ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಕೆ ಎಸ್ ಚೈತ್ರಾ ಅಂಕಣ – ‘ಹುಬ್ಬು ಡಾಕ್ಟರ್!’

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

21

ದಂತವೈದ್ಯಕೀಯದ ವಿಶೇಷ ಪರಿಣತಿಯ ವಿಷಯಗಳಲ್ಲಿ ಒಂದು ಆರ್ಥೋಡಾಂಟಿಕ್ಸ್. ಗ್ರೀಕ್ ನಲ್ಲಿ ಆರ್ಥೋಸ್ ಅಂದರೆ ನೇರ ಮತ್ತು ಡಾಂಟಿಕ್ಸ್ ಹಲ್ಲುಗಳು. ಓರೆಕೋರೆ ಇರುವ, ಸರಿಯಾಗಿ ಕಚ್ಚಲಾಗದ ಹಲ್ಲುಗಳು, ಸರಿಯಾದ ಸ್ಥಿಯಲ್ಲಿ ಇರದ ದವಡೆಗಳು ಹೀಗೆ ಹಲ್ಲು, ವಸಡು- ಮಾಂಸಖಂಡಗಳ ಅಸಮತೋಲನವನ್ನು ಸರಿಪಡಿಸುವ ದಂತವೈದ್ಯಕೀಯದ ವಿಭಾಗ. ಬ್ರಾಕೆಟ್ ಎಂಬ ಆಯತಾಕಾರದ ಚಿಕ್ಕ ತುಂಡುಗಳನ್ನು ಹಲ್ಲಿನ ಮೇಲೆ ಕೂರಿಸಿ, ಅದರ ಮೂಲಕ ತಂತಿ ಹಾಯಿಸಿ ನಿರ್ದಿಷ್ಟ ಪ್ರಮಾಣದಲ್ಲಿ ಒತ್ತಡವನ್ನು ಸೃಷ್ಟಿಸುವುದರಿಂದ ಹಲ್ಲುಗಳನ್ನು ಬೇಕಾದ ಸ್ಥಾನಕ್ಕೆ ತರಲು ಸಾಧ್ಯ.

ಗೆಳೆಯ, ಪ್ರಸಿದ್ಧ ಆರ್ಥೋಡಾಂಟಿಸ್ಟ್ ಡಾ. ಹರ್ಷ.ಬಿ ಅವರ ಪ್ರಕಾರ ಜನರಲ್ಲಿ ಕೇವಲ ಚೆಂದ ಕಾಣಲು ಈ ಚಿಕಿತ್ಸೆ ಎಂಬ ಭಾವನೆ ಇದೆ. ಆದರೆ ಬಾಯಿಯ ಮತ್ತು ಸಾಮಾನ್ಯ ಆರೋಗ್ಯದ ಜತೆ ಸೌಂದರ್ಯವನ್ನೂ ಹೆಚ್ಚಿಸಿ ಆತ್ಮವಿಶ್ವಾಸ ಮೂಡಿಸುವಲ್ಲಿ ಈ ಚಿಕಿತ್ಸೆ ಸಹಕಾರಿ. ಬರೀ ಸೈನ್ಸ್, ಸ್ಕಿಲ್ ಮಾತ್ರವಲ್ಲ ಪೇಶೆನ್ಸ್ (ವಿಜ್ಞಾನ, ಕೌಶಲ್ಯ ಮತ್ತು ತಾಳ್ಮೆ) ಮೂರನ್ನೂ ಬೇಡುವ ಚಿಕಿತ್ಸೆ. ‘ ಸೈನ್ಸ್ ಪ್ರಕಾರ ನಿಖರವಾಗಿ ಲೆಕ್ಕ ಹಾಕಿ ಫೋರ್ಸ್ ಹಲ್ಲಿನ ಮೇಲೆ ಹಾಕಬಹುದು, ಮಾಡುವ ರೀತಿಯೂ ಅಂದ್ರೆ ಸ್ಕಿಲ್ ಕೂಡಾ ಪರ್ಫೆಕ್ಟ್, ಆದರೆ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ನಮಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ಚಿಕಿತ್ಸೆಯ ಸಮಯದಲ್ಲಿ ವ್ಯತ್ಯಾಸ ಆಗಬಹುದು; ಸಹನೆಯಿಂದ ಕಾಯುವುದು ಅಗತ್ಯ. ಹಾಗೆಯೇ ಪ್ರತಿ ಬಾರಿ ಚಿಕಿತ್ಸೆ ಮಾಡುವಾಗಲೂ ಅವಸರ ಸಲ್ಲದು. ಸಣ್ಣ ತಂತಿಯ ತಿರುವು, ಸುತ್ತು, ಬಾಗುವಿಕೆ ಬಾಯಿಯಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ಆದ್ದರಿಂದ ಸರಿಯಾಗಿ ಯೋಚಿಸಿ ಮಾಡಬೇಕು.ಒಟ್ಟಿನಲ್ಲಿ ತಾಳ್ಮೆ ,ಚಿಕಿತ್ಸೆ ಮಾಡುವವರು- ಪಡೆಯುವವರು ಇಬ್ಬರಿಗೂ ಬೇಕು ’ ಇದು ಅವರು ಹೇಳುವ ಮಾತು. ವಿವಿಧ ರೀತಿಯ ತಂತಿಗಳನ್ನು ಬಗ್ಗಿಸುತ್ತಾ, ತಲೆ ತಗ್ಗಿಸಿ ಸೂಕ್ಷ್ಮವಾಗಿ ಕೆಲಸ ಮಾಡುವ, ಎಂದಿಗೂ ತಾಳ್ಮೆ ಕಳೆದುಕೊಳ್ಳದ ಹರ್ಷರನ್ನು ಕಂಡಾಗಲೆಲ್ಲಾ ನನಗೆ ಸಂಶಯ ಮೂಡುತ್ತದೆ. ಈ ವೃತ್ತಿಬದುಕೇ ಇವರಿಗೆ ತಾಳ್ಮೆ ಕಲಿಸಿದೆಯೋ ಅಥವಾ ಇವರ ಸ್ವಭಾವದಿಂದಲೇ ಈ ವಿಭಾಗ ಆಯ್ದುಕೊಂಡಿದ್ದಾರೋ? ಉತ್ತರ ಏನೇ ಇರಲಿ .. ಜನಸಾಮಾನ್ಯರ ಭಾಷೆಯಲ್ಲಿ ಕ್ಲಿಪ್ ಡಾಕ್ಟರ್, ತಂತಿ ಹಾಕುವವರು ಎಂದೇ ಜನಪ್ರಿಯರಾದ ಆರ್ಥೋಡಾಂಟಿಸ್ಟ್ ಗಳದ್ದು ತಂತಿಯ ಜತೆಗಿನ ಬದುಕು ಎಂಬುದರಲ್ಲಿ ಸಂಶಯವಿಲ್ಲ!

ಆದರೆ ಇದಕ್ಕಿಂತ ಭಿನ್ನವಾದ ಹುಬ್ಬು ಡಾಕ್ಟರ್ ಎಂಬ ಬಿರುದಿಗೆ ಪಾತ್ರನಾದ ಗೆಳೆಯನ ಕತೆ ಸ್ವಾರಸ್ಯಕರ. ವಿದ್ಯಾರ್ಥಿಗಳಾಗಿದ್ದಾಗ ಕಲಿಯುವ ಭಾಷೆ ಇಂಗ್ಲೀಶ್ ಆಗಿದ್ದರೂ ಮೂರನೇ ವರ್ಷದಿಂದ ಕ್ಲಿನಿಕ್‌ನಲ್ಲಿ ಕೆಲಸ ಮಾಡುವಾಗ ಸ್ಥಳೀಯ ಭಾಷೆ ಕಲಿಯಲೇಬೇಕಾಗುತ್ತಿತ್ತು. ಜತೆಗೆ ಪರೀಕ್ಷೆಗಳಲ್ಲೂ ರೋಗಿಗಳ ಜತೆ ಮಾತನಾಡಿ ಅವರಿಂದ ಮಾಹಿತಿ ಸಂಗ್ರಹಿಸಿ, ಅವರ ಅಗತ್ಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದಕ್ಕೆ ಕನಿಷ್ಠ ಭಾಷಾಜ್ಞಾನ ಅಗತ್ಯವಾಗಿತ್ತು. ಇದೆಲ್ಲದರ ಜತೆ ಮಣಿಪಾಲದ ಸುತ್ತಮುತ್ತಲ ಹಳ್ಳಿಗಳಲ್ಲಿ ಸಮುದಾಯ ಸೇವೆಗೆ ಹೋದಾಗ ಕನ್ನಡ/ ತುಳು ಬರದಿದ್ದರೆ ಕೆಲಸ ಮಾಡುವುದು ಕಷ್ಟವಿತ್ತು. ಹೀಗಾಗಿ ನಾವು ಕನ್ನಡದ ಜತೆ ತುಳು ಅಲ್ಪ ಸ್ವಲ್ಪ ಕಲಿತರೆ ಉಳಿದವರು ಕನ್ನಡ ಕಲಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಕನ್ನಡದವರಾದ ನಮಗೆ ಸಹಪಾಠಿಗಳಿಗೆ ಕನ್ನಡ ಕಲಿಸುವ ಸಂಭ್ರಮ. ಉತ್ತರ ಕರ್ನಾಟಕ, ಮೈಸೂರು, ಮಂಗಳೂರು, ಧಾರವಾಡ ಹೀಗೆ ಬೇರೆ ಬೇರೆ ಶೈಲಿ ಕನ್ನಡ ಜತೆ ಪಾಪ ಳ, ಡ, ಹ, ಶ ಕಾರಗಳು ಹೆಚ್ಚಿನವರಿಗೆ ಕಷ್ಟವೆನಿಸುತ್ತಿತ್ತು. ಆದರೂ ನಿರಂತರವಾಗಿ ನಮ್ಮ ಕನ್ನಡ ಶಿಕ್ಷಣ ಮುಂದುವರಿದಿತ್ತು.

ಸರೀ ಮಾಡಿಕೊಡಿ!

ಓದು ಮುಗಿಸಿ ಮರಿಡೆಂಟಿಸ್ಟ್ ಆಗಿದ್ದೆವು(ಇಂಟರ್ನ್). ಕಮ್ಯುನಿಟಿ ಪೋಸ್ಟಿಂಗ್ ಹತ್ತಿರದ ಹಳ್ಳಿಗೆ ಹಾಕಿದ್ದರು.ಅಲ್ಲೊಂದು ದಿನ ಹೀಗೆ ಪೇಶೆಂಟ್ಸ್ ನೋಡಿ ಮಾತನಾಡುತ್ತಾ ಕುಳಿತಿದ್ದೆವು. ಕಾಲೇಜಿನ ಹುಡುಗಿಯೊಬ್ಬಳು ನಮ್ಮೆಡೆ ಬಂದಳು. ಹಲ್ಲು ಮುಂದಿದ್ದ ಕಾರಣ ಆರ್ಥೋಡಾಂಟಿಕ್ ಚಿಕಿತ್ಸೆ ಮಾಡಿಸಬೇಕು ಎಂಬುದು ಆಕೆಯ ಸ್ವಂತ ಇಚ್ಛೆ.( ಹಾಗೆ ನೋಡಿದರೆ ಬೇರೆಲ್ಲ ವಿಷಯಗಳಲ್ಲಿ ಗಂಡು ಮಕ್ಕಳಿಗೆ ಪ್ರಾಧಾನ್ಯತೆ ಸಿಕ್ಕರೆ ಈ ತಂತಿ ಹಾಕಿಸಿ ಹಲ್ಲು ಸರಿ ಪಡಿಸುವ ವಿಷಯದಲ್ಲಿ ಹೆಣ್ಣು ಮಕ್ಕಳಿಗೇ ಪ್ರಾಶಸ್ತ್ಯ. ಕಾರಣ ಅವಳು ಚೆಂದ ಕಂಡರೆ ಮದುವೆ ಸುಲಭ ! ಹಾಗಾಗಿಯೇ ಬೇರೆ ವಿಷಯಕ್ಕೆ ನಿರ್ಲಕ್ಷ್ಯ ಮಾಡಿದರೂ ಆರು ಏಳನೇ ತರಗತಿಯ ಹುಡುಗಿಯರನ್ನು ಕರೆತರುವುದು ಸಾಮಾನ್ಯ. ಕಾಲೇಜು ಹತ್ತುವವರೆಗೆ ಇವಳದ್ದೊಂದು ಹಲ್ಲು ಸರಿ ಮಾಡಿಕೊಡಿ; ಮತ್ತೆ ಮದುವೆಗೆ ಸರೀ ಆಗ್ತದೆ ಎನ್ನುವ ಬೇಡಿಕೆ ಸಾಮಾನ್ಯ) ಆದರೆ ಮನೆಯಲ್ಲಿ ಅಕ್ಷರವೇ ಬಾರದ ಕೃಷಿಕ ಅಪ್ಪನಿಗೆ
ಇದೆಲ್ಲ ತಿಳಿದಿರಲಿಲ್ಲ. ಹೇಳಿದರೂ ಮಗಳ ಮಾತು ಒಪ್ಪುವ ಸಾಧ್ಯತೆಯೂ ಇರಲಿಲ್ಲ. ಬೇರೆ ಕಡೆಯಾದರೆ ದುಡ್ಡೂ ಹೆಚ್ಚು, ಹೀಗಿರುವಾಗ ಅತಿ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುವ ನಮ್ಮಲ್ಲಿ ಚಿಕಿತ್ಸೆ ಪಡೆದು ಚೆಂದ ಮತ್ತು ಆತ್ಮವಿಶ್ವಾಸ ಎರಡೂ ಹೆಚ್ಚಿಸಿಕೊಳ್ಳಬೇಕೆಂಬುದು ಆಕೆಯ ಬಯಕೆ. ಅದಕ್ಕೆ ತಿಂಗಳಿಗೊಮ್ಮೆ ಮಣಿಪಾಲಕ್ಕೇ ಬರಬೇಕಿತ್ತು; ಆಕೆ ಸಿದ್ಧಳಿದ್ದಳು. ಅಪ್ಪನನ್ನು ಒಪ್ಪಿಸುವುದು ಹೇಗೆ? ಹಾಗಾಗಿ ಮನೆಯಿಂದ ಅಪ್ಪನನ್ನು ‘ಇನ್ನಷ್ಟು ಚೆಂದ ಮಾಡಿಸುವ ಸಲುವಾಗಿ ದೊಡ್ಡ ಡಾಕ್ಟರ್ ಮಾತನಾಡ್ತಾರೆ’ ಎಂದಷ್ಟೇ ಹೇಳಿ ಕರೆತಂದಿದ್ದಳು.

ನನು ಆಗ್ತದಾ?

ನಮಗೆಲ್ಲಾ ಆ ಹುಡುಗಿಯ ಧೈರ್ಯ ಮತ್ತು ತಿಳಿವಳಿಕೆ ಕಂಡು ಖುಷಿಯಾಯಿತು. ಆಕೆ ನಮ್ಮನ್ನು ಕುರಿತು ‘ ಹೇಗಾದ್ರೂ ಮಾಡಿ ಅಪ್ಪನಿಗೆ ಒಪ್ಪಿಸಿಯಲ್ಲಾ! ನೀವೆಲ್ಲಾ ಡಾಕ್ಟರ್, ಓದಿದವರು ಅಂತ ಅಪ್ಪ ಕೇಳ್ತಾರೆ. ನಂಗೆ ಈ ಹಲ್ಲಿನಿಂದ ನಗಲಿಕ್ಕೆ ಕೂಡಾ ಹೇಸಿಗೆ ಆಗ್ತದೆ. ಮತ್ತೆ ಹಲ್ಲು ಕ್ಲೀನ್ ಮಾಡಲಿಕ್ಕೂ ಕಷ್ಟ ಆಗ್ತದೆ. ಅಪ್ಪನಿಗೆ ಕೋಪ ಎಲ್ಲಾ ಜೋರುಂಟು—ಆದ್ರೆ ಎಂತಾದರೂ ಹೇಳಿ; ಬೇಕಾದ್ರೆ ಮದುವೆಗೆ ಸುಲಾಭ ಆಗ್ತದೆ ಅಂತಾರೂ ಹೇಳಿ ಇದೊಂದು ಮಾಡಿಕೊಡಿ ಪ್ಲೀಸ್’ ಎಂದು ಕೇಳಿದಳು. ಪ್ರಾಯಕ್ಕೆ ಬಂದ ಹೆಣ್ಣುಮಕ್ಕಳು ಹಲ್ಲಿಗೆ ಒಂದೆರಡು ವರ್ಷ ತಂತಿ ಹಾಕಿಸಬೇಕು ಎಂದರೆ ಪೋಷಕರು ಬೇಡ ಎನ್ನುವುದು ಸಹಜವೇ. ಅದರಲ್ಲಿಯೂ ಆ ಬಗ್ಗೆ ಮಾಹಿತಿಯೇ ಇಲ್ಲದಿದ್ದರೆ ಹೆದರಿಕೆಯೂ ಆಗುತ್ತದೆ. ಆ ಹುಡುಗಿಯ ಆಸೆ ಪೂರೈಸುವುದರ ಜತೆ ಜನರಿಗೆ ಶಿಕ್ಷಣ ನೀಡುವ ಕರ್ತವ್ಯವೂ ನಮ್ಮದಾಗಿತ್ತು. ಹೀಗಾಗಿ ಎಲ್ಲರೂ ಖುಷಿಯಿಂದ ಸಿದ್ಧರಾದೆವು. ನಾನು ಆಕೆಯ ಅಪ್ಪನನ್ನು
ಮಾತನಾಡಿಸಲು ಹೊರಟಿದ್ದೆ, ಅಷ್ಟರಲ್ಲಿ ಆ ಹುಡುಗಿ ಸ್ವಲ್ಪ ತಡೆದು‘ ಅಕ್ಕಾ, ಒಂದ್ನಿಮಿಷ ! ಎಂತ ಅಂದ್ರೆ ನೀವು ತುಂಬಾ ಸಣ್ಣ ಪ್ರಾಯದ ಹಾಗೆ ಕಾಣ್ತೀರಾ! ಬೇರೆ ಯಾರಾದರೂ ಸ್ವಲ್ಪ ದೊಡ್ಡವರು ಹೋದ್ರೆ ಒಳ್ಳೆಯದು’ ಎನ್ನುತ್ತಾ ನಮ್ಮ ಗುಂಪಿನಲ್ಲೇ ಎತ್ತರ, ದಪ್ಪವಾಗಿದ್ದ ಯಿ ಲಿಂಗ್ ಕಡೆ ನೋಡಿದಳು. ಮತ್ತೆ ಅನುಮಾನಿಸಿ ತನ್ನಷ್ಟಕ್ಕೆ ‘ಫಾರಿನರ್ ಆದ್ರೆ ಮತ್ತೂ ಒಳ್ಳೆಯದು, ಆದ್ರೆ ಇವರಿಗೆ ಕನ್ನಡ ಬರ್ತದಾ ಇಲ್ಲವಾ’ ಎಂದುಕೊಂಡಳು. ನಮ್ಮ ಲಿಂಗ್‌ಗೆ ಅದಷ್ಟೇ ಸಾಕಾಯಿತು ‘ನನು ಆಗ್ತದಾ? ಕನ್ನಡ ಬರ್ತದೆ, ಚೆನ್ನಾಗಿ ಮಾತಾಡ್ತದೆ ನನು’ ಎನ್ನುತ್ತಾ ಹೊರಟೇ ಬಿಟ್ಟ. ನಿಜವಾಗಿಯೂ ಲಿಂಗ್ ಸಾಕಷ್ಟು ಚೆನ್ನಾಗಿಯೇ ಕನ್ನಡ ಕಲಿತಿದ್ದ; ಜತೆಗೆ ಒಳ್ಳೆಯ ಮಾತುಗಾರ. ಹೀಗಾಗಿ ನಾವೆಲ್ಲರೂ ಸುಮ್ಮನಾದೆವು.

ಲಿಂಗ್ ಅಂತೂ ಒಳ್ಳೆಯ ಉಮೇದಿನಲ್ಲಿ ಫುಲ್ ಸಿನಿಮಾ ಸ್ಟೈಲಿನಲ್ಲೇ ಹೊರಟ. ಹುಡುಗಿ ನಮ್ಮ ಹತ್ತಿರವೇ ನಿಂತಿದ್ದಳು. ಸ್ವಲ್ಪ ದೂರದಲ್ಲಿ ಲಿಂಗ್ ಮತ್ತು ಈ ಹುಡುಗಿಯ ಅಪ್ಪನ ಮಧ್ಯೆ ಮಾತುಕತೆ ನಡೆಯುತ್ತಿದ್ದದ್ದು ಕಾಣುತ್ತಿತ್ತು, ಕೇಳಿಸುತ್ತಿರಲಿಲ್ಲ. ಅಪ್ಪನ ಮುಖದ ಭಾವನೆ ಕ್ಷಣಕ್ಷಣವೂ ಬದಲಾದಂತೆ ಅನ್ನಿಸುತ್ತಿತ್ತು. ಸುಮಾರು ಐದಾರು ನಿಮಿಷಗಳ ನಂತರ ಅಪ್ಪ ಸರಸರ ನಮ್ಮತ್ತ ನಡೆದು ಬಂದವರೇ ‘ ಎಂತದಾ ಇದು, ಚೆಂದ ಮಾಡುವುದಾ? ನಿನ್ ಮಾತ್ ಕೇಳಿ ಇಲ್ಲಿಗೆ ಬಂದಿದ್ ಆತ್. ಎಂತ ಸಾವು ಮರ್ರೆ! ಇವಳಿಗೆ ಮರಲ್ ಹಿಡ್ದೀತು..ನಡಿಯಾ ಮನೇಗೆ’ ಎಂದು ಸಿಟ್ಟಿನಲ್ಲಿ ಕೆಂಪಾಗಿ ಮಗಳ ಕೈ ಹಿಡಿದು ಹೊರಟೇ ಬಿಟ್ಟರು. ಮಗಳು ‘ ಇಲ್ ಕೇಳ್ ಅಪ್ಪಯ್ಯಾ’ ಎನ್ನುತ್ತಲೇ ಇದ್ದಳು. ಹೀರೋನಂತೆ ಹೋಗಿದ್ದ ಲಿಂಗ್ ಕಂಗಾಲಾಗಿದ್ದ, ನಮಗೆ ತಲೆಬುಡ ಅರ್ಥವಾಗಿರಲಿಲ್ಲ. ಒಟ್ಟು ಆ ದಿನ
ಮಣಿಪಾಲಕ್ಕೆ ಬಸ್‌ನಲ್ಲಿ ಬರುವಾಗ ಎಲ್ಲರಿಗೂ ಬೇಸರ, ಅಷ್ಟು ಸಿಟ್ಟು ಮಾಡುವ ಅಗತ್ಯ ಇತ್ತೇ ಎಂಬ ಪ್ರಶ್ನೆ. ಮರುದಿನ ಮತ್ತೆ ಪೋಸ್ಟಿಂಗ್ ಗೆ ಹೋದಾಗ ಆ ಹುಡುಗಿ ಸಣ್ಣ ಮುಖ ಮಾಡಿ ಕಾಯುತ್ತಿದ್ದಳು ‘ ಈ ಚೈನೀಸ್ ಡಾಕ್ಟ್ರು ಎಂತ ಹೇಳೀರು? ಅಪ್ಪಯ್ಯಂಗೆ ವಿಪ್ರೀತ ಸಿಟ್ ಬಂದಿತ್ತು. ಮತ್ತೆ ಮರ್ಯಾದಿ ತೆಗೆದ್ರು ಅಂತ ಗಲಾಟೆ. ಇನ್ನು ಟ್ರೀಟ್‌ಮೆಂಟ್ ಬಿಡೂದೆ ಸೈ’ ಎಂದು ನೊಂದುಕೊಂಡಳು. ಆಶ್ಚರ್ಯವಾಗಿ ನಮ್ಮ ಲಿಂಗ್ ನನ್ನು ಕೇಳಿದರೆ ತಾನು ಅವರಿಗೆ ಎಜುಕೇಟ್ ಮಾಡಲು ಸಿಕ್ಕಾಪಟ್ಟೆ ಪ್ರಯತ್ನಿಸಿದರೂ ಆಗಲಿಲ್ಲ ಎಂದು ಅವನ ಅಳಲು.

ಲಿಂಗ್ ನ ವಿವರಣೆ

ಎಲ್ಲಿ ತಪ್ಪಿತು ಎಂಬ ಗೊಂದಲ ನಮ್ಮೆಲ್ಲರಿಗೆ. ಕಡೆಗೆ ನೋಡೋಣ ಎಂದು ಏನು ಹೇಳಿದೆ ಎಂದು ಲಿಂಗ್ ನನ್ನೇ ಪ್ರಶ್ನಿಸಿದೆವು. ಅವನ ಉತ್ತರ ಹೀಗಿತ್ತು…‘ ನಮಸ್ತೆ. ನಿಮ್ಮ ಮಗಳು ಚಂದ ಇದ್ದಾಲೆ. ಆದರೆ ಅವಲ ಮುಖ ನೋಡಿ; ಹುಬ್ಬು ತುಂಬಾ ಇದೆ. ಅದು ಅವಲ ತಪು ಅಲ್ಲ. ನಿಮಗೂ ಹುಬ್ಬು ಹೆಚ್ಚು ಇದೆ; ಅದಕ್ಕೇ ಅವಲಿಗು ಬಂದಿದೆ. ಹುಬ್ಬು ಹೆಚ್ಚಿದ್ರೆ ಬ್ಯೂಟಿ ಅಲ್ಲ ಮತ್ತೆ ಅದರಲ್ಲಿ ಸನ್ನ ಸನ್ನ ಹುಲ ಎಲ್ಲಾ ಬಂದು ತಿಂದು ಬಿಡುತ್ತೆ. ಕ್ಲೀನಿಂಗು ಕಷ್ಟ ಆಗ್ತದೆ. ಸ್ಮೆಲ್ ಬರುತೆ. ಆದರೆ ಅವಲಿಗೆ ಬಯ ಬೇಡ. ಹುಬ್ಬು ಸರಿ ಮಾಡಬಹುದು. ಅದಕ್ಕೆ ತಂತಿ ಹಾಕಿ ಸರಿ ಮಾಡಬೇಕು. ಆಗ ಹುಬ್ಬು ಪೂರ್ತಿ ಹೋಗ್ತದೆ. ನಾಕು ಹಲ್ಲು ಕಿತ್ತು ಹಾಕ್ತಾರೆ, ಆಗ ಜಾಗ ಸಿಕ್ತದೆ. ಆಗ ಹುಬ್ಬು ನಿಧಾನವಾಗಿ ಸರಿ ಬರ್ತದೆ. ಹುಬ್ಬು ಇಲ್ಲದೇ ಇದ್ರೆ ಮುಖ ಚನಾಗಿ ಕಾನ್ತದೆ. ನಕ್ಕರೆ ಮತ್ತೂ ಚಂದ. ಇದಕ್ಕೆ ಎರಡು ವರ್ಷ ಟೈಂ ಬೇಕು. ನಿನ ಟೈಂನಲ್ಲಿ ಹೀಗೆ ಚೆಂದ ಮಾಡುದು ಗೊತ್ತಿರಲಿಲ್ಲ. ಈಗ ನೀನೂ ಮತ್ತು ಅವಲು ಇಬರು ಹುಬ್ಬು ತೆಗೆಸಿ. ಹುಬ್ಬು ಇಲದೆ ಇದ್ರೆ ಮಗಳಿಗೆ ಮದುವೆಯೂ ಬೇಗ ಆಗ್ತದೆ. ನನು ಹಲ್ಲಿಹಲ್ಲಿಗೆ ಹೋಗಿ ಹೀಗೆ ಹೇಲಿ ನಿನಗೆ ಬುದ್ದಿ ಕಲಿಸಲು ಬರ್ತದೆ. ಪಾಪ, ನಿಮ್ ಮಗಳಿಗೆ ಹುಬ್ಬು ತೆಗೆಸುವ ಆಸೆ ಇದೆ; ನಿನು ಹುಂ ಬೇಗ ಹೇಲು’

ನಮಗೆ ನಗು- ಅಳು ಒಟ್ಟಿಗೇ ಬಂದಿತ್ತು. ಆ ಹುಡುಗಿಯಂತೂ ಇವರೆಂತ ಹೇಳುತ್ತಾರೆ ಎಂದು ದಿಗ್ಭ್ರಮೆಯಾಗಿ ನಿಂತಿದ್ದಳು. ನಮ್ಮ ಲಿಂಗ್, ಹಲ್ಲಿನ ಉಬ್ಬನ್ನು ‘ಹುಬ್ಬು’ ಎಂದು ಆ ಅಪ್ಪನ ಮುಂದೆ ವರ್ಣಿಸಿದ್ದು ಈ ಅನಾಹುತಕ್ಕೆ ಕಾರಣವಾಗಿತ್ತು. ಹಲ್ಲು ಮುಂದಿದೆ ಎಂದಿದ್ದರೆ ಸಾಕಿತ್ತು, ಉಬ್ಬು ಎನ್ನುವ ಗ್ರಾಂಥಿಕ ಶಬ್ದ ನಾವು ಕಲಿಸಿದ್ದು, ಆಗಾಗ್ಗೆ ಅ/ಹ/ಉಕಾರದ ಬಗ್ಗೆ ತಿದ್ದಿದ್ದು, ಉಬ್ಬು ಹುಬ್ಬಾಗಿ ವಿಪರೀತಕ್ಕೆ ಹೋಗಿತ್ತು. ಅಪ್ಪನಿಗೆ ತನ್ನ ಹುಬ್ಬು ದಪ್ಪ, ನಿಮ್ಮಿಂದಲೇ ಮಗಳಿಗೆ ಬಂದಿದ್ದು, ಹುಬ್ಬು ಪೂರ್ತಿ ಹೋಗುತ್ತದೆ , ಹಲ್ಲು ಕೀಳಬೇಕು ಎಂದಿದ್ದು ಎಲ್ಲವೂ ಸಿಟ್ಟು ತರಿಸಿದ್ದು ಸಹಜವೇ ಆಗಿತ್ತು. ಮತ್ತೆ ಹೇಗೋ ಮಾಡಿ ಅಪ್ಪನನ್ನು ಕರೆಸಿ ಸರಿಯಾಗಿ ವಿಷಯ ವಿವರಿಸಿದಾಗ ಅವರಿಗೂ ನಗು ಬಂದು ‘ಆಗ್ಬಹುದು ಮರ್ರೇ, ಹಲ್ ಮುಂದಿದೆ ಅಂದಿದ್ರೆ ಸಾಕಿತ್ತು; ಹುಬ್ಬ್ ಅಂದ್ ಮಂಡೆ ಬಿಸಿ ಆಗಿತ್ತ್ ! ಎಂತ ಆದ್ರೂ ಈ ಜನ ಕನ್ನಡ ಮಾತಾಡೂದು ಮೆಚ್ಚೂದೆ’ ಎಂದು ಶಬ್ಬಾಸ್‌ಗಿರಿ ಸಿಕ್ಕಿತ್ತು ಪೆಚ್ಚಾದ
ಲಿಂಗ್‌ಗೆ. ಅಂತೂ ಆ ಹುಡುಗಿ ತನ್ನಪ್ಪನ ಅನುಮತಿಯೊಂದಿಗೆ ಮಣಿಪಾಲಕ್ಕೆ ಬಂದು ಚಿಕಿತ್ಸೆ ಪಡೆದಳು, ಮತ್ತು ಲಿಂಗ್‌ಗೆ ‘ಹುಬ್ಬು ಡಾಕ್ಟರ್’ ಹೆಸರು ಸಿಕ್ಕಿತು ಎಂಬುದರೊಂದಿಗೆ ಆ ಪ್ರಸಂಗ ಸುಖಾಂತ್ಯ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

14 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading