ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಕೆ ಎಸ್ ಚೈತ್ರಾ ಅಂಕಣ – ಶುಭವಿದಾಯ; ಮತ್ತೆ ಭೇಟಿಯಾಗೋಣ!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

28

ಎಲ್ಲಿ ಸೇರಬೇಕು, ಹೇಗೆ ಮಾಡಬೇಕು, ಯಾರೆಲ್ಲಾ ಬರುತ್ತಾರೆ, ಏನೆಲ್ಲಾ ಬದಲಾಗಿರಬಹುದು ಹೀಗೆ ಸರಿಸುಮಾರು ಒಂದು ವರ್ಷದಿಂದ ನಮ್ಮ ಪ್ಲಾನಿಂಗ್ ಶುರುವಾಗಿತ್ತು. ದಿನಕ್ಕೊಂದು ಸಲಹೆ, ಸೂಚನೆ, ವಾದ-ವಿವಾದ, ಬೇಕು-ಬೇಢಗಳ ನಡುವೆಯೇ ಎಲ್ಲವೂ ತೀರ್ಮಾನವಾಗಿ ಸಂಭ್ರಮದ ತಯಾರಿ. ಅಂದ ಹಾಗೆ ಇದು ಇಪ್ಪತ್ತು ವರ್ಷಗಳ ನಂತರ  ಮಣಿಪಾಲದ ಕಾಲೇಜಿನ ಗೆಳೆಯ-ಗೆಳತಿಯರ ಪುನರ್ ಮಿಲನ ಮಣಿಪಾಲದಲ್ಲಿ  ಅಂದರೆ ಬೀಸ್ ಸಾಲ್ ಬಾದ್!! ದಂತವೈದ್ಯಕೀಯಕ್ಕೆ  ವಿದ್ಯಾರ್ಥಿಗಳಾಗಿ ಸೇರಿ ಇಪ್ಪತ್ತೈದು ವರ್ಷಗಳಾದ ಸವಿ ನೆನಪಿಗೆ  2016 ಇಸವಿಯಲ್ಲಿ  ಮಣಿಪಾಲದಲ್ಲಿಯೇ ನಮ್ಮ ಬ್ಯಾಚಿನ ರಿಯೂನಿಯನ್ ಆಯೋಜಿಸಿದ್ದರು. ನಮಗೆಲ್ಲರಿಗೂ ಒಂಥರಾ ಸಂಭ್ರಮ, ಕಾತುರ, ಆತಂಕ ಹೀಗೆ ಸಮ್ಮಿಶ್ರ ಭಾವನೆಗಳು.

ಕರಾವಳಿಯ ಮಣಿಪಾಲವೆಂಬ ಊರಿಗೆ ಕಣ್ ಕಣ್ ಬಿಡುತ್ತಾ ಅಡಿಯಿಟ್ಟಿದ್ದ ನಮಗೆ ಅದೊಂದು ಹೊಸ ಪ್ರಪಂಚ. ಕಠಿಣ ಪಾಠಗಳು, ಅಪರಿಚಿತ ಪರಿಸರ, ದೇಶ-ವಿದೇಶಗಳ ವಿಭಿನ್ನ ಸಂಸ್ಕೃತಿಯ ಸಹಪಾಠಿಗಳು ಹೀಗೆ ಹೊಸದರಲ್ಲಿ ಎಲ್ಲವೂ ಕಷ್ಟವೇ ಆಗಿತ್ತು. ನಿಧಾನವಾಗಿ  ಮಣಿಪಾಲ ನಮ್ಮನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಮೊದಲಿಗೆ ಪರವಾಗಿಲ್ಲ ಎನಿಸಿ ಕಡೆಗೆ ರೂಢಿಯಾದಂತೆ ಎಂಡ್ ಪಾಯಿಂಟ್, ಉಡುಪಿ ಬಸ್ಸು, ವುಡ್ ಲ್ಯಾಂಡ್ಸ್, ಹಾಸ್ಟೆಲ್ಲಿನ ಸರೋಜಿನಿ ಬ್ಲಾಕ್, ಬಾಂಬೆ ಮೆಸ್ ಎಲ್ಲವೂ ನಮ್ಮದೇ ಎನ್ನುವಷ್ಟು ಮೋಹ ಬೆಳೆಯಿತು.

ಹೊಸದರಲ್ಲಿ ಮಣಿಪಾಲದಲ್ಲಿ ಸಿಕ್ಕಾಪಟ್ಟೆ ಬಿಸಿಲು ಎಂದು ಗೊಣಗಾಡುತ್ತಿದ್ದವರು ಐದನೇ ವರ್ಷದಲ್ಲಿ ‘ಸೆಕೆ  ಇದ್ರೆ ಓಕೆ, ಈ ಮಳೆ – ಚಳಿ ಭಯಂಕರ ಪಿರಿ ಪಿರಿ‘ ಎಂದು ನಮ್ಮೂರನ್ನೇ ಬೈಯ್ಯುವಷ್ಟು ಬದಲಾದೆವು. ಬೋಳು ಗುಡ್ಡದ ಮೇಲಿನ ಮಣಿಪಾಲ, ಜಗತ್ತಿನ ಮುಕುಟ ಮಣಿ ಅನ್ನಿಸಿದ್ದು ಹೇಗೆ ಗೊತ್ತಿಲ್ಲ. ಆದರೆ ಓದು ಮುಗಿಸಿ, ದೊಡ್ಡ ಸೂಟ್ ಕೇಸ್‌ಗಳಲ್ಲಿ ಬಟ್ಟೆ-ಬರೆ ಎಲ್ಲಾ ತುಂಬಿ ಮರಳಿ ಮನೆಗೆ ಬರುವಾಗ ಸಿಕ್ಕಾಪಟ್ಟೆ ಬೇಸರವಾಗಿತ್ತು. ಒಟ್ಟಿನಲ್ಲಿ ಮಣಿಪಾಲಕ್ಕೆ ಹೋಗುವಾಗಲೂ ಅಲ್ಲಿಂದ ಬರುವಾಗಲೂ ಕಣ್ಣು ಕೆಂಪು, ಮನಸ್ಸು ಭಾರ! ಮಣಿಪಾಲ ಒಮ್ಮೆ ಬಿಟ್ಟು ಬಂದ ಮೇಲೆ ಮತ್ತೊಮ್ಮೆ ಅಲ್ಲಿ ಹೋದರೂ ಅದು ನಮ್ಮದಾಗಿ ಉಳಿದಿರಲಿಲ್ಲ. ಅದೇ ಕಟ್ಟಡ, ಅದೇ ರಸ್ತೆ, ಅದೇ ಮರ-ಗಿಡ ಆದರೆ ಇದ್ದ ಜನ ಬೇರೆಯಾಗಿದ್ದರು. ಐದು ವರ್ಷ ಅಷ್ಟೇ ನಮ್ಮದಾಗಿತ್ತು ಆ ಮಣಿಪಾಲ. 

  ಕಪ್ಪೆಗಳನ್ನು  ತಕ್ಕಡಿಗೆ ಹಾಕಿದಂತೆ!

ದಂತವೈದ್ಯರಾಗಿ ನಮ್ಮ ಸಹಪಾಠಿಗಳು ಜಗತ್ತಿನೆಲ್ಲೆಡೆ ನೆಲೆಸಿದರು; ಕರ್ನಾಟಕದಲ್ಲಿ  ಇರುವವರು ನಾವು ನಾಲ್ವರು ಮಾತ್ರ. ಹಾಗೆ ಬೇರೆಡೆ ಹೋದ ಮೇಲೆ ಮತ್ತೆ ಮಣಿಪಾಲಕ್ಕೆ ಬಂದವರೂ ತೀರಾ ಕಡಿಮೆ.  ತೀರಾ ಹತ್ತಿರದ ಗೆಳೆಯ/ತಿಯರನ್ನು ಬಿಟ್ಟರೆ ಇತರರ ಸಂಪರ್ಕವೂ ಇರಲಿಲ್ಲ. ಆದರೆ ದಶಕದಿಂದೀಚೆಗೆ  ಸಾಮಾಜಿಕ ಮಾಧ್ಯಮಗಳ ಮೂಲಕ ಕಡಿದುಹೋಗಿದ್ದ ಸಂಪರ್ಕ ಮತ್ತೆ ಬೆಳೆಯಿತು. ಎಷ್ಟೇ ಚಾಟ್ ಮಾಡಿದರೂ ಪರಸ್ಪರ ಭೇಟಿಯಾಗಿ ಕಣ್ಣಾರೆ ನೋಡುವ, ಮಾತನಾಡಿದ ಹಾಗಾದೀತೇ? ಆಗ ಹೊಳೆದಿದ್ದು ಈ ರಿಯೂನಿಯನ್ ಪ್ಲಾನ್. ಮೊದಲು ಗೋವಾ, ದೆಹಲಿ, ದುಬೈ ಹೀಗೆ ಎಲ್ಲೆಲ್ಲೋ ಸುತ್ತಿ ಕಡೆಗೆ ಮಣಿಪಾವನ್ನೇ ಆಯ್ಕೆ ಮಾಡಲಾಗಿತ್ತು. ಎಷ್ಟಾದರೂ ನಮ್ಮೆಲ್ಲರ ಗೆಳೆತನಕ್ಕೆ ಕಾರಣವಾದ ಸ್ಥಳ, ವೃತ್ತಿ ಶಿಕ್ಷಣದ ಮೂಲಕ ಸ್ವತಂತ್ರ ಜೀವನಕ್ಕೆ ನಾಂದಿ ಹಾಡಿದ ಊರಲ್ಲವೇ? ಸ್ಥಳ ನಿರ್ಧಾರವಾಯಿತು ಸರಿ; ಆದರೆ ದೂರದ ಕೆನಡಾ, ಅಮೆರಿಕಾ, ಕುವೈತ್, ಇಂಗ್ಲೆಂಡ್, ದೆಹಲಿ, ಮುಂಬೈ ಎಲ್ಲಾ ಕಡೆಗಳಿಂದ ಬರುವವರನ್ನೆಲ್ಲಾ ಒಟ್ಟಿಗೇ ಸೇರಿಸುವುದೆಂದರೆ ಕಪ್ಪೆಗಳನ್ನು ತಕ್ಕಡಿಗೆ ಹಾಕಿದಂತೆಯೇ! ಪ್ರಯಾಣದ ಟಿಕೆಟ್ ಏನೋ ಸುಲಭವಾಗಿ ಅವರವರೇ ಮಾಡಿಕೊಂಡರು. ಆದರೆ ಇಲ್ಲಿ ಬಂದ ಮೇಲೆ ಊಟ-ವಸತಿ- ಕಾರ್ಯಕ್ರಮ ಈ ಎಲ್ಲಾ ವ್ಯವಸ್ಥೆಯ ಹೊಣೆ ದೊಡ್ಡದು. ಅಂತೂ ಎಲ್ಲಾ ಸುಸೂತ್ರವಾಗಿ ನಡೆದು ಕಡೆಗೊಮ್ಮೆ ಮಣಿಪಾಲಕ್ಕೆ ಹೊರಡುವಾಗ ಸಹಪಾಠಿಗಳನ್ನು ನೋಡುವ ಸಂಭ್ರಮ ಉಕ್ಕುತ್ತಿದ್ದರೂ ಮನದ ಮೂಲೆಯಲ್ಲಿ ಸಂಶಯದ ಎಳೆ. ಹಳೆ ನೆನಪಿನ ಹಗ್ಗ ಹಿಡಿದು ಜಗ್ಗುತ್ತಿದ್ದೇವೆ.. ಈ ಭಾರ ತಡೆದೀತೇ?

ಮೊದಲ ದಿನ ಸಂಜೆ ಹೊಟೆಲ್‌ನಲ್ಲಿ ಕಾಲಿಟ್ಟ ಕೂಡಲೇ ಕೆಲವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಮನಸ್ಸು ಎಷ್ಟೇ ಯಂಗ್ ಅಂದರೂ ಕಾಲನ ಪ್ರಭಾವ ಆಗದೇ ಇರಲು ಸಾಧ್ಯವೇ? ಏಕಾಏಕಿ ಇಪ್ಪತ್ತು ವರ್ಷಗಳ ನಂತರ ಭೇಟಿಯಾಗಿ ಮಾತು ಆರಂಭಿಸುವಾಗ ಸ್ವಲ್ಪ ತಡಬಡಾಯಿಸಿದ್ದು ಸಹಜ.ಕಾಫಿ ಕುಡಿಯುತ್ತ ಸಂಕೋಚದಿಂದ ನಿಧಾನವಾಗಿ ಮಾತು ಆರಂಭವಾಗಿದ್ದು ಮೆಸ್ ಕಾಫಿ ಕುರಿತು. ನಂತರ ಗಾಡಿಯಲ್ಲಿನ ಗೋಭಿ ಪರಾಠ, ಮೂಲೆ ಅಂಗಡಿ ಕಬ್ಬಿನ ಹಾಲು, ಬೀಚ್‌ನಲ್ಲಿದ್ದ ಬೊಂಡ, ಹಳೆ ತಮಿಳು ಸಿನಿಮಾ, ನಿದ್ದೆಗೆಟ್ಟು ಓದು, ನೋಟ್ಸು ಕಾಪಿ ಮಾಡು, ಹಳ್ಳಿಗಳಲ್ಲಿ ಕ್ಯಾಂಪು ಒಂದೊಂದೇ ನೆನಪಿನ ಹನಿ ಜಿನುಗುತ್ತಾ ಊಟಕ್ಕೆ ಏಳುವಷ್ಟರಲ್ಲಿ ಪ್ರವಾಹವಾಗಿ ಭೋರ್ಗರೆಯತೊಡಗಿತ್ತು. ನಮ್ಮ ಅಂದಿನ ನಿತ್ಯದ ಚಟುವಟಿಕೆಗಳು ಇಂದು ಸುಂದರ ನೆನಪುಗಳಾಗಿದ್ದವು. ತೀರಾ ಸಾಮಾನ್ಯವೆನಿಸುವ ಆ ಸಣ್ಣ ಪುಟ್ಟ ಘಟನೆಗಳ ಮೆಲುಕು ಸಲೀಸಾಗಿ ನಮ್ಮೆಲ್ಲರನ್ನೂ ಮತ್ತೆ ಆ ಕಾಲಘಟ್ಟಕ್ಕೆ ಕರೆದೊಯ್ದು ಸ್ನೇಹಸೂತ್ರದಲ್ಲಿ ಬಂಧಿಸಿಬಿಟ್ಟವು.

ನೆನಪುಗಳಲ್ಲಿ ಮುಳುಗೇಳುತ್ತಾ ಕಾಲನೆಷ್ಟು ವಿಚಿತ್ರವೆಂದರೆ ಸ್ವರೂಪದ ಜತೆ ಸ್ವಭಾವವನ್ನೂ ಬದಲಿಸಿದ್ದಾನೆ ಅನ್ನಿಸಿದ್ದು ಸುಳ್ಳಲ್ಲ. ಆ ದಿನಗಳಲ್ಲಿ ನಾವು ಹೀಗೆ ಎಂದು ಭಾವಿಸಿದ್ದ ವ್ಯಕ್ತಿ  ಈಗ ಹಾಗಿರಲೇ ಇಲ್ಲ. ಮೊದಲ ವರ್ಷದಲ್ಲಿ ಯಾವಾಗಲೂ ಹೆದರಿ ಮೂಲೆಯಲ್ಲಿ ಇರುತ್ತಿದ್ದ ಹುಡುಗಿ ಈಗ ಮಾತುಕತೆಯಲ್ಲಿ ಮುಂದಾಳು. ಪುಂಡನೆಂದು ಹೆಸರಾಗಿದ್ದವ ಈಗ ತಮಾಷೆ ಮಾಡಿದರೂ ಸಭ್ಯತೆಯ ಎಲ್ಲೆ ದಾಟಲಿಲ್ಲ. ರಿಸರ್ವ್ಡ್ ಎಂದು ಭಾವಿಸಿ ದೂರ ಇಟ್ಟಿದ್ದವ ಪಕ್ಕಾ ಮನೆಹುಡುಗನಂತೆ ಹತ್ತಿರವಾಗಿದ್ದ. ಹುಡುಗಿಯರ ಹಿಂದೆ ತಿರುಗುತ್ತಾ ಕ್ಯಾಸನೋವಾ ಎನಿಸಿಕೊಂಡಿದ್ದವ ಈಗ ಮಗನ ಬಗ್ಗೆ ಚಿಂತೆ ಮಾಡುತ್ತಿದ್ದ. ಮದ್ರಾಸಿಗಳು ಎಂದು ದಕ್ಷಿಣಭಾರತೀಯರನ್ನು ತಿರಸ್ಕಾರದಿಂದ ನೋಡುತ್ತಿದ್ದವ ಚೆನ್ನೈನಲ್ಲಿ ಸೆಟಲ್ ಆಗಿದ್ದ. ಓದುವಾಗ ಇದ್ದ ಬೇರೆ ರಾಜ್ಯ, ದೇಶ, ಸಂಸ್ಕೃತಿ, ಬ್ಯಾಚು ಎಲ್ಲವೂ ಮರೆಯಾಗಿ ಉಳಿದದ್ದು ಒಂದೇ ಮಧ್ಯವಯಸ್ಸು ಸಮೀಪಿಸುತ್ತಿರುವ ಸಂಸಾರಸ್ಥರ ವೃತ್ತಿ, ವೈಯಕ್ತಿಕ ಬದುಕಿನ ಸುಖಸಂಭ್ರಮ ಮತ್ತು ದುಃಖ ದುಮ್ಮಾನಗಳು!

ಇದು ಸ್ನೇಹಿತರ ಸುದ್ದಿಯಾದರೆ ನಮಗೆ ಕಲಿಸಿದ ಪ್ರೊಫೆಸರ್‌ಗಳನ್ನು ಭೇಟಿಯಾಗುವಾಗ ತುಸು ಗೊಂದಲವಿತ್ತು. ಸಾವಿರಾರು ಜನರಿಗೆ ಕಲಿಸಿದ್ದಾರೆ; ನಮ್ಮನ್ನು ಮರೆತಿರಬಹುದು, ಬೈಯ್ಯಬಹುದು ಎಂಬ ಆತಂಕ ಕಾಡುತ್ತಿತ್ತು. ಆಹ್ವಾನಿಸಿದ ಎಲ್ಲರೂ ಬಂದರು. ಕುಶಲೋಪರಿ ವಿಚಾರಿಸಿದ ನಮ್ಮ ನೆನಪಿದೆಯೇ ಎಂಬ ಪ್ರಶ್ನೆಗೆ ‘ನೆನಪಿಲ್ಲದೇ ಏನು? ನಿಮ್ಮ ಬ್ಯಾಚ್ ಮರೆಯುವಂತೆಯೇ ಇಲ್ಲ. ಹೇಳಿದ್ದನ್ನು ಕೇಳಿದಿರಿ, ಚೆನ್ನಾಗಿ ಕಲಿಯುತ್ತಿದ್ದಿರಿ ಎಂಬ ಕಾರಣಕ್ಕೆ ಬೈದು ತಿದ್ದಿ ಕಲಿಸಿದೆವು. ಕಷ್ಟಪಟ್ಟು ಕಲಿತು ಒಳ್ಳೆಯ ದಂತವೈದ್ಯರಾಗಿದ್ದೀರಿ. ನೀವು ಎಲ್ಲೇ ಇದ್ದರೂ ನಿಮ್ಮ ಸುದ್ದಿ ನಮಗೆ ತಲುಪುತ್ತದೆ. ಹಾಗೆ ಕೇಳುವಾಗ ನಮ್ಮ ಶಿಷ್ಯರು ಎಂಬ ಸಾರ್ಥಕ ಭಾವ ಮೂಡುತ್ತದೆ ಎಂದಾಗ ನಮ್ಮೆಲ್ಲರ ಮನಸ್ಸು ಹಸಿ ಹಸಿ. ಪ್ರೊಫೆಸರ್‌ಗಳಿಗೆ ಸನ್ಮಾನ, ಸ್ನೇಹಿತರೊಡನೆ ಕಾಲೇಜಿನಲ್ಲಿ ತಿರುಗಾಟ, ತಡರಾತ್ರಿಯವರೆಗೆ ಹರಟೆ, ಮೆಸ್‌ನಲ್ಲಿ ಊಟ, ಹೋಟೆಲ್‌ನಲ್ಲಿ ಪಾರ್ಟಿ, ಬೀಚ್‌ನಲ್ಲಿ ಮಸ್ತಿ ಎಲ್ಲದರ ಮಧ್ಯೆ ಎರಡು ದಿನ ಕಳೆದದ್ದು ಎರಡು ನಿಮಿಷದಂತೆ! ಮನೆ, ಕುಟುಂಬ, ಕ್ಲಿನಿಕ್ ಎಲ್ಲಾ ಜಂಜಾಟ ಬಿಸುಟು ಉತ್ಸಾಹ ಹುರುಪಿನಿಂದ ಹದಿಹರೆಯ ಬಂದವರಂತೆ ಕುಣಿದಾಡಿದೆವು (ಕೈಕಾಲು ಮಿಡ್ಲ್  ಏಜು ಎಂದರೂ ಮನಸ್ಸು ಟೀನೇಜು ಎಂದು ಹಾಡುತ್ತಿತ್ತು ). ಎಲ್ಲರನ್ನೂ ಬೀಳ್ಕೊಟ್ಟು ಮರಳಿ ಪಯಣಿಸುವಾಗಲೇ ಮುಂದಿನ ಮೀಟಿಂಗ್ ಬಗ್ಗೆ ಚರ್ಚೆ ಶುರುವಾಗಿತ್ತು!

ಮಿಲನ ; ಸ್ಟುಡೆಂಟ್ಸ್ ರಿಯೂನಿಯನ್!

ಈ ವರ್ಷ ಮೇ ತಿಂಗಳಲ್ಲಿ ಡಾ. ಮುಜಾಹಿದ್ (ನನ್ನ ವಿದ್ಯಾರ್ಥಿ) ಮನೆಗೆ ಬಂದು ತಮ್ಮ ರಿಯೂನಿಯನ್ ಕಾರ್ಯಕ್ರಮಕ್ಕೆ ಬರಬೇಕು ಎಂದು ಆಹ್ವಾನಿಸಿದಾಗ ನನಗೆ ಎರಡು ಮನಸ್ಸು. ಶರಾವತಿ ಡೆಂಟಲ್ ಕಾಲೇಜಿನಲ್ಲಿ ಕಲಿಸಿದ್ದು ಒಂದೂವರೆ ವರ್ಷ. ನಂತರ ಅಮೆರಿಕಾ, ಕಡೆಗೆ ಬೆಂಗಳೂರಿನಲ್ಲಿ ವಾಸ ನನ್ನದು. ಬಹಳಷ್ಟು ವಿದ್ಯಾರ್ಥಿಗಳ ಪರಿಚಯವೇ ಇಲ್ಲ. ಹೋಗಲಿ ನನ್ನ ಜತೆಗಿದ್ದ ಸಹೋದ್ಯೋಗಿಗಳೂ ಅಲ್ಲಿಲ್ಲ. ಹೀಗಿದ್ದಾಗ ಹೋಗಿ ಮಾಡುವುದೇನು? ಜತೆಯಲ್ಲಿ ನಾನು ಪಾಠ ಮಾಡಿದ ವಿದ್ಯಾರ್ಥಿಗಳು ಹೇಗಿದ್ದಾರೆ ಏನು ಮಾಡುತ್ತಿದ್ದಾರೆ ಎಂದು ತಿಳಿಯುವ ಹಂಬಲ. ಕಡೆಗೆ ಹೇಗೂ ತವರೂರಿನಲ್ಲಿ ನಡೆಯುತ್ತಿರುವುದರಿಂದ ಹೋಗುವುದು ಎಂದು ನಿರ್ಧರಿಸಿದೆ. ರೆಸಾರ್ಟ್ ಒಳಗೆ ಕಾಲಿಡುವಾಗಲೇ ಯಾರೂ ನನ್ನ ಗುರುತು ಹಿಡಿಯದಿದ್ದರೆ ಹಾಗೇ ಹೊರಗೆ ಬರುವುದು ಎಂದು ತೀರ್ಮಾನಿಸಿದ್ದೆ. ಆದರೆ ಕಾರಿನಿಂದ ಕಾಲಿಟ್ಟ ಕ್ಷಣದಿಂದ ಮತ್ತೆ ಮನೆಗೆ ಬರುವ ತನಕ ನನ್ನ ಜತೆಗಿದ್ದು ‘ರಾಣಿ ಫೀಲ್’  ಮೂಡಿಸಿದರು ನನ್ನ ವಿದ್ಯಾರ್ಥಿಗಳು! ನನ್ನನ್ನು ನೆನಪಿಟ್ಟುಕೊಂಡಿದ್ದಷ್ಟೇ ಅಲ್ಲ ಪ್ರೀತಿ-ಗೌರವವನ್ನು ಹರಿಸಿದರು. ನನಗೆ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರೂ ಇನಿಶಿಯಲ್ ಸಹಿತ ನೆನಪಿತ್ತು, ಗುರುತಿಸಿ ಕರೆದಾಗ ಅವರಿಗಾದ ಖುಷಿ ಅಷ್ಟಿಷ್ಟಲ್ಲ. ಶಿವಮೊಗ್ಗೆಯಲ್ಲಿ ಓದಿ ದೇಶವಿದೇಶಗಳಲ್ಲಿ ನೆಲೆಸಿ  ಯಶಸ್ವಿಯಾಗಿರುವ ಅವರನ್ನು ಕಂಡು ನನಗೆ ನಿಜಕ್ಕೂ ಹೆಮ್ಮೆ ಎನಿಸಿತು. ನಿಮ್ಮಿಂದ ಸಾಕಷ್ಟು ಕಲಿತಿದ್ದೇವೆ ಎನ್ನುವುದರ ಜತೆ ನೀವು ಇನ್ನೂ ಹಾಗೇ ಇದ್ದೀರಾ ಎಂದು ನನಗೆ ಕೋಡು ಮೂಡಿಸಿದರು! ಹಾಗೆ ನನಗಿಂತ ವಯಸ್ಸಿನಲ್ಲಿ ಒಂದೆರಡು ವರ್ಷ ಚಿಕ್ಕವರು ಅಷ್ಟೇ. ಅವರಿಗೆ ಕಲಿಸುತ್ತಾ ನಾನೂ ಕಲಿತಿದ್ದೆ ಎನ್ನುವುದೇ ಸರಿ. ಆದರೆ ಅವರು ನೆನಪಿಟ್ಟಿದ್ದು  ಅವರ ದೊಡ್ಡ ಗುಣ ಅಷ್ಟೇ!

ಸೆಲೆಬ್ರಿಟಿ !

ಎರಡೂ ರಿಯೂನಿಯನ್ ಗಳಿಗೆ ಹೋಗಿ ಬಂದ ಮೇಲೆ ಎಲ್ಲರೂ ಎಷ್ಟು ಬದಲಾಗಿದ್ದಾರಲ್ಲ, ಪ್ರಬುದ್ಧತೆ ಬಂದಿದೆ, ಆಗೇಕೆ ಹೀಗಿರಲಿಲ್ಲ? ಎನ್ನುವ ಪ್ರಶ್ನೆ ಮೂಡಿತ್ತು. ಓದು-ಬರಹದ ಜತೆ ಶಿಕ್ಷಣ ಆತ್ಮವಿಶ್ವಾಸ-ವ್ಯಕ್ತಿತ್ವ ವಿಕಸನಕ್ಕೆ ಕಾರಣ. ಹಾಗೆಯೇ ಜೀವನದ ಅನುಭವ , ಅದರ ಪ್ರಾಮುಖ್ಯತೆ ಅರಿತ ಮನಸ್ಸು ಮಾಗುತ್ತದೆ. ಹಾಗಾಗಿ ಈ ಬದಲಾವಣೆ ಎಂದು ತಾನೇ ಉತ್ತರ ಹುಡುಕಿತ್ತು. ಜತೆಗೆ ನಾನೂ ಬದಲಾಗಿದ್ದೇನೆ ಎಂಬ ಸತ್ಯದರ್ಶನವನ್ನೂ ಮಾಡಿಸಿತ್ತು. ದಂತವೈದ್ಯಳಾಗಿ ವೃತ್ತಿ ಜೀವನ ಆರಂಭಿಸಿ ಬೆಳ್ಳಿ ಹಬ್ಬದ ಸಂಭ್ರಮ ನನಗೆ. ಅದರೊಂದಿಗೆ  ನೃತ್ಯ, ಬರವಣಿಗೆ, ದೂರದರ್ಶನ ನಿರೂಪಕಿ ಹೀಗೆ ಒಂದಿಷ್ಟು ಪ್ರವೃತ್ತಿಯೂ ಜತೆಗಿದೆ. ಬಹುಶಃ ಇದರಿಂದಾಗಿಯೇ ನನ್ನನ್ನು ಎರಡೂ ರಿಯೂನಿಯನ್, ಸಭೆ ಸಮಾರಂಭಗಳಲ್ಲಿ ಆಗಾಗ್ಗೆ ಸೆಲೆಬ್ರಿಟಿ ಎಂದು ಗುರುತಿಸುತ್ತಾರೆ (ಕಾಲೆಳೆಯುತ್ತಾರೆ ಎಂಬ ಅನುಮಾನವೂ ಇದೆ!).

ಆ ಕ್ಷಣಕ್ಕೆ ಖುಷಿ ಅನ್ನಿಸುತ್ತದೆಯಾದರೂ ಅದು ನಿಜವಲ್ಲ. ಆದರೆ ಸ್ನೇಹ ಪ್ರೀತಿಯ ವಿಷಯದಲ್ಲಿ ನಾನು ಅದೃಷ್ಟಶಾಲಿ ಎನ್ನುವುದು ಸತ್ಯ. ತಿಂಗಳು ಕಾದರೂ ಪರವಾಗಿಲ್ಲ ನೀವೇ ಬೇಕು ಎನ್ನುವ ನನ್ನ ಪೇಶೆಂಟ್ಸ್, ನಮ್ಮ  ಫೇವರಿಟ್ ಮ್ಯಾಮ್ ಎನ್ನುವ ದಂತ ಮತ್ತು ನೃತ್ಯ ವಿದ್ಯಾರ್ಥಿಗಳು, ನನ್ನ ಲೇಖನ-ಕಾರ್ಯಕ್ರಮದಲ್ಲಿನ ಗುಣವನ್ನು ಮೆಚ್ಚುವ ಸಹೃದಯರು, ಅಕ್ಕರೆಯಿಂದ ತಪ್ಪು ತಿದ್ದುವ ಹಿತೈಷಿಗಳು,  ನನ್ನೆಲ್ಲಾ ಅವಗುಣದೊಂದಿಗೇ ನನ್ನನ್ನು ತಮ್ಮದಾಗಿಸಿಕೊಂಡ ಸ್ನೇಹಿತರು ಮತ್ತು ಕುಟುಂಬ ವರ್ಗ.. ಇವರೆಲ್ಲರ  ಪ್ರೀತಿ ನನಗೆ ಸ್ಫೂರ್ತಿ ಮತ್ತು ಮುನ್ನಡೆಸುವ ಶಕ್ತಿ. ಜೀವನ ಚಕ್ರ ಯಾರಿಗೂ ಕಾಯುವುದಿಲ್ಲ, ತನ್ನಷ್ಟಕ್ಕೇ ತಿರುಗುತ್ತದೆ.ಆಗಾಗ್ಗೆ ಹಳೆಯದರ ಹಳಹಳಿಕೆಯಲ್ಲಿರುವಾಗ ಯೌವ್ವನ ಮುಗಿಯಿತು ಎಂಬ ಭಾವವೂ ಮೂಡುತ್ತದೆ. ಕೂಡಲೇ ಪ್ರಖ್ಯಾತ ಚಿತ್ರಕಾರ ಪಿಕಾಸೋನ ‘ನಾವು ಮುದಿಯಾಗುವುದಿಲ್ಲ, ಮಾಗುತ್ತೇವೆ’ ಸಾಲುಗಳು ನೆನಪಾಗುತ್ತವೆ. ನಿಜ; ಹೃದಯದಲ್ಲಿ ಪ್ರೀತಿ ಹೂ ಅರಳಿ, ವಿನಯದ ಬೇರುಗಳು ಆಳಕ್ಕಿಳಿದು ಇನ್ನಷ್ಟು ಮಾಗಬೇಕು; ಬದುಕು  ಸಾರ್ಥಕವಾಗಬೇಕು! ನಿಮ್ಮೆಲ್ಲರ ಹಾರೈಕೆ ಇರಲಿ, ಮತ್ತೆ ಸಿಗೋಣ!!

(‘ದಂತ’ ಕಥೆಗಳು ಎಂಬ ಈ ಅಂಕಣ ಹಲ್ಲುಗಳ ಸಂಖ್ಯೆಗೆ ತಕ್ಕದಾಗಿ ಮೂವತ್ತೆರಡು ಮಾಡಬಹುದಿತ್ತಲ್ಲವೇ ಎಂಬುದು ಅನೇಕರ ಅಭಿಪ್ರಾಯ. ಆದರೆ ಜೀವವಿಕಾಸದ ಹಾದಿಯಲ್ಲಿ ನಾವು ತಿನ್ನುವ ಆಹಾರ ಬದಲಾದಂತೆ  ಮಾನವರ ದವಡೆಯ ಉದ್ದ ಕಡಿಮೆಯಾಗಿ, ಹಲ್ಲುಗಳ ಗಾತ್ರವೂ ಸಣ್ಣದಾಗುತ್ತಿದೆ. ಬುದ್ಧಿಹಲ್ಲುಗಳೆಂದು ಕರೆಯಲಾಗುವ ಕಡೆಯ ನಾಲ್ಕು ದವಡೆ ಹಲ್ಲುಗಳು ಒಳಗೇ ಇರಬಹುದು/ ಇಲ್ಲದೆಯೂ ಇರಬಹುದು/ ತೀರಾ ತಡವಾಗಿ ಬರಬಹುದು/ ವಕ್ರವಾಗಿ ಮೂಡಬಹುದು. ಇವುಗಳ ಉಪಯೋಗವೂ ಹೆಚ್ಚೇನಿಲ್ಲ. ಹಾಗಾಗಿ ಇಪ್ಪತ್ತೆಂಟು ಅಧ್ಯಾಯಗಳಿಗೆ ಸೀಮಿತವಾಗಿರಿಸಿ  ಈ ಅಂಕಣ ಸದ್ಯಕ್ಕೆ  ಸಂಪನ್ನವಾಗುತ್ತಿದೆ. ಪ್ರಕಟಿಸಿದ ಅವಧಿಯ ಸಂಪಾದಕ ಮಂಡಳಿ, ಸಹಕರಿಸಿದ ಸಿಬ್ಬಂದಿ ಮತ್ತು ಪ್ರೋತ್ಸಾಹಿಸಿದ  ಓದುಗರಿಗೆ ವಂದನೆಗಳು.ನಮಸ್ಕಾರ)

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

9 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading