಿದ ಕೃತಿ.ಈ ಮತ್ಸಗಂಧಿ ಅದರ ಮುಂದುವರಿಕೆಯ ಭಾಗವೆಂದೇ ಹೇಳಬಹುದು.
ಯಮುನೆಯಲ್ಲಿ ತೇಲಿ ಬಂದ ಕಾನೀನ ಪುತ್ರಿ ಬೆಸ್ತರ ಮನೆ ಮಗಳಾಗುತ್ತಾಳೆ.ಯಮುನೆಯನ್ನು ನೋಡುತ್ತಾ ಬೆಳೆಯುತ್ತಾಳೆ.ನದಿ ದಾಟಿಸಿದ ಮತ್ಸಗಂಧಿ ಪರಾಶರ ಮುನಿಗೆ ಇಷ್ಟವಾಗಿ, ಅವರ ಕಾವ್ಯ ಸೃಷ್ಟಿಗೆ ಸ್ಪೂರ್ತಿಯಾಗಿ,ಮದುವೆಯಾಗದೇ ಮುನಿಯಿಂದ ಶ್ರೇಷ್ಟ ಮಗನೊಬ್ಬನನ್ನ ಪಡೆಯುವುದರ ಮೂಲಕ ಈ ಕೃತಿ ಬಿಚ್ಚಿಕೊಳ್ಳುತ್ತದೆ.ಕೊಟ್ಟ ಮಾತಿನಂತೆ ಮಗನನ್ನು ಮುನಿಯ ತೆಕ್ಕೆಗೆ ಹಾಕಿದ ಮತ್ಸಗಂಧಿಗೆ ಇಲ್ಲಿ ದು:ಖವಿಲ್ಲ.ಲೋಕ ಕಲ್ಯಾಣಕ್ಕಾಗಿ ಒಬ್ಬ ಮಗನನ್ನು ಕೊಟ್ಟ ಸಾರ್ಥಕ್ಯ ಮತ್ತು ಸಮರ್ಪಣಾ ಭಾವ ಈ ಕೃತಿಯಲ್ಲಿ ಬಿಂಬಿತವಾಗಿದೆ.ಪರಾಶರರ ಸಾಂಗತ್ಯದಿಂದ ಅವಳು ಪಡೆದ ಬೌಧಿಕ ಔನತ್ಯ ಕೂಡ ಇಲ್ಲಿವ್ಯಕ್ತವಾಗುತ್ತದೆ ಮತ್ತು ಪ್ರಜ್ವಲಿಸುತ್ತದೆ.ತದನಂತರ ಶಂತನು ಚಕ್ರವರ್ತಿಗೆ ಪತ್ನಿಯಾಗುವ ಮೂಲಕ ಕುರು ವಂಶದ ಚಕ್ರವರ್ತಿಣಿಯಾಗುತ್ತಾಳೆ.ಮತ್ಸಗಂಧಿ ಸತ್ಯವತಿಯಾಗುತ್ತಾಳೆ.ಮುಂದಿನದು ಪ್ರತೀ ಹೆಜ್ಜೆಯಲ್ಲೂ ಆಕೆಯದು ಸಂಘರ್ಷ ಮತ್ತು ತೊಳಲಾಟದ ಬದುಕೆ.

ಈ ಕೃತಿ ಭೀಷ್ಮನ ಪ್ರತಿಜ್ನೆಯ ಮೌಲ್ಯವನ್ನು, ಅಂಬೆಯ ದಿಟ್ಟತನವನ್ನು,ಪರಾಶರ,ಪರಶುರಾಮರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ.ಇಲ್ಲಿ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ವಿವರಣೆ ಕೊಡುವಾಗ, ಸಂಧರ್ಭಕ್ಕನುಸಾರವಾಗಿ ತಮ್ಮದೇ ನಿಲುವುಗಳನ್ನು ಕೃತಿಕಾರರು ಇಲ್ಲಿ ಪ್ರತಿಪಾದಿಸುತ್ತಿದ್ದಾರೇನೋ ಅಂತ ಅನ್ನಿಸಿದರೂ ಕೂಡ ಇದು ಓದುಗನ ಓದಿಗೇನೂ ಧಕ್ಕೆಯುಂಟು ಮಾಡುವುದಿಲ್ಲ.ಅದರ ಜೊತೆಗೆ ಮಹಾಭಾರತದ ಪಾತ್ರಗಳು ಕ್ಲಿಷ್ಟಕರವಾಗಿ ತೋಚದೆ,ಅತಿರಂಜಕತೆಯಿಂದ ಕೂಡಿರದೆ,ಕಾಲ್ಪನಿಕವಾಗಿ ಗೋಚರಿಸದೆ,ಪುರಾಣದ ಪಾತ್ರಗಳನ್ನು ಸಮಕಾಲೀನ ಪರಿಸ್ಥಿತಿಗೆ ತಂದುಕೊಂಡು ಸಾಗುವ ಕಥನ ಶೈಲಿ ಬಹು ಬೇಗನೇ ಆಪ್ತವಾಗಿಬಿಡುತ್ತದೆ.ಪ್ರತಿಯೊಂದು ಪಾತ್ರಗಳ ಸಂಭಾಷಣೆ ಎಲ್ಲೋ ಒಂದು ಕಡೆ ನಮ್ಮ ಮನೋಸ್ಥಿಗೆ ಹೊಂದಿಕೆಯಾಗುತ್ತದೆಯೇನೋ ಅನ್ನುವಷ್ಟರ ಮಟ್ಟಿಗೆ ತಾದ್ಯತ್ಮತೆಯಿಂದ ಓದಿಸಿಕೊಂಡು ಹೋಗುತ್ತದೆ.ಎಲ್ಲೋ ಒಂದು ಕಡೆ ನಾವುಗಳು ಕೂಡ ಆ ಪಾತ್ರಗಳ ಭಾಗವಾಗಿ ಕೆಲ ಕಾಲ ನಿಂತಂತಹ ಅನುಭವವಾಗುತ್ತದೆ.
ಇಲ್ಲಿ ತನಗಿಷ್ಟವಿಲ್ಲದ ಬಾಳನ್ನು ಬಾಳಲು ಮನಸಾಗದೇ ದಹಿಸಿ ಹೋದ ಅಂಬೆ. ನಿರ್ವಾಹವಿಲ್ಲದೆ ಪರಿಸ್ಥಿತಿಯೊಂದಿಗೆ ರಾಜಿ ಮಾಡುತ್ತಾ ದಿನವೂ ಜೀವನವನ್ನು ದಹಿಸಿಕೊಳ್ಳುತ್ತಿರುವ ಅಂಬೆ ಅಂಬಾಲಿಕೆಯರ ದುರಂತ ಜೀವನ ಅದೆಷ್ಟೋ ಹೆಣ್ಣುಮಕ್ಕಳ ಅಸಾಯಕತೆಯ ಪ್ರತಿರೂಪವಾಗಿ ಗೋಚರಿಸುತ್ತದೆ.ಕುರುಸಾಮ್ರಾಜ್ನಿಯಾಗಿ ಕುರುವಂಶವನ್ನು ಉಳಿಸಿಕೊಳ್ಳಲು ಸತ್ಯವತಿಯೊಳಗೆ ನಡೆದ ತಾಕಲಾಟ,ತೊಳಲಾಟ ಹಾಗೆಯೇ ಎಲ್ಲಾ ಸಂಧರ್ಭಗಳಲ್ಲೂ ಅವಳ ಸಮಚಿತ್ತದ ನಡವಳಿಕೆ ಬೆರಗು ಹುಟ್ಟಿಸುವಂತದ್ದು.ಪಟ್ಟದ ರಾಣಿಯಾದರೂ ವಿಷಾದದಿಂದ ತುಂಬಿದ ಅವಳ ಬಾಳು ಕೊನೆಯಲ್ಲಿ ಯಮುನೆಯನ್ನು ಕಾಣದೆ ನಿರಾಶೆಯಲ್ಲೆಲ್ಲೋ ಅಂತ್ಯಗೊಂಡ ಬಗೆಗೆ ನಮ್ಮೆಲ್ಲರ ಕಣ್ಣುಗಳಲ್ಲೂ ಪಸೆಯೊಡೆಯುತ್ತದೆ.ಹನಿಯುವ ಕಣ್ಣೀರನ್ನು ತೊಡೆದುಕೊಳ್ಳುವ ಪ್ರಯತ್ನವನ್ನು ಮಾಡದೇ ಮತ್ತೆ ಮತ್ತೆ ಮತ್ಸಗಂಧಿಯ ಸುತ್ತ ಯೋಚನೆಗಳು ಹರವಿಕೊಳ್ಳುತ್ತವೆ.
ಇಲ್ಲಿನ ಪ್ರತೀ ಸಂಭಾಷಣೆ ಮನಸ್ಸಿನಾಳಕ್ಕೆ ಹೊಕ್ಕು ಹೃದಯವನ್ನು ತಟ್ಟುತ್ತದೆ.ಜಾತಿ ಕುಲ ವರ್ಣಗಳು ಸಾಧನೆಯಿಂದ ನಿರ್ಧಾರವಾಗಬೇಕು.ಹುಟ್ಟಿನಿಂದಲ್ಲ.ಮನವರಿತ ಮಡದಿಗಿಂತ ಆಪ್ತರಿರಲು ಸಾಧ್ಯವಿಲ್ಲ. ಸ್ವಾತಂತ್ರ್ಯವೆಂಬುದು ದೇವರಿಗಿಂತ ಮಿಗಿಲಾದ ಮೌಲ್ಯ ಎನ್ನುವಂತಹ ಚಿಂತನೆಗಳು ಗಾಢವಾಗಿ ಕಲಕಿ ನಮ್ಮನ್ನು ಚಿಂತನೆಗೆ ಹಚ್ಚುವಲ್ಲಿ ಈ ಕೃತಿ ಸಫಲವಾಗುತ್ತದೆ.






puranagala muulaka atyyyadhunika raada naavu nammannu pruthakkarisikollodu bahala ive…intha krutigala rachane mattu parichaya teeeraa anivaarya.thanks for such notes
Chennagide smithakka
Thanks for shedding light on this novel