ಒಳ್ಳೇ ಆದಾಯ ಇದ್ದರೆ ಭಗ್ನಪ್ರೇಮ ಎಂಬುದು ಲಂಡನ್ ವಾಸಿಗೆ ಬಹು ಹಿತವಾದ ದುಸ್ಥಿತಿ ಅಂದವನು ಬರ್ನಾರ್ಡ್ ಷಾ. ಪ್ರೀತಿಸಿದವಳನ್ನು ಪಡೆಯುವುದು ಆನಂದ. ಪಡೆಯದೇ ಇರುವುದು ಪರಮಾನಂದ ಎಂದವನೂ ಅವನೇ ಇರಬೇಕು. ಹೀಗೆ ಭಗ್ನಪ್ರೇಮವನ್ನು ಸಣ್ಣಗೆ ಗೇಲಿ ಮಾಡುತ್ತಾ ಈ ಫಟಿಂಗರು ನಮ್ಮ ಯೌವನದ ದುಃಖಗಳೆಲ್ಲ ಎಷ್ಟು ಬಾಲಿಶ ಅನ್ನುವುದನ್ನು ತೋರಿಸಿಕೊಡುತ್ತಿದ್ದರು. ಷಾ ಹಾಗಂತ ಹೇಳಿದ್ದು ನಲವತ್ತು ದಾಟಿದ ನಂತರ ಅನ್ನುವುದನ್ನೂ ಹದಿನೆಂಟು ಇಪ್ಪತ್ತನೆ ವಯಸ್ಸಿನಲ್ಲಿ ಆತ ಕೂಡ ನಮ್ಮ ಹಾಗೆಯೇ ಕನಸುತ್ತಿದ್ದ, ಸುಖಿಸುತ್ತಿದ್ದ, ಪ್ರೇಮಕ್ಕಾಗಿ ಹಾತೊರೆಯುತ್ತಿದ್ದ ಅನ್ನುವುದನ್ನೂ ನಾವು ಮರೆತೇಬಿಟ್ಟಿದ್ದೆವು. ಸಾಹಿತಿ ಅಪಾಯಕಾರಿ. ಅವನು ನಮ್ಮನ್ನು ಪ್ರಭಾವಿಸುತ್ತಾ ಹೋದಂತೆ, ನಮ್ಮನ್ನು ತಿದ್ದುತ್ತಲೂ ಹೋಗುತ್ತಾನೆ. ಯಾವುದೋ ಒಂದು ಹಂತದಲ್ಲಿ ನಾವೂ ಅವನಂತಾಗಲು ಹವಣಿಸುತ್ತೇವೆ. ಪದವಿ ಮುಗಿಸಿದ ದಿನಗಳಲ್ಲಿ ನಾನೂ ನನ್ನ ಮಿತ್ರರು ತೇಜಸ್ವಿಯ ಮಹಾನ್ ಆರಾಧಕರಾಗಿ, ಅವರಂತೆ ಕಾಫಿ ತೋಟ ಮಾಡಲು ಹೊರಟಿದ್ದೆವು. ನಮ್ಮಣ್ಣ ಕೊಟ್ಟಿಗೆಹಾರ ಸಮೀಪದ ಚಕಮಕಿ ಎಂಬ ಊರಿನಿಂದ ಎಂಟೋ ಒಂಬತ್ತೋ ಮೈಲಿ ದೂರದಲ್ಲಿರುವ ಕತ್ಲೆಕಾನ ಎಂಬ ಜಾಗದಲ್ಲಿ ಕಾಫಿ ತೋಟ ಮಾಡಿದ್ದು ಕೂಡ ತೇಜಸ್ವಿಯವರನ್ನು ಓದಿಯೇ ಇರಬೇಕು ಎಂದು ಈಗ ಅನುಮಾನವಾಗುತ್ತಿದೆ.
ಆಗ ನಾನೂ ನಮ್ಮಣ್ಣ ಒಂದೇ ಸೈಕಲ್ಲಿನಲ್ಲಿ ಉಪ್ಪಿನಂಗಡಿಯಿಂದ ಬೆಳ್ತಂಗಡಿ, ಉಜಿರೆ ದಾಟಿಕೊಂಡು ಚಾರ್ಮಾಡಿ ಘಾಟಿ ಏರುತ್ತಾ ಕೊಟ್ಟಿಗೆಹಾರ ತಲುಪಿ ಅಲ್ಲಿಂದ ಬಣಕಲ್ ಎಂಬ ಪುಟ್ಟ ಊರಿಗೆ ಹೋಗಿ, ಅಲ್ಲಿನ ಟೆಂಟ್-ನಲ್ಲೊಂದು ಸಿನಿಮಾ ನೋಡಿಕೊಂಡು, ಚಕಮಕಿಗೆ ಬಂದು ಅಲ್ಲಿಂದ ಕಾಡು ಹಾದಿಯಲ್ಲಿ ಸಾಗುತ್ತಾ ನಡುರಾತ್ರಿ ಹೊತ್ತಿಗೆ ಕತ್ಲೆಕಾನ ತಲುಪುತ್ತಿದ್ದೆವು. ಬೆಳದಿಂಗಳ ರಾತ್ರಿಯಲ್ಲಿ ಇಡೀ ಕಾಡು ಮೌನವಾಗಿ ಮಲಗಿರುತ್ತಿತ್ತು. ಬಿದಿರ ಮೆಳೆಗಳು ಜೀಕುವ ಸದ್ದು ಬಿಟ್ಟರೆ ಗಾಢಮೌನ. ನಾವು ಸೈಕಲ್ ತುಳಿಯುತ್ತಾ, ಏರುಹಾದಿಯಲ್ಲಿ ಸೈಕಲ್ ತಳ್ಳಿಕೊಂಡು, ಬೇಜಾರಾದಾಗ ಬೀಡಿ ಸೇದುತ್ತಾ ಜೀನ್ ವಾಲ್ ಜೀನ್ ಕತೆಗಳನ್ನು ನೆನಪಿಸಿಕೊಳ್ಳುತ್ತಾ ಕಾಲದ ಪರಿವೆಯೇ ಇಲ್ಲದಂತೆ ಸಾಗುತ್ತಿದ್ದೆವು.
ಅಂಥ ದಿನಗಳಲ್ಲಿ ಕೃಷ್ಣಪ್ರಸಾದ ಪ್ರೇಮದಲ್ಲಿ ಸಿಕ್ಕಿಹಾಕಿಕೊಂಡದ್ದು. ಆ ಪ್ರೇಮ ಮುರಿದುಬಿದ್ದು ಅವನು ಕಂಗಾಲಾದದ್ದು. ತನ್ನಲಿರುವ ಲಕ್ಷಾಂತರ ಮೌಲ್ಯದ ಆಸ್ತಿ, ತನ್ನ ಯೌವನ, ಡಿಗ್ರಿ ಸರ್ಟಿಫಿಕೇಟು, ಆಗಷ್ಟೇ ಕೊಂಡಿದ್ದ ಬೈಕು, ಸಾಮು ಮಾಡಿ ಹುರಿಗಟ್ಟಿದ ಮೈಕಟ್ಟು ಎಲ್ಲವೂ ವ್ಯರ್ಥ ಎಂಬ ನಿರ್ಧಾರಕ್ಕೆ ಬಂದದ್ದು. ಊಟ ಮಾಡಲಾರೆ ಎಂದು ಸುಮಾರು ಏಳೆಂಟು ದಿನ ಉಪವಾಸ ಕೂತಿದ್ದ ಕೃಷ್ಣ, ನಾವು ಹೋಗುವ ಹೊತ್ತಿಗೆ ಮಂಕಾಗಿದ್ದ. ಅವನನ್ನು ಸರಿ ಮಾಡುತ್ತೇವೆ ಎಂಬ ನಂಬಿಕೆಯೂ ನಮಗಿರಲಿಲ್ಲ. ಅವನ ಸ್ನೇಹಿತರು ನೀವು. ನೀವೇ ಅವನಿಗೆ ಬುದ್ಧಿ ಹೇಳಬೇಕು. ಹೇಗಾದರೂ ಮಾಡಿ ಅವನ ಮನಸ್ಸು ಕರಗಿಸಿ. ಇಲ್ಲದೇ ಹೋದ್ರೆ ಸತ್ತೇ ಹೋಗ್ತಾನೆ ಅವನು. ಅವನ ಹಠ ಎಷ್ಟೂಂತ ನಮಗೆ ಗೊತ್ತಿದೆ ಎಂದು ಅವನ ಅಪ್ಪ ನಮ್ಮಲ್ಲಿ ಕೇಳಿಕೊಂಡಿದ್ದರು. ಅದ್ಯಾವ ಮಹಾ ಕೆಲಸ ಎಂದು ಗೆಳೆಯರೆಲ್ಲ ಹೊರಟುನಿಂತಿದ್ದರು. ಆದರೆ ಅದು ಅಷ್ಟು ಸುಲಭದಲ್ಲಿ ಮುಗಿಯುವ ಕೆಲಸ ಅಲ್ಲ ಅನ್ನುವುದು ನನಗೆ ಗೊತ್ತಿತ್ತು. ಪ್ರೇಮದ ಗುಂಗಿಗೆ ಬಿದ್ದು ಪ್ರಾಣ ತೆತ್ತವರ ಕತೆಗಳನ್ನು ನಾನು ಕೇಳಿದ್ದೆ. ನಮ್ಮೂರಿನ ಹುಡುಗಿಯೊಬ್ಬಳು ಕರ್ರಗಿರುವ ಪಾಂಡುರಂಗನನ್ನು ಪ್ರೀತಿಸಿ, ಮನೆಯವರು ವಿರೋಧಿಸಿದಾಗ ಅವರೆದುರೇ ಕತ್ತಿಯಿಂದ ಕತ್ತು ಕತ್ತರಿಸಿಕೊಳ್ಳುವುದಕ್ಕೆ ಹೊರಟಿದ್ದಳು. ಆ ಕಾಲದಲ್ಲಿ ತಕ್ಷಣಕ್ಕೆ ವೈದ್ಯರೂ ಸಿಗದೇ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಪ್ರಾಣ ಕಳಕೊಂಡಿದ್ದಳು. ಸ್ಕೂಲಿಗೆ ಬರುತ್ತಿದ್ದಾಗ ಒಂದೂ ಮಾತಾಡದ, ಜಗತ್ತಿನ ಯಾವ ಸಂಗತಿಗಳಲ್ಲೂ ಆಸಕ್ತಿಯಿಲ್ಲದ ಆಕೆ ಪ್ರೀತಿಸುತ್ತಾಳೆ ಅನ್ನುವುದನ್ನು ನಂಬುವುದಕ್ಕೆ ನಮಗೆ ಸಾಧ್ಯವಿರಲಿಲ್ಲ. ಸ್ಕೂಲಿಗೆ ಹೋಗಿ ಬರುತ್ತಾ, ಪ್ರತಿ ತರಗತಿಯಲ್ಲೂ ಮೊದಲನೆಯವಳಾಗಿ ತೇರ್ಗಡೆಯಾಗುತ್ತಿದ್ದ ಮಗಳು, ಮನೆ ಕೆಲಸಕ್ಕೆ ಬರುತ್ತಿದ್ದ ಅಬ್ಬೇಪಾರಿ ಪಾಂಡುರಂಗನನ್ನು ಕಣ್ಣೆತ್ತಿ ನೋಡುತ್ತಾಳೆ ಅನ್ನುವುದನ್ನು ನಂಬುವುದಕ್ಕೆ ಅವಳ ಅಪ್ಪ ಅಮ್ಮ ತಯಾರಿರಲಿಲ್ಲ. ಕೊನೆಗೊಂದು ದಿನ ಅವರಿಬ್ಬರೂ ದನದ ಕೊಟ್ಟಿಗೆಯಲ್ಲಿ ತಬ್ಬಿಕೊಂಡದ್ದು ಕಣ್ಣಿಗೆ ಬಿದ್ದಾಗ ಮನೆಯವರು ಕಂಗಾಲಾಗಿದ್ದರು. ಪಾಂಡುರಂಗನನ್ನು ಹೊಡೆದೋಡಿಸಿದ್ದರು. ಮಗಳು ಹಠ ಬಿಡದೇ ಇದ್ದಾಗ ಅವಳಿಗೆ ಅವನು ಮಾಟ ಮಾಡಿದ್ದಾನೆ, ಮದ್ದು ಹಾಕಿದ್ದಾನೆ ಅಂತೆಲ್ಲ ಭಾವಿಸಿ ಮಂತ್ರವಾದಿಯನ್ನು ಕರೆಸಿದ್ದರು. ತಮ್ಮ ಮನೆತನದ ಗೌರವ, ಸಂಸ್ಕಾರ ಮತ್ತು ಘನತೆ ತಮ್ಮ ಮಗಳಿಗೂ ಬಂದಿದೆ. ಅವಳು ಆತನನ್ನು ಪ್ರೀತಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಿಬಿಟ್ಟಿದ್ದರು. ಪ್ರೇಮ ಎಲ್ಲಾ ಸಂಸ್ಕಾರ ಮತ್ತು ಘನತೆಯನ್ನೂ ಮೀರಬಲ್ಲುದು ಎಂಬುದು ಅವರಿಗೆ ಕೊನೆತನಕ ಗೊತ್ತೇ ಆಗಲಿಲ್ಲ.
ಮಗಳ ಸಾವಿನಿಂದ ತಾಯಿಗೆ ಹುಚ್ಚು ಹಿಡಿಯಿತು. ಆಕೆ ಮನೆಯೊಳಗೆ ಅವಿತು ಕೂತು ಯಾರ ಕೈಗೂ ಸಿಗದೇ ಯಾರಾದರೂ ಮನೆಯೊಳಗೆ ಬಂದಾಗ ಒನಕೆಯಿಂದ ಅವರ ತಲೆಗೆ ಹೊಡೆಯುತ್ತಾ ಅಪಾಯಕಾರಿಯಾಗಿ ಪರಿಣಮಿಸಿದ್ದಳು. ಅವಳ ಗಂಡ ಕೂಡ ಅವಳಿಗೆ ಸಾಕಷ್ಟು ಸಲ ಹೊಡೆಸಿಕೊಂಡಿದ್ದ. ಎಷ್ಟೇ ಎಚ್ಚರಿಕೆಯಿಂದ ಮನೆಯೊಳಗೆ ಕಾಲಿಟ್ಟರೂ ಆಕೆ ಅದ್ಯಾವುದೋ ಮಾಯೆಯಿಂದ ಮತ್ತೆಲ್ಲೋ ಅಡಗಿದ್ದುಕೊಂಡು ತಲೆ ಒಡೆಯಲು ಮುಂದಾಗುತ್ತಿದ್ದಳು. ಇದರಿಂದ ರೋಸಿಹೋದ ಗಂಡ ಅವಳನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟು ಹೋದ. ಬೆಂಗಳೂರಲ್ಲೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ತೀರಿಕೊಂಡ ಸುದ್ದಿ ಬಂತು. ಗಂಡ ಇದೆಲ್ಲದರಿಂದ ನೊಂದು ಅದೆಲ್ಲೋ ನಾಪತ್ತೆಯಾದನೆಂದೂ ಅವನ ಆಸ್ತಿಯನ್ನು ಅವನ ಚಿಕ್ಕಪ್ಪನ ಮಕ್ಕಳು ಹೊಡಕೊಂಡರೆಂದೂ ನಮ್ಮೂರಲ್ಲಿ ಈಗಲೂ ಮಾತಾಡಿಕೊಳ್ಳುತ್ತಾರೆ.
ಇಂಥ ಕತೆಗಳನ್ನು ಕೇಳಿದ್ದ ನನಗೆ ಪ್ರೇಮದ ತೀವ್ರತೆಯ ಅರಿವಿತ್ತು. ಕೃಷ್ಣನನ್ನು ಬದಲಾಯಿಸುವುದು ಖಂಡಿತಾ ಸಾಧ್ಯವಿಲ್ಲ ಎಂಬುದು ಖಚಿತವಾಗಿ ಗೊತ್ತಿದ್ದರೂ ಅವನ ಅಪ್ಪನ ಮನಸ್ಸಿಗೆ ಸಮಾಧಾನ ಆಗಲೆಂದು ಒಂದಷ್ಟು ಪ್ರಯತ್ನಗಳನ್ನು ಮಾಡಿದೆವು. ಅವನನ್ನು ಒತ್ತಾಯ ಮಾಡಿ ಮನೆಯಿಂದಾಚೆ ಕರೆದುಕೊಂಡು ಹೋದೆವು. ಪ್ರೇಮ ನಶ್ವರ ಎಂದೂ ಅದರ ಪರಿಣಾಮ ಏನಿದ್ದರೂ ಆರೆಂಟು ತಿಂಗಳ ಕಾಲ ಮಾತ್ರ ಇರುತ್ತದೆಂದೂ ಹೇಳಿನೋಡಿದೆವು. ಅವಳು ಸಿಗುವ ತನಕ ಹಂಬಲಿಸುತ್ತಿ. ಅವಳು ಸಿಕ್ಕ ನಂತರ ಯಾಕಾದರೂ ಸಿಕ್ಕಳೋ ಅನ್ನಿಸುತ್ತೆ. ಜಗತ್ತಿನಲ್ಲಿ ಎಷ್ಟು ಕೋಟಿ ಮಂದಿ ಪ್ರೀತಿಸಿಲ್ಲ, ಮದುವೆ ಆಗಿಲ್ಲ. ಅವರೆಲ್ಲ ಆಮೇಲೆ ಏನಾಗಿದ್ದಾರೆ ಅನ್ನೋದೂ ನಿನಗೆ ಗೊತ್ತಿದೆ. ಪ್ರೇಮ ಕ್ರಮೇಣ ತನ್ನ ಮಾಂತ್ರಿಕತೆಯನ್ನು ಕಳೆದುಕೊಳ್ಳುತ್ತದೆ. ತೀರ ಸಾಮಾನ್ಯ ಸಂಗತಿಯಂತಾಗುತ್ತದೆಎಂದು ಹೇಳಲು ಯತ್ನಿಸಿದೆವು. ಆ ಕ್ಷಣದಲ್ಲಿ ಅದ್ಯಾವುದೂ ಅವನಿಗೆ ನಾಟಿದಂತೆ ಕಾಣಲಿಲ್ಲ. ತನ್ನ ಸಂಪತ್ತು, ಜಾತಿ, ಓದು ಮತ್ತು ಯೌವನವನ್ನು ಅವಳು ಧಿಕ್ಕರಿಸುವಷ್ಟು ಧೈರ್ಯಸ್ಥೆ ಆದದ್ದಾದರೂ ಹೇಗೆ. ಅವಳಿಗೆ ತನ್ನ ಪ್ರೇಮವನ್ನು ನಿರಾಕರಿಸುವ ಧೈರ್ಯ ಎಲ್ಲಿಂದ ಬಂತು ಎಂದು ವಿಚಿತ್ರವಾಗಿ ಮಾತಾಡುತ್ತಿದ್ದ. ಅವಳನ್ನು ತಾನು ಪ್ರೀತಿಸುತ್ತಿರುವುದೇ ಶತಮಾನದ ಅಚ್ಚರಿಗಳಲ್ಲಿ ಒಂದು ಎಂದು ಆತ ಭಾವಿಸಿದಂತಿತ್ತು. ಒಂದಿಡೀ ದಿನ ಅವನೊಡನೆ ಮಾತಾಡುವ ಹೊತ್ತಿಗೆ ನಮಗೂ ಸಾಕಾಗಿ ಹೋಗಿತ್ತು. ಅವನು ಉಪವಾಸ ಸತ್ತರೆ ಸಾಯಲಿ ಎಂಬ ತೀರ್ಮಾನಕ್ಕೆ ನಮ್ಮಲ್ಲಿ ಅನೇಕರು ಬಂದುಬಿಟ್ಟಿದ್ದರು. ಅದು ಪ್ರೀತಿಯಲ್ಲ ಕೊಬ್ಬು ಮತ್ತು ಅಹಂಕಾರ ಎಂದು ತೀರ್ಮಾನಿಸಿ ನಾವು ಅವನನ್ನು ಅವನಷ್ಟಕ್ಕೆ ಬಿಟ್ಟು ಬಿಡುವ ತೀರ್ಮಾನಕ್ಕೆ ಬಂದೆವು.
ಅವನು ಸಾಯಲಿಲ್ಲ. ನಮ್ಮ ಮಾತು ಪರಿಣಾಮ ಬೀರಿದೆ ಅಂದುಕೊಂಡು ನಾವು ಸುಮ್ಮನಾದೆವು. ಆದರೆ ಅವನು ಆ ಹುಡುಗಿಯ ಮದುವೆಯನ್ನು ತಪ್ಪಿಸುತ್ತಿದ್ದಾನೆ ಅನ್ನುವ ಆತಂಕದ ಸುದ್ದಿಯನ್ನು ಊರಿಗೆ ಹೋದಾಗ ಗೆಳೆಯರು ಹೇಳಿದರು. ಅವಳನ್ನು ನೋಡುವುದಕ್ಕೆ ಯಾರೇ ಬಂದರೂ ಅವರನ್ನು ಸಂಪರ್ಕಿಸಿ ಅವಳ ನಡತೆ ಸರಿಯಿಲ್ಲ ಎಂದು ಹೇಳುತ್ತಿದ್ದನಂತೆ ಕೃಷ್ಣ. ಅವಳ ಮನೆಯವರಿಗೂ ಅದು ಕ್ರಮೇಣ ಗೊತ್ತಾಗಿ ಅವನನ್ನು ಹೊಡೆಯುವುದಕ್ಕೆ ಬಂದಿದ್ದರಂತೆ. ಅವಳನ್ನು ನಾನೇ ಮದುವೆ ಆಗ್ತೀನಿ ಅಂತ ಕೃಷ್ಣಪ್ರಸಾದ ಹೇಳಿದಾಗ ಅವರು ಅದಕ್ಕೂ ಒಪ್ಪಿಕೊಂಡಿದ್ದರಂತೆ. ಆದರೆ ಆ ಹುಡುಗಿ ಮಾತ್ರ ಒಪ್ಪಿರಲಿಲ್ಲ. ಮದುವೆ ಆಗದೇ ಇದ್ದರೂ ಸೈ, ಅವನನ್ನು ಮಾತ್ರ ಆಗೋಲ್ಲ ಅಂತ ಹಠ ಹಿಡಿದಿದ್ದಳು.
ಇದಾಗಿ ಪ್ರತಿ ಸಲ ಊರಿಗೆ ಹೋದಾಗಲೂ ಕೃಷ್ಣನ ಕತೆ ಏನಾಯ್ತು ಅಂತ ನಾನು ಕೇಳುವುದಿತ್ತು. ಅವನು ಗಾನ್ ಕೇಸ್ ಅಂತ ಒಂದೆರಡು ಸಲ ಹೇಳಿದ ಗೆಳೆಯರು ಕ್ರಮೇಣ ಅವನನ್ನು ಮರೆತೇಬಿಟ್ಟಿದ್ದರು. ಅದಾಗಿ ಒಂದೋ ಎರಡೋ ವರ್ಷಕ್ಕೆ ಅವಳಿಗೂ ಬೇರೆ ಮದುವೆಯಾಯ್ತು. ಅವನೂ ಮತ್ಯಾರನ್ನೋ ಮದುವೆ ಮಾಡಿಕೊಂಡ. ಅಂತೂ ಒಂದು ಪ್ರೇಮಕತೆ ಮುಗಿಯಿತು ಅಂದುಕೊಂಡು ನಾವು ನಿಟ್ಟುಸಿರಿಟ್ಟೆವು.
ನಮ್ಮೂರಿನ ವಿಶೇಷವೊಂದನ್ನು ನಿಮಗೆ ಹೇಳಲೇಬೇಕು. ನನ್ನ ಗೆಳೆಯರ ಪೈಕಿ ಬಹಳಷ್ಟು ಮಂದಿ ಮದುವೆಯಾಗಿಲ್ಲ. ಮದುವೆ ಎಂದರೆ ಅವರು ಬೆಚ್ಚಿಬೀಳುತ್ತಾರೆ. ಯಾವ ಯುದ್ಧಕ್ಕೆ ಬೇಕಾದರೂ ಸನ್ನದ್ಧರಾಗುವ ಅವರೆಲ್ಲ ಪಕ್ಕದಲ್ಲಿ ಮತ್ತೊಂದು ಜೀವ ಮಲಗಿದ್ದರೆ ನಿದ್ದೆ ಬರುವುದಿಲ್ಲ ಅನ್ನುವವರು. ಹಾಗಂತ ರಸಿಕತೆಯಲ್ಲಿ ಯಾರೂ ಹಿಂದಿಲ್ಲ. ಅವರ ರಸಿಕತೆ ಕನಸು ಕಾಣುವುದಕ್ಕಷ್ಟೇ ಸೀಮಿತ.
ಇಂಥ ಬ್ರಹ್ಮಚಾರಿಗಳು ಅತ್ಯಂತ ಕುತೂಹಲದಿಂದ ಗಮನಿಸುವುದು ದಾಂಪತ್ಯವನ್ನು. ಒಂದು ವಿವಾಹ ಮುರಿದುಬಿದ್ದರೆ ತಮ್ಮ ನಿರ್ಧಾರ ಸರಿ ಅನ್ನುವುದಕ್ಕೆ ಮತ್ತೊಂದು ಕಾರಣ ಸಿಕ್ಕಂತಾಗುತ್ತದೆ ಎಂದು ಖುಷಿಪಡುವ ನನ್ನ ತರಲೆ ಸನ್ಮಿತ್ರರು ಕೃಷ್ಣನ ದಾಂಪತ್ಯವನ್ನೂ ಆ ಹುಡುಗಿಯ ಸಂಸಾರವನ್ನೂ ಕುತೂಹಲದಿಂದ ಗಮನಿಸದೇ ಇರಲಿಲ್ಲ. ಮತ್ತೊಂದು ಬಾರಿ ನಾನು ಊರಿಗೆ ಹೋದಾಗ ಅವರು ಆಘಾತಕಾರಿ ಸುದ್ದಿಯ ಜೊತೆ ಕಾದಿದ್ದರು.
ಕೃಷ್ಣಪ್ರಸಾದನನ್ನು ನಿರಾಕರಿಸಿದ ಹುಡುಗಿ, ತನ್ನ ಗಂಡನನ್ನು ಬಿಟ್ಟಿದ್ದಳು. ಕೃಷ್ಣನ ಹಿಂದೆ ಬಿದ್ದಿದ್ದಳು. ಅವನ ಬಳಿ ತನ್ನದು ತಪ್ಪಾಯಿತು. ನೀನು ಎಷ್ಟೊಂದು ಪ್ರೀತಿಸ್ತೀಯ ಅಂತ ತಿಳ್ಕೊಳ್ಳೋಕೆ ಹಾಗೆ ಮಾಡ್ದೆ ಎಂದು ಗೋಗರೆದು ಅವನನ್ನು ಸೆಳೆದುಕೊಂಡಿದ್ದಳು. ಇದು ಕೃಷ್ಣನ ಹೆಂಡತಿಗೂ ಗೊತ್ತಾಗಿ ಅವಳು ಹಾಹಾಕಾರ ಮಾಡುತ್ತಾ ತವರಿಗೆ ಮರಳಿದ್ದಳು. ಅವಳ ಅಣ್ಣಂದಿರು ಬಂದು ಕೃಷ್ಣನಿಗೆ ಹಿಗ್ಗಾಮುಗ್ಗಾ ಬಾರಿಸಿ ನಿಯತ್ತಾಗಿ ಸಂಸಾರ ಮಾಡುವಂತೆ ಬೆದರಿಕೆ ಹಾಕಿದ್ದರು. ಕೃಷ್ಣ ಯಾವ ಕಾರಣಕ್ಕೂ ತಾನು ಪ್ರೀತಿಸಿದ ಹುಡುಗಿಯನ್ನು ಬಿಡಲಾರೆ ಎಂದು ಪಟ್ಟು ಹಿಡಿದಿದ್ದ.
ಹೀಗೆ ಎರಡು ಮದುವೆಗಳೂ ನಾಲ್ಕು ಮನಸ್ಸುಗಳೂ ಭಗ್ನವಾದ ಕತೆ ಕೇಳಿದ ನಂತರ ಮತ್ತೆ ಬರ್ನಾರ್ಡ್ ಷಾ ನೆನಪಾದ. ಇದೆಲ್ಲ ಹೇಗಾಗುತ್ತದೆ. ಭಗ್ನಗೊಳ್ಳುವ ಪ್ರೇಮ, ಮುರಿದುಬೀಳುವ ಕನಸು, ಹಂಬಲಿಸುವ ಜೀವ, ಬೆಳದಿಂಗಳಂಥ ಪ್ರೀತಿ, ರೋಗದಂತೆ ಹಬ್ಬುವ ವ್ಯಾಮೋಹ, ವ್ಯಾಧಿಯಂತೆ ಕಾಣುವ ದಿಗಿಲು, ಎಲ್ಲ ಭಯಗಳನ್ನು ದೂರತಳ್ಳುವ ಹಂಬಲ.. ಇವುಗಳಲ್ಲಿ ಯಾವುದು ತೀವ್ರವಾದದ್ದು ಎಂದು ಯೋಚಿಸುತ್ತಾ ಕೂತೆ. ಮತ್ತೆ ಕತ್ಲೆಕಾನದ ಕಾಡಿಗೆ ಹೋಗಿ ಬರಬೇಕು ಅನ್ನಿಸಿತು. ಅಣ್ಣನ ಹತ್ತಿರ ಹೋಗಿ ಬರೋಣವೇ ಕೇಳಿದೆ. ಅವನು ಅಲ್ಲಿ ಈಗ ಕಾಡಿಲ್ಲ. ಡಾಂಬರು ರಸ್ತೆ ಬಂದಿದೆ. ಉದ್ದಕ್ಕೂ ಮನೆಗಳಿವೆ. ಬೆಳದಿಂಗಳು ಹುಡುಕಿದರೂ ಸಿಗುವುದಿಲ್ಲ ಅಂತ ಹೇಳಿ ನಿರಾಶೆಗೊಳಿಸಿದ.







Nice
Love has its own twists
ನಾನು ನಿಮ್ಮ ಫೇಸ್ಬುಕ್ ಪೋಸ್ಟಿಂಗ್ಗೆ ಹೀಗೆಂದು “ಅಂದ ಹಾಗೆ, ಭಗ್ನಪ್ರೇಮ ಎನ್ನುವುದು ಇದೆಯಾ? ಭಗ್ನಪ್ರೇಮಿ ಇರುತ್ತಾನೆ/ಳೆ. ಪ್ರೇಮ ಭಗ್ನವಾಗುವುದಿಲ್ಲ. ಪ್ರೇಮಿ ಭಗ್ನವಾಗುತ್ತಾನೆ/ಳೆ.” ಕಮೆಂಟ್ ಮಾಡುವಾಗ ಈ ಲೇಖನ ಓದಿರಲಿಲ್ಲ. ನೋಡಿ ನಾನು ಬರೆದಿದ್ದು ಸರಿ ತಾನೆ?
Wish someone researches why human beings stray even after staying in the institute of marriage for good number of years. It is disgusting to see families being torn apart.
gurugale en bariteeri maarayare. nimmannu kandare nanage gouravaasuye!!
ಚೆನ್ನಾಗಿದೆ ಸಾರ್ (ಎಂದಿನಂತೆ:-))
ಪ್ರತಿ ಬಾರಿ ಮುರಿದುಬಿದ್ದಾಗಲು ಮುಂದುವರೆಯಲು ಮತ್ತೊಂದು ಸಿಕ್ಕರೆ
ಭಗ್ನತೆಗೆ ಭಂಗ ಬರುವದು ನಗ್ನ ಸತ್ಯ…….. 😉
good storey i am so maney enjaed .good
“ಸಾಹಿತಿ ಅಪಾಯಕಾರಿ. ಅವನು ನಮ್ಮನ್ನು ಪ್ರಭಾವಿಸುತ್ತಾ ಹೋದಂತೆ, ನಮ್ಮನ್ನು ತಿದ್ದುತ್ತಲೂ ಹೋಗುತ್ತಾನೆ. ಯಾವುದೋ ಒಂದು ಹಂತದಲ್ಲಿ ನಾವೂ ಅವನಂತಾಗಲು ಹವಣಿಸುತ್ತೇವೆ.”
ಅದೆಷ್ಟು ಮಸ್ತ ಆಗಿ ಬರ್ದಿದಿರಿ ಜೋಗಿಯವರೇ. ಇದಕ್ಕೆ ನಿಮ್ಮ ಲೇಖನಗಳು ತುಂಬಾ ಇಷ್ಟ ಆಗುತ್ತವೆ. ನಿಜಾನ್ನ ಎಷ್ಟು simple ಆಗಿ ಹೇಳಿಬಿಡ್ತಿರ. Hats off to you.
ನಿಮ್ಮ ಊರಿನಲ್ಲಿ ತುಂಬಾ ಜನ ಮದುವೆಯಾಗದೆ ಉಳಿದಿರುವುದೆತಕೆ ಸಾರ್,ಅವರೂ ಭಗ್ನ ಪ್ರೇಮಿಗಳೇ ,ಒಬ್ಬರೇ ಖುಷಿಯಾಗಿರಲು ಆರಿಸಿಕೊಂಡ ಮಾರ್ಗವೇ ಅಥವಾ ಅದೂ ಒಂದು ವ್ಯಾಧಿಯೇ?.
‘ಭಗ್ನ ಪ್ರೇಮ’ – ಈ ಪದವೇ ಭಯ ಮೂಡಿಸುವಂತಿದೆ ಅಲ್ಲವಾ?
“ಕಾಮ/ಸೆಕ್ಸ್” ವಿಷಯದಲ್ಲಿ ಮನುಷ್ಯರು ಪ್ರಕೃತಿ ಮತ್ತು ಸಂಸ್ಕೃತಿಗಳ ನಡುವೆ ಸಿಲುಕಿದ್ದಾರೆ . ” ಪ್ರಕೃತಿ ” ಎಂದರೆ ಲೋಕದಲ್ಲಿನ ಎಲ್ಲಾ ಜೀವರಾಶಿಗಳಲ್ಲೂ ಇರುವ ಸಹಜವಾದ ಕಾಮ . ” ಸಂಸ್ಕೃತಿ ” ಎಂದರೆ ಕಾಮದ ವಿಷಯದಲ್ಲಿ ಮನುಷ್ಯರು ಹಾಕಿಕೊಂಡಿರುವ ಸಾಮಾಜಿಕ ಕಟ್ಟುಪಾಡುಗಳು ಹಾಗೂ ನೀತಿನಿಯಮಾವಳಿಗಳು . ಸಂಸ್ಕೃತಿಯ ನೆಲೆಯಲ್ಲಿ ಬಾಳುತ್ತಿರುವ ಮನುಷ್ಯರು ಪ್ರಕೃತಿಯ ನೆಲೆಗೆ ಹೋದಾಗ ದೇಹ ಮತ್ತು ಮನಸ್ಸಿನ ಸಂಬಂಧಗಳು ಸಾವಿರಾರು ಬಗೆಗಳಲ್ಲಿ ಜರುಗುತ್ತವೆ . ಆಗ ಅವು ಸಾಮಾಜಿಕ ಮನುಷ್ಯರಾದ ನಮ್ಮ ಕಣ್ಣುಗಳಿಗೆ ವಿಕೃತವಾಗಿಯೋ , ಭಯಾನಕವಾಗಿಯೋ ಇಲ್ಲವೇ ವಿಚಿತ್ರವಾಗಿಯೋ ಕಂಡು ಬರುತ್ತವೆ .
ನಿಮ್ಮ ಲೇಖನ ಓದಿದ ನಂತರ ಅನೇಕ ಪ್ರಶ್ನೆಗಳು ಮನಸ್ಸಿನ ಮೂಲೆಯಲ್ಲಿ ಹುಟ್ಟಿವೆ. ಯಾವುದೇ ವ್ಯಾಕರಣ, ಒಂದಕ್ಕೊಂದು ಸಂಬಂದ ಇಲ್ಲದ ಹಾಗೆ ನನ್ನ ಪ್ರತಿಕ್ರಿಯೆ ಬಂದಿರಬಹುದು.
ಮುಖ್ಯವಾಗಿ ನನ್ನಲ್ಲಿ ಏಳುವ ಪ್ರಶ್ನೆ ಕಾಮದ ಸೋಂಕಿಲ್ಲದೆ ಪ್ರೇಮಿಸಲು ಸಾಧ್ಯವಿಲ್ಲವೆ? ಇದೆ ಎನ್ನುವುದು ನನ್ನ ಅಭಿಪ್ರಾಯ. ಪ್ರೇಮಿಸುವವರನ್ನು ಮದುವೆ ಆಗಲೇ ಬೇಕಿಂದಿಲ್ಲ. ಎಲ್ಲೋ ಮೂಲೆಯಲ್ಲಿ ತಬ್ಬಿಕೊಂದು ಮುದ್ದಿಸಬೆಕಾಗಿಲ್ಲ. ದುರ್ದೈದ ಸಂಗತಿ ಪ್ರೇಮಕ್ಕೋ ಕಾಮಕ್ಕೂ ತುಂಬಾ ಕಡಿಮೆ ಅಂತರ.
ನಿಜವಾಗಿಯೂ ಪ್ರೀತಿಸುವ ವ್ಯಕ್ತಿ, ತನ್ನ ಪ್ರೇಮಿಯ ಕೆಡಕನ್ನು bayasuvudilla. (Sorry, there is some problem). Unfortunately today we blindly follow western culture. Roam with opposite sex freely and assume it love. As per me love is beautiful, holy, gives inspiration. Agree, when love fails, it pains us a lot. That pain should not go in distructing others life.
hai
ನಿಮ್ಮಂತೆ ಬರೆಯಾಕ ನಿಮ್ಮಂತೆ ನುಡಿಲಾಕ ಪಡೆದು ಬಂದವ ಬೇಕೋ ಜೋಗಪ್ಪ!
ಜೋಗಿಗವರೇ,
“ಅವನು ಅಲ್ಲಿ ಈಗ ಕಾಡಿಲ್ಲ. ಡಾಂಬರು ರಸ್ತೆ ಬಂದಿದೆ. ಉದ್ದಕ್ಕೂ ಮನೆಗಳಿವೆ. ಬೆಳದಿಂಗಳು ಹುಡುಕಿದರೂ ಸಿಗುವುದಿಲ್ಲ ಅಂತ ಹೇಳಿ ನಿರಾಶೆಗೊಳಿಸಿದ.”ಇದನ್ನು ಓದಿದಾಗ ಇತ್ತೀಚೆಗೆ ನೋಡಿದ “ಬೆಟ್ಟದ ಜೀವ” ಸಿನೆಮಾದ ಕೊನೆಯಲ್ಲಿನ ಸೀನ್ ಮನಸ್ಸಿಗೆ ಬಂತು.
ಬರೆಸಿದವರಿಗೆ, ಓದಿದವರಿಗೆ, ಮೆಚ್ಚಿದವರಿಗೆ ಥ್ಯಾಂಕ್ಸ್. ಖುಷಿಯಾಯಿತು
enthaha estu vishayagalive nimma thaleyallive vasthvavannu manamuttuvanthe bareyuthhiri nimma berala thudi norentu varsh balali keybord othhalu nammanu ranjisalu
dear jogi
really superb !