ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಮಾತು : ಸಿಟ್ಟಿಗೇಳುವ ತರುಣರಿಗೆ ಶ್ರೀಕೃಷ್ಣ ಹೇಳಿದ ಕಿವಿಮಾತು

ಜೋಗಿ

ನಮ್ಮ ಜೀವನದ ಅರ್ಥವೇನು?

ಹಾಗೊಂದು ಪ್ರಶ್ನೆಯನ್ನು ಒಂದಲ್ಲ ಒಂದು ಹಂತದಲ್ಲಿ ಕೇಳಿಕೊಳ್ಳದವನು ಇರಲಾರ. ಹಾಗೆ ಕೇಳಿಕೊಳ್ಳುವುದಕ್ಕೆ ಕಾರಣವಾಗುವುದು ನಮ್ಮ ಪರಿಸರ, ನಮ್ಮ ಆರ್ಥಿಕತೆ, ನಮ್ಮ ಅವಮಾನಗಳಲ್ಲ? ಬದಲಿಗೆ ನಮಗಿರುವ ಬಿಡುವು. ಇಡೀ ದಿನ ದುಡಿಯುತ್ತಾ ಇರುವವನನ್ನು ಯಾವ ಪ್ರಶ್ನೆಗಳೂ ಕಾಡುವುದಿಲ್ಲ. ಅವನು ದುಡಿಯುತ್ತಾ ಹೋಗುತ್ತಾನೆ. ಶಿವರಾಮ ಕಾರಂತರು ಕಾದಂಬರಿ ಬರೆಯುತ್ತಾ ಹೋದರು? ಯಾರಿಗೋಸ್ಕರ ಬರೆಯುತ್ತಿದ್ದೇನೆ ಎಂದು ಯಾವತ್ತೂ ಕೇಳಲಿಲ್ಲ.

ಅನಂತಮೂರ್ತಿಯವರ ಕಾದಂಬರಿಯೊಂದರಲ್ಲಿ ಅವಧೂತನೊಬ್ಬ ಬರುತ್ತಾನೆ. ಅವನು ಎಂಥಾ ವಿಚಿತ್ರ ಮನುಷ್ಯನೆಂದರೆ ಅನಗತ್ಯವಾಗಿ ಏನನ್ನೂ ಮಾತನಾಡುವುದಿಲ್ಲ. ಅವನ ಬಳಿಗೆ ಹೋಗುವ ಕಥಾನಾಯಕ ಜೀವನದ ಅರ್ಥವೇನು, ಈ ಬದುಕು ನನ್ನನ್ನು ಎಲ್ಲಿಗೆ ಒಯ್ಯುತ್ತದೆ ಎಂದು ಕೇಳಿದರೆ ಅವನ ಮೌನವೇ ಉತ್ತರ. ಅವನು ಮೂಕನಿರಬೇಕು ಅಂತ ಕಥಾನಾಯಕ ಅಂದುಕೊಳ್ಳುತ್ತಿರುವ ಹೊತ್ತಿಗೆ ಮತ್ಯಾರೋ ಬಂದು ಯಾವುದೋ ಊರಿನ ದಾರಿ ಕೇಳುತ್ತಾನೆ. ಆ ಅವಧೂತ ಅವನಿಗೆ ದಾರಿ ಹೇಳುತ್ತಾನೆ. ಹಾಗಿದ್ದರೆ ಅವನು ಸಂಕೇತಿಸಿದ್ದಾದರೂ ಏನು? ತನಗೆ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಅವನು ಉತ್ತರಿಸುತ್ತಾನಾ? ಉಪಯುಕ್ತ ಎನ್ನಿಸುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತಾನಾ?

ಜೀವನದಲ್ಲಿ ಇಂಥ ನಿಷ್ಪ್ರಯೋಜಕ ಪ್ರಶ್ನೆಗಳು ಆಗಾಗ ಎದುರಾಗುತ್ತಲೇ ಇರುತ್ತವೆ. ತುಂಬ ದುಡ್ಡು ಸಂಪಾದನೆ ಮಾಡಿದವನನ್ನು ಒಂದು ಹಂತದಲ್ಲಿ ನಾನಿದನ್ನೆಲ್ಲ ಯಾಕೆ ಮಾಡುತ್ತಿದ್ದೇನೆ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಅವನ ಬಳಿ ಉತ್ತರ ಇರುವುದಿಲ್ಲ. ತಾನು ದುಡಿದದ್ದು ಮೂರು ತಲೆಮಾರು ಕುಳಿತು ಉಂಡರೂ ಕರಗುವುದಿಲ್ಲ ಎಂಬ ಸತ್ಯ ಅವನಿಗೆ ಗೊತ್ತಿದ್ದರೂ ಅವನು ದುಡಿಯುವುದನ್ನು ನಿಲ್ಲಿಸಲಾರ. ಆ ಮಟ್ಟಿಗೆ ಅವನು ದುಡಿಮೆಗೆ ಬಂದಿ.

ಹಾಗಿದ್ದರೆ ಪ್ರಶ್ನೆ ಕೇಳಿಕೊಳ್ಳುವುದೇ ತಪ್ಪಾ? ಸುಮ್ಮನೆ ಯೋಚಿಸಿ ನೋಡಿ. ನಾನಿದನ್ನೆಲ್ಲ ಯಾಕೆ ಮಾಡುತ್ತಿದ್ದೇನೆ ಎಂದು ಕೇಳಿಕೊಳ್ಳಲು ಆರಂಭಿಸಿದೊಡನೆ ನಮ್ಮ ಕ್ರಿಯೆ ಸಡಿಲವಾಗುತ್ತಾ ಹೋಗುತ್ತದೆ. ವೈರಾಗ್ಯ ನಮ್ಮನ್ನು ಆವರಿಸಿಕೊಳ್ಳುತ್ತಾ ಬರುತ್ತದೆ. ನಿರರ್ಥಕತೆ ಅನ್ನುವುದು ನಮ್ಮನ್ನು ಆವರಿಸಿಕೊಳ್ಳುವುದಕ್ಕೆ ಬಿಡಬಾರದು. ಬದುಕುತ್ತಾ ಹೋಗಬೇಕು. ನಿರರ್ಥಕತೆ ಹುಟ್ಟುವುದು ವರ್ತಮಾನದಲ್ಲಿ ಅಲ್ಲ, ಭವಿಷ್ಯದಲ್ಲಿ ಅನ್ನುವುದನ್ನು ನಾವು ಮರೆಯುವಂತಿಲ್ಲ. ಕೆಲವೊಮ್ಮೆ ಅದು ಆಗಿಹೋದ ಕಾಲದಲ್ಲಿ, ಕೆಲವೊಮ್ಮೆ ಬರಲಿರುವ ಕಾಲದಲ್ಲಿ ನಮಗೆ ಎದುರಾಗುತ್ತದೆ. ವರ್ತಮಾನದಲ್ಲಿ ಕೇವಲ ಕ್ರಿಯೆ ಮಾತ್ರ ಇರುತ್ತದೆ. ಹೀಗಾಗಿ ಈ ಕ್ಷಣವನ್ನು ಪ್ರಶ್ನೆಗಳಿಗೆ ಆಹಾರ ಆಗಲಿಕ್ಕೆ ನಾವು ಬಿಡಕೂಡದು.

ಒಂದು ಚೆಂದದ ಕುರ್ಚಿ ಮಾಡುತ್ತಾ ಕೂತ ಬಡಗಿ ಯೋಚಿಸುತ್ತಾನೆ ಅಂತಿಟ್ಟುಕೊಳ್ಳಿ. ಈ ಕುರ್ಚಿಯಲ್ಲಿ ಕೂರಲಿರುವವನು ಯಾವನೋ ಕ್ರೂರಿ ಜಮೀನ್ದಾರ. ಅವನು ಮಾನವ ವಿರೋಧಿ, ಅವನಿಗೋಸ್ಕರ ನಾನು ಈ ಕುರ್ಚಿಯನ್ನು ಮಾಡಿಕೊಡುವುದು ಸರಿಯೇ? ಖಂಡಿತಾ ಇಲ್ಲ, ನಾನು ಕುರ್ಚಿ ಮಾಡಬಾರದು ಅಂತ ಯೋಚಿಸುತ್ತಿದ್ದ ಹಾಗೇ, ಅವನ ಕ್ರಿಯಾಶೀಲತೆಯೇ ಬತ್ತಿಹೋಗುತ್ತದೆ. ಕುರ್ಚಿಯಲ್ಲಿ ಯಾರು ಕೂರುತ್ತಾರೆ ಅನ್ನುವುದಕ್ಕಿಂತ, ನಾನು ಕುರ್ಚಿಯನ್ನು ಚಂದವಾಗಿ ಮಾಡಿದ್ದೇನೆ ಅನ್ನುವುದೇ ಅವನಿಗೆ ಮುಖ್ಯವಾಗುತ್ತಿದ್ದರೆ ಅವನು ಕಲಾವಿದ, ಪ್ರಶ್ನೆಗಳನ್ನು ಹಾಕಿಕೊಂಡ ತಕ್ಷಣ ಅವನು ಹೋರಾಟಗಾರ. ಅದು ಮತ್ತೊಂದು ಹಂತ ತಲುಪಿದರೆ ಅವನು ಬಂಡುಕೋರ. ಬಂಡಾಯ ಏಳುತ್ತಿದ್ದ ಹಾಗೇ, ಅವನು ಎಲ್ಲವನ್ನೂ ನಿರಾಕರಿಸುತ್ತಾ ಹೋಗುತ್ತಾನೆ. ನಾವು ನಿರಾಕರಿಸಲು ಆರಂಭಿಸಿದೊಡನೆ ಅಸ್ತಿತ್ವ ಕಳಕೊಳ್ಳುತ್ತೇವೆ. ಒಬ್ಬ ಒಳ್ಳೆಯ ಕುಶಲ ಬಡಗಿಯಿದ್ದ. ತುಂಬ ಚೆನ್ನಾಗಿ ಕುರ್ಚಿ ಮಾಡುತ್ತಿದ್ದ ಎಂದು ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಅವನು ಇತಿಹಾಸಕ್ಕೆ ಸಲ್ಲುತ್ತಾನೆ.

ಬ್ರೆಕ್ಟ್ ಬರೆದ ಪದ್ಯವೊಂದಿದೆ. ಆ ಪುಟ್ಟ ಪದ್ಯದಲ್ಲಿ ನಮ್ಮ ಎಲ್ಲ ಗೊಂದಲಗಳನ್ನೂ ಆತ ಹಿಡಿದಿಟ್ಟಿದ್ದಾನೆ.ಅವನು ಎಲ್ಲಿಗೋ ಹೊರಟಿದ್ದಾನೆ. ಕಾರಲ್ಲಿ ಹೋಗುತ್ತಿದ್ದಾನೆ. ದಾರಿಯಲ್ಲಿ ಕಾರಿನ ಚಕ್ರ ಸಿಡಿದುಹೋಗುತ್ತದೆ. ಡ್ರೈವರ್ ಚಕ್ರ ಬದಲಾಯಿಸುತ್ತಿದ್ದಾನೆ. ಇವನು ಪಕ್ಕದಲ್ಲಿರುವ ಮೈಲುಗಲ್ಲಿನ ಮೇಲೆ ಕೂತು ಅಸಹನೆಯಿಂದ ನೋಡುತ್ತಿದ್ದಾನೆ:

ನಾನು ಹೊರಟ ಜಾಗವೂ

ನನಗೆ ಇಷ್ಟವಿಲ್ಲ.

ನಾನು ತಲುಪವಿರುವ ಜಾಗವೂ

ನನಗೆ ಇಷ್ಟವಿಲ್ಲ.

ಆದರೂ ನಾನು ಯಾಕೆ ಹೀಗೆ

ಅಸಹನೆಯಿಂದ ಡ್ರೈವರ್ ಚಕ್ರ ಬದಲಾಯಿಸುವುದನ್ನೇ

ನೋಡುತ್ತಾ ಕೂತಿದ್ದೇನೆ?

ಕೇಳಿಕೊಳ್ಳಿ. ಅಂಥ ಅಸಹನೆಗೆ ಕಾರಣವೇ ಇಲ್ಲ. ನಮಗೆ ಯಾವ ಲಾಭವೂ ಇಲ್ಲದೇ ಹೋದರೂ ನಾವು ಕ್ರುದ್ಧರಾಗುತ್ತೇವೆ. ಆಕ್ರಮಣಶೀಲರಾಗುತ್ತೇವೆ. ಮಾಗಿದವರಿಗಿಂತ ತರುಣರಲ್ಲೇ ಅದು ಹೆಚ್ಚಾದಂತೆ ಕಾಣಿಸುತ್ತದೆ. ನೋಡುತ್ತಾ ನೋಡುತ್ತಾ, ನಾವೆಲ್ಲ ಕ್ರಮೇಣ ಎಷ್ಟು ಅಸಹನೆಯನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ ಎಂದರೆ ಯಾರಿಗೂ ಯಾರ ಮಾತನ್ನು ಕೇಳುವುದಕ್ಕೂ ವ್ಯವಧಾನ ಇಲ್ಲ. ಕಳೆದ ವಾರ ತೀರಿಕೊಂಡ ರಂಗಕರ್ಮಿಯೊಬ್ಬರ ಬದುಕಿನ ಕತೆ ನಿಮಗೆ ನೆನಪಿರಬಹುದು. ಅವರು ಕಾರಲ್ಲಿ ಹೋಗುತ್ತಿದ್ದರು. ಅವರ ಮುಂದೆ ಒಬ್ಬ ಮೋಟಾರ್ ಬೈಕಿನಲ್ಲಿ ಹೋಗುತ್ತಿದ್ದ. ಸಿಗ್ನಲ್ ಬಳಿ ಬೈಕು ನಿಲ್ಲುತ್ತದೆ. ಆತ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ಬೈಕು ನಿಲ್ಲಿಸುತ್ತಾನೆ. ಇನ್ನೇನು ಅದಕ್ಕೆ ಡಿಕ್ಕಿ ಹೊಡೆಯುವ ಸ್ಥಿತಿಯಲ್ಲಿ ಹಿಂದಿರುವವರು ಬೈಕ್ ನಿಲ್ಲಿಸುತ್ತಾರೆ. ಜೋರಾಗಿ ಶಬ್ದ ಮಾಡಿ ಅವನ ತಪ್ಪನ್ನು ಸೂಚಿಸುತ್ತಾರೆ. ಅವನು ಬೈಕಿನಿಂದ ಇಳಿದು ಬಂದು ಹೆಲ್ಮೆಟಿನಿಂದ ಇವರ ತಲೆಗೆ ಬಾರಿಸುತ್ತಾನೆ. ಇವರು ಎರಡು ವರ್ಷ ಕೋಮಾದಲ್ಲಿದ್ದು ತೀರಿಕೊಳ್ಳುತ್ತಾರೆ.

ಇದು ಇವತ್ತಿನ ಬದುಕು. ಸಿಟ್ಟುಗೊಳ್ಳುವುದಕ್ಕೆ ನಮಗೆ ಕಾರಣಗಳೇ ಬೇಕಿಲ್ಲ. ಸಿಟ್ಟಾಗುವುದು ನಮ್ಮ ಅರ್ಹತೆ ಮತ್ತು ಅಗತ್ಯ ಎಂದು ನಾವು ಭಾವಿಸಿದಂತಿವೆ. ಟಿ ಎನ್ ಸೀತಾರಾಮ್ ನಿರ್ದೇಶಿಸಿದ ಮತದಾನ ಚಿತ್ರದಲ್ಲಿ ಒಂದು ಮನೋಜ್ಞ ಸನ್ನಿವೇಶವಿದೆ. ಕಥಾನಾಯಕ ಬಿಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಅದೇ ಸಿಟ್ಟಿನಲ್ಲಿ ಮನೆಗೆ ಬರುತ್ತಾನೆ. ಮನೆಯಲ್ಲಿ ಯಾರ ಮೇಲೋ ಆತ ರೇಗಬೇಕಾಗಿದೆ. ಮನೆಗೆ ಬರುತ್ತಿದ್ದಂತೆ ಪುಟ್ಟ ಮಗು ಕಾಣಿಸುತ್ತದೆ. ಆ ಮಗುವಿನ ತಲೆ ಸವರಿ, ಆಪ್ಯಾಯತೆಯಿಂದ ಮಾತಾಡಿಸಿ, ನಂತರ ಆತ ಒಳಗೆ ಹೋಗುತ್ತಾನೆ. ಆ ಸಿಟ್ಟಿನ ನಡುವೆಯೂ ಆತ ತೋರುವ ಒಂದು ಕ್ಷಣದ ಪ್ರೀತಿ ಗಮನ ಸೆಳೆಯುತ್ತದೆ.

ಈ ಕಾಲದ ಸಿಟ್ಟು ಹಾಗಲ್ಲ. ಅದು ಎಲ್ಲರ ಮೇಲೂ ಹರಿಹಾಯುವಂತೆ ಮಾಡುತ್ತದೆ. ಆ ಸಿಟ್ಟಿಗೆ ಕಾರಣ ನಮ್ಮ ಅಸಹಾಯಕತೆಯೋ ಅಹಂಕಾರವೋ ಅಂತ ನಿರ್ಧರಿಸುವುದೂ ಕಷ್ಟವಾಗಿದೆ. ತುಂಬ ವರ್ಷ ಅಧಿಕಾರದಲ್ಲಿದ್ದ ರಾಜಕಾರಣಿ, ತಾನು ಸೋಲುತ್ತಿದ್ದೇನೆ ಅಂತ ಗೊತ್ತಾಗುತ್ತಿದ್ದಂತೆ ಸಿಟ್ಟಿಗೇಳುತ್ತಾನೆ. ಅವನಿಗೆ ಅಧಿಕಾರವನ್ನು ಮುಂದುವರಿಸಿಕೊಂಡು ಹೋಗುವ ಚಟ. ಅವನ ಸಿಟ್ಟಿಗೆ ಅವನ ಸ್ವಾರ್ಥ, ಅಧಿಕಾರ ಲೋಲುಪತೆ ಕಾರಣ ಅನ್ನುವುದು ಎಲ್ಲರಿಗೂ ಗೊತ್ತು. ಹೀಗಾಗಿ ಅವನ ಸಿಟ್ಟು ಹೆದರಿಸುವ ಬದಲು ತಮಾಷೆಯಾಗಿ ಕಾಣುತ್ತಾ ಹೋಗುತ್ತದೆ. ಸಿಟ್ಟು ಹೆಚ್ಚಾದಷ್ಟೂ ಅವನು ಜೋಕರ್ ಆಗಿ ಕಾಣುತ್ತಾನೆ. ಸಾತ್ವಿಕವಲ್ಲದ ಸಿಟ್ಟಿಗೆ ಈ ಜಗತ್ತಿನಲ್ಲಿ ಬೆಲೆಯಿಲ್ಲ ಅನ್ನುವುದನ್ನು ಸಿಟ್ಟಾಗುವವರೆಲ್ಲ ಮರೆತಂತಿದೆ.

ಸಿಟ್ಟು ಮೊದಲು ಕಿತ್ತುಕೊಳ್ಳುವುದು ನಮ್ಮ ನೆಮ್ಮದಿಯನ್ನು, ನಂತರ ನಮ್ಮ ಭಾಷೆಯನ್ನು. ಭಾಷೆಯನ್ನು ಕಿತ್ತುಕೊಂಡಾಕ್ಷಣ ಮನುಷ್ಯ ದುರ್ಬಲನಾಗುತ್ತಾನೆ. ಅತ್ಯಂತ ದುರ್ಭರ ಕ್ಷಣದಲ್ಲಿ ಅನ್ನಿಸಿದನ್ನು ಅಭಿವ್ಯಕ್ತಿಸಲು ಭಾಷೆಯೇ ಇಲ್ಲ ಅಂತಿಟ್ಟುಕೊಳ್ಳಿ. ಅದಕ್ಕಿಂತ ದುರಂತ ಮತ್ತೊಂದಿಲ್ಲ. ಆ ಅಸಹಾಯಕತೆಯಿಂದ ಪಾರಾಗುವುದಕ್ಕೆ ಸಿಟ್ಟು ಬೇಕಾಗುತ್ತದೆ.

ಹಾಗಿದ್ದರೆ ನಮ್ಮ ಜೀವನದ ಅರ್ಥವೇನು? ಮೊದಲ ಪ್ರಶ್ನೆಗೆ ಮತ್ತೊಮ್ಮೆ ಬಂದರೆ ಮತ್ತೆ ನಾವು ನಿರುತ್ತರರಾಗುತ್ತೇವೆ. ಈ ಜಗತ್ತಿನಲ್ಲಿ ಅಸಂಖ್ಯ ಸೂರ್ಯರೂ ಅಸಂಖ್ಯ ತಾರಾಮಂಡಲಗಳೂ ಅಸಂಖ್ಯ ಗ್ರಹಗಳೂ ಇವೆ. ಅವುಗಳಲ್ಲಿ ನಾವೊಂದು ಗ್ರಹದಲ್ಲಿ ಜೀವಿಸುತ್ತಿದ್ದೇವೆ. ಬೇರೊಂದು ಗ್ರಹದಲ್ಲಿ ಮನುಷ್ಯರಿದ್ದಾರೋ ಇಲ್ಲವೋ ಅನ್ನುವುದೂ ನಮಗೆ ಗೊತ್ತಿಲ್ಲ. ಈ ರಾತ್ರಿ ನಾವು ನಿಂತು ನೋಡುತ್ತಿರುವ ನಕ್ಷತ್ರವನ್ನು ನಾವು ಇವತ್ತು ನೋಡುತ್ತಿಲ್ಲ. ಅದರಿಂದ ಹೊರಟ ಬೆಳಕು ನಮ್ಮನ್ನು ತಲುಪುವುದಕ್ಕೆ ಅದೆಷ್ಟೋ ವರ್ಷಗಳು ಬೇಕು. ಆ ಅಸಂಖ್ಯಾತ ವರ್ಷಗಳಲ್ಲಿ ಆ ನಕ್ಷತ್ರ ಸಿಡಿದು ಚೂರಾಗಿ ಹೋಗಿರಬಹುದು.

ನಶ್ವರ ಎನ್ನುವುದು ಒಂದು ಸ್ಥಿತಿಯಲ್ಲ. ಅದೊಂದು ಅರಿವು. ಕ್ಷಣಕ್ಷಣದಲ್ಲಿ ಬದುಕುವವನು ಸುಖಿ ಅಂತ ನಾವು ಭಾವಿಸುವ ಹಾಗೇ, ಅನಂತದಲ್ಲಿ ಬದುಕುವವನೂ ಸುಖಿ. ಬದುಕು ಹೇಗೆ ಬೆಚ್ಚಿ ಬೀಳಿಸುತ್ತದೆ ಅಂದರೆ ನಮ್ಮನ್ನು ಅಸ್ಥಿರತೆ ವಿನಾಕಾರಣ ಕಾಡುತ್ತದೆ. ಅದು ವಯಸ್ಸಿನೊಂದಿಗೆ ಬರುತ್ತದಾ, ಸ್ವಾರ್ಥದೊಂದಿಗಾ ಅನ್ನುವುದು ಮಾತ್ರ ನಿಗೂಢ.

ಬದುಕಿನ ಅರ್ಥ ಏನು ಅಂತ ಒಂದು ಮುಸ್ಸಂಜೆ ಕೃಷ್ಣನನ್ನು ಅರ್ಜುನ ಕೇಳುತ್ತಾನೆ. ಕೃಷ್ಣ ಏನೂ ಹೇಳದೇ, ದೂರದಲ್ಲಿ ಹಾರುತ್ತಿದ್ದ ಹಕ್ಕಿಯನ್ನು ತೋರಿಸಿ ಅದನ್ನು ಹೊಡೆದು ಉರುಳಿಸು ಅನ್ನುತ್ತಾನೆ. ಅರ್ಜುನ ಕ್ಷಣಾರ್ಧದಲ್ಲಿ ಅದನ್ನು ಹೊಡೆದು ಉರುಳಿಸುತ್ತಾನೆ.

ಕೃಷ್ಣ ಹೇಳುತ್ತಾನೆ: ಆ ಹಕ್ಕಿಯ ಸಾವಿಗೆ ಕಾರಣವಾದದ್ದು ನಿನ್ನ ಪ್ರಶ್ನೆ. ಅಲ್ಲಿ ಆಕಾಶದಲ್ಲಿ ನಿರುಮ್ಮಳನಾಗಿ ಹಾರುತ್ತಿದ್ದ ಅದಕ್ಕೆ ನಿನ್ನ ಪ್ರಶ್ನೆಯಾಗಲೀ, ನನ್ನ ಉತ್ತರವಾಗಲೀ, ನಿನ್ನ ಕ್ರಿಯೆಯಾಗಲೀ ಗೊತ್ತಿಲ್ಲ. ಹೀಗಾಗಿ ಅದರ ಸಾವು ಕೂಡ ಅನಾಯಾಸ. ಒಂದು ವೇಳೆ ನಮ್ಮ ಸಂಭಾಷಣೆಯನ್ನು ಅದು ಕೇಳಿಸಿಕೊಂಡಿದ್ದರೆ ಆತಂಕ, ಭಯ ಮತ್ತು ತಪ್ಪಿಸಿಕೊಳ್ಳುವ ಹಪಾಹಪಿಗೆ ಸಿಲುಕುತ್ತಿತ್ತು.

ನಾವೂ ಅಷ್ಟೇ, ಹಾರುತ್ತಿರಬೇಕು? ಬಾಣ ಬಂದು ಬೀಳಿಸುವ ತನಕ ಆಕಾಶ ನಮ್ಮದು.

 

 

‍ಲೇಖಕರು avadhi

16 March, 2013

10 Comments

  1. Anjali Ramanna

    haudu, nija adakkE iShTavaaytu Jogi sir! 🙂
    Anjali Ramanna

  2. balu

    superruuuuu , great…..

  3. Jayalaxmi Patil

    ಅದೆಷ್ಟು ಜನರಿಗೆ ಈ ಲೇಖನ ‘ನನಗೋಸ್ಕರವೇ, ನನ್ನ ಈ ತಳಮಳ ಅರಿತೇ ಜೋಗಿ ಬರೆದಿದ್ದು’ ಅಂತನ್ನಿಸಿದೆಯೋ ಏನೋ!! ನನಗೂ ಹಾಗೇ ಅನ್ನಿಸಿತು.

  4. Vanamala V

    ನನ್ನಲ್ಲಿದ್ದ ಪ್ರಶ್ನೆಗೂ ಉತ್ತರ ಸಿಕ್ಕಿತು. ಚೆನ್ನಾಗಿದೆ. Thank you Sir.

  5. Mohan V Kollegal

    ಒಳ್ಳೆಯ ಲೇಖನ… ಭಗವದ್ಗೀತೆಯೆಂಬುದು ಒಂದು ಮನಶಾಸ್ತ್ರ… ಇಂದಿನ ಮಾನಸಿಕ ಸಂತೈಕೆಗಳೆಷ್ಟೋ ಅಲ್ಲಿ ಅಡಕವಾಗಿವೆ…

  6. vividyashankar harapanahalli

    Thank you sir. 🙂

  7. ನಾ ಕಂಡಷ್ಟು...

    ಹಾರುತ್ತಿರಬೇಕು? ಬಾಣ ಬಂದು ಬೀಳಿಸುವ ತನಕ ಆಕಾಶ ನಮ್ಮದು.
    ಒಂದೊಳ್ಳೆ ಸಾಲು

  8. srinivas deshpande

    excellent article- sudha and srinivas deshpande

  9. Ambresh nayak

    Sir,howdu aa hakkige kelisikolluva shakthi iralilla,aadare namage…….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading