ಜೋಯಿಸ ಅನಂತನ ಅವಾಂತರಗಳು ಒಂದೆರಡಲ್ಲ..!

ಮರುಳೋ..? ಜ್ಞಾನಿಯೋ..?

ಟಿ.ಎಸ್.‌ ಶ್ರವಣ ಕುಮಾರಿ

ನಮ್ಮೂರು ಶಿವಮೊಗ್ಗೆಯಲ್ಲಿ ಲಿಂಗಾಜೋಯಿಸರೆಂಬ ಪ್ರಖ್ಯಾತ ಜ್ಯೋತಿಷ್ಯಾಸ್ತ್ರಜ್ಞರೊಬ್ಬರಿದ್ದರು. ಬರೀ ನಮ್ಮ ಊರಿನವರಲ್ಲದೆ ಸುತ್ತಮುತ್ತಲ ಹಳ್ಳಿಗಳು, ಊರುಗಳಿಂದಲೂ ಶಾಸ್ತ್ರ ಕೇಳಲು ಜಾತಕ ಬರೆಸಿಕೊಳ್ಳಲು, ಮುಹೂರ್ತ ನಿಶ್ಚಯಿಸಲು ಅವರಲ್ಲಿಗೆ ಬರುತ್ತಿದ್ದರು. ಪ್ರಶ್ನೆಗಳಿಗೆ ಉತ್ತರ ಕೊಡುವುದರಲ್ಲೂ ಒಳ್ಳೆಯ ಪಾಂಡಿತ್ಯವಿತ್ತೆಂದು ಕೇಳಿದ್ದೇನೆ.

ನನ್ನ ಜಾತಕದ ಮೂಲಪ್ರತಿಯಲ್ಲೂ ಅವರದೇ ಸಹಿ ಇದೆ. ನಾನು ಚಿಕ್ಕವಳಾಗಿದ್ದಾಗಲೇ ಜೋಯಿಸರು ತೀರಿಕೊಂಡಿದ್ದರಿಂದ ಅವರನ್ನು ನೋಡಿದ ನೆನಪಿಲ್ಲ; ಕೇಳಿರುವುದಷ್ಟೇ. ಅವರು ಬರೆದದ್ದೆಂದರೆ ಪರಿಪೂರ್ಣ, ನಿಖರ ಎನ್ನುವಂತ ಒಂದು ನಂಬಿಕೆಯನ್ನು, ವಿಶ್ವಾಸವನ್ನೂ ಗಳಿಸಿ ಆ ಕಾಲಕ್ಕೆ ಊರಿನ ಮುಖ್ಯ ವ್ಯಕ್ತಿಗಳಲ್ಲಿ ಅವರೂ ಒಬ್ಬರಾಗಿದ್ದರು.

ನಾನೀಗ ಹೇಳ ಹೊರಟಿರುವುದು ಅವರ ಮಗ ಜ್ಯೋತಿಷಿ ಅನಂತ ಜೋಯಿಸನ ಬಗೆಗೆ. ಅಷ್ಟೊಂದು ಆದರವನ್ನು ಗಳಿಸಿದ್ದ ಲಿಂಗಾಜೋಯಿಸರ ಈ ಮಗನನ್ನು ಕಂಡರೆ ಯಾಕೋ ಏನೋ ಯಾರಿಗೂ ಹಿತವಾಗುತ್ತಿರಲಿಲ್ಲ; ಎಲ್ಲರೂ ಅವನಿಂದ ತಪ್ಪಿಸಿಕೊಳ್ಳಲೇ ನೋಡುತ್ತಿದ್ದರು. ಏಕೆಂದೂ ಹೇಳಿಬಿಡುತ್ತೇನೆ ಕೇಳಿ… ಸುಮಾರು ಐದಡಿಯ ಮೇಲೆ ಒಂದೆರಡು ಅಂಗಲ ಎತ್ತರದವನೇನೋ ತಿಂಗಳಿಗೊಮ್ಮೆಯಾದರೂ ದಾಡಿ ಮಾಡಿಕೊಳ್ಳುತ್ತಿದ್ದನೋ ಇಲ್ಲವೋ. ಸದಾ ಅರೆ ನೆರೆತ ಕುರುಚಲು ಗಡ್ಡ, ಕರಿ ಬಿಳಿ ಎಳ್ಳು ಬೆರೆಸಿ ಚೆಲ್ಲಿದಂತಿದ್ದ ತಲೆಯ ಹಿಂದೊಂದು ಸಣ್ಣ ಜುಟ್ಟು, ಪೆದ್ದು ಕಳೆ ಎದ್ದು ಕಾಣುತ್ತಿದ್ದ ಮುಖಾರವಿಂದ.

ಉಡುತ್ತಿದ್ದುದು ಒಗೆದು ಎಷ್ಟು ದಿನವಾಗಿದೆಯೋ ಎನ್ನುವಂತ ಮಾಸಲು ಬಣ್ಣದ ಗಬ್ಬು ನಾತ ಬೀರುತ್ತಿದ್ದ ಕೊಳಕು ಪಂಚೆ, ಅದಕ್ಕೆ ಸರಿಜೋಡಿಯಾದ ಶಲ್ಯ. ಸ್ನಾನವಿರಲಿ, ಹಲ್ಲನ್ನಾದರೂ ಉಜ್ಜಿದ್ದಾನೋ ಇಲ್ಲವೋ ಅನ್ನುವ ಹಾಗೆ ತನ್ನ ಸುತ್ತ ಒಂದು ದುರ್ಗಂಧ ವಲಯವನ್ನು ನಿರ್ಮಿಸಿಕೊಂಡಿರುತ್ತಿದ್ದ. ಯಾವ ಪೂಜೆ-ಪುನಸ್ಕಾರ, ಸಮಾರಂಭಗಳಿಗೂ ಆಹ್ವಾನವೇನೂ ಬೇಕಿರಲಿಲ್ಲ; ತಿಳಿದರೆ ಸಾಕು ಹಾಜರಾಗಿಬಿಟ್ಟು ಮಿಕ್ಕ ಪುರೋಹಿತರಿಗೆ ಧಾರಾಳವಾಗಿ ಅಸಮಾಧಾನವನ್ನು, ಕಿರಿಕಿರಿಯನ್ನೂ ಉಂಟುಮಾಡುತ್ತಿದ್ದ.

ಸ್ನಾನವಾದರೂ ಮಾಡಿದೀಯೇನೋ ಅನಂತ, ಪೂಜೆಗೆ ಬಂದಿದೀಯಲ್ಲ ಎಂದು ಅವರು ಕೇಳಿದರೆ ಮಾಡಿದೀನಲ್ಲ ಬೆಳಗ್ಗೇನೆ ಎನ್ನುತ್ತಿದ್ದ. ಎಂದಿನ ಬೆಳಗ್ಗೆಯೋ ತಿಳಿಯದು! ಈ ಅನುಮಾನವೇಕೆ ಬರುತ್ತಿತ್ತೆಂದರೆ ಅವನದೇ ಒಂದು ಪ್ರತ್ಯೇಕ ಗಂಧದೊಂದಿಗೆ ಬ್ರಾಹ್ಮಣ ಪುರೋಹಿತರಲ್ಲಿ, ಜೋಯಿಸರಲ್ಲಿ ಸ್ನಾನವಾದ ಮೇಲೆ ಢಾಳಾಗಿ ಕಾಣುತ್ತಿದ್ದ ತ್ರಿಪುಂಡ್ರ ವಿಭೂತಿ ಇವನ ಮಸ್ತಕದ ಮೇಲೆ ಸದಾ ರಾರಾಜಿಸುತ್ತಿರಲಿಲ್ಲ; ಆಗೀಗ ಕುಂಕುಮ ಇಟ್ಟುಕೊಂಡಿರುತ್ತಿದ್ದ ಅಷ್ಟೇ.

ವಿಭೂತಿಯನ್ನೇ ಇಟ್ಟುಕೊಂಡಿಲ್ಲವಲ್ಲೋ ಎಂದರೆ ಈಗೇನಾಯ್ತು ಕೊಡಿ, ಹಾಗೇ ಕುಂಕುಮಾನೂ ಕೊಡಿ ಇಟ್ಕೋತೀನಿ ಎಂದು ಅವರಿಂದಲೇ ಪಡೆದು ಬಳಿದುಕೊಳ್ಳುತ್ತಿದ್ದ. ಒಟ್ಟಿನಲ್ಲಿ ಜೋಭದ್ರ ಕಳೆಯ ಪರಮಾವಧಿಯಂತಿರುತ್ತಿದ್ದ. ಸದಾ ಏನೋ ಬಹಳ ಕೆಲಸವಿರುವವನಂತೆ ಊರ ತುಂಬಾ ಓಡಾಡುತ್ತಿದ್ದ. ತನ್ನೊಳಗೇ ಏನನ್ನೋ ಗುಣುಗಣಿಸಿಕೊಳ್ಳುತ್ತಿರುವುದು, ಹಾಗೇ ಆಗಾಗ ಗೊತ್ತಾಯ್ತು ಹೆಂಗಿದೆ ಎನ್ನುವುದು ಇವನ ಅಭ್ಯಾಸ. ಯಾವುದು? ಏನು ಗೊತ್ತಾಯ್ತು? ಎನ್ನುವುದು ಅವನೊಬ್ಬನಿಗೇ ಗೊತ್ತು.

ದಾರಿಯ ಮೇಲೆ ಓಡಾಡುತ್ತಿರುವಾಗಲೂ ಎತ್ತಲೋ ಏನನ್ನೋ ಅರಸುತ್ತಿರುವವನಂತೆ ನೋಡುತ್ತಿರುವುದು, ಒಂದಷ್ಟು ದೂರ ಸಾಗಿದೊಡನೆ ಸುಮ್ಮನೇ ನಿಂತು, ನಿಂತಲ್ಲೇ ಒಂದು ಸುತ್ತು ತಿರುಗುವುದು, ಯಾರೂ ಎದುರಿಗೆ ಇಲ್ಲದಿದ್ದರೂ ಕೈ ಮುಗಿಯುವುದು, ತಲೆಯೆತ್ತಿ ಏನನ್ನೋ ಹುಡುಕುವಂತೆ ಆಕಾಶವನ್ನೇ ನೋಡುತ್ತಾ ನಿಲ್ಲುವುದು ಇವು ಅವನಿಗೆ ಮರುಳನೆಂಬ ಬಿರುದನ್ನು ಧಾರಾಳವಾಗಿ ದಯಪಾಲಿಸಿದ್ದವು. ನಾನು ಕಂಡಂತೆ ಯಾರೂ (ನನ್ನನ್ನೂ ಸೇರಿ) ಅವನನ್ನು ಬಹುವಚನದಲ್ಲಿ ಮಾತಾಡಿಸಿದ್ದನ್ನು ಕಾಣೆ.

ಯಾರೋ ಪರಿಚಿತರು ಎದುರಿಗೆ ಸಿಕ್ಕರೆ ತಾನೇ ಮಾತಿಗೆಳೆದು ತನಗೆ ತಿಳಿದ ಅವರ ಮನೆಯ ವಿಷಯವನ್ನೆಲ್ಲಾ ಕೆದಕುತ್ತಿದ್ದ. ಗೊತ್ತಾಯ್ತು ಹೆಂಗಿದೆ.. ನೀವು ಇದುವರೆಗೂ ನಂಗೆ ಒಂದು ಪಂಚೇನೂ ಕೊಡಿಸಿಲ್ಲ; ಯಾವಾಗ ಕೊಡಿಸ್ತೀರಿ ಎಂದು ದುಂಬಾಲು ಬೀಳುತ್ತಿದ್ದ. ಹೋಗಲಿ, ಯಾರಾದರೂ ಕೊಡಿಸಿದ್ದನ್ನು ಉಡುತ್ತಿದ್ದನೇ? ಪೆಟ್ಟಿಗೆಯ ತುಂಬಾ ಹೊಸ ಪಂಚೆ, ಶಲ್ಯಗಳನ್ನು ನಿಧಿಯ ಹಾಗೆ ತುಂಬಿಟ್ಟುಕೊಂಡಿದ್ದ. ಅಷ್ಟೊಂದಿದೆಯಲ್ಲಾ ಎಂದು ಅವರಮ್ಮ ಯಾರಿಗಾದರೂ ಕೊಡಲು ಹೋದರೆ ಕೋಲನ್ನು ಹಿಡಿದು ಅಟ್ಟಿಸಿಕೊಂಡು ಹೋಗುತ್ತಿದ್ದನಂತೆ.

ಹೀಗೇ ಇನ್ಯಾರೋ ಪರಿಚಿತರು ಸಿಕ್ಕರೆ ಗೊತ್ತಾಯ್ತು ಹೆಂಗಿದೆ ಈ ಸಲ ಸಂಕಷ್ಟ ಚೌತಿ ದಿನ ನಿಮ್ಮನೇಗೆ ಬರ್ತೀನಿ, ನಿಮ್ಮನೇನಲ್ಲಿ ಮುಂದಿನವಾರ ಏನೋ ಹೋಮ ಇಟ್ಟುಕೊಂಡಿದೀರಂತೆ. ಗೊತ್ತಾಯ್ತು ಹೆಂಗಿದೆ, ಅವತ್ತು ಬರ್ತೀನಿ ಎಂದು ತನಗೆ ತಾನೇ ಆಹ್ವಾನ ಕೊಟ್ಟುಕೊಂಡು ತಪ್ಪದೇ ಆದಿನ ಬರುತ್ತಿದ್ದ. ಇಂಥ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅವನು ರಸ್ತೆಯ ಈ ಬದಿಯಲ್ಲಿ ಬರುತ್ತಿದ್ದರೆ, ಪರಿಚಿತರು ಇನ್ನೊಂದು ಬದಿಗೆ ತಮ್ಮ ನಡಿಗೆಯನ್ನು ಬದಲಾಯಿಸಿಕೊಳ್ಳುತ್ತಿದ್ದರು; ಇಲ್ಲವೇ ಯಾವುದಾದರೂ ಪಕ್ಕದ ರಸ್ತೆಗೆ ತಿರುಗಿಬಿಡುತ್ತಿದ್ದರು.

ಹೀಗೆ ಎಲ್ಲೆಲ್ಲೂ ತಿರುಗುತ್ತಿದ್ದ ಅನಂತ ಒಂದು ಸಂಜೆ ನಾವು ಓದುತ್ತಿದ್ದ ದೇಶೀಯ ವಿದ್ಯಾ ಶಾಲೆಯ ಮುಂದಿನ ರಸ್ತೆಯಲ್ಲಿ ನಡುಮಧ್ಯ ನಿಂತುಕೊಂಡು ಕಣ್ಣಿನ ಮೇಲೆ ಕೈ ಅಡ್ಡ ಇಟ್ಟುಕೊಂಡು ಯಾರನ್ನೋ ಹುಡುಕುವವನಂತೆ ಗಂಟೆಗಟ್ಟಲೇ ಅಕ್ಕ-ಪಕ್ಕ ಮೇಲೆ ಕೆಳಗೆ ನೋಡುತ್ತಾ ಆಗಾಗ ನಿಂತಲ್ಲೇ ಒಂದು ಸುತ್ತು ತಿರುಗುತ್ತಾ ನಿಂತಿದ್ದ. ಅವನ ಮಂಗನಾಟವನ್ನು ನೋಡುತ್ತಿದ್ದ ಎಲ್ಲ ಮಕ್ಕಳೂ ಬಿದ್ದು ಬಿದ್ದು ನಗುತ್ತಿದ್ದರು.

ಸ್ವಲ್ಪ ಹೊತ್ತಿನಲ್ಲೇ ಮನೆಗೆ ಮರಳುವ ಗಂಟೆಯ ಸದ್ದಾಯಿತು. ಹೋಗುವ ಹಾದಿಯಲ್ಲಿ ಎದುರು ಸಿಕ್ಕವನನ್ನು ಏನು ಅನಂತ ಇಲ್ಲಿ ಯಾರನ್ನ ಹುಡುಕ್ತಿದೀಯ ಎಂದು ಕೇಳಿದೆ. ನೀನಾ.. ಗೊತ್ತಾಯ್ತು ಹೆಂಗಿದೆ. ನಮ್ಮಣ್ಣನ ಮಗಳು ಪದ್ಮಾಂತಾನೋ, ಶಶೀಂತಾನೋ ಸ್ಕೂಲಲ್ಲಿ ಓದ್ತಿದಾಳೆ ಅಂತ ಗೊತ್ತಾಯ್ತು. ಇದೇ ಸ್ಕೂಲೇನೋ, ಐದ್ನೇ ಕ್ಲಾಸೋ, ಆರನೇ ಕ್ಲಾಸೋ ಇರ್ಬೇಕೇನೋ, ಅವ್ಳನ್ನ ಮಾತಾಡ್ಸೋಣ ಅಂತ ಹುಡುಕ್ತಿದೀನಿ. ಅವ್ಳು ನಿಂಗೊತ್ತಾ ಅಂದ.

ಯಾವ ಸ್ಕೂಲು, ಯಾವ ಕ್ಲಾಸು, ಕಡೆಗೆ ಅವಳ ಹೆಸರೂ ಸರಿಯಾಗಿ ಗೊತ್ತಿಲ್ಲ; ಆದರೂ ಸಾಸಿವೆಯಲ್ಲಿ ರಾಗಿ ಹುಡುಕುವಂತೆ ಹುಡುಕ್ತಿದಾನಲ್ಲ ಎಂದುಕೊಂಡು ಸ್ಕೂಲು ಬಿಟ್ಟು ಎಲ್ರೂ ಮನೆಗೆ ಹೋಗಾಯ್ತು. ನೀನು ನಿಮ್ಮಣ್ಣನ ಮನೆಗೇ ಹೋಗಿ ಮಾತಾಡ್ಸು ಎಂದು ಹೊರಟೆ. ನಾನು ಎಷ್ಟೋ ದೂರ ಹೋಗಿ ಹಿಂತಿರುಗಿ ನೋಡಿದಾಗಲೂ ಇನ್ನೂ ಆ ಖಾಲಿ ಕಟ್ಟಡದ ಮುಂದೆ ನಿಂತು ಹುಡುಕುತ್ತಲೇ ಇದ್ದ…

ಪ್ರತಿ ತಿಂಗಳೂ ಸಂಕಷ್ಟ ಚತುರ್ಥಿಯ ದಿನ ತಪ್ಪದೇ ನಮ್ಮ ಮನೆಗೆ ಬರುತ್ತಿದ್ದ. ಅವನು ಬಂದರೆ ನಮಗೆಲ್ಲಾ ಹುಡುಗಾಟ. ನಮ್ಮ ಕೈ ತೋರಿಸಿ ನಾನು ಈ ಸಲ ಪಾಸಾಗ್ತೀನಾ ಅನಂತ ಎಂದು ಪ್ರತಿಬಾರಿಯೂ ಕೇಳುವುದು. ಎಲ್ಲಿ ಕೈ ಬೆಳಕಿಗೆ ಹಿಡಿ; ಗೊತ್ತಾಯ್ತು ಹೆಂಗಿದೆ. ನಿಂದ್ಯಾವ ನಕ್ಷತ್ರ; ಗೊತ್ತಾಯ್ತು ಹೆಂಗಿದೆ. ಕೈಯಿನ ರೇಖೆಗಳ ಮೇಲೆ ಒಂದೆರಡು ನಿಮಿಷ ಕಣ್ಣಾಡಿಸಿ ಏನೋ ಮಣಮಣ ಎಂದುಕೊಂಡು ಏನೋ ಯೋಚನೆ ಮಾಡುತ್ತಿರುವವನಂತೆ ಮೇಲೆ ಒಂದೆರಡು ನಿಮಿಷ ನೋಡಿ, ಹ್ಞಾಂ. ಗೊತ್ತಾಯ್ತು ಹೆಂಗಿದೆ.

ನೀನು ವಿದ್ಯಾವಂತೆ ಆದರೆ ಹಟಮಾರಿ; ಅಮ್ಮನ ಹತ್ರ ಸದಾ ಬೈಸ್ಕೋತಿರ್ತೀಯ. ಈ ಸಲ ಫಸ್ಟ್ ಕ್ಲಾಸಲ್ಲಿ ಪಾಸಾಗ್ತೀಯ. ನೀನು ಸಂಗೀತಾನೋ, ಡ್ಯಾನ್ಸೋ ಕಲೀತಿದೀಯ ಅಲ್ವಾ ಗೊತ್ತಾಯ್ತು ಹೆಂಗಿದೆ.. ಹೀಗೇ ತೋರಿಸಿದವರೆಲ್ಲರ ಕೈನೋಡುತ್ತಾ ನಂಬುವಂತದೊಂದನ್ನು ಹೇಳುತ್ತಾ ಅವನೂ, ನಾವು ಒಂದಷ್ಟು ಟೈಂಪಾಸ್ ಮಾಡುತ್ತಿದ್ದೆವು. ಅಷ್ಟು ಹೊತ್ತಿಗೆ ಮಂಗಳಾರತಿಯಾಗುತ್ತಿತ್ತು.

ಊಟಕ್ಕೆ ಎಲೆ ಹಾಕಿದ ತಕ್ಷಣ ಮೊದಲನೇ ಎಲೆಯನ್ನು ಹಿಡಿದುಕೊಂಡು ಕುಳಿತುಬಿಡುತ್ತಿದ್ದ. ಬಂದಿದ್ದ ಪುರೋಹಿತರಿಗೋ ಕಿರಿಕಿರಿ. ಎಲೆಯ ಮೇಲೆ ಎಲ್ಲವನ್ನೂ ಬಡಿಸಿ ಪರ್ಶ್ಯಂಚನೆ ಮಾಡಿದ ತಕ್ಷಣ ಎಲೆಯ ಮೇಲ್ಭಾಗದ ಎಡ ತುದಿಯ ಉಪ್ಪು ಕೋಸಂಬರಿಯಿಂದ ಹಿಡಿದು ಕೆಳಭಾಗದ ಬಲತುದಿಯ ಪಾಯಸದವರೆಗೂ ಎಲ್ಲವನ್ನೂ ಒಟ್ಟಿಗೆ ಕಲೆಸಿಕೊಂಡು ಬಿಡುತ್ತಿದ್ದುದಲ್ಲದೆ ಏನೇನನ್ನು ಬಡಿಸಲು ಬಂದರೂ ಬಿಡದೆ ಪ್ರತಿಯೊಂದನ್ನೂ ಆ ಗುಡ್ಡೆಗೇ ಹಾಕಿಸಿಕೊಂಡು ಕಲೆಸಿ ಅಸಹ್ಯವಾಗಿ ಶಬ್ಧ ಮಾಡುತ್ತಾ ಎಂಜಲು ಹಾರಿಸುತ್ತಾ ಬಾಯಿಸುತ್ತಾ ಇದ್ದ ಕುರುಚಲು ದಾಡಿಗೆ ಮುಸುರೆ ಅಂಟಿಕೊಳ್ಳುವಂತೆ ತಿನ್ನುತ್ತಿದ್ದ.

ಅವನ ಈ ವಿಚಿತ್ರವಾದ ತಿನ್ನುವ ಪರಿ ಬಡಿಸುವವರಿಗೂ, ಪಕ್ಕದಲ್ಲಿ ಕುಳಿತು ಊಟಮಾಡುವವರಿಗೂ ಕಿರಿಕಿರಿಯಾಗುತ್ತಿದ್ದರೂ, ಅದೊಂದೂ ಅರ್ಥವಾಗದೇ ತನ್ನದೇ ಸಂತೋಷದಲ್ಲಿ ತಿನ್ನುವುದರಲ್ಲಿ ಮಗ್ನನಾಗಿರುತ್ತಾ ಮಧ್ಯೆಮಧ್ಯೆ ಏನಾದರೊಂದು ಅಸಂಬದ್ಧ ಪ್ರಲಾಪವನ್ನು ಮಾಡಿ ಬೇರೆಯವರು ಅವನನ್ನು ಕೀಟಲೆ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದ್ದ. ಈ ಅಹಿತ ಸನ್ನಿವೇಶವನ್ನು ತಪ್ಪಿಸಲು ಒಮ್ಮೆ ದೇವರ ಮನೆಯ ಪಕ್ಕದಲ್ಲಿ ಅವನೊಬ್ಬನಿಗೇ ಎಲೆಹಾಕಿ ಮಿಕ್ಕವರಿಗೆ ಹಾಲಿನಲ್ಲಿ ಎಲೆಹಾಕಿದಾಗ ದೊಡ್ಡ ರಂಪಾಟ ಮಾಡಿ ತನ್ನ ಮೊದಲಿನ ಸ್ಥಾನವನ್ನೇ ಭದ್ರಪಡಿಸಿಕೊಂಡು ವಿಜಯದ ಪತಾಕೆ ಹಾರಿಸಿದ್ದ.

ಊಟವಾದ ಮೇಲೆ ಅಡಿಕೆಲೆ ಹಾಕಿಕೊಳ್ಳುವುದಾದರೂ ಅಷ್ಟೆ ಎಲೆಯ ಜೊತೆಗೆ ಅಡಿಕೆ, ಅಡಿಕೆಯ ಜೊತೆಗೆ ಎಲೆ ಎನ್ನುವಂತೆ ಅರ್ಧ ತಟ್ಟೆ ಮೇದು, ಎಲ್ಲರೂ ಮುಗಿಸುವ ತನಕ ಕಾದಿದ್ದು ಮಿಕ್ಕಿದ್ದ ಎಲೆಯನ್ನೂ, ಅಡಿಕೆಯನ್ನೂ ಹಾಗೆಯೇ ಬಡಿಸುವಾಗ ಕೇಳಿ ಪಡೆದಿದ್ದ ಒಂದೆರಡು ಕಡುಬುಗಳನ್ನೂ ತನ್ನ ಗಬ್ಬು ಶಲ್ಯದಲ್ಲಿ ಕಟ್ಟಿಕೊಂಡು ಅವನಾಗೇ ಇನ್ನು ಬರ್ತೀನಿ ಎಂದು ತಕ್ಷಣ ಹೊರಟರೆ ನಮ್ಮಮ್ಮ ಬಿಡುಗಡೆಯ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು.

ಇಲ್ಲವಾದರೆ ಹೊರಡಿನ್ನು ಹೊತ್ತಾಯ್ತು ಎಂದು ನಮ್ಮಣ್ಣ ರಸ್ತೆಯ ಮೂಲೆಯವರೆಗೂ ಬಿಟ್ಟು ಬರುವವರೆಗೂ ಅವನಿಗೆ ಹೊರಡುವ ಬುದ್ಧಿಯೇ ಬರುತ್ತಿರಲಿಲ್ಲ.

ಒಮ್ಮೆ ಹೀಗೇ ನಮ್ಮಣ್ಣ ಅವನನ್ನು ಒಂದರ್ಧ ದಾರಿಯವರೆಗೆ ಬಿಟ್ಟು ಬಂದು ಮಲಗಲು ಹಾಸಿಗೆಯನ್ನು ಹಾಕುತ್ತಿದ್ದಾಗ ಹಿಂದೆಯೇ ಮಳೆ ಬರೋ ಹಾಗಿದೆ. ಕಡುಬು ನೆಂದು ಹೋಗತ್ತೆ. ಒಂದು ಕೊಡೆ ಕೊಡು ಎಂದು ಮತ್ತೆ ಪ್ರತ್ಯಕ್ಷನಾಗಿದ್ದ. ತಲೆ ಚಚ್ಚಿಕೊಂಡು ಕೊಡೆಯನ್ನು ಕೊಟ್ಟು ಮತ್ತೆ ಅಷ್ಟು ದೂರ ಬಿಟ್ಟು ಬರಬೇಕಾಯಿತು.

ಇಂತಹ ಅನಂತನಲ್ಲಿ ಭವಿಷ್ಯದ ಬಗೆಗೆ ಯಾರಾದರೂ ಕೇಳಿದ ಪ್ರಶ್ನೆಗಳಿಗೆ ನಿಖರವಾದ ಉತ್ತರ ಕೊಡುವ ಒಂದು ಅದ್ಭುತವಾದ ಶಕ್ತಿಯಿತ್ತು. ಬರಿಯ ಹಸ್ತ ರೇಖೆಯೊಂದೇ ಅಲ್ಲ; ಪ್ರಶ್ನೆ ಇರುವವರು ನಾನು ಏನೋ ಪ್ರಶ್ನೆ ಕೇಳಬೇಕು ಅಂತಿದೀನಿ.

ಏನಾಗತ್ತೆ ಹೇಳು ಎಂದು ಕೇಳಿದರೆ ಗೊತ್ತಾಯ್ತು ಹೆಂಗಿದೆ ಎಂದು ಮೌನವಾಗಿ ಒಂದೈದು ನಿಮಿಷ ಯೋಚನೆ ಮಾಡುತ್ತಾ ಬೆರಳುಗಳನ್ನೇನೋ ಎಣಿಸಿಕೊಳ್ಳುತ್ತಾ ಮೇಲೊಂದೆರಡು ಕ್ಷಣ ನೋಡಿ ಗೊತ್ತಾಯ್ತು ಹೆಂಗಿದೆ ಎಂದು ತನ್ಮಯನಾಗಿ ಹೇಳಲು ಶುರು ಮಾಡಿದನೆಂದರೆ ಅವರ ಪ್ರಶ್ನೆಯೇನೂ ಎನ್ನುವುದನ್ನೂ ಹೇಳಿ ಅದರ ಸಂಪೂರ್ಣ ಚರಿತ್ರೆಯನ್ನು ತೆರೆದ ಪುಸ್ತಕವನ್ನು ಓದುತ್ತಿರುವಂತೆ ಹೇಳುತ್ತಿದ್ದ.

ಎಷ್ಟೋ ಬಾರಿ ಯಾರನ್ನಾದರೂ ಕಂಡರೆ ತನಗೇ ಹೇಳಬೇಕೆನ್ನಿಸಿದರೂ ಅವರ ಪ್ರಶ್ನೆಯನ್ನೂ ತಾನೇ ಹೇಳಿ ಉತ್ತರವನ್ನೂ ಹೇಳುತ್ತಿದ್ದ. ನಾನು ನೋಡಿದ ಇಂತಹ ಎಲ್ಲ ಪ್ರಸಂಗಗಳು ಅವನು ಹೇಳಿದ ಹಾಗೇ ಅಕ್ಷರಶಃ ನಿಜವಾಗಿದೆ!

ಇಂತಹ ಅನಂತ ಜೋಯಿಸನ ಬಗ್ಗೆ ಬಿಹಾರದ ಲಲ್ಲೂ ಪ್ರಸಾದ್ ಯಾದವ್ ಅವರಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ; ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ಆಗಾಗ ವಿಮಾನದಲ್ಲಿ ಇವನನ್ನು ತಮ್ಮಲ್ಲಿಗೆ ಕರೆಸಿಕೊಳ್ಳುತ್ತಿದ್ದರಂತೆ! ಈ ವಿಷಯವನ್ನು ಹೇಳಿದ ಅತ್ತಿಗೆ ಈಗಂತೂ ಅವನನ್ನ ಹಿಡಿಯೋರೇ ಇಲ್ಲ.

ಅದೆಷ್ಟೋ ರಾಜಕಾರಣಿಗಳು ಅವನ ಹಿಂದೆ ಬಿದ್ದಿದ್ದಾರೆ. ಆದರೆ ಅವನ ವೇಷ ಮಾತ್ರ ಬದಲಾಗಲಿಲ್ಲ. ಮರುಳನದು ಅದೇ ಮುಗ್ಗುಲು ಪಂಚೆ ಎಂದರು. ಮರುಳರಿಗೂ ಜ್ಞಾನಿಗಳಿಗೂ ಒಂದೇ ಗೆರೆಯ ವ್ಯತ್ಯಾಸವಂತೆ. ಈಕಡೆ ಬಿದ್ದರೆ ಮರುಳು, ಆಕಡೆ ಬಿದ್ದರೆ ಜ್ಞಾನಿ… ಇವನು ಗೆರೆಯ ಮೇಲೇ ಕೂತಿದ್ದನೇ?!

‍ಲೇಖಕರು avadhi

September 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: