ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಚಿಮ್ಮಲಗಿಯ ತರುಣನೊಬ್ಬನ ಇಂಗ್ಲಿಷ್ ಕಷ್ಟ

ಒಂದು ಪುಟ್ಟ ಊರಲ್ಲಿ ಏನೆಲ್ಲ ನಡೆಯುತ್ತಿರುತ್ತದೆ? ಚಿಮ್ಮಲಗಿಯ ಆ ತರುಣ ಸಮ್ಮೇಳನದಲ್ಲಿ ಭಾಗವಹಿಸಲಿಕ್ಕೆಂದೇ ಅತ್ಯುತ್ಸಾಹದಿಂದ ಬಂದಿದ್ದ. ಏಳನೇ ತರಗತಿಯ ತನಕ ಓದಿದ್ದ ಅವನು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋಗಿದ್ದನಂತೆ. ಅವನಿಗೆ ಇಂಗ್ಲಿಷ್ ಬರುವುದಿಲ್ಲ ಅನ್ನುವ ಕಾರಣಕ್ಕೆ ಬಾರುಗಳಲ್ಲಿ ಕೆಲಸ ಸಿಕ್ಕಿರಲಿಲ್ಲ. ಅವನು ಕೆಲಸ ಮಾಡುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟಿನ ಮಾಲಿಕ, ತನ್ನ ಹಳೇ ಶೈಲಿಯ ಬಾರ್ಗೆ ಹೊಸ ರೂಪ ಕೊಟ್ಟಿದ್ದನಂತೆ. ವೈಶಾಲಿ ಬಾರ್ ಅನ್ನುವ ಹೆಸರು ಹೋಗಿ, ವೈಶಾಲಿ ಫ್ಯಾಮಿಲಿ ರೆಸ್ಟುರಾಂಟ್ ಅನ್ನುವ ಹೊಸ ಹೆಸರಿಡುತ್ತಿದ್ದಂತೆಯೇ ಕೆಲಸ ಕಳಕೊಳ್ಳಬೇಕಾಗಿ ಬಂದದ್ದು ಚಿಮ್ಮಲಗಿಯ ಈ ಹತ್ತೊಂಬತ್ತರ ಹುಡುಗ.
ಬಾರ್ನ ಹೆಸರು ಬದಲಾಗುತ್ತಿದ್ದ ಹಾಗೆ ಅಲ್ಲಿಗೆ ಓದಿದವರು, ಸಾಫ್ಟ್ವೇರ್ ಮಂದಿಯೆಲ್ಲ ಬರೋದಕ್ಕೆ ಶುರು ಮಾಡಿದರು. ಅವರು ಇಂಗ್ಲಿಷಲ್ಲೇ ಮಾತಾಡುತ್ತಿದ್ದರು. ನನಗೆ ಇಂಗ್ಲಿಷ್ ಏನೇನೂ ಗೊತ್ತಿರಲಿಲ್ಲ. ನಮ್ಮ ಹೊಟೆಲಿಗೆ ಮೆನು ಬಂತು. ಅದರ ಜೊತೆಗೆ ಚೈನೀಸ್, ಕಾಂಟಿನೆಂಟಲ್ ತಿನಿಸುಗಳೆಲ್ಲ ಬಂದವು. ಅವುಗಳ ಹೆಸರು ಕೂಡ ನನಗೆ ಹೇಳೋದಕ್ಕೆ ಬರುತ್ತಿರಲಿಲ್ಲ. ಕೆಲವರು ಯಾವುದಾದರೂ ತಿನಿಸಿನ ಹೆಸರು ಹೇಳಿ ಅದರಲ್ಲೇನಿದೆ ಅಂತ ಕೇಳುತ್ತಿದ್ದರು. ನಾನು ಕಂಗಾಲಾಗುತ್ತಿದ್ದೆ. ಅದೇ ಹೊತ್ತಿಗೆ ಒಬ್ಬರು ಜಗಳಾಡಿ, ಇಂಥ ವೇಟರ್ಗಳನ್ನು ಇಟ್ಟುಕೊಂಡರೆ ನೀವು ಉದ್ಧಾರ ಆಗೋದಿಲ್ಲ ಅಂತ ಬೈದರು. ಅದಾಗಿ ಒಂದೇ ತಿಂಗಳಿಗೆ ವೇಟರುಗಳ ಕೈಗೆ ಐಪ್ಯಾಡ್ ಬಂತು. ಗಿರಾಕಿಗಳು ಹೇಳಿದ ತಿಂಡಿತಿನಿಸುಗಳನ್ನು, ಡ್ರಿಂಕ್ಸ್ಗಳನ್ನು ನಾವು ಅದರಲ್ಲೇ ಆರ್ಡರ್ ಮಾಡಬೇಕಾಗಿತ್ತು. ನನಗೆ ಇಂಗ್ಲಿಷ್ ಬರದೇ ಇದ್ದದ್ದರಿಂದ ಯಾವುದೂ ಸರಿಹೋಗುತ್ತಿರಲಿಲ್ಲ. ನನ್ನನ್ನು ಪಾರ್ಸೆಲ್ ಕೌಂಟರಿಗೆ ಹಾಕಿದರು. ಟಿಪ್ಸ್ ಬರುವುದು ನಿಂತು ಹೋಯ್ತು. ಅಲ್ಲೂ ಕೂಡ ಒಂದಿಬ್ಬರು ಜಗಳ ಆಡಿದರು. ಮಾಲಿಕರು ನಿನ್ನ ಕೈಲಾಗಲ್ಲ ಹೋಗು ಅಂತ ವಾಪಸ್ ಕಳಿಸಿಬಿಟ್ಟರು. ಕ್ಲೀನರ್ ಕೆಲಸ ಆದ್ರೂ ಕೊಡಿ ಅಂತ ಕೇಳಿಕೊಂಡೆ. ಹೊಸ ವ್ಯವಸ್ಥೆಯಲ್ಲಿ ವೇಟರ್ಗಳೇ ಕ್ಲೀನರ್ ಕೆಲಸ ಕೂಡ ಮಾಡುತ್ತಿದ್ದರು. ಟೇಬಲ್ಲಿನ ಮೇಲೊಂದು ಬಟ್ಟೆ ಹಾಕಿ, ಅದನ್ನು ಸೀದಾ ಲಾಂಡ್ರಿಗೆ ಹಾಕುವ ಪದ್ಧತಿ ಬಂದ ಮೇಲಂತೂ ಟೇಬಲ್ ಒರೆಸುವ ಕೆಲಸಕ್ಕೂ ಸಂಚಕಾರ ಬಂತು. ವಾಪಸ್ ಬಂದುಬಿಟ್ಟೆ. ಯಾಕೋ ಈ ಜಗತ್ತು ನಮ್ಮಿಂದ ದೂರ ಆಗ್ತಿದೆ.

ಹೀಗೆ ಅವನು ಬೇಸರದಿಂದ ಮಾತಾಡಿದ. ಆಧುನಿಕ ಜೀವನ ಶೈಲಿ ಹೇಗೆ ಕೆಲಸಗಳನ್ನು ಕಸಿದುಕೊಳ್ಳುತ್ತದೆ ನೋಡಿ. ಊರು ಬಿಟ್ಟು ಓಡಿಬರುವ ಮಕ್ಕಳು ಹೊಟೆಲ್ ಸೇರಿಕೊಳ್ಳುತ್ತಿದ್ದರು. ಸಪ್ಲೈಯರ್ ಆಗಿ ದುಡಿಯುತ್ತಿದ್ದರು. ಅವರಿಗೆ ಉಳಕೊಳ್ಳುವುದಕ್ಕೆ ಮತ್ತು ಹೊಟ್ಟೆ ಹೊರೆಯುವುದಕ್ಕೆ ಸಮಸ್ಯೆ ಇರುತ್ತಿರಲಿಲ್ಲ. ಆ ಪುಟ್ಟ ಕೆಲಸದ ಮೂಲಕವೇ ಆ ಹುಡುಗ ನಗರವನ್ನು ನೋಡುತ್ತಿದ್ದ. ಅವನಿಗೆ ಪ್ರತಿಭೆ ಇದ್ದರೆ ಮತ್ತೊಂದು ಕೆಲಸ ಸಿಗುತ್ತಿತ್ತು. ಅವನೇ ವ್ಯಾಪಾರಕ್ಕೆ ಇಳಿಯುತ್ತಿದ್ದ. ನಗರಕ್ಕೆ ಕಾಲಿಡುವುದಕ್ಕೆ ಅವನಿಗೆ ಚಿಮ್ಮು ಹಲಗೆ ಆಗುತ್ತಿದ್ದದ್ದೇ, ಹೋಟೆಲು, ಶೆಟ್ಟರಂಗಡಿಗಳು. ಇವತ್ತು ಅಲ್ಲೂ ಕೂಡ ಇಂಗ್ಲಿಷೇ ಬೇಕು. ವಿದ್ಯಾರ್ಥಿಗಳು ಹೆಚ್ಚಾಗಿ ಬರುವ ನಗರದ ಬಡಾವಣೆಗಳ ಹೊಟೆಲಿಗೆ ಹೋದರೆ ನಿಮಗೆ ಅಲ್ಲಿ ಸಿಗುವುದು ಬೇರೆ ದೇಶಗಳ ಮಾಣಿಗಳೇ. ನೇಪಾಳ, ಟಿಬೆಟ್, ಚೀನಾ, ಇಂಡೋನೇಷಿಯಾದ ಹುಡುಗರು ಬೇಕಾದಷ್ಟು ಮಂದಿ ಇಲ್ಲಿದ್ದಾರೆ. ಮಲೇಶಿಯಾ, ಥೈಲ್ಯಾಂಡ್ನ ಬಡವರು ಕೂಡ ಬೆಂಗಳೂರಿನ ಬಾರುಗಳಲ್ಲಿ ಎದುರಾಗುತ್ತಾರೆ. ಅವರಿಗೆ ಕನ್ನಡ ಗೊತ್ತಿಲ್ಲ, ಇಂಗ್ಲಿಷ್ ಅಷ್ಟಕ್ಕಷ್ಟೇ. ಆದರೆ ಫಾರಿನ್ ಎಂಬ ಚಹರೆ ಆ ಹೊಟೆಲನ್ನು ವಿಶಿಷ್ಟವಾಗಿಸುತ್ತದಂತೆ. ಹೊಟೆಲ್ ಮಾಲಿಕರ ಪ್ರಕಾರ, ನಮ್ಮ ಹಳ್ಳಿ ಹುಡುಗರಿಗೆ ಕೆಲಸ ಕೊಡೋದು ಅಂದರೆ ಅಪಾಯ ಎದುರುಹಾಕಿಕೊಂಡ ಹಾಗೆ. ಕೆಲಸ ಬಿಡೋದು, ಓಡಿ ಹೋಗೋದು, ಗುಂಪು ಕಟ್ಟೋದು, ಕಸ್ಟಮರ್ ಜೊತೆ ಜಗಳ ಆಡೋದು ಮಾಡ್ತಾರೆ. ವಿದೇಶಿ ಹುಡುಗರು ಅಂಥ ಕೆಲಸ ಮಾಡಲ್ಲ. ಭಯಭಕ್ತಿಯಿಂದ ಇರುತ್ತಾರೆ. ನಾಲ್ಕೇಟು ಕೊಟ್ಟರೂ ತಿಂದುಕೊಂಡು ಸುಮ್ಮನಿರುತ್ತಾರೆ. ಹೀಗಾಗಿ ಉತ್ತರ ಭಾರತದ, ಈಶಾನ್ಯ ಭಾರತದ ಹುಡುಗರು ವಾಸಿ. ವಿದೇಶಿ ಹುಡುಗರು ಸಿಕ್ಕರೆ ಇನ್ನೂ ಅನುಕೂಲ.
ನಮ್ಮ ಸಾಮಾಜಿಕ ಹಂದರ ಹೇಗೆ ಬದಲಾಗುತ್ತಿದೆ ಅನ್ನುವುದನ್ನು ಇದು ಸೂಚಿಸುತ್ತದೆ. ಸರ್ಕಾರ ಇಂಗ್ಲಿಷ್ ಮಾಧ್ಯಮದ ಸ್ಕೂಲುಗಳಿಗೆ ಅನುಮತಿ ಕೊಟ್ಟಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ನೋಡುತ್ತಿದೆ. ಏಕರೂಪದ ಶಿಕ್ಷಣ ಬರದ ಹೊರತು ಎಂಥ ಅಪಾಯಗಳನ್ನು ಮುಂದಿನ ತಲೆಮಾರು ಎದುರಿಸಬೇಕಾಗುತ್ತದೆ ಎಂದು ಊಹಿಸಿದರೆ ಗಾಬರಿ ಆಗುತ್ತದೆ. ಇವತ್ತು ಸರ್ಕಾರಿ ಶಾಲೆಗಳಲ್ಲಿ ಒಳ್ಳೆಯ ಮೇಷ್ಟರುಗಳಿಲ್ಲ. ಖಾಸಗಿ ಶಾಲೆಗಳಲ್ಲೂ ಇಲ್ಲ. ಖಾಸಗಿ ಶಾಲೆಗಳಿಗೆ ನೂರಕ್ಕೆ ನೂರು ಫಲಿತಾಂಶ ಗಳಿಸುವ ಗೀಳು ಬೇರೆ ಅಂಟಿಕೊಂಡಿದೆ. ಹೀಗಾಗಿ ಅವರಿಗೆ ಬಡವರ ಮಕ್ಕಳು ಬೇಕಾಗಿಲ್ಲ. ರೈಟ್ ಟು ಎಜುಕೇಷನ್ ಎಂಬ ಅಸ್ತ್ರ ಹುಸಿಹೋಗುವುದು ಇಂಥ ಹೊತ್ತಲ್ಲೇ. ಖಾಸಗಿ ಶಾಲೆಗಳು ಅಕ್ಷರ ಕಲಿಯ ಬಯಸುವ, ಬಡ ಹುಡುಗನೊಬ್ಬನಿಗೆ ಕಲಿಯುವುದಕ್ಕೆ ಅವಕಾಶ ಮಾಡಿಕೊಡುತ್ತದಾ? ಹಾಗೊಂದು ವೇಳೆ ಕೊಟ್ಟರೂ, ಅಲ್ಲಿ ನೂರೆಂಟು ರಗಳೆಗಳಿವೆ. ಯೂನಿಫಾರ್ಮು, ಷೂ, ಬ್ಯಾಗಿನಿಂದ ಹಿಡಿದು, ಯೂನಿಟ್ ಟೆಸ್ಟುಗಳ ತನಕ ಎಲ್ಲ ಕಡೆಯಲ್ಲೂ ಆತ ಸೋಲುತ್ತಲೇ ಹೋಗುತ್ತಾನೆ. ೇವಲ ಸರ್ಕಾರಿ ಶಾಲೆಗಳೇ ಇದ್ದ ಕಾಲವೊಂದಿತ್ತು. ನಮ್ಮೂರಿನಲ್ಲಂತೂ ಎಲ್ಲರೂ ಸರ್ಕಾರಿ ಶಾಲೆಗೇ ಹೋಗುತ್ತಿದ್ದರು. ಎಲ್ಲರಿಗೂ ಒಂದೇ ಥರದ ವಿದ್ಯಾಭ್ಯಾಸ ಸಿಗುತ್ತಿತ್ತು. ಬುದ್ಧಿವಂತನಾದವನು ಚೆನ್ನಾಗಿ ಓದುತ್ತಿದ್ದ. ದಡ್ಡನಾದವನು ಫೇಲಾಗುತ್ತಿದ್ದ. ಈ ದಡ್ಡತನ ಮತ್ತು ಬುದ್ಧಿವಂತಿಕೆ ಎಂಬ ಎರಡೇ ಪ್ರಬೇಧಗಳು ಚಾಲ್ತಿಯಲ್ಲಿದ್ದವು. ಈಗ ಅದಕ್ಕಿಂತ ಭೀಕರವಾದ ಕಂದರವನ್ನು ಖಾಸಗಿ ಶಿಕ್ಷಣ ಕಲಿಸಿದೆ. ಅದು ಕಲಿಕೆಯ ಮಾಧ್ಯಮ. ಸರ್ಕಾರಿ ಶಾಲೆಗಳು ಬಡವರಿಗೆ. ಖಾಸಗಿ ಶಾಲೆಗಳು ಮಧ್ಯಮ ವರ್ಗದವರಿಗೆ ಎಂಬುದು ನಿಶ್ಚಯವಾಗಿದೆ. ಜಾತಿಪದ್ಧತಿಯ ಜೊತೆ ವರ್ಣಬೇಧ ನೀತಿ ಕೂಡ ಭಾರತಕ್ಕೆ ಕಾಲಿಟ್ಟಿದೆ.ಮ್ಮಲಗಿಯ ಹುಡುಗನಿಗೆ ಮುಂದೇನು ಮಾಡುತ್ತೀ ಅಂತ ಕೇಳಿದೆ. ನಮಗೆ ಹಳ್ಳಿಯೇ ವಾಸಿ, ಇಲ್ಲಿ ನೂರೆಂಟು ಯೋಜನೆಗಳಿವೆ. ಸರ್ಕಾರ ಏನೋ ಒಂದು ಮಾಡುತ್ತದೆ ಅನ್ನೋ ನಂಬಿಕೆ ಇದೆ. ನಮ್ಮಪ್ಪನಿಗೆ ಅಪಘಾತ ಆದಾಗ ಸರ್ಕಾರದ ವಿಮೆಯಿಂದಾಗಿ ಚಿಕಿತ್ಸೆ ನೀಡೋದು ಸಾಧ್ಯವಾಯಿತು. ಅದೇ ನಗರದಲ್ಲಿ ಇರುತ್ತಿದ್ದರೆ, ಅಂಥ ಯಾವ ವ್ಯವಸ್ಥೆಯೂ ಇರುತ್ತಿರಲಿಲ್ಲ. ನಾವು ಖಾಸಗಿ ಹೆಲ್ತ್ ಇನ್ಶೂರೆನ್ಸನ್ನು ನಂಬಿಕೊಳ್ಳಬೇಕಾಗುತ್ತಿತ್ತು. ನಾನೀಗ ಇಲ್ಲೊಂದು ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದೇನೆ. ನಮ್ಮೂರಿನ ಲೈಬ್ರರಿಯಲ್ಲಿ ಕತೆ ಕಾದಂಬರಿ ಓದುತ್ತೇನೆ. ಸಿನಿಮಾ ನೋಡೋದು ಬಿಟ್ಟು ಬಿಟ್ಟಿದ್ದೇನೆ. ಮತ್ತೆ ಬೆಂಗಳೂರಿಗೆ ಕಾಲಿಡೋದಿಲ್ಲ ಅಂತ ಖಡಾ ಖಂಡಿತವಾಗಿ ಹೇಳಿದ.ೀವಿಗಳಲ್ಲಿ ಬರುವ ಜೆಮ್ಸ್ ಎಂಬ ಚಾಕಲೇಟಿನ ಜಾಹೀರಾತು ನೆನಪಾಗುತ್ತದೆ. ಆ ಪುಟ್ಟ ಶರಟು ಗುಂಡಿಯಂಥ ಚಾಕಲೇಟನ್ನು ಜೋಡಿಸಿ ಒಂದು ದೊಡ್ಡ ಹಕ್ಕಿಯನ್ನು ಮಾಡಿರುತ್ತಾರೆ. ಅದರಲ್ಲಿರುವ ಒಂದು ಚಾಕಲೇಟನ್ನು ಒಬ್ಬ ಕಿತ್ತು ತಿನ್ನುತ್ತಾನೆ. ಆಗ ಇಡೀ ಹಕ್ಕಿ ಜೊರ್ರನೆ ಸುರಿದು ಬಿಡುತ್ತದೆ. ಇಡೀ ಆಕೃತಿಯೇ ಮಾಯವಾಗುತ್ತದೆ. ನಮ್ಮ ಸಾಮಾಜಿಕ ನೇಯ್ಗೆ ಕೂಡ ಅಷ್ಟೇ ಸೂಕ್ಷ್ಮವಾಗಿದೆ. ಯಾರೋ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ನೂಲನ್ನು ಕಿತ್ತರೂ ಸಾಕು, ಇಡೀ ವಸ್ತ್ರವೇ ಕಿತ್ತುಹೋಗಿ, ಬರೀ ಸಿಕ್ಕುಸಿಕ್ಕಾದ ನೂಲಿನ ಉಂಡೆಯೊಂದು ಉಳಿಯುತ್ತದೆ. ಅದರ ಸಿಕ್ಕು ಬಿಡಿಸುವುದಕ್ಕೆ ಕೂಡ ಶತಮಾನಗಳೇ ಬೇಕಾಗಬಹುದು.
ನಾವೀಗ ಅಂತ ಸಿಕ್ಕು ಸಿಕ್ಕಾದ ನೂಲಿನುಂಡೆಯ ಮಧ್ಯೆ ನಿಂತಂತೆ ಭಾಸವಾಗುತ್ತಿದೆ.

‍ಲೇಖಕರು G

18 February, 2013

9 Comments

  1. hipparagi Siddaram

    ನಿಜ ಸರ್….ಇದು ಕೇವಲ ಚಿಮ್ಮಲಗಿಯ ಕಥೆಯಲ್ಲ….ನನ್ನ ನಾಡಿನಲ್ಲಿಯೇ ನಾನು ಪರಕೀನಾಗುತ್ತಿದ್ದೇನೆಂಬ ಭಾವ ಗಾಢವಾಗಿ ಆವರಿಸಿಕೊಳ್ಳುತ್ತಿರುವ ಈ ಸಂದರ್ಭದ ತಲ್ಲಣಗಳಿಂದ ತತ್ತರಿಸಿರುವ ಯುವಪೀಳಿಗೆಗೆ ಸೂಕ್ತ ಮಾರ್ಗದರ್ಶನ, ತರಬೇತಿ, ಸಮಾಲೋಚನೆ ಹೀಗೆ ಹಲವಾರು ಸಂಗತಿಗಳ ಅವಶ್ಯಕತೆ ಹೆಚ್ಚಾಗಿಯೇ ಇದೆ. ಲೇಖನಕ್ಕೆ ಧನ್ಯವಾದಗಳು…

  2. Lenin Renjella

    Nice article it should be published in news paper to wake up government

  3. h.s.raj

    ಉದ್ಯಮಿಗಳಿಗೆ ಸ್ವಾತಂತ್ರ್ಯ ಇರಬೇಕು, ಅತಿಯಾದ ಕಟ್ಟುಪಾಡುಗಳಿರಬಾರದು ಎಂದು ಮುಕ್ತ ಮಾರುಕಟ್ಟೆಯ ಪರ ವಾದಿಸುವವರು ಒಂದೇ ಸಮನೆ ಹೊಡೆದುಕೊಳ್ಳುತ್ತಾರೆ. ಆದರೆ, ಸ್ವಾತಂತ್ರ್ಯ ಕೊಟ್ಟರೆ ಸ್ವಾರ್ಥಿ ಉದ್ಯಮಿಗಳು ಏನು ಮಾಡುತ್ತಾರೆ ನೋಡಿ. ನಾನು ಬೆಂಗಳೂರಿನಲ್ಲಿ ಅನೇಕ ರೆಸ್ಟೋರೆಂಟುಗಳಲ್ಲಿ ನೋಡಿದ್ದೇನೆ. ಕೆಲಸ ಮಾಡುವ ಹುಡುಗರೆಲ್ಲಾ ಉತ್ತರದವರು ಇಲ್ಲದಿದ್ದರೆ ಈಶಾನ್ಯದವರು. ಯಾಕೆ ಹೀಗೆ ಎಂದು ಕೇಳಿದರೆ, ಅವರು ತಗ್ಗಿ ಬಗ್ಗಿ ನಡೆಯುತ್ತಾರೆ, ಹೇಳಿದ ಹಾಗೆ ಕೇಳುತ್ತಾರೆ, ನಮ್ಮ ಲೋಕಲ್ ಹುಡುಗರನ್ನು ನಿಭಾಯಿಸುವುದು ಕಷ್ಟ, ಎಂಬ ಉತ್ತರ ಬರುತ್ತದೆ. ಆದರೆ, ಇಲ್ಲಿ ಇನ್ನೂ ಒಂದು ದೊಡ್ದ ಸತ್ಯ ಅಡಗಿದೆ. ಹೊರಗಿಂದ ಬಂದ ಹುಡುಗರು ’ಕಡಿಮೆ’ ಸಂಬಳಕ್ಕೆ ಕೆಲಸ ಮಾಡುತ್ತಾರೆ. ಇದು, ಅವರನ್ನು ನಮ್ಮ ಹೋಟೆಲಿಗರು ಕೆಲಸಕ್ಕೆ ತೆಗೆದುಕೊಳ್ಳುವುದಕ್ಕೆ ಮುಖ್ಯ ಕಾರಣ. ಕಡೆಗೆ, ಇವರ ಸ್ವಾರ್ಥದ ಪರಿಣಾಮ ಏನೆಂದರೆ, ನಮ್ಮ ಕನ್ನಡದ ಹುಡುಗರಿಗೇ ಉದ್ಯೋಗ ಇರುವುದಿಲ್ಲ. ಹೊರಗಿನವರ ತಡೆಯಿಲ್ಲದ ವಲಸೆಯಿಂದಾಗಿ ಕನ್ನಡಕ್ಕೂ ಎಡೆ ಇರುವುದಿಲ್ಲ. ನಮ್ಮ ಕನ್ನಡ ಯುವಕರು ಸರೋಜಿನಿ ಮಹಿಷಿ ವರದಿಯ ಜಾರಿಗಾಗಿ ಹೋರಾಡಬೇಕು. ಇಲ್ಲದಿದ್ದರೆ ಅವರಿಗೆ ಉಳಿಗಾಲವಿಲ್ಲ.

  4. pravara

    ಸರ್, ಜಾಗತೀಕರಣ ಎಲ್ಲವನ್ನೂ ನಮ್ಮಂಥ ಮಧ್ಯಮ ವರ್ಗದ ಜನರಿಂದ ಕಿತ್ತುಕೊಳ್ಳುತ್ತಿದೆ, ಒಂದೊಳ್ಳೆ ವಿಷಯ ತಿಳಿಸಿದಿರಿ…..

  5. shiva

    Jogi Sir….can we do something for this?…ur analysis is good, but can u please come out some tangible solution what we few can start working towards that?..

  6. datta3

    nammellara kathe… bari patraglu badalu aste…

  7. jogimane

    @Shiva. ಇದಕ್ಕೆ ಪರಿಹಾರ ನನಗೂ ಗೊತ್ತಿಲ್ಲ. ಆದರೆ ನಾನೇನು ಮಾಡುತ್ತೇನೆ ಅನ್ನುವುದನ್ನು ಹೇಳುತ್ತೇನೆ. ನಾನು ಹೊಟೆಲಿಗೆ ಹೋದಾಗ ಕನ್ನಡ ಗೊತ್ತಿರುವ ವೇಟರ್-ಗಳಿದ್ದಾರಾ ಅಂತ ಕೇಳುತ್ತೇನೆ. ಇಲ್ಲದೇ ಇದ್ದರೆ ಎದ್ದು ಬರುತ್ತೇನೆ. ಕನ್ನಡದಲ್ಲಿ ಮೆನು ಕಾರ್ಡು ಇದೆಯಾ ಎಂದು ಕೇಳುತ್ತೇನೆ. ತನ್ನಲ್ಲಿ ಕನ್ನಡದ ಹುಡುಗರು ಕೆಲಸಕ್ಕಿಲ್ಲದೇ ಇರುವುದರಿಂದ, ತಾನು ಕನ್ನಡದ ಮೆನು ಕಾರ್ಡ್ ಇಡದೇ ಇರುವುದರಿಂದ ತನಗೆ ನಷ್ಟವಾಗುತ್ತದೆ ಎಂದು ಅನ್ನಿಸಿದರೆ ಮಾತ್ರ ವ್ಯಾಪಾರಿ ಅಂಜುತ್ತಾನೆ. ಅವನ ಪರಭಾಷಾ ಅಹಂಕಾರವನ್ನು ಮಟ್ಟ ಹಾಕುವುದಕ್ಕೆ ಅವನ ಲಾಭಕ್ಕೆ ಕತ್ತರಿ ಬೀಳುವಂತೆ ನೋಡಿಕೊಳ್ಳುವುದೊಂದೇ ಮಾರ್ಗ. ಈಗಂತೂ ರಿಸೆಷನ್ ಮತ್ತೆ ಶುರುವಾಗಿದೆ. ಕನ್ನಡಿಗರು ಹತ್ತರಲ್ಲಿ ಆರು ಮಂದಿಯಾದರೂ ಇರುವಂತೆ ಆತ ನೋಡಿಕೊಳ್ಳುವಂತೆ ಮಾಡುವುದು ನಮ್ಮ ಕೈಯಲ್ಲೇ ಇದೆ.

  8. Pramod

    ದೊಡ್ಡ ತಿಮಿ೦ಗಿಲ ಸಣ್ಣದನ್ನು ನು೦ಗುತ್ತದೆ. ಫುಡ್ ಚೈನ್ ಇದು.

  9. ಇಂದುಶೇಖರ ಅಂಗಡಿ

    ಜೋಗಿ ಸರ್, ನಿಮ್ಮ ಲೇಖನಕ್ಕೆ ಸಂಬಂದಪಟ್ಟಂತೆ,ಗದಗ ಜಿಲ್ಲೆಯ ಒಂದು ಸಣ್ಣ ಹಳ್ಳಿಯ, ನಮ್ಮ ಸಂಬಂಧಿಕರಾದ ಇಬ್ಬರು ಹುಡುಗರ ಬಗ್ಗೆ ಹೇಳಬೇಕಿದೆ. ಪಿಯೂಸಿ ಮಾಡಿದ್ದರೂ ಯಾವುದೇ ಕೆಲಸ ಸಿಗದೇ ಹಳ್ಳಿಯಲ್ಲೇ ಕಾಲ ಕಳೆಯುತ್ತಿದ್ದ ಇವರಿಗೆ,ಏಳೆಂಟು ಎಕರೆ ಹೊಲವಿದ್ದರೂ ಅದರಿಂದ ಬರುತ್ತಿದ್ದ ಉತ್ಪನ್ನ ಅಷ್ಟಕ್ಕಷ್ಟೇ. ಎಲ್ಲರಿಂದಲೂ ತಿರಸ್ಕೃತರಾಗಿ ಬೆಂಗಳೂರಿಗೆ ಏನಾದರೂ ಕೆಲಸ ಮಾಡಿದರಾಯಿತೆಂದು ಹೋದರು. ಜಿಗಣಿಯ ಹತ್ತಿರ ಯಾವುದೋ ಫ್ಯಾಕ್ಟರಿಯಲ್ಲಿ ಒಬ್ಬ ಹೆಲ್ಪರ್ ಆಗಿ ಹಾಗೂ ಇನ್ನೊಬ್ಬ ಗಾರ್ಡ್ ಆಗಿ ಸೇರಿಕೊಂಡರು. ಹಳ್ಳಿಯಲ್ಲಿ ಪ್ರತಿಷ್ಟಿತ ಕುಟುಂಬವಾದರೂ, ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸವನ್ನು ಬಸವಣ್ಣನ ತತ್ವದಂತೆ “ಕಾಯಕವೇ ಕೈಲಾಸ” ಎಂದು ತಿಳಿದು ಮಾಡುತ್ತಿದ್ದರೂ, ಸೂಪರ್ ವೈಸರ್ ಗಳಿಂದ ಹಾಗೂ ಏಜನ್ಚಿಯವರಿಂದ ಬೈಗುಳ ತಿನ್ನಬೇಕಾಗಿತ್ತು. ವಾರದಲ್ಲಿ ಏಳೂ ದಿನಗಳ ಪ್ರತಿದಿನ ಹದಿನಾಲ್ಕು ಗಂಟೆಯ ದುಡಿತಕ್ಕೆ ಸಿಗುತ್ತಿದ್ದುದು ಮಾಸಿಕ ಮೂರು ಸಾವಿರ ಮಾತ್ರ. ತಲೆಕೆಟ್ಟು ಅವರೊಲ್ಲಬ್ಬ ಊರಿಗೆ ವಾಪಸ್ ಬಂದನು. ಬ್ಯಾಂಕ್ ಒಂದರಲ್ಲಿ ಲೋನ್ ತೆಗುದುಕೊಂಡು ತಮ್ಮ ಹೊಲದಲ್ಲಿಯೇ ಡೈರಿಯೊಂದನ್ನು ಪ್ರಾರಂಭಿಸಿದ್ದಾನೆ. ಮೊದಲು ಎರಡರಷ್ಟಿದ್ದ ಹಸುಗಳ ಸಂಖ್ಯೆ ಈಗ ಹತ್ತಕ್ಕೇರಿದೆ. ಮೇವು ಕತ್ತರಿಸಲು, ಹಾಲು ಕರೆಯಲು, ಫೀಡ್ ತಯಾರು ಮಾಡಲುಮಷಿನ್ ಗಳನ್ನು ಕೊಂಡಿದ್ದಾನೆ. ಹೊಲದಲ್ಲಿ ಬೋರ್ ಕೊರೆಸಿ ನೀರಾವರಿ ಸಹ ಪ್ರಾರಂಭ ಮಾಡಿದ್ದಾನೆ. ನಮ್ಮ ಹಳ್ಳಿಯಲ್ಲಿ ಇಡೀ ದಿನದಲ್ಲಿ ಆರು ತಾಸು ಮಾತ್ರ ಕರೆಂಟ್ ಕೊಡುವದರಿಂದ (ಅದೂ ರಾತ್ರಿಯಲ್ಲಿ) ಹೊಲಕ್ಕೆ ನೀರು ಹರಿಸಲು, ಬೆಂಗಳೂರಿಗೆ ಕೆಲಸಕ್ಕೆಂದು ತನ್ನ ಜೊತೆಯಲ್ಲಿ ಹೋಗಿದ್ದ ಇನ್ನೊಬ್ಬ ತಮ್ಮನನ್ನೂ ಕರೆಸಿಕೊಂಡಿದ್ದಾನೆ. ಹಾಲಿನ ಮಾರಾಟದಿಂದ ಪ್ರತಿತಿಂಗಳೂ ಎಲ್ಲಾ ಖರ್ಚು ತೆಗೆದು ಹದಿನೈದು ಸಾವಿರ ಗಳಿಕೆ ಇದೆ. (ಹೊಲದ ಉತ್ಪನ್ನದ ಆದಾಯ ಬಿಟ್ಟು). ಸರ್, ಇದು ಉತ್ಪ್ರೇಕ್ಷೆಯ ಬರಹವಲ್ಲಾ. ಬಸವರಾಜ ಹಾಗೂ ಕುಮಾರ ಎನ್ನುವ ನನ್ನಿಬ್ಬರು ಸಂಬಂಧಿಕ ಹುಡುಗರ ನೈಜ ಸಂಗತಿ. ಇವರ ಬಗ್ಗೆ ನಮಗೆಲ್ಲರಿಗೂ ಅಭಿಮಾನವಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading