ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಎಸ್ ಬಿ ಜೋಗುರ ಬರೆದ ಸಣ್ಣ ಕಥೆ ’ಬಯಲರಸಿ ಬಂದವರು’

ಕಥೆ

ಡಾ ಎಸ್ ಬಿ ಜೋಗುರ

ಉಂಡು ನೂರಡಿ ಹಾಕಲು ಅಲ್ಲೆಲ್ಲೂ ಜಾಗವಿರಲಿಲ್ಲ.
ಇದ್ದ ಅಲ್ಪ ಸ್ವಲ್ಪ ಜಾಗದಲ್ಲಿ ಟು ವ್ಹೀಲರ್ ಮತ್ತು ಫೋರ್ ವ್ಹೀಲರ್ ಗಳು ಠಿಕಾಣಿ ಹೂಡಿವೆ.

ಕಾಲು ನಡೆ ನಡೆ ಎಂದರೂ ಬಯಲು ಬಾ ಅನ್ನಲಿಕ್ಕೆ ಅಲ್ಲೆಲ್ಲೂ ಜಾಗವೇ ಇರಲಿಲ್ಲ. ಊರ ಹೊರಗಣ ಬಯಲಿಗಾಗಿ ಜನ ಎಲ್ಲೆಲ್ಲಿಂದಲೋ ಹರಿದುಕೊಂಡು ಬರುತ್ತಿದ್ದರು. ಮನೆಯಿಂದ ಐದಾರು ಮೈಲು ದೂರವಾದರೂ ತೊಂದರೆಯಿಲ್ಲ. ಆ ಸುಗರ್ ಪೇಷೆಂಟ್ ಗಳಿಗಂತೂ ಬಯಲು ಜಾಗ ಎನ್ನುವುದು ಅವರು ತೆಗೆದುಕೊಳ್ಳುವ ಇನ್ಶುಲಿನ್ ನಷ್ಟೇ ಮುಖ್ಯವಾಗಿತ್ತು. ಹಾಗಾಗಿ ಆ ಬಯಲು ನೆಲದ ಬದಿಯಲ್ಲಿಯೇ ಕಾರು, ಬೈಕು ನಿಲ್ಲಿಸಿ ಜಾಗಿಂಗ್, ವಾಕಿಂಗ್ ಮಾಡುವ ಪರಿಪಾಠ ಅದಾಗಲೇ ಅಲ್ಲಿ ಶುರುವಾಗಿತ್ತು. ಧಾರವಾಡದ ಉತ್ತರ ದಿಕ್ಕಿನಲ್ಲಿರುವ ಒಂದು ಸಣ್ಣ ತಾವರೆ ಹೊಂಡದ ಬದಿಯಲ್ಲಿ ‘ಸಿಲ್ವರ್ ಲೈನ್’ ಎನ್ನುವ ಹೆಸರನ್ನು ಹೊತ್ತು ರಾತ್ರೋರಾತ್ರಿ ಒಂದು ಹೊಸ ಪ್ರೊಜೆಕ್ಟ್ ತಯಾರಾಗಿತ್ತು. ಎಲ್ಲ ಸೈಟುಗಳು ಬುಕ್ ಆದ ಮೇಲೆ ..? ಅನ್ನೋ ಪ್ರಶ್ನೆ ಅಲ್ಲಿ ವಾಕಿಂಗ್ ಮಾಡುವ ಎಲ್ಲರ ತಲೆಯನ್ನೂ ಕೊರೆಯುತ್ತಿತ್ತು. ಈಗಿನ ಈ ಸಿಲ್ವರ್ ಲೈನ್ ಅನ್ನೋ ಬಯಲುಜಾಗದಲ್ಲಿ ಹಿಂದೊಮ್ಮೆ ಭರ್ಜರಿ ಹೂ ಬಿಟ್ಟು, ಮಿಡಿ ಹಿಡಿದು, ರಾಶಿ ರಾಶಿ ಹಣ್ಣಾಗುವ ಮಾವಿನ ಗಿಡಗಳಿದ್ದವು. ಈ ಗಿಡಗಳು ಫಲ ನೀಡುವುದು ವರ್ಷಕ್ಕೊಮ್ಮೆ ಮಾತ್ರ. ಅವುಗಳನ್ನು ವರ್ಷವಿಡೀ ಪೊರೆಯುವುದು, ಔಷಧಿ ಸಿಂಪಡಿಸುವುದು, ಅವುಗಳನ್ನು ಕಾಯಿ ಆದ ಮೇಲೆ ಕಾಯುವುದು ಬರುವ ಆದಾಯದಷ್ಟೇ ಖಚರ್ಾಗುತ್ತಿತ್ತು. ಆ ಜಾಗದ ಯಜಮಾನನಿಗೆ ಒಂದು ಮಾವಿನ ಗಿಡದ ಜಾಗ ಹತ್ತು ಲಕ್ಷ ಬೆಲೆ ಬಾಳುತ್ತದೆ ಎನ್ನುವುದು ಹೊಳೆದದ್ದೇ ತೀರ ಇತ್ತೀಚೆಗೆ. ಮೊದಲು ಧಾರವಾಡದಲ್ಲಿ ಹೀಗೆಲ್ಲಾ ಭೂಮಿಗೆ ಬಂಗಾರದ ದರವಿರಲಿಲ್ಲ.
ಧಾರವಾಡ ಶಹರ ಬೆಳೆದಂತೆ, ಹೈಕೋರ್ಟು ಅಂತ ಆದ ಮೇಲೆ, ಇಲ್ಲೂ ಒಂದು ಇಂಡಸ್ಟ್ರಿಯಲ್ ಏರಿಯಾ ಹುಟ್ಟಿದ ಮೇಲೆ ಗುಂಟೆ ಭೂಮಿಗೂ ಹತ್ತು ಲಕ್ಷ ದಾಟುವ ದರ ಫಿಕ್ಸ್ ಆದ ಮೇಲೆ ಹೀಗೆ ವರ್ಷಕ್ಕೊಮ್ಮೆ ಫಲ ಕೊಡುವ ಮಾವು ಇದ್ದರೆಷ್ಟು ಹೋದರೇಷ್ಟು ಎನ್ನುವುದು ಆ ತೋಟದ ಮಾಲೀಕನ ಲೆಕ್ಕಾಚಾರ. ಅಂತೂ ಇಂತೂ ಆ ಮಾವಿನ ಗಿಡಗಳಿಗೆ ಅಳಿಗಾಲ ಕೂಡಿಬಂತು. ದೆವ್ವಿನಂಥಾ ಮಶೀನ್ ಗಳು ನೆಲದಲ್ಲಿ ತಮ್ಮ ಹರಿತ ನಾಲಿಗೆ ತುರುಕಿ, ಗಿಡಗಳ ಬೇರು ಕತ್ತರಿಸುವ ಕೆಲಸ ಮಾಡಿದವು. ನೂರಾರು ಮಾವಿನ ಗಿಡಗಳು ಎರಡೇ ದಿನಗಳಲ್ಲಿ ಉಸಿರು ಕಳೆದುಕೊಂಡು ಮಗ್ಗಲು ಹೊರಳಿಸಿದವು. ತೋಟದ ಮಾಲೀಕ ಬಾಪೂಗೌಡನಿಗೆ ಬಯಲಾದ ನೆಲದಲ್ಲಿ ಗರಿ ಗರಿ ನೋಟನ್ನೇ ಬಿತ್ತಿ ನೋಟನ್ನೇ ಬೆಳೆದ ಹಗಲು ಗನಸು. ಈ ಬಾಪೂಗೌಡನ ಮಗ ಶಶಿಧರ ದಾವಣಗೇರಿಯ ಲೋಕೋಪಯೋಗಿ ಇಲಾಖೆಯಲ್ಲಿ ಇಂಜನೀಯರ್ ತನ್ನ ಜಮೀನಿನ ಜಾಗವನ್ನು ಕಳೆದು, ಗುಣಿಸಿ, ಕೂಡಿಸಿ ಅದು ಎಷ್ಟು ಕೋಟಿಯ ಕಿಮ್ಮತ್ತಿಗೆ ಸಾಟಿ ಎನ್ನುವ ಬಗ್ಗೆ ಅಪ್ಪನ ಮುಂದೆ ಸವಿವರ ಲೆಕ್ಕ ಒಪ್ಪಿಸಿ ಮಗ ಶಶಿಧರ ತನ್ನ ಜಾಣತನವನ್ನು ಮೆರೆದಿದ್ದ. ಅಪ್ಪನಿಗೂ ತನ್ನ ಮಗ ಎಂಥಾ ಜಾಣ..! ತಾನೆಂಥಾ ಪೆದ್ದ.. ಈ ಕೆಲಸ ಅದಾವಾಗಲೋ ಮಾಡಬೇಕಿತ್ತು. ತನಗೆ ಈ ಭೂಮಿಯ ಬೆಲೆ ಇಷ್ಟಿದೆ ಎನ್ನುವುದೇ ತಿಳಿಯಲಿಲ್ಲವಲ್ಲ..? ಎಂದೆಲ್ಲಾ ಹಲುಬಿದ. ಆದರೂ ಆ ಮಾವಿನ ತೋಪದಲ್ಲಿರೋ ಸುಖ ಈ ಬಯಲು ಜಾಗದಲ್ಲಿ ಇಲ್ಲವಲ್ಲ..! ಎಂದು ಅವನ ಮನಸಿಗೆ ಅನಿಸುತ್ತಿದ್ದರೂ ಮಗನ ದೇಶಾವರಿ ಸಮಜಾಯಿಷಿ ಮುಂದೆ, ಹತ್ತಾರು ವರ್ಷ ಕಷ್ಟ ಪಟ್ಟು ಬೆಳೆಸಿದ ಮಾವಿನ ಗಿಡಗಳು ಉರುಳುವ ವೇಳೆಯಲ್ಲಿ ಬಾಪೂಗೌಡನಿಗೆ ಖರೆ ಖರೆ ತುಸು ಹಳಾಹಳಿಯಾಗಿತ್ತು.
ಆ ಕರಿಗುಂಡ, ಕಾಗದಪೊರೆ, ಆಪೂಸ್, ಮಲ್ಲಿಗೆ, ಮಲಗೋಬಾ, ತೋತಾಪುರಿ ಒಂದೇ ಎರಡೇ.. ಹತ್ತಾರು ಜಾತಿಯ ಥಳಿಗಳು. ಅವುಗಳಲ್ಲಿ ಕೆಲವು ತಾನೆ ಖುದ್ದಾಗಿ ಕಸಿ ಮಾಡಿದ್ದು. ಈಗ ಅವೆಲ್ಲವೂ ಬಟಾಬಯಲಾಗಿ ಮನುಷ್ಯ ವಸತಿಗಾಗಿ ಜಾಗ ಬಿಟ್ಟುಕೊಟ್ಟಿವೆ. ಈ ಮನುಷ್ಯನಿಗೋ ಎಷ್ಟಾದರೂ ಸಾಲದು. ಮೂರು..ನಾಲ್ಕು.. ಹೆಂದತಿಯ ಹೆಸರಿಗೊಂದು.. ಮಗನ ಹೆಸರಿಗೊಂದು.. ಹುಟ್ಟಲಿರುವ ಮೊಮ್ಮಗನಿಗೊಂದು ಹೀಗೆ ಖರೀದಿಸುತ್ತಲೇ ಇರುತ್ತಾನೆ. ಸುಮಾರು ಐವತ್ತು ಎಕರೆ ಭೂ ಪ್ರದೇಶವದು. ಅದರ ಸುತ್ತಲೂ ತಂತಿಯ ಬೇಲಿಯೊಂದು ಎದ್ದು ನಿಂತಿದೆ. ನಡುವೆ ಅಡ್ದಾದಿಡ್ದಿಯಾಗಿ ನಾಕೈದು ಠಾರ್ ರೋಡಗಳು ಮೂಡಿವೆ. ಆ ರಸ್ತೆಗುಂಟ ಮೆರಿಕ್ಯುರಿ ಲೈಟ್ಗಳು ಕಂಬದ ಮೇಲೆ ತಲೆ ಎತ್ತಿ ನಿಂತಿವೆ. ನಾಲ್ಕು ಹೈ ವೋಲ್ಟೇಜಿನ ಟ್ರಾನ್ಸ್ಫಾರ್ಮರ್ ಕಂಬಗಳು ಚಿರ್..! ಎಂದು ಅರಚುವ ಸದ್ದು ದೂರದಲ್ಲಿದ್ದಾಗಲೇ ಕಿವಿಗೆ ಬೀಳುತ್ತದೆ.
ಆ ದಿನ ಬೆಳಗಿನ ಜಾವ ರಾಜೇಶನಿಗೆ ವಾಕಿಂಗ್ ತೆರಳಲು ಅದೇಕೋ ಮನಸಿರಲಿಲ್ಲ. ಆದರೂ ಒಳ್ಳೆಯ ರೂಢಿಗಳನ್ನು ಕಷ್ಟವಾದರೂ ಕಾಯಲೇಬೇಕು ಎನ್ನುವುದು ಅವನ ವಾದ. ಹಾಗಾಗಿಯೇ ಮೈ ಸೇರಿಕೊಂಡ ಆಲಸ್ಯದ ನೆತ್ತಿಗೆ ಕುಕ್ಕಿ ಹೆಜ್ಜೆ ಹಾಕತೊಡಗಿದ. ಕಿರಿದಾದ ಆ ರಸ್ತೆಯಗುಂಟ ತುಸು ದೂರ ನಡೆದರೆ ಕೆಳಬದಿ ಇರೋ ತಾವರೆ ಹೊಂಡದ ಸಮೀಪ ಇಬ್ಬರು ಮಧ್ಯವಯಸ್ಸಿನವರು ಎದುರು ಬದುರಾಗಿ ಕುಳಿತು ಬೀಡಿ ಸೇದುತ್ತಾ ಕಡ ತಂದ ಹಣಕ್ಕೆ ಕೊಡಬೇಕಾದ ಬಡ್ದಿ ಮೊತ್ತದ ಬಗ್ಗೆ ಮಾತನಾಡುತ್ತಿದ್ದರು. ಇಬ್ಬರ ಬದಿಯೂ ಒಂದೊಂದು ತಂಬಿಗೆ ಇತ್ತು. ಛೇ..! ಈ ಜನ ಈಗಲೂ ..ಎಂದು ಕೊಳ್ಳುತ್ತ ರಾಜೇಶ ಅವಸರದಿಂದ ನಡೆಯತೊಡಗಿದ. ಅದಾಗಲೇ ಚುಮು ಚುಮು ಬೆಳಕು ಬಯಲಾಗುತ್ತಿತ್ತು. ಸೈಟ್ ನಡುವಿನ ರಸ್ತೆಯಲ್ಲಿ ಜನ ಅವಸರ ಅವಸರವಾಗಿ ವಾಕಿಂಗ್ ಮಾಡುತ್ತಿರುವುದನ್ನು ದೂರದಿಂದಲೇ ಗಮನಿಸಿದ ರಾಜೇಶ ಇನ್ನೇನು ನಾಳೆ ಅಲ್ಲೆಲ್ಲಾ ಮನೆಗಳು ಏಳುತ್ತವೆ ವಾಕಿಂಗ್ ಮಾಡುವುದು ಇಂದು ಮಾತ್ರ ಎನ್ನುವಂತೆ ಅವರು ಗಡಬಡಿಸಿ ನಡೆಯುವ ರೀತಿಯಿತ್ತು. ಹಾಗೆ ಒಂದೊಮ್ಮೆ ರಾತ್ರೋರಾತ್ರಿ ಮನೆಗಳು ನಿಮರ್ಾಣವಾಗಿ, ಇಲ್ಲಿ ವಾಕಿಂಗ್ ಮಾಡಬೇಡಿ ಎನ್ನುವ ಕಂಡೀಶನ್ ಬಂದ್ರೆ..? ಬಂದೇ ಬರುವ ಬಗ್ಗೆ ರಾಜೇಶನಿಗೆ ತಿಳಿದಿದೆ. ಅಷ್ಟರಲ್ಲಿ ಈ ಬಯಲಾದ ಮಾವಿನ ತೋಪಿಗಿಂತ ಸ್ವಲ್ಪ ದೂರದಲ್ಲಿ ಇನ್ನೊಂದು ತೋಟವಿದೆ. ಅಲ್ಲೂ ಸೈಟ್ ಗಳಾಗುವ ಸುದ್ದಿಯಿದೆ. ಆ ಗಳಿಗೆಯಲ್ಲಿ ಅಲ್ಲಿ ಮೂಡುವ ರಸ್ತೆಗಳ ಮೇಲೆ ಹೆಜ್ಜೆ ಊರಿದರಾಯಿತು ಎಂದು ಯೋಚಿಸುತ್ತಾ ಸದ್ಯ ಈಗಿರೋ ಬಯಲು ಜಾಗಕ್ಕೆ ವಾಕಿಂಗ್ ಮಾಡಲು ಒಳಬರುತ್ತಿರುವಂತೆ, ಆರಂಭದಲ್ಲಿಯೇ ಕಟಾವ್ ಮಾಡುವ ವೇಳೆಯಲ್ಲಿ ಅಚಾನಕ್ ಆಗಿ ಉಳಿದ ಮಾವಿನ ಗಿಡವೊಂದು ಬೋಳುತಲೆಯಲಿ ಕ್ಷೌರಿಕನ ಹರಿತ ಕತ್ತಿಯ ಕಣ್ತಪ್ಪಿಸಿ ಉಳಿದ ಕೂದಲೆಳೆಯಂತೆ ಭಾಸವಾಯಿತು. ಇದ್ದಕ್ಕಿದ್ದಂತೆ ಆ ಮಾವಿನ ಗಿಡ ಅವನೊಂದಿಗೆ ಮೌನ ಸಂಭಾಷಣೆಗಿಳಿಯಿತು.
‘ಅಯ್ಯಾ ಮನುಷ್ಯನೇ ನಾವು ಯಾವ ತಪ್ಪನ್ನೂ ಮಾಡಿದವರಲ್ಲ.. ಹಾಗೆಯೇ ಯಾವ ಮೋಸವನ್ನೂ.. ಮಳೆ ಕಡಿಮೆಯಾದರೂ ಬತ್ತಿದ ಎದೆಯನ್ನೇ ಬಸಿದು ಹೂವು.. ಹೀಚು.. ಕಾಯಿ.. ಬಿಟ್ಟು ಹಣ್ಣು ಕೊಟ್ಟವರು. ಆದರೇನು ನಾವು ವರ್ಷಕ್ಕೊಮ್ಮೆ ಮಾತ್ರ ಫಲಕೊಡುವವರು. ನಿಮ್ಮ ಹಪಾಪಿತನದ ಝಣ ಝಣ ಕಾಂಚಾಣದ ಎದುರು ನಾವು ಸೋತು ಹೋದೆವು. ಹತ್ತಾರು ವರ್ಷ ನಮ್ಮನ್ನು ಜೋಪಾನ ಮಾಡಿದಾತನೇ ಮುಂದೆ ನಿಂತು ನಮ್ಮ ಸೋದರ ಸಂಬಂಧಿಗಳನ್ನು ನೆಲಕ್ಕುರುಳಿಸುವಾಗ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅದೇನೋ ಶೋ ಗಿಡಗಳಂತೆ.. ಅಲ್ಲಿ ಸಾಲಾಗಿ ನಿಂತಿವೆ ನೋಡು, ಅವೇ.. ಅವುಗಳಿಂದ ಸರಿಯಾದ ನೆರಳೂ ಇಲ್ಲ..ಹಣ್ಣೂ ಇಲ್ಲ. ಆದರೂ ಅವುಗಳ ಮೇಲೆಯೇ ನಮ್ಮ ಯಜಮಾನನ ಪ್ರೀತಿ. ನಾನು ಯಾಕಾದರೂ ಉಳಿದೆ ಎನ್ನುವ ಶೋಕವೇ ನನ್ನನ್ನು ಅನುದಿನ ಕಿತ್ತು ತಿನ್ನುತ್ತಿದೆ. ಈಗ ಈ ಅನಾಥ ಪ್ರಜ್ಞೆಯ ನಡುವೆಯೂ ಗರ್ಭ ಧರಿಸಿದ ನನಗೆ ಸಂತೋಷವಾಗಿದೆಯಾದರೂ ನಾನೀಗ ಹರಕೆಯ ಕುರಿಯಂತಿದ್ದೇನೆ. ನನ್ನ ಜಾಗೆಯಲ್ಲಿ ಅದಾವ ಶೋ ಗಿಡ ಬಂದು ನಿಲ್ಲುತ್ತದೆಯೋ ನನಗೆ ತಿಳಿಯದು. ಇಲ್ಲಿ ವಾಕಿಂಗ್ ಬರುವವರ ಮಾತುಗಳು, ಅವರಲ್ಲಿರುವ ಮತ್ಸರದ ಭಾವನೆ, ಬೇರೆಯವರ ಮನೆಯ ದೋಸೆಯ ತೂತು ಎಣೆಸುವ ಮಾತು ಇವೆಲ್ಲವನ್ನೂ ಕೇಳಿ ಕೇಳಿ ಸಾಕಾಗಿ ಹೋಗಿದೆ. ಉಳಿದ ನನಗಿಂತಲೂ ಅಳಿದುಹೋದ ನನ್ನ ಸಂಬಂಧಿಗಳೇ ಎಷ್ಟೊ ವಾಸಿ ಎನಿಸುತ್ತಿದೆ.’ ಎಂದು ಆ ಗಿಡ ತನ್ನ ಮುಂದೆ ಗೋಳಿಡುವಂತೆ ಅನಿಸುತ್ತಿತ್ತು.
ಹಾಗೆಯೇ ತುಸು ಮುಂದೆ ನಡೆದಾಗ ಬಲಬದಿಯಲ್ಲಿ ಒಂದು ಮುಳ್ಳಿನ ಗಿಡ ಅದರದು ಇನ್ನೊಂದು ಗೋಳು. ಅದೂ ಕೂಡಾ ರಾಜೇಶನ ಕಿವಿಯಲಿ ಪಿಸು ಮಾತಲಿ ‘ಅಯ್ಯಾ ಮಹಾನುಭಾವ, ನನ್ನ ಹೆಸರು ಜಾಲಿ.. ಜಾಲಿಗಿಡ.. ನೀವೆಲ್ಲಾ ನನ್ನ ಮೇಲೆ ಹಾಡೇ ಬರೆದಿರುವಿರಿ. ನಾನು ನೆರಳಲ್ಲ ಎಂದು ಹೇಳಿದಿರಿ. ಆದರೂ ಅದೇಕೋ ನಾನು ಉಳಿದು ಬಿಟ್ಟೆ ಅಂದ ಹಾಗೆ ನಾನು ಕಣ್ತಪ್ಪಿ ಉಳಿದಿಲ್ಲ. ಬಹುಷ; ನನ್ನ ಬುಡದಲ್ಲಿ ದೊಡ್ದದಾದ ಕಲ್ಲು ಬಂಡೆಯೊಂದಿದೆ. ಇದರ ಉಸಾಬರಿ ಈಗ ಬೇಡ ಆಮೇಲೆ ನೋಡಿದರಾಯ್ತು ಎಂದು ಬಿಟ್ಟಿರಬಹುದು. ಹಣ್ಣು ಕೊಡೊ ಮಾವಿನ ಗಿಡಗಳನ್ನೇ ಬುಡಸಮೇತ ಮಾಡಿದ ಮನುಷ್ಯ ನನ್ನನ್ನು ಕಾಯುವುದಿದೆಯೇ..? ಖಂಡಿತ ಇಲ್ಲ. ಯಾಕೆಂದರೆ ನಾನು ಹೇಳಿ ಕೇಳಿ ಮುಳ್ಳಿನ ಗಿಡ. ನನಗೆ ಅವರು ಕಡಿಯುವ ಬಗ್ಗೆ ಬೇಸರವಿಲ್ಲ, ಬೇಸರವಿದ್ದದ್ದು ನನ್ನ ಒಡಲೊಳಗೆ ಪ್ರತಿ ನಿತ್ಯ ಅತ್ಯಂತ ಪ್ರೀತಿ ವಿಶ್ವಾಸದಿಂದ ಆಟ ಆಡಿಕೊಂಡಿದ್ದ ನೂರಾರು ಗುಬ್ಬಿಗಳು ಈಗ ನನ್ನ ಬಳಿ ಸುಳಿಯುತ್ತಲೇ ಇಲ್ಲ. ಸಾಯಂಕಾಲ ಮತ್ತು ನಸುಕಿನ ಜಾವ ಮುಳ್ಳೆದೆಯಲ್ಲಿ ಹೊಮ್ಮುವ ಆ ಚಿಲಿಪಿಲಿ ನಾದದ ಸದ್ದಡಗಿಸಿದವರನ್ನು ನಾನು ಹೇಗೆ ಕ್ಷಮಿಸಲಿ..? ನನ್ನ ಬದುಕೀಗ ನಿರರ್ಥಕ ಎನಿಸುತ್ತಿದೆ.’ ಎಂದು ತನ್ನ ಗೋಳಿನ ಕತೆ ಹೇಳಿ ನಿಟ್ಟುಸಿರು ಬಿಟ್ಟಂತೆನಿಸಿತು. ಮನುಷ್ಯನ ಹಣದ ದಾಹಕ್ಕೆ ಇಂಥಾ ಅದೆಷ್ಟು ಮಾವಿನ ತೋಪುಗಳು, ತೆಂಗಿನ ತೋಟಗಳು, ಜೋಳದ ಗದ್ದೆಗಳು ಬಯಲಾಗಿ, ಆಲಯಗಳಿಗೆ ಮೂಲವಾಗುವುದಿದೆಯೋ ತಿಳಿದಿಲ್ಲ ಎಂದು ಯೋಚಿಸುತ್ತಲೇ ರಾಜೇಶ ಮುನ್ನಡೆದ.
ಎದುರು ಬದಿಯಲ್ಲಿ ಸ್ಕಾರ್ಫ್  ಸುತ್ತಿ ನಡೆಯುವವರು, ತಲೆಗೆ ಉಣ್ಣೆ ಟೋಪಿ ಧರಿಸಿ ನಡೆಯುವವರು, ಕಿವಿಯಷ್ಟೇ ಮುಚ್ಚಿರುವವರು, ಸ್ವೀಟರ್ ಧರಿಸಿ ನಡೆಯುವವರು, ಮೊಬೈಲಲ್ಲಿ ಹಾಡನ್ನು ಕೇಳುತ್ತ ನಡೆದವರು, ತಮ್ಮ ಸಾಕು ನಾಯಿಯ ಒಂದು .. ಎರಡನ್ನೂ ಮುಗಿಸುತ್ತಲೇ ವಾಕಿಂಗ್ ಮಾಡುವವರು , ಅಲ್ಲಲ್ಲಿ ಕುಳಿತು ಪ್ರಾಣಾಯಾಮ ಮಾಡುವವರು.. ಬಾಗುವ, ಮೈ ಮುರಿಯುವ, ಓಡುವ ಹೀಗೆ ತರಾವರಿ ಕಸರತ್ತು ಆ ಬಯಲಲ್ಲಿ ನಡೆದದ್ದು ರಾಜೇಶನಿಗೆ ತೋರುತ್ತಿತ್ತು. ಅಲ್ಲೇ ಹತ್ತಿರದಲ್ಲಿ ‘ಮಾನವ ಮೂಳೆ ಮಾಂಸದ ಹೊದಿಕೆ’ ಎನ್ನುವ ಹಾಡನ್ನು ಮೊಬೈಲ್ ಲಿ ಹಚ್ಚಿ ಅಂಗಾತ ಚಾಪೆಯ ಮೇಲೆ ಮಲಗಿ ವ್ಯಾಯಾಮ ಮಾಡುವವನು, ಅಲ್ಲೇ ಸ್ವಲ್ಪ ದೂರದಲ್ಲಿ ಇನ್ನೊಬ್ಬ ವಿಕಾರವಾಗಿ ನಗುವ, ಗೊಗ್ಗರು ದನಿಯಲ್ಲಿ ಕೆಮ್ಮುವ ಮೂಲಕವೇ ವ್ಯಾಯಾಮ ಮಾಡುವವನು. ಇಡ್ಲಿಗೆ ಹಿಟ್ಟು ರುಬ್ಬಿಟ್ಟಿದ್ದು, ತಾನು ಅಡುಗೆಗೆ ಎಣ್ಣೆ ಕಡಿಮೆ ಹಾಕುವುದು, ಪಕ್ಕದ ಮನೆಯಾಕೆ ಚಾಡಿಕೋರತನ ಸಾಕಾಗಿ ಹೋಗಿದೆ ಎನ್ನುವುದು, ಸಣ್ಣ ಹುಡುಗಿ ಉಪ್ಪಿಟ್ಟನ್ನು ತಿನ್ನೊದಿಲ್ಲ ಇತ್ಯಾದಿ.. ಇತ್ಯಾದಿ.. ಹೀಗೆ ಓಣಿಯಲ್ಲಿಯ ಹೆಂಗಸರು ವಾಕಿಂಗ್ ಲ್ಲಿ ಸಂಭಾಷಣೆಯಲ್ಲಿ ತೊಡಗುವ ರೀತಿಯನ್ನು ನೆನೆದು ರಾಜೇಶ ಮನದಲ್ಲಿಯೇ ನಗುತ್ತಾ ಎಂದಿನಂತೆ ವೇಗವಾಗಿ ನಡೆಯುತ್ತಿದ್ದ. ಇಡೀ ಸಂಸಾರದ ತಾಪತ್ರಯಗಳನ್ನೇ ಇಲ್ಲಿ ಹೊತ್ತು ತರುವ ಇವರು ಮಾಡುವ ವಾಕಿಂಗ್ ಅದಾವ ರೀತಿ ಇವರ ಶರೀರ ಮತ್ತು ಮನಸಿನ ಮೇಲೆ ಕೆಲಸ ಮಾಡುವದೋ ತನಗಂತೂ ತಿಳಿಯದು ಎಂದುಕೊಂಡು ಮನೆ ಕಡೆಗೆ ನಡೆದ.

***

ಒಂದೇ ತಿಂಗಳಲ್ಲಿ ಅಲ್ಲಿ ಭಯಂಕರ ಬದಲಾವಣೆಯಾಗಿತ್ತು. ಅದೊಂದು ದಿನ ಇದ್ದಕ್ಕಿದ್ದಂತೆ ರಸ್ತೆಯ ಎಲ್ಲ ದಿಕ್ಕುಗಳನ್ನು ಮುಚ್ಚಲಾಗಿತ್ತು. ಅಂದುಕೊಂಡಂತೆ ಇಲ್ಲಿ ಸೈಟ್ ಹೊಂದಿದವರಿಗೆ ಮಾತ್ರ ಪ್ರವೇಶ ಎನ್ನುವ ಬೋರ್ಡ್ ಕೂಡಾ ಬಿದ್ದಾಗಿತ್ತು. ಅದಾಗಲೇ ಅಲ್ಲಿ ಸಾಕಷ್ಟು ಭವ್ಯ ಬಂಗಲೆಗಳು ತಲೆ ಎತ್ತಿದ್ದವು. ಹಿಂದೊಮ್ಮೆ ತನ್ನೊಂದಿಗೆ ಮೌನವಾಗಿಯೇ ಬೇಕಾದಷ್ಟನ್ನು ಮಾತನಾಡಿದ ಆ ಒಂಟಿ ಮಾವಿನ ಗಿಡದ ಯಾವ ಗುರುತೂ ಅಲ್ಲಿರಲಿಲ್ಲ. ಅಂತೆಯೇ ಜಾಲಿಯ ಮರ.. ಅದರ ಬುಡದಲ್ಲಿದ್ದ ಬಂಡೆಗಲ್ಲು ಹೇಳ ಹೆಸರಿಲ್ಲದಂತೆ ಮಾಯ. ಎಲ್ಲರಂತೆ ರಾಜೇಶ ಕೂಡಾ ಈಗ ಅಲ್ಲಿಂದ ಅನತಿ ದೂರದಲ್ಲಿರೋ ಇನ್ನೊಂದು ಬಯಲರಸಿ ವಾಕಿಂಗ್ ಗೆ ತೆರಳುತ್ತಿದ್ದ. ಅದು ಅದೇ ಇನ್ನೊಂದು ಮಾವಿನ ತೋಪು. ಅಲ್ಲೂ ಈಗ ಭರ್ಜರಿ ಕೆಲಸ ನಡೆದಿದೆ. ರಸ್ತೆಗಳು.. ಚರಂಡಿಗಳು, ಕಂಪೌಂಡ್ ಗೋಡೆ.. ಲೈಟ್ ಕಂಬ ಇತ್ಯಾದಿ.. ಇತ್ಯಾದಿ. ಅದು ಬಯಲಾಗಿ.. ಅಲ್ಲಿಯ ಸೈಟಗಳೆಲ್ಲಾ ಬುಕ್ ಆಗೋವರೆಗೂ ಮಾತ್ರ ಇಲ್ಲಿ ಪ್ರವೇಶ, ಆ ನಂತರ ಮತ್ತೆ ಹೀಗೇ ತುಸು ದೂರದಲ್ಲಿರುವ ಇನ್ನೊಂದು ಬಯಲು ಜಾಗ.. ಹೀಗೆ ಅದೆಷ್ಟು ಕೃಷಿ ಭೂಮಿ ಬಯಲಾಗಿ, ಆಲಯಕ್ಕೆ ನೆಲವಾಗಬೇಕೋ..ಏನೋ.. ಎನ್ನುವ ಆಲೋಚನೆಯ ನಡುವೆಯೇ ರಾಜೇಶ ನಡೆಯುತ್ತಿದ್ದ. ವೇಗವಾಗಿ..ಇನ್ನಷ್ಟು ವೇಗವಾಗಿ.

‍ಲೇಖಕರು G

21 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading