ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಕೆ ಎಸ್ ಚೈತ್ರಾ ಅಂಕಣ – ಕೋಟೆ ಬಾಗಿಲು ತೆರೆದಿದೆ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

22

‘ಯಾಕೋ ಗೊತ್ತಿಲ್ಲಾ! ನಮ್ಮ ಪುಟ್ಟು ಒಂಥರಾ ಮಂಕಾಗಿದ್ದಾನೆ. ಮಾತಿಲ್ಲ-ಕತೆಯಿಲ್ಲ. ಯಾವಾಗಲೂ ಬಿಗಿದ ಮುಖ. ಯಾಕೆ- ಏನು ಕೇಳಿ ಕೇಳಿ ಸಾಕಾಯ್ತು. ಮೊನ್ನೆ ಊರಿಗೆ ಹೋಗಿ ಬರುವ ತನಕ ಚೆನ್ನಾಗೇ ಇದ್ದ. ಅಲ್ಲಿಂದ ಬಂದದ್ದೇ ಈ ರೀತಿ ಬದಲಾಗಿದ್ದಾನೆ. ಈ ಹುಡುಗರದ್ದು ವಿಚಿತ್ರವೇ ’ ಪಾರ್ಕಿನಲ್ಲಿ ರಮಾ ನನ್ನ ಹತ್ತಿರ ಬೇಸರದಿಂದ ನುಡಿದರು. ನನಗೂ ಆಶ್ಚರ್ಯವಾಯಿತು. ಅವರ ಮಗ ಎಂಟು ವರ್ಷದ ಅಮಿತ್ ಚಿನಕುರಳಿ ಎಂದೇ ಪ್ರಸಿದ್ಧನಾದ ಪೋರ. ಪಟಪಟ ಮಾತನಾಡುತ್ತಾ ಮನೆ- ಶಾಲೆ-ಫ್ರೆಂಡ್ಸ್ ಎಲ್ಲರ ಬಗ್ಗೆ ಕತೆ ಹೇಳುತ್ತಾ ಅಲ್ಲಿ ಇಲ್ಲಿ ಜಿಗಿದಾಡುವ ಮುದ್ದುಮರಿ. ನಮ್ಮ ಮನೆಯ ಹತ್ತಿರದಲ್ಲಿಯೇ ಅವರ ಮನೆ; ಮಾತ್ರವಲ್ಲ ಮನೆಯವರೆಲ್ಲಾ ನನ್ನ ಬಳಿಯೇ ಚಿಕಿತ್ಸೆಗೆ ಬರುತ್ತಿದ್ದರು. ದಿನಾ ಪಾರ್ಕಿಗೂ ಬರುತ್ತಿದ್ದುದ್ದರಿಂದ ಹಳೆಯ ಪರಿಚಯವೂ ಹೌದು.

ರಾಕ್ಷಸ ಬುದ್ಧಿ
ಮೂರು ವರ್ಷದ ಹಿಂದೆ ಅಮಿತ್ ಗೆ ತಂಗಿ ಹುಟ್ಟಿದ್ದಳು. ಸಂಜೆ ತಾತನೊಂದಿಗೆ ಪಾರ್ಕಿಗೆ ಆಟಕ್ಕೆ ಬಂದವನು ‘ಆಂಟಿ, ನಮಗೆ ಪಾಪು ಹುಟ್ಟಿದೆ. ಡಾಲ್ ಥರಾ ಇದೆ, ಆದರೆ ಇನ್ನೂ ಆಸ್ಪತ್ರೆಯಲ್ಲಿದೆ. ನಾಡಿದ್ದು ನಮ್ಮ ಮನೆಗೇ ಬರುತ್ತೆ .ನಾನು ಚೆನ್ನಾಗಿ ರೆಡಿ ಆಗಬೇಕು’ ಎಂದು ಜಿಗಿಜಿಗಿಯುತ್ತಾ ಎಲ್ಲರಿಗೂ ಸಿಹಿ ಕೊಟ್ಟು ಹೋಗಿದ್ದ. ಆದರೆ ಮರುದಿನ ಬಂದವನು ‘ಆಂಟಿ ನಿಮಗೆ ಗೊತ್ತಾ? ನಮ್ಮ ಪಾಪುಗೆ ರಾಕ್ಷಸರು ಇರ್ತಾರಲ್ಲ, ಆ ಥರ ಕೆಟ್ಟ ಬುದ್ಧಿ ಇರುತ್ತಂತೆ. ಅಜ್ಜಿ ಹಾಗೆ ಹೇಳ್ತಾ ಇದ್ರು, ನಾನು ಕೇಳಿಸ್ಕೊಂಡೆ. ಸ್ವಲ್ಪ ಹೆದ್ರಿಕೆ ಆಗುತ್ತಪ್ಪಾ’ ಎಂದು ಸಣ್ಣ ಮುಖದಿಂದ ನುಡಿದಿದ್ದ. ಮಗು ಹುಟ್ಟಿ ಇನ್ನೂ ಎರಡು ದಿನವಾಗಿಲ್ಲ, ಅಷ್ಟರಲ್ಲೇ ಗುಣದ ಪರಿಚಯವೂ ಆಗುತ್ತದೆಯೇ ಎಂದು ಆಶ್ಚರ್ಯವಾಗಿತ್ತು. ಹಾಗೆಲ್ಲಾ ಹೇಳಬಾರದು, ಪಾಪು ಅಂದರೆ ದೇವರ ಸಮಾನ ಎಂದು ಆತನಿಗೆ ಸಮಾಧಾನ ಹೇಳಿದ್ದಾಯ್ತು. ಅದನ್ನೇ ನೆನೆಯುತ್ತಾ ಮರಳಿ ಬಂದಿದ್ದೆ. ನೆನೆದವರ ಮನದಲ್ಲಿ ಎನ್ನುವಂತೆ ಮನೆಗೆ ಬರುತ್ತಿದ್ದ ರಮಾರ ಕರೆ. ಮಗು ಹುಟ್ಟಿದ ಕಾರಣ ಸಂಭ್ರಮಕ್ಕಾಗಿ ಶುಭಾಶಯ ತಿಳಿಸಿದರೆ ‘ ಥಾಂಕ್ಯು ಮೇಡಂ, ನಿಜ ಹೇಳಬೇಕೆಂದ್ರೆ ನಿಮ್ಮನ್ನೇ ನೆನೆಸಿಕೊಳ್ಳುತ್ತಿದ್ದೆವು; ಪಾಪುವಿಗೆ ಹುಟ್ಟುವಾಗಲೇ ಹಲ್ಲು ಇದೆ. ನಮ್ಮತ್ತೆ ಮಗು ಎತ್ತಿಕೊಂಡಾಗ ನೋಡಿದರು. ಅದು ಒಳ್ಳೆಯದಲ್ಲವಂತೆ, ರಾಕ್ಷಸಗುಣದವರಿಗೆ ಹೀಗಿರುತ್ತೆ ಅಂತಾರೆ. ಏನು ಮಾಡೋದು?’ ಎಂಬ ಪ್ರಶ್ನೆ. ಕೂಡಲೇ ನೆನಪಾಗಿತ್ತು ಕೇಳಿದ್ದ ಇಂಥದ್ದೇ ಘಟನೆ.

ಅನೇಕ ವರ್ಷಗಳ ನಂತರ ಕುಟುಂಬಕ್ಕೊಂದು ಹೊಸ ಸೇರ್ಪಡೆ. ತಾಯಿಯ ಪಕ್ಕ ಮುದ್ದಾಗಿ ಮಲಗಿದ್ದ ತಮ್ಮನನ್ನು ಮುದ್ದಿಸಲು ಬಂದ ಅಕ್ಕ ‘ ಅಮ್ಮ! ತಮ್ಮಂಗೆ ಹಲ್ಲಿದೆ’ ಎಂದಳು. ಕೂಡಲೇ ಎಲ್ಲರೂ `ಅಯ್ಯೋ, ಹುಟ್ಟುವಾಗಲೇ ಹಲ್ಲಿದೆ, ರಾಕ್ಷಸ ಗುಣದವರು ಅಂತಾರೆ. ಶಾಂತಿ ಆಗಲೇಬೇಕು’ ಎಂದು ಗಾಬರಿಯಾದರು. ಕಡೆಗೆ ಪರಿಹಾರಕ್ಕಾಗಿ ಗೋಗರ್ಭ ಶಾಂತಿ ಮಾಡಿಸಲಾಯಿತು. ಆದರೂ ಮನೆಯವರಿಗೆ ಒಳಗೊಳಗೇ ಹೆದರಿಕೆ ಇತ್ತು, ಮಗುವಿನ ಗುಣ ಹಾಗಾದರೆ? ಶಾಂತಿ ಮಾಡಿಸಿದ್ದು ಮನೆಯವರ ಮನಃಶಾಂತಿಗಾಗಿ ಅಷ್ಟೇ. ಈ ಹುಟ್ಟುಹಲ್ಲುಗಳಿಗೂ ಸ್ವಭಾವಕ್ಕೂ ಏನೂ ಸಂಬಂಧವಿಲ್ಲ. ಆ ಮಗು, ಮುಂದೆ ಮನೋವೈದ್ಯರಾಗಿ ಸಾವಿರಾರು ಜನರು ‘ಡಾಕ್ಟ್ರು ನಮ್ಮ ಪಾಲಿನ ದೇವರು’ ಎಂದು ಕೊಂಡಾಡುವಂತಾಯಿತು. ಇದು ನನ್ನಪ್ಪ ಡಾ.ಕೆ.ಆರ್ ಶ್ರೀಧರ್ ಅವರ ಕತೆ! ತನ್ನಲ್ಲಿ ಬರುವ ಅನೇಕ ರೋಗಿಗಳಿಗೆ ಅಪ್ಪ ಸ್ವಂತದ ಉದಾಹರಣೆ ಕೊಟ್ಟು ಧೈರ್ಯ ತುಂಬಿದ್ದಾರೆ. ನಾನೂ ಹಾಗೇ ಮಾಡಿದೆ. ಈ ರೀತಿ ಹುಟ್ಟು ಹಲ್ಲುಗಳ ಬಗ್ಗೆ ಭಾರತದಲ್ಲಿ ಮಾತ್ರವಲ್ಲ, ಚೀನಾ – ಆಫ್ರಿಕಾಗಳಲ್ಲೂ ಕೆಟ್ಟದ್ದು ಎಂಬ ನಂಬಿಕೆ ಇದೆ. ಆದರೆ ಮಲೇಶ್ಯಾದಲ್ಲಿ ಒಳ್ಳೆಯ ಶಕುನ ಎಂದು ಭಾವಿಸುತ್ತಾರೆ. ವಿರಳವಾದರೂ ಅಲ್ಲಲ್ಲಿ ಕಾಣುವ ಈ ಹುಟ್ಟುಹಲ್ಲುಗಳ ಬಗ್ಗೆ ಇರುವ ಅಜ್ಞಾನ, ತಪ್ಪು ನಂಬಿಕೆ – ಹೆದರಿಕೆಗೆ ಕಾರಣವಾಗಿದೆ. ಅಮಿತನ ತಂಗಿಯ ಹುಟ್ಟುಹಲ್ಲಿಗೆ ಬೇಕಾದ ಚಿಕಿತ್ಸೆಯೂ ನಡೆಯಿತು. ಪಾಪು ಮನೆಗೆ ಬಂದ ಮೇಲೆ ಅಮಿತ್ ತಂಗಿಯ ನಿದ್ದೆ, ಅಳು, ಉಚ್ಚೆ, ವಾಂತಿ ಈ ಎಲ್ಲದರ ಅಪ್ ಡೇಟ್ ಎಲ್ಲರಿಗೂ ಕೊಡುತ್ತಿದ್ದ! ನನಗೆ ಆ ಪ್ರಸಂಗ ಇಂದಿಗೂ ಜನರಲ್ಲಿ ಬೇರೂರಿರುವ ಈ ತಪ್ಪು ಕಲ್ಪನೆಗಳ ಬಗ್ಗೆ ಬೇಸರ ಮೂಡಿಸಿತ್ತು ಮತ್ತು ಮಕ್ಕಳ ಮನಸ್ಸೆಷ್ಟು ಸೂಕ್ಷ್ಮ ಎಂಬುದರ ಬಗ್ಗೆ ಬೆರಗು ಮೂಡಿಸಿತ್ತು.

ಬದಲಾದ ವರ್ತನೆ!
ಇಂಥ ಅಮಿತ್ ಇದ್ದಕ್ಕಿದ್ದಂತೆ ಮಾತನಾಡುತ್ತಿಲ್ಲ ಅಂದರೆ ಏನಾಯಿತೋ ಎಂದು ಚಿಂತೆಯಾಯಿತು. ಆದರೂ ಮಕ್ಕಳಲ್ಲಿ ಸಣ್ಣ ಪುಟ್ಟ ಜಗಳ. ಗಲಾಟೆ, ಓದಿನ ಒತ್ತಡ ಇದೆಲ್ಲಾ ಇದ್ದದ್ದೇ..ಜೊತೆಗೆ ಅಜ್ಜನ ಊರಿಗೆ ಹೋಗಿ ಬಂದ ಆಯಾಸವೂ ಇರಬಹುದೇನೊ ಎಂದು ಸುಮ್ಮನಾದೆ. ಇದಾದ ಮರುದಿನ ಸಂಜೆ ವಾಕಿಂಗ್ ಮುಗಿಸಿ ಬರುವಾಗ ಮನೆಯ ಹತ್ತಿರದ ಗ್ರೌಂಡಿನಲ್ಲಿ ಮಕ್ಕಳು ಆಟವಾಡುತ್ತಿದ್ದರು. ಅರೆ, ನಮ್ಮ ಅಮಿತ್ ಮೂಲೆಯಲ್ಲಿ ಕುಳಿತಿದ್ದ. ನನ್ನನ್ನು ಕಂಡು ನಕ್ಕರೂ ಒಂಥರಾ ಗಂಭೀರ ಮುಖಭಾವ. ವಿಚಿತ್ರವೆನಿಸಿ, ಹತ್ತಿರ ಹೋಗಿ ಹೇಗಿದ್ದೀಯಾ ಎಂದೆ. ಓಕೆ ಅಂದ. ನೋಡಿದರೆ ಮೇಲಿನ ಎರಡು ಹಲ್ಲು ಬಿದ್ದಿತ್ತು. ಖುಷಿಯಿಂದ ‘ ಅರೆ! ಹಲ್ಲು ಬಿತ್ತಾ? ಕಂಗ್ರಾಟ್ಸ್. ಹೊಸ ಹಲ್ಲು ಬರುತ್ತೆ. ದೊಡ್ಡವನಾಗ್ತಾ ಇದ್ಯಲ್ಲ! ’ ಎಂದೆ. ಹತ್ತಿರ ಬಂದು ‘ಆಂಟಿ ನೀವು ಹೀಗೆ ನಗ್ತಾ ಹೇಳ್ತೀರಾ, ಊರಲ್ಲಿ ಎಲ್ಲರೂ ಏನೇನೋ ಅಂತಾರೆ, ಮತ್ತೆ ಫ್ರೆಂಡ್ಸ್ ಕೂಡಾ ಕಮೆಂಟ್ಸ್ ಮಾಡಿದ್ರು. ಅದ್ಕೇ ನಾನು ಬಾಯಿ ಬಿಡೋದು ಕಡಿಮೆ ಮಾಡೀದೀನಿ; ಐ ಫೀಲ್ ಬ್ಯಾಡ್’ ಎಂದು ಸಣ್ಣ ಮುಖ ಮಾಡಿದ. ತಕ್ಷಣ ಅವನಮ್ಮ ರಮಾ ಹೇಳಿದ್ದ ಇವನ ಬದಲಾದ ವರ್ತನೆಗೆ ಕಾರಣ ಹೊಳೆಯಿತು. ‘ ಹಲ್ಲು ಬಿದ್ದ ಮಕ್ಕಳು ಮುದ್ದಾಗಿ-ಮುಗ್ಧವಾಗಿ ಕಾಣುತ್ತಾರೆ ; ನನಗಂತೂ ತುಂಬಾ ಇಷ್ಟ. ಇದೊಂದು ಸ್ಟೇಜ್ ಅಷ್ಟೇ. ಹೇಳುವವರು ಏನಾದ್ರೂ ಹೇಳಲಿ ಬಿಡು, ನೀನು ಹೀರೋ ಯಾವಾಗ್ಲೂ ’ ಎಂದು ಒಂದಿಷ್ಟು ಸಮಾಧಾನ ಮಾಡಿದ ಮೇಲೆ ನಗುತ್ತಾ ಮನೆಗೆ ಹೋದ. ರಮಾಗೂ ಫೋನ್ ಮಾಡಿ ಅವನಿಗೆ ಧೈರ್ಯ ಮೂಡಿಸಲು ಹೇಳಿದೆ.

ಪೋಸ್ಟ್ ಆಫೀಸ್ ಓಪನ್!
ಅಮಿತ್ ಅಷ್ಟೇ ಅಲ್ಲ ಹಾಲು ಹಲ್ಲುಗಳು ಬಿದ್ದು ಶಾಶ್ವತ ಹಲ್ಲುಗಳು ಮೂಡುವ ಸಮಯದಲ್ಲಿ ಮಕ್ಕಳೆಲ್ಲರೂ ಹಾದುಹೋಗಬೇಕಾದ ಹಂತ ಇದು. ಹಾಲುಹಲ್ಲುಗಳ ಬಗ್ಗೆ ನಮ್ಮಲ್ಲಿ ಹೇಗೂ ಬಿದ್ದು ಹೋಗುವ ಹಲ್ಲುಗಳು ಎಂದು ನಿರ್ಲಕ್ಷ್ಯವೇ ಹೆಚ್ಚು. ಆದರೆ ಹಾಲು ಹಲ್ಲುಗಳು ಬೇರೆಲ್ಲಾ ಕೆಲಸಗಳ ಜತೆ ಶಾಶ್ವತ ಹಲ್ಲುಗಳಿಗೆ ಜಾಗ ಉಳಿಸುವ ಸಾಧನಗಳಾಗಿಯೂ ಕಾರ್ಯ ನಿರ್ವಹಿಸುತ್ತವೆ. ಮಕ್ಕಳಲ್ಲಿ ಸುಮಾರು ಆರು ವರ್ಷದಿಂದ ಹನ್ನೆರಡು ವರ್ಷದವರೆಗಿನ ಅವಧಿಯಲ್ಲಿ ಹಾಲುಹಲ್ಲು ಮತ್ತು ಶಾಶ್ವತ ಹಲ್ಲುಗಳೆರಡನ್ನೂ ಬಾಯಿಯಲ್ಲಿ ಕಾಣಬಹುದು.ಇದನ್ನು ‘ಮಿಕ್ಸ್ಡ್ ಡೆಂಟಿಶನ್’ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಹಾಲು ಹಲ್ಲುಗಳು ಬೀಳುತ್ತಿರುತ್ತವೆ, ಶಾಶ್ವತ ಹಲ್ಲುಗಳು ಮೂಡುತ್ತಿರುತ್ತವೆ. ಮಕ್ಕಳಲ್ಲಿ ಮುಂದಿನ ಹಲ್ಲು ಬಿದ್ದಾಗ ಆ ಜಾಗ ಖಾಲಿಯಾಗಿ ಮಾತನಾಡಿದಾಗ-ನಕ್ಕಾಗ ಬರೀ ವಸಡು ಕಾಣುತ್ತದೆ. ಹಲ್ಲು ಅಲುಗಾಡುವಾಗ ಹೆಮ್ಮೆ ಮತ್ತು ಖುಷಿಯಿಂದ ತೋರಿಸುವ ಮಕ್ಕಳಿಗೆ ಹಲ್ಲು ಬಿದ್ದಾಗ ಒಂದು ರೀತಿಯ ಮುಜುಗರವಾಗುವ ಸಾಧ್ಯತೆ ಇದೆ.ಅದಕ್ಕೆ ಸರಿಯಾಗಿ ಸಹಪಾಠಿಗಳು, ದೊಡ್ಡವರು ‘ಕೋಟೆ ಬಾಗಿಲು ತೆರೆದಿದೆ’ ‘ಅಜ್ಜ / ಅಜ್ಜಿ ಆಗಿಬಿಟ್ಟೆ ,ಪೋಸ್ಟ್ ಆಫೀಸ್ ಓಪನ್, ತರಲೆ ಮಾಡಿದ್ರೆ ಹಲ್ಲೇ ಬರಲ್ಲ ನೋಡು!’ ಎಂದು ಹೇಳುವುದು ಸಾಮಾನ್ಯ. ಹೇಳುವವರಿಗೇನೋ ಅದು ಕೇವಲ ತಮಾಷೆ. ಬಹಳಷ್ಟು ಬಾರಿ ಮನನೋಯಿಸುವ ಉದ್ದೇಶ ಇರುವುದಿಲ್ಲ, ಕಣ್ಣಿಗೆ ಕಾಣಿಸಿದ್ದನ್ನು ಹೀಗೆ ಹೇಳುವ ರೀತಿ ಎಂಬುದೇನೋ ನಿಜ. ಆದರೆ ತಮ್ಮ ಬದಲಾಗುತ್ತಿರುವ ಸ್ವರೂಪದ ಬಗ್ಗೆ ಈ ರೀತಿಯ ಮಾತುಗಳು ಸೂಕ್ಷ್ಮ ಮನಸ್ಸಿನ ಮಕ್ಕಳ ಮೇಲೆ ಬೀರುವ ಪರಿಣಾಮ ಅಪಾರ. ಕೆಲವು ಮಕ್ಕಳು ಮುಖ ಸಪ್ಪೆ ಮಾಡಿಕೊಂಡು ಸುಮ್ಮನಾದರೆ ಮತ್ತೆ ಹಲವರು ಹೊರಗೆ ತೋರಿಸದಿದ್ದರೂ ಒಳಗೊಳಗೇ ದುಃಖಿಸುತ್ತಾರೆ.ಕೆಲವು ಬಾರಿ ಮಾತು-ನಗು ಕಡಿಮೆ ಮಾಡುವುದಲ್ಲದೇ ಶಾಲೆಗೇ ಹೋಗುವುದಿಲ್ಲ ಎಂದು ಹಠ ಹಿಡಿಯುವುದೂ ಇದೆ. ಈ ರೀತಿಯ ಮಾತು, ಮನನೋಯುವ ಮಾತುಗಳನ್ನು ಆಡಬಾರದು ಸರಿ; ಆದರೆ ಎಲ್ಲರನ್ನೂ ತಡೆಯಲು ಸಾಧ್ಯವೇ? ಬದಲಿಗೆ ಮಕ್ಕಳಿಗೆ ಅದನ್ನು ಎದುರಿಸುವ ಸಾಮರ್ಥ್ಯ ಇರಬೇಕು. ಹೀಗಾಗಿ ಪೋಷಕರು ಮಕ್ಕಳ ಬೆಳವಣಿಗೆಯ ಬಗ್ಗೆ ಗಮನ ವಹಿಸಬೇಕು. ಮಕ್ಕಳಿಗೆ .ಹಲ್ಲು ಬಿದ್ದಾಗ ಹೆದರಿಸುವುದು/ಹಾಸ್ಯ ಮಾಡುವುದು ಸಲ್ಲದು. ಹಲ್ಲಿನ ಸ್ವಚ್ಛತೆ ಮತ್ತು ಮಕ್ಕಳ ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹಲ್ಲು ಬಿದ್ದಾಗ ಸರಿಯಾಗಿ ಬೆಳೆಯುತ್ತಿರುವ ಸಂಕೇತ ಎಂದು ಆತ್ಮವಿಶ್ವಾಸ ತುಂಬಬೇಕು.

ಅಗ್ಲಿ ಡಕ್ಲಿಂಗ್ ಸ್ಟೇಜ್
ಬರೀ ಹಲ್ಲು ಬೀಳುವುದಷ್ಟೇ ಅಲ್ಲ, ಹೊಸತಾಗಿ ಶಾಶ್ವತ ಹಲ್ಲು ಮೂಡುವಾಗಲೂ ಮಕ್ಕಳ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮುಂದಿನ ಹಲ್ಲುಗಳ ನಡುವೆ ಅಂತರ, ಮುಖಕ್ಕೆ ಅಗಲ ಎನಿಸುವ ಹಲ್ಲುಗಳು, ಬಾಯಿ ತೆರೆದರೆ ಚೂಪಾಗಿ ಹೊರಬರುತ್ತಿರುವ ಕೋರೆ ಹಲ್ಲಿನ ತುದಿ ಮುಂತಾದ ಮಾರ್ಪಾಟು ಸಹಜ. ಮುತ್ತು ಸುರಿಯುತ್ತದೇನೋ ಎನ್ನುವಷ್ಟು ಚಂದದ,ಮುತ್ತಿನಂಥ ಹಾಲುಹಲ್ಲು ಬಿದ್ದು ಹೀಗಾಗುತ್ತಿರುವುದು ಪೋಷಕರಲ್ಲಿ ಮತ್ತು ಸ್ವತಃ ಮಕ್ಕಳಲ್ಲೂ ಆತಂಕ ಮೂಡಿಸುತ್ತದೆ. ಇದಕ್ಕೆ ಅಗ್ಲಿ ಡಕ್ಲಿಂಗ್ ಸ್ಟೇಜ್ ಎನ್ನಲಾಗುತ್ತದೆ. ಮಕ್ಕಳ ಹಲ್ಲಿನ ಬೆಳವಣಿಗೆಯಲ್ಲಿ ಸಮಯದಲ್ಲಿ ಸಹಜವಾಗಿ ಕಾಣುವ ಈ ಘಟ್ಟವನ್ನು ೧೯೩೭ ರಲ್ಲಿ ಗುರುತಿಸಿ ಅಗ್ಲಿ ಡಕ್ಲಿಂಗ್ ಸ್ಟೇಜ್ ಎಂಬ ಹೆಸರಿಟ್ಟವನು ಬ್ರಾಡ್ ಬೆಂಟ್. ಡಕ್ಲಿಂಗ್ ಎಂದರೆ ಬಾತುಕೋಳಿ ಮರಿಗಳು.ಈ ಮರಿಗಳು ಜನನದ ಬಳಿಕ ವಾಲಿಕೊಂಡು ಓರೆಕೋರೆಯಾಗಿ ನಡೆಯುತ್ತವೆ.ವಿಚಿತ್ರವಾಗಿ ನೋಡಲು ಅನಾಕರ್ಷಕವಾಗಿ ಕಾಣುವ ಇವುಗಳಂತೆ ಹಲ್ಲುಗಳು ಎಂಬುದಕ್ಕೆ ಈ ಹೆಸರು.. ಆದರೆ ಇದು ಬೆಳವಣಿಗೆಯ ಒಂದು ಹಂತವಾಗಿದ್ದು ಶೇಕಡಾ ತೊಂಬತ್ತರಷ್ಟು ಮಕ್ಕಳಲ್ಲಿ ತನ್ನಿಂತಾನೇ ಹಲ್ಲುಗಳ ಅಂತರ ಮತ್ತು ಓರೆಕೋರೆ ಸರಿಯಾಗುತ್ತದೆ. ಮಕ್ಕಳು ಮತ್ತು ಪೋಷಕರಿಗೆ ಆತಂಕ ಮೂಡುವುದು ಸಹಜವಾದರೂ ಹಲ್ಲು ಬಿದ್ದು ಹೊಸ ಹಲ್ಲು ಹುಟ್ಟುವಾಗ ಖಾಲಿ ಜಾಗವಿರುವುದು ಕೆಲವೇ ತಿಂಗಳುಗಳ ಸ್ಥಿತಿ. ಹಾಗಾಗಿ ಮಕ್ಕಳಿಗೆ ಸಮಾಧಾನ ಹೇಳಿ ಧೈರ್ಯ ಮೂಡಿಸುವುದು ಅಗತ್ಯ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪ್ರಚಲಿತವಿರುವ ಟೂತ್ ಫೇರಿ ಎಂಬ ಹಲ್ಲಿನ ಅಪ್ಸರೆಯ ಹುಟ್ಟಿನ ಹಿಂದೆ ಮಕ್ಕಳನ್ನು ಖುಷಿಪಡಿಸುವ, ಹಲ್ಲಿನ ಆರೋಗ್ಯದ ಬಗ್ಗೆ ಗಮನ ಸೆಳೆಯುವ ಅಂಶವೂ ಸೇರಿದೆ ಎಂದು ನನಗನಿಸುತ್ತದೆ. (ಬಿದ್ದ ಹಾಲುಹಲ್ಲನ್ನು ಮಗು ರಾತ್ರಿ ಮಲಗುವಾಗ ದಿಂಬಿನ ಕೆಳಗಿಟ್ಟು ಮಲಗುತ್ತದೆ. ಬೆಳಿಗ್ಗೆ ಏಳುವಾಗ ಆ ಜಾಗದಲ್ಲಿ ಸಣ್ಣ ಮೊತ್ತದ ದುಡ್ಡು ಇಟ್ಟು ಟೂತ್ ಫೇರಿ ಹಲ್ಲನ್ನು ತೆಗೆದುಕೊಂಡು ದುಡ್ಡು ಕೊಟ್ಟಳು ಎಂದು ಹೇಳುತ್ತಾರೆ. ಹೀಗಾಗಿ ಹಲ್ಲು ಬಿದ್ದ ಮಗುವಿಗೆ ಖುಷಿ, ಹೆಮ್ಮೆ!)

ಮತ್ತೊಂದು ವಾರದ ನಂತರ ಸಿಕ್ಕಾಗ ಅಮಿತ್ ಮೊದಲಿನಂತೆಯೇ ಆಗಿದ್ದ. ಯಥಾಪ್ರಕಾರ ಯಾರೋ ಚೇಷ್ಟೆ ಮಾಡಿದರು ‘ ಕೋಟೆ ಬಾಗಿಲು ತೆಗೆದಿದೆ. ಕೂಡಲೇ ‘ ಇಟ್ ಇಸ್ ಓಕೆ, ನಿಮಗೂ ಹೀಗೆ ಹಲ್ಲು ಬಿದ್ದೇ ಹೊಸ ಹಲ್ಲು ಬಂದಿರೋದು ಅಂಕಲ್ ’ ಎಂದ ದೃಢವಾಗಿ. ನನಗೆ ಖುಷಿಯಾಯ್ತು; ಜತೆಗೇ ತಮ್ಮ ಸುತ್ತಮುತ್ತಲ ಮಾತುಕತೆಗಳನ್ನು ಗಮನಿಸುತ್ತಾ ಗ್ರಹಿಸುತ್ತಾ ಅಭಿಪ್ರಾಯ ರೂಪಿಸಿಕೊಳ್ಳುವ ಮಕ್ಕಳ ಜತೆ ನಮ್ಮ ನಡವಳಿಕೆ ಬಗ್ಗೆ ಎಷ್ಟು ಎಚ್ಚರವಹಿಸಿದರೂ ಸಾಲದು ಎನ್ನಿಸಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

21 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading