ಇರುವುದೆಲ್ಲವ ಬಿಟ್ಟು
ಹಲವು ತಿಂಗಳುಗಳೇ ಕಳೆದು ಹೋಗಿವೆ, ಎಂಡೋಸಲ್ಫಾನ್ ಸಂತೃಸ್ತರ ಕುರಿತ ಸಮಸ್ಯೆಗಳನ್ನು ಹತ್ತಿರದಿಂದ ಕಂಡು ವರದಿ ಮಾಡಲೆಂದು ಕೊಕ್ಕಡ್ಕ ಸೇರಿದಂತೆ ಇನ್ನುಳಿದ ಗ್ರಾಮಗಳತ್ತ ತೆರಳಿದ್ದೆ. ದಿನವಿಡೀ ಅವರ ಜೊತೆ ಕಳೆದ ನಂತರ ಸಮಸ್ಯೆಯ ತೀವ್ರತೆಯನ್ನು ಕಂಡು ಆತಂಕಗೊಂಡಿದ್ದೆ. ಯಾವುದೋ ನೋವಿನ ಜಗತ್ತಿನಲ್ಲಿ ಕಳೆದುಹೋದ ಅನುಭವವಾಗಿತ್ತು.
ಹಲವು ಕುಟುಂಬಗಳಲ್ಲಿ ಸಮಸ್ಯೆಯನ್ನುಎದುರಿಸಲಾಗದೆ ಬಹುಷಃ ಕಾಡಿದ ವೈರಾಗ್ಯದಿಂದ ಕೆಲವರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ರು. ಸಮಸ್ಯೆ ಕುರಿತಂತೆ ಆಗಿಂದಾಗ್ಗೆ ಮಾತಾಡುತ್ತಿದ್ದ ಶ್ರೀಧರಗೌಡ ಆ ಕುರಿತಂತೆ ಸಿಡಿಯೊಂದನ್ನು ಬಿಡುಗಡೆ ಮಾಡಬೇಕು ನಿಮಗ್ಯಾರದ್ರು ಗೊತ್ತಿದ್ರೆ ಹೇಳಿ ಅಂದ್ರು. ಆತ್ಮೀಯರೊಬ್ಬರು ನಟ ಚೇತನ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ರು.
ಚೇತನ್ ಫೋನ್ ಮಾಡಿದಾಗ ಎಂಡೋಸಲ್ಫಾನ್ ಸಮಸ್ಯೆ ಕುರಿತಂತೆ ಇನ್ನುಹೆಚ್ಚಿನ ಮಾಹಿತಿಯನ್ನು ಪಡೆದ್ರು.
ಮರುದಿನ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಚೇತನ್ ಬಂದಿದ್ರು. ನಾನು ಮಾಡಿದ ಕಾರ್ಯಕ್ರಮದ ಸಿಡಿಯನ್ನು ಕೇಳಿ ಪಡೆದ್ರು. ಅದನ್ನು ನೋಡಿದ ಚೇತನ್ ಸುಮ್ಮನಿರಲಾರದೆ ಸದ್ದಿಲ್ಲದೆ ಎಂಡೋಸಲ್ಫಾನ್ ಪೀಡಿತರಿದ್ದ ಗ್ರಾಮಗಳಿಗೆ ಹೋಗಿಬಂದ್ರು.
ಆಗಲೇ ಚೇತನ್ ಎಂಬ ನಟನ ಸಮಾಜಮುಖಿ ಮುಖ ನನಗೆ ಪರಿಚಯವಾಗಿದ್ದು. ಆನಂತರ ಚೇತನ್ ಎಂಡೋ ಸಂತ್ರಸ್ಥರ ಪರವಾಗಿ ಧ್ವನಿಯೆತ್ತುತ್ತಲೇ ಬಂದಿದ್ದಾರೆ.
ಆನಂತರ ಮತ್ತೆ ಇತ್ತೀಚೆಗೆ ದಿಡ್ಡಳ್ಳಿ ಆದಿವಾಸಿಗಳ ಪರವಾಗಿ ನಡೆದ ಹೋರಾಟದಲ್ಲು ಚೇತನ್ ಸಕ್ರಿಯವಾಗಿ ಪಾಲ್ಗೊಂಡ್ರು. ಈ ಮೂಲಕ ಸುದ್ದಿಯಾದ್ರು. ಈ ಸಂದರ್ಭದಲ್ಲಿ ಪ್ರಜಾ ಟಿವಿ ಸ್ಟುಡಿಯೋಗೆ ಬಂದ ಚೇತನ್ ಇಂತಹದ್ದೊಂದು ಸಮಾಜಮುಖಿ ಚಿಂತನೆ ತಮ್ಮಲ್ಲಿ ಮೂಡಿದ್ದು ಯಾವಾಗ ಅನ್ನೋದನ್ನು ಹಂಚಿಕೊಂಡ್ರು. ಇತ್ತೀಚೆಗೆ ನಾನು ಮಾಡಿದ ಅರ್ಥಪೂರ್ಣ ಸಂದರ್ಶನ ಇದು ಎಂದು ನನಗನಿಸಿತು. ಹಾಗಾಗಿ ಚೇತನ್ ಸಂದರ್ಶನದ ಸಾರಾಂಶವನ್ನು ಇಲ್ಲಿ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ,
ಹೋರಾಟದ ಹಾದಿ
ನಾನು ಅಮೆರಿಕಾದಲ್ಲಿ ಓದುತ್ತಿದ್ದೆ. ಅಮ್ಮ ಅಪ್ಪ ಇಬ್ಬರು ವೈದ್ಯರಾಗಿದ್ದಾರೆ. ಅಮೆರಿಕಾದಲ್ಲಿ ಕಪ್ಪು ವರ್ಣದವರಿಗೆ ತೋರುತ್ತಿರುವ ಧೋರಣೆ ನನ್ನಲ್ಲಿ ಆಕ್ರೋಶವನ್ನು ಹುಟ್ಟಿಸುತ್ತಿತ್ತು. ಅದನ್ನು ಪ್ರಶ್ನಿಸುತ್ತಿದ್ದೆ. ಆಗ ಟಾರ್ಗೆಟ್ ಆಗುತ್ತಿದ್ದೆ. ಟಾಪ್ ನಲ್ಲಿದ್ದರು ಕೆಳಗಿರುವ ವಿದ್ಯಾರ್ಥಿಗಳ ಜೊತೆ ಚರ್ಚಿಸುತ್ತಿದ್ದೆ. ತಪ್ಪನ್ನು ಪ್ರಶ್ನಿಸುತ್ತಿದ್ದವರ ಜೊತೆ ಸೇರಿಕೊಳ್ಳುತ್ತಿದ್ದೆ. ಹೀಗೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವ ನನ್ನಲ್ಲಿತ್ತು.
ಹಾಸಿಗೆಬೇಡ, ಚಾಪೆಯೇ ಹಿತವಾಗಿತ್ತು
ಚಿಕ್ಕಂದಿನಿಂದ ಅದ್ಯಾಕೋ ನನಗ್ಯಾವುದಿದೆಯೋ ಅದು ಬೇಡ ಅನ್ನಿಸುತ್ತಿತ್ತು. ಅತಿ ಹೆಚ್ಚಿನ ಸುಖ ಬೇಡ ಅನಿಸುತ್ತಿತ್ತು. ಹಾಸಿಗೆ ಇದ್ರೆ ಚಾಪೆಯಲ್ಲಿ ಮಲಗೋಣ ಅನ್ನಿಸುತ್ತಿತ್ತು. ಬಿಸಿನೀರು ಬೇಡ ತಣ್ಣೀರು ಹಿತವೆನಿಸುತ್ತಿತ್ತು. ಇಲ್ಲದವರ ನೊಂದವರ ಮುಖ ಕಣ್ಣೆದುರು ಬರುತ್ತಿತ್ತು. ಅವರಿಗಿಲ್ಲದ್ದು ನನಗ್ಯಾಕೆ ಎಂದು ಅನಿಸುತ್ತಿತ್ತು.
ಕರುನಾಡು ಬಿಟ್ಟು ಹೋಗೋದೆ ಹಿಂಸೆಯಾಗಿತ್ತು
ರಜೆ ವೇಳೆ ಹೆತ್ತವರ ಜೊತೆ ಕರ್ನಾಟಕಕ್ಕೆ ಬಂದಾಗ ವಾಪಾಸು ಹೋಗೋದು ಹಿಂಸೆ ಅನ್ನಿಸುತ್ತಿತ್ತು. ತುಂಬಾನೆ ಅಳುತ್ತಿದ್ದೆ. ವಾಪಾಸು ಹೋಗೋದೆಂದ್ರೆ ತುಂಬಾನೆ ನೋವನ್ನಿಸುತ್ತಿತ್ತು. ಚಿಕ್ಕಂದಿನಿಂದಲು ಕುವೆಂಪು, ಕಾರಂತರೆಂದರೆ ತುಂಬಾನೆ ಅಚ್ಚುಮೆಚ್ಚು. ಅಮೆರಿಕಾಕ್ಕೆ ಕಾರಂತರು ಬಂದಾಗ ಒಮ್ಮೆ ಭೇಟಿಯಾಗಿದ್ದೆ. ಶರಣರು, ಅಕ್ಕಮಹಾದೇವಿ, ಗಾಂಧೀಜಿ,ಬುದ್ಧ, ಅಂಬೇಡ್ಕರ್ ನನ್ನಮೇಲೆ ತುಂಬಾನೆ ಪ್ರಭಾವ ಬೀರಿದವರು.
ಮೇಧಾ ಪಾಟ್ಕರ್ ನೋಡಲು ಜನರಿರಲಿಲ್ಲ
ಮೇಧಾ ಪಾಟ್ಕರ್ ಕೂಡ ನನ್ನ ಮೇಲೆ ಪ್ರಭಾವ ಬೀರಿದ ಮಹಿಳೆ. ಒಮ್ಮೆ ಅವರನ್ನು ನೋಡಬೇಕೆಂದು ಬೇಗನೆ ತೆರಳಿದ್ದೆ. ತಡವಾಗಿ ಹೋದರೆ ಅವರನ್ನು ನೋಡಲು ಅವಕಾಶ ಸಿಗುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ನಾನು ತಲುಪಿದಾಗ ಕಂಡದ್ದೇ ಬೇರೆ, ನಾನು ಯೋಚಿಸಿದ ಹಾಗೆ ಅಲ್ಲಿ ಜನ ತುಂಬಿ ತುಳುಕುತ್ತಿರಲಿಲ್ಲ, ನನಗೆ ತುಂಬಾನೆ ಬೇಸರವಾಯಿತು.ಪರದೆಯ ಮೇಲೆ ಹೀರೋ ಆದವರನ್ನು ನೋಡಲು ಮುಗಿಬೀಳುವ ಮಂದಿ ನಿಜ ಜೀವನದಲ್ಲಿ ಹೀರೋ ಆದವರನ್ನು ನೋಡಲು ಆಸಕ್ತಿಯೇ ತೋರುತ್ತಿಲ್ಲವೇಕೆ ?ಎಂದು ಯೋಚಿಸಿದೆ.
ಹೀರೋ ಆಧಾರಿತ ಸ್ಕ್ರಿಪ್ಟ್
ಇಂದು ಸಿನಿಮಾರಂಗದಲ್ಲಿ ಮಹಿಳೆಯರಿಗೆ ತುಂಬಾನೆ ಸಮಸ್ಯೆಯಿದೆ. ಹೀರೋ ಆಧಾರಿತ ಸ್ಕ್ರಿಪ್ಟ್ ಗಳನ್ನು ಬರೆಯಲಾಗುತ್ತದೆ. ಬಿಲ್ಡ್ ಕೊಟ್ಟು ಅವರನ್ನೇ ಆರಾಧನೆ ಮಾಡುವ ಮನಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ಈ ರೀತಿ ಪಿತೃ ಪ್ರಧಾನ ವ್ಯವಸ್ಥೆಯನ್ನು ಮತ್ತೆ ಮತ್ತೆ ಸಮರ್ಥಿಸುವ ಪ್ರಯತ್ನ ನಡೆಯುತ್ತಿದೆ. ಹೀರೋ ಒಂದು ಪಂಚಿಂಗ್ ಡಯಲಾಗ್ ಹೊಡೀತಾನೆ. ಹುಡುಗಿಗೆ ನಿನ್ನ
ಬಟ್ಟೆ ಸರಿಯಿಲ್ಲ ಅನ್ನುತ್ತಾನೆ. ನಿಜವಾಗಿಯು ಹುಡುಗ ನೋಡುವ ರೀತಿ ಸರಿಯಿರೋದಿಲ್ಲ. ಸಿನಿಮಾ ಕಥೆ ಬರೆಯೋರಿಗೆ ಸಿಗಬೇಕಾದ ಮನ್ನಣೆ ಸಿಗೋದಿಲ್ಲ. ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಇತರ ಕಾರ್ಮಿಕರ ಸಮಸ್ಯೆಯು ಪ್ರಮುಖವಾದ ಸಮಸ್ಯೆಯಾಗಿದೆ. ಮಹಿಳಾ ಬರಹಗಾರರು ಸಿನಿಮಾಕಥೆ ಬರೆಯಬೇಕು. ಅವರ ನೋಟದಲ್ಲಿ ಸಮಸ್ಯೆಗಳು ಪ್ರತಿಬಿಂಬಿಸಬೇಕು.ಸಮಾನತೆ ಆಶಯಗಳಿಗೆ ಸಿನಿಮಾ ಮುನ್ನುಡಿ ಬರೆಯಬೇಕು.
ದಿಡ್ಡಳ್ಳಿ ಹೋರಾಟ
ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆ ಕುರಿತ ಹೋರಾಟದಲ್ಲಿ ಧುಮುಕಬೇಕನ್ನಿಸಿತು. ಆದಿವಾಸಿಗಳ ಸಮಸ್ಯೆಯನ್ನು ಹತ್ತಿರದಿಂದ ನೋಡಿದ್ದೇನೆ, ಇವರ ಸಮಸ್ಯೆಗಳು ನಿರಂತರ. ಮುಗ್ಧತೆಯ ಲಾಭ ಪಡೆಯುವ ಪ್ರಯತ್ನವು ನಡೆಯುತ್ತಿದೆ. ಅವರನ್ನು ಒಕ್ಕಲೆಬ್ಬಿಸುವ ವ್ಯವಸ್ಥೆ ಭೂಮಿ ಅತಿಕ್ರಮಣ ಮಾಡಿಕೊಂಡ ಎಸ್ಟೇಟ್ ಮಾಲೀಕರನ್ನು ಸಹಿಸಿಕೊಳ್ಳುತ್ತದೆ. ಇದೆಂತಾ ನ್ಯಾಯ ಅಲ್ವಾ?
ಹೋರಾಟ ನಿರಂತರ
ಅನ್ಯಾಯದ ವಿರುದ್ಧ ಬೀದಿಗಿಳಿದು ಕೂಗೋದರಿಂದ ಸಮಸ್ಯೆ ಬಗೆಹರಿಯೋದಿಲ್ಲ. ಹೋರಾಟ ಅನ್ನೋದು ಅದು ನಿರಂತರ.ನಮಗೆ ಅನ್ಯಾಯವಾದಾಗ ಇನ್ನೊಬ್ಬರಿಗೆ ಅನ್ಯಾಯವಾದಾಗ ಅದನ್ನು ಪ್ರಶ್ನಿಸುವ ಪ್ರವೃತ್ತಿ ನಮ್ಮದಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ.
ಇದು ಚೇತನ್ ಜೊತೆಗಿನ ಸಂದರ್ಶನದ ಸಾರಾಂಶ. ಯಾಕೋ ಕಿಡಿಹತ್ತಿಸುವ ಹಾಗಿರುವ ಬದಲಾವಣೆಯ ಆಶಯವನ್ನು ಬಿತ್ತುವಂತಿರುವ ಮಾತುಗಳನ್ನು ಈ ಬಾರಿ ಬರೆಯಬೇಕೆನಿಸಿತು.
ಮತ್ತೆ ಮುಂದಿನ ವಾರ ಸಿಗುವ,,
ಜ್ಯೋತಿ ಇರ್ವತ್ತೂರು






0 Comments