ಪತ್ರಕರ್ತನ ಸುಳ್ಳುಗಳನ್ನು ನಂಬಿ ಪತ್ತೇದಾರ ಮೂರ್ಖನಾದ
– ಜೋಗಿ
ಪತ್ತೇದಾರಿ ಜಗತ್ತನ್ನು ಅವನ ಹಾಗೆ ಹಿಡಿದಿಟ್ಟವನ್ನು ಮತ್ತೊಬ್ಬನಿಲ್ಲ. ಹುಡುಕಾಟ, ಬೇಹುಗಾರಿಕೆ, ಗೂಢಚಾರಿಕೆಗಳನ್ನೂ ಬರಹಕ್ಕೆ ತರಬಹುದು ಎಂದು ತೋರಿಸಿದ ಲೇ ಕ್ಯೂ ಲಂಡನ್ನಿನ ಅಲೆಮಾರಿ. ಅನೇಕ ಲೇಖಕರಿಗೆ ಸ್ಪೂರ್ತಿಯಾದ ಲೇ ಕ್ಯೂ ತಾನೂ ಒಬ್ಬ ಬೇಹುಗಾರ ಎಂದೇ ಭಾವಿಸಿಕೊಂಡಿದ್ದ. ಹೀಗಾಗಿಯೇ ಅವನಿಗೆ ಬೇಹುಗಾರಿಕೆಯನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡುವುದು ಸಾಧ್ಯವಾದದ್ದು.
ಇಂಗ್ಲೆಂಡು ಮತ್ತು ಸಮೀಪದ ದೇಶಗಳಲ್ಲಿ ಓದಿದ್ದರಿಂದ ಲೇ ಕ್ಯೂ ಮೂರುನಾಲ್ಕು ಭಾಷೆಗಳು ಸರಾಗವಾಗಿ ಬರುತ್ತಿದ್ದವು. ತುಂಬ ಚೆನ್ನಾಗಿ ಇಂಗ್ಲಿಷ್, ಸ್ಪ್ಯಾನಿಷ್, ಇಟಾಲಿಯನ್ ಮತ್ತು ಫ್ರೆಂಚ್ ಮಾತಾಡುತ್ತಿದ್ದ. ಓದು ಮುಗಿಸಿ ಊರು ಸುತ್ತಲು ಹೊರಟ ಲೇ ಕ್ಯೂ ತನಗೊಪ್ಪುವ ವೃತ್ತಿ ಎಂಬ ಕಾರಣಕ್ಕೆ ಪತ್ರಿಕೋದ್ಯಮ ಆರಿಸಿಕೊಂಡ. ಗ್ಲೋಬ್ ಪತ್ರಿಕೆಯ ಸಾಗರೋತ್ತರ ಸಂಪಾದಕನಾದ. ಡೇಲಿ ಮೇಲ್ ಪತ್ರಿಕೆಯ ಯುದ್ಧ ವರದಿಗಾರನಾದ. ಯುದ್ಧದ ವರದಿ ಮಾಡುವುದಕ್ಕೆ ಹೊರಟವನನ್ನು ಆಕರ್ಷಿಸಿದ್ದು ಬೇಹುಗಾರಿಕೆ. ತನ್ನದೇ ಮಟ್ಟದಲ್ಲಿ ಅವನು ಗೂಢಚಾರಿಕೆಯನ್ನೂ ಶುರು ಮಾಡಿದ. ಅದು ಅವನನ್ನು ಎಷ್ಟು ಒಳಗೊಂಡಿತೆಂದರೆ ಹಟತೊಟ್ಟು ಅವನು ಗುರಿಯಿಡುವುದನ್ನು ಕಲಿತ. ಇವತ್ತು ಜೇಮ್ಸ್ ಬಾಂಡ್ ಬೆನ್ನ ಹಿಂದಿನಿಂದ, ಎಡಗೈ ಬುಡದಿಂದ ಗುರಿಯಿಟ್ಟು ರಿವಾಲ್ವರ್ ಚಲಾಯಿಸುವುದನ್ನು ನೀವು ನೋಡಿರುತ್ತೀರಿ. ಅದಕ್ಕೆ ಸ್ಪೂರ್ತಿ ಲೇ ಕ್ಯೂ. ಅವನು ಅದೆಲ್ಲವನ್ನೂ ತಮಾಷೆಗಾಗಿ ಮಾಡುತ್ತಿದ್ದ. ಎಂದೂ ಗುರಿ ತಪ್ಪುತ್ತಿರಲಿಲ್ಲ.
ಇಟೆಲಿಯ ಸೀಕ್ರೆಟ್ ಪೊಲೀಸ್ ಮುಖ್ಯಸ್ಥರಿಂದ ಹಿಡಿದು ಇಂಗ್ಲೆಂಡಿನ ಉನ್ನತ ಅಧಿಕಾರಿಗಳ ತನಕ ಎಲ್ಲರೊಂದಿಗೂ ಸಂಪರ್ಕ ಇಟ್ಟುಕೊಂಡಿದ್ದವನು ಲೇ ಕ್ಯೂ. ತಾನು ಹೋದ ದೇಶಗಳ ಬಗ್ಗೆ ವಿಶಿಷ್ಟ ಒಳನೋಟ ಇಟ್ಟುಕೊಂಡು ಬರೆಯುತ್ತಿದ್ದ ಲೇ ಕ್ಯೂ ತನ್ನಷ್ಟಕ್ಕೆ ತಾನೇ ಒಂದು ಥಿಯರಿ ಹುಟ್ಟುಹಾಕಿದ್ದ. ಅದೆಂದರೆ ಬ್ರಿಟಿಷರು ಸೋಮಾರಿಗಳು. ಅವರ ಜೀವನಶೈಲಿಯೆಂದರೆ ಜರ್ಮನ್ನರಿಗೆ ಇಷ್ಟ. ಅಪಾರ ಸಂಪತ್ತು ತುಂಬಿರುವ ಬ್ರಿಟನ್ನಿಗೆ ಬಂದು ನೆಲೆಸುವುದಕ್ಕೆ ಯಾರೂ ತಯಾರಿಲ್ಲ. ಹಾಗೆ ಬರುವುದಕ್ಕೆ ಬ್ರಿಟನ್ ಅವಕಾಶ ಕೊಡುವುದೂ ಇಲ್ಲ. ಹೀಗಾಗಿ ಒಂದಲ್ಲ ಒಂದು ದಿನ ಯಾವುದಾದರೊಂದು ದೇಶ ಬ್ರಿಟನ್ನಿನ ಮೇಲೆ ದಾಳಿ ಮಾಡಿ ಅದನ್ನು ತನ್ನ ವಶಪಡಿಸಿಕೊಳ್ಳುತ್ತದೆ. ಅದು ಆಗಿಯೇ ಹೋಗುತ್ತಿತ್ತೋ ಏನೋ, ಅದಕ್ಕೂ ಮುಂಚೆ ಬ್ರಿಟನ್ ಎಚ್ಚೆತ್ತುಕೊಂಡಿತು.
ತನ್ನ ಅನುಮಾನಗಳನ್ನು ಅಧಿಕಾರಿಗಳ ಮುಂದಿಡುವುದಕ್ಕೆ ಅವನು ಎಂದೂ ಹಿಂಜರಿಯುತ್ತಿರಲಿಲ್ಲ. ಅವನೊಬ್ಬ ಪತ್ರಕರ್ತನೆಂದೂ ಕತೆಗಾರನೆಂದೂ ಅವನನ್ನು ಅಧಿಕಾರಿಗಳು ಅಷ್ಟೇನೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆಗೆಲ್ಲ ಸಿಟ್ಟಿಗೆದ್ದು ಅವರ ಲೆಕ್ಕಾಚಾರವೇ ಬುಡಮೇಲಾಗುವಂಥ ವರದಿಗಳನ್ನು ಬರೆದು ಲೇ ಕ್ಯೂ ತಾನೇನು ಅನ್ನುವುದನ್ನು ತೋರಿಸಿಕೊಡುತ್ತಿದ್ದ. ಇದನ್ನು ಮತ್ತೆ ಮತ್ತೆ ಬರೆಯುವುದಕ್ಕೆ ಆರಂಭಿಸಿದ ಮೇಲಂತೂ ಅಧಿಕಾರಿಗಳ ಪಾಲಿಗೆ ಅವನು ದೊಡ್ಡ ತಲೆನೋವಾದ. ಅವನ ಬರಹಗಳಲ್ಲಿ ಕಲ್ಪನೆ ಎಷ್ಟು ನಿಜ ಎಷ್ಟು ಎಂದು ವಿಭಾಗಿಸುವುದು ಅವರಿಗೆ ಸಾಧ್ಯವೇ ಆಗುತ್ತಿರಲಿಲ್ಲ.
ಒಮ್ಮೆ ಲೇ ಕ್ಯೂ ಒಂದು ಭಯಾನಕ ವರದಿ ಪ್ರಕಟಿಸಿದ. ಅದರಲ್ಲಿ ಬರ್ಲಿನ್ನಲ್ಲಿರುವ ತನ್ನ ಗೆಳೆಯನೊಬ್ಬ, ಬ್ರಿಟನ್ನಿನ ಉದ್ದಗಲ ಹಬ್ಬಿಕೊಂಡಿರುವ ಜರ್ಮನ್ ಗೂಢಚಾರರ ಜಾಲದ ವಿವರ ನೀಡುವುದಾಗಿ ಹೇಳಿದ್ದಾನೆಂದು ಬರೆದುಬಿಟ್ಟ. ಅಧಿಕಾರಿಗಳು ಅವನನ್ನು ಕರೆಸಿ ಬರ್ಲಿನ್ ಮಿತ್ರ ನಿನಗೇಕೆ ಆ ವಿವರಗಳನ್ನು ನೀಡುತ್ತಾನೆ ಎಂದು ವಿಚಾರಣೆ ಶುರು ಮಾಡಿದರು. ಮನುಷ್ಯನ ತಲೆಕೆಡುವುದಕ್ಕೆ ದೊಡ್ಡ ಕಾರಣಗಳೇನೂ ಬೇಕಾಗಿಲ್ಲ. ನನ್ನ ಗೆಳೆಯನನ್ನು ಅವನ ಮೇಲಧಿಕಾರಿ ಲೆಕ್ಕಕ್ಕೇ ತಗೊಂಡಿಲ್ಲ. ಹೀಗಾಗಿ ಅವನಿಗೆ ಬೇಸರವಾಗಿದೆ. ಅವನು ಮದುವೆ ಆಗಿರೋದು ಬ್ರಿಟಿಷ್ ಹುಡುಗಿಯನ್ನು. ಹೀಗಾಗಿ ಅವನು ನಮಗೆ ಸಹಾಯ ಮಾಡುತ್ತಿದ್ದಾನೆ ಅಂದುಬಿಟ್ಟ. ಯಾವ ಕಾರಣಕ್ಕೂ ತಾನು ಅವನ ಹೆಸರು ಹೇಳುವುದಿಲ್ಲವೆಂದೂ, ಹಾಗಂತ ಮಾತು ಕೊಟ್ಟಿದ್ದೇನೆಂದೂ ಹೇಳಿದ ಲೇ ಕ್ಯೂ, ಜರ್ಮನ್ ಗೂಢಚರ ಸಂಸ್ಥೆಯಲ್ಲಿ ಆತ ಮಾಡಿದ ಭಾಷಣದ ವಿವರಗಳನ್ನೂ ನೀಡುವುದಾಗಿ ಹೇಳಿದ್ದಾನೆ ಎಂದು ಹೇಳಿ ಅಧಿಕಾರಿಗಳ ನಿದ್ದೆಗೆಡಿಸಿದ. ತನ್ನ ಮಿತ್ರನನ್ನು ಗುಟ್ಟಾಗಿ ಭೇಟಿ ಆಗಿ ಬಂದೆ ಎಂದು ಹೇಳಿ, ಆತ ಮಾಡಿದ ಭಾಷಣದ ವಿವರಗಳನ್ನು ಚಿತ್ರ ಸಮೇತ ಬರೆದು ತೋರಿಸಿದ. ಅದರಲ್ಲಿ ಜರ್ಮನ್ ಯುದ್ಧಕ್ಕೆ ಬಳಸಲು ಉದ್ದೇಶಿಸಿರುವ ವಿಮಾನ, ಫಿರಂಗಿ ಮತ್ತು ಅವರ ನೌಕಾನೆಲೆಗಳ ಚಿತ್ರಗಳೂ ಇದ್ದವು. ಆ ವಿವರಗಳು ಎಷ್ಟು ಕರಾರುವಾಕ್ಕಾಗಿದ್ದವು ಎಂದರೆ ಅದನ್ನು ಅಧಿಕಾರಿಯೇ ಕೊಟ್ಟಿದ್ದಾನೆ ಎಂದು ನಂಬದೇ, ಸೈನ್ಯಾಧಿಕಾರಿಗಳಿಗೆ ಬೇರೆ ದಾರಿಯೇ ಇರಲಿಲ್ಲ.
ಅಷ್ಟೆಲ್ಲ ಮಾಡಿಯೂ ಅವನನ್ನು ಇಂಗ್ಲೆಂಡ್ ಒಪ್ಪಿಕೊಳ್ಳಲೇ ಇಲ್ಲ. ಅದಕ್ಕೆ ಕಾರಣ ಅವನು ಬರೆಯುವಾರ ಅರೆಬರೆ ವಿವರಗಳನ್ನು ಮಾತ್ರ ನೀಡುತ್ತಿದ್ದದ್ದು. ಅದಕ್ಕಿಂತ ಹೆಚ್ಚಾಗಿ ಬ್ರಿಟಿಷರು, ಅವನು ತಮ್ಮ ದೇಶದವನಲ್ಲ ಎಂದು ಪರಗಣಿಸಿದ್ದರು. ವಿದ್ಯಾಭ್ಯಾಸ, ಒಳ್ಳೆಯ ಕ್ಲಬ್ಬಿನ ಸದಸ್ಯತ್ವ ಇಲ್ಲದ ಅವನು ಬಹುಭಾಷಾ ಪಂಡಿತನಾದದ್ದೂ ಬ್ರಿಟಿಷರ ನಿರ್ಲಕ್ಷ್ಯಕ್ಕೆ ಕಾರಣವಾಯಿತು. ಆ ಸೇಡು ತೀರಿಸಿಕೊಳ್ಳಲೆಂದೇ ಅವನು ಗೆಳೆಯನೊಬ್ಬನ ಜೊತೆ ಸೇರಿ, ಯುದ್ಧದ ಬಗ್ಗೆ, ಯುದ್ಧವಾಗುವ ಸಾಧ್ಯತೆಯ ಬಗ್ಗೆ ನಾಲ್ಕು ವರ್ಷಗಳ ಕಾಲ ಡೇಲಿ ಮೇಲ್ ಪತ್ರಿಕೆಗೆ ಬರೆದ. ಅದು ಪ್ರಕಟವಾಗುತ್ತಿದ್ದಂತೆ ಪತ್ರಿಕೆಯ ಪ್ರಸಾರ ಮತ್ತು ಅಧಿಕಾರಿಗಳ ಸಿಟ್ಟು ಏರುತ್ತಾ ಹೋಯಿತು. ಜನ ಅವನ ವರದಿಗಳನ್ನು ನಂಬಿ, ಅಧಿಕಾರಿಗಳನ್ನು ಪ್ರಶ್ನಿಸತೊಡಗಿದರು. ಈ ಮಧ್ಯೆ ಅವನೊಂದು ಬೇಹುಗಾರಿಕಾ ಸಂಸ್ಥೆ ಶುರು ಮಾಡಿದ್ದೂ ಅಲ್ಲದೇ, ಆರು ಮಂದಿಗೆ ಕೆಲಸ ಕೊಟ್ಟ. ಆ ಹುಡುಗರೋ ಅವನಿಗಂತ ಜೋರಾಗಿ ಓಡಾಡಿಕೊಂಡಿದ್ದರು. ಅವರೂಬ್ಬರಿಗೂ ನಾನು ಸಂಬಳ ಕೊಡಲಿಲ್ಲ. ಅವರೆಲ್ಲ ದೇಶಪ್ರೇಮದಿಂದ ಬಂದವರು. ದೇಶಕ್ಕಾಗಿಯೇ ಅಪಾಯವನ್ನು ತಂದುಕೊಳ್ಳಲು ಸಿದ್ಧರಾದವರು. ಆ ಹುಡುಗರು ರಹಸ್ಯವಾಗಿ ಜರ್ಮನಿಗೆ ಹೋಗಿ ಅಲ್ಲಿನ ವಿವರಗಳನ್ನು ನನಗೆ ರವಾನಿಸುತ್ತಿದ್ದರು ಎಂದು ಲೇ ಕ್ಯೂ ಹೇಳಿಕೊಂಡು ಓಡಾಡುತ್ತಿದ್ದ.
ಈ ಮಧ್ಯೆ ಅವನ ಖಾಸಗಿ ಬದುಕಿನ ವಿವರಗಳನ್ನೂ ಅವನು ಬರೆದುಕೊಳ್ಳುತ್ತಿದ್ದ. `ನಾನು ಊರೂರು ಸುತ್ತುತ್ತಿದ್ದೆ. ಕೈಲಿ ತುಂಬ ದುಡ್ಡಿರುತ್ತಿತ್ತು. ನಾನು ಸಲಿಂಗಕಾಮಿಯಾಗಿದ್ದೆ. ದುಡ್ಡು ಚೆಲ್ಲಿದರೆ ಚೆಂದದ ಹುಡುಗರು ಒದಗುತ್ತಿದ್ದರು. ನನ್ನ ಗೆಳೆಯರ ಬಳಗ ತುಂಬ ದೊಡ್ಡದಿತ್ತು. ಜರ್ಮನ್ ಅಧಿಕಾರಿಗಳಂತೂ ನಾನು ಹೇಳಿದ ಹಾಗೆ ಕೇಳುತ್ತಿದ್ದರು. ಡಸಲ್ಡಾರ್ಫ್ನಲ್ಲಿರುವ ಜರ್ಮನ್ನರ ಗನ್ ಫ್ಯಾಕ್ಟರಿಗೆ ಕಾಲಿಟ್ಟ ಏಕೈಕ ಇಂಗ್ಲಿಷ್ ಪ್ರಜೆ ನಾನು. ಪತ್ತೇದಾರಿಕೆ ಮಾಡಿ ನಾನು ಕಳಿಸಿಕೊಟ್ಟ ವಿವರಗಳನ್ನೆಲ್ಲ ಬ್ರಿಟಿಷ್ ಅಧಿಕಾರಿಗಳು ಸರಿಯಾಗಿ ಅಭ್ಯಾಸ ಮಾಡಿದ್ದರೆ, ಮಹಾಯುದ್ಧಗಳೇ ನಡೀತಿರಲಿಲ್ಲ.’
ಹೀಗೆ ಸಾಗುತ್ತಿತ್ತು ಅವನ ಚಿಂತನೆ.
ಅವನನ್ನು ಯಾರು ನಂಬದೇ ಹೋದರೂ ಇಂಗ್ಲೆಂಡ್ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ತ ಎಡ್ಮಂಡ್ ನಂಬಿದ್ದ.. ಅವನಿಗೂ ಜರ್ಮನ್ನರು ಒಂದಲ್ಲ ಒಂದು ದಿನ ಮುತ್ತಿಗೆ ಹಾಕಿ ತಮ್ಮನ್ನು ಮುಗಿಸುತ್ತಾರೆ ಅಂತ ಅನ್ನಿಸತೊಡಗಿತ್ತು. ಜರ್ಮನ್ ಬೇಹುಗಾರರು ಗುರುತು ಸಿಗದ ಹಾಗೆ ಇಂಗ್ಲೆಂಡಿನ ತುಂಬ ತುಂಬಿಕೊಂಡಿದ್ದಾರೆ. ಅವರನ್ನು ಓಡಿಸದ ಹೊರತು ಉಳಿಗಾಲ ಇಲ್ಲ ಎಂದು ಅವರಿಬ್ಬರೂ ಏಕಾಭಿಪ್ರಾಯಕ್ಕೆ ಬಂದಿದ್ದರು. ಹೊರಜಗತ್ತಿಗೆ ಅಪರಿಚಿತರ ಹಾಗಿದ್ದರೂ ಎಡ್ಮಂಟ್ ಲೇ ಕ್ಯೂ, ಪರಸ್ಪರ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು. ಕಲ್ಪನೆಯಲ್ಲೇ ಕತೆ ಕಟ್ಟಬಲ್ಲ ಎಡ್ಮಂಡ್ ಪಾಲಿಗಂತೂ ಲೇ ಕ್ಯೂ ವರಪ್ರದಾಯಕ ಆಗಿಬಿಟ್ಟಿದ್ದ.
ಜರ್ಮನ್ನರ ಗೂಢಚಾರಿಕೆಯ ಸ್ವರೂಪ ಹೇಗಿದೆ ಅನ್ನುವುದನ್ನು ಮೊದಲು ತಿಳಿಸಿದವನು ಲೇ ಕ್ಯೂ. ಇಂಗ್ಲೆಂಡಿನಲ್ಲಿ ಸುಮಾರು ಐದು ಸಾವಿರ ಮಂದಿ ಜರ್ಮನ್ ಏಜಂಟರಿದ್ದಾರೆ. ಅವರನ್ನು ಫಿಕ್ಸೆಡ್ ಏಜಂಟ್ ಎಂದು ಕರೆಯುತ್ತಾರೆ. ಅವರು ವಿವಿಧ ಹುದ್ದೆಗಳನ್ನು ಮಾಡುತ್ತಾ, ಯಾರಿಗೂ ಅನುಮಾನ ಬರದಂತೆ ಬದುಕುತ್ತಾರೆ. ಅವರಿಗೆ ಒಂದು ಗುರಿಯನ್ನು ಕೊಟ್ಟಿರುತ್ತಾರೆ. ಒಂದು ರಹಸ್ಯ ಮಾಹಿತಿಯನ್ನು ಕಲೆಹಾಕುವುದಷ್ಟೇ ಅವರ ಕೆಲಸ. ಹಾಗೆ ಕಲೆ ಹಾಕಿದ ಮಾಹಿತಿಯನ್ನು ಅವರು ಕಾಲಕಾಲಕ್ಕೆ, ಅವರನ್ನು ಭೇಟಿಯಾಗುವ ಟ್ರಾವೆಲಿಂಗ್ ಏಜಂಟನಿಗೆ ಕೊಡಬೇಕು. ಅಲ್ಲಿಗೆ ಅವರ ಜವಾಬ್ದಾರಿ ಮುಗಿಯಿತು ಎಂದೆಲ್ಲ ಲೇ ಕ್ಯೂ ಎಲ್ಲಾ ಬಲ್ಲವನಂತೆ ಬರೆಯುತ್ತಿದ್ದ.
ಬ್ರಿಟಿಷ್ ಮೇಲಧಿಕಾರಿಗಳ ಮುಂದೆ ಎಡ್ಮಂಡ್ ಮಾತಾಡುತ್ತಾ, ಇಂಗ್ಲೆಂಡಿನ ತುಂಬ ಸ್ಥಿರ ಮತ್ತು ಚರ ಬೇಹುಗಾರರಿದ್ದಾರೆ ಎಂದು ಹೇಳಿದ್ದು ಕೂಡ ಲೇಕ್ಯೂ ಬರೆದಿದ್ದನ್ನು ಓದಿದ ನಂತರವೇ. ಒಂದು ಕಾದಂಬರಿಯ ಓದು ಎಡ್ಮಂಡ್ ಮನಸ್ಸನ್ನೇ ಬದಲಾಯಿಸಿತ್ತು. ಈ ಅಧಿಕಾರಿಗಳ ಕಾಟದಿಂದ ಪಾರಾಗುವುದಕ್ಕೆ ಇರುವ ಏಕೈಕ ದಾರಿಯೆಂದರೆ ಅವರಿಗೆ ಏನಾದರೊಂದು ಮಾಹಿತಿ ನೀಡುತ್ತಿರುವುದು. ಅವರು ಅದನ್ನು ಓದುತ್ತಾರೋ ಇಲ್ಲವೋ ಎಂದೂ ಗಮನಿಸುವ ಹಾಗಿಲ್ಲ. ಗಮನಿಸಕೂಡದು ಎಂದು ಎಡ್ಮಂಡ್ ನಂಬಿದ್ದ.
ಲೇ ಕ್ಯೂ ಇಂಗ್ಲೆಂಡಿನ ಉದ್ದಗಲ ಸುತ್ತಾಡಿ, ಅದರ ಜೊತೆಗೇ, ತನ್ನ ಹುಡುಗನ್ನು ಬಿಟ್ಟು ಮಾಹಿತಿ ಕಲೆ ಹಾಕುತ್ತಿದ್ದ. ಆ ಮಾಹಿತಿಯನ್ನಿಟ್ಟುಕೊಂಡು ಏನೇನೋ ಬರೆಯುತ್ತಿದ್ದ. ಒಂದು ಸಲವಂತೂ ಇಂಗ್ಲೆಂಡಿನಲ್ಲಿರುವ ಕ್ಷೌರಿಕರೆಲ್ಲ ಗೂಢಚಾರರು ಎಂದು ಬರೆದು ಬಿಟ್ಟಿದ್ದ. ಅದನ್ನು ಓದಿದ ಎಡ್ಮಂಡ್, ಒಬ್ಬ ಜರ್ಮನ್ ಕ್ಷೌರಿಕನನ್ನು ಕರೆತಂದು ಹಿಗ್ಗಾಮುಗ್ಗಾ ಬಡಿದು ಅವನ ಗ್ಯಾಂಗು ಹೇಗೆ ಕೆಲಸ ಮಾಡುತ್ತಿದೆ ಎಂದು ಬಾಯಿಬಿಡಿಸುವುದಕ್ಕೂ ಯತ್ನಿಸಿದ್ದ. ಅದು ಅವನಿಗೆ ಮುಳುವಾಯಿತು. ಲೇ ಕ್ಯೂ ಮಹಾನ್ ಸುಳ್ಳುಗಾರ ಎಂಬ ತೀರ್ಮಾನಕ್ಕೆ ಬರುವ ಹೊತ್ತಿಗಾಗಲೇ ಯುದ್ಧ ಶುರುವಾಗಿತ್ತು. ಎಡ್ಮಂಡ್ ಮೂರ್ಖ ಮತ್ತು ಅತಿಮಾತುಗಾರ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದುಬಿಟ್ಟಿದ್ದರು.
ಈ ಮಧ್ಯೆ ಊರೂರು ಸುತ್ತುತ್ತಾ, ತನ್ನ ಗೆಳತಿಯರ ಜೊತೆ ಅಲೆದಾಡುತ್ತಾ ಲೇ ಕ್ಯೂ ಬೇರೆಯೇ ರೀತಿಯಲ್ಲಿ ಪತ್ತೇದಾರಿಕೆ ಆರಂಭಿಸಿದ್ದ. ಎಡ್ಮಂಡ್ ಮಾತಿನ ಸತ್ಯಾಸತ್ಯತೆಯನ್ನು ಪತ್ತೆ ಮಾಡುವುದಕ್ಕೆಂದೇ ಜರ್ಮನಿಗೆ ಹೋಗಿ ಬಂದ ಹಾಲ್ಡೇನ್, ಇದೆಲ್ಲ ಕಾಗಕ್ಕ ಗುಬ್ಬಕ್ಕ ಕತೆ ಎಂದು ತಳ್ಳಿಹಾಕಿದ್ದ.
ಅಷ್ಟು ಹೊತ್ತಿಗೆ ತನ್ನ ಪ್ರೇಯಸಿಯನ್ನು ಕಟ್ಟಿಕೊಂಡು ಲೇ ಕ್ಯೂ ದೇಶ ಸುತ್ತುತ್ತಿದ್ದ.
]]>





0 Comments