ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಬ್ಬಿಂಗ್ ಬಗ್ಗೆ ಸತ್ಯನಾರಾಯಣ್

ಜೋಗಿ ಡಬ್ಬಿಂಗ್ ಬೇಕು ಎಂದು ಎದ್ದಿರುವ ದನಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇವಳ ಉಡುಗೆ ಅವಳಿಗೆ ತೊಡಿಸಿ ಎಂಬ ಲೇಖನ ಕೂಡಾ ಬರೆದಿದ್ದರು ಅದಕ್ಕೆ ‘ನನ್ದೊಂದ್ಮಾತು’ ಬ್ಲಾಗ್ ನ, ಸುರಾನಾ ಕಾಲೇಜಿನ ಮುಖ್ಯ ಗ್ರಂಥಪಾಲಕರೂ  ಆದ  ಡಾ ಬಿ ಆರ್ ಸತ್ಯನಾರಾಯಣ್ ಅವರ ಪ್ರತಿಕ್ರಿಯೆ ಇಲ್ಲಿದೆ.

ಒಂದು ಒಳ್ಳೆಯ ಕನ್ನಡ ಕೃತಿ ಪ್ರಪಂಚದ ಯಾವ ಭಾಷೆಯಲ್ಲಿ ಬಂದರೂ ಅದು ಕನ್ನಡಕ್ಕೆ ಅನುವಾದವಾಗಬೇಕು. ಕನ್ನಡಿಗರು ಓದುವಂತಾಗಬೇಕು ಎಂದು ಅನುವಾದ ಅಕಾಡೆಮಿಯನ್ನೇ ಸ್ಥಾಪಿಸಿ ಸರ್ಕಾರ ಪೋಷಿಸುತ್ತದೆ. ಇವರು ಕನ್ನಡ ಪುಸ್ತಕಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸುವುದಿಸುವುದಕ್ಕಿಂತ ಬೇರೆ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ತರುವುದೇ ಹೆಚ್ಚು!

ಅದು ಒತ್ತಟ್ಟಿಗಿರಲಿ. ಉದ್ಯೋಗನಿಮಿತ್ತವಾಗಿ ಕರ್ನಾಟಕಕ್ಕೆ ಬಂದಿರುವ ಹಲವರು, ಪರಿಸಸರದ ಭಾಷೆಯಾದ ಕನ್ನಡದ ಅಲ್ಪಸ್ವಲ್ಪ ಪರಿಚಯ ಪಡೆದುಕೊಂಡಿರುತ್ತಾರೆ. ಆವರು ಹೆಚ್ಚು ಕನ್ನಡ ಚಿತ್ರಗಳನ್ನು ನೋಡಿದಾಗ ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಯಲು ಸಾಧ್ಯವಾಗುತ್ತದೆ. ಕೇವಲ ದೂರದರ್ಶನದ ಹಿಂದಿ ಕಾರ್ಯಕ್ರಮಗಳನ್ನು ನೋಡಿ ಹಿಂದಿಕಲಿತವರು ತುಂಬಾ ಜನರಿದ್ದಾರೆ. ದಶ್ಯಮಾದ್ಯಮದ ಶಕ್ತಿ ಅದು! ಆದರೆ ಆತನ ಮೆಚ್ಚಿನ ನಟರ ಚಿತ್ರಗಳನ್ನು ಅವನದೇ ಭಾಷೆಯಲ್ಲಿ ನೋಡಿದರೆ ಕನ್ನಡಕ್ಕೇನು ಪ್ರಯೋಜನ.

ಉದಾಹರಣೆಗೆ ತಮಿಳು ಮಾತೃಭಾಷೆಯ ರಜನೀಕಾಂತ್ ಅಭಿಮಾನಿಗಳು ಇಲ್ಲಿದ್ದಾರೆ ಎಂದಿಟ್ಟುಕೊಳ್ಳೋಣ. ರಜನೀಕಾಂತನ ಒಂದು ಚಿತ್ರದ ಮೂಲಭಾಷೆಯ ಪ್ರದರ್ಶನದ ಜೊತೆಗೆ, ಕನ್ನಡಕ್ಕೆ ಡಬಿಂಗ್ ಆದ ಚಿತ್ರದ ಪ್ರದರ್ಶನವೂ ಕೆಲವು ಚಿತ್ರ ಮಂದಿರದಲ್ಲಿ ನಡೆಯುತ್ತಿದೆ ಎಂದಿಟ್ಟುಕೊಳ್ಳೋಣ. ಆಗ ರಜನೀಕಾಂತ್ ಅಭಿಮಾನಿಗಳು, ಅನಿವಾರ್ಯ ಕಾರಣಗಳಿಂದ, ಉದಾಹರಣೆಗೆ, ತನ್ನ ಕನ್ನಡದ ಸ್ನೇಹಿತರ ಜೊತೆ, ಚಿತ್ರಮಂದಿರ ಮನೆಯ ಹತ್ತಿರ ಇದೆ ಎಂದೋ, ಮೂಲಬಾಷೆಯ ಚಿತ್ರ ಪ್ರದರ್ಶನ ನಡೆಯುತ್ತಿರುವ ಚಿತ್ರಮಂದಿರದಲ್ಲಿ ಟಿಕೆಟ್ ಸಿಗಲಿಲ್ಲ ಎಂದೋ ಡಬ್ ಆದ ಚಿತ್ರವನ್ನೇ ನೋಡುತ್ತಾನೆ. ಹೀಗೆ ಒಂದೆರಡು ಚಿತ್ರಗಳನ್ನು ನೋಡುವಷ್ಟರಲ್ಲಿ ಆತನಿಗೆ ಕನ್ನಡ ಭಾಷೆಯ ಪರಿಚಯ ಚೆನ್ನಾಗಿಯೇ ಆಗುತ್ತದೆ ಅಲ್ಲವೆ?

ಇನ್ನು ಕನ್ನಡ ಮಾತೃಭಾಷೆಯ ರಜನಿಕಾಂತ್ ಅಭಿಮಾನಿಗಳನ್ನು ನೋಡೋಣ. ಇವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಆದರೆ ರಜನಿಕಾಂತ್ ಇಷ್ಟ. ಆತನ ಚಿತ್ರಗಳೂ ಇಷ್ಟ. ಅವು ಕನ್ನಡದಲ್ಲಿ ಡಬ್ ಆಗಿಬಂದರೆ ನೋಡಿ ಖುಷಿಪಡುತ್ತಾರೆ. ಇಲ್ಲದಿದ್ದರೆ ಅನಿವಾರ್ಯವಾಗಿ ಮೂಲ ತಮಿಳು ಚಿತ್ರವನ್ನೇ ನೋಡುತ್ತಾರೆ. ಹೀಗೆ ಒಂದತ್ತಿಪ್ಪತ್ತು ತಮಿಳು ಚಿತ್ರಗಳನ್ನು ನೋಡುವಷ್ಟರಲ್ಲಿ ಕನ್ನಡಿಗನೂ ತಮಿಳುಭಾಷೆ ಕಲಿತುಕೊಳ್ಳುತ್ತಾನೆ. ಯಾರಾದರೂ ತಮಿಳು ಭಾಷಿಕರು ತಮಿಳಿನಲ್ಲಿ ಮಾತನಾಡಿದರೆ ತಾನೂ ತಮಿಳಿನಲ್ಲಿ ಮಾತನಾಡುವ ಉಮೇದು ತೋರಿಸುತ್ತಾನೆ. ಆಗ ಕನ್ನಡದರವು ನಿರಭಿಮಾನಿಗಳು, ಬೇರೆ ಭಾಷೆಯವರೊಂದಿಗೆ ಅವರ ಭಾಷೆಯಲ್ಲೇ ಮಾತನಾಡಲು ಪ್ರಯತ್ನಿಸುತ್ತಾರೆಯೇ ಹೊರತು ಕನ್ನಡದಲ್ಲಿ ಮಾತನಾಡಿ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡುವುದಿಲ್ಲ ಎಂದು ಕನ್ನಡ ಹೋರಾಟಗಾರರು ಆರೋಪ ಮಾಡುತ್ತಾರೆ!

ಇಂದು ಒಂದು ಸದಭಿರುಚಿಯ ಕಾರ್ಟೂನನ್ನು ಹಿಂದಿ, ತಮಿಳು, ತೆಲಗು, ಮಲೆಯಾಳಂ ಭಾಷೆಯ ಮಕ್ಕಳು ಅವರದೇ ಭಾಷೆಯಲ್ಲಿ ನೋಡುತ್ತಿದ್ದಾರೆ. ಆದರೆ ಕನ್ನಡದ ಮಕ್ಕಳು ವಿಧಿಯಿಲ್ಲದೆ. ಅದನ್ನು ಇಂಗ್ಲಿಷ್ ಅಥವಾ ಡಬ್ ಆದ ಬೇರೆ ಭಾಷೆಯಲ್ಲಿ ನೋಡುತ್ತಿವೆ. ಇಂದು ಕನ್ನಡದ ಮಕ್ಕಳಿಗೆ ಹೆಚ್ಚು ಭಾಷೆ ಕಲಿಯುವಂತೆ ಮಾಡುತ್ತಿದ್ದೇವೆಯೇ ಹೊರತು, ಬೇರೆ ಭಾಷೆಯವರಿಗೆ ಕನ್ನಡ ಕಲಿಯುವಂತೆ ಮಾಡುತ್ತಿಲ್ಲ. ನೀವು ಡಬ್ಬಿಂಗ್ ನಿಷೇದಿಸುವುದರಿಂದ ಚಿತ್ರರಂಗದ ಬೆಳವಣಿಗೆಗೆ ಮಾರಕವಾಗುತ್ತದೆ ಎಂಬುದು ಅರ್ಧ ಸತ್ಯ.

ಗುಣಮಟ್ಟವಿದ್ದಲ್ಲಿ ಗೆಲವು ಖಂಡಿತಾ ಇರುತ್ತದೆ. ಅಷ್ಟಕ್ಕೂ ಆತ್ಮಾಭಿಮಾನವನ್ನು ಒತ್ತೆ ಇಟ್ಟು, ಉಳಿಸಿಕೊಳ್ಳಬೇಕಾದ ತುರ್ತೂ ಯಾವ ಕಲೆಗೂ ಇರಬಾರದು. ಒಂದು ಚಿತ್ರದ ಡಬ್ಬಿಂಗ್ ನಿಂದ ಅನಾಹುತವಾಗುತ್ತದೆ ಎನ್ನುವುದಾದರೆ, ಪರಭಾಷಾ ಚಿತ್ರಗಳನ್ನು ಇಲ್ಲಿ ಪ್ರದರ್ಶನ ಮಾಡುವುದರಿಂದಲೂ ಅನಾಹುತವಾಗುತ್ತಿದೆ. ಡಬ್ಬಿಂಗ್ ಬೇಡ ಅನ್ನುವುದಾದರೆ ಪರಭಾಷಾ ಚಿತ್ರಗಳ ಪ್ರದರ್ಶನವೂ ಬೇಡ. ಆಗಿದ್ದರೆ ಹಿಂದಿನವರು ಡಬಿಂಗ್ ವಿರೋಧಿಸಿ ನಡೆಸಿದ ಹೋರಾಟವೆಲ್ಲಾ ವ್ಯರ್ಥವಾಗುವುದಿಲ್ಲವೆ? ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ. ಅದು ಹೇಗೆ ವ್ಯರ್ಥವಾಗುತ್ತದೆ. ಅಂದಿನ ಹೋರಾಟಗಾರರ ಉದ್ದೇಶ ಈಡೇರಿದೆ ಅಲ್ಲವೆ?

ಕನ್ನಡ ಚಿತ್ರರಂಗ ಕರ್ನಾಟಕದಲ್ಲಿ ಬಲವಾಗಿ ನೆಲೆಯೂರಬೇಕೆಂದು ಅಂದು ಡಬಿಂಗ್ ಚಿತ್ರಗಳನ್ನು ವಿರೋಧಿಸಿ ನಿಷೇದಿಸಲಾಗಿತ್ತು. ಈಗ ಸುಮಾರು ಅರ್ಧ ಶಮಾನದ ನಂತರವೂ ಕನ್ನಡ ಚಿತ್ರರಂಗಕ್ಕೆ ತನ್ನ ಮೇಲೆ ತನಗೆ ನಂಬಿಕೆ ಬಂದಿಲ್ಲವೆ? ಎಷ್ಟು ದಿನ ಸರ್ಕಾರ ಕೊಡುವ ಸಬ್ಸಿಡಿಯ ಮೇಲೆ ಚಿತ್ರರಂಗ ನಿಂತಿರಲು ಸಾಧ್ಯ? ವರ್ಷಕ್ಕೆ ನೂರಾರು ಚಿತ್ರಗಳು ನಿರ್ಮಾಣವಾಗುತ್ತಿವೆ ಎಂದರೆ ಅವರೆಲ್ಲಾ ಹಣ ಕಳೆದುಕೊಳ್ಳು ಚಿತ್ರನಿರ್ಮಾಣ ಮಾಡುತ್ತಾರೆಯೇ? ಡಬಿಂಗ್ ಚಿತ್ರಗಳಿಗೆ ಬೇಕಾಬಿಟ್ಟಿಯಾಗಿ ಅನುಮತಿ ಕೊಡುವುದಕ್ಕೆ ಬದಲಾಗಿ ಕೆಲವು ನಿಯಮಾವಳಿಗಳನ್ನು ರೂಪಿಸುವುದು ಒಳಿತು.

ಉದಾಹರಣೆಗೆ, ಮೂಲಚಿತ್ರದೊಂದಿಗೆ ಡಬ್ಬಿಂಗ್ ಚಿತ್ರವೂ ಬಿಡುಗಡೆ ಮಾಡಬೇಕು. ಇಷ್ಟೇ ಚಿತ್ರಮಂದಿರದಲ್ಲಿ ಮೂಲಚಿತ್ರ ಜೊತೆಗೆ ಡಬಿಂಗ್ ಚಿತ್ರ ಬಿಡುಗಡೆ ಆಗಬೇಕು. ಪರಿಣತರ ಮಂಡಳಿಯೊಂದನ್ನು ಸಂಯೋಜಿಸಿ ಡಬ್ ಮಾಡುವ ಚಿತ್ರದ ಬಗ್ಗೆ ಅವರಿಂದ ಅನುಮತಿ ಪಡೆದುಕೊಳ್ಳಬೇಕು. ಕನ್ನಡ ಭಾಷೆ ಸಂಸ್ಖೃತಿ ಯಾವುದಕ್ಕೂ ಕೇಡು ಬಯಸದ ಸದಭಿರುಚಿಯ ಚಿತ್ರಗಳನ್ನು ಮಾತ್ರ ಡಬ್ ಮಾಡಬೇಕು. ಹೀಗೆ. . . ಇದು ಕೇವಲ ಕನ್ನಡ ಚಿತ್ರರಂಗದ ಪ್ರಶ್ನೆಯಲ್ಲ. ಕನ್ನಡ ಭಾಷೆಯ, ಮಕ್ಕಳ ಪ್ರಶ್ನೆಯೂ ಹೌದು. ಡಬಿಂಗ್ ಬೇಡ ಎನ್ನುವುದಾದರೆ, ಮೊದಲು ಬೇರೆ ಭಾಷೆಯ ಚಿತ್ರಗಳು, ಕಾರ್ಟೂನುಗಳು, ಜಾಹಿರಾತುಗಳನ್ನೂ ನಿಷೇದಿಸಲಿ. ಕೊನೆಗೂ ಒಂದು ಮಾತಂತು ಸತ್ಯ. ಡಬಿಂಗ್ ಚಿತ್ರಗಳನ್ನು ವಿರೋಧಿಸುವವರು ಹೃದಯದಿಂದ ಯೋಚನೆ ಮಾಡುವುದನ್ನು ಬಿಟ್ಟರೆ ಒಳ್ಳೆಯದು

ಮರೆತ ಮಾತು: ಇವಳ ಉಡುಗೆ ಅವಳಿಗೆ ತೊಡಿಸಿ; ಅವಳ ಉಡುಗೆ ಇವಳಿಗೆ ತೊಡಿಸಿದ್ದರಿಂದಲೇ ಕನ್ನಡ ಸಾಹಿತ್ಯದಲ್ಲಿ ನವೋದಯದ ಹೊನಲು ಹರಿದಿದ್ದು

‍ಲೇಖಕರು G

25 February, 2011

2 Comments

  1. shrinivas.halakatti

    dabbing nijvaglu beku ansutte. remeko,swameko, dabbingo,rimixo yavudadarenu namage bekiruvudu “KANNADA” Beleyabekiruvudu “KANNADA’.
    B M SREE – “Kannada nadige kannadave gatee, anyata sharanam nasti”.

  2. Arun Javgal

    ಡಬ್ಬಿಂಗ್ ಬೇಕು/ಬೇಡ ಅನ್ನೋದನ್ನ ಪ್ರೇಕ್ಷಕ ನಿರ್ಧಾರ ಮಾಡ್ಲಿ-http://arunaraaga.blogspot.com/2011/04/blog-post_19.html

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading