ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿಪಿಕಲ್ ಕುಂವೀ ಶೈಲಿಯ ‘ಸಾಮಾಜಿಕ ಪೋಸ್ಟ್ ಮಾರ್ಟಮ್’

ಮೆಹಬೂಬ್ ಮಠದ

**

ನಾಡಿನ ಪ್ರಖ್ಯಾತ ಹಿರಿಯ ಸಾಹಿತಿ ಕುಂವೀ ಅವರ ಹೊಸ ಕಾದಂಬರಿ ‘ಲ್ಯಾಟರೀನಾ’ ಬಿಡುಗಡೆಗೆ ಸಿದ್ಧವಾಗಿದೆ.

ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ.

ಸಾಹಿತಿ ಮೆಹಬೂಬ್ ಮಠದ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.

**

ಹುಬ್ಬಳ್ಳಿ ಕನ್ನಡ, ಕಲ್ಬುರ್ಗಿ ಕನ್ನಡ, ಕುಂದಾಪ್ರ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಚಾಮರಾಜ ನಗರ ಕನ್ನಡ, ಮಂಡ್ಯ ಕನ್ನಡ ಹೀಗೆ ಹತ್ತು ಹಲವು ವಿಶಿಷ್ಟ ಘಮದ ಕನ್ನಡಗಳು ನಮ್ಮನ್ನು ಪುಳಕಿತಗೊಳಿಸುತ್ತಿವೆ. ವಿಭಿನ್ನ ಕನ್ನಡ ಸಂಸ್ಕೃತಿಗಳು, ಪ್ರಾಕೃತಿಕ ವೈವಿಧ್ಯತೆಗಳು ಇರುವ ಕಾರಣಕ್ಕೆ ‘ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು’ ಎಂದು ನಮ್ಮ ನಾಡನ್ನು ಬಹು ಹೆಮ್ಮೆಯಿಂದ ಕರೆಯುತ್ತಾರೆ. ಈ ಎಲ್ಲಾ ಕನ್ನಡಗಳ ಜೊತೆಗೆ ಮತ್ತೊಂದು ವಿಭಿನ್ನ ಸೊಗಡಿನ ಕನ್ನಡವನ್ನು ತಮ್ಮ ಕಥೆ-ಕಾದಂಬರಿಗಳ ಮೂಲಕ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿದ್ದು ಕನ್ನಡದ ಮಹತ್ವದ, ಹೆಸರಾಂತ ಸಾಹಿತಿ ಕುಂವೀ ಅವರು. ಅವರು ಕೊಟ್ಟ ಕನ್ನಡವನ್ನು ‘ಕುಂವೀ ಕನ್ನಡ’ ಎನ್ನಬಹುದು. ತಮ್ಮ ಅತಿ ರಂಜಿತ ವರ್ಣನಾ ಶೈಲಿ ಹಾಗೂ ರೋಚಕ ನಿರೂಪಣೆಯಿಂದ ‘ಕನ್ನಡದ ಕಥನವಂತಿಕ ಕ್ರಮ’ಕ್ಕೆ ಅನನ್ಯ ಛಾಪು ಮೂಡಿಸಿದ ಕುಂವೀ ಅವರು ತಮ್ಮ ಓದುಗ ವಲಯವನ್ನು ವಿಸ್ತರಿಸಿಕೊಳ್ಳುತ್ತಲೇ ಇದ್ದಾರೆ.

‘ಸುಪಾರಿ’, ‘ಮಾಕನಡುಕು’ ಎಂಬ ಕಾದಂಬರಿಗಳ ನಂತರ ಮತ್ತೊಂದು ಮಹತ್ವದ ಕಾದಂಬರಿಯಾದ ‘ಲ್ಯಾಟರೀನಾ’ ದ ಮೂಲಕ ಕುಂವೀ ಅವರು ಕನ್ನಡದ ಓದುಗರ ಮುಂದೆ ‘ಗಲೀಜು ಪ್ರಸಂಗ’ ಒಂದನ್ನು ತಂದಿಟ್ಟಿದ್ದಾರೆ. ತಮ್ಮ ಹಿಂದಿನ ಎಲ್ಲಾ ಕಾದಂಬರಿಗಳಿಗಿಂತಲೂ ಅತ್ಯಂತ ವಿಭಿನ್ನ ಕಥಾವಸ್ತುವನ್ನು ಇಟ್ಟುಕೊಂಡು ಬರೆದ ಕಾದಂಬರಿ ಇದು. ನಾಗರಿಕ ಸಮಾಜ ತಲೆ ತಗ್ಗಿಸುವಂಥ ಅಮಾನವೀಯ ‘ಮಲ ಹೊರುವ ಪದ್ಧತಿ’ ಕುರಿತ ಈ ಕಾದಂಬರಿ ಓದುವಾಗ ಕರುಳು ಹಿಂಡುತ್ತದೆ. ಕರ್ನಾಕ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಅವರು ಈ ಪದ್ಧತಿ ಇನ್ನೂ ಜೀವಂತವಿರುವುದನ್ನು ನೋಡಿ ಪ್ರಕರಣವೊಂದರ ವಿಚಾರಣೆ ನಡೆಸುವಾಗ “ಮಲ ಹೊರುವ ಪದ್ಧತಿ ನಿಷೇಧಿಸಿ 2013 ರಲ್ಲೇ ಕಾಯ್ದೆ ಜಾರಿಗೆ ತರಲಾಗಿದೆ. ಆದರೂ ಸರಕಾರ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಿಲ್ಲ. ಮಹತ್ವ ಇಲ್ಲದ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಮಾತ್ರ ಕ್ರಮವೇ ಇಲ್ಲದಾಗಿದೆ.ಇಂತಹ ಪ್ರಕರಣದ ವಿಚಾರಣೆಯಲ್ಲಿ ಕಳಪೆ ಸಾಮರ್ಥ್ಯ ಪ್ರದರ್ಶಿಸಿದ ಪ್ರಾಸಿಕ್ಯೂಷನ್ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ.” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಕೋಲಾರದ ಮೊರಾರ್ಜಿ ವಸತಿ ಶಾಲೆಯಲ್ಲಿ ದಲಿತ ವಿದ್ಯಾರ್ಥಿಗಳ ಕೈಯಿಂದಲೇ ಮಲದ ಗುಂಡಿ ಸ್ವಚ್ಛಗೊಳಿಸಿದ್ಧ ಅಮಾನವೀಯ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಮಾನವೀಯತೆಯನ್ನು ಉಸಿರಾಡಬೇಕಾದ ಶಾಲಾ ಶಿಕ್ಷರ ಮನಸುಗಳೇ ಇಷ್ಟೊಂದು ಕೊಳೆತು ನಾರುತ್ತಿರುವಾಗ ನಾವು ಬೇರೆಯವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಇದಕ್ಕಿಂತಲೂ ಭೀಕರವಾದದ್ದೇನೆಂದರೆ ಆ ಶಿಕ್ಷಕರು ಬೇಕು ಅಂತಲೇ ದಲಿತ ಸಮುದಾಯದ ವಿದ್ಯಾರ್ಥಿಗಳನ್ನೇ ಆಯ್ದು ಈ ಹೇಯ ಕೃತ್ಯ ಮಾಡಿಸಿದ್ದು. ಆ ಮೂಲಕ ನೀವು ಇರುವುದೇ ಈ ಕೆಲಸ ಮಾಡಲಿಕ್ಕೆ ಅಂತ ಆ ವಿದ್ಯಾರ್ಥಿಗಳಿಗೆ ಘಾಸಿಯಾಗುವಂತೆ ಹೇಳಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದು. ಆ ವಿದ್ಯಾರ್ಥಿಗಳ ಮನೋಲೋಕದ ವೇದನೆಯನ್ನು, ಚೂರಾದ ಆತ್ಮ ಗೌರವದ ಜವಾಬ್ದಾರಿಯನ್ನು ಹೊರುವುದು ಯಾರು? ಈ ಘಟನೆಯ ನಂತರವೂ ಈ ಹೊತ್ತಿಗೂ ಕೆಲವು ಶಾಲೆಗಳಲ್ಲಿ ಅದರಲ್ಲೂ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಲಾಗುತ್ತಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿರುವುದು ಈ ಕಾಲದ ವ್ಯಂಗ್ಯ. ಇಂಥ ಅಮಾನುಷ ಕೃತ್ಯಗಳು ಸುದ್ದಿಯಾಗದಂತೆ ಶಾಲೆಗಳಿರುವ ಊರಿನವರೇ ತಡೆಯುತ್ತಿದ್ದಾರೆ. ಅದು ಊರಿನ ಪ್ರತಿಷ್ಟೆಯ ಪ್ರಶ್ನೆ ಅಂತೆ. ಇಂಥ ಕಾಲದಲ್ಲಿ ಈ ಕಾದಂಬರಿ ನಮಗೆ ಎದುರಾಗಿದೆ.

ಈ ಜೀವ ವಿರೋಧಿ ಪದ್ಧತಿಯನ್ನು ವಸ್ತುವಾಗಿಟ್ಟುಕೊಂಡಿರುವ ಕುಂವೀ ಅವರ ‘ಲ್ಯಾಟರೀನಾ’ ಕಾದಂಬರಿ ಸಿದ್ದಮ್ಮಜ್ಜಿ ಮತ್ತು ನಿಂಗಮ್ಮಜ್ಜಿ ಅವರ ಪ್ರವರದೊಂದಿಗೆ ಆರಂಭವಾಗುತ್ತದೆ. ಈ ಇಬ್ಬರು ಅಜ್ಜಿಯಂದಿರ ಮುದ್ದಿನ ಮೊಮ್ಮಗನಾದ ಈರಭದ್ರಿ (ಕುಂಬಾರ ಹಾಲಪ್ಪನ ಮಗ) ಬಹಳ ಬುದ್ಧಿವಂತ ಮತ್ತು ಕ್ರಾಂತಿಕಾರಿ ಹುಡುಗ. ತನ್ನ ವಯಸ್ಸಿನ ಮಕ್ಕಳು ಶಾಲೆಯಲ್ಲಿ ಆಟವಾಡಿಕೊಂಡು, ಮಗ್ಗಿ ಹೇಳಿಕೊಂಡು, ಸಿಕ್ಕಿದ್ದು ತಿಂದುಕೊಂಡು ಹಾಯಾಗಿ ಇದ್ದರೆ: ಈತನಿಗೆ ತಲೆಯ ಮೇಲೆ ಮಲದ ಪುಟ್ಟಿ ಹೊತ್ತುಕೊಂಡು, ಅದರೊಳಗಿಂದ ಆ ಮಲ ಮೈಮೇಲೆ ಸೋರುತ್ತಿದ್ದರು ಕೂಡ ಲೆಕ್ಕಿಸದೆ ಪ್ರತಿ ದಿನ ತನ್ನ ಮನೆಯ ಮುಂದೆ ಹಾದು ಹೋಗುತ್ತಿದ್ದ ದಲಿತ ಗರ್ಭಿಣಿ ಮಹಿಳೆಯದ್ದೇ ಚಿಂತೆ. ಆ ಚಿಂತೆ ಆತನಲ್ಲಿ ಆಕ್ರೋಶದ ಕಿಡಿಯನ್ನು ಹೊತ್ತಿಸುತ್ತದೆ. ಇದರಿಂದ ಆತನಿಗೆ ತನ್ನೂರಿನ ಎಲ್ಲಾ ಖಾಸಗಿ ಶೌಚಾಲಯಗಳ ಮೇಲೆ ಮತ್ತು ಅವುಗಳ ಮಾಲಕರ ಮೇಲೆ ಇನ್ನಿಲ್ಲದ ದ್ವೇಷ ಬೆಳೆಯುತ್ತದೆ. ದಲಿತರ ಶೋಷಣೆ ಸಹಿಸದ ಮತ್ತು ಈ ಅಮಾನುಷ ಮಲ ಹೊರುವ ಪದ್ಧತಿಯನ್ನು ತೀವ್ರವಾಗಿ ವಿರೋಧಿಸುವ ಈರಭದ್ರಿ ಮಂಚಾಲಿ ಶೆಟ್ಟಿಯ ಖಾಸಗಿ ಲ್ಯಾಟರಿನ್ನನ್ನು ಧ್ವಂಸಗೊಳಿಸಯವ ಮೂಲಕ ಊರಿನ ಪ್ರಗತಿಪರ ಮನಸುಗಳ ದೃಷ್ಟಿಯಲ್ಲಿ ಹೀರೋ ಆಗುತ್ತಾನೆ.

ಕೊಟ್ಟೂರಿನ ಸಾಬರಮತಿ ಆಶ್ರಮದ ರಂಗಾರಿ ಮಾಧವರಾವ್ ಮತ್ತು ಕಸ್ತೂರಿ ಬಾಯಿ ಎಂಬ ಗಾಂಧಿವಾದಿಗಳ ಕಣ್ಣಿಗೆ ಬೀಳುವ ಈ ಬಾಲಕ ಸಮಸ್ತ ಖಾಸಗಿ ಲ್ಯಾಟರಿನ್ನುಗಳನ್ನು ಸರ್ವನಾಶ ಮಾಡುವ ದೊಡ್ಡ ಕ್ರಾಂತಿಯೊಂದರ ನಾಯಕತ್ವವನ್ನು ವಹಿಸಿಕೊಳ್ಳುತ್ತಾನೆ. ಆತನ ಬಾಲ್ಯದ ಗೆಳೆಯ ಹಾಗೂ ‘ಶೌಚ ಕ್ರಾಂತಿ’ ಕೃತಿಯ ಲೇಖಕನಾದ ಸಂಬು ಈತನ ಈ ಕ್ರಾಂತಿಗೆ ಜೊತೆಯಾಗುತ್ತಾನೆ. ಸ್ಥಳೀಯ ಮುಖಂಡನೊಬ್ಬನ ಮಗಳಾದ ಗಿರಿಜೆಯನ್ನು ಪ್ರೀತಿಸಿ ಮದುವೆಯಾಗುವ ಸಂಬು ಆಕೆಯನ್ನು ಸಹ ಈ ಹೋರಾಟದಲ್ಲಿ ತೊಡಗಿಸುತ್ತಾನೆ. ಪೈಲ್ವಾನ್ ಬಾಬಣ್ಣ ಎಂಬ ಭಾರಿ ರೌಡಿಯೊಬ್ಬನ ಶೌಚಾಲಯವನ್ನು ಸಹ ಯಶಸ್ವಿಯಾಗಿ ಪುಡಿ ಮಾಡುವ ತಂಡದವರಿಗೆ ಅತಿ ದೊಡ್ಡ ಸವಾಲಾಗಿ ನಿಲ್ಲುವುದು ಕಟುಕರ ಇಟೋಬಣ್ಣನ ಶೌಚಾಲಯ.

ಆತನ ಮಗಳು ಭವಾನಿ ಮತ್ತು ಅಳಿಯ ಶಿವಾಜಿ ಆರಂಭದಲ್ಲಿ ನಿರೂಪಕನ ತಂಡದವರ ವಿರುದ್ಧ ನಿಂತರೂ ಕೂಡ ರಾಜಕೀಯ ಲಾಭಕ್ಕಾಗಿ ಭವಾನಿ ತನ್ನ ತಂದೆಯ ವಿರುದ್ಧವೇ ಕಾರ್ಯಾಚರಣೆ ಮಾಡುವುದು ಆಕೆಯ ರಾಜಕೀಯ ಮಹತ್ವಾಕಾಂಕ್ಷೆಯನ್ನು ತೋರಿಸುತ್ತದೆ. ಖಾಸಗಿ ಲ್ಯಾಟರಿನ್ನುಗಳ ಮೂಲಕ ದಲಿತರ ಶೋಷಣೆ ಮಾಡುವ ಮೇಲ್ವರ್ಗದವರಿಗೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡುವ ‘ಶೌಚಾನಂದ ಶ್ರೀಗಳು’ ಶೌಚಾಲಯಗಳನ್ನೇ ಪವಿತ್ರ ಜಾಗಗಳೆಂದು ನಂಬಿಸಿ ದಲಿತ ಸಮುದಾಯದ ಮೇಲೆ ಆಕ್ರಮಣ ಮಾಡುತ್ತಾರೆ. ಆ ಮಠದ ಆಕಳುಗಳು ನಿತ್ಯವೂ ತಿನ್ನುವ ಆಹಾರ ಯಾವುದು ಎಂದು ಗೊತ್ತಾದಾಗ ಎಂಥವರಿಗೂ ಕರುಳು ಹಿಂಡುತ್ತದೆ. ಈ ಮಠದ ಜಾಗ ಆ ಊರಿನ ಕೊರಚ ಸಮುದಾಯಕ್ಕೆ ಸೇರಿದ್ದು ಮತ್ತು ಅದನ್ನು ವಾಪಸು ಪಡಯಲೆಂದೆ ಕೊರಚರ ನಾಯಕ ಎಲುಗ ಹರಸಾಹಸ ಮಾಡುತ್ತಾನೆ. ಆದರೆ ಕೇವಲ ಹಣವೊಂದನ್ನೇ ಗುರಿಯಾಗಿಸಿಕೊಂಡು ಸುಖ ಲೋಲುಪತೆಯಲ್ಲಿ ತೇಲಾಡುವ ಮಠದ ಶ್ರೀಗಳು ಮಾತ್ರ ಭಕ್ತರನ್ನು ನಿರಂತರವಾಗಿ ಮೂರ್ಖರನ್ನಾಗಿಸುತ್ತಿರುತ್ತಾರೆ.

ಸಂಬುವಿನ ತಂದೆ ಹಾರ್ಮೋನಿಯಂ ಶಿವಣ್ಣ ಜೀವಂತವಿದ್ದಾಗ ಸಾಮಾನ್ಯ ವ್ಯಕ್ತಿಯಾಗಿದ್ದವನು ಸತ್ತ ಮೇಲೆ ಅವನೆಂಥ ಅದ್ಭುತ ಕಲಾವಿದ ಎಂಬುದು ಗೊತ್ತಾಗುತ್ತದೆ. ತನ್ನ ತಾಯಿ ಯಾರು ಎಂದು ಗೊತ್ತಾಗದೇ ಒದ್ದಾಡುವ ಸಂಬುವಿನ ಸಂಕಟ ಹೇಳತೀರದ್ದು. ‘ಸಿನ್ನೂರಿ’ ಎಂಬ ನಿರೂಪಕರ ಎಮ್ಮೆಗೂ ಮತ್ತು ‘ಚವಡ’ ಎಂಬ ಹಂದಿಗೂ ಪ್ರೇಮಾಂಕುರವಾಗಿ ಅವು ಮಾಡುವ ಪ್ರಣಯ ಚೇಷ್ಟೆಗಳನ್ನು ಓದುವಾಗ ನಗು ತಡೆಯಲಾಗುವುದಿಲ್ಲ. ಶೌಚಾಲಯಗಳಲ್ಲೂ ಸಸ್ಯಹಾರಿ ಮತ್ತು ಮಾಂಸಹಾರಿ ಎಂಬ ಪಂಗಡಗಳಿರುವುದನ್ನು ಲೇಖಕರು ವಿನೋದವಾಗಿ ಚಿತ್ರಿಸಿದ್ದಾರೆ.

ಜಾತಿ ವ್ಯವಸ್ಥೆಯ ಕರಾಳ ಮುಖಗಳು, ಬರಗಾಲ ತಂದೊಡ್ಡುವ ಶಾಪಗ್ರಸ್ಥ ಬದುಕು, ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಇರುವ ಮಾನವೀಯ ಬಾಂಧವ್ಯ, ಸ್ಥಳೀಯ ರಾಜಕೀಯ ಪುಂಡರ ದೌರ್ಜನ್ಯ, ಮಠಗಳ ಅನೂಹ್ಯ ಕಾರ್ಯಾಚರಣೆಗಳು, ಗೋಮಾತೆ ಹೆಸರಿನಲ್ಲಿ ನಡೆಯುವ ಮಾಫಿಯಾ ಜಗತ್ತಿನ ಸೋಗಲಾಡಿತನ, ಕಲಾವಿದರ ದುರಂತ ಜೀವನ, ಮತದಾರರನ್ನು ಬಳಸಿ ಬಿಸಾಡುವ ಪ್ರಭುತ್ವದ ವ್ಯಾಘ್ರತನ, ಮನೆಗಳಿಗೆ ಇರಬೇಕಾದ ಹಿರಿಯರ ಸಾನಿಧ್ಯದ ಅನಿವಾರ್ಯತೆ, ಶಾಲಾ ಶಿಕ್ಷಣ ತರುವ ಕ್ರಾಂತಿಕಾರಿ ಬದಲಾವಣೆ, ಗಾಂಧಿವಾದದ ಮಹತ್ವ, ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಗಳಗಾಗಿ ಯುವಕರು ಹೋರಾಡಲೇಬೇಕಾದ ಸನ್ನಿವೇಶ. ಹೀಗೆ ಹಲವಾರು ವಿಷಯಗಳ ಬಗ್ಗೆ ಮಾತಾಡುತ್ತ. ಜೀವ ವಿರೋಧಿ ಮಲ ಹೊರುವ ಪದ್ಧತಿಯ ಸಂಪೂರ್ಣ ನಿಷೇಧ ಮಾಡಬೇಕು ಎಂದು ಲೇಖಕರು ಆಗ್ರಹಿಸುತ್ತಾರೆ. ಈ ಪದ್ಧತಿಯಿಂದ ಶತಮಾನಗಳ ಕಾಲದಿಂದಲೂ ಶೋಷಣೆಗೆ ಒಳಗಾಗಿ ನರಳುತ್ತಿರುವ ದಲಿತ ಸಮುದಾಯದ ವರ್ತಮಾನದ ಸಾಮಾಜಿಕ ಸ್ಥಿತಿ ಗತಿ ಎಲ್ಲಿಗೆ ಬಂದು ನಿಂತಿದೆ? ಎಂದು ಗಟ್ಟಿಯಾಗಿ ಪ್ರಶ್ನೆ ಮಾಡುತ್ತಾರೆ. ದೇಹವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಟ್ಟುಕೊಂಡರೆ ಸಾಲದು ಹೀನ ಯೋಚನೆಗಳು ಹಾಗೂ ದುಷ್ಟ ಕನಸುಗಳಿಂದ ಹೊಲಸಾಗಿರುವ ಮೆದುಳು ಮತ್ತು ಮನಸುಗಳನ್ನು ಕೂಡ ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ಆಗ ಮನುಷ್ಯ ಪ್ರೇಮ ಪಸರಿಸಿ ಸಮಾಜದ ಆರೋಗ್ಯವನ್ನು ಸುಸ್ಥಿರವಾಗಿರಿಸುತ್ತದೆ ಎಂಬುದು ಕಾದಂಬರಿಯ ಆಶಯವಾಗಿದೆ.

ಈ ಕಾದಂಬರಿಯಲ್ಲಿನ ‘ಟಿಪಿಕಲ್ ಕುಂವೀ ನಿರೂಪಣಾ ಶೈಲಿ’ ಓದುಗನನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ನೀವು ಕುರ್ಚಿ ಮೇಲೆ ಕೂತು ಓದುವಾಗ ಹುಶಾರು, ನಗು ತಡೆಯಲಾದೆ ಕೆಳಗೆ ಬೀಳುವ ಸಂಭವ ಹೆಚ್ಚು. ಕೆಲವು ಸಾಲುಗಳನ್ನು ಓದುವಾಗ ಅದರಲ್ಲೂ ಚವಡ ಎಂಬ ಹಂದಿ ತನ್ನ ಸಂಗಾತಿಗಳ ಜೊತೆ ಶೌಚಾಲಯಗಳ ವಿಹಾರಕ್ಕೆಂದು ಹೋದಾಗಿನ ಸನ್ನಿವೇಶ ಓದುವಾಗ ಓದುಗನ ಕಾಲುಗಳಿಗೇನೆ ಮಲ ಅಂಟಿಕೊಂಡಿದೆಯೇನೋ ಎನ್ನುವಷ್ಟು ಅಸಹ್ಯವಾಗುತ್ತದೆ. ಕೆಲವರು ಅದನ್ನು ಸಹಿಸದೆ ವಾಂತಿ ಮಾಡಿಕೊಳ್ಳಲೂಬಹುದು. ಆಳವಾದ ನೋವು ಮತ್ತು ಕ್ರೌರ್ಯವನ್ನು ಹಾಸ್ಯದ ಲೇಪನದೊಂದಿಗೆ ನಿರೂಪಿಸುವ ಕುಂವೀ ಅವರ ಕಥನಗಾರಿಕೆ ವಿಶ್ವ ಶ್ರೇಷ್ಠ ನಟ ನಿರ್ದೇಶಕ ಚಾರ್ಲಿ ಚಾಪ್ಲಿನ್ ಸಿನೆಮಾಗಳನ್ನು ನೆನಪಿಸುತ್ತದೆ. ಒಂದು ಭರಪೂರ ಮನೋರಂಜನೆಗಾಗಿ ‘ಲ್ಯಾಟರೀನಾ’ ಓದು ಒಳ್ಳೆಯ ಆಯ್ಕೆಯಾಗಿದೆ.

‍ಲೇಖಕರು Admin MM

11 July, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading