ಜೋಗಿ ಮನೆ .. ಹೊಳೆಯ ದಡ, ಎರಡು ಮರ : ಪ್ರಕೃತಿ


ನಿಮ್ಮ ಗುರುಗಳು ಯಾರು? ಅವಧೂತರು ಇದ್ದಾರಾ? ಅತೀಂದ್ರಿಯ ಶಕ್ತಿಗಳು ನಿಜವಾಗಿಯೂ ಇವೆಯಾ? ನೀವು ಯಾರನ್ನಾದರೂ ಗುರು ಅಂತ ನಂಬಿದ್ದೀರಾ? ಯಾರನ್ನೋ ಹುಡುಕಿಕೊಂಡು ಕಾಡಿಗೆ ಹೋಗುತ್ತೀರಲ್ಲ, ಯಾರದು?
ಹೀಗೆ ವಿಚಿತ್ರವಾದ ಪ್ರಶ್ನೆಗಳನ್ನು ಗೆಳೆಯರಲ್ಲದವರು ಕೇಳುತ್ತಲೇ ಇರುತ್ತಾರೆ. ಕಳೆದ ವರುಷ ಹಂಪಿಗೆ ಹೋದಾಗ ಮೃತ್ಯುಂಜಯ ಎಂಬ ವಿದ್ಯಾರ್ಥಿ ನಿಮ್ಮ ಗುರುಗಳನ್ನು ನೋಡಬೇಕು. ನಾನೂ ದೀಕ್ಷೆ ಪಡೆಯಬೇಕು ಅಂತ ಹಠಕ್ಕೆ ಬಿದ್ದಿದ್ದ. ನನಗೆ ಯಾವ ಗುರುಗಳೂ ಇಲ್ಲ. ಒಂದುವೇಳೆ ನನಗೊಬ್ಬ ಗುರು ಇದ್ದರೂ, ಅವರು ನಿನ್ನ ಗುರು ಆಗಲಿಕ್ಕೆ ಸಾಧ್ಯವಿಲ್ಲ ಮಾರಾಯ. ಅವರವರ ಗುರುಗಳನ್ನು ಅವರವರೇ ಕಂಡುಕೊಳ್ಳಬೇಕು. ಹಾಡಬಲ್ಲವನಿಗೆ ಭೀಮಸೇನ ಜೋಶಿ ಗುರು, ಬಿಲ್ವಿದ್ಯೆ ಕಲಿಯಲು ಹೊರಟ ಏಕಲವ್ಯನಿಗೆ ದ್ರೋಣಾಚಾರ್ಯರು ಗುರು, ಬರೆಯಹೊರಟ ಕುಮಾರವ್ಯಾಸನಿಗೆ ವೀರನಾರಾಯಣ ಗುರು. ಹೀಗೆ ಕೆಲವರಿಗೆ ರಾಜ್‌ಕುಮಾರ್, ಕೆಲವರಿಗೆ ಕಾರಂತರು, ಹಲವರಿಗೆ ಪಿಕಾಸೋ, ಇನ್ಯಾರಿಗೋ ಡಾಕ್ಟರ್ ಪ್ರಭುದೇವ- ಹೀಗೆ ಅವರವರ ಆಸಕ್ತಿಯ ಪ್ರಕಾರ ಒಬ್ಬೊಬ್ಬರು ಗುರುವಾಗುತ್ತಾ ಹೋಗುತ್ತಾರೆ. ಹಾಗೆಲ್ಲ ನನ್ನ ಗುರುವನ್ನು ನಿನ್ನ ಗುರು ಅಂದುಕೊಳ್ಳುವುದು ತಪ್ಪಾಗುತ್ತದೆ ಎಂದು ಅವನನ್ನು ಒಲಿಸಿಕೊಂಡು ಹೇಳಿದೆ. ಅವನು ಅದರಿಂದ ಸಮಾಧಾನ ಹೊಂದಿದವನಂತೆ ಕಾಣಲಿಲ್ಲ. ನಾನೇನೋ ಮುಚ್ಚಿಡುತ್ತಿದ್ದೇನೆ ಎಂದುಕೊಂಡು ಬೇಸರ ಮತ್ತು ನಿರ್ಲಕ್ಷ್ಯದಿಂದ ಹೋಗ್ಲಿ ಬಿಡಿ ಸಾರ್ ಎಂದು ಗೊಣಗಿಕೊಂಡು ಹೊರಟು ಹೋದ.
ಆಮೇಲೆ ನಾನು ಹೇಳಿದ್ದು ಸರಿಯಲ್ಲ ಅಂತಲೂ ಅನ್ನಿಸಿತು. ಪಾಠ ಹೇಳಿದವನು ಮಾತ್ರ ಗುರುವಾಗುತ್ತಾನಾ? ಗುರು ಅಂದರೆ ಏನನ್ನಾದರೂ ಕಲಿಸುವವನಾ? ಕಲಿಸಲೇಬೇಕಾ? ನಾವು ಏನೋ ಒಂದನ್ನು ಕಲಿಯುವುದಕ್ಕೆಂದೇ ಗುರುಗಳನ್ನು ಹುಡುಕಿಕೊಂಡು ಹೋಗುತ್ತೇವಾ? ಬಹುಶಃ ಕಲಿಸುವವನು ಇನ್‌ಸ್ಟ್ರಕ್ಟರ್. ಆತ ಏನನ್ನಾದರೂ ಕಲಿಸಬೇಕು. ತಾನು ಏನನ್ನು ಕಲಿಸುತ್ತಿದ್ದೇನೆ ಅನ್ನುವುದು ಆತನಿಗೆ ಗೊತ್ತಿದೆ ಮತ್ತು ಎಷ್ಟು ಕಲಿಸಬೇಕು ಅನ್ನುವುದನ್ನೂ ಆತ ಬಲ್ಲ. ಆತ ಕಲಿಯುವುದು ಮುಗಿದಿದೆ ಮತ್ತು ತಾನು ಕಲಿತಷ್ಟನ್ನು ಮತ್ತೊಬ್ಬನಿಗೆ ಕಲಿಸುವುದಕ್ಕೆಂದು ಆತ ನೇಮಕಗೊಂಡವನು. ಅವನು ಗುರು ಅಲ್ಲ.
ಹಾಗೆ ನೋಡಿದರೆ ಎಷ್ಟೋ ಮಂದಿ ಏನನ್ನೋ ನಮಗೆ ಕಲಿಸುತ್ತಲೇ ಇರುತ್ತಾರೆ. ಎಸ್ಸೆಮ್ಮೆಸ್ಸು ಮಾಡುವುದು ಹೇಗೆ? ಫೇಸ್‌ಬುಕ್ ಬಳಸುವುದು ಹೇಗೆ? ಕಾರು ಓಡಿಸುವುದು ಹೇಗೆ? ಬದನೆಕಾಯಿ ಗೊಜ್ಜು ಮಾಡುವುದು ಹೇಗೆ ಅನ್ನುವುದನ್ನೆಲ್ಲ ಕಲಿಸಿಕೊಟ್ಟವರು ಗುರುಗಳಾಗುವುದಿಲ್ಲ. ಬಹುಶಃ ಕ್ರಮೇಣ ಯಾರೋ ಹೇಳ್ಕೊಟ್ರು ಅಂತ ಹೇಳುತ್ತೇವೆಯೇ ಹೊರತು, ಇದನ್ನು ನಾನು ಇಂಥವರಿಂದ ಕಲಿತೆ ಅನ್ನುವುದನ್ನು ನೆನಪಿಟ್ಟುಕೊಳ್ಳುವುದೂ ಇಲ್ಲ.
ಹಾಗಿದ್ದರೆ ಗುರು ಯಾರು? ಏನನ್ನೂ ಕಲಿಸದವನಾ? ಯಾರೂ ಕಲಿಸದೇ ಇದ್ದದ್ದನ್ನು ಕಲಿಸಿದವನಾ? ಅವನೇಕೆ ನೆನಪಲ್ಲಿ ಉಳಿಯುತ್ತಾನೆ? ನಿಜಕ್ಕೂ ಅವನು ನೆನಪಲ್ಲಿ ಉಳಿಯುತ್ತಾನಾ? ನಿಮ್ಮ ಗುರುಗಳು ಯಾರು ಎಂದರೆ ಯಾರ ಹೆಸರು ಹೇಳುತ್ತೀರಿ?
ಗುರುವನ್ನು ಮೀರಿ ಗುರುವಾದವರ ಬಗ್ಗೆ ನೀವೂ ಓದಿರಬಹುದು. ಜಿಡ್ಡು ಕೃಷ್ಣಮೂರ್ತಿಯವರನ್ನು ಮೀರಿ ಯೂಜಿ ಕೃಷ್ಣಮೂರ್ತಿ ಬಂದರು. ರಮಣರನ್ನು ಮೀರಿ ನಿಲ್ಲಲು ಯೂಜಿ ಯತ್ನಿಸಿದರು. ರಜನೀಶ್ ತನ್ನ ಹಿಂದಿನ ಗುರುಗಳನ್ನೆಲ್ಲ ಮೀರಿ ಕಂಗೊಳಿಸಿದಂತೆ ಕೆಲವರಿಗಾದರೂ ಕಂಡರು. ಯಾವುದೋ ಸಿದ್ಧಾಂತವನ್ನು ಹೇಳುವ ಲೇಖಕ, ಸಮಾನತೆಯನ್ನು ಸಾರುವ ಮಾನವತಾವಾದಿ, ಎಲ್ಲವನ್ನೂ ನಿರಾಕರಿಸಿದ ಸಿದ್ಧಾರ್ಥ, ಯುದ್ಧ ಗೆದ್ದು ಗೆಲುವನ್ನು ಕಳಚಿಕೊಂಡ ಅಣ್ಣ, ಸಮಾಜವಾದ ಕಲಿಸದವನು- ಹೀಗೆ ಯಾರು ಬೇಕಿದ್ದರೂ ಗುರುವಿನ ಪಟ್ಟಕ್ಕೇರಬಹುದು. ಅವರೆಲ್ಲರು ಇಹಲೋಕದ ಗುರುಗಳು. ಗುರು ಅಂತ ಹೇಳುವುದಕ್ಕಿಂತ ಹೆಚ್ಚಾಗಿ ಶಕ್ತಿ ಕೇಂದ್ರಗಳು. ನಾನು ಅವರ ಜೊತೆ ಗುರುತಿಸಿಕೊಳ್ಳುತ್ತಿದ್ದೇನೆ ಎಂದು ಜಗತ್ತಿಗೆ ತೋರಿಸುವುದಕ್ಕೆ ಅದೊಂದು ಗುರುತು. ತನ್ನ ನಿಶ್ಯಕ್ತಿಯನ್ನು ನೀಗಿಕೊಂಡು, ಶಕ್ತಿಯನ್ನು ಕ್ರೋಡೀಕರಿಸಿಕೊಂಡು ತನ್ನ ಅಹಂಕಾರವನ್ನು ಪೊರೆಯುವುದಕ್ಕೊಂದು ಮಾರ್ಗ. ಇವತ್ತು ನಶ್ವರವಾದ ವಾದಗಳನ್ನು ಹೂಡುವವರಿಗೂ ಶಿಷ್ಯಂದಿರಿದ್ದಾರೆ. ತೋಚಿದ್ದನ್ನು ಮಾತಾಡುವವರೂ ಗುರುಗಳಾಗಿದ್ದಾರೆ. ಅವರ ಆರಾಧನೆ ನಡೆಯುತ್ತದೆ. ಅವರನನ್ನು ಆರಾಧಿಸುತ್ತಾ ಬಳಸಿಕೊಳ್ಳುವ ಯತ್ನಗಳು ನಡೆಯುತ್ತವೆ. ಅವರು ಧರ್ಮಗುರುಗಳೂ ಆಗಿರಬಹುದು, ಧರ್ಮವನ್ನು ಮೀರಿದವರೂ ಆಗಿರಬಹುದು. ಬೋಧಿಸುವ, ತಿದ್ದುವ, ತಮ್ಮೆಡೆಗೆ ಸೆಳೆದುಕೊಳ್ಳುವ, ದೇವರನ್ನು ಕಂಡೆ ಎಂದು ಹೇಳುವ, ಒಂದೇ ಪಂಗಡಕ್ಕೆ ಸೀಮಿತಗೊಂಡ ಗುರುಗಳೂ ಇದ್ದಾರೆ. ಅವರೆಲ್ಲ ಉಪಯುಕ್ತ ಗುರುಗಳು. ನೀರು ಸರಬರಾಜು ಮಾಡುವ ಪೈಪಿನಂತೆ, ಗ್ಯಾಸು ಸಿಲಿಂಡರಿನಂತೆ, ಕಾರಿನಂತೆ, ಒಳಚರಂಡಿಯಂತೆ, ಮೆಟ್ಟಿಲಿನಂತೆ, ಪಂಚೆಯಂತೆ, ರಬ್ಬರಿನಂತೆ ಕಾಣುವ ಗುರುಗಳು. ನಾವು ಸರಿಯಾಗಿದ್ದರೆ ನಮಗೆ ಪೊಲೀಸರೂ ಬೇಕಿಲ್ಲ, ಇಂಥ ಗುರುಗಳೂ ಬೇಕಿಲ್ಲ.
ಅಂಥ ಗುರುಗಳಿಂದ ಕಿಂಚಿತ್ತು ಪ್ರಯೋಜನವೂ ಇಲ್ಲ. ಗುರು ನಿಜಕ್ಕೂ ಇರುವುದಿಲ್ಲ. ಒಂದು ವೇಳೆ ಇದ್ದರೆ ತನ್ನೊಳಗೇ ಇರುತ್ತಾನೆ. ನಮ್ಮೊಳಗೇ ಆತ ಬೆಳೆಯುತ್ತಾ ಹೋಗುತ್ತಾನೆ. ಹಾಗೆ ಬೆಳೆಯುತ್ತಾ ಹೋಗುವ ಗುರು ಅಲ್ಲಲ್ಲಿ ಯಾರ ಯಾರ ಮುಖಾಂತರವೋ ಕಾಣಿಸುತ್ತಾ ಹೋಗುತ್ತಾನೆ. ವಾಲ್ಮೀಕಿಯ ಒಳಗೊಬ್ಬ ಗುರುವಿದ್ದ. ಅವನು ಮೊದಲು ಕಾಣಿಸಿದ್ದು ಕ್ರೌಂಚ ಪಕ್ಷಿಯ ರೂಪದಲ್ಲಿ. ಕೌಶಿಕನ ಒಳಗಿರುವ ಗುರು ಮೊದಲು ಕಂಡದ್ದು ಧರ್ಮವ್ಯಾಧನ ಪತ್ನಿಯ ರೂಪದಲ್ಲಿ, ಕನಕನಿಗೆ ತನ್ನ ಕರೆಯ ಮೇಲೆ ಹುಟ್ಟಿದ ನಂಬಿಕೆಯಲ್ಲಿ.

-2-

ವೀಣಾ ಬನ್ನಂಜೆ ಬರೆದಿರುವ ಪುಸ್ತಕ ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು ಕಣ್ಣಮುಂದಿದೆ. ವೀಣಾ ಅವರ ಬೆರಗು, ಸಂಭ್ರಮ ಮತ್ತು ಜೀವೋಲ್ಲಾಸದಲ್ಲಿ ಸತ್ಯಕಾಮರು ಗುರುವಾಗುತ್ತಾ ಹೋಗುತ್ತಾರೆ. ಅವರು ವೀಣಾ ಪಾಲಿಗೆ ಅಪ್ಪಯ್ಯ ಮಾತ್ರ. ಅವರ ಕತೆಗಳನ್ನು ಕಾದಂಬರಿಗಳನ್ನು ಬರಹಗಳನ್ನು ಓದಿದ ನನಗೆ ಅವರು ನನಗೆ ಗೊತ್ತಿಲ್ಲದ ಜಗತ್ತನ್ನು ತೋರಿಸಬಲ್ಲ ಲೇಖಕ. ಲಕ್ಷ್ಮೀಶ ತೋಳ್ಪಾಡಿಯವರ ಪಾಲಿಗೆ ಅವರೊಂದು ಬೆಳಕು. ಕಲ್ಲಹಳ್ಳಿಯ ಮಂದಿಗೆ ಅವರು ಅವಧೂತ, ಸೇವಕ, ದೇವತಾಸ್ವರೂಪ, ಜ್ಞಾನಿ, ದಾನಿ, ಪ್ರವರ್ತಕ- ಹೀಗೆ ಏನು ಬೇಕಿದ್ದರೂ ಇರಬಹುದು.
ಇತ್ತಿತ್ತಲಾಗಿ ಗುರುಗಳ ಕುರಿತ ಬರಹಗಳಿಗೆ ಒಳ್ಳೆಯ ಮಾರುಕಟ್ಟೆ ಇರುವುದರಿಂದ ಕೊಂಚ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಗುರು ಕೂಡ ಇನ್ಸೂರೆನ್ಸ್ ಪಾಲಿಸಿಯಂತೆ, ಮ್ಯೂಚುವಲ್ ಫಂಡಿನಂತೆ, ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ತಂದುಕೊಡುವ ಯೋಜನೆಯಂತೆ ಕಾಣಿಸುತ್ತಿದ್ದಾನೆ. ಮೊನ್ನೆ ಮೊನ್ನೆ ನಯನಾಕಶ್ಯಪ್ ಹಿಮಾಲಯದ ಗುರುವಿನ ಗರಡಿಯಲ್ಲಿ ಎಂಬ ಪುಸ್ತಕ ಅನುವಾದಿಸಿದ್ದರು. ಅದನ್ನು ಬರೆದದ್ದು ಶ್ರೀ ಎಂ. ಆ ಪುಸ್ತಕ ಪೂರ್ತಿ ಓದಿದ ಮೇಲೆ ಒಂದು ಪತ್ತೇದಾರಿ ಕಾದಂಬರಿ ಓದಿದ ಅನುಭವವಾಯಿತು. ಹಿಮಾಲಯ. ಅಷ್ಟೇ ರೋಚಕತೆ ಕೊಟ್ಟ ಮತ್ತೊಂದು ಪುಸ್ತಕ ಸ್ವಾಮಿ ರಾಮ ಅವರ ಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್. ನನಗೆ ಗೊತ್ತಿರುವ ಕೆಲವು ಪ್ರಕಾಶಕರು ಯಾವುದಾದರೂ ಹಿಮಾಲಯದ ಗುರುಗಳ ಬಗ್ಗೆ ಬರೀರಿ. ಚೆನ್ನಾಗಿ ಮಾರಾಟ ಆಗುತ್ತದೆ. ಹತ್ತು ಸಾವಿರ ಪ್ರತಿ ಮಾರಬಹುದು ಅಂತ ತಮಾಷೆ ಮಾಡುತ್ತಿರುತ್ತಾರೆ.
ಸತ್ಯಕಾಮರೂ ಹಾಗೆ ಮಾರಾಟದ ಗುರು ಆಗಿಲ್ಲ ಅನ್ನುವುದೇ ಸಂತೋಷ. ಅವರ ಜೊತೆಗೆ ಕಳೆದ ದಿನಗಳ ಕುರಿತು ವೀಣಾ ಸವಿಸ್ತಾರವಾಗಿ ಬರೆದಿದ್ದಾರೆ. ಆ ಅನುಭವಗಳನ್ನು ಇಲ್ಲಿ ಬರೆಯುವುದು ಬೇಡ. ಆದರೆ ಇಡೀ ಪುಸ್ತಕವನ್ನು ಓದುತ್ತಿದ್ದ ಹಾಗೆ ಬೆರಗಾಗಿಸಿದ್ದು ಸತ್ಯಕಾಮ-ವೀಣಕ್ಕರ ನಡುವಿನ ಸಂಬಂಧ. ಅದು ತಾಯಿ ಮಗನ ಸಂಬಂಧ, ತಂದೆ ಮಗಳ ಸಂಬಂಧ, ಗುರು ಶಿಷ್ಯ ಸಂಬಂಧ, ದೇವರು ಮತ್ತು ಭಕ್ತನ ಸಂಬಂಧ. ಯಾವ ವ್ಯಾಖ್ಯಾನಕ್ಕೂ ಸಿಗದಂಥ ಒಂದು ಸಂಬಂಧ ಅವರಿಬ್ಬರ ಮಧ್ಯೆ ನೆಲೆಸಿದೆ ಅನ್ನುವುದನ್ನು ಗ್ರಹಿಸುತ್ತಾ ಹೋದ ಹಾಗೆ, ಗುರುವನ್ನು ಹೇಗೆ ನಮ್ಮೊಳಗೆ ಪ್ರತಿಷ್ಠಾಪನೆ ಮಾಡಿಕೊಳ್ಳಬೇಕು ಎಂಬುದೂ ಹೊಳೆಯತೊಡಗಿತು.
ಒಂದು ಪುಟ್ಟ ಕೊಳ. ಅದರ ದಡದಲ್ಲಿ ಎರಡು ಮರಗಳು. ತನ್ನಿಂತಾನೇ ಬೆಳೆದು ನಿಂತಿವೆ. ಎರಡೂ ಮರಗಳ ನಡುವೆ ಮಾತಿಲ್ಲ. ಗಾಳಿ ಬೀಸಿದಾಗ ಈ ಮರದ ಎಲೆಯೂ ಆಡುತ್ತದೆ. ಆ ಮರದ ಚಿಗುರೂ ತೊನೆಯುತ್ತದೆ. ಎರಡೂ ಮರಗಳ ನೆರಳು ಕೊಳದಲ್ಲಿ ಪ್ರತಿಫಲಿಸುತ್ತದೆ. ಆಕಾಶಕ್ಕೆದ್ದು ನಿಂತ ಮರ ಕೊಳದಲ್ಲಿ ಪಾತಾಳಕ್ಕೂ ಚಾಚಿಕೊಂಡಂತಿದೆ. ಈ ಬಿಂಬ ಪ್ರತಿಬಿಂಬಗಳ ಅನೂಹ್ಯ ಸಂಗಮದಲ್ಲಿ ಮಳೆ, ಚಳಿ, ಬೇಸಗೆಗೆ ಸಾಕ್ಷಿಯಾಗುತ್ತಾ, ಒಂದು ಮರದಲ್ಲಿ ಯಾವುದೋ ಹಕ್ಕಿ ಗೂಡು ಕಟ್ಟಿದರೆ ಮತ್ತೊಂದು ಮರ ನೋಡುತ್ತಾ, ಆ ಮರಕ್ಕೆ ಬಂದ ಗಿಳಿ ಈ ಮರಕ್ಕೂ ಬಂದೀತೆಂದು ಕಾಯುತ್ತಾ, ಮರಮರದ ಮರ್ಮರ ಮರೆತು ಧ್ಯಾನಸ್ಥವಾಗುತ್ತಾ ಇದ್ದ ಹಾಗೆ ಅವರಿಬ್ಬರೂ ಅಲ್ಲಿದ್ದರೆ? ಇಳಿದು ಬಾ ತಾಯಿ ಇಳಿದು ಬಾ ಹಾಡಿದ್ದು ಯಾರು? ಕೇಳಿಸಿಕೊಂಡದ್ದು ಯಾರು?
ಗುರು ಯಾರು ಎಂಬ ಪ್ರಶ್ನೆ ಪುಸ್ತಕ ಓದಿದ ನಂತರವೂ ಹಾಗೇ ಉಳಿಯುತ್ತದೆ. ನಮ್ಮ ನಮ್ಮ ಗುರುವನ್ನು ನಾವೇ ಹುಡುಕಿಕೊಳ್ಳಬೇಕು. ನಮ್ಮ ಗುರು ನಮ್ಮೊಳಗೇ ಹುಟ್ಟಬೇಕು. ಹಾಗೆ ಹುಟ್ಟಿದ ಗುರುವಿನ ಚಹರೆ ಹೊರಗೆಲ್ಲಾದರೂ ಕಂಡರೆ ಅದು ಭುವನದ ಭಾಗ್ಯ. ಕಾಣದೇ ಹೋದರೆ ಅದೂ ಸುಖವೇ.
ಸತ್ಯಕಾಮರೊಡನೆ ಸಾವು ಇರದ ದಿನಗಳನ್ನು ಕಳೆದ ವೀಣಾ ಬನ್ನಂಜೆಯ ಪುಸ್ತಕ ಓದಿ ಕೆಳಗಿಡುತ್ತಿದ್ದಂತೆ ಇಷ್ಟೆಲ್ಲ ಪ್ರಶ್ನೆಗಳು ಮೂಡಿದವು. ಗುರುವೋ ಗುರುತೋ ಎಂಬ ಪ್ರಶ್ನೆ ಅಪ್ರಸ್ತುತ. ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಂಥ ಸಂಬಂಧಗಳೂ ಇರುವುದಕ್ಕೆ ಸಾಧ್ಯವಲ್ಲವೇ? ಕೇಡಿಲ್ಲದ, ರೂಹಿಲ್ಲದ, ಹೆಸರಿಲ್ಲದ…
ಎರಡು ಮರಗಳು ಹೊಳೆಯ ದಡದಲ್ಲಿವೆ. ಹೊಳೆ ಹರಿಯುತ್ತಿದೆ. ಮರಗಳು ನಿಂತಿವೆ. ಆ ಎರಡು ಮರಗಳ ನಡುವೆ ಎಂಥಾ ಸಂಬಂಧ ಅಂತ ಯಾರೂ ಕೇಳುವುದಿಲ್ಲ. ಕೇಳಬಾರದು. ಅದು ಪ್ರಕೃತಿ.
 
 
 

‍ಲೇಖಕರು G

November 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Kiran

    How come JoGi missed his favorite YNK quote on GuRu? “In sanskrit, Gu is darkness; Ru is light. GuRu is the one who leads us from dark to light. In other words, a GuRu is a torch bearer who shows us the way leading towards enlightenment. However most of the present day gurus are not torch bearers; they are just torture! They are no longer torch bearing mentors; they are simply tormentors!!” (As read in V.Bhat’s book on YNK)
    Thought provoking, as usual. Thank you.

    ಪ್ರತಿಕ್ರಿಯೆ
  2. Anil Talikoti

    ಜೋಗಿಯವರೆ – ಅಪ್ರತಿಮ ಬರಹಗಾರರು ನೀವು. ಯಾವುದನ್ನು ವಿವರಿಸಲು ಸಾಮಾನ್ಯರು ವಿಲವಿಲನೆ ಒದ್ಯಾಡುವರೋ ಅದನ್ನು ನೀವು ಸುಲಿದ ಬಾಳೆಯಂತೆ ಸೊಗಸಾಗಿ, ಸಿಂಪಲ್ಲಾಗಿ ಹೇಳಿ ನೇಪತ್ಯಕ್ಕೆ ಸರಿದುಬಿಡುತ್ತಿರಿ.
    ಕೇಡಿಲ್ಲದ, ರೂಹಿಲ್ಲದ, ಹೆಸರಿಲ್ಲದ, ಸ್ವಾರ್ಥವಿಲ್ಲದ,ಪ್ರತೀಕ್ಷೆ ಇಲ್ಲದ ದೀರ್ಘ ಸಂಬಂಧಗಳು ಸಿಕ್ಕವಾದರೆ ಗುರುವಿಗೆ-ಶಿಷ್ಯನ, ಶಿಷ್ಯನಿಗೆ ಗುರುವಿನ ಜರೂರತ್ತೆ ಇಲ್ಲವೆನಿಸುತ್ತದೆ -ಹುಲುಮಾನವರಿಗೆ ಸಾಧ್ಯವೆ ಹೀಗಿರಲು? ಕೆಲವೊಮ್ಮೆ ಜೀವೋಲ್ಲಾಸ ಹುಡುಕುವದು ಒಂದು ತೆರನಾದ ಫಲಾಪೇಕ್ಷೆಯೇನೋ ಎನಿಸಿದ್ದಿದೆ -ಪ್ರಪಂಚದಲ್ಲಿ ಎರಡೇ ಎರಡು ಹಕ್ಕಿಗಳಿದ್ದರೂ ಕೂಡಾ ಒಂದು ಸಂತೃಪ್ತವಾಗಿದ್ದರೆ, ಇನ್ನೊಂದಕ್ಕೆ ಅತೃಪ್ತಿ. ಜೀವ ಮತ್ತು ಆತ್ಮದ ಹಕ್ಕಿಗಳು ಕೂಡಾ ಫಲದ ಅಪೇಕ್ಷೆ ಇಲ್ಲದೆ ಮರದಲ್ಲಿ ಬಹಳ ಹೊತ್ತು ಇರಲಾರವು ಎಂದೂ ಯಾರೋ ಎಂದೋ ಎಲ್ಲೋ ಹೇಳಿದ್ದಾರಲ್ಲವೆ? ನಿಜಕ್ಕೂ ಇಲ್ಲದ ಗುರುವನ್ನು ಅದೆಂತೂ ಹುಡುಕುವದು? ಎಂದಿನಂತೆ ಮನಮುಟ್ಟುವ ಬರಹ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
    • Anonymous

      How come JoGi missed his favorite YNK quote on GuRu? “In sanskrit, Gu is darkness; Ru is light. GuRu is the one who leads us from dark to light. In other words, a GuRu is a torch bearer who shows us the way leading towards enlightenment. However most of the present day gurus are not torch bearers; they are just torture! They are no longer torch bearing mentors; they are simply tormentors!!” (As read in V.Bhat’s book on YNK)
      Thought provoking, as usual. Thank you.

      ಪ್ರತಿಕ್ರಿಯೆ
      • Kiran

        Who is this man copying me word by word 4 hours after my original comment? Could have put the name. Imitation is the best form of complimenting!!

        ಪ್ರತಿಕ್ರಿಯೆ
  3. Anonymous

    ಜೋಗಿಯವರೆ – ಅಪ್ರತಿಮ ಬರಹಗಾರರು ನೀವು. ಯಾವುದನ್ನು ವಿವರಿಸಲು ಸಾಮಾನ್ಯರು ವಿಲವಿಲನೆ ಒದ್ಯಾಡುವರೋ ಅದನ್ನು ನೀವು ಸುಲಿದ ಬಾಳೆಯಂತೆ ಸೊಗಸಾಗಿ, ಸಿಂಪಲ್ಲಾಗಿ ಹೇಳಿ ನೇಪತ್ಯಕ್ಕೆ ಸರಿದುಬಿಡುತ್ತಿರಿ.
    ಕೇಡಿಲ್ಲದ, ರೂಹಿಲ್ಲದ, ಹೆಸರಿಲ್ಲದ, ಸ್ವಾರ್ಥವಿಲ್ಲದ,ಪ್ರತೀಕ್ಷೆ ಇಲ್ಲದ ದೀರ್ಘ ಸಂಬಂಧಗಳು ಸಿಕ್ಕವಾದರೆ ಗುರುವಿಗೆ-ಶಿಷ್ಯನ, ಶಿಷ್ಯನಿಗೆ ಗುರುವಿನ ಜರೂರತ್ತೆ ಇಲ್ಲವೆನಿಸುತ್ತದೆ -ಹುಲುಮಾನವರಿಗೆ ಸಾಧ್ಯವೆ ಹೀಗಿರಲು? ಕೆಲವೊಮ್ಮೆ ಜೀವೋಲ್ಲಾಸ ಹುಡುಕುವದು ಒಂದು ತೆರನಾದ ಫಲಾಪೇಕ್ಷೆಯೇನೋ ಎನಿಸಿದ್ದಿದೆ -ಪ್ರಪಂಚದಲ್ಲಿ ಎರಡೇ ಎರಡು ಹಕ್ಕಿಗಳಿದ್ದರೂ ಕೂಡಾ ಒಂದು ಸಂತೃಪ್ತವಾಗಿದ್ದರೆ, ಇನ್ನೊಂದಕ್ಕೆ ಅತೃಪ್ತಿ. ಜೀವ ಮತ್ತು ಆತ್ಮದ ಹಕ್ಕಿಗಳು ಕೂಡಾ ಫಲದ ಅಪೇಕ್ಷೆ ಇಲ್ಲದೆ ಮರದಲ್ಲಿ ಬಹಳ ಹೊತ್ತು ಇರಲಾರವು ಎಂದೂ ಯಾರೋ ಎಂದೋ ಎಲ್ಲೋ ಹೇಳಿದ್ದಾರಲ್ಲವೆ? ನಿಜಕ್ಕೂ ಇಲ್ಲದ ಗುರುವನ್ನು ಅದೆಂತೂ ಹುಡುಕುವದು? ಎಂದಿನಂತೆ ಮನಮುಟ್ಟುವ ಬರಹ.
    -ಅನಿಲ ತಾಳಿಕೋಟಿSomashekhar Konapure.

    ಪ್ರತಿಕ್ರಿಯೆ
  4. sumganap@ gmail. com

    Guru andare anubhava mattu anubhaava. Huttuttade. Saayuttade haage ondondu kaalakke ondondu guru

    ಪ್ರತಿಕ್ರಿಯೆ
  5. sumathi.b.k

    Anubhava anubhaava ve guru. Olago horago kaanutta kaanutta kanna mucchide kaana emba vachanada haage.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: