
ತೀವ್ರವಾಗಿ ಜೀವಿಸುತ್ತಿದ್ದ, ಜೀವಿಸುವುದನ್ನು ಕಲಿಸುತ್ತಿದ್ದ ಹಳೆಮನೆಯ ಲಿಂಗದೇವರು ಕಣ್ಮರೆಯಾಗಿದ್ದಾರೆ. ಮೈಸೂರಿಗೆ ಹೋಗುವುದಕ್ಕಿದ್ದ ಮತ್ತೊಂದು ನೆಪವೂ ಮಾಯವಾಗಿದೆ.
ಲಿಂಗದೇವರನ್ನು ನನಗೆ ಮೊದಲು ಪರಿಚಯಿಸಿದ್ದು ಅವರ ಲೇಖನಗಳು. ಅತ್ಯುತ್ಸಾಹದಿಂದ ಅವರು ಆಡುತ್ತಿದ್ದ ಮಾತು. ಮಾತಿನ ನಡುವೆ ಅವರು ಕೊಡುತ್ತಿದ್ದ ಉದಾಹರಣೆಗಳು. ನಮ್ಮ ರಾಜಕೀಯ ಸ್ಥಿತಿಗತಿಯನ್ನು ಅಚ್ಚುಕಟ್ಟಾಗಿ ವಿಶ್ಲೇಷಿಸಬಲ್ಲವರಾಗಿದ್ದ ಲಿಂಗದೇವರು, ತಾವು ಪ್ರೀತಿಸುವ ರಾಜಕಾರಣಿಗಳನ್ನೂ ಅಷ್ಟೇ ಕಟುವಾಗಿ ಬೈಯಬಲ್ಲವರಾಗಿದ್ದರು. ಕಟ್ಟುವ ಮತ್ತು ಕೆಡಹುವ ಶಕ್ತಿ ಇದ್ದವರಂತೆ ಕಾಣುತ್ತಿದ್ದರು. ರಂಗಾಯಣವನ್ನು ಅವರು ಕೆಡಹಿ ಕಟ್ಟುತ್ತಾರೆಂದು ನಾವೆಲ್ಲ ನಿರೀಕ್ಷಿಸುವ ಹೊತ್ತಲ್ಲೇ ಅವರು ಹಳೆಮನೆ ಬಿಟ್ಟು ಹೊರಟಿದ್ದಾರೆ.
ಲಿಂಗದೇವರು ಮತ್ತಷ್ಟು ಆಪ್ತರಾಗುವುದಕ್ಕೆ ಕಾರಣ ಗೆಳೆಯ ಬಿ ಎಸ್ ಲಿಂಗದೇವರು. ಒಮ್ಮೆ ನಾಗರಹೊಳೆಯಿಂದ ಮರಳುವ ಹಾದಿಯಲ್ಲಿ ನಾನು, ಉದಯ ಮರಕಿಣಿ ಮತ್ತು ಲಿಂಗದೇವರು, ಹಳೆಮನೆಯವರ ಕಛೇರಿಗೆ ದಾಳಿ ಇಟ್ಟಿದ್ದೆವು. ಅವರು ಆಫೀಸಿನ ತರಾತುರಿಯ ನಡುವೆಯೇ ಕೆಳಗಿಳಿದು ಬಂದು ನಮಗೆ ಮಸಾಲೆದೋಸೆ ಕೊಡಿಸಿ, ತಲೆಗೆ ನೂರೆಂಟು ವಿಚಾರಗಳನ್ನು ತುಂಬಿ ಹೋಗಿದ್ದರು. ಒಂದಷ್ಟು ಸಾಕ್ಷ್ಯಚಿತ್ರಗಳನ್ನು ತೋರಿಸಿ, ಅಂಥ ಕೆಲಸಗಳನ್ನು ಮಾಡಿಕೊಡಲು ಸಾಧ್ಯವೇ ಎಂದು ಕೇಳಿದ್ದರು. ತಮ್ಮ ಸಂಪರ್ಕಕ್ಕೆ ಬಂದ ಎಲ್ಲರನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ಅವರಿಗೆ ಗೊತ್ತಿತ್ತು. ಆದರಲ್ಲಿ ಸ್ವಾರ್ಥ ಕಿಂಚಿತ್ತೂ ಇರುತ್ತಿರಲಿಲ್ಲ.
ಸಂಜೆಯ ಪಾರ್ಟಿಗಳಲ್ಲಿ ಲಿಂಗದೇವರು ಅಪ್ಪಟ ಕ್ರಾಂತಿಕಾರಿಯಾಗುತ್ತಿದ್ದರು. ಈ ದೇಶದಲ್ಲಿ ಹೋರಾಟ ಯಾಕೆ ಹಿನ್ನೆಡೆ ಕಾಣುತ್ತಿದೆ ಎನ್ನುವುದನ್ನು ವಿಷಾದದಿಂದ ಹೇಳಿಕೊಳ್ಳುತ್ತಿದ್ದ ಅವರು ಹೋರಾಟದ ಕುರಿತ ಭರವಸೆ ಕಳೆದುಕೊಂಡಿರಲಿಲ್ಲ. ಅವರು ಹೇಳಿದ ಮಾತೊಂದು ಈಗಲೂ ನೆನಪಿದೆ. ಬೆಂಗಳೂರು ಮತ್ತು ಬೆಂಗಳೂರಿನಂಥ ನಗರಗಳು ಜೊಳ್ಳಾಗುತ್ತಿವೆ. ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಜಗತ್ತನ್ನು ಕಟ್ಟುವ ಶಕ್ತಿ ಇರುವುದು ನಮ್ಮ ಗ್ರಾಮೀಣ ಯುವಜನತೆಗೆ. ಅವರು ಅನವಶ್ಯಕವಾಗಿ ಹಿಂಜರಿಯುತ್ತಿದ್ದಾರೆ. ಅವರಿಗೊಂದು ಸಣ್ಣ ಕಿಡಿ ಸೋಕಿದರೂ ಸಾಕು, ಈ ಥಳುಕು ಜಗತ್ತನ್ನು ನಿವಾಳಿಸಿ ಎಸೆಯುತ್ತಾರೆ.
ಸಿನಿಮಾ, ನಾಟಕ, ಭಾಷೆ, ಸಾಹಿತ್ಯ, ಪತ್ರಿಕೋದ್ಯಮ, ಚಳವಳಿ ಎಲ್ಲದರ ಕುರಿತೂ ಲಿಂಗದೇವರಿಗೆ ಒಲವು ಮತ್ತು ಒಳನೋಟಗಳಿದ್ದವು. ಕೊಂಚ ಜಗಳಗಂಟನಂತೆ ಕಾಣುತ್ತಿದ್ದ ಅಪ್ಪಟ ವಿನಯವಂತ, ಒಮ್ಮೊಮ್ಮೆ ನಿರಾಸಕ್ತರಂತೆ ಕೂತುಬಿಡುತ್ತಿದ್ದದ್ದೂ ಉಂಟು. ನನಗೆ ಭಯ ಹುಟ್ಟಿಸುವುದು ಏಕಾಂತವಲ್ಲ, ಗದ್ದಲವೂ ಅಲ್ಲ. ಆ ಗದ್ದಲದಲ್ಲಿ ನನ್ನ ದನಿ ಕೇಳಿಸದೇ ಹೋದೀತು ಎಂದೂ ನಾನು ಯೋಚಿಸುವುದಿಲ್ಲ. ನಾನು ಅಪೇಕ್ಷಿಸಿದ ಒಂದೇ ಒಂದು ಉದ್ಗಾರ ಆ ಗುಂಪಿನಿಂದ ಹೊರಡದೇ ಹೋದಾಗ ಸಂಕಟವಾಗುತ್ತದೆ. ನಾನು ಅಪರಿಚಿತ ಅನ್ನಿಸಲು ಶುರುವಾಗುತ್ತದೆ. ಹಾಗಂತ ಅವರು ಹೇಳಿದ್ದು ರಂಗಾಯಣದ ಕುರಿತೇ.
ಅಲ್ಪ ಪರಿಚಯದಲ್ಲೇ ಅಪಾರವಾಗಿ ಆವರಿಸಿಕೊಳ್ಳಬಲ್ಲವರು ಕಡಿಮೆ. ಶಾಸ್ತ್ರೀಯ ಭಾಷೆಯ ಕುರಿತು, ಕನ್ನಡ ಶಾಸ್ತ್ರೀಯ ಭಾಷೆ ಆಗಬೇಕಾದ ಅಗತ್ಯದ ಕುರಿತು ಖಡಾಖಂಡಿತವಾಗಿ ಮಾತಾಡುತ್ತಿದ್ದ ಲಿಂಗದೇವರಿಗೆ ಹಾಗಾಗುವುದರ ಔಚಿತ್ಯ ಗೊತ್ತಿತ್ತು. ಅದು ಹೇಗೆ ನಮ್ಮ ಅಧ್ಯಯನ, ಸಂಶೋಧನೆ ಮತ್ತು ಅರಿವನ್ನು ವಿಸ್ತರಿಸಲು ನೆರವಾಗುತ್ತದೆ ಎನ್ನುವುದನ್ನು ಅವರು ಬರೆದಿದ್ದಾರೆ ಕೂಡ.
ಮೈಸೂರಿಗೆ ಹೋಗುವುದಕ್ಕಿದ್ದ ಕಾರಣಗಳು ಕಡಿಮೆಯಾಗಿವೆ ಅನ್ನುವುದು ಸುಳ್ಳಲ್ಲ.





avara barhagala kurithu / pusthaka parichaya madidere eegadru avarannu odabahudu
iidu vishaadada sangatiyaadaru nanage idella ondu sanketadante kaanuttide.bjp+raamadeva+etc! idella beleyuvadannu nodidare.raju