
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.
ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.
ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!
23
ದಂತವೈದ್ಯಕೀಯ, ದೈಹಿಕ ಕ್ಷಮತೆಯ ಜತೆ ಮಾನಸಿಕ ದೃಢತೆಯನ್ನೂ ಬೇಡುವ ಕ್ಷೇತ್ರ. ಗಂಟೆಗಟ್ಟಲೇ ನಿಂತು ರೋಗಿಗಳ ಚಿಕಿತ್ಸೆ ಮಾಡುತ್ತಿದ್ದ ಸ್ಟಾಂಡಿಂಗ್ ಡೆಂಟಿಸ್ಟ್ರಿ ಈಗ ತೀರಾ ಕಡಿಮೆ. ಈಗ ಏನಿದ್ದರೂ ಕುಳಿತು ಮಾಡುವ ಸಿಟ್ಟಿಂಗ್ ಡೆಂಟಿಸ್ಟ್ರಿ.ಹಾಗಿದ್ದೂ ಗಂಟೆಗಟ್ಟಲೇ ಬಾಯಿಯಲ್ಲಿ ಮಾಡಬೇಕಾದ ಸೂಕ್ಷ್ಮ ಕೆಲಸವಾದ್ದರಿಂದ ದೈಹಿಕವಾಗಿ ಉತ್ತಮ ಸಾಮರ್ಥ್ಯ ಹೊಂದಿರಬೇಕು. ದಂತವೈದ್ಯರಲ್ಲಿ ತಮ್ಮ ವೃತ್ತಿಯ ಕಾರಣದಿಂದ ಬೆನ್ನುನೋವು, ಕೈ-ಕಾಲು-ಕತ್ತುನೋವು ಸರ್ವೇಸಾಮಾನ್ಯ. ಸರಿಯಾದ ಭಂಗಿ ಮತ್ತು ವಿಧಾನ ಅನುಸರಿಸಿದಲ್ಲಿ ಇದನ್ನು ತಡೆಯಬಹುದಾದರೂ ವಿದ್ಯಾರ್ಥಿಜೀವನದಲ್ಲೇ ಇದನ್ನು ಅಳವಡಿಸಿಕೊಳ್ಳುವುದು ಮುಖ್ಯ. ಒಮ್ಮೆ ವೃತ್ತಿನಿರತ ಜೀವನಕ್ಕೆ ಕಾಲಿಟ್ಟ ಮೇಲೆ ಇದನ್ನೆಲ್ಲಾ ಹೇಳುವವರು ಕೇಳುವವರು ಯಾರೂ ಇಲ್ಲ; ಯೋಚಿಸಲೂ ಪುರುಸೊತ್ತಿಲ್ಲ. ಹೇಗಾದರೂ ಮಾಡಿ ಚಿಕಿತ್ಸೆ ಮುಗಿಸಬೇಕೆಂಬ ಒತ್ತಡಕ್ಕೆ ಬಿದ್ದು ನಿರಂತರವಾಗಿ ಕೆಲಸ ಮಾಡುತ್ತಾ ಹೋದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದು ಖಚಿತ. ಇದರೊಂದಿಗೇ ಅವಸರವೂ ಸಲ್ಲದು. ಆತ್ಮವಿಶ್ವಾಸದ ಜತೆ ಸಮಾಧಾನವೇ ಪ್ರಧಾನ. ಸಮಾಧಾನ ಎಂಬ ಪದವೇ ಗೊತ್ತಿಲ್ಲದ ಸದಾ ಅವಸರದಲ್ಲಿರುತ್ತಿದ್ದ ಸುನಿಲ್ ಸರ್ ಅದನ್ನು ರೂಢಿಸಿಕೊಳ್ಳಲೇಬೇಕಾದ, ಜತೆಗೆ ನಾವೂ ಕಲಿತ ಸ್ವಾರಸ್ಯಕರ ಪ್ರಸಂಗಗಳು ನೆನಪಾಗುತ್ತವೆ.
ನಾವು ಮಣಿಪಾಲಕ್ಕೆ ಸೇರಿದಾಗ ನಮ್ಮ ಸೂಪರ್ ಸೀನಿಯರ್ (ನಾಲ್ಕು ವರ್ಷ ಹಿರಿಯರು) ಆಗಿದ್ದವರು ಸುನಿಲ್ ಸರ್. ಮಲೆಯಾಳಿ, ಆದರೆ ಕನ್ನಡ ಚೆನ್ನಾಗಿ ಕಲಿತಿದ್ದರು. ಅವರ ಇಷ್ಟದ ಶಬ್ದ ಫಾಸ್ಟ್ ಫಾಸ್ಟ್ —ಬೆಗ ಬೆಗ (ಬೇಗ ಎನ್ನುವ ಕನ್ನಡ ಶಬ್ದ ಕಲಿತಿದ್ದರು ಆದರೆ ಅದನ್ನು ಹೇಳುವಾಗಲೂ ಅವಸರ ಮಾಡಿ ದೀರ್ಘ ನುಂಗಿ ಬೆಗ ಎನ್ನುತ್ತಿದ್ದರು!) .ಹೆಚ್ಚಿನ ಪರಿಣತಿಗೆ ಓರಲ್ ಆಂಡ್ ಮಾಕ್ಸಿಲೋಫೇಶಿಯಲ್ ಸರ್ಜರಿ ವಿಭಾಗ (ಹಲ್ಲು, ಬಾಯಿ ಮತ್ತು ದವಡೆಗಳ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ್ದು) ಆರಿಸಿಕೊಂಡಿದ್ದರು. ನಮಗೆ ಆಗಾಗ್ಗೆ ಪ್ರಾಕ್ಟಿಕಲ್ ವಿಭಾಗಕ್ಕೆ ಕಲಿಸಲು ಬರುತ್ತಿದ್ದರು.ಅವರ ಮಾತು, ನಡೆ ನುಡಿಯಷ್ಟೇ ಅಲ್ಲ ಕೆಲಸವೂ ಅಷ್ಟೆ, ಸೂಪರ್ ಫಾಸ್ಟ್. ವಿದ್ಯಾರ್ಥಿಗಳಾದ ನಾವು ಹಲ್ಲು ಕೀಳಲು ಇನ್ನೂ ಇಂಜೆಕ್ಷನ್ ಲೋಡ್ ಮಾಡುವಷ್ಟರಲ್ಲಿ ಇವರ ಬೆಗ ಬೆಗ ಎನ್ನುವ ಜಪ ಶುರುವಾಗುತ್ತಿತ್ತು. ನಾವು ಹೇಗೋ ಕಷ್ಟಪಟ್ಟು ಒಂದು ಹಲ್ಲು ತೆಗೆಯುವಷ್ಟರಲ್ಲಿ ಇವರು ಹತ್ತು ಹಲ್ಲು ಕಿತ್ತು ಕೆಲಸ ಮುಗಿಸಿ ಕುಳಿತಿರುತ್ತಿದ್ದರು. ಅವರನ್ನು ಕಂಡರೆ ನಮಗೆ ಮೆಚ್ಚುಗೆ ,ಅಸೂಯೆ, ಸಿಟ್ಟು ಎಲ್ಲವೂ ಬೆರೆತ ಮಿಶ್ರ ಭಾವ. ಆದರೂ ಅವರ ಬೆಗ ಬೆಗ ರಾಗ ಕಿರಿಕಿರಿ ಉಂಟುಮಾಡುತ್ತಿತ್ತು.

ಲುಂಗಿ ಕಚ್ಚಿ!
ಅದೊಂದು ದಿನ ಕ್ಲಿನಿಕ್ಸ್ ರೋಗಿಗಳಿಂದ ತುಂಬಿ ತುಳುಕುತ್ತಿತ್ತು. ಸಂಜೆಯ ಒಳಗೆ ನೋಂದಣಿ ಮಾಡಿಸಿದ ಜನರ ಕೆಲಸ ಮುಗಿಸಲೇ ಬೇಕಿತ್ತು. ವಿದ್ಯಾರ್ಥಿಗಳಾದ ನಾವು, ಸೀನಿಯರ್ಸ್, ಪ್ರೊಫೆಸರ್ ಹೀಗೆ ಎಲ್ಲರೂ ಕೆಲಸ ಮಾಡುತ್ತಿದ್ದೆವು. ಯಾರಿಗೂ ಅತ್ತಿತ್ತ ನೋಡಲೂ ಪುರುಸೊತ್ತಿಲ್ಲ.ಸುನಿಲ್ ಸರ್ ಅಂತೂ ಸಿಕ್ಕಾಪಟ್ಟೆ ಅವಸರದಿಂದ ಅತ್ತಿತ್ತ ಕುಣಿದಾಡುತ್ತಿದ್ದರು. ಅವರದ್ದು ಡಿಪಾರ್ಟ್ಮೆಂಟಿನಲ್ಲಿ ಎಲ್ಲರಿಗಿಂತ ಮುಂದಿದ್ದ ಎರಡು ಛೇರ್ ಗಳಲ್ಲಿ ಕೆಲಸ.ಹಲ್ಲು ಕೀಳುವ ಕೆಲಸ ಮುಗಿಸಿ ವಿದ್ಯಾರ್ಥಿಗಳಾದ ನಮಗೆ ಹಲ್ಲು ಕಿತ್ತ ನಂತರ ನೀಡಬೇಕಾದ ಸೂಚನೆ ಕೊಡಲು ತಿಳಿಸಿದ್ದರು.ತಾವು ಮತ್ತೊಂದು ರೋಗಿಗೆ ಚಿಕಿತ್ಸೆ ನೀಡಲು ಧಾವಿಸುತ್ತಿದ್ದರು.ನಾವು ನಿಧಾನಕ್ಕೆ ಕೆಲಸ ಮಾಡುತ್ತಲೇ ಈ ಸೂಚನೆಯನ್ನೂ ನೀಡಬೇಕಿತ್ತು. ಈ ಗಡಿಬಿಡಿಯಲ್ಲಿ ಎಲ್ಲರ ಗಮನ ಸೆಳೆಯುವ ದೃಶ್ಯ ಕಂಡುಬಂದಿತು. ಮುಂದಿನ ಛೇರ್ ನಿಂದ ವಯಸ್ಸಾದ ವ್ಯಕ್ತಿ ನಡೆದು ಬರುತ್ತಿದ್ದರು. ಸ್ವಲ್ಪ ಹಿಂಜರಿಕೆಯಿಂದ, ಅತ್ತಿತ್ತ ನೋಡುತ್ತಾ ಬರುತ್ತಿದ್ದ ಅವರನ್ನು ನೋಡಿ ಎಲ್ಲರಿಗೂ ಆಶ್ಚರ್ಯ. ಪಾಪ ತಮ್ಮ ಲುಂಗಿಯ ಒಂದು ತುದಿಯನ್ನು ಬಾಯಿಯಲ್ಲಿ ಕಚ್ಚಿ ಕೌಂಟರ್ ನತ್ತ ನಡೆಯುತ್ತಿದ್ದರು. ಅವರನ್ನು ಮಧ್ಯೆ ನಿಲ್ಲಿಸಿ ಇದೇಕೆ ಹೀಗೆ ಎಂದರೆ ಮುಂದಿನ ಛೇರ್ ನತ್ತ ಕೈ ತೋರಿದರು. ಅಲ್ಲಿದ್ದದ್ದು ಸರಸರ ಕೆಲಸ ಮಾಡುತ್ತಿದ್ದದ್ದು ಸುನಿಲ್ ಸರ್.
ಸರ್ ಗೆ ಇತ್ತ ಧ್ಯಾನವೇ ಇಲ್ಲ. ಕಡೆಗೆ ನಮ್ಮ ಪ್ರೊಫೆಸರ್ ಗಮನಕ್ಕೆ ಇದು ಬಂದು ವಿಚಾರಿಸಿದಾಗ ಗೊತ್ತಾದದ್ದು ಇಷ್ಟು. ಆ ವೃದ್ಧರಿಗೆ ಹಲ್ಲು ಕಿತ್ತ ನಂತರ ಅಲ್ಲಿ ಹತ್ತಿ ಇಟ್ಟು ಕಚ್ಚಲು ಹೇಳಿದ್ದರು ( ಸಾಮಾನ್ಯವಾಗಿ ಹಲ್ಲು ಕಿತ್ತ ನಂತರ ಆ ಜಾಗವನ್ನು ಒತ್ತಿ, ರಕ್ತ ಒಸರುತ್ತಿರುವ ಜಾಗದಲ್ಲಿ ಹತ್ತಿಯಿಟ್ಟು ಕಚ್ಚಲು ಹೇಳಲಾಗುತ್ತದೆ.ಸುಮಾರು ಮೂವತ್ತು ನಿಮಿಷಗಳ ಕಾಲ ಅದನ್ನು ಗಟ್ಟಿಯಾಗಿ ಒತ್ತಡ ಹಾಕಿ ಕಚ್ಚುವುದರಿಂದ ಹಲ್ಲು ತೆಗೆದ ಕುಳಿಯಲ್ಲಿ ರಕ್ತ ಹೆಪ್ಪುಗಟ್ಟಲು ಸಹಾಯವಾಗುತ್ತದೆ. ಆದರೆ ಕೆಲವರಿಗೆ ಹೀಗೆ ಕಚ್ಚಿದಾಗ ಬಾಯಿಯಲ್ಲಿ ಬರುವ ಎಂಜಲನ್ನು ಏನು ಮಾಡುವುದು ಎಂಬ ಸಮಸ್ಯೆ ಎದುರಾಗುತ್ತದೆ. ಆಗ ನುಂಗಿ ಕಚ್ಚಿ ಎನ್ನುವುದು ರೂಢಿ). ಈ ವೃದ್ಧರು ಎಂಜಲು ಬರುತ್ತದಲ್ಲಾ ಏನು ಮಾಡುವುದು ಎಂದದ್ದಕ್ಕೆ ಅವಸರದಲ್ಲಿದ್ದ ಸರ್ ನುಂಗಿ ಕಚ್ಚಿ ಎನ್ನಲು ಲುಂಗಿ ಕಚ್ಚಿ ಎಂದುಬಿಟ್ಟಿದ್ದರು. ಗಾಬರಿಯಾದ ಅವರು ಅನುಮಾನದಿಂದ ಅದೇಕೆ ಹೀಗೆ? ಎಂದು ಪ್ರಶ್ನಿಸಿದ್ದರು. ಮೊದಲೇ ಈ ಸರ್ ಗಡಿಬಿಡಿ ಆಸಾಮಿ ; ಕೆಲಸದ ಒತ್ತಡ ಬೇರೆ. ಹಾಗಾಗಿ ‘ ಅದು ಹಾಗೆಯೇ, ಸೈನ್ಸ್! ನಿಮಗೆ ಗೊತ್ತಾಗುವುದಿಲ್ಲ. ಕಾಟನ್ ಇಟ್ಟಿದ್ದೇನಲ್ಲ, ಗಟ್ಟಿಯಾಗಿ ಲುಂಗಿ ಕಚ್ಚಿ ಮೂವತ್ತು ನಿಮಿಷ ಹಾಗೇ ಇದ್ದರೆ ಸಾಕು ಗಾಯ ಬೇಗ ವಾಸಿಯಾಗ್ತದೆ. ನಾನು ಹೇಳಿದ ಹಾಗೆ ಮಾಡದಿದ್ದರೆ ನಿಮಗೇ ತೊಂದರೆ. ಬ್ಲೀಡಿಂಗ್ ನಿಲ್ಲುವುದಿಲ್ಲ. ಮತ್ತೆ ಎಲ್ಲಾ ಇನ್ಸ್ಟ್ರಕ್ಷನ್ಸ್ ಚಿಕ್ಕ ಡಾಕ್ಟರ್ ಕೊಡ್ತಾರೆ . ಬೆಗ ಬೆಗ ಹೋಗಿ, ತುಂಬಾ ಜನ ಕಾಯ್ತಾ ಇದ್ದಾರೆ ’ ಎಂದು ಅವಸರಿಸಿ ಇನ್ನೊಂದು ರೋಗಿಯತ್ತ ಗಮನ ಹರಿಸಿದ್ದರು. ಪಾಪ ಈ ಹಿರಿಯರು ಬೇರೆ ವಿಧಿ ಕಾಣದೇ ಲುಂಗಿಯ ತುದಿ ಗಟ್ಟಿ ಕಚ್ಚಿ ನಡೆದು ಬರುತ್ತಿದ್ದರು. ಆ ದಿನ ಸರಿಯಾಗಿ ಕ್ಲಾಸ್ ನಮ್ಮೆಲ್ಲರಿಗೂ ಸಿಕ್ಕಿತ್ತು. ಬರೀ ಹಲ್ಲು ಕಿತ್ತರೆ ಆಗಲಿಲ್ಲ.ರೋಗಿಗೆ ಅರ್ಥವಾಗುವ ಹಾಗೆ ಮಾಡುವ ಮುನ್ನ, ಮಾಡಿದ ನಂತರ ಎಲ್ಲವನ್ನೂ ತಿಳಿಸಬೇಕು. ಒಂದೇ ಕೇಸ್ ಮಾಡಿದರೂ ಶಿಸ್ತಿನಿಂದ, ಸಮಾಧಾನವಾಗಿ ಮಾಡಬೇಕು ಎಂದು ಪ್ರೊಫೆಸರ್ ಸರಿಯಾಗಿ ಬೈದಿದ್ದರು.ಸುನಿಲ್ ಸರ್ ಅವರ ‘ ಬೆಗ ಬೆಗ ರಾಗ’ ಅಂದಿನಿಂದ ಬಹಳಷ್ಟು ಕಡಿಮೆಯಾಗಿತ್ತು.

ಅಜ್ಜಿ ಬಂದಳು
ಆದರದು ಸಂಪೂರ್ಣ ನಿಲ್ಲಲು ಕಾರಣ ಕ್ಯಾಂಪಿಗೆ ಬಂದ ಅಜ್ಜಿ! ಸಮುದಾಯ ಆರೋಗ್ಯ ವಿಭಾಗದಲ್ಲಿದ್ದಾಗ ಮಣಿಪಾಲದ ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ನೀಡುವುದು ನಮ್ಮ ತರಬೇತಿಯ ಭಾಗವೇ ಆಗಿತ್ತು. ಅದರೊಂದಿಗೆ ಆಗಾಗ್ಗೆ ಎರಡು ದಿನಗಳ ಕ್ಯಾಂಪ್ ಗಳನ್ನು ಹತ್ತಿರದ ಹಳ್ಳಿಗಳಲ್ಲಿ ಆಯೋಜಿಸುತ್ತಿದ್ದರು. ಉಚಿತ ಚಿಕಿತ್ಸೆ ನೀಡುತ್ತಿದ್ದುದ್ದರಿಂದ ಬಹಳ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಫಿಲ್ಲಿಂಗ್, ಕ್ಲೀನಿಂಗ್, ಡೆಂಚರ್, ಎಲ್ಲವೂ ಇದ್ದರೂ ಹಲ್ಲು ಕೀಳಿಸಿಕೊಳ್ಳಲು ಬರುತ್ತಿದ್ದವರು ಬಹಳಷ್ಟು ದಿನ. ಸಮಯದ ಮಿತಿ ಇರುತ್ತಿದ್ದುದರಿಂದ ವೇಗವಾಗಿ ಕೆಲಸ ಮಾಡುವುದು ಮತ್ತು ಕೆಲಸ ಮುಗಿಸುವುದು ಅಗತ್ಯವಾಗಿತ್ತು .ಹಾಗಾಗಿ ಕೆಲಸವನ್ನು ಹಂಚಿಕೊಂಡು ಮಾಡುತ್ತಿದ್ದೆವು.ದಿನವಿಡೀ ಒಬ್ಬರೇ ಎಲ್ಲಾ ಕೆಲಸ ಮಾಡುವುದು ಕಷ್ಟವಾಗಿತ್ತು. ಬರುವ ರೋಗಿಗಳನ್ನು ಪರಿಶೀಲಿಸಿ ಹಿಸ್ಟರಿ ತೆಗೆದುಕೊಳ್ಳುವುದು, ಸಾಲಾಗಿ ಕೂರಿಸಿ ಇಂಜೆಕ್ಷನ್ ಕೊಡುವುದು, ಹಲ್ಲು ಕೀಳುವುದು ಮತ್ತು ನಂತರ ಸೂಚನೆ ನೀಡುವುದು ಇವನ್ನು ಪಾಳಿ ಪ್ರಕಾರ ಎಲ್ಲರೂ ಮಾಡಬೇಕಿತ್ತು. ಆ ದಿನ ನಮ್ಮ ಸುನಿಲ್ ಸರ್ ದ್ದು ಹಿಸ್ಟರಿ ತೆಗೆದುಕೊಳ್ಳುವ ಸರದಿ. ಸರಿ, ದೊಡ್ಡ ಹಾಲಿನ ಹೊರಗಡೆ ಪೇಪರ್ ಪೆನ್ನು ಹಿಡಿದು ಟೇಬಲ್ ಕುರ್ಚಿಯಲ್ಲಿ ಬೆಳಿಗ್ಗೆ ಎದ್ದೊಡನೆಯೇ ಆಸೀನರಾಗಿದ್ದರು ಸರ್. ಸರಸರ ಬಂದವರನ್ನು ಮಾತನಾಡಿಸಿ ಫೈಲ್ ನಲ್ಲಿ ಬರೆದು ಕಳಿಸುವುದು ನಡೆಯುತ್ತಿತ್ತು. ಹಲ್ಲು ಕೀಳಿಸಲು ಬಂದ ಕೆಲವು ವೃದ್ಧರನ್ನು ತಾವೇ ಸ್ವತಃ ಕರೆತಂದು ನಾವು ಕೆಲಸ ಮಾಡುತ್ತಿದ್ದ ಕುರ್ಚಿಯಲ್ಲಿ ಕುಳ್ಳಿರಿಸಿಯೂ ಹೋಗುತ್ತಿದ್ದರು. ಹಾಗೆ ಅವರು ಹಿರಿಯ ಮಹಿಳೆಯನ್ನು ಕರೆತಂದು (ಎತ್ತಿಕೊಂಡು ಅಂದರೂ ತಪ್ಪಾಗಲಾರದು) ಕೂರಿಸಿ ‘ ಕೆಳಗಿನ ಹಲ್ಲು ಕೀಳಬೇಕು, ಎಲ್ಲಾ ಬರೆದಿದ್ದೇನೆ, ಹೊರಗೆ ಯಾರೋ ಕಾಯುತ್ತಾ ಇದ್ದಾರಂತೆ. ಬೆಗ ಬೆಗ’ ಎಂದು ಅವಸರಿಸಿ ಮತ್ತೆ ಹೊರಗೆ ಓಡಿದರು.

ನನಗೆಂತಕ್ಕೆ?
ಸರಿ ನಾನು ಫೈಲ್ ನೋಡಿ ಆಗಷ್ಟೇ ಲೋಡ್ ಮಾಡಿದ ಇಂಜೆಕ್ಷನ್ ಚುಚ್ಚುವುದೊಂದೇ ಬಾಕಿ. ಅಜ್ಜಿ ಅವಳು ಹೊರಗೆ ಕಾಯುತ್ತಾ ಇದ್ದಾಳೆ ಅಂದರು. ನಾನು ಸರಿ, ಬೇಗನೆ ಹಲ್ಲು ತೆಗೆದು ಕಳಿಸುತ್ತೇನೆ . ನೋವೇನೂ ಆಗುವುದಿಲ್ಲ ಎಂದೆ.ಅದಕ್ಕೆ ಅಜ್ಜಿ ‘ಅಲ್ಲ ಹಲ್ಲು ತೆಗೆಸಬೇಕಾದದ್ದು ಮೊಮ್ಮಗಳಿಗೆ, ನನಗೆಂತಕ್ಕೆ ಇಲ್ಲಿ ಕೂರಿಸಿರುವುದು’ ಎಂದಿತು. ಚುಚ್ಚಲು ಸಿದ್ಧಳಾಗಿದ್ದ ನನಗೆ ಗಾಬರಿಯಾಯಿತು. ಮತ್ತೆ ಫೈಲ್ ನೋಡಿದರೆ ವಯಸ್ಸು ಎಪ್ಪತ್ತು ಎಂದಿದೆ. ಈ ಅಜ್ಜಿಗೆ ಎಪ್ಪತ್ತು ವಯಸ್ಸಿನ ಮೊಮ್ಮಗಳೇ! ಅಥವಾ ಅರಳು ಮರುಳೇ? ಎಂದು ಸಂಶಯವಾಯಿತು.ಇಂಜಕ್ಷನ್ ಬದಿಗಿಟ್ಟು ಏನು ಎತ್ತ ವಿಚಾರಿಸಿದೆ. ಕವಳ ಜಗಿದು ಕೆಂಪಾಗಿದ್ದ ಬಾಯಿಯ ಅಜ್ಜಿ ಹೇಳಿದ್ದಿಷ್ಟು.’ ಇಲ್ಲಿ ಕ್ಯಾಂಪ್ ಉಂಟಲ್ಲಾ..ವಿಚಾರಿಸುವಾ ಅಂತ ಬಂದಿದ್ದು. ಮೊಮ್ಮಗಳಿಗೆ ಇಪ್ಪತ್ತು ವರ್ಷ. ಅದೆಂತದೋ ಕಡೆ ಹಲ್ಲು ಬರ್ತಾ ಉಂಟಂತೆ. ಸಿಕ್ಕಾಪಟ್ಟೆ ನೋವು ಉಂಟು. ಅವಳಿಗೆ ಹೆದ್ರಿಕೆ. ಅದಕೇ ಅವಳ ಜತೆ ನಾ ಬಂದದ್ದು.ಅವಳು ಹೊರಗೆ ನಿಂತು ನಂಗೆ ಎಲ್ಲಾ ಕೇಳಿ ಬಾ ಅಂದದ್ದು; ಹಾಗೆ ನಾ ಇಲ್ಲಿಗೆ ಬಂದೆ. ಈ ನಿಮ್ಮ ಡಾಕ್ಟ್ರು ಎದುರಿಗೆ ಕೂತದ್ದೇ ಸರಿ; ಬಿಡಲೇ ಇಲ್ಲ. ನನ್ನ ಪ್ರಾಯ, ಸಕ್ರೆ ಕಾಯಿಲೆ, ಬಿಪಿ, ಮಕ್ಕಳು- ಮರಿ ಎಲ್ಲಾ ಬಡ ಬಡ ಕೇಳಿದ್ದು ಮತ್ತು ಗೀಚಿದ್ದು. ನಾ ಮೊಮ್ಮಗಳ ಬಗ್ಗೆ ಹೇಳುವಾ ಅಂದ್ರೆ ಕೇಳಲೇ ಇಲ್ಲ..ಬಾರೀ ಅರ್ಜೆಂಟು! ಬೆಗ ಬೆಗ ಅಂತ ಹತ್ತು ಸಾರಿಯಾದ್ರು ಹೇಳಿ ಇಲ್ಲಿ ತಂದು ಬಿಟ್ಟರು.ಈಗ ಹೇಗೂ ಬಂದು ಕೂತಿದ್ದಾಯ್ತು ಒಂದ್ಸಲ ನಂದೂ ಬಾಯಿ ಪರೀಕ್ಷೆ ಮಾಡಿಯೇ ಬಿಡಿ. ಆದ್ರೆ ಇಂಜೆಕ್ಷನ್ ಬೇಡ. ಮತ್ತೆ ಮೊಮ್ಮಗಳಿಗೆ ಕಡೆ ಹಲ್ಲು ಕೀಳಿಸಿದ್ರೆ ಏನಾದರೂ ತೊಂದ್ರೆ ಆಗ್ತದಾ?’ ಎಂದು ಪ್ರಶ್ನಿಸಿದರು. ಅಂತೂ ರೋಗಿ ಯಾರೋ, ಇಲ್ಲಿ ಬಂದು ಕುಳಿತವರು ಯಾರೋ! ಹೊರಗೆ ಕುಳಿತಿದ್ದ ಸರ್ ಗೆ ಈ ವಿಷಯ ತಿಳಿಯಿತು. ಅಂದಿನಿಂದ ಈ ಬೆಗ ಬೆಗ ರಾಗ ಸಂಪೂರ್ಣವಾಗಿ ನಿಂತಿತು. ಇದು ನಮಗೂ ದೊಡ್ಡ ಪಾಠ ಕಲಿಸಿತು.
ಎಷ್ಟೋ ಬಾರಿ ಯಾವುದೋ ಹಲ್ಲು ತೆಗೆಯುವ ಬದಲು ಇನ್ಯಾವುದೋ ಹಲ್ಲು ತೆಗೆದುಬಿಟ್ಟರು ಎಂದು ಅಲ್ಲಲ್ಲಿ ದೂರು ಕೇಳಿಬರುವುದುಂಟು. ದಂತವೈದ್ಯರು ಯಾವ ಹಲ್ಲು ಕೀಳಬೇಕು/ ಏನು ಚಿಕಿತ್ಸೆ ನೀಡಬೇಕು ಎಂಬುದನ್ನು ಒಂದಲ್ಲ, ಎರಡು ಬಾರಿ ಖಚಿತಪಡಿಸಿಕೊಳ್ಳಬೇಕು ನಿಜ. ಹಾಗೆಯೇ ಅದನ್ನು ದಾಖಲಿಸಿ ಒಪ್ಪಿಗೆ ಪಡೆಯುವುದೂ ಕೂಡಾ ಅವಶ್ಯಕ. ಅದರೊಂದಿಗೇ ರೋಗಿಗಳು ಕೂಡಾ ಯಾವುದೇ ಚಿಕಿತ್ಸೆಗೆ ಮುನ್ನ ಆ ಚಿಕಿತ್ಸೆಯ ವಿವರ, ಅಡ್ಡ ಪರಿಣಾಮ, ಅವಧಿ, ಯಾವ ಹಲ್ಲು ಇವೆಲ್ಲದರ ನಿಖರ ಮಾಹಿತಿ ಪಡೆಯಬೇಕು. ತಮ್ಮ ದೇಹದ ಮೇಲಾಗುವ ಯಾವುದೇ ಚಿಕಿತ್ಸೆಯನ್ನು ನಿರಾಕರಿಸುವ/ ಒಪ್ಪುವ ಸಂಪೂರ್ಣ ಹಕ್ಕು ರೋಗಿಗಳದ್ದಾಗಿರುತ್ತದೆ. ಒಟ್ಟಿನಲ್ಲಿ ಚಿಕಿತ್ಸೆ ನೀಡುವ ವಿಷಯದಲ್ಲಿ ಅವಸರದಿಂದ ಹತ್ತು ಹೆಜ್ಜೆ ಇಟ್ಟು ಮುಗ್ಗರಿಸಿ ಬೀಳುವ ಬದಲು ಯೋಚಿಸಿ ದೃಢವಾಗಿ ಒಂದೇ ಹೆಜ್ಜೆಯನ್ನು ಇಡುವುದು ಒಳ್ಳೆಯದು ಎಂಬುದು ವಿದ್ಯಾರ್ಥಿ ಮತ್ತು ವೃತ್ತಿ ಬದುಕಿನಲ್ಲಿ ನಾನು ಕಂಡುಕೊಂಡ ಸತ್ಯ!
| ಇನ್ನು ಮುಂದಿನ ವಾರಕ್ಕೆ |






0 Comments