ಟಿಪ್ಪು ಒಬ್ಬ ಮುಸ್ಲಿಂ ಆದ ಮಾತ್ರಕ್ಕೆ..

Open for Debate

ಟಿಪ್ಪು ಏಕೆ ವಿವಾದಾಸ್ಪದವಾಗುತ್ತಾನೆ ?

na-divakar1

ನಾ ದಿವಾಕರ್ 

tippuಸಮಕಾಲೀನ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೆಲವೊಮ್ಮೆ ಐತಿಹಾಸಿಕ ಸನ್ನಿವೇಶಗಳು, ವ್ಯಕ್ತಿಗಳು ಮತ್ತು ಘಟನೆಗಳು ಅತಿಯಾದ ಪ್ರಾಮುಖ್ಯತೆ ಪಡೆಯುತ್ತವೆ. ಇಂದಿನ ಸಮಸ್ಯೆಗಳನ್ನು ಗ್ರಹಿಸುವಲ್ಲಿ ಚಾರಿತ್ರಿಕ ಘಟನೆಗಳನ್ನು ಚಿಮ್ಮುಹಲಗೆಯನ್ನಾಗಿ ಬಳಸಿದಾಗ, ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಸಂಭವಿಸಿರಬಹುದಾದ ಹಲವು ಘಟನೆಗಳು ಸಮಕಾಲೀನ ಸಂದರ್ಭದ ಘಟನೆಗಳೊಡನೆ ಮೇಳೈಸಿ, ವಾಸ್ತವಕೆ ದೂರವಾದ ಚಿತ್ರಣವನ್ನೇ ನೀಡುತ್ತವೆ.

ಸಾಹಿತ್ಯಕವಾಗಿ ನೋಡಿದಾಗ ಎಸ್ ಎಲ್ ಭೈರಪ್ಪ ತಮ್ಮ ಆವರಣ ಕೃತಿಯಲ್ಲಿ ಇಂತಹ ವಿಕೃತಿಯ ಅನಾವರಣ ಮಾಡಿರುವುದನ್ನು ಗಮನಿಸಬಹುದು. 1980ರ ದಶಕದ ಭಾರತದ ರಾಜಕಾರಣ ಸೃಷ್ಟಿಸಿದ ಅನೇಕ ವಿಕೃತಿಗಳಿಗೆ ಇತಿಹಾಸವೇ ಪ್ರಬಲ ವೇದಿಕೆಯಾಗಿರುವುದೂ ಇದೇ ಹಿನ್ನೆಲೆಯಲ್ಲೇ ಎನ್ನಬಹುದು. ಇಸ್ಲಾಂ ಧರ್ಮವನ್ನು ಅನ್ಯ ಎಂಬ ಹಣೆಪಟ್ಟಿಯೊಂದಿಗೆ ವ್ಯಾಖ್ಯಾನಿಸುವ ಹಿಂದುತ್ವವಾದಿಗಳಿಗೆ ಇಸ್ಲಾಂ ಧರ್ಮವನ್ನು ಹೀಯಾಳಿಸಲು ಅಥವಾ ಮತಾಂತರದ ನೆಪ ಒಡ್ಡಿ ಇಡೀ ಮುಸ್ಲಿಂ ಸಮುದಾಯವನ್ನು ವಿಲನ್ ಮಾಡಲು ಭಾರತೀಯ ಇತಿಹಾಸದಿಂದ ಇಬ್ಬರು ವ್ಯಕ್ತಿಗಳು ಬಂಡವಾಳವಾಗುತ್ತಾರೆ. ಉತ್ತರ ಭಾರತದ ಔರಂಗಜೇಬ್ ಮತ್ತು ದಕ್ಷಿಣದ ಟಿಪ್ಪು ಸುಲ್ತಾನ್.

ಚರಿತ್ರೆಯಲ್ಲಿ ಆಗಿಹೋದ ಒಬ್ಬ ಸಾಮ್ರಾಟನನ್ನು ಒಂದು ನಿರ್ಧಿಷ್ಟ ಧರ್ಮ ಅಥವಾ ಸಮುದಾಯದ ಪ್ರತಿನಿಧಿಯಾಗಿ ಪರಿಗಣಿಸಿದಾಗ ಸಮಕಾಲೀನ ಸಂದರ್ಭದಲ್ಲಿ ನಮ್ಮ ಸಮಾಜದಲ್ಲಿ ವ್ಯಕ್ತವಾಗುವ ಎಲ್ಲ ರೀತಿಯ ಪೂರ್ವಗ್ರಹಗಳನ್ನು, ಪರಿಭಾಷೆಗಳನ್ನು ಅಂತಹ ವ್ಯಕ್ತಿಗಳಿಗೆ ಆರೋಪಿಸಿಬಿಡುತ್ತೇವೆ. ಟಿಪ್ಪು ಸುಲ್ತಾನ್ ಜನಸಾಮಾನ್ಯರಿಗೆ ಬ್ರಿಟೀಷರ ವಿರುದ್ಧ ಹೋರಾಡಿದ ಮಹಾನ್ ವೀರನಂತೆ ಕಂಡುಬಂದರೂ, ಮತೀಯವಾದಿಗಳಿಗೆ ಅವ ಮುಸ್ಲಿಂ ಮತಾಂಧನಾಗುತ್ತಾನೆ. ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಟಿಪ್ಪು ನಡೆಸಿದ ಆಕ್ರಮಣಗಳು ಅನ್ಯಧರ್ಮ ದ್ವೇಷದ ಚೌಕಟ್ಟಿನಲ್ಲಿ ಪರಾಮರ್ಶೆಗೊಳಗಾಗುತ್ತದೆ.

 

SONY DSC

ಟಿಪ್ಪು ಆಡಳಿತದಲ್ಲಿ ಉಂಟಾಗಿರಬಹುದಾದ ವಿಪ್ಲವಕಾರಿ ಬದಲಾವಣೆಗಳು, ಹಿಂದೂ ದೇವಾಲಯಗಳ ಜೀರ್ಣೋದ್ಧಾರ, ಶ್ರೀರಂಗಪಟ್ಟಣದ ಐತಿಹಾಸಿಕ ದೇವಾಲಯದ ರಕ್ಷಣೆ ಇವೆಲ್ಲವೂ ಗೌಣವಾಗಿ ಮಲಬಾರ್  ನಲ್ಲಿ ಪಾಳೇಗಾರರ ಆಳ್ವಿಕೆಯನ್ನು ಅಂತ್ಯಗೊಳಿಸಿ ಜನತೆಗೆ ಮುಕ್ತಿ ನೀಡುವ ಸಂದರ್ಭದಲ್ಲಿ ಉಂಟಾದ ಮತಾಂತರಗಳು ಮುಂಚೂಣಿಗೆ ಬಂದುಬಿಡುತ್ತವೆ. ಇಲ್ಲಿ ಐತಿಹಾಸಿಕ ಸತ್ಯಕ್ಕಿಂತಲೂ ಸಮಕಾಲೀನ ಸಮಾಜದ ವಕ್ರದೃಷ್ಟಿ ಹೆಚ್ಚು ಪ್ರಸ್ತುತತೆ ಪಡೆಯುತ್ತದೆ.

ಬಹುಷಃ ಅಯೋಧ್ಯೆ ಸಂಭವಿಸದೆ ಹೋಗಿದ್ದಲ್ಲಿ , ಬಿಜೆಪಿ-ಸಂಘಪರಿವಾರದ ಕೋಮುವಾದಿ ರಾಜಕಾರಣ ದೇಶವ್ಯಾಪಿಯಾಗದೆ ಹೋಗಿದ್ದಲ್ಲಿ ಟಿಪ್ಪು ಮತ್ತು ಔರಂಗಜೇಬರು ಭಾರತದ ಭೌದ್ಧಿಕ ಸಂಕಥನಗಳಲ್ಲಿ ಮಾತ್ರ ಪ್ರಸ್ತಾಪವಾಗುತ್ತಿದ್ದರು. ಆದರೆ ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಭಾಷೆಯನ್ನು ಸೆಕ್ಯುಲರ್-ಕೋಮುವಾದದಚ ಚೌಕಟ್ಟಿನೊಳಗೆ ಬಂಧಿಸಿದ ನಂತರಲ್ಲಿ ಈ ಇಬ್ಬರು ಸಾಮ್ರಾಟರುಗಳನ್ನು ರಾಜಪ್ರಭುತ್ವದ ಪರಿಧಿಯಿಂದ ಹೊರತಂದು ಸಮಕಾಲೀನ ಪ್ರಜಾಪ್ರಭುತ್ವದ ವ್ಯಾಪ್ತಿಗೊಳಪಡಿಸಲಾಯಿತು.

ಹಾಗಾಗಿಯೇ ಒಬ್ಬ ಸಾಮ್ರಾಟನಾಗಿ ಟಿಪ್ಪು ಅಥವಾ ಔರಂಗಜೇಬ ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ಕೈಗೊಂಡ ಕ್ರಮಗಳನ್ನು ಸಮಕಾಲೀನ ಕೋಮುವಾದಿ ರಾಜಕಾರಣದ ನೆಲೆಯಲ್ಲಿ ವ್ಯಾಖ್ಯಾನ ಮಾಡುವ ಒಂದು ಪರಂಪರೆ ಬೆಳೆದುಬಂದಿದೆ. ಭಾರತ ಇಂದು ಎದುರಿಸುತ್ತಿರುವ ಮತೀಯವಾದಿ ಸಮಸ್ಯೆಗಳಿಗೆ ಈ ಸಾಮ್ರಾಟರನ್ನು ಮೂಲ ಕಾರಣಪುರುಷರಾಗಿ ಪರಿಗಣಿಸಲು ಮತೀಯವಾದಿ ವಿದ್ವಾಂಸರು ಯತ್ನಿಸುತ್ತಿದ್ದರೆ, ಈ ಸಾಮ್ರಾಟರ ಸಂಭಾವ್ಯ ಚಾರಿತ್ರಿಕ ಪ್ರಮಾದಗಳನ್ನು ಸಮಕಾಲೀನ ಸೆಕ್ಯುಲರ್ ಸಿದ್ಧಾಂತದ ಚೌಕಟ್ಟಿನಲ್ಲಿ ಸಮರ್ಥಿಸಿಕೊಳ್ಳುವ ಮೂಲಕ ಸೆಕ್ಯುಲರ್ ವಿದ್ವಾಂಸರು ಮತೀಯವಾದಿಗಳಿಗೆ ಪ್ರತಿರೋಧ ಒಡ್ಡುತ್ತಿದ್ದಾರೆ.

ಟಿಪ್ಪು ಅಥವಾ ಔರಂಗಜೇಬ್ ಹಿಂದೂಗಳನ್ನು ಹಾಗು ಕ್ರೈಸ್ತರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದರು ಎನ್ನುವುದಕ್ಕೆ ಚಾರಿತ್ರಿಕ ದಾಖಲೆಗಳಿರಬಹುದು. ಆದರೆ ಒಬ್ಬ ಸಾಮ್ರಾಟನಾಗಿ ತನ್ನ ಸ್ವಹಿತಾಸಕ್ತಿಗಾಗಿ, ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಲಕ್ಷೊಪಲಕ್ಷ ಜನರ ಕೊಲೆ ಮಾಡಲು ಹೇಸದ ಯಾವುದೇ ಮಹಾರಾಜನಿಗೆ ಮತಾಂತರ ಮಾಡುವುದು ಒಂದು ಅಪರಾಧ ಎನಿಸುವುದಿಲ್ಲ. ರಾಜಪ್ರಭುತ್ವದ ಮೂಲ ಲಕ್ಷಣಗಳನ್ನು ಗ್ರಹಿಸಿದಲ್ಲಿ ಇಂತಹ ಚಾರಿತ್ರಿಕ ಪ್ರಮಾದಗಳು ಅತಿಶಯವೆನಿಸುವುದೂ ಇಲ್ಲ. ಆದರೆ ರಾಜಪ್ರಭುತ್ವದ ಮೂಲ ಲಕ್ಷಣಗಳನ್ನು ಸಮಕಾಲೀನ ಪ್ರಜಾಪ್ರಭುತ್ವದ ಮೌಲ್ಯಗಳ ಚೌಕಟ್ಟಿನೊಳಗೆ ವ್ಯಾಖ್ಯಾನಿಸುವಾಗ ಇವು ಪ್ರಮಾದವೆನಿಸುತ್ತವೆ. ಘೋರ ಅಪರಾಧ ಎನಿಸುತ್ತವೆ.

tippu stampಟಿಪ್ಪು ಕೇರಳದ ಮಲಬಾರ್, ಕರ್ನಾಟಕದ ಕೊಡಗು, ಮಂಗಳೂರು ಮತ್ತು ತಮಿಳುನಾಡಿನ ಕೆಲವು ಪ್ರಾಂತ್ಯಗಳಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿದ್ದ, ಹಾಗಾಗಿ ಟಿಪ್ಪುವಿನ ಬ್ರಿಟೀಷರ ವಿರುದ್ಧ ಹೋರಾಟ, ಕನರ್ಾಟಕದ ರಕ್ಷಣೆ, ಹಲವಾರು ಜನಪರ ಜನೋಪಯೋಗಿ ಕ್ರಮಗಳು ಹಾಗೂ ಹಿಂದೂ ದೇವಾಲಯಗಳಿಗೆ ನೀಡಿದ ಕೊಡುಗೆ ಇವೆಲ್ಲವೂ ಗೌಣವಾಗುತ್ತವೆ. ಹಿಂದೂಗಳ ಮತಾಂತರಕ್ಕೆ ಯತ್ನಿಸುವ ಮೂಲಕ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಪರಿವತರ್ಿಸುವ ಹುನ್ನಾರ ಇದ್ದುದರಿಂದ, ಬ್ರಿಟೀಷರ ವಿರುದ್ಧ ಎಷ್ಟೇ ವೀರೋಚಿತವಾಗಿ ಹೋರಾಡಿ ಕರ್ನಾಟಕದ ಮತ್ತು ಪರಿಕಲ್ಪಿತ ರಾಷ್ಟ್ರದ ರಕ್ಷಣೆಗಾಗಿ ಪ್ರಾಣ ತೆತ್ತರೂ ಟಿಪ್ಪುವನ್ನು ದೇಶಪ್ರೇಮಿ ಎನ್ನಲಾಗುವುದಿಲ್ಲ ಎಂದು ಮತೀಯವಾದಿಗಳು ವಾದಿಸುತ್ತಾರೆ.

ಹಾಗಾಗಿಯೇ ಕೋಚೆಯವರ ಕೃತಿಯ ಅಪ್ರತಿಮ ದೇಶಭಕ್ತ ಟಿಪ್ಪು ಎಂಬ ಶೀರ್ಷಿಕೆಯೇ ಹಿಂದುತ್ವವಾದಿಗಳನ್ನು ಕೆರಳಿಸುತ್ತದೆ. ಬ್ರಿಟೀಷ್ ವಸಾಹತುವಾಗಿದ್ದ ಭಾರತದಲ್ಲಿ ಆಂಗ್ಲರ ವಿರುದ್ಧ ಹೋರಾಡಿದ ರಾಜರ ಸಂಖ್ಯೆಗಿಂತಲೂ ಹೆಚ್ಚಾಗಿ ಆಂಗ್ಲರೊಡನೆ ಕೈಮಿಲಾಯಿಸಿ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಹೆಣಗಾಡಿದ ರಾಜರು ಇದ್ದಾರೆ. ಆಂಗ್ಲರನ್ನು ಮಣಿಸಲು ಫ್ರೆಂಚ್, ಡಚ್ಚರ ಸಹಾಯ ಪಡೆದ ರಾಜರಿದ್ದಾರೆ. ತಮ್ಮ ಜನೋಪಯೋಗಿ ಆಳ್ವಿಕೆಯಿಂದ ಹೆಸರಾಂತರಾಗಿದ್ದು, ಬ್ರಿಟೀಷರೊಡನೆ ಯಾವುದೇ ವೈರತ್ವವಿಲ್ಲದೆ ತಮ್ಮ ಸಾಮ್ರಾಜ್ಯ ರಕ್ಷಿಸಿಕೊಂಡ ಮೈಸೂರು ಒಡೆಯರ್ ಅಂತಹ ರಾಜರಿದ್ದಾರೆ. ತಮ್ಮ ಸಣ್ಣ ಪ್ರಾಂತ್ಯದ ಮೇಲಿನ ಪ್ರಭುತ್ವವನ್ನು ರಕ್ಷಿಸಿಕೊಳ್ಳಲು ಬ್ರಿಟೀಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ದೇಶಭಕ್ತ ಪಾಳೆಯಗಾರರೂ ಇದ್ದಾರೆ.

ಬ್ರಿಟೀಷರ ವಿರುದ್ಧ ಹೋರಾಡಿದ ಅನೇಕ ರಾಜರುಗಳ ಮೂಲ ಧ್ಯೇಯ ಹಾಗು ಪ್ರಥಮ ಆದ್ಯತೆ ತಮ್ಮ ಸಾಮ್ರಾಜ್ಯ ರಕ್ಷಣೆಯಾಗಿತ್ತೇ ಹೊರತು ಅಖಂಡ ಭಾರತದ ವಿಮುಕ್ತಿಯಲ್ಲ. ಹಾಗಾಗಿಯೇ ಸ್ವಾತಂತ್ರ್ಯಾನಂತರದಲ್ಲಿ ಅನೇಕ ರಾಜರುಗಳು ಭಾರತೀಯ ಗಣರಾಜ್ಯದೊಡನೆ ವಿಲೀನವಾಗಲು ವಿರೋಧಿಸಿದ್ದನ್ನು ಕಾಣಬಹುದು. ಇಂದಿಗೂ ಸಹ ತಮ್ಮ ರಾಜಪ್ರಭುತ್ವದ ದರ್ಪ ಮತ್ತು ವೈಭವಗಳ ಪಳೆಯುಳಿಕೆಗಳನ್ನು ರಕ್ಷಿಸಲು ಯತ್ನಿಸುತ್ತಿರುವ ನಂತರದ ಪೀಳಿಗೆಯ ರಾಜವಂಶಸ್ತರು ಪ್ರಜಾತಂತ್ರ ವ್ಯವಸ್ಥೆಯ ಒಂದು ಭಾಗವಾಗಿದ್ದಾಗಲೂ ತಮ್ಮ ಗತವೈಭವ ಮರಳಿ ಪಡೆಯಲು ಆಸಕ್ತರಾಗಿರುತ್ತಾರೆ.

ಇಲ್ಲಿ ಸಮಸ್ಯೆ ಇರುವುದು ಇತಿಹಾಸದ ವ್ಯಾಖ್ಯಾನದಲ್ಲಿ ಮತ್ತು ಇತಿಹಾಸದ ಘಟನೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಪರಿಭಾವಿಸುವ ಧೋರಣೆಯಲ್ಲಿ. ಭಾವನಾತ್ಮಕವಾಗಿ ಒಂದು ದೇಶ ಅಥವಾ ರಾಷ್ಟ್ರವಾಗಿದ್ದ ಭಾರತವನ್ನು ಭೌಗೋಳಿಕಾಗಿ ಒಂದು ರಾಷ್ಟ್ರವನ್ನಾಗಿ ಮಾಡಲು ಸ್ವತಂತ್ರ ಭಾರತದ ಆಳ್ವಿಕರು ಪಟ್ಟ ಶ್ರಮವನ್ನೇ ನೋಡಿದರೆ, ಟಿಪ್ಪುವಿನ ಕಾಲದಲ್ಲಿ ರಾಷ್ಟ್ರದ ಪರಿಕಲ್ಪನೆ ಹೇಗಿರಬಹುದು ಎಂದು ಊಹಿಸಬಹುದು. ಆದರೆ ಇಡೀ ವಿಶ್ವವೇ ಭರತಖಂಡವಾಗಿತ್ತು ಎಂದು ವಾದಿಸುವ ಮತೀಯವಾದಿಗಳಿಗೆ ಇತಿಹಾಸದಲ್ಲಿ ಭಾರತವೊಂದೇ ಪ್ರಧಾನವಾಗಿ ಕಾಣುತ್ತದೆ.

ಟಿಪ್ಪು ದೇಶಪ್ರೇಮಿಯೋ ದೇಶಭಕ್ತನೋ ಎನ್ನುವ ವಾದಸರಣಿಯ ಹಿನ್ನೆಲೆಯಲ್ಲಿ ಕಾಣಲಾಗುವ ದ್ವಂದ್ವಗಳನ್ನು ಬದಿಗಿಟ್ಟು, ಒಬ್ಬ ಸಾಮ್ರಾಟನಾಗಿ ಟಿಪ್ಪು ಕೈಗೊಂಡ ಜನಪರ ಕ್ರಮಗಳನ್ನು ಸಮಕಾಲೀನ ಸಂದರ್ಭದಲ್ಲಿ ಅನುಕರಣೀಯವಾಗಿ ಪರಿಗಣಿಸಿದಲ್ಲಿ ಇತಿಹಾಸಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಒಂದು ವೇಳೆ ಟಿಪ್ಪು ಮತಾಂತರಕ್ಕೆ ಪ್ರಯತ್ನಿಸಿದ್ದರೂ ಅದು ಒಬ್ಬ ಸಾಮ್ರಾಟನಾಗಿ ಕೈಗೊಂಡ ಕ್ರಮವಷ್ಟೇ ಆಗಿರಬಹುದು. ಅಥವಾ ಹಿಂದೂ ದೇವಾಲಯಗಳಿಗೆ ನೀಡಿದ ಕಾಣಿಕೆಯೂ ಸಹ ತನ್ನ ಸಾಮ್ರಾಜ್ಯದ ಅಸ್ತಿತ್ವವನ್ನು ಉಳಿಸಿಕೊಳ್ಳಲು ನೀಡಿರಬಹುದು.

ಈ ಚಾರಿತ್ರಿಕ ಸಂಗತಿಗಳನ್ನೇ ಆಧರಿಸಿ, ಟಿಪ್ಪುವನ್ನು ಒಬ್ಬ ಮುಸ್ಲಿಂ ಆದ ಮಾತ್ರಕ್ಕೆ ಇಂದಿನ ಮುಸ್ಲಿಂ ಸಮುದಾಯದೊಡನೆ ಸಮೀಕರಿಸಿ, ಆತ ಮಾಡಿರಬಹುದಾದ ಬಲವಂತದ ಮತಾಂತರದ ಪ್ರಕ್ರಿಯೆಯನ್ನು ಇಂದಿನ ಮುಸ್ಲಿಂ ಸಮುದಾಯದೊಡನೆ ಸಮೀಕರಿಸುವುದು ಅಪ್ರಬುದ್ಧತೆಯಾಗುತ್ತದೆ. ಸಮಕಾಲೀನ ಭಾರತದ ಮುಸ್ಲಿಂ ಸಮುದಾಯವನ್ನು ವಿಲನ್ ಮಾಡಲು ಟಿಪ್ಪು ಅಥವಾ ಔರಂಗಜೇಬನನ್ನು ಡೆವಿಲ್ ಆಗಿ ಪರಿಭಾವಿಸುವುದರಿಂದ ಇತಿಹಾಸಕ್ಕೇನೂ ಅಪಚಾರ ಎಸಗಿದಂತಾಗುವುದಿಲ್ಲ ಆದರೆ ಭವಿಷ್ಯದ ಪೀಳಿಗೆಗೆ ಅಪಾಯಕಾರಿಯಾಗುತ್ತದೆ.

‍ಲೇಖಕರು admin

November 7, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Guruprasad

    The author presents the pseudo secular version of Tippu Sultan in this post .
    1. why not ask Madayam iyengars of Melukote regarding why they wont celebrate Deepavali Festival from last 300 years .
    2. how is the person who changed official language from Kannada to Parsi is pro people ?
    3. The King who asked Arab Sultan for attack on India and do islamlization.
    4. the King who is responsible for death of 40000 canara Christians, 20000 kodavas and 50000 malabar people in the quest expanding kingdom is patriot and freedom fighter.

    ಪ್ರತಿಕ್ರಿಯೆ
    • NA DIVAKAR

      I will never consider tippu as patriot or freedom fighter I have clearly stated he fought for the freedom of his territories as the concept of indian nation was remote during his reign. and about the vulgar terminology of patriotism no king or samrat of erstwhile monarchic india can be a patriot as they fought for their kingdoms and were obligated to join indian union upon independence. Show me a king who has taken help from one or the other foreign forces to protect himself. Right from Ashoka to Odeyar this trail is evident. My argument, if looked into seriously and with prudence, is that See tippu as a king not a democrat of the contemporary period. It can not be. He has done attrocities, conquered provinces, killed and maimed people and ruled his roost. But which king has not ? Also look into his positives as we are doing in case of Nalwadi or Ashoka or Akbar.

      ಪ್ರತಿಕ್ರಿಯೆ
  2. Noorulla thyamagondlu

    ಮತಾಂಧರನ್ನು ಮನುಷ್ಯತ್ವ ಅರಿವನ್ನು ತುಂಬೋ, ಉದ್ಧರಿಸೋ ದೇವ ಅವರನ್ನು ,ಅಮೀನ್.

    ಪ್ರತಿಕ್ರಿಯೆ
  3. ashok k r

    ಟಿಪ್ಪು ಎಂಬ ಅನವಶ್ಯಕ ಚರ್ಚೆ:
    ಹೆಚ್ಚು ಕಡಿಮೆ ಪ್ರತಿ ವರುಷವೂ ಟಿಪ್ಪುವಿನ ಪರ ವಿರೋಧದ ಚರ್ಚೆ ಪ್ರಾರಂಭವಾಗುತ್ತದೆ. ಚರ್ಚೆಯ ಎರಡೂ ಬದಿಯಿರುವವರ ಮಾತು – ಹೇಳಿಕೆ – ಬರಹಗಳು ಒಂದು ಅತಿಯಲ್ಲಿಯೇ ಇರುತ್ತವೆ. ಒಂದೆಡೆ ಟಿಪ್ಪು ಅಪ್ರತಿಮ ದೇಶಪ್ರೇಮಿ, ಬ್ರಿಟೀಷರ ವಿರುದ್ಧ ಹೋರಾಡಿದಾತ, ಹಿಂದೂ ದೇವಾಲಯಗಳಿಗೆ ದಾನ ಧರ್ಮ ನೀಡಿದ ಧರ್ಮ ಸಹಿಷ್ಣು ಎಂಬ ವಾದಗಳು ಕೇಳಿಬಂದರೆ ಮತ್ತೊಂದೆಡೆ ಟಿಪ್ಪು ದೇಶದ್ರೋಹಿ, ನೂರಾರು ಹಿಂದೂ ದೇವಾಲಯಗಳನ್ನು ಕೆಡವಿದಾತ, ಸಾವಿರಾರು ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದಾತ ಎಂಬ ವಾದಗಳು ಚಾಲ್ತಿಯಲ್ಲಿವೆ. ನೋಡಿದರೆ ಎರಡೂ ವಾದಗಳಲ್ಲೂ ಸತ್ಯಗಳಿವೆ. ಈ ಬಾರಿ ಕರ್ನಾಟಕದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪುವಿನ ಜಯಂತಿಯನ್ನು ಸರಕಾರದ ವತಿಯಿಂದ ನಡೆಸಲು ನಿರ್ಧರಿಸಿರುವುದು ಮತ್ತೊಂದು ರೌಂಡು ಟಿಪ್ಪು ಪರ ವಿರೋಧದ ಚರ್ಚೆಗೆ ಸರಕು ಒದಗಿಸಿದೆ. ಈ ಚರ್ಚೆಗಳು ಅವಶ್ಯಕವೇ?

    ಟಿಪ್ಪು ಸಾಹಸಿ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದಾತ, ಬ್ರಿಟೀಷರ ಬೆದರಿಕೆಗೆ ಮಣಿಯದೆ ಹೋರಾಡಿ ಸತ್ತವನು ಎನ್ನುವುದೆಲ್ಲ ಸತ್ಯವೇ ಆದರೆ ಅಷ್ಟಕ್ಕೆ ಟಿಪ್ಪುವನ್ನು ದೇಶಪ್ರೇಮಿ ಎಂದೆಲ್ಲ ಹೊಗಳುವ ಅವಶ್ಯಕತೆಯೇನಿದೆ? ಅದು ಟಿಪ್ಪುಯಿರಬಹುದು ಮತ್ತೊಬ್ಬ ಮಗದೊಬ್ಬ ರಾಜರಿರಬಹುದು. ಅವರ್ಯಾರು ದೇಶಪ್ರೇಮಿಗಳಲ್ಲ, ದೇಶದ್ರೋಹಿಗಳಲ್ಲ; ಅವರೆಲ್ಲ ಅವರವರ ಸಾಮ್ರಾಜ್ಯಪ್ರೇಮಿಗಳಷ್ಟೇ. ಅವರ ಸಾಮ್ರಾಜ್ಯಕ್ಕೆ ಧಕ್ಕೆ ತರುವಂತಹ ವೈರಿಯನ್ನು ಎದುರಿಸಿ ನಿಲ್ಲುತ್ತಿದ್ದರು, ಕೆಲವೊಮ್ಮೆ ಗೆಲ್ಲುತ್ತಿದ್ದರು ಕೆಲವೊಮ್ಮೆ ಸೋಲುತ್ತಿದ್ದರು. ಇಷ್ಟಕ್ಕೂ ಟಿಪ್ಪುವನ್ನು ದೇಶಪ್ರೇಮಿಯೆಂದು ಕರೆಯಲು ಅವನ ಕಾಲಘಟ್ಟದಲ್ಲಿ ‘ಭಾರತ’ವೆಂಬ ದೇಶವಾದರೂ ಎಲ್ಲಿತ್ತು. ನೂರಾರು ರಾಜರ ನಡುವ ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ನಂತರ ಮತ್ತೆ ಒಡೆದ ಖ್ಯಾತಿ ಬ್ರಿಟೀಷರದ್ದು, ಮತ್ಯಾರದೂ ಅಲ್ಲ. ಇಷ್ಟು ಕಾಮನ್ ಸೆನ್ಸ್ ಇಟ್ಕೊಳ್ಳದೆ ನೂರಿನ್ನೂರು ವರುಷಗಳ ಹಿಂದೆ ಸತ್ತು ಹೋದವರ ನೆನಪಿನಲ್ಲಿ ‘ಚರ್ಚೆ’ ಮಾಡುವುದು ಯಾವ ಸಂಭ್ರಮಕ್ಕೆ. ಬ್ರಿಟೀಷರ ವಿರುದ್ಧ ಹೋರಾಡಿದವರನ್ನು ದೇಶಪ್ರೇಮಿ ಎಂದು ಗುರುತಿಸುವುದಾದರೆ ಟಿಪ್ಪುವನ್ನೂ ದೇಶಪ್ರೇಮಿಯೆಂದು ಹೊಗಳಲು ಅಡ್ಡಿಯಿಲ್ಲ.

    ಮೊನ್ನೆ ಗೆಳೆಯನೊಬ್ಬ ಮೆಸೇಜು ಕಳಿಸಿದ್ದ. ಟಿಪ್ಪು ಜಯಂತಿ ಸರಕಾರ ಆಚರಿಸೋದು ತಪ್ಪು ಅಂತ. ಮೈಸೂರು ಸಂಸ್ಥಾನದ ಕುರುಹಾದ ದಸರಾವನ್ನು ಸರಕಾರ ಪ್ರತೀ ವರ್ಷ ಆಚರಿಸುತ್ತದೆ, ‘ರಾಜ’ ಕುಟುಂಬಕ್ಕೆ ಲಕ್ಷ ಲಕ್ಷ ಎಣಿಸಿ ಕೊಡುತ್ತದೆ, ಹಂಪಿ ಉತ್ಸವ ಆಚರಿಸುತ್ತದೆ ಇನ್ನೂ ಹತ್ತಲವು ಜಯಂತಿಗಳನ್ನು ಆಚರಿಸುತ್ತದೆ ಆಗೆಲ್ಲ ಸರಕಾರದ ವತಿಯಿಂದ ಜಯಂತಿಗಳನ್ನು ನಡೆಸುವುದು ತಪ್ಪು ಎನ್ನಿಸದೆ ಈಗ ಟಿಪ್ಪು ಜಯಂತಿಯ ವಿಷಯಕ್ಕೆ ಮಾತ್ರ ವಿರೋಧ ವ್ಯಕ್ತವಾಗುವುದು ಯಾಕೆ? ಟಿಪ್ಪು ಸುಲ್ತಾನ್ ಮುಸ್ಲಿಮನೆಂಬ ಕಾರಣಕ್ಕೆ ತಾನೇ ಈ ವಿರೋಧ. ಟಿಪ್ಪು ಸುಲ್ತಾನ್ ಕೇರಳದಲ್ಲಿ, ಮಲೆನಾಡಿನಲ್ಲಿ ಬಲವಂತದ ಮತಾಂತರ ನಡೆಸಿದ್ದಾನೆ ಎಂದು ಬೊಬ್ಬೆಯೊಡೆಯುವವರು ಕೇರಳದಲ್ಲಿ ದಲಿತರ ಮೇಲಿದ್ದ ‘ತಲೆ ತೆರಿಗೆ’ ‘ದೇಹ ತೆರಿಗೆ’ ‘ಮೊಲೆ ತೆರಿಗೆ’ಯ ಬಗ್ಗೆ ಚಕಾರವೆತ್ತುವುದಿಲ್ಲ. ಬಲವಂತದಿಂದಲೂ ಮತಾಂತರ ನಡೆದಿರುವುದನ್ನು ನಿರಾಕರಿಸದೆಯೇ ಹಿಂದೂ ಧರ್ಮದೊಳಗಿನ ಜಾತಿ ಪದ್ಧತಿ ಕೂಡ ಈ ಮತಾಂತರಕ್ಕೆ ಪೂರಕವಾಯಿತು ಎನ್ನುವುದನ್ನು ಮರೆಯಬಾರದು.

    ಸರಕಾರ ಹಿಂಗೆ ಇರೋ ಬರೋ ರಾಜರ ಹೆಸರಿನಲ್ಲೆಲ್ಲಾ ಜಯಂತಿ ಉತ್ಸವಗಳನ್ನು ಆಚರಿಸಬೇಕೆ ಎಂಬ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಇಂತಹ ಉತ್ಸವಗಳನ್ನೆಲ್ಲ ಆಚರಿಸೋದು ಸರಕಾರದ ಕೆಲಸವಲ್ಲ ಇನ್ನು ಮುಂದೆ ಸರಕಾರದ ವತಿಯಿಂದ ಮೈಸೂರು ದಸರವನ್ನು ನಡೆಸಲಾಗುವುದಿಲ್ಲ ಎಂದು ಹೇಳುವ ಧೈರ್ಯವಂತ ಸರಕಾರವನ್ನು ಕರ್ನಾಟಕದಲ್ಲಿ ಕಾಣಬಹುದೆ? ಹಾಗೆ ಹೇಳಿದರೆ ಇದೇ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವವರು ಹೇಗೆ ಪ್ರತಿಕ್ರಿಯೆ ನೀಡಬಹುದು? ಹಾಗೆ ನೋಡಿದರೆ ಮೈಸೂರು ಸಂಸ್ಥಾನ ಬ್ರಿಟೀಷರ ವಿರುದ್ಧ ಗಟ್ಟಿ ನೆಲೆಯಲ್ಲಿ ಹೋರಾಡಿದ್ದೇ ಇಲ್ಲ. ‘ದೇಶದ್ರೋಹಿ’ ಕುಟುಂಬಕ್ಕೆ ವರುಷ ವರುಷ ಜನರ ತೆರಿಗೆ ದುಡ್ಡಿನಿಂದ ಲಕ್ಷ ಲಕ್ಷ ಎಣಿಸುತ್ತಾರಲ್ಲ ಅದನ್ನೂ ನಿಲ್ಲಿಸಬೇಕಲ್ಲವೇ? ಸರಕಾರಗಳಿಗೆ ಈ ಉತ್ಸವ, ಜಯಂತಿಗಳೆಲ್ಲವೂ ಮತ ಬ್ಯಾಂಕ್ ಮತ್ತು ಹಣ ಮಾಡುವ ದಂಧೆಗಳಷ್ಟೇ. ದಸರೆಯ ನೆಪದಲ್ಲಿ ಟಾರು ಬಳಿಯಲು, ರಸ್ತೆಗಳನ್ನು ಸಿಂಗರಿಸಲು ಪ್ರತೀ ವರುಷ ಹಣ ಬಿಡುಗಡೆಯಾಗುತ್ತದೆ. ವರುಷ ಮುಗಿಯುವದರೊಳಗೆ ಕೀಳುವಂತಹ ಟಾರನ್ನು ಹಾಕುವುದು ದುಡ್ಡು ಮಾಡುವ ಉದ್ದೇಶದಿಂದಲೇ ಅಲ್ಲವೇ? ಈ ಮತ ಬ್ಯಾಂಕ್, ಭ್ರಷ್ಟಾಚಾರದ ಲೆಕ್ಕದಲ್ಲಿ ನೋಡಿದರೆ ಸರಕಾರ ಎಲ್ಲ ಉತ್ಸವ ಜಯಂತಿಗಳನ್ನೂ ನಿಲ್ಲಿಸಿಬಿಡಬೇಕು. ಆದರೆ ಈ ಉತ್ಸವಗಳಿಂದ ಒಂದು ಅನುಕೂಲವೂ ಇದೆ. ಅದು ಪಾರಂಪರಿಕ ತಾಣಗಳ ಕಟ್ಟುನಿಟ್ಟು ನಿರ್ವಹಣೆ, ಕಾಲಕಾಲಕ್ಕೆ ನಡೆಯುವ ನವೀಕರಣ ಮತ್ತು ಪ್ರವಾಸೋದ್ಯಮಕ್ಕೆ ಅಪಾರ ಪ್ರೋತ್ಸಾಹ. ಮೈಸೂರಿಗೆ ವರುಷದಿಂದ ವರುಷಕ್ಕೆ ಪ್ರವಾಸಿಗರ ಸಂಖೈ ಹೆಚ್ಚುವುದಕ್ಕೆ ದಸರಾ ಮೆರವಣಿಗೆಯ ಕೊಡುಗೆಯನ್ನು ಕಡೆಗಣಿಸಲಾಗದು. ಅದೇ ಲೆಕ್ಕದಲ್ಲಿ ಟಿಪ್ಪು ಜಯಂತಿಯಿಂದ ಶ್ರೀರಂಗಪಟ್ಟಣ ಒಂದಷ್ಟು ಸಿಂಗಾರಗೊಂಡು ಪ್ರವಾಸಿಗರ ಸಂಖೈ ಹೆಚ್ಚಿ ವ್ಯಾಪಾರ ವಹಿವಾಟು ಹೆಚ್ಚಿದರೆ ಯಾಕೆ ಬೇಡವೆನ್ನಬೇಕು? ಟಿಪ್ಪು ಜಯಂತಿಯ ಹೆಸರಿನಲ್ಲಿ ಎಲ್ಲಾ ಜಿಲ್ಲೆ ತಾಲ್ಲೂಕುಗಳಿಗೆ ದುಡ್ಡು ಹಂಚುವುದನ್ನು ಬಿಟ್ಟು ಅಷ್ಟೂ ದುಡ್ಡನ್ನು ಶ್ರೀರಂಗಪಟ್ಟಣದ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಬಳಸಿದರೆ ಪ್ರವಾಸೋದ್ಯಮ ಬೆಳೆಯುತ್ತದೆಯೆನ್ನುವುದನ್ನು ಮರೆಯಬಾರದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: