ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಯ್ಡಾದಲ್ಲಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗುವುದುಂಟೇ..!

44

ಹಿಂದುಳಿದ ಜೋಯ್ಡಾದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ-

ಅಣ್ಣನ ಬದುಕಿನಲ್ಲಿಯೇ ಇದೊಂದು ಸಾರ್ಥಕ ಕ್ಷಣವಾಗಿತ್ತು. ಆತ ೨೦೦೫ ರಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ೧೨ ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ಆತನನ್ನು ಆಯ್ಕೆ ಮಾಡಿದರು. ಸಾರ್ಥಕ ಕ್ಷಣ ಎಂದು ನಾನು ಹೇಳಿದ್ದು ಆತ ಜಿಲ್ಲಾ ಸಮ್ಮೇಳನದ ಅಧ್ಯಕ್ಷನಾದ ಎನ್ನುವ ಕಾರಣದಿಂದಲ್ಲ. ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕಾದ, ಕುಣಬಿ ಮತ್ತು ಗೌಳಿಗಳಂತ ಅರಣ್ಯವಾಸಿ ಬುಡಕಟ್ಟುಗಳು ಹೆಚ್ಚಾಗಿರುವ ಸ್ಥಳವಾದ ಜೋಯಿಡಾ- ಹಿಂದಿನ ಸೂಪಾ – ತಾಲೂಕಿನಲ್ಲಿ ಸಮ್ಮೇಳನದ ಅಧ್ಯಕ್ಷನಾಗುವುದರ ಕುರಿತು ಆತನಿಗೆ ಹೆಮ್ಮೆ ಇತ್ತು.

ಬಹುಶಃ ಹಲವು ಜನ ಇಲ್ಲಿ ಸಮ್ಮೇಳನಾಧ್ಯಕ್ಷರಾಗಲು ಒಪ್ಪುತ್ತಿರಲಿಲ್ಲ. ಯಾಕೆಂದರೆ ನಮ್ಮ ಜಿಲ್ಲೆಯಲ್ಲಿಯೇ ಇದು ಅತ್ಯಂತ ಹಿಂದುಳಿದ ತಾಲೂಕು. ಅಷ್ಟು ಮಾತ್ರವಲ್ಲ. ತಾಲೂಕು ಕೇಂದ್ರವೇ ಒಂದು ಗ್ರಾಮ ಪಂಚಾಯತ್ ಕೇಂದ್ರವಾಗಿತ್ತು. ಜನಸಂಖ್ಯೆ ಕೂಡ ವಿರಳ. ಮೇಲ್ಜಾತಿಯವರು ಇರುವರಾದರೂ ಹಿಂದುಳಿದವರ ಸಂಖ್ಯೆ ಅತಿ ಹೆಚ್ಚು. ಕನ್ನಡ ಸರಿಯಾಗಿ ಉಚ್ಛರಿಸಲು ಬರದ ಕುಣಬಿಗಳು, ಗೌಳಿಗಳು ತುಂಬಿರುವ ತಾಲೂಕು ಇದು.

ಜನರ ಬಾಯಲ್ಲಿ ‘ಕನ್ನಡದ ಗಂಧಗಾಳಿಯೂ ಇಲ್ಲದ ತಾಲೂಕು’ ಎಂದೇ ಪ್ರಸಿದ್ಧ. ಪನಿಷ್ಮೆಂಟ್ ಟ್ರಾನ್ಸ್ಫರ್ ಮಾಡುವುದಿದ್ದರೆ ಜೋಯ್ಡಾಕ್ಕೆ ಮಾಡುತ್ತಿದ್ದರು. ಜನಪ್ರತಿನಿಧಿಗಳ ಕರ್ಮದ ಫಲ ಇದು!!. ಹಾಗಿದ್ದೂ ಇದು ರಾಜ್ಯಕ್ಕೆ ವಿದ್ಯುತ್ ಕೊಟ್ಟಿದೆ. ಚೆನ್ನಬಸವಣ್ಣ ಕಲ್ಯಾಣ ಕ್ರಾಂತಿ ನಂತರ ಉಳಿವಿಗೆ ಬಂದು ಉಳಿದ ಪ್ರತೀತಿ ಇದೆ. ಸೌಹಾರ್ದತೆಗೂ, ಸರಳತೆಗೂ, ಮುಗ್ಧತೆಗೂ ಹೆಸರಾದ ತಾಲೂಕು ಇದು.

ಒಂದೆರಡು ಸಲ ಅವನಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಕೇಳಿದಾಗ ಆತ ಬೇರೆಯವರ ಹೆಸರನ್ನೇ ಸೂಚಿಸಿದ್ದ ನೆನಪು. ಆದರೆ ರೋಹಿದಾಸ ನಾಯಕರು ಜಿಲ್ಲಾ ಅಧ್ಯಕ್ಷರಾಗಿದ್ದ ಕಾಲ ಅದು. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೇರಿದ ಹಿರಿಯ ಸಾಹಿತಿಗಳು ಮತ್ತು ಜಿಲ್ಲಾ ಸಮಿತಿ ಅಣ್ಣನನ್ನು ಅಧ್ಯಕ್ಷ ಗೌರವಕ್ಕೆ ಆಯ್ಕೆ ಮಾಡಿದರು. ಮೊದಮೊದಲು ಅಣ್ಣ ಅಧ್ಯಕ್ಷ ಹುದ್ದೆಗೆ ಒಪ್ಪಿಲ್ಲದಿದ್ದರೂ ಅಂತಿಮವಾಗಿ ಜೋಯಿಡಾದಲ್ಲಿ ಸಮ್ಮೇಳನ ಆಗಿರುವುದರಿಂದ ಆತ ಒಪ್ಪಿಕೊಂಡ.

ತಾಲೂಕಿನ ಅಭಿವೃದ್ಧಿಗಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಹೋರಾಟವನ್ನು ಗಮನಿಸಿದ್ದ ಆತ. ನಾನೂ ಹಲವು ಬಾರಿ ಈ ಹೋರಾಟದಲ್ಲಿ ಪಾಲ್ಗೊಂಡು ಬಂದಾಗ ಅಲ್ಲಿಯ ಸ್ಥಿತಿಯನ್ನು ಕೇಳಿ ಆಕ್ರೋಶಗೊಂಡಿದ್ದ. ಯಮುನಾಳ ಮೂಲಕ ಜೋಯಿಡಾದ ಇನ್ನಷ್ಟು ಹೆಚ್ಚು ಪಾಡನ್ನು ಕೇಳಿ ತಿಳಿದ ಆತ ಇಲ್ಲಿ ಅಧ್ಯಕ್ಷನಾಗಿ ಮಾತನಾಡುವುದು ತನ್ನ ಸಂಘಟನಾ ಬದ್ಧತೆ ಎಂದೇ ತಿಳಿದ. ಮತ್ತು ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಿದ.

ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಅದೊಂದು ಹೊಸ ಅನುಭವದ ದಿನ. ಜೋಯ್ಡಾದ ಪಾಲಿಗೆ ಸಂಭ್ರಮದ ದಿನ. ಮಾರ್ಚ ೧೨-೧೩, ೨೦೦೫ ರಂದು ಜೋಯಿಡಾದ ನಗರದ (ದೊಡ್ಡ ಹಳ್ಳಿ) ಹಿರಿಯ ಪ್ರಾಥಮಿಕ ಶಾಲೆಯ ಗ್ರೌಂಡಿನಲ್ಲಿ ಹಾಕಿದ ದೊಡ್ಡ ಪೆಂಡಾಲ್ ಕೆಳಗೆ ಎರಡೂ ದಿನವೂ ತುಂಬಿ ತುಳುಕುವ ಜನ. ಜೋಯಿಡಾ ಎಂದರೆ ಜನವೇ ಇರುವುದಿಲ್ಲ ಎಂದು ನಿರೀಕ್ಷಿಸಿದವರಿಗೆ ಅಚ್ಚರಿ ಎನ್ನುವಂತಿತ್ತು. ಡಾ. ಎಂ. ಜಿ. ಹೆಗಡೆಯವರು ಇಡೀ ಕಾರ್ಯಕ್ರಮದ ಸಂಯೋಜನೆ ಮಾಡಿದ್ದರು. ಅವರು ಮಾಡಿದ ಮೇಲೆ ಕೇಳಬೇಕೆ? ಯಾರೂ ಚಕಾರ ಎತ್ತುವಂತಿಲ್ಲ. ಅಷ್ಟು ಒಪ್ಪ; ಅರ್ಥಪೂರ್ಣ.

ನಾನು ನೋಡಿದ ಯಾವ ಜಿಲ್ಲಾ ಸಮ್ಮೇಳನದಲ್ಲೂ ಇಷ್ಟು ಜನರು ಆಗಿದ್ದನ್ನು ನೋಡಿಯೇ ಇಲ್ಲ. ಅಲ್ಲಿ ಚಿಂತನದ ತಂಡವೇ ಸಮ್ಮೇಳನದ ಯಶಸ್ವಿಗೆ ಇಳಿದಿತ್ತು. ತೀರಾ ಹಿಂದುಳಿದ ತಾಲೂಕಾಗಿರುವುದರಿಂದ ಮತ್ತು ಸಮ್ಮೇಳನದ ಮಹತ್ವವೇ ಅರ್ಥವಾಗದ ಜನರಿರುವುದರಿಂದ ಪ್ರಚಾರದ ಅಗತ್ಯತೆ ಇತ್ತು. ಹಾಗಾಗಿ ‘ಚಿಂತನ’ದಿಂದ ಒಂದು ಬೀದಿ ನಾಟಕ ಸಿದ್ಧಪಡಿಸಿದ್ದೆವು. ಕಾರವಾರದಿಂದ ಜೋಯಿಡಾದವರೆಗಿನ ಬಹುತೇಕ ಎಲ್ಲಾ ಹಳ್ಳಿಗಳಿಗೆ ಬೀದಿ ನಾಟಕ ತಂಡ ತೆಗೆದುಕೊಂಡು “ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ”, ‘ಅಲ್ಲಿ ತಾಲೂಕಿನ ಅಭಿವೃದ್ಧಿಯ ಕುರಿತು ಚರ್ಚೆಯಾಗುತ್ತದೆ’ ಎಂದು ಕರೆದು ಬಂದೆವು.

ಒಂದು ರೀತಿಯಲ್ಲಿ ಮದುವೆ ಮನೆಗೆ ಕರೆದಂತೆ ಕರೆ ಹೋಯಿತು. ಹಳ್ಳಿ ಹಳ್ಳಿಗೆ ಸಮ್ಮೇಳನದ ಕರೆಯೋಲೆ ತಲುಪಿತು. ಜನ ಜಾತ್ರೆಗೆ ಬಂದಂತೆ ಬಂದರು. ಜಿಲ್ಲೆಯ ಬೇರೆ ತಾಲೂಕಿನಿಂದಲೂ ಸಾಹಿತಿಗಳು ಬಂದಿದ್ದರು. ಬಂದವರು ಇಲ್ಲೇ ಇರುವುದು ಅನಿವಾರ್ಯ. ಬೇರೆ ಎಲ್ಲೂ ಹೋಗುವಂತಿಲ್ಲ. ಪೇಟೆ ಇಲ್ಲ ಎನ್ನುವುದು ಮಾತ್ರ ಕಾರಣವಾಗಿರಲಿಲ್ಲ. ಅದಕ್ಕೆ ಅಣ್ಣನ ಬಗ್ಗೆ ಇರುವ ಅಭಿಮಾನವೂ, ಅಂದು ಚರ್ಚೆಯಾದ ವಿಷಯದ ಗಂಭೀರತೆಯೂ ಕಾರಣವಾಗಿತ್ತು.

ಮೊದಲ ದಿನವೇ ಜೋಯ್ಡಾಕ್ಕೆ ಅಣ್ಣನ್ನು ಕರೆದುಕಂಡು ಹೋಗಿದ್ದರು. ಇರುವ ಒಂದೇ ಒಳ್ಳೆಯ ಜಾಗ ಐ.ಬಿ ಯಲ್ಲಿ ಉಳಿಸಿದರು. ನಾವೆಲ್ಲಾ ಉಳಿದ್ದು ಶಾಲೆಯ ಕೋಲಿಯಲ್ಲಿ. ಅಲ್ಲಿ ಒಂದೇಒಂದು ಲಾಡ್ಜ್ ಕೂಡ ಇಲ್ಲ. ಈಗಿರುವಂತೆ ಹೋಮ್ ಸ್ಟೇಗಳೂ ಪರಿಚಯ ಇರಲಿಲ್ಲ.

ಸಮ್ಮೇಳನದ ಮೊದಲ ದಿನ ಇಡೀ ನಮಗಂತೂ ರಾತ್ರಿ ನಿದ್ದೆ ಇಲ್ಲ. ಮದುವೆ ಮನೆಯ ಹಿಂದಿನ ದಿನದಂತೆ ತಯಾರಿ. ಅಲ್ಲಿ ನಮಗೆ ಬೇಕಾದ ಒಂದಕ್ಕೊಂದು ವಸ್ತು ಸಿಗುತ್ತಿರಲಿಲ್ಲ. ರಾತ್ರಿಯೆಲ್ಲಾ ಕುಳಿತು ಸಮ್ಮೇಳನಾಧ್ಯಕ್ಷರ ಪುಸ್ತಕದ ಮಳಿಗೆ ಸಿದ್ಧಪಡಿಸಿದ್ದೆವು. ಗೆಳೆಯ ಗುಂದದ ರಾಜೇಶ ದೇಸಾಯಿ ಮೊದಲ ಬಾರಿಗೆ ತನ್ನ ಪೇಂಟಿಂಗ್ ಗಳ ಪ್ರದರ್ಶನ ಮಳಿಗೆ ಸಿದ್ಧಪಡಿಸಿದ್ದ. ಪೆಂಟಿಂಗ್‌ಗಳ ಹಿಂದೆ ಹಾಕಲು ಬಟ್ಟೆ ಬೇಕಿತ್ತು. ಇಡೀ ಜೋಯಿಡಾದಲ್ಲಿ ಎಷ್ಟೇ ಅರಸಿದರೂ ೧೦-೧೨ ಮೀಟರ್ ಸಿಕ್ಕಲಿಲ್ಲ. ಸಮ್ಮೇಳನದ ದಿನವೇ ರಾತ್ರಿ ಬಂದಿದ್ದ ಹಾಡುಗಾರ ಗಣೇಶ ದೇಸಾಯಿ ಜೋಯಿಡಾದವರು ಎನ್ನುವುದು ಪುಳಕಗೊಳಿಸಿತ್ತು. ಗಣೇಶ-ರಾಜೇಶ ಇಬ್ಬರೂ ಅತಿ ಹಿಂದುಳಿದ ಜೋಯಿಡಾದ ಪ್ರತಿಭೆ. ಮೊದಲ ಬಾರಿಗೆ ಇಲ್ಲಿ ಅವರ ಇಬ್ಬರ ಕಲಾ ಪ್ರದರ್ಶನ ನಡೆದಿದ್ದು ಎನ್ನುವುದು ಕೂಡ ಮಹತ್ವದ ಸಂಗತಿ.

ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಯಕ್ಷಗಾನ ಕೂಡ ಇತ್ತು. ಪಾತ್ರ ಬರೆದುಕೊಂಡು ಎರಡು ತಾಸು ಕೂತಿದ್ದರು. ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳ ಕಲಾಪ್ರದರ್ಶನ. ಒಬ್ಬರಾದ ಮೇಲೆ ಒಬ್ಬರು; ಇನ್ನೇನು ಯಕ್ಷಗಾನ ಪ್ರಾರಂಭ ಆಗಬೇಕು, ಅಷ್ಟೊತ್ತಿಗೆ ಒಬ್ಬ ಬಂದು ಚಿಟ್ಟಾಣಿಯವರ ಹತ್ತಿರ “ಸರ್, ಇದು ನಮ್ಮೂರು, ನಾನೊಂದು ಕಾರ್ಯಕ್ರಮ ಕೊಡ್ತೇನೆ ನೀವು ಒಪ್ಪಿದರೆ ಅವಕಾಶಕೊಡುವುದಾಗಿ ಹೇಳಿದ್ದಾರೆ. ದಯವಿಟ್ಟು ಆಮೇಲೆ ನೀವು ಯಕ್ಷಗಾನ ಮಾಡಬಹುದೇ” ಎಂದು ಕೇಳಿದಾಗ ಅವರು ತೀರಾ ಖುಷಿಯಿಂದ “ಇದು ನಿಮ್ಮೂರು, ನಿಂದೇ ವೇದಿಕೆ, ಮಾಡು” ಅಂತ ಪ್ರೀತಿಯಿಂದ ಅವಕಾಶ ಮಾಡಿ ಕೊಟ್ಟರು. ಮತ್ತೆ ನಮ್ಮೊಂದಿಗೆ ನಿಂತು ಒಂದು ಫೋಟೋ ಕೂಡ ತೆಗೆಸಿಕೊಂಡರು. ಯಾರು ಬಂದರೂ ಫೋಟೋಗೆ ಇಲ್ಲ ಎನ್ನಲಿಲ್ಲ. ದೊಡ್ಡ ಕಲಾವಿದರ ದೊಡ್ಡಗುಣ ಇದು.

ಇಡೀ ಸಮ್ಮೇಳನದ ಯಶಸ್ಸಿಗೆ ಕಾರಣಕರ್ತರು ಹಲವು ಜನ; ಎಲ್ಲರೂ ಸಂಭ್ರಮದಿಂದ ಯಶಸ್ವಿಗೊಳಿಸಿದರು. ಪಾಪ ನಮ್ಮ ಎಲ್ಲ ಲೇಖಕರೂ ರಾತ್ರಿ ಅಲ್ಲಿಯೇ ಶಾಲೆಯಲ್ಲಿ ಬೇಂಚು ಜೋಡಿಸಿಕೊಂಡು ಮಲಗಿದರು, ಯಾವ ತಕರಾರೂ ಇಲ್ಲದಂತೆ. ಆಗ ಅಲ್ಲಿ ತಹಶೀಲ್ದಾರ್ ಆಗಿದ್ದವರು ಸಾಹಿತ್ಯ ಪ್ರೇಮಿಯಾದ ಕೃಷ್ಣಪ್ಪ ಪೂಜಾರಿಯವರು. ಅವರ ಅವಿರತ ದುಡಿಮೆಯನ್ನು ನೆನೆಯಲೇ ಬೇಕು. ಅಲ್ಲಿ ಸಮ್ಮೇಳನ ಮಾಡುವ ಧೈರ್ಯ ತೋರಿದ ರೋಹಿದಾಸ ನಾಯಕ ಅವರು, ಜೋಯಿಡಾದಲ್ಲಿ ಸಮ್ಮೇಳನ ನಡೆಯುವದಿದ್ದರೆ ಸಮ್ಮೇಳನಾಧ್ಯಕ್ಷನಾಗಲು ಒಪ್ಪಿಗೆ ಎಂದು ಹೇಳಿದ ಅಣ್ಣ, ಅಣ್ಣ ಅಧ್ಯಕ್ಷನಾದರೆ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿ ಯಶಸ್ವಿಗೊಳಿಸುವದಾಗಿ ಹೇಳಿದ ಎಂ.ಜಿ. ಹೆಗಡೆ ಮತ್ತು ಆ ಹೊತ್ತಿಗೆ ವಿವಿಧ ತಾಲೂಕಿನ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರ ಶ್ರಮವನ್ನು ನೆನೆಯಲೇ ಬೇಕು.

ಅಣ್ಣ ಅಧ್ಯಕ್ಷನಾಗುತ್ತಿರುವ ವಿಷಯ ಕೂಡ ಪತ್ರಿಕೆಗಳಲ್ಲಿ ದೊಡ್ಡದಾಗಿಯೇ ಬಂತು. ಆತನ ಅಧ್ಯಕ್ಷ ಭಾಷಣ, ವಿವಿಧ ಗೋಷ್ಠಿಗಳ ಚರ್ಚೆಗಳು ಜಿಲ್ಲಾ ಪುಟವನ್ನು ತುಂಬಿದ್ದವು. ಹಿಂದುಳಿದ ತಾಲೂಕಾದರೂ ಯಾವುದೇ ಮೂಲಭೂತ ಅವಶ್ಯಕತೆಗಳ ಕೊರತೆ ಇದ್ದರೂ ಸಮ್ಮೇಳನದ ಸುದ್ದಿಯನ್ನು ಆ ಹೊತ್ತಿನ ಪತ್ರಿಕಾಕರ್ತರು ರಾಜ್ಯ ಸಮ್ಮೇಳನದಂತೆ ವರದಿ ಮಾಡಿದರು.

ಅಣ್ಣನ ಭಾಷಣ ಹೊಸ ನಡೆಯಲ್ಲೇ ಇತ್ತು. ಸಾಹಿತ್ಯದ ಅವಲೋಕನಕ್ಕಿಂತ ಜೋಯಿಡಾದ ಜನತೆಯ ಬದುಕಿನ ಪ್ರಶ್ನೆಯನ್ನೇ ಮುಖ್ಯವಾಗಿಟ್ಟುಕೊಂಡು ಭಾಷಣ ಸಿದ್ಧಪಡಿಸಿದ್ದ. ಇದಕ್ಕಾಗಿ ವಿಶೇಷ ತಯಾರಿಯನ್ನೂ ನಡೆಸಿದ್ದ. ಒಂದೆರಡು ದಿನ ಜೋಯಿಡಾದ ಹಳ್ಳಿಗಳನ್ನು ಭೇಟಿಕೊಟ್ಟು ಬಂದಿದ್ದ. ಆತನ ಅನಾರೋಗ್ಯದ ಕಾರಣ ತುಂಬಾ ದಿವಸ ಅಲ್ಲಿ ಉಳಿಯಲು ಆಗಲಿಲ್ಲ. ಜಿಲ್ಲಾಡಳಿತ, ಜಿಲ್ಲಾ ಪರಿಷತ್ತಿನಿಂದ ಕೂಡ ಅಂಕಿಅಂಶಗಳನ್ನು ತರಿಸಿಕೊಂಡು ಇಡೀ ತಾಲೂಕಿನ ಅಭಿವೃದ್ಧಿಯ ನೀಲನಕ್ಷೆಯಂತೆ ಆತನ ಭಾಷಣ ಇತ್ತು. ಹಲವರು ಈ ಭಾಷಣದಲ್ಲಿ ಸಾಹಿತ್ಯದ ಅಂಶ ಕಡಿಮೆ ಇದೆ ಅಂದರು. “ನಾನು ಸಮ್ಮೇಳನದ ಅಧ್ಯಕ್ಷ. ಆತನ ಜವಾಬ್ದಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ. ಸಾಹಿತ್ಯ ಮಾತ್ರ ಆತನ ವ್ಯಾಪ್ತಿಯಲ್ಲ. ಭಾಷೆ, ಬದುಕು, ಮೂಲಸೌಕರ್ಯ ಎಲ್ಲಾ ಬರುತ್ತದೆ” ಎಂದು ೨೨ ಪುಟಕ್ಕೆ ಇಳಿಸಲಾಗಿತ್ತು. ಆದರೂ ಅದು ಸಮಗ್ರವಾಗೇ ಇತ್ತು.

ಆತ ‘ಜೋಯಿಡಾ ಅಭಿವೃದ್ಧಿ ಆಗದಿದ್ದರೆ ಮುಂದಿನ ಬಾರಿ ನಾನೇ ಪ್ರತಿಭಟನಾರ್ಥವಾಗಿ ಚುನಾವಣೆಗೆ ನಿಲ್ಲುತ್ತೇನೆ.’ ಎಂದು ಗುಡುಗಿದ್ದ. ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿಯನ್ನು ಪತ್ರಕರ್ತರ ಹೆಗಲಿಗೆ ಹಾಕಿದ್ದ. ಪತ್ರಕರ್ತರು ತಮ್ಮ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ಸರ್ಕಾರ, ಜನಪ್ರತಿನಿಧಿಗಳ ನಿಷ್ಕಾಳಜಿ ಎದ್ದು ಕಾಣುತ್ತಿದೆ.

ಅಲ್ಲಿಯ ಸಮ್ಮೇಳನಕ್ಕೆ ಯಾವ ಚಾರ್ಮ್ ಇರುವುದಿಲ್ಲ, ಯಾಕೆ ಅಧ್ಯಕ್ಷರಾಗುತ್ತೀರಿ” ಎಂದು ಕೇಳಿದವರೂ ನಂತರ ಅಭಿನಂದಿಸಿದರು. ಪುಸ್ತಕ ಮಾರಾಟ ಕೂಡ ಚೆನ್ನಾಗಿಯೇ ಆಯಿತು.

ಕುಣಬಿ ಮುಖಂಡರು ಬಂದು ಅಣ್ಣನಿಗೂ ಚಂದ್ರಶೇಖರ ಪಾಟೀಲ ಅವರಿಗೂ ಆಗ ಸಚಿವರಾದ ಬಸವರಾಜ ಹೊರಟ್ಟಿಯವರಿಗೂ ಮನವಿ ನೀಡಿ ತಮ್ಮನ್ನು ಬುಡಕಟ್ಟುಗಳೆಂದು ಪರಿಗಣಿಸಬೇಕೆಂದು ನಾವು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಬೇಕಾಗಿ ವಿನಂತಿಸಿದರು.
ಸಾಹಿತ್ಯ ಸಮ್ಮೇಳನದಿಂದ ಜೋಯ್ಡಾದ ಸಮಸ್ಯೆ ಪೂರ್ತಿ ಪರಿಹಾರ ಆಗದಿದ್ದರೂ ರಾಜ್ಯದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಬಹುಶಃ ಆ ವರ್ಷ ಆತ ಸಮ್ಮೇಳನಾಧ್ಯಕ್ಷ ಆಗದಿದ್ದರೆ ಎಂದಿಗೂ ಆಗಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಆತನ ಅನಾರೋಗ್ಯ ಮರುವರ್ಷವೇ ಉಲ್ಬಣಿಸಿತು.

‍ಲೇಖಕರು avadhi

5 May, 2019

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. Sumithra Lc

    ಸಮ್ಮೇಳನದ ಸಮಯದಲ್ಲಿ ಜಗಲ್ಬೆಟ್ ನಲ್ಲಿ ಮನೋಹರ ಮಳಗಾಂವಕರ್ ಇದ್ದರಲ್ವ? ನೀವು ಅವರನ್ನು ಭೇಟಿ ಯಾಗಿದ್ದಿರಾ?

  2. ವಿಠ್ಠಲ

    ಒಮ್ಮೆ ಹೋಗಿದ್ದೆ ಮೇಡಂ. ಭೇಟಿಗೆ ಅವಕಾಶ ಕೊಟ್ಟಿಲ್ಲ. ಆಗಲೇ ಅವರಿಗೆ ವಯಸ್ಸಾಗಿತ್ತು. ತುಂಬಾ ದೊಡ್ಡ ಲೇಖಕರಾಗಿದ್ದರಿಂದ ಭೇಟಿ ಆಗಲು ಮುಜುಗರ ಆಗ್ತಿತ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading