ಗಾಂಧೀನಗರಕ್ಕೆ ನಮಸ್ಕಾರ
ನಾನ್ನೂರು ರುಪಾಯಿಗೆ ಕೊಂಡ ಸೆಕೆಂಡ್ ಹ್ಯಾಂಡ್ ಸೈಕಲ್ಲು ತುಳಿಯುತ್ತಾ ನಾನು ಗಾಂಧೀಬಜಾರಿನ ರಸ್ತೆಗಳಲ್ಲಿ ಠಳಾಯಿಸುತ್ತಿದ್ದ ದಿನಗಳಲ್ಲಿ ದಿನಾ ಬೆಳಗ್ಗೆ ಸಂಜೆ ಮಧ್ಯಾಹ್ನ ವೈಯೆನ್ಕೆ ಮಾತಿಗೆ ಸಿಗುತ್ತಿದ್ದರು. ನಾನು ಬರೆದ ಅಪ್ರಬುದ್ಧ ಬರಹಗಳನ್ನು ಓದಿ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಅಲ್ಲಲ್ಲಿ ಖುಷಿಕೊಡುವ ಸಾಲು ಕಾಣಿಸಿದರೆ ಮೆಚ್ಚಿಕೊಳ್ಳುತ್ತಿದ್ದರು. ಶಂಕರಪುರದ ಬ್ರಾಹ್ಮಣರ ಕಾಫಿ ಬಾರ್, ಗಾಂದೀಬಜಾರಿನ ಎಸ್ ಎಲ್ ವಿ, ಡಿವಿಜಿ ರಸ್ತೆಯ ಮಹಾಲಕ್ಷ್ಮಿ ಟಿಫಿನ್ ರೂಮು, ಅದರ ಹಿಂಭಾಗದಲ್ಲಿರುವ ಅವರ ಸೋವಿಯತ್ ರಿಟರ್ನ್ಡ್ ಗೆಳೆಯ ಗೋಪಾಲಕೃಷ್ಣಯ್ಯನವರ ಮನೆ, ಹೋಮಿಯೋಪತಿ ರಾಮದಾಸು ಕ್ಲಿನಿಕ್ಕು- ಮುಂತಾದ ಜಾಗಗಳಿಗೆ ಕರೆದೊಯ್ದು ಇಡ್ಲಿ, ಮಸಾಲೆದೋಸೆ, ಉಪ್ಪಿಟ್ಟಿನ ಜೊತೆಗೇ ವಿಶ್ವಸಾಹಿತ್ಯವನ್ನೂ ಉಣಿಸುತ್ತಿದ್ದರು. ವಿದ್ಯಾರ್ಥಿ ಭವನಕ್ಕೆ ಹೋಗಿ ಮಸಾಲೆದೋಸೆ ಆರ್ಡರ್ ಮಾಡಿದಷ್ಟೇ ಸಲೀಸಾಗಿ, `ನಾಳೆ ಒಂದು ಕತೆ, ಕತೆ ಬೇಕು.. ನಾಳೆ.. ಸುಮ್ನೆ ಬರ್ಕೊಂಡು ಬರ್ಬೇಕು ಅಷ್ಟೇ.. ಘಾ.. ಘಾ. ಗೋ… ರೈಟ್.. ಸೈಕಲ್ ಮ್ಯಾನ್’ ಎಂದು ಆಜ್ಞಾಪಿಸಿ ಬಸ್ಸು ಹತ್ತಿ ಕನ್ನಡಪ್ರಭಕ್ಕೆ ಹೊರಟುಬಿಡುತ್ತಿದ್ದರು.
ನಾನು ಮನೆಗೆ ಬಂದು ಕತೆ ಬರೆದು ಅವರಿಗೆ ತಲುಪಿಸುತ್ತಿದ್ದೆ. ಅದು ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿತ್ತು. ಹೀಗೊಂದು ದಿನ ಸೈಕಲ್ಲಿನಲ್ಲಿ ಹೋಗುತ್ತಿರಬೇಕಾದರೆ ಮಿನರ್ವ ಸರ್ಕಲ್ಲಿನಲ್ಲಿರುವ ತೆಂಗಿನಮರದಿಂದ ಒಣಗಿದ ತೆಂಗಿನಕಾಯಿಯೊಂದು ನನ್ನ ಬೆನ್ನಿಗೆ ಬಿದ್ದು ನಾನು ಒಂದು ವಾರ ಹಾಸಿಗೆ ಹಿಡಿಯಬೇಕಾಯಿತು. ವೈಯೆನ್ಕೆ ಸುದ್ದಿ ಗೊತ್ತಾದ ತಕ್ಷಣ ಮನೆಗೆ ಬಂದು ಜ್ಯೋತಿಯ ಹತ್ತಿರ `ಗುಡ್ ಗುಡ್… ತೆಂಗಿನಕಾಯಿ ಬಿದ್ರೆ ಒಳ್ಳೇದಾಗುತ್ತೆ. ನೆತ್ತಿಗೆ ಬಿದ್ರೆ ಇನ್ನೂ ಚೆನ್ನಾಗಿರೋದು.. ಘಾ, ಮಲ್ಕೊಂಡು ಟೈಮ್ ವೇಸ್ಟ್ ಮಾಡಬೇಡ,… ಕಾದಂಬರಿ ಬರಿ. ದೀಪಾವಳಿಗೆ… ಸ್ಪೆಷಲ್.. ‘ ಎಂದು ಹೇಳಿ ನಾನು ಏನಾದರೂ ಹೇಳುವುದಕ್ಕೆ ಮೊದಲೇ ಹೊರಟುಬಿಟ್ಟರು. ನಾನು ಅದೂ ತಮಾಷೆ ಅಂದುಕೊಂಡು ಸುಮ್ಮನಿದ್ದೆ.. ಮಾರನೇ ದಿನ ಬೆಳಗ್ಗೆ ಕನ್ನಡಪ್ರಭದ ಹುಡುಗನೊಬ್ಬ ಮನೆ ಮುಂದೆ ಹಾಜರಾದ. ಕಾದಂಬರಿ ಕೊಡಬೇಕಂತೆ ಅಂದ. ನಾನು ಗಾಬರಿಬಿದ್ದುಹೋದೆ.
ಆವತ್ತು ಸಂಜೆ ನೋಯುವ ಬೆನ್ನು ಹಿಡಿದುಕೊಂಡು ವೈಯೆನ್ಕೆ ಮನೆಗೆ ಹೋಗಿ ಕಾದಂಬರಿ ಬರೆಯಲೇ ಬೇಕಾ ಅಂತ ಕೇಳಿದೆ. ಅವರು ಸಿಟ್ಟು ಹತ್ತಿ ಬರೀಬೇಕು ಅಂದ ಮೇಲೆ ಬರೀಬೇಕು. ಅನೌನ್ಸ್ ಮಾಡಿಸಿದ್ದೀನಿ
ಅಂದುಬಿಟ್ಟರು. ಆಗ ನನ್ನ ಮನಸ್ಸಿನಲ್ಲಿದ್ದ ಕಥಾ ವಸ್ತುವೊಂದನ್ನು ಅವರಿಗೆ ವಿವರಿಸಿದೆ. `ನೋ…. ನೋ… ಅದೆಲ್ಲ ಆಗಲ್ಲ. ಮಜಾ… ಮಜಾ ಬೇಕು.. ಲೈಕ್ ಫಾಸ್ಟ್ ಗರ್ಲ್ಸ್, ಫಾಸ್ಟ್ ಕಾರ್ಸ್, ಫಾಸ್ಟ್ ಫಿಲ್ಮ್ಸ್…’ ಎಂದು ಹೇಳಿಬಿಟ್ಟರು.
ದೀಪಾವಳಿಗಿದ್ದದ್ದು ಒಂಬತ್ತು ದಿನ. ದೀಪಾವಳಿಗಿಂತ ಮೂರು ದಿನ ಮೊದಲೇ ವಿಶೇಷಾಂಕ ಮಾರುಕಟ್ಟೆಯಲ್ಲಿರಬೇಕು ಎಂದು ಕನ್ನಪ್ರಭ ನಿರ್ಧರಿಸಿತ್ತು. ಮುಂದಿನ ಐದು ದಿನಗಳಲ್ಲಿ ಹಗಲೂ ರಾತ್ರಿ ಕುಳಿತು ಬರೆದದ್ದನ್ನು ಕಂತುಕಂತಾಗಿ ಕನ್ನಡಪ್ರಭಕ್ಕೆ ತಲುಪಿಸುತ್ತಿದ್ದೆ. ಈ ಮಧ್ಯೆ ತಡವಾಗುತ್ತಿದೆ ಎಂಬ ಬೈಗಳೂ ಅವ್ಯಾಹತವಾಗಿ ಸಾಗಿತ್ತು. ಕೊನೆಗೂ ಕಾದಂಬರಿ ಮುಗಿಸಿ ಕೊಟ್ಟಾಗ ಸುಧಾಕರ ದರ್ಬೆ ಅದಕ್ಕೊಂದು ಚೆಂದದ ಚಿತ್ರ ಮಾಡಿದರು. ದೀಪಾವಳಿ ವಿಶೇಷಾಂಕದ ಜೊತೆ ಕಾದಂಬರಿ ಪ್ರಕಟವೂ ಆಯ್ತು. ವೈಯೆನ್ಕೆಗೆ ಕಾದಂಬರಿ ತುಂಬ ಇಷ್ಟವೂ ಆಗಿಬಿಟ್ಟಿತ್ತು. ಚಿತ್ರರಂಗದವರ ಬದುಕಿಗೆ ಇನ್ನೂ ಹತ್ತಿರ ಇರುವಂತೆ ಬರೆಯಬಹುದಿತ್ತು ಎಂದಾಗ ವೈಯೆನ್ಕೆ ಥಟ್ಟನೆ ಅಂದಿದ್ದರು. The only reason for the existence of a novel is that it does attempt to represent life.
ಆಗ ನನಗೆ ಬರುತ್ತಿದ್ದ ಸಂಬಳ 1200 ರುಪಾಯಿ. ಈ ಕಾದಂಬರಿಗೆ ಕನ್ನಡಪ್ರಭ ಮೂರು ಸಾವಿರ ರುಪಾಯಿ ಸಂಭಾವನೆ ಕೊಟ್ಟಿತು. ಅದು ಪ್ರಕಟವಾದ ಕೆಲವು ದಿನಗಳ ನಂತರ ನಿರ್ದೇಶಕ ಎಂಎಸ್ ರಾಜಶೇಖರ್ ನನಗೆ ಫೋನ್ ಮಾಡಿದರು. ನಾಳೆ ಭೇಟಿಯಾಗೋಣ ಎಂದರು. ಮಾರನೇ ದಿನ ಭೇಟಿಯಾದಾಗ ನಿಮ್ಮ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದಿದ್ದೇನೆ. ನಿರ್ಮಾಪಕರೂ ಒಪ್ಪಿದ್ದಾರೆ ಎಂದು ಹೇಳಿ ಹತ್ತು ಸಾವಿರ ರುಪಾಯಿ ಸಂಭಾವನೆ ಕೊಟ್ಟು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡರು. ನನ್ನ ಒಂದು ವರ್ಷದ ಸಂಬಳವನ್ನು ಒಂದು ಕಾದಂಬರಿ ದುಡಿದುಕೊಟ್ಟಿತ್ತು. ಆ ಹಣದಲ್ಲಿ ನಾವು ಎಂಟು ಮಂದಿ ವಾಸವಾಗಿದ್ದ ಸಿಂಗಲ್ ರೂಮು ಮನೆಯನ್ನು ಬಿಟ್ಟು, ಎರಡು ರೂಮುಗಳ ಮನೆಯೊಂದನ್ನು ಬಾಡಿಗೆಗೆ ಹಿಡಿಯುವಂತಾಯಿತು.
ಚಿತ್ರರಂಗದ ಕುರಿತ ಈ ಕಾದಂಬರಿಯನ್ನು ಬರೆಯುವ ಹೊತ್ತಿಗೆ ನಾನಿನ್ನೂ ಸಿನಿಮಾ ಪತ್ರಕರ್ತನಾಗಿರಲಿಲ್ಲ. ಒಂದೇ ಒಂದು ಪತ್ರಿಕಾಗೋಷ್ಠಿಗೂ ಹೋಗಿರಲಿಲ್ಲ. ಕೊಂಚ ಅತಿಶಯೋಕ್ತಿಯಾಯಿತೇನೋ ಎಂಬ ಅನುಮಾನದಲ್ಲಿದ್ದ ನನಗೆ ಚಿತ್ರೋದ್ಯಮದ ಸಮೀಪ ದರ್ಶನ ಆಗುತ್ತಿದ್ದಂತೆ ಗಾಬರಿಯಾಯಿತು. ನಾನು ಬರೆದದ್ದನ್ನೂ ಮೀರಿಸುವಂಥ ಸಂಗತಿಗಳು ದಿನನಿತ್ಯ ನಡೆಯುತ್ತಿದ್ದವು. ಅಪವಿತ್ರ ಮೈತ್ರಿ, ಸಲಿಂಗ ಕಾಮ, ನಯವಂಚನೆ, ಆತ್ಮವಂಚನೆ, ಪರನಿಂದೆ, ಆತ್ಮರತಿಗಳ ನಡುವೆಯೇ ಗಾಂಧೀನಗರ ತಣ್ಣಗೆ ಸರಿಯುತ್ತಿತ್ತು. ಬಹುಶಃ ಅದು ಎಲ್ಲಾ ಕ್ಷೇತ್ರಗಳಲ್ಲೂ ಇರುವಂಥದ್ದೇ. ಚಿತ್ರರಂಗದಲ್ಲಿ ಬೆಳಕು ಪ್ರಖರವಾಗಿರುವುದರಿಂದ ಹೆಚ್ಚು ಢಾಳಾಗಿ ಕಾಣಿಸುತ್ತದೆ.
ನಾವು ಸಿನಿಮಾ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಎಲ್ಲರ ಮೆಚ್ಚುಗೆ ಗಳಿಸಿದ್ದ ಜನಪ್ರಿಯ ಪತ್ರಕರ್ತರೊಬ್ಬರಿದ್ದರು. ಅವರು ಪತ್ರಿಕಾಗೋಷ್ಠಿಗೆ ಬರದ ಹೊರತು, ಪತ್ರಿಕಾಗೋಷ್ಠಿ ಆರಂಭ ಆಗುತ್ತಿರಲಿಲ್ಲ. ಉಳಿದ ಪತ್ರಕರ್ತರೆಲ್ಲ ಅವರಿಗೋಸ್ಕರ ಕಾಯಬೇಕಾಗಿತ್ತು. ಹಿರಿಯ ನಟರೆಲ್ಲ ಅವರು ಬಂದ ತಕ್ಷಣ ಎದ್ದು ನಿಂತು ಗೌರವಿಸುತ್ತಿದ್ದರು. ಆಗಷ್ಟೇ ಅಲ್ಲಿಗೆ ಕಾಲಿಟ್ಟ ನಾವೆಲ್ಲ ಅದನ್ನು ಚಕಿತರಾಗಿ ನೋಡುತ್ತಿದ್ದೆವು.
ಅದಾಗಿ ಒಂದು ವರ್ಷಕ್ಕೆ ಅವರು ನಿವೃತ್ತರಾದರು. ನಂತರದ ದಿನಗಳು ಅವರ ಪಾಲಿಗೆ ಎಷ್ಟು ದುರ್ಭರವಾದುವೆಂದರೆ ಅವರ ಬರಹದ ರುಚಿ ಚಿತ್ರರಂಗಕ್ಕೆ ಗೊತ್ತಿರಲೇ ಇಲ್ಲ. ಅವರನ್ನು ಚಿತ್ರರಂಗ ಅವರ ಪ್ರತಿಭೆಗಾಗಿ ಮೆಚ್ಚಿಕೊಂಡಿರಲಿಲ್ಲ, ಅದಿಕಾರಕ್ಕಾಗಿ ಸಮೀಪವಾಗಲು ಯತ್ನಿಸುತ್ತಿತ್ತು. ಕೆಲವೇ ತಿಂಗಳುಗಳಲ್ಲಿ ಅವರನ್ನು ಸಮಾರಂಭಗಳಿಗೆ ಕರೆಯುವುದನ್ನೂ ನಿಲ್ಲಿಸಿಬಿಟ್ಟರು. ಚಿತ್ರರಂಗ ಹೊರಗಿನವರನ್ನಷ್ಟೇ ಹೀಗೆ ನೋಡುತ್ತದೆ ಎಂದು ಭಾವಿಸಬೇಕಿಲ್ಲ. ಖ್ಯಾತ ನಾಯಕನಟರೊಬ್ಬರ ಹತ್ತಾರು ಸಿನಿಮಾಗಳನ್ನು ನಿರ್ದೇಶಿಸಿದ, ಒಂದು ಕಾಲದಲ್ಲಿ ನಾವೆಲ್ಲ ಆರಾಧಿಸುತ್ತಿದ್ದ ನಿರ್ದೇಶಕರೊಬ್ಬರು ಆ ನಾಯಕನಟರನ್ನು ನೋಡಲು ಅವರ ಮನೆಗೆ ಹೋಗಿದ್ದರು. ನಾಯಕನಟರನ್ನು ನಾನು ಸಂದರ್ಶಿಸುತ್ತಾ ಕೂತಿದ್ದೆ. ಆ ನಿರ್ದೇಶಕ ಬಂದಿದ್ದಾನೆ ಅಂತ ಗೊತ್ತಾದ ತಕ್ಷಣ ನಾಯಕ ನಟರು, ನಾನು ಇಲ್ಲ, ಒಂದು ತಿಂಗಳು ಬಿಟ್ಟು ಬರೋದಕ್ಕೆ ಹೇಳು ಎಂದು ತನ್ನ ಸಹಾಯಕನಿಗೆ ಹೇಳಿ ಸಂದರ್ಶನ ಮುಂದುವರಿಸಿದರು. ಆ ಸಂದರ್ಶನದಲ್ಲಿ ಅದೇ ನಿರ್ದೇಶಕನ ಕುರಿತು ತುಂಬ ಮೆಚ್ಚುಗೆಯಿಂದ ಗೌರವದಿಂದ ಮಾತಾಡಿದ್ದರು.
ವಿಚಿತ್ರ ವ್ಯಾಖ್ಯಾನ, ವಿಕ್ಷಿಪ್ತ ಲೆಕ್ಕಾಚಾರ, ಅಬೋಧ ಆತ್ಮವಂಚನೆ, ಅನಗತ್ಯ ಅಹಂಕಾರ, ಅಪ್ಪಟ ಅಪ್ರಾಮಾಣಿಕತೆ- ಇವಿಷ್ಟನ್ನೂ ಕಾಣಬಹುದಾದ ಚಿತ್ರರಂಗದೊಳಗೆ ಅದ್ಭುತ ಪ್ರತಿಭಾವಂತರಿದ್ದಾರೆ. ಅಸೀಮ ಭಾವುಕರಿದ್ದಾರೆ. ವಿರಹ, ಪ್ರೇಮ, ಹಂಬಲ, ವ್ಯಾಮೋಹ ಮತ್ತು ತನ್ನ ಹೃದಯದ ತುಡಿತಕ್ಕೆ ಈಡಾದವರಿದ್ದಾರೆ. ಅಂಥ ಜೀವನೋತ್ಸಾಹ, ಹುರುಪು ಮತ್ತು ಉಲ್ಲಾಸಗಳೇ ಇವತ್ತಿಗೂ ಚಿತ್ರರಂಗವನ್ನು ನಮ್ಮ ಕನಸಿನ ಲೋಕವನ್ನಾಗಿ ಮಾಡಿವೆ. ನಾವು ಮೆಚ್ಚುವ ಒಬ್ಬೊಬ್ಬನೂ ಅಲ್ಲಿ ಕಿಂದರಿಜೋಗಿಯಂತೆ ತನ್ನ ಪಾಡಿಗೆ ತಾನು ನಡೆಯುತ್ತಾನೆ. ಉಳಿದವರು ಅವನನ್ನು ಹಿಂಬಾಲಿಸುತ್ತಾರೆ.
ಎಚ್ಚೆಮೈ ದೀಪಗಳು ಆರಿಹೋಗಿ ಥರಗುಟ್ಟವ ಕತ್ತಲಲ್ಲಿ ಕುಳಿತಾಗ ತನ್ನೊಳಗೆ ಆವಾಹನೆಗೊಂಡ ಪಾತ್ರ, ಅದು ಆಡಿಸಿದ ಮಾತು, ತನ್ನತನವನ್ನು ಮೀರಿ ಮತ್ತೇನೋ ಆಗಲು ಹೊರಟಾಗಿನ ಸಂಕಟ ಎಲ್ಲವೂ ಒಬ್ಬ ನಟನಿಗೆ ನಟಿಗೆ ನೆನಪಾಗಬಹುದು. ರೂಪಾಂತರವಲ್ಲದ ರೂಪಾಂತರ ಅದು.ಸೃಷ್ಟಿಕ್ರಿಯೆಯ ಕ್ಷಣದಲ್ಲಷ್ಟೇ ಚಿಟ್ಟೆಯಾಗಿ ಮತ್ತೆ ಕಂಬಳಿಹುಳವೇ ಆಗಬೇಕಾದ ನಿರಂತರ ಚಕ್ರದಲ್ಲಿ ಪ್ರತಿ ಕಲಾವಿದನೂ ಕತೆಗಾರನೂ ಬಂದಿ.
ವರ್ಣಚಕ್ರ ಸುತ್ತುತ್ತಲೇ ಇರುತ್ತದೆ. ಅದೆಷ್ಟೋ ವರ್ಷಗಳ ಹಿಂದೆ ಬರೆದ ಕಾದಂಬರಿಯನ್ನು ಓದುತ್ತಾ ಆಗಿನ ಮನಸ್ಥಿತಿಯನ್ನು ಲೆಕ್ಕ ಹಾಕುತ್ತಾ, ಈಗ ನನ್ನ ಚಾಳೀಸಿನೊಳಗಿಂದ ಚಿತ್ರರಂಗ ಹೇಗೆ ಕಾಣಿಸುತ್ತಿದೆ ಎಂದು ಗ್ರಹಿಸುವುದು ಖುಷಿ ಕೊಡುತ್ತದೆ. ಹಳೆಯ ಸಿನಿಮಾಗಳು ನಮಗೆ ಇಷ್ಟವಾಗುವುದಕ್ಕೆ ನೂರೆಂಟು ಕಾರಣಗಳಿರುತ್ತವೆ. ಜಿಂಕೆಯ ಕಣ್ಣುಗಳು ಇಷ್ಟ ಎಂದು ಬರೀ ಕಣ್ಣುಗಳನ್ನಷ್ಟೇ ಕೀಳಿಸಿ ಟೇಬಲ್ಲಿನ ಮೇಲಿಟ್ಟುಕೊಂಡರೆ ವಿಕಾರವಾಗಿ ಕಾಣುತ್ತದೆ. ಹಾಗೇ ಕೆಲವೊಂದನ್ನು ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ.
ಗಾಂಧೀಬಜಾರು, ನನ್ನ ಹಳೆಯ ಸೈಕಲ್ಲು, ವೈಯೆನ್ಕೆ, ಸಿನಿಮಾ ಪತ್ರಿಕೋದ್ಯಮ ಕಲಿಸಿದ ಉದಯ ಮರಕಿಣಿ –ಹೀಗೆ ಈ ಕಾದಂಬರಿಗೆ ನೂರೆಂಟು ಪ್ರೇರಣೆ.
ಗಾಂಧೀನಗರಕ್ಕೆ ನಮಸ್ಕಾರ.
-ಜೋಗಿ







JOGI KAADAMBARI JOTHEGE AVARA LAGHU BARAHA NAMAGE HECHU KHUSHI KODUTHIDE…ELLARIGOO ISHTAVAAGUVA SHAILIYALLI BAREYUVA JOGIGE HATS OFF….!
Reading after a long time. Nice write up
🙂
ms
“ರೂಪಾಂತರವಲ್ಲದ ರೂಪಾಂತರ ಅದು.ಸೃಷ್ಟಿಕ್ರಿಯೆಯ ಕ್ಷಣದಲ್ಲಷ್ಟೇ ಚಿಟ್ಟೆಯಾಗಿ ಮತ್ತೆ ಕಂಬಳಿಹುಳವೇ ಆಗಬೇಕಾದ ನಿರಂತರ ಚಕ್ರದಲ್ಲಿ ಪ್ರತಿ ಕಲಾವಿದನೂ ಕತೆಗಾರನೂ ಬಂದಿ…”
ಇಷ್ಟವಾದ ಸಾಲುಗಳು.ಕಾದಂಬರಿಗಿಂದ ಮುನ್ನುಡಿಯೇ ಖುಷಿ ಕೊಟ್ಟಿದೆ.
-RJ
Interesting!
waiting for one more wonderful novel
ಪ್ರಿಯ ಜೋಗಿ,
ನಾನು ಕತೆ ಬರೆಯೋಕೆ ಪ್ರಯತ್ನಿಸಿದ್ದು ನೀವೂ ಹೀಗೆಯೇ ಕನ್ನಡಪ್ರಭಕ್ಕಾಗಿ ಕತೆ ಬರೀರಿ ಅಂದಾಗ. ಹೀಗೆಯೇ ಬೈಸಿಕೊಂಡಮೇಲೆಯೇ ಕತೆ ಬರೆದ ನೆನಪು. ಹೀಗೆಯೇ ಸ್ವಲ್ಪ ಜೋರಾಗಿ ನನ್ನ ನೀವು ಬೈಬಾರದಿತ್ತಾ ಆವತ್ತು?
ಕಾದಂಬರಿಗೆ ಕಾಯ್ತಿದ್ದೀನಿ.
ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ
ಮತ್ತೆ, ನಿಮ್ಮಿಂದ ರೈಟ್ಸ್ ತೆಗೆದುಕೊಂಡು ಹೋದ ಎಂಎಸ್ ರಾಜಶೇಖರ್ ಅದನ್ನು ಸಿನಿಮಾ ಮಾಡಲಿಲ್ವಾ?
ಅದು ಮತ್ತೊಂದು ಕಥೆ!
ಅದೇನ್ ಕಥೆ?ಅದನ್ನ ಯಾವಾಗ ಹೇಳ್ತೀರಿ?ಕುತೂಹಲವಿದೆ…
ಜೋಗಿಯವರೆ ನಮಸ್ಖಾರ
ನಾನೋರ್ವ ನಿಮ್ಮ ಸಾಹಿತ್ಯದ ಅಭಿಮಾನಿ ಹಾಗು ಸಣ್ಣ ಮಟ್ಟದ ಬರಹಗಾರ.
ನನ್ನದೊಂದು ಪ್ರಶ್ನೆ – ಕನ್ನಡಪ್ರಭದ ಎಲ್ಲಾ ಸಂಕ್ರಾಂತಿ ಮತ್ತು ದೀಪಾವಳಿ ಸಂಚಿಕೆಗಳ ಸಂಗ್ರಹವಿದೆ
ನಿಮ್ಮ ಊರ್ಮಿಳಾ ಕಾದಂಬರಿ ದೀಪಾವಳಿ ಸಂಚಿಕೆಯಲ್ಲಿಯೇ ಪ್ರಕಟವಾಗಿದೆಯೊ ಅಥವ ಪ್ರತ್ಯೇಕ
ಪುಸ್ತಕವಾಗಿ ಪ್ರಕಟವಾಗಿದೆಯೊ ತಿಳಿಸಿ. (ಸಂಚಿಕೆಯಲ್ಲಿ ನಿಮ್ಮ ಕಾದಂಬರಿ ಪ್ರಕಟವಾಗಿಲ್ಲ). ನಿಮ್ಮ
ಲೇಖನ ಚನ್ನಾಗಿದೆ. ರಾಜಶೇಖರ ಹೊಣಕೆರೆ.ಕೆ
`ಗುಡ್ ಗುಡ್… ತೆಂಗಿನಕಾಯಿ ಬಿದ್ರೆ ಒಳ್ಳೇದಾಗುತ್ತೆ. ನೆತ್ತಿಗೆ ಬಿದ್ರೆ ಇನ್ನೂ ಚೆನ್ನಾಗಿರೋದು”.. thumbaa ishta aythu.. he he he .. chennagi bariddira Sir.. namgoo onderadu tips kodi sir..