ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ದಂತಕತೆಗಳೇ ಇಲ್ಲದ ಕಾಲದಲ್ಲಿ…

ಭಕ್ತಿಗೀತೆ ಎಂದಾಕ್ಷಣ ನಿನಗೆ ನೆನಪಾಗುವ ಹಾಡು ಯಾವುದು?

ಶರಣು ಸಿದ್ಧಿ ವಿನಾಯಕ, ಶರಣು ಬುದ್ಧಿಪ್ರದಾಯಕ, ನಮ್ಮಮ್ಮ ಶಾರದೆ, ಅಂಬಿಗಾ ನಾ ನಿನ್ನ ನಂಬಿದೆ, ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ..

ಭಾವಗೀತೆಯ ಮಾತು ಬಂದಾಗ?

ಕೆ ಎಸ್ ನರಸಿಂಹ ಸ್ವಾಮಿ, ಕುವೆಂಪು, ಬೇಂದ್ರೆ ಮುಂತಾದವರು ಬರೆದ ಗೀತೆಗಳು.

ಕನ್ನಡ ನಾಡನ್ನು ಹೊಗಳುವ ನಾಡಗೀತೆಯೆಂದರೆ?

ಜಯ ಭಾರತ ಜನನಿಯ ತನುಜಾತೆ, ಹಚ್ಚೇವು ಕನ್ನಡದ ದೀಪ, ನಿತ್ಯೋತ್ಸವ ತಾಯೇ ನಿತ್ಯೋತ್ಸವ…

ತತ್ವಪದಗಳನ್ನು ನೆನಪಿಸಿಕೋ..

ಕೋಡಗನ ಕೋಳಿ ನುಂಗಿತ್ತಾ, ಸೋರುತಿಹುದು ಮನೆಯ ಮಾಳಿಗೆ, ಬಸವಣ್ಣ, ಅಲ್ಲಮ, ಅಕ್ಕನ ವಚನಗಳು…

ನಿನಗೆ ಗೊತ್ತಿರುವ ಒಂದಿಬ್ಬರು ಕಾದಂಬರಿಕಾರರ ಹೆಸರು ಹೇಳು.

ಶಿವರಾಮ ಕಾರಂತ, ತೇಜಸ್ವಿ, ಎಸ್ ಎಲ್ ಭೈರಪ್ಪ..

ಕತೆಗಾರರು?

ಮಾಸ್ತಿ, ಅನಂತಮೂತರ್ಿ, ಚಿತ್ತಾಲ, ಕಾಯ್ಕಿಣಿ..

ನಾಟಕಕಾರರು..

ಆತ ಕೊಂಚ ತಡವರಿಸಿದ. ಯೋಚಿಸಿ ಹೇಳಿದ.

ಕಾಳಿದಾಸ, ಗಿರೀಶ್ ಕಾನರ್ಾಡ್…ಷೇಕ್ಸ್ಪಿಯರ್..

ನಾಲ್ಕೈದು ಕವಿಗಳ ಹೆಸರು ಹೇಳು..

ಬೇಂದ್ರೆ, ಕುವೆಂಪು, ನರಸಿಂಹಸ್ವಾಮಿ, ಎಚ್ ಎಸ್ ವೆಂಕಟೇಶಮೂತರ್ಿ…

ಈಗ ಬರೆಯುತ್ತಿರುವ ಒಂದಿಬ್ಬರು ಕತೆಗಾರರ, ಕವಿಗಳ, ಕಾದಂಬರಿಕಾರರ, ನಾಟಕಕಾರರ ಹೆಸರು ಹೇಳು..

ಆತ ಯೋಚಿಸತೊಡಗಿದ. ಶಿರಸಿಯ ಹುಡುಗ. ಇಪ್ಪತ್ತೆಂಟು ವರ್ಷದ ಹುಮ್ಮಸ್ಸಿನ ತರುಣ, ಬರೆಯುವ ಓದುವ ಹುರುಪುಳ್ಳವನು. ಪತ್ರಿಕೋದ್ಯಮ ಓದಿದ್ದಾನೆ. ಸಾಲದು ಅಂತ ಕನ್ನಡ ಎಂ.ಎ.

ತಿಂಗಳಿಗೆ 180 ಪುಸ್ತಕಗಳು ಪ್ರಕಟವಾಗುವ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಆತ ನೆನಪಿಸಿಕೊಂಡದ್ದು ಇಷ್ಟೇ ಹೆಸರುಗಳನ್ನು. ಅವನು ಲಂಕೇಶರ ಕತೆಗಳನ್ನು ಓದಿರಲಿಲ್ಲ. ಕಂಬಾರರ ಕವಿತೆಗಳನ್ನು ಓದಬೇಕು ಅಂದುಕೊಂಡಿದ್ದ. ತಿರುಮಲೇಶರ ಹೆಸರು ಕೂಡ ಅವನಿಗೆ ಗೊತ್ತಿರಲಿಲ್ಲ. ರಾಮಾನುಜನ್ ಕವಿ ಅನ್ನುವುದೂ ತಿಳಿದಿರಲಿಲ್ಲ. ಶ್ರೀಕೃಷ್ಣ ಆಲನಹಳ್ಳಿ ಎಲ್ಲೋ ಕೇಳಿದಂತಿತ್ತು. ಟಿಕೆ ರಾಮರಾವ್ ಕನ್ನಡದ ಅಂಗಡಿ ಮಾಲಿಕರಿರಬಹುದು ಎಂಬ ಗುಮಾನಿಯಿತ್ತು.

ಯಾಕೆ ಹೀಗೆ?

`ನಮಗೆ ಅವರೆಲ್ಲ ಇರಲಿಲ್ಲ ಅಂದ. ಇರಲಿಲ್ಲ ಅಂದರೆ ಪಠ್ಯಪುಸ್ತಕದಲ್ಲಿ ಕಾಣಿಸಲಿಲ್ಲ ಎಂದು ಅರ್ಥ. ಪಠ್ಯದಿಂದಾಚೆ ಏನನ್ನಾದರೂ ಓದಿಕೊಳ್ಳಬೇಕು ಎಂಬ ಉತ್ಸಾಹ ಹುಡುಗರಲ್ಲಿ ಬತ್ತಿಹೋದಂತಿದೆ. ಕಾರಂತರ ಕಾದಂಬರಿಗಳನ್ನು ಅವನು ಓದಿದ್ದಾನೆ ಅನ್ನುವ ನಂಬಿಕೆಯೂ ನನಗಿಲ್ಲ. ಅದು ಕಿವಿಗೆ ಮತ್ತೆ ಮತ್ತೆ ಬಿದ್ದ ಹೆಸರು. ಭೈರಪ್ಪ, ತೇಜಸ್ವಿ ಕೃತಿಗಳನ್ನು ಓದಿದ್ದರೂ ಓದಿರಬಹುದು. ಭೈರಪ್ಪನವರ ಕಾದಂಬರಿಗಳಲ್ಲಿ ಯಾವುದು ಇಷ್ಟ ಎಂದು ಕೇಳಿದೆ. ತುಂಬ ಯೋಚಿಸಿ `ಕವಲುದಾರಿ ಅಂದ.

ಇದೆಲ್ಲ ಕಷ್ಟದ ಕೆಲಸ ಅಂದುಕೊಂಡು ಸಿನಿಮಾದ ಬಗ್ಗೆ ಕೇಳತೊಡಗಿದೆ. ಅವನು ಅಷ್ಟಾಗಿ ಸಿನಿಮಾಗಳನ್ನೂ ನೋಡಿರಲಿಲ್ಲ. ನೀನು ನೋಡಿದ ಎರಡು ರಾಜ್ಕುಮಾರ್ ಸಿನಿಮಾದ ಹೆಸರು ಹೇಳು ಎಂದರೆ ತಡಬಡಾಯಿಸಿಹೋದ. ನಟಿ ಮಂಜುಳಾ ಗೊತ್ತಾ ಕೇಳಿದೆ. ಅವನಿಗೆ ಗೊತ್ತಿರಲಿಲ್ಲ. ಗಾಯಕರ ಪೈಕಿ ಸಿ ಅಶ್ವತ್ಥ್ ಗೊತ್ತಿದ್ದರು. ಕಾಳಿಂಗರಾವ್ ಗೊತ್ತಿರಲಿಲ್ಲ.

ನನಗೆ ನನ್ನ ಕಾಲೇಜು ದಿನಗಳು ನೆನಪಾದವು. ನಮ್ಮ ಕನ್ನಡ ಮೇಷ್ಟರೂ ನಮಗೆ ಪಠ್ಯದಿಂದಾಚೆಗೆ ಹೆಚ್ಚಿಗೇನೂ ಹೇಳಿಕೊಟ್ಟಿರಲಿಲ್ಲ. ಆದರೆ, ಇಂಗ್ಲಿಷ್ ಅಧ್ಯಾಪಕ ವೆಂಕಟರಮಣ ಬಳ್ಳ ಯಾರನ್ನೆಲ್ಲ ಓದಬೇಕು, ಯಾರು ಮುಖ್ಯ ಅನ್ನುವುದನ್ನು ಸೂಚಿಸುತ್ತಿದ್ದರು. ಒಂದೇ ಒಂದು ವರ್ಷ ನಮ್ಮ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ, ಈಗ ಕನ್ನಡ ವಿಶ್ವವಿದ್ಯಾಲಯದಲ್ಲಿರುವ ಕೇಶವ ಶರ್ಮ ಚಿತ್ತಾಲರ ಕಾದಂಬರಿಗಳನ್ನು ಓದಿಸಿ, ನಮ್ಮನ್ನು ಹೊಸ ಲೋಕಕ್ಕೆ ಪರಿಚಯಿಸಿದ್ದರು. ಮಾತಾಡುವಾಗೆಲ್ಲ ಸದಾಶಿವ, ಅಶ್ವತ್ಥ, ಆನಂದ, ಶಾಂತಿನಾಥ ದೇಸಾಯಿ ಮುಂತಾದವರ ಕತೆಗಳ ಸಾರ ಹೇಳುತ್ತಿದ್ದರು. ಕನ್ನಡದೂರದಲ್ಲಿ ಇಂಗ್ಲಿಷ್ ಮಾತಾಡುತ್ತಿದ್ದ ಮ್ಯಾಥ್ಯೂ ಎಂಬ ಮಲಯಾಳಿ ಮೇಷ್ಟ್ರು, ಸಿಟಿಜನ್ ಕೇನ್, ಈಗಲೇ ಹ್ಯಾಸ್ ಲ್ಯಾಂಡೆಡ್, ಸೈಕೋ ಮುಂತಾದ ಸಿನಿಮಾಗಳನ್ನು ನೋಡಿ ಎಂದು ಪುಸಲಾಯಿಸುತ್ತಿದ್ದರು. ಆ ಸಿನಿಮಾಗಳ ಕತೆಯನ್ನು ಪುರುಸೊತ್ತು ಸಿಕ್ಕಾಗೆಲ್ಲ ಹೇಳುತ್ತಿದ್ದರು. ಬೆಂಗಳೂರಿನಿಂದ ಪ್ರಸಿದ್ಧ ಲೇಖಕರನ್ನು ಕರೆಸಿ ಭಾಷಣ ಮಾಡಿಸುತ್ತಿದ್ದರು. ಒಮ್ಮೆ ನಮ್ಮ ಕಾಲೇಜಿಗೆ ಬಂದ ಕಾರಂತರು ಉಗ್ರವಾಗಿ ಭಾಷಣ ಮಾಡಿ ಪ್ರಶ್ನೆ ಕೇಳಿ ಎಂದಾಗ ಯಾರೂ ಪ್ರಶ್ನೆ ಕೇಳದ್ದನ್ನು ನೋಡಿ, ನೀವೆಲ್ಲ `ಸತ್ತ ಹೆಣಗಳು ಎಂದು ಬೈದಿದ್ದರು. ಆ ಸಿಟ್ಟಿಗೆ ಎಡವಟ್ಟು ಪ್ರಶ್ನೆ ಕೇಳಿದಾಗ ಖುಷಿಯಾಗಿ, ಮಾತಾಡೋದು ಕಲೀರಿ, ಕೇಳೋದು ಕಲೀರಿ. ಮೌನವಾಗಿ ಬಿದ್ದಿರಬೇಡಿ. ಕೇಳಿದ್ದು ತಪ್ಪಾದರೂ ಚಿಂತೆಯಿಲ್ಲ. ನಾನು ಹೇಳುತ್ತಿರುವುದೂ ಸರಿ ಅಂತ ನೀವೇನೂ ತಿಳೀಬೇಕಾಗಿಲ್ಲ. ನುಗ್ಗದೇ ಹೋದರೆ ನಜ್ಜುಗುಜ್ಜಾಗುತ್ತೀರಿ ಎಂದು ಛೇಡಿಸಿಹೋಗಿದ್ದರು.

ಇವನ್ನೆಲ್ಲ ಆ ಹುಡುಗನಿಗೆ ಹೇಳಿದೆ. ಪ್ರತಿಯೊಬ್ಬ ಲೇಖಕನ ಕುರಿತು, ನಟನ ಕುರಿತು, ರಾಜಕಾರಣಿಯ ಕುರಿತು, ಕೈಗಾರಿಕೋದ್ಯಮಿಯ ಕುರಿತು ತುಂಟ ದಂತಕತೆಗಳಿರುತ್ತಿದ್ದವು. ಅಸಹನೆ, ಸಿಟ್ಟಿಗಿಂತ ಹೆಚ್ಚಾಗಿ ಆಗ ಕಾಣಿಸುತ್ತಿದ್ದದ್ದು ಆರೋಗ್ಯಕರ ತಮಾಷೆ. ಬಜಾಜ್ ಸಂಸ್ಥೆಯ ಮಾಲಿಕರನ್ನು ಭೇಟಿ ಮಾಡಲಾರದ ಪತ್ರಕರ್ತ ಯೂ ಜಸ್ಟ್ ಕಾಂಟ್ ಮೀಟ್ ಬಜಾಜ್ ಅಂತ ಹೆಡ್ಡಿಂಗು ಕೊಟ್ಟು ಲೇಖನ ಬರೆಯುತ್ತಾನೆ. ಆ ಕಾಲಕ್ಕೆ ಯೂ ಜಸ್ಟ್ ಕಾಂಟ್ ಬೀಟ್ ಬಜಾಜ್ ಅನ್ನೋದು ಬಜಾಜ್ ಸ್ಕೂಟರಿನ ಜಾಹೀರಾತು. ಕನ್ನಡದ ಸಾಹಿತಿಗೆ ಜ್ಞಾನಪೀಠ ಬಂದಾಗ, ಜ್ಞಾನವಿರುವುದು ಪೀಠದಲ್ಲಲ್ಲ, ಬಟ್ ಅಟ್ ದಿ ಅದರ್ ಎಂಡ್ ಎಂದು ವೈಎನ್ಕೆ ತಮಾಷೆ ಮಾಡುತ್ತಾರೆ. ಕವಿ ಪದಕ್ಕೆ ವಿರುದ್ಧ ಪದ ಯಾವುದು ಎಂದು ವಿದ್ಯಾಥರ್ಿ ಕೇಳಿದಾಗ ಬೇಂದ್ರೆ ಕಣವಿ ಎಂದಿದ್ದರು ಎಂಬ ದಂತಕತೆಯೂ ಹಬ್ಬುತ್ತದೆ. ಲಂಕೇಶರ ಭಾಷಣಗಳು, ತೇಜಸ್ವಿಯ ಸಿಟ್ಟು, ಪುತಿನರ ದೈವಭಕ್ತಿ, ಶರ್ಮರ ರೋಷ, ಶಾಂತಿನಾಥ ದೇಸಾಯರ ಪ್ರೇಮಕತೆ, ನಾಡಿಗರ ನಗು, ಶೂದ್ರ ಸ್ವಾಮಿಭಕ್ತಿ, ಚಂಪಾ ಚಂದಾಯಣ, ಖಾದ್ರಿ ಶಾಮಣ್ಣನವರ ಕಾಗೆಲಿಪಿ, ಹಾಮಾನಾ ಕೇಶವಿನ್ಯಾಸ, ಕೆಎಸ್ನ ಶವರ್ ಬಾತು, ಆಲನಹಳ್ಳಿ ಪ್ರೇಮಾಯಣ, ಸಿದ್ಧಲಿಂಗಯ್ಯನವರ ಗುಂಡಾಯಣ, ಶಂಬಾಜೋಶಿಯವರ ಬೇಂದ್ರೆ ದ್ವೇಷ- ಇವೆಲ್ಲವೂ ತುಂಟಕತೆಗಳಾಗಿ ಚಾಲ್ತಿಯಲ್ಲಿರುತ್ತಿದ್ದವು.

ಇಂದಿರಾ ಗಾಂಧಿ, ಮೊರಾಜರ್ಿ ದೇಸಾಯಿ, ಜೈಲ್ ಸಿಂಗ್, ರಾಮಕೃಷ್ಣ ಹೆಗಡೆ ಮುಂತಾದವರ ಕುರಿತೂ ಅಷ್ಟೇ ರೋಚಕ ಕತೆಗಳಿರುತ್ತಿದ್ದವು. ಒಬ್ಬ ವ್ಯಕ್ತಿ ನಮ್ಮವನಾಗುವುದೇ ಇಂಥ ಕತೆಗಳಿಂದ. ಸಣ್ಣ ತಮಾಷೆ, ಒಂಚೂರು ಗೇಲಿ, ಅಪಾರ ಗೌರವ, ಚಿಟಿಕೆ ಸಿಟ್ಟು ಇವೆಲ್ಲ ಸೇರಿಯೇ ನಮ್ಮೊಳಗೆ ಒಬ್ಬ ವ್ಯಕ್ತಿ ರೂಪುಗೊಳ್ಳುತ್ತಿರುತ್ತಾನೆ. ನಮ್ಮವನಾಗುತ್ತಾನೆ.

ಹಾಗಾಗದೇ ಹೋದಾಗ ಒಬ್ಬ ನಟನೋ ಕಲಾವಿದನೋ ಕತೆಗಾರನೋ ವಿಜ್ಞಾನಿಯೋ ನಮ್ಮ ಪ್ರಜ್ಞೆಯ ಒಂದು ಭಾಗ ಆಗುವುದೇ ಇಲ್ಲ. ಒಂದು ಉದಾಹರಣೆ ನೋಡಿ: ವಿಜ್ಞಾನಿ ಎಂದಾಗ ನಮಗೆ ಯುರೇಕಾ ಎಂದು ಬೆತ್ತಲೆ ಓಡಿದ ಆಕರ್ಿಮಿಡೀಸ್ ನೆನಪಿರುತ್ತಾನೆ, ಸೇಬು ತಲೆ ಮೇಲೆ ಬೀಳಿಸಿಕೊಂಡ ನ್ಯೂಟನ್ ನೆನಪಾಗುತ್ತಾನೆ. ಆದರೆ ಇವತ್ತು ಎಲ್ಲೋ ಕುಳಿತು ಯಾವ ಕತೆಗೂ ಪಕ್ಕಾಗದೇ, ಅತ್ಯಾಧುನಿಕ ಸಂಶೋಧನೆಗಳನ್ನು ಮಾಡುತ್ತಿರುವವರ ಹೆಸರೇ ಗೊತ್ತಿರುವುದಿಲ್ಲ. ಮೊಬೈಲು, ಟೀವಿ, ಜಿಪಿಎಸ್, ಬ್ಲೂಟೂಥ್ ತಂತ್ರಜ್ಞಾನ ಇವುಗಳನ್ನೆಲ್ಲ ಕಂಡುಹಿಡಿದವರು ಯಾರು ಎಂದು ಗೊತ್ತಿರುವುದೇ ಇಲ್ಲ. ತಿಳಿದುಕೊಳ್ಳಲು ಹೊರಟರೆ ಅವು ಆಸಕ್ತಿಪೂರ್ಣವಾಗಿರುವುದೂ ಇಲ್ಲ.

ಇಂಗ್ಲಿಷಿನ ಬಹುತೇಕ ಲೇಖಕರ, ವಿಜ್ಞಾನಿಗಳ, ರಾಜಕಾರಣಿಗಳ ಜೀವನದ ಸ್ವಾರಸ್ಯಕರ ಘಟನೆಗಳ ಪುಸ್ತಕ ಸಿಗುತ್ತದೆ. ಪರಮಹಂಸ, ವಿವೇಕಾನಂದರಿಂದ ಹಿಡಿದು ರಾಘವೇಂದ್ರ ಸ್ವಾಮಿಯ ತನಕ ಎಲ್ಲರ ಬಾಲ್ಯದಲ್ಲೂ ನಡೆದ ಕುತೂಹಲಕಾರಿ ಸಂಗತಿಗಳನ್ನು ನಾವು ಮೆಲುಕು ಹಾಕುತ್ತಿರುತ್ತೇವೆ. `ಮುದುಕಿ ಭಿಕ್ಷೆ ಬೇಡುತ್ತಾ ಇರುವಾಗ ಎದುರಾಗುವ ಶ್ರೀಮಂತರ ಮಗನೊಬ್ಬ ಸಾರೋಟಿನಿಂದ ಇಳಿದು ಹೋಗಿ ಆಕೆಗೆ ತನ್ನ ಕೊರಳಲ್ಲಿದ್ದ ಸರ ಕೊಟ್ಟು ಬರುತ್ತಾನೆ. ಆ ಬಾಲಕ ಯಾರು ಗೊತ್ತೇ, ಮುಂದೆ ದಯಾಳು ಎಂದೇ ಹೆಸರಾದ ಬಾಬು ರಾಜೇಂದ್ರ ಪ್ರಸಾದರು…. ಮುಂತಾದ ಕತೆಗಳನ್ನು ಸಂಪಟೂರು ವಿಶ್ವನಾಥ್ ಮುಂತಾದವರು ಬರೆಯುತ್ತಿದ್ದರು. ನಾವು ಪ್ರೀತಿಯಿಂದ ಓದುತ್ತಿದ್ದೆವು.

ಈಗ ದಂತಕತೆಗಳಿಲ್ಲ. ಹಿರಿಯ ಕವಿ, ಕಾದಂಬರಿಕಾರ, ಕತೆಗಾರರ ನಂತರದ ಪೀಳಿಗೆಯ ಹೆಸರು ಬಹುತೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಹೇಳುವವರೂ ಇಲ್ಲ. ಇನ್ನೊಬ್ಬರ ಕುರಿತು ಇರಬೇಕಾದ ಕನಿಷ್ಟ ಕುತೂಹಲ, ಪ್ರೀತಿ ಮತ್ತು ಅಭಿಮಾನವನ್ನು ನಾವು ಕಳೆದುಕೊಂಡಿದ್ದೇವೋ ಏನೋ. ನಿಮ್ಮ ಫೇವರಿಟ್ ನಟಿ ಯಾರು ಎಂದು ಕೇಳಿದರೆ ಈಗಿನ ಹುಡುಗರು ನೋ ಬಡಿ ಅನ್ನುತ್ತಾರೆ. ಇಪ್ಪತ್ತು ವರ್ಷದ ಹಿಂದೆ ಇದೇ ಪ್ರಶ್ನೆ ಕೇಳಿದರೆ ನಗರ್ಿಸ್ ಅಂತ ಹೆಮ್ಮೆಯಿಂದ ಹೇಳುವ ತರುಣರೂ ಮಧ್ಯವಯಸ್ಕರೂ ಇದ್ದರು.

ದೇಶವೇ ತಾರುಣ್ಯವನ್ನು ಕಳಕೊಂಡಂತೆ ಕಾಣಿಸುತ್ತಿದೆ. ಅಥವಾ ರಾಷ್ಟ್ರವೊಂದು ಭ್ರಷ್ಟವಾಗುತ್ತಾ ಸಾಗಿದ ಹಾಗೆ ಇಂಥ ನಿರುತ್ಸಾಹ ನಮ್ಮನ್ನು ಆವರಿಸುತ್ತದೋ ಏನೋ.

 

 

 

 

 

 

‍ಲೇಖಕರು G

9 May, 2011

4 Comments

  1. ಬಸವ ರಾಜು ಎಲ್.

    ನಿಮ್ಮ ಮಟ್ಟಿಗೆ ನೀವು ಹೇಳಿದ್ದೇನೋ ಸರಿ
    ಕನ್ನಡದಲ್ಲಿ ಎಂ. ಎ. ಜೊತೆಗೆ ಪತ್ರಿಕೋದ್ಯಮವನ್ನು ಓದಿಯೂ ಸಹ…
    ಕನ್ನಡದ ಸಾಹಿತ್ಯ/ಸಾಹಿತಿಗಳ ಬಗ್ಗೆ ಹೆಚ್ಚು ತಿಳಿದು-ಕೊಳ್ಳದೆ ಇರುವುದರ ಕಾರಣ ಆ ಹುಡುಗನ ದಿವ್ಯ ನಿರ್ಲಕ್ಷ್ಯ ಅಥವಾ ನಿರಾಸಕ್ತಿಯೇ ಇರಬಹುದು.

    ನಿಮ್ಮ ಕಾಲೇಜಿನಲ್ಲಿ ಸ್ವತಃ ಕಾರಂತರಿಂದಲೇ ಭಾಷಣ/ಹಿತವಚನಗಳನ್ನು ಕೇಳಿದ್ದೀರೆಂದೂ ಜೊತೆಗೆ ಆ ನಿಮ್ಮ ಕಾಲೇಜಿನ ದಿನಗಳಲ್ಲೇ ಯಾರನ್ನೆಲ್ಲಾ ಓದಬೇಕು, ಯಾರು ಮುಖ್ಯ ಎಂದೆಲ್ಲಾ ಸೂಚಿಸುವವರು ನಿಮಗೆ ಸಿಕ್ಕಿದ್ದರು ಎಂದೆಲ್ಲಾ ತಿಳಿದು ಅಸೂಯೆಯಾಗುತ್ತಿದೆ
    ಏಕೆಂದರೆ, ನಮ್ಮಲ್ಲೆಲ್ಲಾ (ಮುಖ್ಯವಾಗಿ ಗಡಿ-ನಾಡಲ್ಲಿ) ಇಂಥಾ ವಾತಾವರಣ ಇದ್ದಿರಲಿಲ್ಲ ಬಿಡಿ

    ಇತ್ತೀಚೆಗಷ್ಟೇ ಅವಧಿ, ಕೆಂಡಸಂಪಿಗೆ ಮತ್ತಿತರೆ ಕನ್ನಡ ಬ್ಲಾಗ್-ಲೋಕಗಳ ಪರಿಚಯವಾದಂದಿನಿಂದ ಹೆಚ್ಚು ಹೆಚ್ಹು ಸಾಹಿತ್ಯ/ಸಾಹಿತಿಗಳ ಪರಿಚಯವಾಗತೊಡಗಿದೆ
    ಮತ್ತೆ ಇಲ್ಲಿ ಸಿಗುವ ಸ್ಯಾಂಪಲ್ ಲೇಖನಗಳಷ್ಟೇ ನಮ್ಮಂಥವರನ್ನು ಹುರಿದು೦ಬಿಸುತ್ತಿರುವುದು ಎಂದರೆ ಸುಳ್ಳಲ್ಲ!

  2. Radhika

    Why to draw conclusion simply because one odd person was not to your (liking) expectation?

  3. ಆಸು ಹೆಗ್ಡೆ

    ತಲೆಮಾರು-ತಲೆಮಾರುಗಳ ನಡುವಣ ಈ ಅಂತರ
    ಹೀಗೆಯೇ ಇದೆ, ಇರುತ್ತದೆ ಇನ್ನೂ ಇದು ನಿರಂತರ

    ತುಲನೆಯಲ್ಲಿ ಈಗ ಜ್ಞಾನದ ಪರಿಧಿ ಅದೇಕೋ ಕಿರಿದು
    ಆದರೆ ಆಗುತ್ತಾ ಹೋಗುತ್ತಿದೆ ಎಲ್ಲರ ಜೇಬೂ ಹಿರಿದು

    ಮುಂದೊಂದು ದಿನ ಇನ್ನಾರೋ ಕೇಳಬಹುದು ನೀಡಿ ಸನ್ನೆ
    ಬ್ಲಾಗ್ ಬರಹಗಾರರು ನಿನಗೆ ಎಷ್ಟು ಗೊತ್ತು ಎನ್ನುವ ಪ್ರಶ್ನೆ
    🙂

  4. anoop sivadasan

    Hi,
    Its hard to believe what jogi has said…again from one personnel experience how can we arrive at conclusions… The legendary stories always forms the inspiration for the stories…The points of legends are true from my point of view…. but whatever may be one person’s poor knowledge won’t acknowledge the crux of matter..
    with regards
    anoop

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading