ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಚಿನ್ಮಯನ ಕಾಡು

ಚಿನ್ಮಯನ ಕಣ್ಣಲ್ಲಿ ಮುತ್ತೋಡಿ ಕರಗುತ್ತಿತ್ತು.

ಆವತ್ತು ರಾತ್ರಿ ಅಮ್ಮ ಅಷ್ಟೊಂದು ಜಗಳ ಆಡದೇ ಹೋಗಿದ್ದರೆ ಅಪ್ಪ ಸಾಯುತ್ತಿರಲಿಲ್ಲವೇನೋ? ಅಮ್ಮ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವನು ರಜಾ ಹಾಕಿ ಅಷ್ಟು ದೂರ ಕರಕೊಂಡು ಬಂದದ್ದು, ಅಲ್ಲಿ ಎಲ್ಲವನ್ನು ಮರೆತು ಅಡ್ಡಾಡಿದ್ದು, ಚಿನ್ಮಯನನ್ನು ಹೆಗಲ ಮೇಲೆ ಕೂರಿಸಿಕೊಂಡು ಕಾಡು ಸುತ್ತಿದ್ದು, ಕೇಳಿದ್ದನ್ನೆಲ್ಲ ಕೊಡಿಸಿದ್ದು, ದೂರದಲ್ಲಿ ಕಾಣಿಸುತ್ತಿದ್ದ ಇಷ್ಟುದ್ದ ಕೋರೆಯಿರುವ ಆನೆಯ ಮೇಲೆ ಚಿನ್ಮಯ ಕುಳಿತಂತೆ ಕಾಣುವ ಹಾಗೆ ಫೋಟೋ ತೆಗೆದದ್ದು, ಕಾಡಿನ ಒಂದೊಂದೇ ಮರಗಳನ್ನು ತೋರಿಸಿ ಅವುಗಳ ಹೆಸರು ಹೇಳಿದ್ದು, ನಡುನಡುವೆ ಕಾಡಿನ ಕತೆಗಳನ್ನು ಹೇಳುತ್ತಾ, ಜಿಮ್ ಕಾಬರ್ೆಟ್ ಬೇಟೆಯಾಡುತ್ತಿದ್ದುದನ್ನು ವಿವರಿಸಿದ್ದು…

ಚಿನ್ಮಯನಿಗೆ ಖುಷಿಯಾಗಿತ್ತು. ರಾತ್ರಿ ಒಬ್ಬನೇ ಹುಲಿಗಾಗಿ ಕಾಯುತ್ತಾ ಕೂರುವುದನ್ನು ಅವನಿಂದ ಕಲ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಹಗಲು ಸವಿವರವಾಗಿ ನಿಚ್ಚಳವಾಗಿ ಕಾಣಿಸುವ ಕಾಡು, ರಾತ್ರಿ ಹೊತ್ತಲ್ಲಿ ಕಪ್ಪು ಮುದ್ದೆಯಂತೆ ಗೋಚರಿಸುತ್ತಿತ್ತು. ತಾವಿರುವ ಕಾಟೇಜಿನೊಳಗೂ ಮಂದ ಬೆಳಕು. ಕಿಟಕಿಯಲ್ಲಿ ಮುಖವಿಟ್ಟು ನೋಡಿದರೆ ಎಲ್ಲೋ ಒಂಚೂರು ಬೆಳಕು. ಆಕಾಶವೂ ಕಾಣಿಸುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಹುಲಿ ಆರ್ಭಟಿಸಿದ ಸದ್ದು, ಆನೆ ಘೀಳಿಟ್ಟ ಸದ್ದು, ಯಾವುದೋ ಜಿಂಕೆ ಓಡಿಹೋದಂತೆ, ಯಾವುದೋ ಹಕ್ಕಿ ರೆಕ್ಕೆಗಳನ್ನು ಸುಮ್ಮನೆ ಫಟಫಟಿಸುತ್ತಾ ಹಾರಿದಂತೆ…

ಕಾಡುಬೆಕ್ಕೊಂದು ಅದು ಹೇಗೋ ಏನೋ ಮರ ಹತ್ತಿ ಗಿಳಿಯೊಂದನ್ನು ಬೇಟೆಯಾಡಿತ್ತು. ಬೆಕ್ಕಿನ ಪಂಜಾದ ಹೊಡೆತಕ್ಕೆ ಸಿಕ್ಕಿ ಗಿಳಿ ಅರೆಪ್ರಾಣವಾಗಿ ಅರಚುತ್ತಿತ್ತು. ಬೆಕ್ಕಿನ ಕಣ್ಣುಗಳಲ್ಲಿ ಅಂಥ ಕ್ರೌರ್ಯ ಇರುತ್ತದೆ ಅನ್ನುವುದು ಚಿನ್ಮಯನಿಗೆ ಅಲ್ಲೀ ತನಕ ಗೊತ್ತೇ ಇರಲಿಲ್ಲ. ಕೂತಾಗ ನಿಂತಾಗ ಹತ್ತಿರ ಬಂದು ಮೈಗೆ ಮೈತಿಕ್ಕುವ ಬೆಕ್ಕಿನ ಜಾತಿಗೇ ಸೇರಿದ ಕಾಡುಬೆಕ್ಕಿನ ಕಾಠಿಣ್ಯಕ್ಕೆ ಚಿನ್ಮಯ ಬೆಚ್ಚಿಬಿದ್ದಿದ್ದ.

ಚಿನ್ಮಯನ ಅಪ್ಪ ಶಶಿಕಾಂತ ರಜಾ ಬಂತೆಂದರೆ ಕಾಡಿಗೆ ಹೊರಟು ನಿಲ್ಲುತ್ತಿದ್ದ. ಆತ ಬೇರೆಲ್ಲಿಗೂ ಪ್ರವಾಸ ಹೋದದ್ದೇ ನೆನಪಿಲ್ಲ. ಜೊತೆಗಿರುವ ಗೆಳೆಯರೆಲ್ಲ ಮುಂಬಯಿ, ದೆಹಲಿ, ತಾಜಮಹಲ್ಲು ನೋಡಿ ಬಂದೆವು ಎಂದು ಬೀಗುತ್ತಿದ್ದರೆ ಚಿನ್ಮಯ ಕಾಡಿನ ಕತೆ ಹೇಳುತ್ತಿದ್ದ. ಅವನ ಗೆಳೆಯರಿಗೂ ನಗರಕ್ಕಿಂತ ಕಾಡೇ ಅದ್ಭುತ ಎನ್ನಿಸುತ್ತಿತ್ತು. ಅವನ ಗೆಳೆಯರೂ ಮನೆಗೆ ಹೋಗಿ ಕಾಡಿಗೆ ಹೋಗೋಣ ಎಂದು ಪೀಡಿಸುತ್ತಿದ್ದರು.

ಚಿನ್ಮಯನಿಗೆ ಎಂಟು ವರ್ಷಗಳ ಹಿಂದೆ ನಡೆದದ್ದು ಚೆನ್ನಾಗಿ ನೆನಪಿದೆ. ಹಗಲೆಲ್ಲ ಸುತ್ತಾಡಿ ಸುಸ್ತಾಗಿ ಆಗಷ್ಟೇ ಕಾಟೇಜಿಗೆ ಬಂದಿದ್ದ ಶಶಿಕಾಂತ. ನಿಮ್ಮಿ ಕೂಡ ಅಷ್ಟೇ ಸುಸ್ತಾಗಿದ್ದಳು. ಚಿನ್ಮಯ ಒಬ್ಬನೇ ಮತ್ತಷ್ಟು ಸುತ್ತಾಡುವ ಹುಮ್ಮಸ್ಸಿನಲ್ಲಿದ್ದದ್ದು. ನಾಳೆ ಬೆಳಗ್ಗೆ ಕಾಡಿನ ನಡುವೆ ಇರುವ ಜಲಪಾತ ತೋರಿಸುತ್ತೇನೆ ಎಂದು ಹೇಳಿದ್ದ ಶಶಿಕಾಂತ. ನಾನೆಲ್ಲಿಗೂ ಬರೋಲ್ಲ ಮಾರಾಯ ಎಂದು ನಿಮ್ಮಿ ಕಾಲು ನೀವುತ್ತಾ ಕೂತಿದ್ದಳು. ಅಷ್ಟು ಹೊತ್ತಿಗೆ ಸರಿಯಾಗಿ ಶಶಿಕಾಂತನ ಫೋನಿಗೆ ಯಾವುದೋ ಒಂದು ಮೆಸೇಜು ಬಂದು ಬಿದ್ದಿತ್ತು.

ಶಶಿಕಾಂತ ಸ್ನಾನ ಮುಗಿಸಿ ಬರುತ್ತಿದ್ದಂತೆ ನಿಮ್ಮಿ ಕೇಳಿದ್ದಳು: ಸುಕೀ ಯಾರು. ಶಶಿಕಾಂತ ಉತ್ತರಿಸುವ ಮೊದಲೇ ನಿಮ್ಮಿಯೇ ಉತ್ತರ ಕೊಟ್ಟಿದ್ದಳು: ಸುಕನ್ಯಾ ತಾನೇ?

ಬೆಳಗ್ಗೆ ಜಲಪಾತ ನೋಡುವ ಕಾರ್ಯಕ್ರಮ ರದ್ದಾಗಿಹೋಗಿತ್ತು. ಇದ್ದಕ್ಕಿದ್ದಂತೆ ಶಶಿಕಾಂತ- ನಿರ್ಮಲಾರ ಮಧ್ಯೆ ಸುಕನ್ಯಾ ಪ್ರತ್ಯಕ್ಷಳಾಗಿ ಎಲ್ಲ ಯೋಜನೆಗಳನ್ನೂ ಹಾಳುಗೆಡವಿದ್ದಳು. ಚಿನ್ಮಯ ಜಲಪಾತ ನೋಡಿಕೊಂಡು ಹೋಗೋಣ ಅಂತ ಹಠ ಹಿಡಿದದ್ದೂ ಉಪಯೋಗಕ್ಕೆ ಬಂದಿರಲಿಲ್ಲ. ಮನೆ ತಲುಪುವ ತನಕವೂ ನಿಮ್ಮಿ ಒಂದೇ ಒಂದು ಮಾತಾಡಿರಲಿಲ್ಲ. ಶಶಿಕಾಂತ ಕೂಡ ಮೌನವಾಗಿ ಜೀಪು ಡ್ರೈವ್ ಮಾಡುತ್ತಿದ್ದ. ಚಿನ್ಮಯ ಆ ಮೌನದಿಂದ ಬೇಸತ್ತು ಕೊಂಚ ಹೊತ್ತು ಅತ್ತಿತ್ತ ನೋಡುತ್ತಾ ಕೂತಿದ್ದು, ಮೈಸೂರು ತಲುಪುವ ಹೊತ್ತಿಗೆ ನಿದ್ದೆ ಹೋಗಿದ್ದ. ಚಿನ್ಮಯನಿಗೆ ಕಾಡು ಸುತ್ತಿದ ಸುಸ್ತಿಗೋ ಏನೋ ಅದೆಂಥಾ ಗಾಢನಿದ್ದೆ ಬಂದಿತ್ತೆಂದರೆ ಅವನು ಏಳುವ ಹೊತ್ತಿಗೆ ಮನೆ ತುಂಬ ಜನ. ಶಶಿಕಾಂತ ಸತ್ತು ಮಲಗಿದ್ದ. ನಿಮ್ಮಿ ಗಡಸು ಮುಖ ಹೊತ್ತು ಕೂತಿದ್ದಳು.

-2-

ಆವತ್ತು ಮನೆ ಬಿಟ್ಟು ಬಂದ ಚಿನ್ಮಯನಿಗೆ ಈಗ ಇಪ್ಪತ್ತು. ಎಂಟು ವರ್ಷಗಳ ಸುತ್ತಾಟದಲ್ಲಿ ಅವನು ಏನೇನೆಲ್ಲಾ ಕಲಿತಿದ್ದಾನೆ. ಅದರಲ್ಲಿ ಮುಖ್ಯವಾದದ್ದೆಂದರೆ: ಈ ಜಗತ್ತಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಹಣ ಸಂಪಾದನೆ ಮಾಡುವುದು ಕಷ್ಟ ಏನಲ್ಲ, ಆದರೆ ನಂಬಿಕೆ ಗಳಿಸಿಕೊಳ್ಳುವುದು ಕಷ್ಟ. ನಮ್ಮ ಆತ್ಮೀಯರು ಎಂದುಕೊಂಡವರು ನಮ್ಮನ್ನು ಸುಮ್ಮನೆ ನಂಬಿದಂತೆ ನಟಿಸುತ್ತಾರೆ. ನಂಬಿಕೆ ಕೂಡ ಒಂಥರದ ಆತ್ಮರತಿ. ಯಾರನ್ನೂ ತುಂಬ ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ಇನ್ನೊಬ್ಬರ ಭಾವನೆಗಳ ಮೇಲೆ ನಮ್ಮ ಬದುಕನ್ನು ರೂಪಿಸಿಕೊಳ್ಳಬಾರದು. ಪ್ರತಿಯೊಬ್ಬರ ಒಳಗೂ ಮತ್ತೊಂದು ಜಗತ್ತಿರುತ್ತದೆ, ಆ ಜಗತ್ತಿನೊಳಗೆ ಯಾರೂ ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ. ಒಂದು ಪುಟ್ಟ ಕಿಟಕಿ ತೆರೆದು ಇಷ್ಟಿಷ್ಟನ್ನೇ ತೋರಿಸುತ್ತಾರೆ. ಸಂಬಂಧಗಳು ಕಾಡಿನ ಹಾಗೆ. ನಡೆಯುತ್ತಾ ಹೋದರೆ ದಾರಿ ತಪ್ಪುತ್ತೇವೆ. ಪ್ರತಿಯೊಬ್ಬರು ಏನನ್ನೋ ನಿರೀಕ್ಷೆ ಮಾಡಿಯೇ ಸ್ನೇಹಹಸ್ತ ಚಾಚುತ್ತಾರೆ ಮತ್ತು ಅವರ ನಿರೀಕ್ಷೆ ಸುಳ್ಳಾದಾಗ ನಿಮ್ಮನ್ನು ಕೆಟ್ಟವರಂತೆ ನೋಡುತ್ತಾರೆ.

ಚಿನ್ಮಯ ಹಂಪೆಗೆ ಹೋಗಿದ್ದಾಗ ಹಾಗಾಯಿತು. ಅಲ್ಲಿ ಆರೆಂಟು ತಿಂಗಳು ಸುಮ್ಮನೆ ಅಲೆದಾಡಿಕೊಂಡಿದ್ದ ಚಿನ್ಮಯ, ಹೊಟ್ಟೆಪಾಡಿಗೆ ಕೈಗೆ ಸಿಕ್ಕಿದ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಬರುವ ಪ್ರವಾಸಿಗರ ಎಸ್ಕಾಟರ್್ ಆಗಿರುವುದು ಅವನಿಗೆ ಪ್ರಿಯವಾದ ಕೆಲಸಗಳಲ್ಲಿ ಒಂದು. ಕಾರಿನಲ್ಲಿ ಬಂದಿಳಿಯುವ ವಿದೇಶಿ ಪ್ರಯಾಣಿಕರು ಅವನ ಹತ್ತಿರ ಸಣ್ಣ ಪುಟ್ಟ ಕೆಲಸ ಮಾಡಿಸಿಕೊಂಡು ಸ್ವಲ್ಪ ಹೆಚ್ಚಿಗೇ ದುಡ್ಡು ಕೊಡುತ್ತಿದ್ದರು. ಅವರನ್ನು ಹಂಪೆಯ ಮೂಲೆಮೂಲೆಗಳಿಗೆ ಕರೆದೊಯ್ಯುವುದು, ಅವರು ಫೋಟೋಗ್ರಫಿ ಮಾಡುವಾಗ ಅವರ ಟ್ರೈಪಾಡ್, ಕೆಮರಾ ಹೊತ್ತು ಓಡಾಡುವುದು, ಅವರಿಗೆ ಹಣ್ಣು, ನೀರು ತಂದುಕೊಡುವುದು, ಎಲ್ಲಿಂದಲೋ ಗಾಂಜಾ ಸಂಪಾದಿಸಿಕೊಡುವುದು- ಹೀಗೆ ಏನೇನೋ ಕೆಲಸಗಳು. ಚಿನ್ಮಯ ಯಾರನ್ನೂ ಇಂತಿಷ್ಟೇ ಕೊಡಿ ಅಂತ ಕೇಳಿದವನಲ್ಲ. ಕೆಲವರು ಮರಳಿ ಹೋಗುವ ಹೊತ್ತಿಗೆ ನೂರಿನ್ನೂರು ಕೊಡುತ್ತಿದ್ದರು. ಕೆಲವರು ಸಾವಿರ ರುಪಾಯಿ, ಶಟರ್ು, ಬ್ಯಾಗು ಕೊಟ್ಟು ಹೋಗುತ್ತಿದ್ದರು. ಒಬ್ಬನಂತೂ ತನ್ನಲ್ಲಿದ್ದ ಪುಟ್ಟ ಕೆಮರಾ ಕೊಟ್ಟು ಹೋಗಿದ್ದ. ಹಾಗೆ ಸಿಕ್ಕಿದವರ ಪೈಕಿ ಸ್ಟೀಫನ್ ಎನ್ನುವವನು ಚಿನ್ಮಯ ಯೋಚಿಸುವ ಧಾಟಿಯನ್ನೇ ಬದಲಾಯಿಸಿಬಿಟ್ಟಿದ್ದ.

ಸ್ಟೀಫನ್ ಬಂದದ್ದು ಹಂಪೆಯ ದೇವಾಲಯಗಳ ಕುರಿತು ಡಾಕ್ಯುಮೆಂಟರಿ ಮಾಡುವುದಕ್ಕೆ, ಕೆಮರಾ, ಲೈಟು, ಟ್ರೈಪಾಡ್, ಕಟರ್, ರಿಫ್ಲೆಕ್ಟರ್ ಎಲ್ಲವನ್ನೂ ಹೊತ್ತುಕೊಂಡೇ ಬಂದಿದ್ದ ಅವನು ಅಲ್ಲಿ ಸುಮಾರು ಒಂದು ತಿಂಗಳು ಇರಲಿಕ್ಕೆಂದು ಬಂದಿದ್ದ. ಅವನನ್ನು ಬಸ್-ಸ್ಟಾಂಡಿನಿಂದಲೇ ಕರೆದುಕೊಂಡು ಬಂದ ಚಿನ್ಮಯನಿಗೆ ತಾನು ಹೋಗುವ ತನಕ ಜೊತೆಯಲ್ಲೇ ಇರಬೇಕು ಎಂದು ಆದೇಶಿಸಿದ್ದ ಸ್ಟೀಫನ್. ಆರಂಭದ ದಿನವೇ ಕೈಗೆ ಸಾವಿರ ರುಪಾಯಿ ತುರುಕಿ, ಈ ಹಳೆ ಬಟ್ಟೆ ತೊಟ್ಟುಕೊಳ್ಳುವಂತಿಲ್ಲ ಎಂದು ಹೇಳಿ, ಹೊಸ ಬಟ್ಟೆಗಳನ್ನು ಕೊಡಿಸಿದ್ದ. ಬಂದ ಸುಸ್ತು, ನಿದ್ದೆ ಯಾವುದರ ಪರಿವೆಯೂ ಇಲ್ಲದೇ ಆವತ್ತಿನಿಂದಲೇ ಶೂಟಿಂಗ್ ಆರಂಭಿಸಿದ್ದ. ಒಂದೇ ಜಾಗದಲ್ಲಿ ನಿಂತು ಮುಂಜಾನೆ. ಮಧ್ಯಾಹ್ನ, ರಾತ್ರಿಗಳಲ್ಲಿ ಗೋಪುರ ಹೇಗೆ ಕಾಣಿಸುತ್ತದೆ ಅನ್ನುವುದನ್ನು ಶೂಟ್ ಮಾಡುತ್ತಿದ್ದ. ರಾತ್ರಿ ಅದನ್ನು ತನ್ನ ಲ್ಯಾಪ್-ಟಾಪಿಗೆ ಹಾಕಿಕೊಂಡು ಹೇಗೆ ಬಂದಿದೆ ಎಂದು ನೋಡುತ್ತಿದ್ದ. ಸಮಾಧಾನ ಆಗದೇ ಇದ್ದರೆ ಮತ್ತೊಂದು ದಿನ ಅದೇ ಶೂಟಿಂಗ್.

ಅವನ ಏಕಾಗ್ರತೆ ನೋಡಿ ಚಿನ್ಮಯನಿಗೆ ಆಶ್ಚರ್ಯವಾಗಿತ್ತು. ಅದನ್ನೆಲ್ಲ ಯಾರು ನೋಡುತ್ತಾರೆ, ಹಂಪೆಯನ್ನು ಎಷ್ಟೋ ಮಂದಿ ಎಷ್ಟೋ ಥರ ತೋರಿಸಿದ್ದಾರಲ್ಲ, ಇವನು ಈಗ ಯಾರಿಗೋಸ್ಕರ ಹೀಗೆ ಶೂಟಿಂಗು ಮಾಡುತ್ತಿದ್ದಾನೆ. ಇದಕ್ಕೆ ಅವನಿಗೆ ಯಾರು ದುಡ್ಡು ಕೊಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಚಿನ್ಮಯ ಕೇಳಿಕೊಂಡು ಸುಮ್ಮನಾಗುತ್ತಿದ್ದ.

ಕೆಲವು ದಿನಗಳ ನಂತರ ಅವನನ್ನು ಹುಡುಕಿಕೊಂಡು ರಾಹುಲ್ ಅನ್ನುವ ಬೆಂಗಳೂರಿನ ವ್ಯಕ್ತಿ ಬಂದಿದ್ದ. ಅವರಿಬ್ಬರೂ ಹಗಲೂ ರಾತ್ರಿ ಕುಳಿತು ಅದೇನನ್ನೋ ನೋಡುತ್ತಿದ್ದರು. ರಾಹುಲ್ ಜೊತೆಗೆ ತಂದಿದ್ದ ಲ್ಯಾಪ್-ಟಾಪಿನಲ್ಲಿ ಮತ್ಯಾವುದೋ ಸಿನಿಮಾ ಇತ್ತು. ಅವರೆಡನ್ನೂ ಇಟ್ಟುಕೊಂಡು ಅವರು ಅದೇನೋ ಮಾಡುತ್ತಿದ್ದರು. ಆ ಹೊತ್ತಿಗೆ ಅವರ ಕೋಣೆಯೊಳಗೆ ಯಾರಿಗೂ ಪ್ರವೇಶ ಇರಲಿಲ್ಲ.

ಚಿನ್ಮಯನಿಗೂ ಅವರೇನು ಮಾಡುತ್ತಿದ್ದಾರೆ ಅನ್ನುವ ಕುರಿತು ಅಂತ ಕುತೂಹಲ ಏನೂ ಇರಲಿಲ್ಲ. ಅಂಥದ್ದರಲ್ಲಿ ಅವನು ಆಸಕ್ತಿ ಕಳಕೊಂಡು ಬಿಟ್ಟಿದ್ದ. ಒಂದು ರಾತ್ರಿ ಕೋಣೆಯ ಹೊರಗೆ ಕುಳಿತುಕೊಂಡು ಸ್ಟೀಫನ್ ಕೊಟ್ಟಿದ್ದ ಸಿಗರೇಟು ಸೇದುತ್ತಿರಬೇಕಾದರೆ, ದೂರದಲ್ಲಿ ಯಾರೋ ಬರುತ್ತಿರುವುದು ಕಾಣಿಸಿತು. ಮಂದ ಬೆಳಕಿನಲ್ಲಿ ಮೂವರು ಇವರಿದ್ದ ಮನೆಯತ್ತಲೇ ಬರುತ್ತಿದ್ದರು.

ಚಿನ್ಮಯ ದಿಟ್ಟಿಸಿ ನೋಡಿದ. ಬರುತ್ತಿದ್ದವರು ಪೊಲೀಸರು ಅನ್ನುವುದು ಅವನಿಗೆ ಗೊತ್ತಾಯಿತು. ಯಾರೇ ಹೊಸಬರು ಬಂದರೂ ಹೇಳಬೇಕು ಎಂದು ಸ್ಟೀಫನ್ ಅಪ್ಪಣೆ ಮಾಡಿದ್ದ. ಚಿನ್ಮಯ ಸೀದಾ ಒಳಗೆ ಓಡಿ ಹೋಗಿ,ಬಾಗಿಲು ತಟ್ಟಿದ. ಸ್ಟೀಫನ್ ಬಾಗಿಲು ತೆಗೆಯುತ್ತಿದ್ದಂತೆ `ಪೊಲೀಸ್ ಕಮಿಂಗ್ ದಿಸ್ ವೇ’ ಅಂದ.

ಸ್ಟೀಫನ್ ಥಟ್ಟನೆ ಚಿನ್ಮಯನನ್ನು ಒಳಗೆಳೆದುಕೊಂಡು ಬಾಗಿಲು ಹಾಕಿಕೊಂಡ.

(ಮುಂದುವರಿಯುತ್ತದೆ..)

 

 

 

‍ಲೇಖಕರು G

17 May, 2011

1 Comment

  1. srinivas deshpande

    jogiyavar kuthoohalada katha shaili tumba sogasu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading