ಜೋಗಿಯ ಜೋಳಿಗೆಯಿಂದ ಮತ್ತೆರಡು ಹೊಸ ಪುಸ್ತಕಗಳು. ಮುಖಪುಟಗಳು ಹಾಗು ಮುನ್ನುಡಿ ಅವಧಿ ಓದುಗರಿಗಾಗಿ
ಹೆಬ್ಬೆರಳನ್ನು ಕತ್ತರಿಸುವ ಗುರುವಿಗಾಗಿ ಕಾಯುತ್ತಾ…
ಜೋಗಿ
ನಾನು ಇದನ್ನೆಲ್ಲ ಯಾಕೆ ಮಾಡುತ್ತಿದ್ದೇನೆ ಎಂದು ಪದೇ ಪದೇ ಕೇಳಿಕೊಳ್ಳುತ್ತೇವೆ. ಇದೆಲ್ಲ ನಮಗೆ ಬೇಕಾ ಅನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಫೇಸ್ ಬುಕ್ ತೆರೆದು ಕೂತಾಗ, ಹೆಬ್ಬೆರಳು ಸರಸರನೆ ಹರಿದಾಡಿ ಸಂದೇಶವೊಂದನ್ನು ಟೈಪಿಸುವಾಗ, ಅದೇ ಹೆಬ್ಬೆರಳು ರಿಮೋಟಿನ ಬಟನ್ನುಗಳನ್ನು ಒತ್ತುತ್ತಾ ಚಾನಲ್ ಬದಲಾಯಿಸುವಾಗ, ಬೆಳಗಾಗೆದ್ದು ಪತ್ರಿಕೆಯ ಪುಟ ತಿರುವುತ್ತಾ ಕೂತಾಗ, ಆಸೆಪಟ್ಟು ತಂದ ಜನಪ್ರಿಯ ಪುಸ್ತಕದ ತುಂಬ ತರುಣ ತರುಣಿಯರು ಹೇಗೆ ಬದುಕಬೇಕು ಅನ್ನುವ ಪಾಠಗಳೇ ಕಾಣಿಸಿದಾಗ, ಬೇಡ ಕರೆಯನ್ನೂ ಸ್ವೀಕರಿಸಲು ಹೆಬ್ಬೆರಳು ಮುಂದಾದಾಗ, ಕಾರ್ಟ್ ತುಂಬ ಹೇರಿಕೊಂಡು ಬಂದ ವಸ್ತುಗಳೆಲ್ಲ ಬಿಲ್ಲು ಮಾಡಿಸಿ ಹೊರಬರುತ್ತಿದ್ದಂತೆ ನಿರುಪಯೋಗಿ ಅನ್ನಿಸತೊಡಗಿದಾಗ, ಏನೋ ನಡೆಯುತ್ತದೆ ಎಂದುಕೊಂಡು ಹೋದ ಸಾಹಿತ್ಯಗೋಷ್ಠಿಯಲ್ಲಿ ಮತ್ತೆ ಮತ್ತೆ ಅದೇ ಚರ್ಚೆ, ಅದೇ ಮಾತು ಶುರುವಾದಾಗ, ಪುಸ್ತಕ ಪ್ರಕಟಿಸಿ ಅದ್ದೂರಿಯಾಗಿ ಬಿಡುಗಡೆ ಮಾಡಿ ಹೊರಬಂದು ಕರಗಿದ ಜನಜಂಗುಳಿಯನ್ನೂ ಖಾಲಿ ಖುರ್ಚಿಗಳನ್ನು ನೋಡುತ್ತಾ ನಿಂತಾಗ ಮತ್ತದೇ ಪ್ರಶ್ನೆ. ನಾನು ಇದನ್ನೆಲ್ಲ ಯಾಕೆ ಮಾಡುತ್ತಿದ್ದೇನೆ.
ಈ ಪ್ರಶ್ನೆಯನ್ನು ಒಬ್ಬ ರೈತ ಕೇಳಿಕೊಳ್ಳುವುದಿಲ್ಲ. ಒಬ್ಬ ಬಡಗಿಯೋ ಕಮ್ಮಾರನೋ ಕೇಳಿಕೊಳ್ಳಬೇಕಾಗಿಲ್ಲ. ಅವನು ಏನನ್ನೋ ಸೃಷ್ಟಿಸುತ್ತಿರುತ್ತಾನೆ. ತಾನು ಸೃಷ್ಟಿಸಿದ್ದು ಮಾರಾಟ ಆಗುತ್ತದೋ ಇಲ್ಲವೋ ಅನ್ನುವ ಪ್ರಶ್ನೆ ಸೃಷ್ಟಿಕ್ರಿಯೆಯ ಹೊತ್ತಿಗೆ ಅವನನ್ನು ಕಾಡುವುದಿಲ್ಲ. ಅದು ಒಬ್ಬ ಲೇಖಕನನ್ನೂ ಬರಹದ ಹೊತ್ತಲ್ಲಿ ಕಾಡಬಾರದು. ಒಬ್ಬ ಉದ್ಯೋಗಿಯನ್ನು ದುಡಿಯುತ್ತಿರುವ ಹೊತ್ತಲ್ಲಿ ಬಾಧಿಸಬಾರದು. ಆದರೆ ನನಗೆ ಗೊತ್ತಿರುವ ಹಾಗೆ ಇವತ್ತು ಪ್ರತಿಯೊಬ್ಬ ವೃತ್ತಿಜೀವಿಯೂ ನಾನಿದನ್ನು ಯಾಕೆ ಮಾಡುತ್ತಿದ್ದೇನೆ ಎಂಬ ಪ್ರಶ್ನೆಯನ್ನು ಆಗಾಗ ಕೇಳಿಕೊಳ್ಳುತ್ತಲೇ ಇರುತ್ತಾನೆ.
ನಿರರ್ಥಕತೆ ನಮ್ಮನ್ನು ಆಳುತ್ತಿದೆ.ಕ್ಷಣಕ್ಷಣವೂ ವ್ಯರ್ಥ ಭಾವ. ನಾವು ಮಾಡುತ್ತಿರುವುದೆಲ್ಲ ವ್ಯರ್ಥ ಎಂಬ ಅಂತರಂಗದ ಆಲಾಪ. ಕಂಪ್ಯೂಟರಿನ ಮುಂದೆ ಕೂತು ಯಾವುದೇ ದೇಶ ಬಯಸುವ, ಯಾವುದೋ ಪ್ರೋಗ್ರಾಮಿನ ಯಾವುದೋ ಭಾಗವನ್ನು ತನ್ನ ಪಾಲಿನ ಕರ್ತವ್ಯವೆಂಬಂತೆ ಬರೆಯುತ್ತಿರಬೇಕಾದರೆ, ತನಗೆ ಸಂಬಂಧವೇ ಇಲ್ಲದ, ನಷ್ಟಹೊಂದುತ್ತಿದೆ ಎಂದು ಸ್ಪಷ್ಟವಾಗಿ ಗೊತ್ತಿರುವ ಸಂಸ್ಥೆಯ ಲೆಕ್ಕಪತ್ರಗಳನ್ನು ತಿದ್ದುತ್ತಿರುವ ಹೊತ್ತಿಗೆ, ಲೈಫ್ ಆಫ್ ಪೈ ಎಂಬ ಚೆಂದದ ಸಿನಿಮಾ ಕೂಡ ನಮ್ಮನ್ನು ಕೊಲ್ಲುವುದಕ್ಕೇ ಬರುತ್ತಿದೆ ಅಂತ ಬರೆಯುತ್ತಿರುವ ಹೊತ್ತಿಗೆ, ಪತ್ರಿಕೆಯ ಮುಖಪುಟದಲ್ಲಿ ನಗ್ನಾವತಾರಿ ಸುಂದರಿಯ ಫೋಟೋ ಕಣ್ತುಂಬಿಸಿಕೊಳ್ಳುತ್ತಿರುವ ಹೊತ್ತಿಗೆ, ಟೀವಿಯಲ್ಲಿ ಕಾಣಿಸುವ ಜಾಹೀರಾತು ನಿಮ್ಮ ಟೂತ್ಪೇಸಸ್ಟಿನಲ್ಲಿ ಉಪ್ಪು ಇದೆಯೇ ಎಂದು ಬೆಚ್ಚಿಬೀಳಿಸುತ್ತಿರಬೇಕಾದರೆ, ಕ್ರಿಕೆಟ್ ಸಮರಕ್ಕೆ ಭಾರತ ಸಜ್ಜು ಎಂಬ ಸುದ್ದಿಯಿಂದ ಇದ್ದಕ್ಕಿದ್ದ ಹಾಗೇ ಇಡೀ ಇಂಡಿಯಾ ಹೊಸ ಹುಮ್ಮಸ್ಸನ್ನು ಪಡಕೊಂಡಂತೆ ವರ್ತಿಸುತ್ತಿರಬೇಕಾದರೆ ಮತ್ತದೇ ಪ್ರಶ್ನೆ. ನಾವೆಲ್ಲಿಗೆ ಹೊರಟಿದ್ದೇವೆ, ಏನು ಮಾಡುತ್ತಿದ್ದೇವೆ. ಯಾರಿಗೋಸ್ಕರ ಈ ದೇಶವನ್ನು ಕಟ್ಟುತ್ತಿದ್ದೇವೆ ಅಥವಾ ಕಟ್ಟಲಾಗುತ್ತಿರುವ ಈ ದೇಶದ ಪ್ರಜೆಗಳೆಂದು ಬೀಗುತ್ತಿದ್ದೇವೆ. ದೇವನ ಹಳ್ಳಿ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ ಎಂದು ಅಲ್ಲೊಂದು ಸೈಟು ಕೊಳ್ಳುವ ಆತುರ, ಎರಡೇ ವರುಷದಲ್ಲಿ ಇಮ್ಮಡಿಯಾಗುತ್ತದೆ ಎಂದು ಆಸೆ ಹುಟ್ಟಿಸುವ ದಲಾಲಿ, ಹೊರವರ್ತುಲ ರಸ್ತೆಯಿಂದಾಗಿ ಮನೆ ಕಳಕೊಳ್ಳುವ ಭಯ ಹುಟ್ಟಿಸುವ ಸರ್ಕಾರ, ಇನ್ನೊಂದು ವರ್ಷದಲ್ಲಿ ನಿಮ್ಮ ತಲೆಮೇಲೆ ರೈಲು ಓಡುತ್ತದೆ ಎಂದು ಹುಸಿ ಹೆಮ್ಮೆಯಿಂದ ಮಾತಾಡುವ ಅಧಿಕಾರಿಗಳು.
ಮತ್ತೆ ಅದೇ ನಿರರ್ಥಕತೆ. ಹೆಬ್ಬೆರಳಿನ ತುದಿಯಲ್ಲಿ ಇಡೀ ಜಗತ್ತನ್ನೇ ಅಡಗಿಸಬಲ್ಲ ನಾವೀಗ ಏಕಲವ್ಯರಾಗಬೇಕಿದೆ. ಬೆರಳು ಕತ್ತರಿಸಿಕೊಳ್ಳದೇ ಬೇರೆ ದಾರಿಯಿಲ್ಲ. ಝೆನ್ ಕತೆ ನೆನಪಾಗುತ್ತದೆ. ಗುರುವೊಬ್ಬ ಪಾಠ ಮಾಡುತ್ತಿದ್ದ. ಪಾಠ ಮಾಡುವಾಗ ಅವನು ಸದಾ ಹೆಬ್ಬೆರಳು ಎತ್ತುತ್ತಿದ್ದ. ಅವನ ತರಗತಿಯಲ್ಲಿರುವ ಒಬ್ಬ ವಿದ್ಯಾರ್ಥಿ, ಗುರು ಹೆಬ್ಬೆರಳು ಎತ್ತಿದಾಗೆಲ್ಲ ತಾನೂ ಹೆಬ್ಬೆರಳು ಎತ್ತತೊಡಗಿದ. ಇದನ್ನು ಗಮನಿಸಿದ ಗುರು, ತಾನು ಹೆಬ್ಬೆರಳು ಎತ್ತದೇ ಇರಲು ನಿರ್ಧರಿಸಿದ. ಆದರೆ ಹೆಬ್ಬೆರಳು ಎತ್ತದೇ ಹೋದರೆ ಅವನಿಗೆ ಒಂದಕ್ಷರವೂ ಹೊಳೆಯುತ್ತಿರಲಿಲ್ಲ. ಹೆಬ್ಬೆರಳು ಎತ್ತಿದರೆ ಶಿಷ್ಯನೂ ಹೆಬ್ಬೆರಳು ಎತ್ತಿ ತನ್ನನ್ನು ಅಣಕಿಸಿದಂತೆ ಭಾಸವಾಗುತ್ತಿತ್ತು. ತನ್ನ ಅಭ್ಯಾಸ ಬಿಡಬೇಕೋ, ಅವನ ಅಭ್ಯಾಸ ತಡೆಯಬೇಕೋ ಎಂಬ ಪ್ರಶ್ನೆ ಎದುರಾಗಿ ಗುರು ಒಂದು ದಿನ ಶಿಷ್ಯನನ್ನು ಕರೆದ. ನೋಡು, ನಾನೀಗ ನಿಂಗೇನೋ ಹೇಳಬೇಕು ಅನ್ನುತ್ತಾ ಹೆಬ್ಬೆರಳು ಎತ್ತಿದ. ಶಿಷ್ಯನೂ ಅಭ್ಯಾಸ ಬಲದಿಂದಹೆಬ್ಬೆರಳು ಎತ್ತುತ್ತಿದ್ದಂತೆ ಎಡಗೈಯಲ್ಲಿ ಬಚ್ಚಿಟ್ಟುಕೊಂಡಿದ್ದ ಚಾಕುವಿನಿಂದ ಅವನ ಹೆಬ್ಬೆರಳು ಕಚಕ್ಕನೆ ಕತ್ತರಿಸಿದ.
ಶಿಷ್ಯ ನೋವಿನಿಂದ ನರಳಿದ. ಗುರು ನಾನು ಇದನ್ನೇಕೆ ಮಾಡಿದೆ ಎಂದರೆ ಎನ್ನುತ್ತಾ ಹೆಬ್ಬೆರಳೆತ್ತಿದ. ಶಿಷ್ಯ ಹೆಬ್ಬೆರಳು ಎತ್ತಲು ಹೋಗುತ್ತಿದ್ದಂತೆ, ತನಗೆ ಹೆಬ್ಬೆರಳೇ ಇಲ್ಲ ಅನ್ನುವುದು ಅವನಿಗೆ ಥಟ್ಟನೆ ಹೊಳೆಯಿತು.
ಆಗ ಆ ಶಿಷ್ಯನಿಗೆ ಜ್ಞಾನೋದಯ ಆಯಿತು ಎಂಬಲ್ಲಿಗೆ ಕತೆ ಮುಗಿಯುತ್ತದೆ. ನಮ್ಮ ಹೆಬ್ಬೆರಳನ್ನು ಯಾರಾದರೂ ಕತ್ತರಿಸಿ ಜ್ಞಾನೋದಯ ಆಗುವಂತೆ ಮಾಡಬಾರದೆ ಅನ್ನಿಸುತ್ತದೆ. ನಮ್ಮನ್ನು ಸೆಳೆಯುತ್ತಿರುವ ಸಂಗತಿಗಳು ನಮ್ಮದಲ್ಲವೇ ಅಲ್ಲ ಅಂತ ಎಷ್ಟೋ ಸಲ ಅನ್ನಿಸುತ್ತದೆ. ಹಾಗೆ ಸೆಳೆಯುವುದಕ್ಕೆ ಅವುಗಳಿಗೆ ಯಾವ ಹಕ್ಕೂ ಇಲ್ಲ, ಯಾವ ಸಾಮರ್ಥ್ಯವೂ ಇಲ್ಲ. ಸುಳಿಯೇ ಅಲ್ಲದ ಸುಳಿಗಳತ್ತ ನಾವು ಸೆಳೆಯಲ್ಪಡುತ್ತಿರುವುದಕ್ಕೆ ಕಾರಣ ನಮ್ಮ ದೌರ್ಬಲ್ಯವೇ ಕಾರಣ ಇರಬೇಕೆಂದು ಒಪ್ಪಿಕೊಳ್ಳುವುದಕ್ಕೂ ನಾವು ತಯಾರಿಲ್ಲ.
ಅಕ್ಷರಗಳ ಜಗತ್ತಿನಿಂದ ಆಚೆ ಬಂದು ನೋಡಿದರೂ ಜಗತ್ತು ಇವತ್ತು ನಿರರ್ಥಕತೆಯ ಕೂಪದಂತೆ ಕಾಣಿಸುತ್ತಿದೆ. ನೀರೇ ಒಸರದ ಬಾವಿಯ ಮುಂದೆ ನಾವು ಬಿಂದಿಗೆ ಹಿಡಕೊಂಡು ಹಕ್ಕಿನಿಂದ ಆಸೆಯಿಂದ ಭರವಸೆಯಿಂದ ನಿಂತಿದ್ದೇವೆ. ನಮ್ಮಪ್ಪನ ಕಾಲಕ್ಕೆ ಅಜ್ಜನ ಕಾಲಕ್ಕೆ ಅಲ್ಲಿ ನೀರಿತ್ತು ಅನ್ನುವ ನಂಬಿಕೆಯಿಂದ ಹೊಳೆಹೊಳೆಯುವ ಕೊಡಗಳೊಂದಿಗೆ ಕಾದಿದ್ದೇವೆ. ಆ ನೀರಾದರೂ ನಮಗೆ ಯಾಕೆ ಬೇಕು ಅನ್ನುವುದಕ್ಕೆ ನಮ್ಮ ಕುಲಪುರೋಹಿತರು ಉತ್ತರ ಕೊಡುತ್ತಾರೆ. ಅದು ಪುರಾತನರ ಪವಿತ್ರ ಜನ. ಅದನ್ನು ಆಗಾಗ ಪ್ರೋಕ್ಷಣೆ ಮಾಡಿಕೊಳ್ಳುತ್ತಿರಬೇಕು. ನಿಮ್ಮನ್ನು ಅದು ಕಾಯುತ್ತದೆ. ಆ ಕಾಪಿನ ಆಶೆಗೆ , ಭರವಸೆಗೆ ಮರುಳಾಗಿ ನಾವು ಪಾಪಲೇಪಿತರಾಗುತ್ತಾ ಹೋಗಬಹುದು.
ಅಷ್ಟಕ್ಕೂ ನಮ್ಮ ಪಾಪಗಳೇನು ಅನ್ನುವುದಾದರೂ ನಮಗೆ ಗೊತ್ತಿದೆಯಾ? ಪಾಪ ಎಂಬ ಪದದ ಜಾಗದಲ್ಲಿ ಅಪರಾಧ ಎಂಬ ಹೊಸಪದ ಬಳಕೆಯಲ್ಲಿದೆ. ನಾವು ಅಪರಾಧಕ್ಕೂ ಹೆದರುತ್ತಿಲ್ಲ, ಶಿಕ್ಷೆಗೆ ಹೆದರುತ್ತೇವೆ. ಕಾನೂನು ಕೊಡುವ ಶಿಕ್ಷೆಯೊಂದೇ ಶಿಕ್ಷೆ ಎಂದು ಗಾಢವಾಗಿ ನಂಬಿದ್ದೇವೆ. ಕಾನೂನು ಕೂಡ ಮನುಷ್ಯ ದೊಡ್ಡವನೋ ಸಮಾಜ ದೊಡ್ಡದೋ ದುಡ್ಡು ದೊಡ್ಡದೋ ಪ್ರಜಾಪ್ರಭುತ್ವ ಶ್ರೇಷ್ಠವೋ ಎಂಬ ಗೊಂದಲದಲ್ಲಿ ಇದ್ದಂತಿದೆ. ನಾವು ಮೀರಬೇಕಾದ ಹೊಸಿಲು ಮತ್ತು ನಮ್ಮೊಳಗೆ ಕುಡಿಯೊಡೆಯಬೇಕಾದ ಟಿಸಿಲು- ಎರಡನ್ನೂ ಯೂಸ್ಲೆಹಸ್ನೆ ಸ್ ಎಂಬ ಫ್ಯುಟಿಲಿಟಿ ಬಗ್ಗುಬಡಿಯುತ್ತಾ ಹೋಗುತ್ತದೆ. ನಾವು trivial pursuitಗಳಲ್ಲಿ ಮುಳುಗಿಹೋಗಿದ್ದೇವಾ?
ಈ ಪ್ರಶ್ನೆಗೂ ಉತ್ತರ ಇಲ್ಲ. ಯಾವುದು ಟ್ರಿವಿಯಲ್, ಯಾವುದು ಅರ್ಥಪೂರ್ಣ. ನಡೆದ ದಾರಿ, ನಡೆಯದ ದಾರಿಗಳ ನಡುವಿನ ವ್ಯತ್ಯಾಸ ಅಸ್ಪಷ್ಟವಾಗುತ್ತಿದೆ. ಈ ಜಗತ್ತಿನ ಅತ್ಯಂತ ಪ್ರಭಾವಶಾಲಿಯೂ ಜನಪ್ರಿಯನೂ ಆಗಿ ಹೊರಹೊಮ್ಮುತ್ತಿರುವವನು ಒಳ್ಳೆಯ ಮಾತುಗಾರ. ಮಾರಬಲ್ಲವನು ಬೇಕು ನಮಗೆ. ನಮ್ಮನ್ನೇ ದೇವರಿಗೆ ಮಾರಬಲ್ಲವನು, ದೇವರನ್ನು ನಮಗೆ ಮಾರಬಲ್ಲವನು, ಮಾರುವುದನ್ನು ಹೇಳಿಕೊಡುವುದಕ್ಕೆ ದೇವದೂತರಿದ್ದಾರೆ. ನಮಗೆ ಯಾವತ್ತೂ ಉಪಯೋಗಕ್ಕೆ ಬರದ ಸಂಗತಿಗಳನ್ನು, ವಸ್ತುಗಳನ್ನು ನಮ್ಮ ಮುಂದಿಟ್ಟು, ಇದಿಲ್ಲದೇ ನೀವು ಬದುಕಿರಲಾರಿರಿ ಎಂದು ನಾವೇ ನಂಬಿಕೊಳ್ಳುವಂತೆ ಮಾಡುವುದು ಜಗತ್ತು. ನಮಗೀಗ ತಕ್ಷಣ ಬೇಕಾಗಿರೋದು ದೇವರು ಮತ್ತು ದೇವರನ್ನು ನಮ್ಮ ಮನೆಗೆ ಕರೆತರಬಲ್ಲ, ನಮ್ಮ ತಪ್ಪುಗಳನ್ನು ಮುಚ್ಚಿಟ್ಟು, ನಮ್ಮ ಅತ್ಯುತ್ತಮ ಗುಣಗಳನ್ನು ದೇವರಿಗೆ ಪರಿಚಯಿಸಬಲ್ಲ ಮಾತುಗಾರ. ಅವನು ತನ್ನ ವಾದಕ್ಕೆ ಮನುಸ್ಮೃತಿಯನ್ನೂ ವೇದಪುರಾಣಗಳನ್ನೂ, ಉಪನಿಷತ್ತುಗಳನ್ನೂ ಅವನಿಗೇ ಅರ್ಥವಾಗದ ಮಂತ್ರಗಳನ್ನೂ ಬಳಸಬೇಕು. ಸಮಾನತೆಯ ಸಿದ್ಧಾಂತವನ್ನು ದೈವತ್ವದಲ್ಲಿ ಮೀರಲು ಹವಣಿಸಬೇಕು. ಎಲ್ಲರೂ ಸಮಾನರು ಎಂದು ನಂಬುವ ಹೊತ್ತಿಗೇ, ಇಲ್ಲ, ನಾನು ದೇವರಿಗೆ ಹತ್ತಿರದಲ್ಲಿದ್ದೇನೆ ಎಂದು ಹೇಳಿಕೊಂಡು ಕೀಳರಿಮೆಯನ್ನು ಹುಟ್ಟುಹಾಕಬೇಕು.
ಭಕ್ತಿಯ ಅಮಲು ಅತ್ಯುತ್ತಮ. ಶಕ್ತಿಯ ಅಮಲು ಮಧ್ಯಮ, ವಿಭಕ್ತಿಯ ಅಮಲು ಅಧಮ. ನಮ್ಮದು ಭಕ್ತಿಯೋ ವಿಭಕ್ತಿಯೋ ಗೊತ್ತಿಲ್ಲ. ನಾವು ದೇವಸ್ಥಾನ ಕಟ್ಟಬಲ್ಲೆವು, ಮಹಾಪೂಜೆ ಮಾಡಿಸಬಲ್ಲೆವು. ವೈಕುಂಠದ ತನಕ ಹೆದ್ದಾರಿ ಹಾಸಬಲ್ಲೆವು ಎಂದು ಬೀಗುತ್ತಲೇ ನಮ್ಮ ಅಪ್ಪ, ಅಜ್ಜ, ಅಜ್ಜಿಯರು, ಮಕ್ಕಳು- ದಾಟಿಬಿಟ್ಟೇವು ಎಂಬ ನಂಬಿಕೆಯಿಂದ ದಾಟಲಾಗದ ರಸ್ತೆಗಳನ್ನೂ ಅದರ ಮೇಲೆ ಶರವೇಗದಲ್ಲಿ ಓಡುವ ಕಾರುಗಳನ್ನು ಮಾಡಿಟ್ಟಿದ್ದೇವೆ. ಕಾಲದಲ್ಲಿ ಹಿಂದೆ ಹೋಗಬೇಕೋ ಮುಂದೆ ಹೋಗಬೇಕೋ ಎಂಬ ದ್ವಂದ್ವದಲ್ಲಿ ಕೂಡು ಹಾದಿಯಲ್ಲಿದ್ದೇವೆ. ಕಣ್ಮುಂದೆ ಯಾವತ್ತೂ ಹಸಿರಿಗೆ ಬದಲಾಗದ ಕೆಂಪುದೀಪದಂತೆ ನಿರರ್ಥಕತೆ ಪ್ರಖರವಾಗಿದೆ.
ಒಂದು ಕಾದಂಬರಿಯ ಆರಂಭದಲ್ಲಿ ಇಂಥ ಪ್ರಸ್ತಾವನೆಯ ಅಗತ್ಯದ ಕುರಿತು ಏಳಬಹುದಾದ ಪ್ರಶ್ನೆಗಳ ಅರಿವಿದ್ದೇ ನಾನಿದನ್ನು ಬರೆಯುತ್ತಿದ್ದೇನೆ. ಈ ನಿರರ್ಥಕತೆ ಸಾಹಿತ್ಯ ಜಗತ್ತನ್ನು ಕೂಡ ಪ್ರವೇಶಿಸಿದೆಯೋ ಎಂಬ ಗುಮಾನಿ ಕೆಲವರನ್ನಾದರೂ ಕಾಡತೊಡಗಿದೆ. ಇವತ್ತು ಇಡೀ ನಾಡಿಗೆ ಸಲ್ಲಬಲ್ಲ ಬರಹಗಾರರ ಸಂಖ್ಯೆ ಕ್ಷೀಣಿಸುತ್ತಿದೆ. ಒಂದು ಪಂಗಡಕ್ಕೆ, ಒಂದು ವರ್ಗಕ್ಕೆಂದು ಬರೆಯುವುದು ಎಷ್ಟು ಅಪಾಯಕಾರಿ ಎಂಬುದನ್ನು ನಮಗೆ ನವ್ಯ, ಬಂಡಾಯ ಮತ್ತು ದಲಿತ ಚಳವಳಿಗಳು ತೋರಿಸಿಕೊಟ್ಟಿವೆ. ಇದೇ ಅವಸ್ಥೆಯನ್ನು ಆಫ್ರಿಕಾ ಖಂಡದ ಲೇಖಕರೂ ಅನುಭವಿಸುತ್ತಿದ್ದಾರೆ. ಆದರೆ ಆಫ್ರಿಕನ್ ಲೇಖಕರಿಗೆ ಇರುವ ಅನುಕೂಲ ಕನ್ನಡದ ಕತೆಗಾರರಿಗೋ ಕವಿಗಳಿಗೋ ಇಲ್ಲ. ನಮಗಿಂತ ಅಲ್ಪಸಂಖ್ಯಾತ ಭಾಷೆಗಳ ಕವಿಗಳೆಲ್ಲ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೈಜೀರಿಯಾದ ವೋಲೆ ಸೋಯಿಂಕಾ, ನಾರ್ವೆಯ ಸಿಂಗ್ರಿಡ್, ಪೆರುವಿನ ಮಾರಿಯೋ ವರ್ಗಾಸ್ ಯೋಸಾ, ರೋಮಾನಿಯಾದ ಹೆರ್ಟಾ ಮುಲ್ಲರ್ ಮುಂತಾದವರು ತಮ್ಮ ಜನಕ್ಕಿಂತ ಹೆಚ್ಚಾಗಿ ಜಗತ್ತಿಗೇ ಗೊತ್ತಾಗುವಂತೆ ಬರೆಯುತ್ತಾರೆ.
ಒಬ್ಬ ಬರಹಗಾರನ ಜಗತ್ತು ಸಂಕುಚಿತವಾಗುತ್ತಾ ಹೋದ ಹಾಗೆ ಅವನ ಶಕ್ತಿ ಕ್ಷೀಣಿಸುತ್ತಾ ಬರುತ್ತದೆ. ಶಿವರಾಮ ಕಾರಂತರು ಚೋಮನನ್ನು ಒಳಗೊಳ್ಳಲು ಯತ್ನಿಸಿದ್ದು, ಶಾಂತಿನಾಥ ದೇಸಾಯರು ಓಂ ಣಮೋ ಬರೆದದ್ದು, ಚಿತ್ತಾಲರು ಪುರುಷೋತ್ತಮ, ಶಿಕಾರಿಗಳ ಮೂಲಕ ಮತ್ತೊಂದು ಜಗತ್ತಿಗೆ ಕಾಲಿಟ್ಟದ್ದು, ಕುವೆಂಪು ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮೂಲಕ ಇಡೀ ಜಗತ್ತನ್ನು ಕನ್ನಡದ ಕನ್ನಡಿಯಲ್ಲಿಟ್ಟು ನೋಡಿದ್ದು, ದೇವನೂರು ಮಹಾದೇವ ಕುಸುಮಬಾಲೆಯನ್ನು ಬರೆಯುತ್ತಲೇ ಅದು ನಮ್ಮಂಥ ಯಾವ ದೇಶದ ಜಾನಪದ ಕತೆಯೂ ಆಗಬಹುದಾಗುವಂತೆ ಮಾಡಿದ್ದನ್ನು ನೋಡುತ್ತಿದ್ದರೆ, ಇವತ್ತಿನ ಲೋಕದ ಸೀಮಿತ ಪರಿಧಿ ನಿಮಗೆ ಹೊಳೆಯುತ್ತದೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಉದಾಹರಣೆ ತೆಗೆದುಕೊಂಡರೆ ನಿಮಗೆ ಈ ವೈರುದ್ಧ್ಯ ಸ್ಪಷ್ಟವಾಗುತ್ತದೆ. ಕಳೆದ ಇಪ್ಪತ್ತು ವರುಷಗಳಲ್ಲಿ ಅಮೆರಿಕಾದ ಯಾವೊಬ್ಬ ಬರಹಗಾರ ಕೂಡ ನೊಬೆಲ್ ಪ್ರಶಸ್ತಿ ಪಡೆದಿಲ್ಲ. 1980ರಲ್ಲಿ ಪೋಲೆಂಡಿನಲ್ಲಿ ಹುಟ್ಟಿದ ಜೆಸ್ಲಾ ಮಿಲೋಸ್ ನಂತರ ನೊಬೆಲ್ ಪ್ರಶಸ್ತಿಗೆ ಪಾತ್ರವಾಗುವುದಕ್ಕೆ ಟೋನಿ ಮಾರಿಸನ್ ಬರಬೇಕಾಯಿತು. 1983ರ ನಂತರ ಅಮೆರಿಕಾಕ್ಕೆ ಬಂದ 163 ನೊಬೆಲ್ ಪ್ರಶಸ್ತಿಗಳು ಮೆಡಿಸಿನ್, ಫಿಸಿಕ್ಸ್, ಇಕನಾಮಿಕ್ಸ್ ಮತ್ತು ಕೆಮಿಸ್ಟ್ರಿಗೆ ಸಂದಿವೆ. ಆರ್ಥಿಕವಾಗಿ ಮುಂದುವರಿಯುತ್ತಾ ಹೋದ ಹಾಗೆ ನಮ್ಮ ಆದ್ಯತೆಗಳು ಹೇಗೆ ಬದಲಾಗುತ್ತವೆ ಅನ್ನುವುದನ್ನೂ ಇದು ಸೂಚಿಸುವಂತಿದೆ.
ಇಂಥ ಹೊತ್ತಲ್ಲಿ ನಮ್ಮ ಜಗತ್ತನ್ನು ನಾವು ವಿಸ್ತರಿಸಿಕೊಳ್ಳದೇ ಹೋದರೆ, ಏನಾಗುತ್ತದೆ ಅನ್ನುವುದಕ್ಕೆ ಪಕ್ಕದ ಆಂಧ್ರದಲ್ಲೇ ಉದಾಹರಣೆಗಳು ಸಿಗುತ್ತವೆ. ತೆಲುಗು ಸಾಹಿತ್ಯ ಯಂಡಮೂರಿ ಮತ್ತು ನಕ್ಸಲ್ಬಾಆರಿಯ ನಡುವೆ ಸಿಕ್ಕಿ ನಲುಗಿಹೋಗಿದೆ. ಸೂಕ್ಷ್ಮಜ್ಞತೆ ಕಳಕೊಂಡು ಪ್ರತಿಯೊಂದು ಸಾಲು ಕೂಡ ಸಶಬ್ದವಾಗಿಯೇ ನಮಗೆ ಕೇಳಿಸುತ್ತದೆ. ಮೌನವೆಂಬುದು ಅಪರಾಧವೆಂಬಂತೆ ಭಾಸವಾಗುವ ಸಾಹಿತ್ಯ ಅಸಹನೀಯವೂ ಆಗುತ್ತದೆ.
ಇಂಥ ಹೊತ್ತಲ್ಲಿ ನಾವು ನಮ್ಮ ನಮ್ಮ ವೃತ್ತದೊಳಗೆ ನಿಂತುಕೊಂಡು ಅದನ್ನೇ ನಮ್ಮ ಜಗತ್ತನ್ನಾಗಿ ಮಾಡಿಕೊಂಡು ಬರೆಯುತ್ತಿದ್ದೇವೆ. ಒಬ್ಬ ಬರೆಯುವುದು ಮತ್ತೊಬ್ಬನಿಗೆ ಹಳಹಳಿಕೆಯಂತೆ, ಸ್ವಂತದ ಆಲಾಪದಂತೆ, ಆತ್ಮರತಿಯಂತೆ ಕೇಳಿಸುತ್ತಿದೆ. ಬರವಣಿಗೆ ಕೂಡ ನಿರರ್ಥಕ ಎನ್ನಿಸುವ ಜಗತ್ತು ಕ್ರಮೇಣ ಸೃಷ್ಟಿಯಾಗುತ್ತಿದೆ.
ಇವತ್ತು ಅಮೆರಿಕಾದಂಥ ರಾಷ್ಟ್ರಗಳ ಪ್ರಜೆಗಳಿಗೆ ಮೋಟಿವೇಷನ್ ಮಾಡುವ ಪುಸ್ತಕಗಳು ಬೇಕು. ರಾಬಿನ್ ಶರ್ಮ, ರಾಂಡಿ ಪಾಶ್, ದೀಪಕ್ ಛೋಪ್ರಾಗಳು ಬೇಕು. ಸೆಲ್ಪ್ ಹೆಲ್ಪ್ ಪುಸ್ತಕಗಳು ಬೇಕು. ಅದನ್ನು ಓದುತ್ತಿರುವವರೆಲ್ಲ ಹಳ್ಳಿಗಳಿಂದ, ಬಡತನದಿಂದ ಬಂದವರು. ಬರೆದವರು ಕೂಡ. ಅಂಥ ಯಾವ ಪುಸ್ತಕದ ನೆರವೂ ಇಲ್ಲದೇ, ರಾಮಾಯಣ, ಮಹಾಭಾರತಗಳನ್ನು, ನಮ್ಮ ನಡುವಿನ ಕತೆಗಾರರನ್ನು ಓದಿಕೊಂಡು ಸ್ಪೂರ್ತಿಗೊಂಡು ಬೆಳೆದೆವು ಎಂಬುದನ್ನು ಅವರೇ ಮರೆಯುವಂತೆ ಮಾಡುವುದಕ್ಕೆ ಇಂಥ ಒಂದು ಪುಸ್ತಕ ಸಾಕು. ಇವತ್ತು ಇಂಥ ಪುಸ್ತಕಗಳು ಕನ್ನಡಕ್ಕೂ ದಾಳಿ ಇಡುತ್ತಿವೆ.
ಇಂಥ ಹೊತ್ತಲ್ಲಿ ಈ ಕಾದಂಬರಿಯನ್ನು ನಿಮ್ಮ ಕೈಗಿಡುತ್ತಿದ್ದೇನೆ. ಇದು ಕಾದಂಬರಿ ಅನ್ನಲಾರೆ. ಕಾದಂಬರಿಯ ನೇರ ನಿರೂಪಣೆ ಇಲ್ಲಿಲ್ಲ. ಇದು ಎರಡು ಜಗತ್ತಿನ ತಳಮಳ ಮತ್ತು ಹೊಂದಾಣಿಕೆಗೆ ತುಯ್ಯುತ್ತಿರುವ ಇಬ್ಬರ ಕತೆ.
ಇದು ನನ್ನ ಇಪ್ಪತ್ತೆಂಟನೆಯ ಕೃತಿ. ನಿಮ್ಮ ಓದು ಮತ್ತು ಪ್ರತಿಕ್ರಿಯೆ ಇದರ ವ್ಯಾಪ್ತಿಯನ್ನು ವಿಸ್ತರಿಸಬಹುದು ಎಂಬ ನಂಬಿಕೆಯೊಂದಿಗೆ ಇದನ್ನು ನಿಮ್ಮ ಕೈಗಿಡುತ್ತಿದ್ದೇನೆ.
-ಜೋಗಿ







ಅದ್ಭುತ, ಯಾವಾಗಲೂ ನಮ್ಮ ಮನಸ್ಸಿನ ಮಾತನ್ನು ಅಥವಾ ಮನಸ್ಸು ಕಲಕುವ ಮಾತುಗಳನ್ನ್ನು ಬರೆಯಲು ಜೋಗಿಯವರಿಗೆ ಹೇಗೆ ಸಾದ್ಯ ಆಗತ್ತೋ
ಬರಿ ಪೀಠಿಕೆಯಲ್ಲಿಯೇ ಪೂರ್ತಿ ಕಾದಂಬರಿ ಓದಿದ ಅನುಭವವಾಗುತ್ತಿದೆ!!