ಜೋಗಿ ಲಹರಿ: ಹಳೆಯ ಹಾಡಿನ ಹಾಗೆ ಬೆಳೆವ ಪ್ರೀತಿಯ ನೆನೆದು

jogi22

‘ನನ್ನ ಆತ್ಮಸಂಗಾತಿ ಯಾರೆನ್ನುವುದನ್ನು ನಾನು ಹೇಗೆ ಕಂಡುಕೊಳ್ಳಲಿ?’

‘ by risking it.’

ನಮ್ಮ ಸುಡುಗಾಡು ಸಂಕಟಗಳಿಗೆ ಕಾರಣವೂ ಉತ್ತರವೂ ಈ ಪ್ರಶ್ನೋತ್ತರದಲ್ಲಿ ಇದ್ದಂತಿದೆ. ಒಮ್ಮೆ ಓದಿದಾಗ ಒಂದು ಸರಳ ಮಾತುಕತೆಯಂತೆ ಕಂಡದ್ದು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಹೋದ ಹಾಗೇ ಯಾಕೋ ಗಾಢವಾಗುತ್ತಾ ಹೋಯಿತು.

ಆತ್ಮಸಂಗಾತಿ- soulmate ಅನ್ನುವ ಪದ ಬಳಸುತ್ತಾನೆ ಅವನು. ಗೆಳೆಯ, ಗಂಡ, ಸ್ನೇಹಿತೆ, ಹೆಂಡತಿ, ಒಡನಾಡಿ, ಆಪ್ತ, ಆತ್ಮೀಯ- ಮುಂತಾದ ಸಂಬಂಧಗಳಾಗಿದ್ದರೆ ಬಹುಶಃ ರಿಸ್ಕ್ ಎನ್ನುವ ಪದದ ಅಗತ್ಯವೇ ಇರುತ್ತಿರಲಿಲ್ಲ. ಈ ಎಲ್ಲಾ ಸಂಬಂಧಗಳಿಂದ ಕಳಚಿಕೊಳ್ಳಬಹುದು. ತೀರಾ ಹಿಂಸೆಯಾದರೂ ತೊಲಗಿ ಪಾರಾಗಬಹುದು. ತೊಲಗಿ ಹೋಗು ಎಂದು ಕತ್ತು ಹಿಡಿದು ಪ್ರೀತಿಯನ್ನೂ ಅಷ್ಟು ದಿನದ ಒಡನಾಟವನ್ನೂ ಮನದ ಹೊಸಿಲಾಚೆಗೆ ತಳ್ಳಿ ನಿಟ್ಟುಸಿರಿಡಬಹುದು.

ಆತ್ಮಸಂಗಾತ ಹಾಗಲ್ಲ.

‘ಒಂದೊಳ್ಳೆ ಬಾಯ್‌ಫ್ರೆಂಡ್ ಹುಡುಕಿಕೋ’ ಅಂದೆ ಅವಳಿಗೆ.

‘ಆಗೋಲ್ಲ’ ಅಂದಳು. ಅದು ಅಷ್ಟು ಸುಲಭ ಅಲ್ಲ. ಅವನು ಎಂಥೋನು, ನನಗೆ ಸರಿಹೋಗುತ್ತಾನಾ, ಅವನ ಟೇಸ್ಟ್ ಏನು, ನನ್ನ ಆಸಕ್ತಿಗಳೇನು. ಒಂದು ವರುಷದ ನಂತರ ಬೋರಾಗೋಕೆ ಶುರುವಾದರೆ ಸಹಿಸಿಕೊಳ್ಳೋದಾ, ದೂರ ಮಾಡೋದಾ? ಆಮೇಲೆ ಅವನನ್ನು ಬಿಡೋ ಕಷ್ಟ. ಆ ಕಿರಿಕಿರಿ, ಸುಳ್ಳು ಸುಳ್ಳು ಪ್ರೀತಿಸ್ತೀನಿ ಅಂತ ಮುಂದುವರಿಸಿಕೊಂಡು ಹೋದರೆ ನನ್ನ ಜೀವಕ್ಕೇ ಸಂಕಟ. ಬಿಟ್ಟರೆ ಇಬ್ಬರಿಗೂ ಮಿಡುಕಾಟ. ಅವನು ನನ್ನ ಬಗ್ಗೆ ಏನೇನೋ ಹೇಳ್ಕೊಂಡು ಓಡಾಡೋದು. ಮತ್ತೆ ಜಗಳ. ಎಷ್ಟೋ ದಿನದ ನಂತರ ಮತ್ತೆ ಅವನೇ ಸರಿ ಅನ್ನಿಸೋದು. ಅಯ್ಯೋ ಆ ರಗಳೆ ಬೇಡವೇ ಬೇಡ’ ಅಂದಳು.

ಸಂಬಂಧವೊಂದನ್ನು ಕಟ್ಟಿಕೊಳ್ಳುವ ಕೆಡವಿಕೊಳ್ಳುವ ಸಂಕಟದಲ್ಲೇ ಬದುಕು ಸಾಗುತ್ತಿರುತ್ತದೆ. ನಾವೆಷ್ಟು ಹಿಂಜರಿಯ ಮನುಷ್ಯರಾಗುತ್ತಾ ಹೋಗುತ್ತೇವೆ ಎಂದರೆ ನಾವು ಕೆಲಸ ಮಾಡುವ ಕಂಪೆನಿಯ ಯಜಮಾನ ಕೂಡ ನಮಗೆ ಪ್ರೇಮಿಯ ಹಾಗೆ, ಗಂಡನ ಹಾಗೆ ಕಾಣಿಸತೊಡಗುತ್ತಾನೆ. ಪತಿವ್ರತೆಯೂ ಸಮಾಜದ ಕುಹಕದ ಮಾತುಗಳಿಗೆ ಹೆದರುವವಳೂ ಆದ ಹೆಂಡತಿಯ ಹಾಗೆ ನಾವೂ ಕೂಡ ಕೆಲಸ ಬಿಡ್ತೀವಿ ಅಂತ ಹೇಳೋದಕ್ಕೆ ಅಂಜುತ್ತೇವೆ. ಮಲ್ಟಿನ್ಯಾಷನಲ್ ಥರದ ಸಂಸ್ಥೆಗಳಾದರೆ ಅಂತ ಮಾತು ಬರೋದಿಲ್ಲ ನಿಜ. ಅದೊಂದು ಥರ ಸಾರ್ವಜನಿಕ ಟೆಲಿಫೋನ್ ಬೂತ್ ಇದ್ದ ಹಾಗೆ. ದುಡ್ಡು ಹಾಕಿ ಕರೆ ಮಾಡಿ ಎದ್ದು ಬಂದರೆ ಮುಗೀತು!

ಆದರೆ ಖಾಸಗಿ ಸಂಬಂಧದ ಮೇಲೆ ನಿಂತಿರುವ ಮಾಲಿಕ-ನೌಕರ ಸಂಬಂಧಗಳ ಕತೆ ಹಾಗಲ್ಲ. ಎಷ್ಟೋ ಸಾರಿ, ನಾವೇ ಇಡೀ ಸಂಸ್ಥೆಯ ಆಧಾರಸ್ತಂಭ ಅಂದುಕೊಳ್ಳುತ್ತೇವೆ. ಬಿಟ್ಟು ಬರುವುದು ದಾಂಪತ್ಯವೆಂಬ ಸಂಬಂಧವನ್ನು ಕಳಚಿಕೊಳಂಡಷ್ಟೇ ಕಷ್ಟ ಎನ್ನುವ ಭಾವನೆಯಲ್ಲಿ ಸಾಕಷ್ಟು ನರಳಿ ನರಳಿಯೇ ಆ ನಿರ್ಧಾರವನ್ನು ತಿಳಿಸುತ್ತೇವೆ. ಇಂಥ ಸದ್ವಿನಯ ಸಂಪನ್ನರು ಆತ್ಮಸಂಗಾತಿಯನ್ನು ಹುಡುಕಿಕೊಳ್ಳುವುದೆಂದರೆ ಅದು ನಿಜಕ್ಕೂ ರಿಸ್ಕಿಯೇ.

-2-

2698700170_2b1331f2933

ಆತ್ಮಸಂಗಾತಿಯನ್ನು ಹುಡುಕುತ್ತಾ ಹೊರಟರೆ ಸೋಲು, ಹತಾಶೆ, ಭ್ರಮನಿರಸನ ಎಲ್ಲವೂ ಎದುರಾಗುತ್ತದೆ. ಆದರೂ ಹುಡುಕುತ್ತಲೇ ಇರಬೇಕು. ಹುಡುಕಾಟದ ಕೊನೆಗೆ ಹುಡುಕಿದ್ದು ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆ ಹುಡುಕಾಟದ ಹಾದಿಯೇ ಬದುಕುವ ಹುಮ್ಮಸ್ಸನ್ನು ತುಂಬುತ್ತಾ ಹೋಗುತ್ತದೆ. ಪ್ರೀತಿಯ ಹುಡುಕಾಟ ಕೆಲಸ ಹುಡುಕಿದ ಹಾಗಲ್ಲ. ಕತೆ ಬರೆಯುವ ಹಾಗಲ್ಲ. ಕವಿತೆ ಬರೆದು ಸಂಭ್ರಮಿಸಿದ ಹಾಗಲ್ಲ. ಅದೊಂದು ಮುಗಿವಿಲ್ಲದ, ದಣಿವಿಲ್ಲದ, ಇಡೀ ಬದುಕನ್ನು ಸುಡುತ್ತಾ ಹೋಗುವ ಬೆಂಕಿ. ಹುಡುಕಿದ್ದು ಸಿಕ್ಕಿದ ನಂತರವೂ ಹುಡುಕಾಟ ಮುಂದುವರಿಯಬಹುದು. ಹುಡುಕಾಟ ಮುಗಿದ ನಂತರವೂ ಹುಡುಕಿದ್ದು ಸಿಗದಿರಬಹುದು. ಅತ್ಯುತ್ತಮ ಕವಿತೆಯ ಅರ್ಥವಾಗದ ಸಾಲಿನ ಹಾಗೆ ಬದುಕು ಕಾಡುತ್ತಲೇ ಇರುತ್ತದೆ. ಮತ್ತೆ ಮತ್ತೆ ಅರ್ಥವನ್ನು ಅನುಭವವಾಗಿಸಿಕೊಳ್ಳಲು ತುಡಿಯುತ್ತದೆ.

ದೂರದ ನಾಡಿಗೆ, ಗೊತ್ತಿಲ್ಲದ ತಾಣಕ್ಕೆ ಪ್ರಯಾಣ ಹೊರಟು ನಿಂತಾಗ ಇರುವ ಉತ್ಸಾಹ, ಪ್ರಯಾಣ ಮುಂದುವರಿಸುವ ಹೊತ್ತಿಗೆ ಇರುತ್ತದಾ? ಇಡೀ ಪಯಣವೇ ನಿರರ್ಥಕ ಅನ್ನಿಸಬಹುದು. ಬೇರೆ ಹಾದಿಯನ್ನು ಹಿಡಿಯಬೇಕಿತ್ತು ಎಂದು ಸವೆಯದ ಹಾದಿಯಲ್ಲಿ ಬಹುದೂರ ಸಾಗಿದ ನಂತರ ಅನ್ನಿಸಬಹುದು. ಬದುಕು ನಶ್ವರ, ಕ್ಷಣಿಕ. ಹಾಗಿರುವಾಗ ಶಾಶ್ವತ ಪ್ರೀತಿಯನ್ನು ಹುಡುಕುವುದಕ್ಕೆ ಯತ್ನಿಸುವುದರಲ್ಲಿ ಅರ್ಥವಿಲ್ಲ ಎಂಬ ಭಾವ ಗಾಢವಾಗುತ್ತಾ ಹೋಗಬಹುದು. ನಡುಗುವ ಚಳಿಯಲ್ಲಿ ಸುಡುಸುಡುವ ಬೆಂಕಿಯ ಮೇಲೆ ಕೈ ಚಾಚಿಕೊಂಡು ಬೆಚ್ಚಗಾಗಿಸಿಕೊಳ್ಳುತ್ತಾ ಕೂತವನಿಗೆ ಕ್ರಮೇಣ ಸುಟ್ಟುಹೋಗುತ್ತಿರುವುದು ತಾನೇ ಅಂತ ಗೊತ್ತಾದಾಗ ಎದುರಾಗುವ ಭಾವನೆ ಇದೆ ನೋಡಿ, ಅದು ಪ್ರೀತಿಯ ಉತ್ಕಟ ಸ್ಥಿತಿ. ಭಕ್ತಿಯ ಹಾಗೆ, ಸಂಪೂರ್ಣ ಶರಣಾಗತಿಯ ಹಾಗೆ. ತನ್ನನ್ನು ತಾನು ಒಪ್ಪಿಸಿಕೊಂಡು ನಿಸೂರಾದ ಹಾಗೆ.

ಯೇಟ್ಸ್ ಬರೆಯುತ್ತಾನೆ:

SWEETHEART, do not love too long:

I loved long and long,

And grew to be out of fashion.

Like an old song.

ತುಂಬ ಕಾಲ ಪ್ರೀತಿಸುತ್ತಲೇ ಇರಬೇಡ, ನಾನೂ ಹಾಗೇ ಪ್ರೀತಿಸಿದ್ದೆ. ಆಮೇಲೆ ಹಳೆಯ ಹಾಡಿನ ಹಾಗೆ ಕಣ್ಮರೆಯಾದೆ. ಪ್ರೀತಿ ಮರೆಯಾದದ್ದನ್ನು ಹಳೆಯ ಹಾಡಿಗೆ ಹೋಲಿಸಿದ್ದು ಎಷ್ಟು ಚೆಂದ ನೋಡಿ. ಒಂದೊಮ್ಮೆ ಇಷ್ಟವಾದ ಹಾಡು, ಕ್ರಮೇಣ ಹಳೆಯದಾಗುತ್ತದೆ. ಅದರ ಬಗ್ಗೆ ಯಾರೂ ಮಾತಾಡುವುದಿಲ್ಲ. ನಾವು ಹದಿಹರೆಯದಲ್ಲಿದ್ದಾಗ ಕೂತು ಕೇಳಿದ ಹಾಡಿನ ಕುರಿತು ಮಾತಾಡಬೇಕಿದ್ದರೆ ಮತ್ತೆ ಹದಿಹರೆಯದ ಗೆಳೆಯರೇ ಬೇಕು. ಒಂಟಿಯಾಗಿದ್ದಾಗ ಆ ಹಾಡು ಇದ್ದಕ್ಕಿದ್ದಂತೆ ನೆನಪಾದೀತು. ತುಟಿಯಲ್ಲೊಂದು ನಗೆ ಅರಳೀತು. ಇಡೀ ದಿನ, ಮನಸ್ಸು ಅದೇ ಹಾಡಿನ ಪಲ್ಲವಿಯನ್ನು ಗುನುಗುತ್ತಾ, ಸಾಗೀತು. ಆದರೂ ಅದು ಹಳೇ ಹಾಡು. ಅದನ್ನು ಕೇಳಿಸಿದರೆ ಕಣ್ಮುಂದಿರುವ ತರುಣನಿಗೆ ಮೆಚ್ಚುಗೆಯಾಗಲಿಕ್ಕಿಲ್ಲ. ಅದೀಗ ಕಾಲದಾಚೆಯ ಹಾಡು

 -3-

ನಮ್ಮ ಹಳೆಯ ಸ್ಕೂಲಿನ ಅಂಗಳದಲ್ಲಿದ್ದ ಜ್ಞಾನವೃದ್ಧ ಮಾವಿನ ಮರ ಅಕಾಲದಲ್ಲಿ ಚಿಗುರುವುದನ್ನು ಕಂಡಾಗ ಜೀವಕ್ಕೆ ಪುಳಕ. ಹಿಂದೊಮ್ಮೆ ನೋಡಿದಾಗ ಅಂಗಾಂಗಳನ್ನು ಕಳಕೊಂಡು ಮೊಂಡಾಗಿ ನಿಂತ ಮರ, ಮೊನ್ನೆ ಮೊನ್ನೆ ಕೆಂದಳಿರ ಚಿಗುರಿಸಿಕೊಂಡು ನಿಂತಿತ್ತು. ಧೂರ್ತ ಮುದುಕನ ನಾಲಗೆಯ ಹಾಗೆ ತಳಿರು ನಳನಳಿಸುತ್ತಿತ್ತು. ಗಾಳಿಗಡ್ಡ ನಿಂತ ಎಲೆಯಿಲ್ಲದ ಬೊಡ್ಡೆಯನ್ನು ಚಿಗುರಿಸಿದ್ದು ಯಾವ ಗೀಳು?

ಧೂರ್ತನಾಗದೇ ಪ್ರೀತಿಸಬೇಡ ಎಂದು ಒಳಮನಸ್ಸು ಹೇಳುತ್ತಿದೆ. ಧೂರ್ತತನಕ್ಕೆ ನನ್ನದೇ ಆದ ಅರ್ಥಗಳು ಹೊಳೆಯುತ್ತಿವೆ. ಅದು ಹುಂಬತನವಲ್ಲ, ಅಪನಂಬುಗೆಯಲ್ಲ, ಒರಟುತನವಷ್ಟೇ ಅಲ್ಲ, ದಟ್ಟ ಕಾಡಿನ ಏಕಾಂತವಲ್ಲ, ಸಹ್ಯಾದ್ರಿ ಪರ್ವತಶ್ರೇಣಿಯ ವಿರಹವೂ ಅಲ್ಲದ ಸ್ಥಿತಿ. ಉತ್ಕಟ ಪ್ರೇಮದಲ್ಲಿ, ಅದನ್ನು ನಿವಾರಿಸಿಕೊಳ್ಳುವ ಹುನ್ನಾರದಲ್ಲಿ, ನಾನೆಂಬ ಅಹಂಕಾರದಲ್ಲಿ, ಅವಳು ವಂಚಿಸಲಿ ಎಂಬ ಸಣ್ಣದೊಂದು ಒಳ ಆಶೆಯಲ್ಲಿ, ಆ ವಂಚನೆಯಲ್ಲಿ ನಾನು ಸಜ್ಜನವಾಗುತ್ತಾ ಹೋಗಬೇಕು ಎಂಬ ದುರಾಸೆಯಲ್ಲಿ ಕಾಲ ಸವೆಯುತ್ತಿದೆ. ದಾರಿ ಸವೆಯುವ ತನಕ ಮಾತು ಅಂದಳು ಆಕೆ. ಬಾಳು ಸವೆಯುವ ತನಕ ಪ್ರೀತಿ ಎಂದೆ ನಾನು. ಅವಳಂದದ್ದೇ ನಿಜ ಇರಬಹುದು. ಅಷ್ಟೊಂದು ಶ್ರದ್ಧೆಯಿಂದ ನಾವು ಯಾವುದನ್ನೂ ಆರಾಧಿಸಿಲ್ಲ, ದೈವವನ್ನು ಕೂಡ. ಪರಮ ಆಸ್ತಿಕನ ಮನದಂಗಳದಲ್ಲೂ ಅಪನಂಬಿಕೆಯ ಸೋನೆ ಮಳೆ. ಆ ತುಂತುರು ಹನಿಗೆ ಅಸ್ತವ್ಯಸ್ತ ರಂಗೋಲಿ.

ಮರಳಿ ಪ್ರೀತಿಯ ಹುಡುಕಾಟಕ್ಕೆ ಬಂದರೆ ಮತ್ತದೇ ಗೊಂದಲ. ನಾವು ಪ್ರೀತಿಯಿಂದ ತಪ್ಪಿಸಿಕೊಳ್ಳುವುದಕ್ಕೆ, ಪಾರಾಗುವುದಕ್ಕೆ ಒಳಗೊಳಗೇ ಹುನ್ನಾರ ನಡೆಸುತ್ತಾ ಇರುತ್ತೇವೆ. ಸುಮ್ಮನೆ ದಂಗೆಯೇಳುತ್ತೇವೆ. ಮನೆಮುಂದಿನ ಮರ ಕಡಿದು, ಚಿಗುರು ಕಿತ್ತು, ಹೂ ಗಿಡಕ್ಕೆ ನೀರೆರೆಯದೇ, ಒಣಗಿದ ಬಳ್ಳಿಯ ಕಂಡು ಕೊರಗುತ್ತಾ..

ಪ್ರೀತಿಸುವುದೆಂದರೆ ನಮಗೆ ಭಯ. ಕಳಕೊಳ್ಳುವ ಭಯ. ಇಲ್ಲವಾಗುವ ಭಯ. ಅಹಂಕಾರ, ಅನುಮಾನ ಮತ್ತು ಇದು ಕೂಡ ಬೇಗ ಮುಗಿಯುತ್ತದೆ ಎಂಬ ಅತಿಯಾಶೆಯೊಂದಿಗೆ ಪ್ರತಿಯೊಂದು ಪ್ರೀತಿಗೂ ಮುಖಾಮುಖಿಯಾಗುತ್ತೇವೆ. ಅದು ಬದುಕಿನಷ್ಟೇ ಮುಖ್ಯವಾಗಕೂಡದು, ಅಮೂಲ್ಯ ಅಲ್ಲ ಎಂಬ ಬಿರುಕೊಂದು ಪ್ರತಿ ಮನಸ್ಸಲ್ಲೂ ಸುಸ್ಪಷ್ಟ.

ರಿಸ್ಕ್ ಇಟ್.

ಬೇಡ. ಕರ್ಪೂರದ ಹಾಗೆ ಸುಟ್ಟು ಹೋಗುತ್ತೇವೆ. ಇಲ್ಲವಾಗುತ್ತೇವೆ. ನಂದಾದೀಪದ ಹಾಗೆ, ನೀಲಾಂಜನದ ಹಾಗೆ, ಕಾಡಿನ ಬೆಂಕಿಯ ಹಾಗೆ, ನಮ್ಮ ಮೂಲ ಪ್ರೇರಣೆಗಳ ಹಾಗೆ, ಇತಿಹಾಸದ ಹಳೆಯ ಪುಟಗಳ ಹಾಗೆ, ಯಾರದೋ ತ್ಯಾಗಕ್ಕೆ ಸಾಕ್ಷಿಯಾದ ಮಾಸ್ತಿಕಲ್ಲಿನ ಹಾಗೆ, ಟಾಲ್‌ಸ್ಟಾಯ್ ಬರೆದಿಟ್ಟು ಕಣ್ಮರೆಯಾದ ಅನ್ನಾ ಕರೇನಿನಾ’ ಕಾದಂಬರಿಯ ಉತ್ಕಟ ಸನ್ನಿವೇಶದ ಹಾಗೆ, ಗಾಳಿಗೆ ಮೈಯೊಡ್ಡಿ ನಿಂತ ಮೋಟು ಮಾವಿನ ಮರದ ಹಾಗೆ, ರೈಲು ಸಂಚಾರವೇ ನಿಂತು ಹೋಗಿ ನಿರಾಶೆಯಿಂದ ಸಮಾನಾಂತರವಾಗಿ ಕಾಡಿನ ನಡುವೆ ಬಿದ್ದುಕೊಂಡ ಜೋಡಿ ಹಳಿಗಳ ಹಾಗೆ ಮನಸ್ಸು ಒಂದೇ ಕ್ಷಣ ಅಸಂಖ್ಯ ಭಾವನೆಗಳಿಗೆ ಆಡುಂಬೊಲವಾಗುತ್ತದೆ. ಸುಮ್ಮನೆ ಪ್ರೀತಿಸುತ್ತೇನೆ ಎಂಬ ನಿರ್ಧಾರದೊಂದಿಗೆ ಕಣ್ಮುಚ್ಚಿ ನೋಡಿದರೆ, ನಾಳೆಯೂ ಇಲ್ಲ, ನಿನ್ನೆಯೂ ಇಲ್ಲ. ಪ್ರೀತಿಯೆಂಬ ಚಿಟ್ಟೆಯನ್ನು ತಾಳಿ ಕಟ್ಟಿಸುವ ಮೂಲಕ ಕಂಬಳಿಹುಳುವಾಗಿಸಲು ಹೊರಟ ಮುತಾಲಿಕ್ ಮನಸ್ಸು ಮಾತ್ರ ಬೆಚ್ಚಿಬೀಳಿಸುತ್ತಿದೆ.

ತಮಸೋಮಾ ಜ್ಯೋತಿರ್ಗಮಯ!  

‍ಲೇಖಕರು avadhi

February 14, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: