
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.
ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.
ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!
2
ತೀನ್ ದೇವಿಯಾಂ !
ಹೊಟ್ಟೆ ತೊಳೆಸುತ್ತಿತ್ತು, ತಲೆ ತಿರುಗುತ್ತಿತ್ತು, ಕಿವಿಯೆರಡೂ ಡಬ್ಬು ಬಿದ್ದಿದ್ದವು… ಶಿವಮೊಗ್ಗೆಯಿಂದ ಹೊರಟು ಆಗುಂಬೆ ಘಾಟಿ ದಾಟಿ ಹೆಬ್ರಿ ತಲುಪುವಾಗ! ಕಾರಿನಲ್ಲಿ ಕುಳಿತು ಪಕ್ಕದಲ್ಲಿದ್ದ ಅಮ್ಮನ ಹೆಗಲ ಮೇಲೆ ತಲೆಯೊರಗಿಸಿದ್ದರೂ ನಿದ್ದೆ ಬಂದಿರಲಿಲ್ಲ. ಹೊಸ ಜಾಗ, ಹೊಸ ಕೋರ್ಸ್, ಹಾಸ್ಟೆಲ್…. ಬ್ರೇಕಿಲ್ಲದೇ ಓಡುವ ಯೋಚನೆಗಳು. ಅಪ್ಪ-ಅಮ್ಮ ಆಗಾಗ್ಗೆ ಧೈರ್ಯ ಹೇಳುತ್ತಿದ್ದರೂ ಒಳಗೊಳಗೇ ಆತಂಕ ಇರದಿರಲು ಸಾಧ್ಯವೇ! ಎಷ್ಟಾದರೂ ಹೆತ್ತವರಲ್ಲವೇ? ಈ ಎಲ್ಲಾ ಹೆದರಿಕೆಗೆ ಸಾಥ್ ಕೊಡಲು ಒಂದೇ ಸಮ ಸುರಿಯುತ್ತಿದ್ದ ಮಳೆ, ಕವಿಯುತ್ತಿದ್ದ ಕತ್ತಲು. ಹೆಬ್ರಿ ಬಂದಂತೆ ಅಲ್ಲಿಯವರೆಗಿದ್ದ ದಟ್ಟ ಮರ-ಗಿಡ ಎಲ್ಲಾ ಮಾಯವಾಗಿ ಬರೀ ಬಯಲು. ಪೈಮಾಮಾ ಹೇಳಿದ ‘ಮಣಿಪಾಲ ಎಂದರೆ ಬರೀ ಗುಡ್ಡ ಆಯ್ತಾ ? ಅಲ್ಲಿ ಎಂತ ಸಾ ಇಲ್ಲ..ಆದ್ರೆ ಓದಲಿಕ್ಕೆ ಒಳ್ಳೇ ಆಗ್ತದೆ’ ಎಂಬ ಮಾತಿನಲ್ಲಿ ಎಂತ ಸಾ ಇಲ್ಲ ಎಂಬುದೇ ನೆನಪಿಗೆ ಬರುತ್ತಿತ್ತು.
ಅದಕ್ಕೆ ಸರಿಯಾಗಿ ಮಣಿಪಾಲ ಹತ್ತಿರ ಬರುತ್ತಿದ್ದಂತೆ ಕಂಡದ್ದು ಎತ್ತೆತ್ತರದ ಕಟ್ಟಡಗಳು ಮಾತ್ರ. ಕಡೆಗೊಮ್ಮೆ ನನಗೆ ನೀಡಲಾಗಿದ್ದ ಹಾಸ್ಟೆಲ್ ಕಟ್ಟಡದ ಬಳಿ ಕಾರು ನಿಲ್ಲಿಸಿದಾಗ ಕಂಡದ್ದು ‘ಸರೋಜಿನಿ ಬ್ಲಾಕ್’ ಎಂಬ ಹೆಸರು ಮತ್ತು ಅಲ್ಲಿ ಬಾಗಿಲಲ್ಲಿ ಶಿಲಾಬಾಲಿಕೆಯಂತೆ ಯಾರನ್ನೋ ನಿರೀಕ್ಷಿಸುತ್ತಾ ನಿಂತಿದ್ದ ಹುಡುಗಿ. ಕೆಳಗಿಳಿಯುವ ಮುನ್ನವೇ ಅಮ್ಮ ಸರೋಜಿನಿ ನನ್ನ ಆಯಿ (ಅಮ್ಮನ ಅಮ್ಮ) ಹೆಸರು ಎಂದು ನಕ್ಕಿದ್ದಳು. ಹೆಸರಿನಲ್ಲೇನಿದೆ ಎಂದು ಕೇಳುವುದು ರೂಢಿಯಾದರೂ ಆ ಕ್ಷಣದಲ್ಲಿ ಆ ಹೆಸರು ಮನಸ್ಸಿಗೆ ಧೈರ್ಯ ತುಂಬಿದ್ದು ನಿಜ.
ಕಾರಿನಿಂದ ಕೆಳಗೆ ಇಳಿಯುವಷ್ಟರಲ್ಲಿ ಕೊಡೆ ಹಿಡಿದು ಅದೆಷ್ಟೋ ವರ್ಷ ಅಲ್ಲ ಜನ್ಮಜನ್ಮಾಂತರಗಳ ಪರಿಚಯ ಇದ್ದವಳಂತೆ ಓಡಿ ಬಂದ ಶಿಲಾಬಾಲಿಕೆ ಶೀಲಾ! ಶಿವಮೊಗ್ಗದ ಹುಡುಗಿ ಅಂದರೆ ಕನ್ನಡದವಳು ಎಂದು ತಾನೇ ನನ್ನನ್ನು ರೂಂಮೇಟ್ ಆಗಿ ಹಾಕಿಸಿಕೊಂಡು ನನ್ನ ಬಗ್ಗೆ ಏನೂ ತಿಳಿಯದೆಯೇ ಕಾಯುತ್ತಾ ಇದ್ದವಳು ಈ ಶೀಲಾ. ಗೆಳತಿ, ರೂಂಮೇಟ್, ಕ್ಲಾಸ್ ಮೇಟ್ ಎಲ್ಲವೂ ಆದಳು ಐದು ವರ್ಷ…ಆತ್ಮಬಂಧು ಕಡೆಯತನಕ! ಅಲ್ಲಿಯವರೆಗೆ ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿದ್ದ ಅಪ್ಪ-ಅಮ್ಮಂದಿರು ಮರುದಿನ ನಿಶ್ಚಿಂತೆಯಿಂದ ಮರಳಿ ಹೊರಟರು.

ಅದಾದ ಮರುದಿನ ತರಗತಿಗಳಿಗೆ ಬೇಕಾದ ಪುಸ್ತಕ-ಪೆನ್ನು ಹೀಗೆ ನಮ್ಮ ಖರೀದಿ ಹತ್ತಿರದ ಅಂಗಡಿಯಲ್ಲಿ ನಡೆದಿತ್ತು. ನಮ್ಮಂತೆಯೇ ಇನ್ನೊಂದು ಹುಡುಗಿ ಅಪ್ಪ-ಅಮ್ಮರೊಂದಿಗೆ ಬಂದಿದ್ದಳು. ಸೌಮ್ಯ ಮುಖ, ಸಂಕೋಚ ಸ್ವಭಾವದ ಸುಂದರಿ. ನಾವು ಮುಖ ನೋಡಿ ನಕ್ಕಿದ್ದಷ್ಟೇ. ಅವರಪ್ಪ ‘ನಮ್ಮ ಶಮ್ಮಿಯನ್ನೂ ನಿಮ್ಮ ಜತೆ ಸೇರಿಸಿಕೊಳ್ಳಿ’ ಎಂದಿದ್ದರು. ಸೇರಿಸುವವರು ನಾವಾಗಿರಲಿಲ್ಲ; ಕಾಣದ ಕೈ! ಶೀಲಾ- ಶರ್ಮಿಳಾ ಎಂಬ ಹುಡುಗಿಯರು ನನ್ನ ಎಡ-ಬಲವಾಗಿ, ಬೆಂಬಲವಾಗಿ ನಿಂತರು. ಒಟ್ಟಿಗೇ ಕಲಿಯುತ್ತಾ, ತಿರುಗುತ್ತಾ ಇದ್ದ ನಮ್ಮನ್ನು ಮಣಿಪಾಲದಲ್ಲಿ ತೀನ್ ದೇವಿಯಾಂ ಎಂದೇ ಗುರುತಿಸಲಾಗುತ್ತಿತ್ತು. ಬಹಳಷ್ಟು ಜನರಿಗೆ ನಾವು ಒಬ್ಬರೇ ಇದ್ದರೆ ಗೊತ್ತಾಗುತ್ತಲೇ ಇರಲಿಲ್ಲ! ಮೂವರದ್ದೂ ಬೇರೆ ಊರು, ಜೀವನ ಶೈಲಿ, ಯೋಚನಾಕ್ರಮ ; ಆದರೆ ಬೆಸೆದದ್ದು ಕನ್ನಡ ಭಾಷೆ- ಕನ್ನಡಿಗರೆಂಬ ಭಾವ. ಗೆಳತಿಯರಾಗಿದ್ದ ಮಾತ್ರಕ್ಕೆ ಭಿನ್ನಾಭಿಪ್ರಾಯ- ಜಗಳ ಗಳು ಇರಲಿಲ್ಲ ಎಂದಲ್ಲ. ಆದರೆ ಅವೆಲ್ಲವನ್ನೂ ಮೀರಿ ಒಬ್ಬರನ್ನೊಬ್ಬರು ಪ್ರೀತಿಸುವ-ಗೌರವಿಸುವ- ಪರಸ್ಪರ ಕಲಿಯುವ -ಸೈರಿಸಿಕೊಳ್ಳುವ ವಿಶ್ವಾಸವಿತ್ತು. ಸ್ನೇಹದ ವಿಷಯಕ್ಕೆ ಬಂದರೆ ಅಂದಿಗೂ ಇಂದಿಗೂ ನಾನು ಬಹಳ ಶ್ರೀಮಂತೆ.
ವೃತ್ತಿಪರ ಶಿಕ್ಷಣದ ಸಲುವಾಗಿ ತವರೂರನ್ನು ಬಿಟ್ಟು ಬಂದ ನಮಗೆ ಒಬ್ಬರಿಗೊಬ್ಬರು ಸಿಕ್ಕಿದ್ದು ನಿಜಕ್ಕೂ ವರದಾನವೇ ಆಗಿತ್ತು. ಆದರೆ ಪುಟ್ಟ ಊರಿನಲ್ಲಿ ಹುಟ್ಟಿ ಬೆಳೆದಿದ್ದ ನಮಗೆ ಹುಡುಗರೆಂದರೆ ಅದೇನೋ ಭಯ. ಹುಡುಗಿಯರೆಂದರೆ ತಲೆ ತಗ್ಗಿಸಿ ನಡೆಯಬೇಕು, ಎದುರು ಮಾತನಾಡಬಾರದು ಎಂಬುದು ಆ ಕಾಲಕ್ಕೆ ಜಾರಿಯಲ್ಲಿದ್ದ ಅಲಿಖಿತ ನಿಯಮ. ಅದಕ್ಕೆ ಸರಿಯಾಗಿ ಕಾಲೇಜಿನ ಕೆಲವು ಪುಂಡ ಹುಡುಗರು ಗಲಾಟೆ ಮಾಡಿ, ಬೀದಿ ಕಾಮಣ್ಣರಾಗಿ ಸಮಾಜದ ಧೋರಣೆಗೆ, ನಮ್ಮ ಅನುಮಾನಕ್ಕೆ ಪುಷ್ಟಿ ನೀಡಿದ್ದರು.
ಯಾವುದಾದರೂ ಹುಡುಗಿ, ಹುಡುಗನೊಂದಿಗೆ ಅಕಸ್ಮಾತ್ತಾಗಿ ಮಾತಾಡಿಬಿಟ್ಟರೆ ಅಷ್ಟೇ, ಊರಿಡೀ ಅದೇ ಸುದ್ದಿ. ಹುಡುಗಿಯ ಕತೆ ಅಲ್ಲಿಗೇ ಮುಗಿಯುತಿತ್ತು. ಹಾಗಾಗಿ ತುಂಬಾ ಹುಷಾರಾಗಿ , ಹೆದರಿ ನಡೆಯುವುದೇ ನಮಗೆ ಅಭ್ಯಾಸವಾಗಿತ್ತು. ಹಾಗಿದ್ದೂ ಅಪ್ಪ ಅಮ್ಮರ ಬೆಚ್ಚನೆ ನೆರಳಲ್ಲಿ ,ಮನೆಯೆಂಬ ಪುಟ್ಟ ಗೂಡಿನಲ್ಲಿ ಹಾಯಾಗಿದ್ದವರಿಗೆ ಇದ್ದಕ್ಕಿದ್ದಂತೆ ಅಪರಿಚಿತ ದೊಡ್ಡ ಊರಲ್ಲಿ ಹಾಸ್ಟೆಲ್‌ನಲ್ಲಿ ಇದ್ದು, ಹುಡುಗರೊಡನೆ ಕಲಿಯಬೇಕೆಂದರೆ?? ಒಬ್ಬರಿಗೊಬ್ಬರು ಇದ್ದೇವೆ ಎಂಬುದು ಸ್ವಲ್ಪ ಸಮಾಧಾನ ನೀಡಿದರೂ ಆ ಅಪಾರ ಜನಸಾಗರ ನೆನೆದರೆ ಜೀವ, ಒದ್ದೆಯಾಗಿ ನಡುಗುವ ಗುಬ್ಬಚ್ಚಿ ಮರಿ!
ತರಗತಿಯಲ್ಲಿ ಹುಡುಗರೇ ಹೆಚ್ಚು,,ಅದೂ ಎಂಥವರು? ಬೇರೆ ಮುಖ ಚಹರೆ, ಬಣ್ಣ, ಆಕಾರವಂತೂ ಸರಿ, ನಮ್ಮ ಕನ್ನಡ ಭಾಷೆಯೇ ಬರದ ಬೇರೆ ರಾಜ್ಯದವರು ಮತ್ತು ವಿದೇಶಿಯರು. ನೂರು ಜನರ ತರಗತಿಯಲ್ಲಿ ಹತ್ತು ಜನ ಮಾತ್ರ ಕನ್ನಡಿಗರು!! ನೀರಿನಿಂದ ಹೊರಬಿದ್ದ, ಉಸಿರಿಗಾಗಿ ಚಡಪಡಿಸುವ ಮೀನಿನ ಅನುಭವ ನಮ್ಮದು. ಹುಡುಗರನ್ನು ತಲೆ ಎತ್ತಿ ನೋಡಲೇ ಹೆದರಿಕೆ, ಇನ್ನು ಕೂಡಿ ಕಲಿಯುವುದೆಂತು? ಆದರೇನು, ಸೀಟು ಸಿಕ್ಕಾಗಿತ್ತು, ದುಡ್ಡು ಕಟ್ಟಾಗಿತ್ತು. ಹಾಗೇ ಮರಳಿ ಹೋದರೆ ? ಪರಸ್ಪರರಿಗೆ ಧೈರ್ಯ ತುಂಬುತ್ತಾ ಕಾಲೇಜಿಗೆ ಸಿದ್ಧರಾಗಿದ್ದೆವು.
ಥಿಯರಿ ಕ್ಲಾಸಿನ್ನಲ್ಲೇನೋ ಮೊದಲ ಬೆಂಚಿನಲ್ಲಿ ಮುದುರಿ ಕುಳಿತಿದ್ದಾಯ್ತು. ಪ್ರಾಕ್ಟಿಕಲ್‌ನಲ್ಲಿ ಮೊದಲ ಕ್ಲಾಸ್, ಅನಾಟಮಿ. ದೊಡ್ಡ ಲ್ಯಾಬ್‌ನಲ್ಲಿ ಸಾಲಾಗಿ ಟೇಬಲ್‌ಗಳು, ಫಾರ್ಮಾಲಿನ್‌ನ ತೀಕ್ಷ್ಣ ವಾಸನೆ, ಅಲ್ಲಲ್ಲಿ ಕಾಣುವ ಬುರುಡೆ-ಅಸ್ಥಿಪಂಜರ, ಚಿತ್ರ ವಿಚಿತ್ರ ಜಾಡಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸುತ್ತಲೂ ನಿಂತು ತಮಾಷೆ ಮಾಡುವ ಹುಡುಗರು! ಒಂದು ಟೇಬಲ್ಲಿನ ಸುತ್ತ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು. ಅದರಲ್ಲಿ ನಾವು ಮೂವರೇ ಹುಡುಗಿಯರು. ಎಲ್ಲರೂ ಒಟ್ಟಾಗಿ ಹತ್ತಿರ ನಿಂತು, ಬಗ್ಗಿ ನೋಡಿ, ಕತ್ತರಿಸಿ, ಕಲಿಯಬೇಕಾಗಿತ್ತು. ಉದ್ದ ಬಿಳಿ ಕೋಟು ಧರಿಸಿ, ಕೈಯಲ್ಲಿ ಹೊಸ ಸಲಕರಣೆ ಹಿಡಿದು, ಸಣ್ಣ ಮುಖ ಮಾಡಿಕೊಂಡು ಮೌನಗೌರಿಯರಾಗಿ ನಿಂತ ನಮಗೆ ಏನೇನೂ ತೋಚದು.

ಒಂದೆರಡು ದಿನ ಹೀಗೆ ಮಾತೇ ಬರದ ಮೂಕರಂತೆ, ಏನೂ ಮಾಡದೇ-ಕಲಿಯದೇ ಕಾಲ ಕಳೆದಿದ್ದಾಯ್ತು. ಮೂರನೇ ದಿನ ಜೋರು ಎಂದೇ ಪ್ರಸಿದ್ಧನಾಗಿದ್ದ ಸಹಪಾಠಿಯೊಬ್ಬ ಎದುರೇ ನಿಂತುಬಿಟ್ಟಾಗ ನಮಗೆ ಪುಕಪುಕ, ಕೈಕಾಲಲ್ಲಿ ನಡುಕ. ನಮ್ಮನ್ನು ತಡೆದು ನಿಲ್ಲಿಸಿ ‘ಯಾಕ್ರೀ, ಈ ಹೆಣಗಳಿಗಿಂತ ನಾವು ಭಯಂಕರವಾಗಿದ್ದೇವಾ? ಮಾತಿಲ್ಲ – ಕತೆಯಿಲ್ಲ. ಬೇಡ, ಮುಖದಲ್ಲಿ ನಗು ? ಇಲ್ಲವೇ ಇಲ್ಲ. ಒಂಥರಾ ಮಾಡಿಕೊಂದು ಇರ್ತೀರಪ್ಪಾ! ಇನ್ನೂ ಐದು ವರ್ಷ ಒಟ್ಟಾಗಿ ಓದಬೇಕು, ಈಗ್ಲೇ ಹೀಗಾದ್ರೆ ಹೇಗೆ ? ನಾವೇನೂ ನಿಮ್ಮನ್ನ ತಿಂದು ಹಾಕಲ್ಲ.
ಮನೆಯಲ್ಲಿ ನಮಗೂ ಅಕ್ಕ ತಂಗಿಯರಿದ್ದಾರೆ. ನಿಮ್ಮ ಹೆದರಿಕೆ ನಮಗೂ ಗೊತ್ತಿದೆ. ಏನೋ ಮನೆ- ಊರು ಬಿಟ್ಟು ಎಲ್ಲರೂ ಇಲ್ಲಿದ್ದೀವಿ. ಚೆನ್ನಾಗಿ ಓದೋಣ, ಅದರ ಜತೆ ನಗುತ್ತಾ ನಾಲ್ಕು ಮಾತಾಡಿದರೆ ತಪ್ಪೇನು? ಮಾತಾಡಿಬಿಟ್ರೆ ಲವ್ ಅಂತಲ್ಲ. ನಿಮಗೆ-ನಮಗೆ ಯಾರಿಗೂ ಸದ್ಯಕ್ಕೆಆ ಉಸಾಬರಿ ಬೇಡ . ನಿಮಗೆ ಏನೆನಿಸುತ್ತೋ ಗೊತ್ತಿಲ್ಲ . ನಮಗಂತೂ ಈ ಹೆಣ-ಕ್ಲಾಸು-ನೋಟ್ಸು ಇವೆಲ್ಲಾ ತುಂಬಾ ಕಷ್ಟ. ಜತೆಗೆ ನಿಮ್ಮನ್ನು ಕಂಡ್ರೆ ಸಿಕ್ಕಾಪಟ್ಟೆ ಹೆದರಿಕೆ.’ ಎಂದುಬಿಟ್ಟ. ಆತನ ಮಾತು ಕೇಳಿ ಸ್ವಲ್ಪ ಸಿಟ್ಟು, ತುಂಬಾ ಆಶ್ಚರ್ಯವಾದರೂ ಆ ಪ್ರಾಮಾಣಿಕ ಮಾತುಗಳು, ಅದರ ಹಿಂದಿದ್ದ ಕಾಳಜಿ ಮನಸ್ಸನ್ನು ತಟ್ಟಿತ್ತು. ಎಲ್ಲಕ್ಕಿಂತ ಹುಡುಗರಿಗೂ ಹೆದರಿಕೆಯಾಗುತ್ತೆ ಎಂದು ಅರಿವಾದದ್ದು ಆ ದಿನವೇ!
ಅಂತೂ ಸಂಶಯ-ಸಂಕೋಚದ ಸಣ್ಣ ನಗು, ಹಲೋಗಳಿಂದ ಆರಂಭವಾದ ಸ್ನೇಹ, ದಿನಗಳೆದಂತೆ ಪರಸ್ಪರ ಸುಖ- ದುಃಖಗಳನ್ನು ಹಂಚಿಕೊಳ್ಳುವಷ್ಟು ಬೆಳೆಯಿತು. ಲೈಬ್ರರಿಯಲ್ಲಿ ನಡುರಾತ್ರಿಯವರೆಗೆ ಓದಿದೆವು, ಒಂದೊಂದು ಅಂಕಕ್ಕಾಗಿ ಜಗಳವಾಡಿದೆವು, ಜೋಕ್ಸ್ ಕೇಳಿ ಬಿದ್ದು ಬಿದ್ದು ನಕ್ಕೆವು. ಆದರೆ ನಾವು ಹೆದರಿದ್ದ ಹಾಗೆ ಹುಡುಗರು ಸಭ್ಯತೆಯ ಎಲ್ಲೆ ಎಂದೂ ಮೀರಲಿಲ್ಲ. ಬದಲಾಗಿ ನಮ್ಮನ್ನು ‘ತೀನ್ ದೇವಿಯಾಂ’ ಎಂದು ತಮಾಷೆ ಮಾಡುತ್ತಲೇ ಪ್ರೀತಿ- ಗೌರವದಿಂದ ಕಂಡರು. ನಿಧಾನವಾಗಿ, ಪ್ರೀತಿ-ಪ್ರೇಮಗಳ ಗೋಜಿಲ್ಲದ ಸರಳ ಸುಂದರ ಸ್ನೇಹ ಗಂಡು-ಹೆಣ್ಣಿನ ನಡುವೆ ಸಾಧ್ಯ ಎಂಬುದು ಬೆಳಕಿಗೆ ಬಂತು. ಸಣ್ಣ ಊರಿಂದ ದೊಡ್ಡ ಊರಿಗೆ ಕಲಿಯಲು ಬಂದಿದ್ದೆವು, ಅದೆಷ್ಟನ್ನು ಕಲಿತೆವು! ಐದು ವರ್ಷಗಳ ಆ ದಿನಗಳು ಸ್ವಾವಲಂಬನೆ-ಸಮಾನತೆ-ಸ್ನೇಹವನ್ನು ಪ್ರಾಯೋಗಿಕವಾಗಿ ಮನದಟ್ಟು ಮಾಡಿಸಿದ, ಇಂದಿಗೂ ನೆನಪಾಗುವ ಸುವರ್ಣ ಕ್ಷಣಗಳು.






0 Comments