-ಸುಚಿತ್ರಾ ಹೆಗಡೆ
ನಮ್ಮ ಬೆಂಗಳೂರಿನ ಐಟಿ ಕಂಪನಿಗಳ ಗಾಜಿನ ಗೋಪುರಗಳು ಮತ್ತು ಮಹಾರಾಷ್ಟ್ರದ ರತ್ನಾಗಿರಿ ಆಪೂಸ್ ಮಾವಿನ ಹಣ್ಣಿನ ತೋಟದ ಮಧ್ಯದಲ್ಲೆಲ್ಲೋ ಅಮೇರಿಕ ಕೃಪಾಪೋಷಿತ ‘ಟಾರಿಫ್, ವೀಸಾ ಮತ್ತು ರಣರಂಪ’ ನಾಟಕ ಶುರುವಾಗಿದೆ. ದಿನಕ್ಕೊಂದು ರೋಚಕ ತಿರುವಿನಿಂದ ಈ ಪ್ರಹಸನ ಪತ್ರಿಕೆಯ ಮುಖಪುಟದಲ್ಲಿ ಬರುವ ಸರಕಾರಿ ಜಾಹೀರಾತಿನಂತೆ ಮಿಂಚುತ್ತಿದೆ. ಎರಡೂ ಕಡೆಯ ವೀಕ್ಷಕ ಪ್ರಭುಗಳು ಮಾತ್ರ ‘ಷರತ್ತುಗಳು ಅನ್ವಯ’ ಅನ್ನುವ ತಲೆಬರಹದಡಿಯಲ್ಲಿ ಚಿಕ್ಕದಾಗಿ ಕಾಣುವ ಗಜಿಬಿಜಿ ಅಕ್ಷರಗಳಂತೆ ಮಸುಕಾಗಿದ್ದಾರೆ.
ಎಚ್ ವನ್ ಬಿ ಅನ್ನುವ ಮಾಯೆಯಿಂದ ರಾತ್ರಿ ಬೆಳಗಾಗುವಷ್ಟರಲ್ಲಿ ನಮ್ಮ ತೆಳುಕಾಯದ, ಮೆಲು ದನಿಯ ಎಂಜಿನಿಯರುಗಳು ಸಿಲಿಕಾನ್ ವ್ಯಾಲಿಯ ಸೂಪರ್ ಹೀರೋಗಳಾಗಿ ರೂಪಾಂತರಗೊಳ್ಳುವ ಚಮತ್ಕಾರ ನಡೆಯುತ್ತಿತ್ತು. ಒಂದು ಕೈಯಲ್ಲಿ ಎಕ್ಸೆಲ್ ಸ್ಪ್ರೆಡ್ ಶೀಟು, ಇನ್ನೊಂದು ಕೈಯಲ್ಲಿ ಕೋಸ್ಟ್ಕೋ ಮೆಂಬರ್ ಶಿಪ್ ಕಾರ್ಡ್ ಹಿಡಿದು ಹೊಡಿ ‘ಮಾಗಾ’…. ಎಂದು ಮುನ್ನುಗ್ಗುವ ದೃಶ್ಯ ಹಿತವಾಗಿತ್ತು. ಅಲ್ಲಿ ಗುಂಡಿಗಳಿಲ್ಲದ, ಟ್ರಾಫಿಕ್ಕಿಲ್ಲದ ರಸ್ತೆಯಲ್ಲಿ ಸಂಚರಿಸುವಾಗ ಮಾತ್ರ ಏನೋ ಪಿಚ್ಚೆನಿಸುವುದನ್ನು ಬಿಟ್ಟರೆ ಇನ್ಯಾವ ಸಮಸ್ಯೆಯೂ ಇರಲಿಲ್ಲ. ನಮ್ಮಲ್ಲಿನ ಪಂಚವಾರ್ಷಿಕ ಯೋಜನೆಗಿಂತ ಮಿಗಿಲಾಗಿ ಅಲ್ಲಿ ವೀಸಾ ಲಾಟರಿ ಯೋಜನೆ ಇದ್ದುದರಿಂದ ಅದನ್ನು ಕೂಡ ಮಿಸ್ ಮಾಡ್ಕೋತಿರಲಿಲ್ಲ. ಆಗಾಗ ‘ಕರ್ರಿ ಕೋಡರ್ಸ್’ ಅಥವಾ ‘ಬ್ಲಡೀ ಇಂಡಿಯನ್ಸ್’ ಅಂತ ಅಣಿಮುತ್ತುಗಳು ಉದುರಿದರೂ ಕಣ್ಣಲ್ಲಿನ ಡಾಲರ್ ನೋಟು ಕಿವಿಯ ಕೆಲಸ ಕಸಿದುಕೊಂಡಿತ್ತು.
ನಮಗೆ ಬೆಸ್ಟ್ ಮತ್ತು ಬ್ರೈಟೆಸ್ಟ್ ಬೇಕು’ ಅಂತ ಒಂದೇ ಸಮನೆ ರಾಗ ಹಾಡುತ್ತಿದ್ದ ಅಮೇರಿಕನ್ನರು ವೀಸಾ ಕೊಡುವುದು ಮಾತ್ರ ಲಾಟರಿಯಿಂದ ಅಂತ ಮಾಡಿ ಅಂತಾಕ್ಷರಿ ಆಟ ಆಡಿಸೋಕೆ ಶುರು ಮಾಡಿದ್ರು. ಯಾವಾಗ ಯಾರಿಗೆ ಯಾವ ಅಕ್ಷರವೆಂದು ಗೊತ್ತಾಗೋಕೆ ವರ್ಷಗಟ್ಟಲೇ ಕಾಯಬೇಕು. ಇಲ್ಲಿ ಬೆಸ್ಟು ಮತ್ತು ಬ್ರೈಟೆಸ್ಟು ಬಿಟ್ಟು ಉಳಿದವ್ರೇ ಆಟ ಗೆದ್ದು ಬಿಡೋರು!
ಉಳಿದವರು ಮರಳಿ ಯತ್ನವ ಮಾಡು ಎಂಬಂತೆ ಎಚ್ ವನ್ ಬಿ ವರ
ಪಡೆಯಲು ಮತ್ತೆ ಘನ ಘೋರವಾದ ತಪಸ್ಸಿಗೆ ತೆರಳುತ್ತಿದ್ದರು. ಆದರೂ ಕೈಗೂಡದಿದ್ದಾಗ ನಿರಾಶೆಯಿಂದ ಮರಳಿ ಬರದೇ ಪಕ್ಕದ ಕೆನಡಾ, ದೂರದ ಇಂಗ್ಲೆಂಡು, ಜರ್ಮನಿ ಮೊದಲಾದ ದೇಶಗಳಿಗೆ ಹೋಗಿ, ಅಲ್ಲಿಂದಲೇ ವೀಸಾದೇವಿಯನ್ನು ಒಲಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದರು.
ಇನ್ನು ಟಾರಿಫ್ ಕಾಳಗ ಮಾತ್ರ ಥೇಟ್ ಅತ್ತೆ ಸೊಸೆಯ ಜಗಳದಂತೆ ಕಾಣುತ್ತದೆ.
‘ನಿನ್ನ ತವರು ಮನೆಯಿಂದ ತಂದ ‘ಉಕ್ಕಿ’ಗೆ ಅದೆಷ್ಟು ಸೊಕ್ಕು’ ಅತ್ತೆ ಹೇಳಿದ್ರೆ,
ಸೊಸೆ ‘ ನಿಮ್ಮನೆ ‘ಬಾದಾಮಿ’ಗೇನು ಕಡಿಮೆ ಕೊಬ್ಬಾ?’ ಕೇಳಿದಳಂತೆ. ಅತ್ತೆ ಸೊಸೆ ಮಧ್ಯೆ ಹೈರಾಣಾದ ಗಂಡ ಶೇಕಡಾ ಇಪ್ಪತ್ತೈದು ಟಾರಿಫ್ ಹಾಕಿದ ಮಾವಿನ ಹಣ್ಣು! ದಿನ ಬೆಳಗಾದ್ರೆ ಈ ಜಗಳ ನೋಡಿ ಬೇಜಾರಾದ ನೆರೆಯ ಸಾಫ್ಟವೇರಿನವರು ನಮಗ್ಯಾಕೆ ಈ ಶಿಕ್ಷೆ ಅಂತ ಕೇಳಿದ್ದಕ್ಕೆ ಮಾವಿನ ಹಣ್ಣು ‘ನಾನು ವೀಸಾಕ್ಕೆ ಅರ್ಜಿ ಹಾಕೋ ಹಾಗಿಲ್ಲ ಅದಕ್ಕೆ’ ಅಂತಂತೆ. ಮಾವನವರಂತೂ ಹಾರ್ಲಿ ಡೇವಿಡ್ಸನ್ ಬೈಕಿನಂತೆ ದುಃಖದ ಭಾರ ತಾಳಲಾರದೆ ಕುಸಿದಿದ್ದಾರಂತೆ.
ಟಾರೀಫು ವೀಸಾ ಜುಗಲ್ಬಂದಿಯ ರಂಗಸ್ಥಳದ ತುಂಬೆಲ್ಲ ಕಾಗದಪತ್ರಗಳ ನರ್ತನ! ಪೆಚ್ಚಾಗಿ ಕುಳಿತು ಮುಂದೇನಾಗುತ್ತೆ ಅಂತ ನೋಡುತ್ತಿರುವ ದೊಡ್ಡ ಟೆಕ್ಕು ಕಂಪನಿಗಳ ಜೊತೆಗೆ ಇಂಜನಿಯರುಗಳು, ವ್ಯಾಪಾರಿಗಳು, ಮಾವುಪ್ರಿಯರು ಕಣ್ಣಿಗೆ ರಷ್ಯಾದ ಎಣ್ಣೆ ಬಿಟ್ಕೊಂಡು ಅಂಕದ ಪರದೆ ಬೀಳುವುದನ್ನೇ ಕಾಯುತ್ತಿದ್ದಾರಂತೆ. ಆದರೆ ಈ ಮಹಾನಾಟಕ ಮಾತ್ರ ಕ್ಷಣಕ್ಕೊಂದು ಅನಿರೀಕ್ಷಿತ ತಿರುವು ತೆಗೆದುಕೊಳ್ಳುತ್ತ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲವಂತೆ. ಪಾತ್ರಧಾರಿಗಳು ರಂಗದ ಮೇಲೆ ಹೊಸ ಹೊಸ ಸಂಭಾಷಣೆಗಳನ್ನು ಹೊಸೆಯುತ್ತಿದ್ದಾರಂತೆ.
ಇದನ್ನೆಲ್ಲ ನೋಡಿ ಶ್ಯಾನೆ ಬೇಜಾರ್ ಮಾಡ್ಕೊಂಡಿರೊ ನಮ್ ಚೀನಣ್ಣ ‘ಅದೇನ್ ಆಪಾಟಿ ಎಲ್ಲದಕ್ಕೂ ದೊಡ್ಡಣ್ಣನೇ ಬೇಕು ಅಂತ ಬಾಯ್ಬಿಡ್ತೀರಿ? ನಾವೆಲ್ಲಾ ಸತ್ತೋಗಿದೆವಾ? ನಮ್ ನೋಡಿ ಕಲ್ತಕಳಿ. ನೀವ್ ನೆಟ್ಟಗಿದ್ರೆ ಯಾವ ರಣರಂಪನೂ ಏನೂ ಮಾಡಕಾಗ್ತಿರಲಿಲ್ಲ, ತಿಳ್ಕಳಿ’ ಅಂತಿದಾರಂತೆ.
ಯಾವುದಕ್ಕೂ ಇಲ್ಲೇ ಬಯೋಡೇಟಾ ರೆಡಿಯಾಗಿಟ್ಕೊಂಡಿರಿ. ಅವರ ಬಾದಾಮಿ ಅವ್ರೇ ತಿಂದ್ಕೊಳ್ಳಿ ಬಿಡಿ. ನೋಟೀಸು ಬರುವ ಮೊದಲೇ ನಮ್ಮದೇ ‘ಬಾದಾಮಿ’ ಮಾವಿನಹಣ್ಣು ತಿಂದು ಮುಗಿಸಿ. ನಗೋರ ಮುಂದೆ ಎಡವುದು ಬಿಟ್ಟು ಇಲ್ಲೇ ಗುಡ್ಡೆ ಕಿತ್ತಾಕಿ ನಮ್ಮ ನೆಲ ಹಸನು ಮಾಡೋದಲ್ವ… ಅಬ್ ಕಿ ಬಾರ್ ಆದ್ರೂ ಬುದ್ಧಿ ಕಲಿಯೋದಲ್ವ.






ಬಹಳಾ ಸೊಗಸಾಗಿ ಸವಿನಯವಾಗಿ ಹೇಳಿದ್ದೀರಿ ಮೇಡಮ್.. ಕೆಲವೇ ದಿನ ಎಲ್ಲಾ ಸರಿಹೋಗುತ್ತೆ