ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಗುಬ್ಬಚ್ಚಿಯ ಗೂಡಿಗೊಂದು ಹಸಿರು ತೋರಣ

 

ನಾನು ‘ಕಾನುಗೋಡು ಮನೆ’ ನೋಡಿಲ್ಲ.

ಕಣ್ಮುಂದೆ ಕಾನುಗೋಡು ಮನೆಯಿದೆ. ಅದು ಹೀಗೇ ಇರುತ್ತದೆ ಅನ್ನುವ ನನ್ನದೇ ಆದ ಕಲ್ಪನೆ. ಹುಟ್ಟಿ ಬೆಳೆದು ಆ ಮನೆಯ ಒಂದು ಭಾಗವೇ ಆಗಿ, ಕೊನೆಗೆ ಒಂದು ಲೋಟ ಕಾಫಿಗಷ್ಟೇ ಬಾಧ್ಯಸ್ತನಾದ ಕವಿ, ಆ ಮನೆಯನ್ನು ಎಷ್ಟು ಚಿತ್ರಕವಾಗಿ ಕಟ್ಟಿಕೊಡುತ್ತಾರೆ ಎಂದರೆ ಬಹುಶಃ ಕವಿತೆಗಷ್ಟೇ ಅದು ಸಾಧ್ಯ. ‘ಕಾನುಗೋಡು ಮನೆ’ ಕವಿಗೂ ಓದುಗನಿಗೂ ಏಕಕಾಲಕ್ಕೆ ಕಾವ್ಯ, ಡಾಕ್ಯುಮೆಂಟರಿ, ಚರಿತ್ರೆ, ಪುರಾಣ, ಹಳಹಳಿಕೆ, ಅನಿವಾರ್ಯ ಕರ್ಮ ಮತ್ತು ಆಪದ್ಧರ್ಮ.

ಹಾಗೆ ಬರೆಯುತ್ತಿದ್ದವರು ಶ್ರೀನಿವಾಸ್.’ಕಾನುಗೋಡು ಮನೆ’ ಸಂಕಲನದ ಅನೇಕ ಪದ್ಯಗಳು ಈಗಲೂ ಅಚ್ಚಳಿಯದ ನೆನಪು. ಅವರ ಗುಬ್ಬಚ್ಚಿ ಗೂಡು ಕವಿತಾಗುಚ್ಛ ಓದುವ ಹೊತ್ತಿಗೆ ಮನಸ್ಸು ಹಿಂದಕ್ಕೆ ಹೋಗಿ ಬರುತ್ತದೆ. ಅಕ್ಷರ ಪ್ರಕಾಶನದ ಪುಸ್ತಕಗಳೆಂದರೆ ಆ ಕಾಲಕ್ಕೆ ನಮಗೆ ಪೆಂಗ್ವಿನ್ ಪ್ರಕಾಶನದ ಪುಸ್ತಕಗಳ ಹಾಗೆ. ಗುಣಮಟ್ಟದ ಭರವಸೆ.

ಶ್ರೀನಿವಾಸ್ ಕವಿಯ ಹಾಗೇ ಇದ್ದವರು. ಇರುವವರು. ಅವರು ರಾಜಕಾರಣದಲ್ಲಿದ್ದರು ಎನ್ನುವುದನ್ನು ನಂಬುವುದು ಕಷ್ಟ. ಕವಿಗಿರಬೇಕಾದ ಸಂಕೋಚ, ಒಳನೋಟ, ಗ್ರಹಿಕೆ ಮತ್ತು ಸೋಮಾರಿತನ ಮೇಳೈಸಿದಂತೆ ಕಾಣಿಸುವ ಅವರು, ಬರೆಯಲು ಕೂಡುವ ಹೊತ್ತಿಗೆ ಥೇಟ್ ಕವಿಯೇ ಆಗಿಬಿಡುತ್ತಾರೆ. ನನ್ನನ್ನು ಮತ್ತೆ ಮತ್ತೆ ಕಾಡುವುದು ಅಷ್ಟೂ ವರ್ಷಗಳ ರಾಜಕೀಯ ಜೀವನ ಅವರ ಕವಿತೆಗಳನ್ನು ಮುಕ್ಕಾಗಿಸಿಲ್ಲ ಅನ್ನುವುದು. ಪತ್ರಿಕೋದ್ಯಮದಂಥ ಕಷ್ಟನಿಷ್ಠುರ ವೃತ್ತಿ ಕೂಡ ಕ್ರಮೇಣ ಕವಿಯ ಕತ್ತುಹಿಸುಬಲ್ಲಷ್ಟು ಪ್ರಭಾವಶಾಲಿಯಾಗಿರುವಾಗ, ರಾಜಕಾರಣದಂಥ ಹೊರದಾರಿಗಳೇ ಇರದ ಪ್ರವೃತ್ತಿ ಕವಿಯನ್ನು ಕವಿಯಾಗಿಯೇ ಉಳಿಸಿದ್ದರೆ, ಅದಕ್ಕೆ ಕಾರಣ ಶ್ರೀನಿವಾಸರ ಅಲಿಪ್ತ ನಿಲುವು ಮತ್ತು ಅತ್ಯಾಶೆಗಳಿರದ ಬದುಕು ಎಂಬುದು ನನ್ನ ಊಹೆ.

ನಾನು ಕನ್ನಡ ಪ್ರಭ ಪತ್ರಿಕೆಯ ಪುರವಣಿ ಸಂಪಾದಕನಾಗಿದ್ದಾಗ ಶ್ರೀನಿವಾಸ್ ಅವರು ಒಂದು ಕತೆ ಬರೆದುಕೊಟ್ಟಿದ್ದರು. ರಾಜಕಾರಣದ ಸೆಳೆತದಿಂದ ಪಾರಾಗಲು ಯತ್ನಿಸುತ್ತಿರುವ ವ್ಯಕ್ತಿ ಒಳತೋಟಿ ಆ ಕತೆಯಲ್ಲಿತ್ತು. ಆ ಒಳಗುದಿ ಅವರದ್ದೂ ಆಗಿತ್ತೇನೋ ಎಂಬಷ್ಟು ತೀವ್ರವಾಗಿ ಬರೆಸಿಕೊಂಡಿದ್ದ ಕತೆ ಅದು. ಅದನ್ನು ಅನೇಕ ಮಿತ್ರರಿಗೆ ಹೇಳಿ ಓದಿಸಿದ್ದೇನೆ ನಾನು. ಬೇರೆ ಬೇರೆ ವೃತ್ತಿಗಳಲ್ಲಿರುವ ಅವರು ಆ ಕತೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು.

ಯಾವುದಾದರೇನು ನಿನ್ನ ಘರಾನ, ಏಕತಾನದ ಶ್ರುತಿಗೆ ನೀನು ಗುಲಾಮ ಎಂದು ನಮ್ಮ ವೃತ್ತಿ ಮತ್ತು ಪ್ರವೃತ್ತಿಗಳ ಮಿತಿಗಳನ್ನು ತೋರಿಸಿಕೊಟ್ಟವರು ಶ್ರೀನಿವಾಸ್. ಆ ಏಕಶ್ರುತಿಯನ್ನು ಹಿಡಿದೇ ಅನೇಕ ಶ್ರುತಿಗಳನ್ನು ಹೊಮ್ಮಿಸಬಲ್ಲ ಹಾದಿಗಳನ್ನೂ ಅವರೇ ತೋರಿಸಿದ್ದೂ ಉಂಟು. ಒಳಸೊನ್ನೆ ಹೊರಸೊನ್ನೆ’ ಕವಿತೆಯಲ್ಲಿ ಅವರು ಹೇಳುತ್ತಾರೆ:

ಬರಿ ಅಚ್ಚರಿಯ ಬಾಲ್ಯ, ಅರೆ ಎಚ್ಚರದ ಕೌಮಾರ್ಯ, ಯೌವನದ ಕೆಚ್ಚಿನುನ್ಮಾದ

ವಾನಪ್ರಸ್ಥ, ವೃದ್ಧಾಪ್ಯಗಳ ಬೆಚ್ಚನೆ ವಿಷಾದ

ಕ್ಷಣಕ್ಷಣವೂ ಆ ಕ್ಷಣವೇ ಸತ್ಯವೆಂದೆನಿಸಿ ಮರುಕ್ಷಣದಲ್ಲೆಲ್ಲ

ಸುಳ್ಳೆನಿಸಿ ಜಳ್ಳಾಗಿಬಿಡುವ ಭ್ರಾಮಕ ಪ್ರಮಾದ.

-೨-

ಹೀಗೆ ತನಗನ್ನಿಸಿದ್ದಕ್ಕೆ ನಿಷ್ಟನಾಗಿ ಬರೆಯುವ ಕವಿ, ರೂಪಕಗಳನ್ನು ದಾಟಲು ಯತ್ನಿಸುತ್ತಲೇ ಇರುತ್ತಾನೆ. ಅದೇ ಕಾರಣಕ್ಕೆ ಎಷ್ಟೋ ಸಲ ಕವಿತ್ವ ವೃತ್ತಿಯಾಗಕೂಡದು ಅನ್ನಿಸುತ್ತದೆ. ಶ್ರೀನಿವಾಸ್ ಅವರಿಗೆ ಬರೆಯುವುದು ವೃತ್ತಿಯೂ ಅಲ್ಲ, ಪ್ರವೃತ್ತಿಯೂ ಅಲ್ಲ. ಅದು ಬಿಡುವು ಮತ್ತು ಬಿಡುಗಡೆ ಎನ್ನುವುದು ಅವರ ಕವಿತೆಗಳನ್ನು ಓದುವಾಗ ಸ್ಪಷ್ಟವಾಗುತ್ತಾ ಹೋಗುತ್ತದೆ.

ಚರಿತ್ರೆಯ ಭಾರವಿಲ್ಲದ, ಪುರಾಣದ ಹಂಗಿಲ್ಲದ ಕಾವ್ಯ ಜಗತ್ತನ್ನು ಭಾರತೀಯ ಕಾವ್ಯ ಸಂದರ್ಭದಲ್ಲಿ ಕಲ್ಪಿಸಿಕೊಳ್ಳುವುದೂ ಕಷ್ಟ. ಕೆಲವರು ಪ್ರತಿಸೃಷ್ಟಿಯಲ್ಲಿ ತೊಡಗಿಕೊಂಡು, ಮತ್ತೆ ಕೆಲವರು ಮರುಸೃಷ್ಟಿಯಲ್ಲಿ ಕಾವ್ಯ ಕಟ್ಟಲು ಹೊರಟು ಮುಕ್ಕಾದುದನ್ನು ನಾವು ನೋಡಬಹುದು. ರಾಮಚಂದ್ರ ಶರ್ಮರಂಥ ಪ್ರಖರ ಪ್ರತಿಭೆ ಕೂಡ ಸಮಕಾಲೀನತೆಯನ್ನು ನೆಚ್ಚಿಕೊಳ್ಳಲು ಹೋಗಿ ಅಪ್ರಸ್ತುತರಾದದ್ದನ್ನು ನೋಡಬಹುದು.

ಇಂಥದ್ದರ ನಡುವೆ ಹವಣಿಸದೇ ಬರೆಯುತ್ತಿದ್ದವರು ಶ್ರೀನಿವಾಸ್. ಕವನ ಬರೆವ ಬಗೆಯ ಕುರಿತೇ ಅವರು ಮೂರು ನಾಲ್ಕು ಪದ್ಯ ಬರೆದಿದ್ದಾರೆ. ಅವುಗಳ ಪೈಕಿ ಥಟ್ಟನೆ ನೆನಪಾಗುವ ಸಾಲೊಂದಷ್ಟಿವೆ. ಕವಿತೆಯೆಂದರೆ : ಬಂಡೆಗಲ್ಲುಗಳಲ್ಲಿ ಬಾಹುಬಲಿಯನ್ನು ಚಂಡೆಮದ್ದಳೆಯಲ್ಲಿ ತಾಂಡವದ ಶಿವನನ್ನ, ಬಟ್ಟಬಯಲಲ್ಲಿ ಇಷ್ಟಮೂರುತಿಯನ್ನು- ಹುಡುಕುವುದು ಅನ್ನುತ್ತಾರೆ ಅವರು.

ಗುಬ್ಬಚ್ಚಿ ಗೂಡು ಸಂಕಲನದ ಕವಿತೆಗಳಲ್ಲಿ ಅವರು ಅಂಥ ಹುಡುಕಾಟಕ್ಕಿಳಿದಿದ್ದಾರೆ. ಸುದೀರ್ಘ ಕವಿತೆಗಳನ್ನು ಬರೆಯುವ ತುರ್ತಿನಿಂದ ಪಾರಾಗಲೆಂಬಂತೆ ಕಿರುಗವಿತೆಗಳನ್ನು ಮುಂದಿಟ್ಟಿದ್ದಾರೆ. ಇಲ್ಲಿಯ ಕವಿತೆಗಳು ಅತ್ತ ಹನಿಗವಿತೆಯೂ ಅಲ್ಲದ, ಇತ್ತ ಕವಿತೆಗಳೂ ಅಲ್ಲದ ವಿಶಿಷ್ಟ ರಚನೆಗಳು. ಇಂಥ ರಚನೆಗಳನ್ನು ಶ್ರೀಕೃಷ್ಣ ಆಲನಹಳ್ಳಿ, ಜಯಪ್ರಕಾಶ್ ಎಂ ಎನ್ ಮುಂತಾದವರು ಪ್ರಯತ್ನಿಸಿದ್ದೂ ಉಂಟು.

ಗುಬ್ಬಚ್ಚಿ ಎನ್ನುವ ಹೆಸರು ಪುಟ್ಟದಾಗಿದ್ದನ್ನು ಸೂಚಿಸುವ ಹಾಗೇ, ಕತ್ತು ಓರೆ ಮಾಡಿ ಅರೆಕ್ಷಣ ದಿಟ್ಟಿಸಿ ಅದೇನನ್ನೋ ಗ್ರಹಿಸುವ ರೀತಿಯನ್ನೂ ಸೂಚಿಸುವಂತಿದೆ. ಇಲ್ಲಿಯ ಕವಿತೆಗಳೂ ಹಾಗೆಯೇ. ಪ್ರಸಂಗ, ಪ್ರಕ್ರಿಯೆ, ವ್ಯಕ್ತಿ- ಈ ಮೂರೂ ಇಲ್ಲಿರುವ ಕವಿತೆಗಳಿಗೆ ವಸ್ತು. ತಾವು ಬಹಳ ವರ್ಷ ಒಡನಾಡಿದ ವ್ಯಕ್ತಿಗಳನ್ನು ಅವರು ನಾಲ್ಕಾರು ಸಾಲುಗಳಲ್ಲಿ ಕಡೆಯಲು ಯತ್ನಿಸುತ್ತಾರೆ. ಹಾಗೆ ಮೂಡುವ ಅಕ್ಷರ ಶಿಲ್ಪವನ್ನು ನಾವು ತಳ್ಳಿಹಾಕುವಂತಿಲ್ಲ. ಅದು ಅವರು ಕಂಡವರ ಖಂಡತುಂಡ ಚಿತ್ರ.

 

ಲಂಕೇಶ

ನಿಮ್ಮ ಅಪ್ಪ ಅಮ್ಮ ಯಾಕಾಗಿ

ಎಲ್ಲಾ ಬಿಟ್ಟು ನಿಮಗೆ ಈ ಹೆಸರನ್ನಿಟ್ಟರೋ

ನಮಗೆ ಗೊತ್ತಿಲ್ಲ ಕಾರಣ

ಆದರೆ ಲಂಕೇಶ ಅಂದ ಮಾತ್ರಕ್ಕೆ

ಆಗಲೇಬೇಕಿರಲಿಲ್ಲ ನೀವು ರಾವಣ

ಆಗಲೂಬಹುದಿತ್ತಲ್ಲ ವಿಭೀಷಣ.

 

ಸಣ್ಣಗೊಂದು ಮುಗುಳನಗು ಹುಟ್ಟಿಸಿ, ಅವರ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿ, ನಮಗೆ ಗೊತ್ತಿರುವ ಚಿತ್ರವನ್ನು ಕಣ್ಮುಂದೆ ತಂದು ಅಹಾ, ನಿಜ ಎಂದು ತಲೆದೂಗುವಂತೆ ಮಾಡುವಂಥ ಅನೇಕ ಚಿತ್ರಗಳು ಇಲ್ಲಿವೆ. ಟಿಪಿಕಲ್ ಅನ್ನಬಹುದಾದದ್ದು ಟಿ ಪಿ ಅಶೋಕ್, ಸುಬ್ಬಣ್ಣ, ವೈದೇಹಿ ಮುಂತಾದವರ ಕುರಿತ ಕುರುಕು ಕವಿತೆಗಳು. ಒಂಚೂರು ಉಪ್ಪು, ಒಂದಿಷ್ಟು ಖಾರ. ಆದರೂ ರುಚಿ.

ಹಾಗಂತ ಇಲ್ಲಿ ಗಾಢವಾದದ್ದು ಇಲ್ಲ ಎಂದು ಭಾವಿಸಬೇಕಾಗಿಲ್ಲ. ಶ್ರೀನಿವಾಸ್ ಮನುಷ್ಯ ಸಂಬಂಧಗಳ ಬಗ್ಗೆ ಬರೆಯುವ ಹೊತ್ತಿಗೆ ಕೊಂಚ ಭಾವುಕರಾಗುತ್ತಾರೆ. ಅಲ್ಲಲ್ಲಿ ರೋಷ ಉಕ್ಕುತ್ತದೆ. ಅವೆಲ್ಲವನ್ನು ಹೊಮ್ಮಿದ ಪ್ರಮಾಣದಲ್ಲಿ

ಪ್ರಕಟಪಡಿಸಕೂಡದು ಎಂಬ ನಾಗರಿಕ ಪ್ರಜ್ಞೆಯೂ ಅವರಲ್ಲಿ ಜೀವಂತವಾಗಿದೆ. ಹೀಗಾಗಿ ಕೂಗಿ ಹೇಳಬಹುದಾದದ್ದನ್ನೂ ಅವರು ತಣ್ಣಗಿನ ದನಿಯಲ್ಲಿ ಹೇಳುತ್ತಾರೆ. ಹಾಗಂತ, ಪರಿಣಾಮದಲ್ಲಿ ವ್ಯತ್ಯಾಸವಾಗಿದೆ ಎಂದು ಭಾವಿಸುವ ಅಗತ್ಯ ಇಲ್ಲ:

-೧-

ಅವಳನ್ನು ಜಾರೆಯೆಂದೇಕೆ ಜರೆಯುತ್ತೀರಿ

ಪುರುಷೋತ್ತಮರೇ

ಜಾರಿದವರು ನೀವಲ್ಲವೇ?

-೨-

ಪುಸ್ತಕಗಳನ್ನು ಬರೆದು ಪ್ರಕಟಿಸಿ

ಇದ್ದುಬಿಟ್ಟರಾಗದು ನಮ್ಮ ಪಾಡಿಗೆ

ನಾವೇ ಹುಡುಕಬೇಕು ವಿಮರ್ಶಕರನ್ನು

ತೆರಬೇಕು ತಕ್ಕ ಬಾಡಿಗೆ.

 

ಇಂಥವುಗಳ ಮಧ್ಯೆ ಅವರ ಹಾಸ್ಯಪ್ರಜ್ಞೆ ಹೊರಹೊಮ್ಮುತ್ತದೆ. ತುಟಿಯಂಚಲ್ಲಿ ಮುಗುಳುನಗೆ ಮೂಡಿಸುವಂಥ ಕವಿತೆಗಳ ಸಂಖ್ಯೆಯೇ ಇಲ್ಲಿ ಹೆಚ್ಚಿದೆ:

-೧-

ಹಿಂದೊಮ್ಮೆ ಅವನು

ಅನುಭವಿಸಿ ಹಾಡುತ್ತಿದ್ದ

ಈಗ ಅವನು ಹಾಡುತ್ತಾನೆ

ನಾವು ಅನುಭವಿಸಬೇಕು.

-೨-

ಆಡೋದ್ ಗೋಲಿ

ಮಾತಾಡೋದ್ ಸೌರವ್

ಗಂಗೂಲಿ.

-೩-

ಕಿಬ್ಬನಹಳ್ಳಿ ಕ್ರಾಸು

ಅದುಬಿಟ್ಟರೆ ಅದು ಬರೀ ಪ್ರೋಸು

ದಾಟುವುದು ಭಾರೀ ತ್ರಾಸು

ಅಂದರೆ ಪೊಯೆಟ್ರಿಯಾಗುತ್ತೆ ಸಲೀಸು

ಪೊಯೆಟ್ರಿ ಅಂದ್ರೆ ಅಷ್ಟೇಂತಲ್ಲ

ಇದೊಂದು ಸ್ಯಾಂಪಲ್ ಪೀಸು.

 

ವೈಎನ್‌ಕೆ, ಬಿಳಿಗಿರಿ ಮುಂತಾದವರಲ್ಲಿ ಕಾಣಿಸುತ್ತಿದ್ದ ವಿಟ್, ಇಲ್ಲಿನ ಕೆಲವು ಕವಿತೆಗಳಲ್ಲಿವೆ. ವೈಎನ್‌ಕೆ

ರೈಮು-ರೀಸನ್ನು ಇಟ್ಟುಕೊಂಡು ವೈನಾಗಿ ಬರೆಯುತ್ತಿದ್ದರು. ಬಿಳಿಗಿರಿ ತಮ್ಮ ಹೆಸರನ್ನೇ ಪನ್ ಮಾಡಿಕೊಂಡು ಮೂರೈ, ನಾಲ್ಕ್ ಐ ಎಂಬಿತ್ಯಾದಿ ಪದ್ಯ ಕೊಡುತ್ತಿದ್ದರು. ಅಂಥದ್ದೇ ಸೊಗಸು ಈ ಗುಬ್ಬಚ್ಚಿ ಗೂಡಿನಲ್ಲೂ ನನಗೆ ಕಾಣಿಸಿದೆ. ಅಲ್ಲಲ್ಲಿ ಕೊಂಚ ತೆಳುವಾಗುತ್ತ, ಕೆಲವೊಮ್ಮೆ ಪೇಲವ ಅನ್ನಿಸುತ್ತಾ, ಮಗದೊಮ್ಮೆ ಪ್ರಖರವಾಗಿ ಬೆಳಗುತ್ತಾ ಇಲ್ಲಿಯ ಕವಿತೆಗಳ ಮೂಲಕ ಶ್ರೀನಿವಾಸ್ ಪ್ರಕಟಗೊಂಡಿದ್ದಾರೆ.

ಕಣ್ಣು ತೇವವಾಗಿಸುವ ಒಂದೆರಡು ಸಾಲು:

 

ಬೆಂಗಳೂರಿನ ನಮ್ಮ ಬಾಡಿಗೆ ಮನೆಯಲ್ಲಿ

ಗುಬ್ಬಚ್ಚಿ ಬಂದು ಗೂಡು ಕಟ್ಟಿದ್ದು ನೋಡಿ

ಸಂತಸಗೊಂಡೆವು ನಾನು ನನ್ನವಳು

ಗುಬ್ಬಚ್ಚಿಗಳು ಗೂಡುಕಟ್ಟುತ್ತಲೇ ಹೋದವು

ನಮಗೆ ಈಗ ನಾಲ್ಕು ಜನ ಮಕ್ಕಳು.

 

 

‍ಲೇಖಕರು G

9 July, 2011

3 Comments

  1. Vithal Dalawai

    Super super

  2. Ugama Sreenivas

    ಜೋಗಿ ಬರೆಹ ಇಷ್ಟವಾಯ್ತು. ‘ಕಾನುಗೋಡು ಮನೆ’ ಪದ್ಯವನ್ನು ನಾನು ಮೊದಲ ಬಾರಿ ಓದಿದ್ದು ಲಂಕೇಶ್ ಸಂಪಾದಕತ್ವದ ‘ಅಕ್ಷರ ಹೊಸ ಕಾವ್ಯ’ ಕೃತಿಯಲ್ಲಿ. ಆ ಪದ್ಯ ಓದಿದ ತಕ್ಷಣ ಶ್ರೀನಿವಾಸ ರನ್ನು ಇಡಿಯಾಗಿ ಓದಬೇಕೆಂದು ಅನಿಸಿ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಅದೇ ಹೆಸರಿನ ಕವನ ಸಂಕಲನ ಖರೀದಿಸಿ ಓದಿದ್ದು ಉಂಟು. ನಿಜಕ್ಕೂ ನಾನು ಮರೆತೇ ಹೋಗಿದ್ದ ಈ ಚೆಂದದ ಕವಿಯನ್ನು ಮತ್ತೆ ಓದಲು ಪ್ರೇರೇಪಿಸಿದ ಜೋಗಿಗೆ ವಂದನೆ. ಡಿ.ಆರ್. ನಾಗರಾಜ್ ಕಥೆ ಬರೆದದ್ದು, ಜಿ.ಎಸ್. ಅಮೂರ್ ಪದ್ಯ ಬರೆದದ್ದು ಈ ಎಲ್ಲಾ ವಿಷಯಗಳು ತಿಳಿಯುತ್ತಿದ್ದು ಲಂಕೇಶ್ ಪತ್ರಿಕೆಯಿಂದ. ಒಂದು ಆರೋಗ್ಯಪೂರ್ಣ ಚರ್ಚೆಯನ್ನು, ಸಂವಾದವನ್ನು ಹುಟ್ಟು ಹಾಕುತ್ತಿದ್ದ ಲಂಕೇಶ ರ ಅನುಪಸ್ಥಿತಿ ಕಾಡುತ್ತಿದ್ದ ಹೊತ್ತಲ್ಲಿ ಶ್ರೀನಿವಾಸ ರನ್ನು ಮತ್ತೆ ಮೆಲಕು ಹಾಕುವಂತಾಯಿತು.

    ಉಗಮ ಶ್ರೀನಿವಾಸ್

  3. Roopa DP

    ಶ್ರೀನಿವಾಸ್ ಕುರಿತು ನನಗೆ ಅಷ್ಟಾಗಿ ತಿಳಿದಿಲ್ಲ. ’ಗುಬ್ಬಚ್ಚಿ ಗೂಡು’ ಕೊಂಡು ಒದಲೇಬೇಕೆನಿಸುತ್ತಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading