ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಮರೆತುಹೋದ ಕನಸನ್ನು ಮರೆಯಲು ಹವಣಿಸುತ್ತಾ…

ಮೊನ್ನೆ ರಾತ್ರಿ ಒಂದು ಕನಸು. ಬೆಳಗ್ಗೆ ತನಕ ನೆನಪಿತ್ತು. ಕನಸಿನ ಕೊನೆಗೆ ಅವರು ಯಾರೋ ಮಾಡಿದ್ದು ತಪ್ಪಾಯ್ತು ಅಂತ ಒಪ್ಕೊಂಡು ಹೊರಟು ಹೋಗ್ತಾರೆ. ಎಷ್ಟೊಳ್ಳೇ ಕತೆ ಅನ್ನಿಸಿಬಿಟ್ಟಿತ್ತು. ನಿದ್ದೆಯಿಂದ ಎದ್ದ ತಕ್ಷಣ ಒಂದೊಳ್ಳೇ ಕತೆ ಬರೆದ ಖುಷಿ. ಕೊನೆಯ ಸಾಲೂ ನಿಚ್ಚಳವಾಗಿ ನೆನಪಿತ್ತು. ಬರೆದಿಟ್ಕೋಬೇಕು ಅಂದ್ಕೋತಿರುವಾಗಲೇ ಆಫೀಸು, ಫೋನು, ಸೀನು, ವ್ಯಾನು ಇತ್ಯಾದಿ ರಾದ್ಧಾಂತವಾಯಿತು.

ಮಧ್ಯಾಹ್ನದ ಹೊತ್ತಿಗೆ ತೆಳುಬಿಸಿಲು. ಬಿಸಿಲು ಅಂದ್ರೆ ಬಿಸಿಲಲ್ಲ. ಮೋಡದಿಂದ ಮಾಡಿದ ಜಾಲರಿಯಿಂದ ಸೋಸಿಬಿಟ್ಟಂತೆ ಬಿಸಿಲು ಸೂಸುತ್ತಿತ್ತು. ಆ ಬೆಳಕೂ ಕನಸಿನಂತೆಯೇ ಕಾಣಿಸಿತಾದರೂ ಕನಸಲ್ಲಿ ಹೊಳೆದ ಸಾಲು ಏನೆಂಬುದು ಸ್ಪಷ್ಟವಾಗಲಿಲ್ಲ. ಮತ್ತೆ ಮತ್ತೆ ನೆನಪಿಸಿಕೊಳ್ಳಲು ಯತ್ನಿಸಿದಂತೆ ಅದು ನನ್ನಿಂದ ದೂರವಾಗುತ್ತಿರುವಂತೆ ಭಾಸವಾಗುತ್ತಿತ್ತು. ಹೊಳೆದ ಒಂದು ಸಾಲು ತಪ್ಪಿಸಿಕೊಂಡು ಹೋಗುವುದು ಸ್ಪಷ್ಟವಾಗಿಯೇ ಕಾಣಿಸುತ್ತಿತ್ತು.

ಮತ್ತೊಂದು ದಿನ ಅಂಥದ್ದೇ ಕನಸು ಬೀಳಬಹುದು ಎಂದುಕೊಂಡಿದ್ದೇನೆ. ಒಮ್ಮೆ ಬಿದ್ದ ಕನಸು ಮತ್ತೊಮ್ಮೆ ಬಿದ್ದ ಉದಾಹರಣೆ ಇಲ್ಲ. ಬಹುಶಃ ಯಾರಿಗೂ ಒಂದೇ ಕನಸು ಎರಡು ಬಾರಿ ಬೀಳುವುದೇ ಇಲ್ಲವೇನೋ. ಬಿದ್ದರೂ ಅಲ್ಲಿ ಆಡಿದ ಮಾತುಗಳು ಅವೇ ಆಗಿರಬೇಕಿಲ್ಲ. ಮುಖಗಳು ಅವೇ ಆಗಿರಬಹುದು. ಪರಿಸರವೂ ಅದೇ ಆಗಿರಬಹುದು. ಮಾತು ಬೇರೆಯಾಗಿರುವ ಸಾಧ್ಯತೆಯೂ ಉಂಟಲ್ಲ. ಅಥವಾ ಅದೇ ಮಾತನ್ನೇ ಆಡಿದ್ದರೂ ಮೊದಲ ಸಲ ಆಕರ್ಷಿಸಿದಷ್ಟು ಎರಡನೆಯ ಸಲಕ್ಕೂ ಅದು ಆಕರ್ಷಿಸಬೇಕು ಅಂತೇನೂ ಇಲ್ಲವಲ್ಲ. ಕೇಳಿದ ಮಾತು ಸವಕಲಾಗುತ್ತದೆ. ಕೇಳಿದ ಕತೆಯೂ. ಕವಿತೆ ಮಾತ್ರ ಬೆಳೆಯುತ್ತಾ ಹೋಗುತ್ತದೆ; ಕೈಗೆಟುಕದ ಪ್ರೇಮದಂತೆ.

ಆಮೇಲೆ ಅವರು ಸುಖವಾಗಿದ್ದರು ಅನ್ನುವ ಮಾತಲ್ಲಿ ಕನಸು ಕೊನೆಯಾಯಿತೇನೋ ಅಂತ ಅನೇಕ ಸಲ ಅನ್ನಿಸಿತ್ತು. ಅದು ಕೂಡ ಆ ಕ್ಷಣಕ್ಕೆ ತಪ್ಪೊಪ್ಪಿಗೆಯಂತೆ ಕೇಳಿಸಿತ್ತಲ್ಲ. ಸುಖವಾಗಿರುವುದು ಕೂಡ ತಪ್ಪಾ? ಒಮ್ಮೊಮ್ಮೆ ಏನೇನಕ್ಕೋ ಏನೇನೋ ನೆನಪಾಗುತ್ತದೆ. ಸಂಸಾರ ಅಂದಾಗ ಪುರಂದರದಾಸ, ಮಕ್ಕಳು ಅಂದಾಗ ಭಗೀರಥ, ತ್ರಿಕೋನ ಅಂದಾಗ ಸಿಲ್ಕ್ ಸ್ಮಿತಾ ಮೂಗು, ಕಾಶ್ಮೀರ ಎಂದಾಗ ಕಾಶಿ ಮತ್ತು ಮೀರಾ, ಬುಡಾನ್ ಸಾಬಿ ಅಂದಾಗ ಯಶವಂತ ಚಿತ್ತಾಲ, ಕುಮಾರಸ್ವಾಮಿ ಅಂದಾಗ ಯು ಆರ್ ಅನಂತಮೂರ್ತಿ… ಕೊಂಡಿಗಳೇ ವಿಚಿತ್ರ. ಅವು ಎಲ್ಲೆಲ್ಲಿಗೋ ತಳುಕು ಹಾಕಿಕೊಂಡಿರುತ್ತವೆ.

ವಿಶ್ವಾಮಿತ್ರನಿಗೂ ಅದೇ ಆಗಿತ್ತೋ ಏನೋ. ಬ್ರಹ್ಮರ್ಷಿಯಾಗಬೇಕು ಅನ್ನುವ ಹುಚ್ಚಿಗೆ ಬಿದ್ದು ಅವನು ತ್ರಿಶಂಕುವಿಗೊಂದು ಸ್ಥಾನ ದೊರಕಿಸಿಕೊಡಲು ಯತ್ನಿಸಿದ. ವಸಿಷ್ಠರ ಹಾಗೆ ಶಿಷ್ಟನಾಗಲು ನೋಡಿದ. ದೂರ್ವಾಸರಿಗೆ ಅಂಥ ಯಾವುದೇ ಆಸೆಯಿದ್ದಂತಿರಲಿಲ್ಲ. ವಿಶ್ವಾಮಿತ್ರ ಮೇನಕೆಯನ್ನು ಮೋಹಿಸಿದ ಹಾಗೆ ದೂರ್ವಾಸರು ಸಿಟ್ಟನ್ನು ಮೋಹಿಸಿದರು. ಸಿಟ್ಟು ಮತ್ತು ಮೇನಕೆ ಎರಡೂ ಒಂದೇ, ಕೊನೆಗೆ ಕಳಕೊಳ್ಳಬೇಕಾಗಿ ಬಂದದ್ದು ಮಂತ್ರಶಕ್ತಿಯನ್ನು. ಹಾಗಂತ ಹೊಳೆದದ್ದು ಕನಸೋ ನನಸೋ ಗೊತ್ತಾಗುತ್ತಿಲ್ಲ. ಟ್ಯೂಬು ಲೈಟಿನ ಬೆಳಕಿನಲ್ಲಿ ಎಲ್ಲವೂ ಸಪಾಟು. ಇಡೀ ಮನೆ ಸಮಾಜವಾದೀ ರಷಿಯಾ. ಅವನ್ನು ಒಡೆದು ಹಾಕಿ ಕಚಕಚ ಕಚ್ಚಿ ತಿನ್ನುವ ಹುಡುಗ ಟೀವಿಯಲ್ಲಿ ಪ್ರದರ್ಶನ ಕೊಡುತ್ತಾನೆ.

ದೊಡ್ಡ ಕನಸು ಕಾಣಯ್ಯ ಅನ್ನುತ್ತಿದ್ದರು ಎ ಎಸ್ ಮೂರ್ತಿ. ಕನಸು ನಮಗಿಂತ ದೊಡ್ಡದೂ ಅಗಾಧವೂ ಆಗಿರುತ್ತೆ ಎನ್ನುವುದನ್ನು ತೋರಿಸಿಕೊಟ್ಟವರೂ ಅವರೇ. ಆದರೆ ಕನಸು ಸ್ಥಾವರಕ್ಕೆ ಇಳಿದೊಡನೆ ಗಾಬರಿಯಾಗುತ್ತದೆ. ಮನೆ ಕಟ್ಟುವುದೇ ಕನಸಾದರೆ, ಅದಕ್ಕಿಂದ ದೊಡ್ಡ ಮನೆ ಕಟ್ಟುವುದೇ ಕನಸಾದರೆ ಅಂಥ ಕನಸುಗಳಿಗೆ ಧಿಕ್ಕಾರ. ಮನೆಯನೆಂದೂ ಕಟ್ಟದಿರು ಎಂಬ ಕನಸು ಕಂಡವರು ಕುವೆಂಪು. ಇಲ್ಲವಾಗುವುದೂ ಒಂದು ಕನಸು. ಇದ್ದೂ ಇಲ್ಲವಾಗುವುದು ಮತ್ತೊಂದು ಕನಸು. ಮೊನ್ನೆ ಮೊನ್ನೆ ಗೆಳೆಯನೊಬ್ಬ ಸಂಬಳ ಹೆಚ್ಚಾಯಿತು, ಜವಾಬ್ದಾರಿ ಹೆಚ್ಚಾಯಿತು ಎಂದು ಬೇಸರವಾಗಿ ಆ ಕೆಲಸ ಬಿಟ್ಟು ಮತ್ತೊಂದು ಕೆಲಸ ಹುಡುಕಿಕೊಂಡು ಹೊರಟನಂತೆ. ಮತ್ತೊಬ್ಬ ಮತ್ತಷ್ಟು ಜವಾಬ್ದಾರಿ ಬೇಕೆಂದು ಹುಡುಕಾಡುತ್ತಿದ್ದಾನಂತೆ. ಅವನನ್ನೂ ಮೆಚ್ಚುತ್ತೇನೆ, ಇವನನ್ನೂ ಮೆಚ್ಚುತ್ತೇನೆ. ಹೀಗೆ ಮೆಚ್ಚಿಕೊಳ್ಳುವುದು, ಅಲ್ಲಗಳೆಯುವುದು, ಸಣ್ಣಗಾಗಿದ್ದೀಯ ಅನ್ನುವುದು, ಚೆನ್ನಾಗಿ ಬರಿ ಎಂದು ಪ್ರೋತ್ಸಾಹಿಸುವುದು ಕನಸಾ ವಾಸ್ತವವಾ. ಪ್ರಸನ್ನ ಬರೆದ ಬಾಲಗೋಪಾಲ ಕಾದಂಬರಿಯನ್ನು ಓದಲು ಆರು ತಿಂಗಳಿಂದ ಯತ್ನಿಸುತ್ತಿದ್ದರೂ, ಅದನ್ನು ಓದಿ ಮುಗಿಸಿದಂತೆ ಕನಸು ಕೂಡ ಬಿದ್ದಿಲ್ಲ.

ಕೆಲವರಿಗೆ ಕುಡಿದಂತೆ ಕನಸು ಬೀಳುತ್ತದಂತೆ. ಕುಡಿದ ಹಾಗೆ ಕನಸು ಬೀಳುವುದು ಕೂಡ ಸುಖವೇ. ಯಾವಾಗಲೂ ಕುಡಿದ ಸ್ಥಿತಿಯಲ್ಲಿರಬೇಕು ಅಂದವನು ಬೋದಿಲೇರ್; ವೈನ್ , ಕಾವ್ಯ, ಪುಣ್ಯ ಯಾವುದಾದರೂ ಸರಿಯೇ ಅಂದ. ಯಾವುದಾದರೂ ಸರಿಯೇ, ಕುಡಿದವರು ಕನಸು ಕಾಣುವುದಿಲ್ಲ. ಕನಸಿನ ಸ್ಥಿತಿಗೆ ಆಗಲೇ ತಲುಪಿರುತ್ತಾರೆ. ಗಡಿಯಾಗ ಕೂಡ ಢಣ್ ಎಂದು ಬಾರಿಸಿ ಮತ್ತೆ ಕುಡಿಯುವ ಹೊತ್ತಾಯಿತು ಎಂದು ನೆನಪಿಸುತ್ತದೆ. ತಾಯ್ತನವನ್ನು ಕುಡಿದ ಹೆಣ್ಮಕ್ಕಳು ನೆನಪಾಗುತ್ತಾರೆ. ಅವರ ಕಣ್ಣುಗಳಲ್ಲಿ ತಾಯ್ತನದ ಮತ್ತು ತುಳುಕುತ್ತಿರುತ್ತದೆ. ಅಂಥವರು ಕೂಡ ಆ ಮತ್ತಿನಲ್ಲಿ ಮಕ್ಕಳನ್ನೂ ಗಂಡನನ್ನೂ ತೊರೆದು ಹೋಗುತ್ತಾರೆ.

ನೆರಳಲ್ಲಿ ಕುಳಿತು ಕನಸು ಕಾಣಬೇಕು ಎಂಬುದು ಬಹುದಿನದ ಆಸೆ. ಗೆಳೆಯ ಶ್ಯಾಮಸುಂದರ್ ಮನೆಯ ಮುಂದೊಂದು ಹೊಂಗೆಮರವಿತ್ತು. ಅದರಡಿಯಲ್ಲಿ ಕುಳಿತು ನಲ್ಗಾವ್ಯ ಓದುತ್ತಾ ನಡುಮಧ್ಯಾಹ್ನ ಬಿಯರ್ ಕುಡಿಯುತ್ತಾ ಕೂರುತ್ತಿದ್ದ ದಿನಗಳಿದ್ದವು. ಶ್ಯಾಮ್ ಸೊಗಸಾಗಿ ಅಡುಗೆ ಮಾಡುತ್ತಿದ್ದರು. ಮತ್ತೊಮ್ಮೆ ಅಲ್ಲಿಗೆ ಹೋಗಬೇಕು ಅನ್ನಿಸಿದಾಗೆಲ್ಲ ಕಂಪ್ಯೂಟರು, ಇಂಟರ್ನೆಟ್ಟು ಮತ್ತು ಈಮೇಲುಗಳ ಬೇಲಿ.

ನಿಮಗೆ ಕನಸು ಬಿದ್ದು ಎಷ್ಟು ದಿನವಾಯಿತು? ಅದನ್ನು ಯಾರಾದರೂ ಯಾಕೆ ಲೆಕ್ಕ ಇಡುತ್ತಾರೆ. ದೇವಯಾನಿಗೆ ಯಯಾತಿ ಕನಸೋ ನಿಜವೋ, ಯಯಾತಿಗೆ ಯೌವನ ಕನಸೋ ಸುಳ್ಳೋ. ಗೊತ್ತಾಗುತ್ತಿಲ್ಲ. ಸುಳ್ಳು ಸುಳ್ಳೇ ಆದರೂ ಯೌವನ ಯೌವನವೇ. ಅದರ ಹುಮ್ಮಸ್ಸೇ ಬೇರೆ. ಹಲವು ಹಲಸುಗಳ ನಡುವೆ ಒಂದು ಬಡಕಲು ಮಾವಿನ ಮರ ಕೂಡ ಜೊಂಪೆ ಜೊಂಪೆ ಮಾವಿನ ಕಾಯಿಗಳನ್ನು ಬಿಟ್ಟುಕೊಂಡು ನಿಂತಿದ್ದನ್ನು ನೋಡಿ ನಕ್ಕಿದ್ದೆವು. ಸೃಷ್ಟಿಗೆ ಸ್ಥಿತಿಗೆ ಲಯಕ್ಕೆ ಈ ಮೂರರ ಲಯಬದ್ಧ ಜೋಗುಳಕ್ಕೆ ಲೋಕದ ಕಿವಿ ಕಿವುಡು.

ನಿದ್ದೆಯಿಂದೆದ್ದು ನೋಡಿದರೆ ಜೋಬಲ್ಲಿ ಒಂದು ಪುಟ್ಟ ಚೀಟಿ. ಅದರಲ್ಲಿ ಗೀಚಿದ ಫೋನ್ ನಂಬರು. ಅದು ಯಾರ ನಂಬರ್ ಅನ್ನುವುದು ಹೊಳೆಯುತ್ತಿಲ್ಲ. ಕನಸಲ್ಲಿ ಸಿಕ್ಕವರು ಕೊಟ್ಟದ್ದಿರಬಹುದು ಎಂಬ ಗುಮಾನಿ. ಫೋನ್ ಮಾಡುವ ಧೈರ್ಯವಾಗುತ್ತಿಲ್ಲ. ಮತ್ತೊಂದು ಕನಸಿಗೆ ಆ ಕರೆ ತಲುಪಿ, ಕನಸು ಕಾಣುತ್ತಿದ್ದವರು ಎಚ್ಚೆತ್ತು, ನನ್ನ ಕನಸಿಗೂ ಅವರು ದಾಳಿಯಿಟ್ಟು, ಇಬ್ಬರೂ ಕನಸುಗಳನ್ನು ಕಳಕೊಂಡರೆ ಎಂಬ ಭಯ.

ರಾಜ್-ಕುಮಾರ್ ಎಷ್ಟು ಮುಗ್ಧರಾಗಿದ್ದರು. ಅಥವಾ ಗಾಯಕರೆಲ್ಲ ಮುಗ್ಧರೇ ಇರಬೇಕು. ಹಳೆಯ ಕೆಸೆಟ್ಟುಗಳನ್ನು ಹಾಕಿ ಕೇಳುತ್ತಿದ್ದರೆ ಮತ್ತದೇ ಸುಮಧುರ ಕಂಠ; ಆ ಸೂರ್ಯ ಚಂದ್ರ ಸಾಕ್ಷಿ, ತಂಗಾಳಿ ಸಾಕ್ಷಿಯು. ಎಂದೆಂದು ಬಿಡದ ಬೆಸುಗೆ ಈ ನಮ್ಮ ಪ್ರೀತಿಯು. ಚಿನ್ನದ ಮಲ್ಲಿಗೆ ಹೂವೇ…

ಚಿನ್ನದ ಮಲ್ಲಿಗೆ ಹೂವಿಗೆ ಪರಿಮಳವೂ ಇಲ್ಲ, ಅದು ಅರಳುವುದೂ ಇಲ್ಲ, ಬಾಡುವುದೂ ಇಲ್ಲ ಎಂದು ಗೊತ್ತಿದ್ದೂ ಜಯಚಿತ್ರಳನ್ನು ಮುಂದಿಟ್ಟುಕೊಂಡು ಆ ಗೀತೆಯನ್ನು ಹಾಡಲೇಬೇಕು. ಅದು ವಿಧಿ.

ವಿಧಿ ಎಂದುಕೊಂಡಾಗ ಕರ್ತವ್ಯ ಅಂದುಕೊಂಡಾಗ ಎಷ್ಟೊಂದು ಧರ್ಮಸಂಕಟಗಳೆಲ್ಲ ಕೊನೆಯಾಗಿಬಿಡುತ್ತವಲ್ಲ. ಕನಸು ಅಂದುಕೊಂಡಾಗ ಎಷ್ಟೊಂದು ಆಸೆಗಳು ಸುಮ್ಮನೆ ಸಾಗಿಹೋಗುತ್ತವಲ್ಲ.

 

 

 

 

‍ಲೇಖಕರು G

23 July, 2011

10 Comments

  1. vijayraj

    liked these lines very much 🙂
    ನಿದ್ದೆಯಿಂದೆದ್ದು ನೋಡಿದರೆ ಜೋಬಲ್ಲಿ ಒಂದು ಪುಟ್ಟ ಚೀಟಿ. ಅದರಲ್ಲಿ ಗೀಚಿದ ಫೋನ್ ನಂಬರು. ಅದು ಯಾರ ನಂಬರ್ ಅನ್ನುವುದು ಹೊಳೆಯುತ್ತಿಲ್ಲ. ಕನಸಲ್ಲಿ ಸಿಕ್ಕವರು ಕೊಟ್ಟದ್ದಿರಬಹುದು ಎಂಬ ಗುಮಾನಿ. ಫೋನ್ ಮಾಡುವ ಧೈರ್ಯವಾಗುತ್ತಿಲ್ಲ. ಮತ್ತೊಂದು ಕನಸಿಗೆ ಆ ಕರೆ ತಲುಪಿ, ಕನಸು ಕಾಣುತ್ತಿದ್ದವರು ಎಚ್ಚೆತ್ತು, ನನ್ನ ಕನಸಿಗೂ ಅವರು ದಾಳಿಯಿಟ್ಟು, ಇಬ್ಬರೂ ಕನಸುಗಳನ್ನು ಕಳಕೊಂಡರೆ ಎಂಬ ಭಯ.

  2. bharathi

    endinanthe gadya kavya .. mechchi huchchaade jogi

  3. Vivek

    Nice

  4. malli

    eshtondu prashnegalu eduraagtavve alwa sir…………

  5. ಶ್ರೀಧರ ಬೇವೂರು

    ನಾನು ನಾಳೆ ಬೆಳಗ್ಗೆ ಎದ್ದಾಗ ಈ ಬರಹ ಓದಿದ್ದು ನಿನ್ನೆ ರಾತ್ರಿ ಮಲಗುವ ಮುಂಚೆ ನನಸಿನಲ್ಲೋ ಅಥವಾ ನಿನ್ನೆ ರಾತ್ರಿ ಕನಸಿನಲ್ಲೋ ಅನ್ನುವ ಅನುಮಾನ ಕಾಡಬಹುದೆ??!!

  6. suvarna

    kanasu ennuva moorakshrada padada bagge mooru athava munnuru puta bareyalu nimage sadya sir

  7. Nagesh. KM

    ok

  8. nagarjuna

    kanasu ennuvudu ondu adbuta prapancha.eadra bagge nivu barediru lekana chennagede.

  9. Keshav Kulkarni

    ಕನಸಿನ ಬಗ್ಗೆ ಕನಸಿನಲ್ಲೇ ಬರೆದ ಬರಹ ತುಂಬ ಚೆನ್ನಾಗಿದೆ.

    • manjunayaka

      I like it sir…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading