ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆವ 'ರೂಪ ರೇಖೆ':ಡಿ. ಆರ್.ಎಂಬ ಹೊಳೆದ ತಾರೆ

ಡಿ. ಆರ್.: ಉಳಿದ ಆಕಾಶದಲ್ಲಿ ಹೊಳೆದ ತಾರೆ
-ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು ವೈದಿಕ ಕಲ್ಪನೆ ಮತ್ತು ಆಚರಣೆಯ ವಿಸ್ತರಣೆ ಎಂದು ಡಿ ಆರ್ ನಾಗರಾಜ್ ಹೇಳಿದರಂತೆ. ಈ ವಿಚಾರವಾಗಿ ಅವರಿಗೂ ಅನಂತಮೂರ್ತಿಯವರಿಗೂ ಜಗಳವಾಯಿತಂತೆ. ಕೊನೆಗೆ ಅನಂತಮೂರ್ತಿಯವರು ನಿನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲ ಎಂದು ಹೊರಟು ಹೋದರಂತೆ.
-ಶೂದ್ರ ಮತ್ತು ಡಿಆರ್ ಮಾತಾಡುತ್ತಿದ್ದಾಗ ಮಾತು ವಿಕೋಪಕ್ಕೆ ತಿರುಗಿ, ಶೂದ್ರನನ್ನು ಡಿಆರ್ ಲಂಕೇಶರ ನೆರಳು ಎಂದು ಕರೆದರಂತೆ. ಶೂದ್ರ ಸಿಟ್ಟಾಗಿ ಡಿಆರ್ ಮೇಲೆ ಕೈ ಮಾಡೋದಕ್ಕೇ ಹೋದರಂತೆ. ಕೊನೆಗೆ ಆರ್‌ಜಿ ಹಳ್ಳಿ ನಾಗರಾಜ್ ಬಂದು ಜಗಳ ಬಿಡಿಸಿದರಂತೆ.
-ಉಡುಪಿ ಸಾಹಿತ್ಯ ಸಮ್ಮೇಳನದಿಂದ ವಾಪಸ್ಸು ಬರುವಾಗ ಡಿ ಆರ್ ಮತ್ತು ಕೀರಂ ಸಿಕ್ಕಾಪಟ್ಟೆ ಬೈದಾಡಿಕೊಂಡರಂತೆ. ಕೊನೆಗೆ ಡಿಆರ್ ನಿಮ್ಮಂಥವರ ಜೊತೆ ಬರೋಲ್ಲ ಅಂತ ಬಸ್ಸಲ್ಲಿ ವಾಪಸ್ಸು ಬಂದರಂತೆ.
ಹೀಗೆ ಸಾಹಿತ್ಯಾಸಕ್ತರ ಬಾಯಲ್ಲಿ ಜಗಳಗಂಟ’ ಮತ್ತು ಬುದ್ಧಿವಂತ’ ಎಂದು ಕರೆಸಿಕೊಳ್ಳುತ್ತಿದ್ದ ಡಿ ಆರ್ ನಾಗರಾಜ್ ಮಟ್ಟಿಗೆ ಅವರೆಡು ವಿಶೇಷಣಗಳೂ ನಿಜವೇ. ಅವರೊಂದಿಗೆ ಮಾತಾಡುತ್ತಾ ಕುಳಿತರೆ, ಸಾಹಿತ್ಯ ಜಗತ್ತಿನಲ್ಲಿ ಒಂದು ಸುತ್ತು ಬಂದಂತಾಗುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ನಾವು ಕಾಣದ ಸತ್ಯಗಳನ್ನು ಅವರು, ಪರಮ ಸತ್ಯವೆಂಬಂತೆ ಹೇಳುತ್ತಿದ್ದರು. ಒಮ್ಮೊಮ್ಮೆ ಅವರು ಹೇಳುವುದು ಸತ್ಯವಲ್ಲ ಎಂದು ಅರ್ಥವಾಗುತ್ತಿದ್ದರೂ, ಅದನ್ನು ನಿರಾಕರಿಸುವುದಕ್ಕೆ ನಮ್ಮಲ್ಲಿ ಮಾತುಗಳೇ ಇರುತ್ತಿರಲಿಲ್ಲ. ಅಪೂರ್ವ ನೆನಪಿನ ಶಕ್ತಿ ಮತ್ತು ಅಸಾಮಾನ್ಯ ತರ್ಕಬದ್ಧತೆಯಲ್ಲಿ ಎಷ್ಟೋ ಸಲ ನಮ್ಮ ನಂಬಿಕೆಗಳೆಲ್ಲ ಕೊಚ್ಚಿಹೋಗುತ್ತಿದ್ದವು.
ಡಿ ಆರ್ ದಾರಿತಪ್ಪಿಸುತ್ತಿದ್ದರು ಎಂಬುದು ಅನೇಕರ ಆಕ್ಷೇಪ. ಅದನ್ನು ನೇರವಾಗಿ ಅವರ ಬಳಿಯೇ ಪ್ರಸ್ತಾಪ ಮಾಡಿದಾಗ ಅವರೆಂದಿದ್ದರು: ನಾನು ಮತ್ತೊಂದು ದಾರಿಯನ್ನು ತೋರಿಸುತ್ತಿದ್ದೇನೆ ಅಷ್ಟೇ. ನಡೆದ ದಾರಿಯಲ್ಲೇ ನಡೆಯುವುದು ನನ್ನ ಜಾಯಮಾನ ಅಲ್ಲ. ಅಡಿಗರ ಮೂಲಕ ಮಹಾಶಯರು’ ಕವನ ಸಂಕಲನದ ಬಗ್ಗೆ ಅವರು ಬರೆದಿದ್ದನ್ನು ಓದಿ ನಮಗೆಲ್ಲ ದಿಗ್ರ್ಭಮೆ. ಡಿ ಆರ್ ಅಡಿಗರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಮೂಲಕ ಮಹಾಶಯರು ಕವಿತೆಯಲ್ಲಿ ಅಡಿಗರ ಶ್ರೇಷ್ಠ ಕಾವ್ಯದ ಮುಖ್ಯ ಗುಣವಾದ ಸಾವಯವ ಶಿಲ್ಪ ಮಾಯವಾಗಿದೆ ಎಂದಿದ್ದರು. ಕೇವಲ ವೈಚಾರಿಕತೆಯಷ್ಟೇ ಅಲ್ಲಿ ವಿಜೃಂಭಿಸುತ್ತದೆ. ವಿಚಾರ ಕಾವ್ಯದಲ್ಲಿ ಮೈತಾಳಬೇಕು ಎಂದಿದ್ದರು. ಒಂದು ಹಂತ ದಾಟಿದ ನಂತರ ನಮ್ಮ ಕವಿಗಳು ಹೀಗೇಕೆ ಆಗುತ್ತಾರೆ ಎಂದು ವಿಷಾದಿಸಿದ್ದರು. ಅನ್ಯಪ್ರೀತಿ, ಸಹಾನುಭೂತಿ ನಾಪತ್ತೆಯಾಗಿದೆ ಹಾಗೂ ಅದು ಅಡಿಗರ ಪ್ರತಿಭೆಯನ್ನೂ ಜೊತೆಗೆ ಕರೆದುಕೊಂಡು ಹೋಗಿದೆ ಎಂದು ಟೀಕಿಸಿದ್ದರು.
ಇದಕ್ಕೆ ಅಡಿಗರ ಪ್ರತಿಕ್ರಿಯೆ ಕೇಳಿದಾಗ ಅಡಿಗರು ರೇಗಾಡಿದ್ದರು. ಅನ್ಯಪ್ರೀತಿ ಮತ್ತು ಸಹಾನುಭೂತಿ ಸಿಟ್ಟಿನಲ್ಲೂ ವ್ಯಕ್ತವಾಗಬಹುದು ಅನ್ನುವುದು ಅವನಿಗೆ ಯಾಕೆ ಅರ್ಥವಾಗುವುದಿಲ್ಲ. ಸಂಸ್ಕೃತಿ ವಿಮರ್ಶೆ ಕಾವ್ಯದ ಪರಮ ಶತ್ರು. ಅದನ್ನು ಪ್ರತಿಪಾದಿಸುವ ವಿಮರ್ಶಕರು ಕಾವ್ಯವನ್ನು ಕಾವ್ಯವಾಗಿ ನೋಡುವುದಿಲ್ಲ. ಬದಲಾಗಿ ಕಾವ್ಯವನ್ನು ತಮ್ಮ ವಾದವನ್ನು ಮಂಡಿಸುವುದಕ್ಕೆ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಅವರ ಪಾಲಿಗೆ ಕವಿತೆಯೆನ್ನುವುದು ಕೇವಲ ಒಂದು ವೇದಿಕೆ ಮಾತ್ರ ಎಂದು ಬೇಸರಪಟ್ಟುಕೊಂಡಿದ್ದರು. ಇಬ್ಬರನ್ನೂ ಮೆಚ್ಚಿಕೊಂಡಿದ್ದ ನಮಗೆ ಇಬ್ಬರ ವಾದವೂ ಸರಿ ಅನ್ನಿಸುತ್ತಿತ್ತು. ಯಾಕೆ ಎನ್ನುವುದು ಮಾತ್ರ ಗೊತ್ತಿರಲಿಲ್ಲ
ಅಡಿಗರೇ ಅತಿರೇಕ ಎಂದು ಪಕ್ಕಕ್ಕಿಟ್ಟ ಸಾವಯವ ಸಮಗ್ರೀಕರಣ ಬಲ’ವನ್ನು ಇವತ್ತೂ ಪ್ರಯೋಗಿಸುವ ವಿಮರ್ಶಕರಿದ್ದಾರೆ. ಅದನ್ನೇ ಒಂದು ಕೃತಿಯ ಸತ್ವ ಎನ್ನುವವರೂ ಇದ್ದಾರೆ. ಆದರೆ ಡಿ ಆರ್ ಕೂಡ ಬಹಳ ಬೇಗ ಕಾವ್ಯದ ಆತ್ಮ ಸಾವಯವ ಶಿಲ್ಪದಲ್ಲಿಲ್ಲ ಎಂದು ಕಂಡುಕೊಂಡರು. ಕಾವ್ಯ ನಿರ್ಮಿತಿಯಲ್ಲೂ ತೆಳುವಾದ ಕೊನೆಗಳಿರಬಹುದು ಎಂದು ಪ್ರತಿಪಾದಿಸಿದರು.
*********
ವಿಮರ್ಶೆಯ ಸಾಂಪ್ರದಾಯಿಕ ವಿಧಾನವನ್ನು ಧಿಕ್ಕರಿಸಿ, ಹಳೆಯ ವಿಮರ್ಶಕರ ಹತಾರಗಳನ್ನು ಮೂಲೆಗೆಸೆದು, ಕಾವ್ಯವನ್ನು ನೋಡುವ ಕ್ರಮವನ್ನೇ ಬದಲಾಯಿಸಿದವರು ಡಿ. ಆರ್. ಹೇಗೆ ಒಬ್ಬ ಕವಿ ತನ್ನ ಸಮಾಜಕ್ಕೆ ಸ್ಪಂದಿಸುತ್ತಿರುತ್ತಾನೋ, ಹೇಗೆ ಅವನ ಯೋಚನೆ, ಓದು, ಅನುಭವ ಮತ್ತು ಅವನ ಸುತ್ತಲಿನ ಜಗತ್ತು ಅವನ ಕಾವ್ಯವನ್ನು ರೂಪಿಸುತ್ತದೋ, ವಿಮರ್ಶೆ ಕೂಡ ಕಾವ್ಯವನ್ನು ಕೇವಲ ಕಾವ್ಯವಾಗಿ ನೋಡುವುದಿಲ್ಲ. ಅದು ಕೂಡ ಕಾವ್ಯದಷ್ಟೇ ತೀವ್ರವಾದದ್ದು ಮತ್ತು ಸೃಜನಶೀಲವಾದದ್ದು. ವಿಮರ್ಶಕ ಕೇವಲ ಒಂದು ಕವಿತೆಯನ್ನು ಉದ್ದೇಶಿಸಿ ಮಾತಾಡುತ್ತಿರುವುದಿಲ್ಲ. ಅದರ ಮೂಲಕ ಇಡೀ ಸಂಸ್ಕೃತಿಯನ್ನೇ ಒಳಗೊಳ್ಳುತ್ತಿರುತ್ತಾನೆ ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸಿದ್ದು ಡಿಆರ್. ಗೌರಿ ಗಣೇಶ’ ಎಂಬ ಸಿನಿಮಾದ ಕುರಿತು ಬರೆಯುವಾಗ ಕೂಡ ಅವರು ಉತ್ಕರ್ಷಿಣಿ ಮತ್ತು ಅವಸರ್ಪಿಣಿ ಎಂಬ ಕಲಾಸಿದ್ಧಾಂತವನ್ನು ಮುಂದಿಟ್ಟುಕೊಂಡೇ ಹೊರಡುತ್ತಾರೆ. ಅವರು ಹಾಗೆ ಮಾತಾಡುವ ಹೊತ್ತಿಗೆ ಅವರಿಗೆ ಸಿನಿಮಾ ಒಂದು ನೆಪ ಮಾತ್ರ. ಅದರ ಮೂಲಕ ತಾನು ಕಟ್ಟಿಕೊಡುವ ಜಗತ್ತೇ ಆ ಕೃತಿಗಿಂತ ವಿಶಾಲವಾದದ್ದು ಮತ್ತು ಅಗಾಧವಾದದ್ದು ಎಂದು ನಂಬಿದಂತೆ ಬರೆಯುತ್ತಿದ್ದವರು ಅವರು. ಹೀಗಾಗಿ ಕವಿಗಳ ಪಾಲಿಗೆ ಅವರು ಪ್ರಿಯ ವಿಮರ್ಶಕರಾಗಿರಲಿಲ್ಲ. ಅಡಿಗರ ಹಾಗೆ ಅನೇಕರು ಅವರನ್ನು ಸ್ವಯಂಭು’ ಎಂದೇ ಭಾವಿಸಿದ್ದರು.
ಬೌದ್ಧಿಕತೆಯನ್ನೂ ತಾತ್ವಿಕತೆಯನ್ನೂ ಕಾವ್ಯದ ಮೂಲಕ ಪ್ರತಿಪಾದಿಸಲು ಹೊರಟವರ ಪಾಲಿಗೆ, ಅವರ ಸಿದ್ಧಾಂತಗಳಿಗೊಂದು ಚಿನ್ನದ ಚೌಕಟ್ಟನ್ನು ಹಾಕಿಕೊಟ್ಟವರು ಡಿ ಆರ್. ಹೀಗಾಗಿ ಕೆಲವು ಕವಿಗಳಂತೂ ಡಿ ಆರ್ ಮೆಚ್ಚುವಂತ ಕವಿತೆ ಬರೆಯುವುದಕ್ಕೆ ತಿಣುಕಾಡುತ್ತಿದ್ದರು. ಆದರೆ, ಕವಿಗಳು ಆ ಮಾರ್ಗ ಹಿಡಿಯುತ್ತಿದ್ದಂತೆ ಡಿಆರ್ ತನ್ನ ವಿಮರ್ಶೆಯ ನಿಲುವನ್ನು ಬದಲಾಯಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರ ಕಟ್ಟಾ ಅನುಯಾಯಿಗಳಿಗೂ ಡಿಆರ್ ನಿಲುಕದವರಾಗಿದ್ದರು.
ಅವರು ಬರೆದ ನವಮೌಖಿಕತೆ ಮತ್ತು ಕಾವ್ಯ ಎಂಬ ಪ್ರಬಂಧವನ್ನು ನೋಡಿ. ಅಲ್ಲಿ ಡಿ ಆರ್ ಪ್ರತಿಪಾದಿಸುವುದು ಇದನ್ನು:
ಪದಗಳ ಲಭ್ಯತೆ, ಪ್ರತಿಮಾ ಲಭ್ಯತೆ ಮತ್ತು ಕುಲದ ಲಭ್ಯತೆ ಎಂಬ ಮೂರು ಪ್ರಾಣದಾಯಕ ಶಕ್ತಿಗಳು ನವಮೌಖಿಕತೆ ಬೆಳೆದಂತೆಲ್ಲ ಕವಿಗೆ ಕಡಿಮೆಯಾಗುತ್ತಾ ಹೋಗುತ್ತದೆ. ಟಿವಿಯಂಥ ನವಮೌಖಿಕ ಮಾಧ್ಯಮದ ಪ್ರಧಾನ ಪರಿಣಾಮ ಎಂದರೆ ಕವಿಗೆ ಲಭ್ಯವಿರುವ ಭಾಷಾ ಸಮೂಹ, ಪದಾರ್ಥ ಸಮೂಹ ವಿವಿಧ ಮಟ್ಟಗಳಲ್ಲಿ ಕುಗ್ಗುತ್ತಾ, ಕರಗುತ್ತಾ ಹೋಗುವುದು. ಭಾಷೆ ಎಂಬ ಉಪ್ಪಿನ ಗುಣ ಕೆಡುತ್ತಾ ಹೋಗಿ, ಅವೈಲಬಿಲಿಟಿ ಆಫ್ ವರ್ಡ್ಸ್ ಕಡಿಮೆಯಾಗುತ್ತದೆ. ಆಗ ಆಕರ್ಷಣೆ ಮತ್ತು ಅಧಿಕಾರ ಎರಡೂ ಒಟ್ಟಿಗೆ ಹುಟ್ಟುತ್ತವೆ. ಈ ಸ್ಥಿತಿ ಕಾವ್ಯಕ್ಕೆ ಬಂದುಬಿಟ್ಟರೆ ಏನು ಗತಿ?’
ಅದೇ ಮತ್ತೊಂದು ಲೇಖನದಲ್ಲಿ ಡಿಆರ್ ಇದಕ್ಕೆ ಪೂರಕವೆಂಬಂತೆ ಕಾಣಿಸುವ, ಆದರೆ ವ್ಯತಿರಿಕ್ತವಾದ ಮಾತುಗಳನ್ನು ಆಡುತ್ತಾರೆ:
ಆಧುನಿಕ ಪ್ರಭುತ್ವದ ಸಮಾಜದಲ್ಲಿ ಕಲಾವಿದ ಅತ್ಯಂತ ಸೂಕ್ಷ್ಮರೀತಿಯ ದಮನಕ್ಕೆ ಒಳಗಾಗುತ್ತಾನೆ. ಆದ್ದರಿಂದ ಅವನು ತನ್ನ ಏಕಾಂಗಿತನದಲ್ಲೇ ಬಹುಸಂಖ್ಯಾತರ ಅನುಭವದ ರೂಪಕವಾಗುತ್ತಾನೆ. ದಬ್ಬಾಳಿಕೆ, ನಿಯಂತ್ರಣಗಳ
ವ್ಯವಸ್ಥೆಯಲ್ಲೇ ಒಳವಿಸ್ತಾರದ, ಆತ್ಮವಿಸ್ತಾರದ ಆಧ್ಯಾತ್ಮಿಕ ಶಕ್ತಿಯಾಗುತ್ತಾನೆ.’ ಅದೇ ಹೊತ್ತಿಗೆ ತತ್ವಜ್ಞಾನಿಗಳ ನಿಷೇಧಗಳನ್ನು ಕವಿ ಕಲಾವಿದರು ತಮ್ಮ ಪ್ರತಿಮೆಗಳ ಮೂಲಕ ದಾಟಿದರು. ಇದು ಅಂತಿಮ ತಾತ್ವಿಕ ರೋಮಾಂಚನ ಎನ್ನುತ್ತಾರೆ. ಈ ಮೂರು ಸತ್ಯ’ಗಳನ್ನು ಅರಗಿಸಿಕೊಂಡು ಬೆಳೆಯುವಷ್ಟು ನಮ್ಮ ಲೇಖಕರು ಪ್ರಬುದ್ಧರಾಗಿದ್ದರೇ ಎಂಬ ಪ್ರಶ್ನೆಯಷ್ಟೇ ನಮ್ಮಲ್ಲಿ ಉಳಿಯುತ್ತದೆ.
ವಿಮರ್ಶಕ ಲೇಖಕರಿಗಿಂತ ಎತ್ತರದಲ್ಲಿದ್ದಾಗ ಉಂಟಾಗುವ ನಿರ್ವಾತ ಸ್ಥಿತಿ. ಅಲ್ಲಿ ಲೇಖಕನ ಮಾತು ವಿಮರ್ಶಕನಿಗಾಗಲೀ ವಿಮರ್ಶಕನ ಮಾತು ಲೇಖಕನಿಗಾಗಲೀ ಕೇಳಿಸುವುದಿಲ್ಲ. ಇದು ತಿರುವುಮುರುವಾದರೂ ಅದೇ ಗತಿ. ಕುರ್ತಕೋಟಿ ಮತ್ತು ಬೇಂದ್ರೆ ವಿಚಾರದಲ್ಲಿ ಸಾಧ್ಯವಾದ ಸಾಮರಸ್ಯ, ಅಡಿಗರು ಮತ್ತು ಅನಂತಮೂರ್ತಿಯವರ ಸಾಂಗತ್ಯದಲ್ಲಿ ಸೃಷ್ಟಿಯಾದ ಪೂರಕ ಸ್ಥಿತಿ ಡಿಆರ್ ವಿಚಾರದಲ್ಲಿ ಸಾಧ್ಯವಾಗಲೇ ಇಲ್ಲ. ಡಿಆರ್ ಅವರ ಕಾಲದ ಎಲ್ಲಾ ಲೇಖಕರನ್ನು ಮೀರಿದ ವಿಶಿಷ್ಟ, ವಿಸ್ಮಯಕಾರಿ ಪ್ರತಿಭೆಯಾಗಿ ಜ್ವಲಿಸತೊಡಗಿದ್ದರು. ಆ ಬೆಳಕಿನಲ್ಲಿ ಅವರು ತೋರಿಸುವ ಕೃತಿಗಳೆಲ್ಲ ಕುಬ್ಜವಾಗಿ ಕಾಣಿಸುತ್ತಿದ್ದವು.
*********
ಲಂಕೇಶ್ ಪತ್ರಿಕೆ ಉಜ್ವಲವಾಗಿ ಮಿನುಗುತ್ತಿದ್ದ ಕಾಲದಲ್ಲಿ, ಹೊಸ ಓದಿಗೆ ಹಾತೊರೆಯುತ್ತಿದ್ದ ಅಸಂಖ್ಯಾತ ಓದುಗರು ಅರಳುತ್ತಿದ್ದ ದಿನಗಳಲ್ಲಿ ಡಿ ಆರ್ ಅಂಥ ಓದುಗರ ಪಾಲಿಗೆ ಸಾಹಿತ್ಯ ಎಲ್ಲ ಪೂರ್ವಗ್ರಹಗಳನ್ನೂ ಮೀರಿದ್ದು ಎಂದು ತೋರಿಸಿಕೊಟ್ಟವರು. ಸಣ್ಣದೊಂದು ಸಿದ್ಧತೆಯಿಲ್ಲದೇ ಪ್ರವೇಶಿಸಿದಾಗ ಸಾಹಿತ್ಯ ನಮ್ಮನ್ನು ತಟ್ಟಬೇಕಾದ ರೀತಿಯಲ್ಲಿ, ತಟ್ಟಬೇಕಾದ ತೀವ್ರತೆಯಲ್ಲಿ ಮುಟ್ಟಲಾರದು ಎಂದು ಸಾಬೀತುಮಾಡಿದವರು. ಅವರ ಜೊತೆಗೆ ಕಳೆದ ಸಂಜೆಗಳಲ್ಲೇ ನಮಗೆ ಕಾವ್ಯವನ್ನು ಓದುವುದು ಮತ್ತು ಗ್ರಹಿಸುವುದರ ವ್ಯತ್ಯಾಸ ಅರ್ಥವಾದದ್ದು.
ಕಿ.ರಂ. ನಾಗರಾಜ್ ಮತ್ತು ಡಿ ಆರ್ ನಾಗರಾಜ್ ಇಬ್ಬರೂ ಕನ್ನಡ ಕಾವ್ಯದ ಆರಾಧಕರೇ. ಶ್ರೇಷ್ಠ ಕಾವ್ಯವೆಂದರೆ ಸಾಕು ಮೈಮರೆಯುವ ಕಿ.ರಂ. ಹಾಗೂ ಅಮೃತಕ್ಕೆ ಹಾರುವ ಗರುಡನಿಗೆ ವಿಮರ್ಶಕ ಎಂಬಂತೆ ಬಿಂಬಿಸಿದ ಡಿ. ಆರ್. ಇಬ್ಬರನ್ನು ಓದಿಕೊಳ್ಳದೇ ಆಧುನಿಕ ಕಾವ್ಯಜಗತ್ತಿನೊಳಗೆ ಪ್ರವೇಶ ಪಡೆದವನು ಕಕ್ಕಾಬಿಕ್ಕಿಯಾಗುತ್ತಾನೆ ಅಥವಾ ಅಜ್ಞಾನಿಯಾಗಿಯೇ ಉಳಿಯುತ್ತಾನೆ.
ಡಿಆರ್ ಒಂದು ಕತೆ ಹೇಳುತ್ತಿದ್ದರು. ರವಿಕೀರ್ತಿ ಮತ್ತು ಚಂದ್ರಕೀರ್ತಿ ಎಂಬಿಬ್ಬರು ರಾಜರು. ಚಂದ್ರಕೀರ್ತಿಯನ್ನು ರವಿಕೀರ್ತಿ ಸೋಲಿಸಿ ತನ್ನ ಸೇವಕನನ್ನಾಗಿ ಇಟ್ಟುಕೊಳ್ಳುತ್ತಾನೆ. ಆ ಅವಮಾನವನ್ನು ತಾಳದೆ ಚಂದ್ರಕೀರ್ತಿ ಹುಚ್ಚನ ಥರ ನಟಿಸತೊಡಗುತ್ತಾನೆ. ಅದು ಹುಚ್ಚಲ್ಲ ವ್ಯಂಗ್ಯ ಎಂಬುದು ರವಿಕೀರ್ತಿಯ ಅನುಮಾನ. ಸಾಲದೆಂಬಂತೆ ಚಂದ್ರಕೀರ್ತಿಯ ಬಳಿ ಒಂದು ಕೋತಿ. ಅದು ಚಂದ್ರಕೀರ್ತಿಯ ಹುಚ್ಚು ನೋಟಕ್ಕೆ ಪ್ರತಿಕ್ರಿಯೆ ನೀಡುತ್ತಿರುವಂತೆ ಕಾಣಿಸುತ್ತದೆ. ಸೋತರೂ ತಗ್ಗದ ಅವನ ಸ್ಪೂರ್ತಿಯ ಸೆಲೆ ಯಾವುದೆಂದು ಹುಡುಕಿಕೊಂಡು ಹೊರಟ ರವಿಕೀರ್ತಿಗೆ ಒಂದು ಆಘಾತ ಕಾದಿರುತ್ತೆ. ರಾತ್ರಿ ಮನೆಗೆ ಹೋದ ಚಂದ್ರಕೀರ್ತಿ ಕೋತಿಗೆ ರಾಜನ ವೇಷ ತೊಡಿಸುತ್ತಿದ್ದ. ಅದು ರವಿಕೀರ್ತಿಯ ಹಾಗೆ ನಟಿಸುತ್ತಿತ್ತು. ಅವರ ಥರ ಗರ್ವದಿಂದ ವರ್ತಿಸುತ್ತಿತ್ತು. ಚಂದ್ರಕೀರ್ತಿ ನಗುತ್ತಿದ್ದ. ಇದಕ್ಕಿಂದ ಅವಾಕ್ಕಾದ ರವಿಕೀರ್ತಿ ಕೋತಿಯನ್ನು ಕೊಲ್ಲಿಸುತ್ತಾನೆ. ಆದರೂ ಚಂದ್ರಕೀರ್ತಿಯ ಲವಲವಿಕೆ ಕುಗ್ಗುವುದಿಲ್ಲ. ಮತ್ತೆ ರವಿಕೀರ್ತಿ ಗಮನಿಸಿದಾಗ, ಚಂದ್ರಕೀರ್ತಿಯ ಕನಸಿನಲ್ಲಿ ಆ ಕೋತಿ ಜೀವಂತವಾಗಿದ್ದುಕೊಂಡು ಅವನನ್ನು ಉತ್ತೇಜಿಸುತ್ತಿರುತ್ತದೆ. ಕನಸಿನ ಕೋತಿಯನ್ನು ಕೊಲ್ಲಿಸುವುದು ಹೇಗೆ ಗೊತ್ತಾಗದೇ ರವಿಕೀರ್ತಿ ಕಂಗಾಲಾಗುತ್ತಾನೆ.
ಕನಸಿನ ಕೋತಿಯನ್ನು ಕೊಲ್ಲಲಾಗುವುದಿಲ್ಲ ಎಂಬುದನ್ನು ಅರ್ಥಮಾಡಿಸಿದವರು ಡಿ ಆರ್ ನಾಗರಾಜ್. ಅದನ್ನು ನಮಗೆ ಪೂರ್ತಿ ಅರ್ಥಮಾಡಿಸುವ ಮೊದಲೇ ಅವರು ಕಣ್ಮರೆಯಾದರು ಎಂಬುದು ನಮ್ಮ ದೌರ್ಭಾಗ್ಯ ಮತ್ತು ಸವಾಲು.

‍ಲೇಖಕರು avadhi

5 May, 2010

2 Comments

  1. arundhathi ramesh

    ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಗೆಳತಿ ಜ್ಯೋತಿ ಗುರುಪ್ರಸಾದ್, ಶ್ರೀ ಡಿ.ಆರ್.ನಾಗರಾಜ್ ರನ್ನು ಭೇಟಿ ಮಾಡಿದ ಸುಮಾರು ಅರ್ಧ ಘಂಟೆಯ ಸಮಯ.
    ಅಲ್ಲಿವರೆಗೆ ಯು.ಆರ್.ಅನಂತಮೂರ್ತಿಯವರ ಬಾಲ, ಚೇಲಾ, ಚಮಚ.. ಎಂದೆಲ್ಲ ವಾಚಕಗಳೊಂದಿಗೆ ಅವ್ರ ವ್ಯಕ್ತಿತ್ವಕ್ಕೆ ನಕಾರಾತ್ಮಕ ಬಣ್ಣ ಹಚ್ಚಿಕೊಂಡಿದ್ದ
    ನನ್ನ ಇಡೀ ವಿಚಾರ ಕರಗಿ, ಹೊಸ ಸ್ವಯಂ ಪ್ರಭೆ-ಪ್ರತಿಭೆಯ ವ್ಯಕ್ತಿತ್ವ ವೊಂದು ಎದುರಾದದ್ದು ನನ್ನ ನೆನಪಿನ ಕೋಶದ ದಟ್ಟ-ದಿಟ್ಟ ಉಳಿವು.
    ನಂತರದ ಕೆಲವೇ ದಿನಗಳಲ್ಲಿ ನಾಗರಾಜ್ ಇಲ್ಲ ಎಂಬ ಸುದ್ದಿಯ ಆಘಾತ…
    ಜ್ಯೋತಿಗೆ ನನ್ನ ವಂದನೆಗಳ ಹರಿವು ಇಂದಿಗೂ ಇದೇ.

  2. ಚೈತನ್ಯ

    ಡಿಆರ್ ಭಾಷೆ ತುಂಬ ಬಿಗಿ. ಅದನ್ನು ಓದೋದಕ್ಕೆ ನೂರಾರು ಸಲ ಶಬ್ಧಕೋಶ ತಡಕಾಡಬೇಕು…
    ನಮ್ಮ ತಲೆಮಾರಿಗೆ ಪರಿಚಯವೇ ಇಲ್ಲದ ತೇಜಸ್ಸು ಡಿಆರ್. ಅವರ ಶೈವ ಪ್ರತಿಭೆ ಪುಸ್ತಕ ತೊಗೊಂಡು ಬೆರಗಾಗಿ ಬಿಟ್ಟಿದ್ದೇನೆ…….. ಒಳ್ಳೆಯ ಪರಿಚಯ ಮಾಡಿಕೊಟ್ಟಿದ್ದೀರ. ಧನ್ಯವಾದ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading