ಕಾವ್ಯದ ಸಂಶೋಧನೆ ಸೂಕ್ಷ್ಮತೆಯನ್ನು ಬಯಸುತ್ತದೆ- ಕೋಡಗುಂಟಿ ಪ್ರಶಸ್ತಿ-2011 ನೀಡುವ ಸಮಾರಂಭದಲ್ಲಿ ಡಾ. ಹುಳಿಯಾರ್
ಬಸವರಾಜ ಕೋಡಗುಂಟಿ
ಡಾ. ಹುಳಿಯಾರ್ ಅವರು ಬಂಡಾರ ಪ್ರಕಾಶನ, ಮಸ್ಕಿ ಇವರು ಪ್ರತಿವರ್ಷ ಕನ್ನಡ-ಕನರ್ಾಟಕಗಳಿಗೆ ಸಂಬಂಧಿಸಿದ ಉತ್ತಮ ಪ್ರಬಂಧಕ್ಕೆ ನೀಡುವ ‘ಕೋಡಗುಂಟಿ ಪ್ರಶಸ್ತಿ’ಯನ್ನು ನೀಡುವ ಸಮಾರಂಭದಲ್ಲಿ ಮಾತನಾಡಿದರು. 2011ನೆಯ ಸಾಲಿನ ಕೋಡಗುಂಟಿ ಪ್ರಶಸ್ತಿಯನ್ನು ಡಾ. ಎಂ.ಡಿ. ಒಕ್ಕುಂದ ಅವರು ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯಿಂದ ಪಿಎಚ್.ಡಿ. ಪದವಿಯನ್ನು ಪಡೆದ ‘ಕನ್ನಡ ಸಾಹಿತ್ಯದಲ್ಲಿ ಕೋಮು ಸೌಹಾರ್ದತೆಯ ಸ್ವರೂಪ’ ಎಂಬ ಸಂಶೋಧನಾ ಪ್ರಬಂಧ ಪಡೆದಿದೆ. ಈ ಕಾರ್ಯಕ್ರಮ ದಿನಾಂಕ 20-01-2013ರಂದು ರಾಯಚೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಯಿತು.
ಪ್ರಸ್ತುತ ಪ್ರಶಸ್ತಿ ಪಡೆದ ಪ್ರಬಂಧದ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಮಾತನಾಡಿದ ಡಾ. ಹುಳಿಯಾರ್, ಹೇಗೆ ಧರ್ಮ ಸಂಕೇತಗಳಲ್ಲಿ ಹುದುಗಿಕೊಳ್ಳುತ್ತವೆ ಮತ್ತು ಹೇಗೆ ಸಂಕೇತಗಳು ಸಮಾಜವನ್ನು ವ್ಯಾಪಿಸಿಕೊಳ್ಳುತ್ತವೆ ಎಂಬುದನ್ನು ವಿವರಿಸಿದರು. ಸಾಹಿತ್ಯವೂ ಕೂಡ ಹೀಗೆ ಧರ್ಮದ ಸಂಕೇತಗಳನ್ನು ಒಳಗೊಳ್ಳುವ ಮೂಲಕ ಮತೀಯವಾಗಿಬಿಡುತ್ತದೆ ಎಂಬುದನ್ನು ಅವರು ಹೇಳಿದರು. ಭಾಷೆ ಬರೆದ ಬಳಿಕ ತನ್ನ ಅರ್ಥವನ್ನು ಕಡೆದುಕೊಳ್ಳುತ್ತದೆ. ಧರ್ಮದ ಸಂಕೇತಗಳನ್ನು ಬಳಸಿಕೊಳ್ಳುವ ಮೂಲಕ ಸಾಹಿತ್ಯಕ್ಕೆ ಧಾರ್ಮಿಕತೆಯ ಲೇಪ ಒದಗುತ್ತದೆ. ಅದು ಕೋಮು ಸೌಹಾರ್ದತೆಯ ವಿರುದ್ದ ಮತೀಯತೆಯ ಮುಖವಾಡ ಹಾಕಿಕೊಂಡು ಬೆಳೆಯುತ್ತದೆ. ಮತೀಯತೆಯನ್ನು ಪ್ರತಿಷ್ಟಾಪಿಸುವುದು, ಅದನ್ನು ನೇರವಾಗಿ, ಅನೇರವಾಗಿ ಸಾಹಿತ್ಯದಲ್ಲಿ ಬಳಿಸಿಕೊಳ್ಳುವುದು ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನವಾಗುತ್ತದೆ. ಸಾಹಿತ್ಯದಲ್ಲಿ ಇರುವ ಇಂತಹ ಪ್ರಯತ್ನಗಳನ್ನು ಇಲ್ಲವೆ ಧಾರ್ಮಿಕ ಸಂಕೇತಗಳನ್ನು ಅಧ್ಯಯನ ಮಾಡಿ ತೋರಿಸುವುದು ಕೋಮುಸೌಹಾರ್ದತೆಗಾಗಿ ಮಾಡುವ ಪ್ರಯತ್ನವೆ ಆಗಿದೆ. ಇದನ್ನು ವಿರೋಧಿಸುವುದು ಕೂಡ ಕುರುಡು ಧಾಮರ್ಿಕತೆಯನ್ನು ಬೆಂಬಲಿಸಿದಂತೆಯೆ ಎಂದು ಅವರು ಹೇಳಿದರು.
ಕನ್ನಡದ ಸಂದರ್ಭದಲ್ಲಿ ಕಾವ್ಯವನ್ನು ಹೆಚ್ಚು ಕಡಿಮೆ ಸಂಶೋಧನೆಯಿಂದ ಹೊರಗಡೆ ಇಟ್ಟಿದೆ. ಕಾವ್ಯದ ಸಂಶೋಧನೆ ಹೆಚ್ಚು ಸೂಕ್ಷ್ಮವಾದ ನೋಟವನ್ನು ಬಯಸುತ್ತದೆ, ಹಾಗಾಗಿ ಕತೆ, ಕಾದಂಬರಿಯಂತ ಸಾಹಿತ್ಯ ಪ್ರಕಾರಗಳನ್ನು ಅಧ್ಯಯನ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಯುವ ಸಂಶೋಧಕರು ಈ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಡಾ. ನಟರಾಜ ಹುಳಿಯಾರ್ ಹೇಳಿದರು.
ಯುವ ಸಂಶೋಧಕರು ಮುಖ್ಯವಾಗಿ ತಾವು ಮಾಡುವ/ಮಾಡುತ್ತಿರುವ ಸಂಶೋಧನೆ ಯಾಕೆ ಮತ್ತು ಎಷ್ಟು ಮಹತ್ವದ್ದು ಎಂಬುದನ್ನು ತಿಳಿದುಕೊಂಡಿರಬೇಕು, ತಮ್ಮ ಸಂಶೋಧನೆ ಹೇಗೆ ಸಮಾಜಕ್ಕೆ ಸಂಬಂಧಿಸಿದೆ, ಸಮಾಜದ ಬೆಳವಣಿಗೆಗೆ ಎಷ್ಟು ಪೂರಕವಾಗಿದೆ ಎಂಬುದನ್ನು ಕೂಡ ತಿಳಿದುಕೊಂಡಿರಬೇಕು ಎಂದು ಅವರು ಹೇಳಿದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಡಾ. ಎಂ.ಡಿ. ಒಕ್ಕುಂದ ತಮ್ಮ ಪ್ರಬಂಧಕ್ಕೆ ಪ್ರಶಸ್ತಿ ಬಂದುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು. ತಮ್ಮ ಅಧ್ಯಯನದ ಬಗೆಗೆ, ಅದರಲ್ಲಿ ಅವರಿಗೊದಗಿದ ಸಮಸ್ಯೆ, ಸವಾಲುಗಳನ್ನು ಕೂಡ ಅವರು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ಕನ್ನಡ ಸಾಹಿತ್ಯ ಹೇಗೆ ಮತೀಯವಾಗಿದೆ, ಮತ್ತು ಕನ್ನಡ ಸಂಶೋಧನೆ ಅದನ್ನು ತೋರಿಸುವಲ್ಲಿ ಹೇಗೆ ಮೂಕವಾಗಿದೆ ಎಂಬುದನ್ನು ಅವರು ತಮ್ಮ ಮಾತಿನಲ್ಲಿ ಎತ್ತಿ ಹೇಳಿದರು. ಅದರೊಂದಿಗೆ, ತಮ್ಮ ಅಧ್ಯಯನ ವಿರೋಧದ ದ್ವನಿಗಳನ್ನು ಎದುರಿಸಬೇಕಾಗಿ ಬಂದಿದ್ದಿತು, ಈಗ ಕೋಡಗುಂಟಿ ಪ್ರಶಸ್ತಿ ಬಂದಿರುವುದು ಆ ಬೇಸರವನ್ನು ಮರೆಸಿ ಸಂತೋಷವನ್ನು ತಂದಿದೆ ಎಂದು ಹೇಳಿದರು.
ಬಂಡಾರ ಪ್ರಕಾಶನ, ಮಸ್ಕಿ 2006ರಿಂದ ಪ್ರತಿವರ್ಷ ಕನ್ನಡ ಮತ್ತು ಕನರ್ಾಟಕಗಳಿಗೆ ಸಂಬಂಧಿಸಿದ ಆಯಾ ಕ್ಯಾಲೆಂಡರ್ ವರ್ಷದಲ್ಲಿ ಯಾವುದೆ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೆ ವಿಷಯದಲ್ಲಿ ಪಿಎಚ್.ಡಿ./ಎಂ.ಫಿಲ್.ನಂತಾ ಪದವಿಯನ್ನು ಪಡೆದ ಉತ್ತಮ ಸಂಶೋಧನಾ ಪ್ರಬಂಧಕ್ಕೆ ಕೋಡಗುಂಟಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಅದರೊಂದಿಗೆ ಉತ್ತಮ ಪ್ರಬಂಧಗಳನ್ನು ಪ್ರಕಟಣೇಗೂ ಆಯ್ಕೆ ಮಾಡುತ್ತದೆ. (ಈಗ 2012ರಲ್ಲಿ ಪದವಿ ಪಡೆದ ಸಂಶೋಧನಾ ಪ್ರಬಂಧಗಳನ್ನು ಪ್ರಶಸ್ತಿಗಾಗಿ ಕರೆದಿದೆ) ಇದೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯ ಬಗೆಗೆ ಮತ್ತು ಪ್ರಕಾಶನದ ಸಂಶೋಧನೆಗೆ ಸಂಬಂಧಿಸಿದ ಯೋಜನೆಗಳ ಬಗೆಗೆ ಡಾ. ಬಸವರಾಜ ಕೋಡಗುಂಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತಿಳಿಸಿದರು. ಇದೆ ಕಾರ್ಯಕ್ರಮದಲ್ಲಿ ಇನ್ನೊಂದು ಪ್ರಕಟಣೆಗೆ ಆಯ್ಕೆಯಾದ ಪ್ರಬಂಧ ‘ಕನ್ನಡ ಹಾಗೂ ತೆಲುಗು ದೇಸಿ ಛಂದಸ್ಸು’ ಎಂಬ ಪುಸ್ತಕವನ್ನು ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಂತೇಶ್ ಮಸ್ಕಿ ಅವರು ಬಿಡುಗಡೆ ಮಾಡಿದರು. ಲೇಖಕ ಶ್ರೀ ವಿರೂಪಾಕ್ಷಪ್ಪ ಮಾರಮ್ಮನಹಳ್ಳಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಕಾಶನ ಸಂಸ್ಥೆಯ ಪ್ರಕಾಶಕರಾದ ಶ್ರೀ ಪರಶುರಾಮ ಕೋಡಗುಂಟಿ ಅವರು ಸಸಿಗೆ ನೀರೆರೆಯುವ ಮೂಲಕ ನೆರವೆರಿಸಿದರು. ವಂದನಾರ್ಪಣೆಯನ್ನು ಕು. ರೇಣುಕಾ ಕೋಡಗುಂಟಿ ಅವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಲಕ್ಷ್ಮಿದೇವಿ ಅವರು ಮಾಡಿದರು.
ಸಮಾರಂಭದ ಕೆಲವು ದೃಶ್ಯಗಳು ನಿಮಗಾಗಿ :









abhinandane, nanu Odida uttama samshodhana prabandhagaLalli okkunda avara samshodhneyu seride.
abhinandanegalu sir