-ಜೋಗಿ
ದಿವಾಕರ ಈಸ್ಟ್ ಆಂಜನೇಯ ಟೆಂಪಲ್ಲಿನ ತನ್ನ ಆಫೀಸಿನಿಂದ ಹೊರಗೆ ಬಂದು,ವಿದ್ಯಾರ್ಥಿ ಭವನದ ಹತ್ತಿರ ಬಲಕ್ಕೆ ತಿರುಗುವುದಕ್ಕೂ ಮಾಲತಿ ಅದೇ ರಸ್ತೆಯಲ್ಲಿ ಎದುರಾಗುವುದಕ್ಕೂ ಸರಿಹೋಯಿತು. ದೀಪಾವಳಿಯ ಮುಂಜಾನೆ. ಗಾಂಧೀಬಜಾರು ಗಿಜಿಗುಡುತ್ತಿರಲಿಲ್ಲ. ಹೂವು ಹಣ್ಣು ಮಾರುವವರಿನ್ನೂ ಅಂಗಡಿ ತೆರೆದಿರಲಿಲ್ಲ. ಹೀಗಾಗಿ ಮಾಲತಿಯ ಕಣ್ಣಿಗೆ ಬೀಳದೇ ದಿವಾಕರ ತಪ್ಪಿಸಿಕೊಳ್ಳುವುದು ಸಾಧ್ಯವೇ ಆಗಲಿಲ್ಲ.
ಹೂವಿನ ಪಕಳೆಗಳು ದಾರಿಯುದ್ದಕ್ಕೂ ಚೆಲ್ಲಾಡಿದ್ದವು. ರಸ್ತೆಯಲ್ಲೆಲ್ಲ ಪಟಾಕಿಯ ಅವಶೇಷಗಳು. ಹಣ್ಣು ಮಾರುವ ಅಂಗಡಿಗಳಿಗೆ ಹೊದಿಸಿದ್ದ ಕೆಂಪು, ನೀಲಿ, ಹಸಿರು ಪ್ಲಾಸ್ಟಿಕ್ ಕವರುಗಳು, ಹಳೇ ಬೋರ್ಡು ಹೊತ್ತು ನಿಂತ ಗ್ರಂಥಿಗೆ ಅಂಗಡಿ,ವಿದ್ಯಾರ್ಥಿ ಭವನದಲ್ಲಿ ತಿಂಡಿ ತಿಂದು ಎಡಗೈಯಿಂದ ತುಟಿಯೊರೆಸಿಕೊಂಡು ಹೊರಬರುತ್ತಿರುವ ಹಿರಿಯರು, ಇವೆಲ್ಲದರ ನಡುವೆ ನಿಂತಿರುವ ತಾನು.
ಮಾಲತಿ ಒಬ್ಬಳೇ ಆ ಪರಿಸರಕ್ಕೆ ಹೊಂದದ ಸಂಗತಿಯಾಗಿ ಕಂಡಳು. ಅವಳಾಗೇ ಗುರುತು ಹಿಡಿಯಲಿಕ್ಕಿಲ್ಲ. ಹತ್ತೋ ಹನ್ನೆರಡೋ ವರ್ಷ ಆಗಿರಬೇಕಲ್ಲ. ನನ್ನನ್ನು ಮರೆತಿರಬಹುದು, ಅವಳ ಕಣ್ಣಿಗೆ ಪರೆ ಬಂದಿರಬಹುದು ಎಂದು ಕಾದದ್ದು ಯಾವ ಉಪಯೋಗಕ್ಕೂ ಬರಲಿಲ್ಲ. ಅಮೂಲ್ಯ ನಿಧಿಯನ್ನು ಕಂಡಂತೆ ಮಾಲತಿ ಓಡೋಡಿ ಬಂದು ದಿವಾಕರನ ಕೈ ಹಿಡಕೊಂಡಳು.
ಏಳೋ ಎಂಟೋ ವರ್ಷಗಳಾಗಿರಬೇಕು ಅವಳನ್ನು ದಿವಾಕರ ನೋಡಿ. ಕೋಲಾರದ ಸೆಷನ್ ಕೋರ್ಟಿನ ಆವರಣದಲ್ಲಿ ಸ್ಟಾಂಪ್ ಪೇಪರ್ ಮಾರುತ್ತಿದ್ದ ಕಾಲದಲ್ಲಿ ಪರಿಚಯವಾದವಳು ಮಾಲತಿ. ಅವಳು ಅಪ್ಪನ ಜೊತೆ ಕೋರ್ಟಿಗೆ ಬರುತ್ತಿದ್ದಳು.
ಮದುವೆಯಾಗಿ ಒಂದೇ ತಿಂಗಳಿಗೆ ಗಂಡ ತೌರುಮನೆಯಿಂದ ದುಡ್ಡು ತರುವಂತೆ ಪೀಡಿಸುತ್ತಿದ್ದಾನೆ ಎಂದು ಕೇಸು ಹಾಕಿದ್ದಳು. ಅವಳು ಬಂದ ದಿನ ಹೆಗಲಿಗೊಂದು ಚೀಲ ಹಾಕಿಕೊಂಡು, ಶೇವಿಂಗ್ ಮಾಡದ, ತಲೆ ಬಾಚಿಕೊಳ್ಳದ ಆಕೃತಿಯೊಂದು ಕೋರ್ಟಿಗೆ ಬರುತ್ತಿತ್ತು. ವಿಚಾರಣೆ ಮುಗಿದ ನಂತರ ಮಾಲತಿಯ ಹಿಂದೆಯೇ ಹೋಗಿ ಅವಳನ್ನು ಮಾತಾಡಿಸಲು ಯತ್ನಿಸುತ್ತಿತ್ತು. ಮಾಲತಿ ಆತನ ಅಹವಾಲನ್ನು ಲೆಕ್ಕಿಸದೇ ಅವನ ಕಡೆ ತಿರುಗಿಯೂ ನೋಡದೇ ಅಪ್ಪನೊಡನೆ ಬಿರಬಿರನೆ ಹೊರಟು ಬಿಡುತ್ತಿದ್ದಳು.
ಅಷ್ಟನ್ನು ಮಾತ್ರ ದಿವಾಕರ ನೋಡುತ್ತಿದ್ದ. ಕೆಲವು ತಿಂಗಳುಗಳ ನಂತರ ಮಾಲತಿ ಒಬ್ಬಳೇ ಕೋರ್ಟಿಗೆ ಬರತೊಡಗಿದಳು. ಆಗಲೇ ಅವಳನ್ನು ದಿವಾಕರ ಮಾತಾಡಿಸಿದ್ದು. ಅಪ್ಪ ತೀರಿಕೊಂಡದ್ದನ್ನೂ ಗಂಡನ ಮನೆಯವರ ಕಾಟ ಹೆಚ್ಚಿದ್ದನ್ನೂ ಕೋರ್ಟು ವಿಚಾರಣೆ ಮಾಡ್ತಿಲ್ಲ ಎಂದೂ ಹೊಂದಾಣಿಕೆ ಮಾಡ್ಕೊಂಡು ಹೋಗಿ ಎನ್ನುತ್ತಿದೆ ಎಂದೂ ಮಾಲತಿ ಒಂದು ಹನಿ ಕಣ್ಣೀರನ್ನೂ ಹಾಕದೇ ದಿವಾಕರನ ಹತ್ತಿರ ಹೇಳಿಕೊಂಡಿದ್ದಳು. ದಿವಾಕರನಿಗೆ ಆಗ ಇಷ್ಟವಾದದ್ದು ಅವಳು ಸಲೀಸಾಗಿ ಆಡುತ್ತಿದ್ದ ಮಾತು. ತಾನು ಹೊರಗಿನವನು ಎಂಬ ಸಂಕೋಚವೂ ಇಲ್ಲದಂತೆ, ಜೊತಗೆ ಓದಿದ ಹುಡುಗನಿಗೋ, ಅಣ್ಣನಿಗೋ ಹೇಳಿದಷ್ಟೇ ಸಹಜವಾಗಿ ಅವಳು ಇದನ್ನೆಲ್ಲ ದಿವಾಕರನ ಬಳಿ ಮಾತಾಡಿದ್ದಳು. ಒಳಗೊಂದು ಹೊರಗೊಂದು ಇಲ್ಲದ ಪಾಪದ ಹುಡುಗಿ ಎಂದು ದಿವಾಕರ ತನ್ನ ಹರೆಯ ಅರಳುತ್ತಿದ್ದ ದಿವಸಗಳಲ್ಲಿ ಅವಳ ಬಗ್ಗೆ ಸಣ್ಣದೊಂದು ಅನುಕಂಪ ಮತ್ತು ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದ.
ಹೀಗೆ ಶುರುವಾದ ಮಾತುಕತೆ ಅವರಿಬ್ಬರನ್ನೂ ತುಂಬ ಹತ್ತಿರಕ್ಕೂ ತಂದಿತು. ಅವಳು ಒಂದೊಂದು ದಿನ ಕೇಸಿಲ್ಲದಿದ್ದಾಗಲೂ ಬಂದು ದಿವಾಕರನ ಪುಟ್ಟ ಅಂಗಡಿಯಲ್ಲಿ ಕೂತು ಮಾತಾಡಿ ಹೋಗುತ್ತಿದ್ದಳು. ಗಂಡನನ್ನು ತುಂಬ ಪ್ರೀತಿಸುತ್ತಿದ್ದೇನೇನೋ ಎಂಬಂತೆ ಅವನ ಬಗ್ಗೆ ಮಾತಾಡುತ್ತಿದ್ದಳು.
ಬೂದುಗುಂಬಳಕಾಯಿ ಮಜ್ಜಿಗೆಹುಳಿ ಇಷ್ಟ ಮುಂಡೇದಕ್ಕೆ. ಮಾಡಿ ಹಾಕು ಅಂತ ಹಾಕೋಲ್ವಾ ನಾನು. ದಿನಕ್ಕೊಂದು ಥರದ ತಿಂಡಿ ಮಾಡಿ ಅವನ ಗಂಟಲಿಗೆ ಜಡೀತಿದ್ದೆ. ಅದರಮ್ಮ ನೋಡಬೇಕು ನೀವು. ಗುಂಡುಕಲ್ಲು ಥರ ಕೂತಿರುತ್ತೆ. ಅದೆಂಥದೋ ಕಾಯಿಲೆ ಬೇರೆ ಅದಕ್ಕೆ. ಪರಾಪರಾಪರಾ ಅಂತ ಇಡೀ ಮೈ ಕೆರ್ಕೋತಿರುತ್ತೆ.. ಇಷ್ಟುದ್ದ ಉಗುರುಬೇರೆ. ಅದನ್ನೆಲ್ಲ ಸಹಿಸ್ಕೊಂಡು ಸಂಸಾರ ಮಾಡ್ತಿಲ್ವಾ ನಾನು. ದುಡ್ಡು ತಾ ಅಂತಾನೆ. ನಾನೆಲ್ಲಿಂದ ತರ‍್ಲಿ. ಇವನ್ನ ಕಟ್ಕೊಂಡ ಮೇಲೂ ಅಪ್ಪನ ಹೋಗಿ ಕೇಳ್ಲಾ. ಆಗೋಲ್ಲ ಅಂತ ಹೇಳ್ದೆ. ತಂದುಕೊಡಬಹುದಾಗಿತ್ತು. ಒಂದ್ಸಾರಿ ತಂದುಕೊಟ್ರೆ ಅಭ್ಯಾಸ ಆಗತ್ತೆ. ಪದೇ ಪದೇ ಪೀಡುಸ್ತಾನೆ.
ಒಂದೇ ಸಲಕ್ಕೆ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದೆ. ಕೇಳ್ತಿದ್ದ. ಆದರೆ ಅದರಮ್ಮ ಇವನ ತಲೇನೂ ಕೆರೆದಿರಬೇಕು. ದುಡ್ಡು ತಂದ್ರೆ ಒಳಗೆ ಬಾ ಅಂತ ಅಮಾವಾಸ್ಯೆ ರಾತ್ರಿ ಹೊರಗೆ ಕಳಿಸೇಬಿಟ್ಟ. ನಂಗೆ ದೆವ್ವ ಅಂದ್ರೆ ಭಯ ಗೊತ್ತಾ. ಮತ್ತ್ಯಾವುದಕ್ಕೂ ಹೆದರೋದಿಲ್ಲ ನಾನು. ಆ ರಾತ್ರಿ ಹೊರಗೆ ಹಾಕಿದ್ರಲ್ಲ,ಭಯಕ್ಕೆ ಉಟ್ಟ ಬಟ್ಟೇಲೇ ಒಂದ ಮಾಡ್ಕೊಂಡುಬಿಟ್ಟೆ. ನಾಚಿಕೆ ಆಗ್ಹೋಯ್ತು. ಒಂದು ಒಳ್ಳೇದೇ ಆಯ್ತು. ಭಯ ಹೊರಟು ಹೋಯ್ತು. ಈಗ ಮಧ್ಯ ರಾತ್ರಿ ಸ್ಮಶಾನಕ್ಕೆ ಹೋಗು ಅಂದ್ರೂ ಹೋಗ್ತೀನಿ ದಿವಾಕರ.
ಹೀಗೆ ದಿವಾಕರನ ಕಿವಿಯನ್ನು ಗುತ್ತಿಗೆಗೆ ಪಡಕೊಂಡವಳಂತೆ ತುಂಬ ಹೊತ್ತು ಮಾತಾಡಿ, ಹೊತ್ತಾಯ್ತು ದಿವಾಕರ. ನಾಳೆನೋ ನಾಡಿದ್ದೋ ಬರ್ತೇನೆ ಎಂದು ಹೇಳಿ ಹೊರಟು ಹೋಗುತ್ತಿದ್ದಳು. ಒಂದೊಂದು ಸಲ ಬರುವಾಗ ನಮ್ಮತ್ತೆ ಮಾಡ್ಕೊಟ್ಟಿದ್ದು ಅಂತ ಚಕ್ಕುಲಿ, ಕೋಡುಬಳೆ ತರುತ್ತಿದ್ದಳು. ಅದನ್ನು ತಿನ್ನಲು ಹೊರಟಾಗೆಲ್ಲ ಆ ಮುದುಕಿ ಅಂಡು ಕೆರಕೊಳ್ಳುವ ಚಿತ್ರ ದಿವಾಕರನ ಕಣ್ಮುಂದೆ ಬಂದು ತಿನ್ನುವುದಕ್ಕೇ ಮನಸ್ಸಾಗುತ್ತಿರಲಿಲ್ಲ.
ದಿವಾಕರನಿಗೆ ಕೋಲಾರದಲ್ಲಿ ಹೆಣ್ಣು ಸಿಗಲಿಲ್ಲ. ಬೆಂಗಳೂರಲ್ಲಿ ಹುಡುಕಿದರೆ ಸಿಗುತ್ತೆ. ಆದ್ರೆ ನಿನ್ನ ಸಂಪಾದನೆಗೆ ಯಾರೂ ನಿನ್ನ ಮದುವೆ ಆಗೋಲ್ಲ. ಬೆಂಗಳೂರಿಗೆ ಹೋಗು ಅಂತ ಅವನ ಚಿಕ್ಕಪ್ಪ ಗಲಾಟೆ ಮಾಡಿ ದಿವಾಕರನಿಗೆ ಪೂರ್ವ ಆಂಜನೇಯ ದೇವಸ್ಥಾನದ ರಸ್ತೆಯಲ್ಲೊಂದು ಪುಟ್ಟ ಅಂಗಡಿ ತೆರೆಯಲು ಸಹಾಯ ಮಾಡಿದ್ದರು.
ಛಾಪಾ ಕಾಗದದ ಜೊತೆಗೇ ಅರ್ಜಿ ಬರ್ಕೊಡೋದು, ಝೆರಾಕ್ಸ್ ಮಾಡಿಕೊಡೋದು- ಮುಂತಾದ್ದೆಲ್ಲವನ್ನೂ ದಿವಾಕರ ಮಾಡತೊಡಗಿದ. ಕ್ರಮೇಣ ವ್ಯಾಪಾರ ಅಭಿವೃದ್ಧಿಯಾಯ್ತು. ಕತ್ರಿಗುಪ್ಪೆಯ ಹುಡುಗಿ ವಿಮಲಾಳನ್ನು ನೋಡಿ ಒಪ್ಪಿ ಮದುವೆಯೂ ಆಯ್ತು. ಮದುವೆಗೆ ಮಾಲತಿಯೂ ಬಂದಿದ್ದಳು.
ಚೆನ್ನಾಗಿದ್ದಾಳೆ ದಿವಾಕರ ನಿನ್ನ ಹೆಂಡ್ತಿ. ಎರಡು ಜಡೆ ಹಾಕಬೇಡ ಅಂತ ಹೇಳು. ಕೊಂಬಿನ ಹಸುವಿನ ಥರ ಕಾಣ್ತಾಳೆ. ಚೆನ್ನಾಗಿ ಸಂಸಾರ ಮಾಡು. ಅವಳ ಅಪ್ಪನ ಹತ್ರ ದುಡ್ಡುಕಾಸು ಕೇಳೋಕೆ ಹೋಗಬೇಡ. ವರದಕ್ಷಿಣೆ ಏನೂ ತೊಗೊಂಡಿಲ್ಲ ತಾನೇ ಎಂದು ಎಲ್ಲರೆದುರು ಕೇಳಿ ಹೊರಟು ಹೋಗಿದ್ದಳು. ವಿಮಲಾ ಅದ್ಯಾರು, ನಿಮ್ಮ ಕಡೆಯೋರಾ ಅಂತ ಕೇಳಿ, ಅವಳು ಯಾರೂ ಅಲ್ಲ ಗೊತ್ತಾದಾಗ ಅಸೂಯೆಪಟ್ಟುಕೊಂಡು, ಅದನ್ನು ಜಿಗುಪ್ಸೆಯೆಂಬಂತೆ ತೋರ್ಪಡಿಸಿಕೊಂಡಿದ್ದಳು.
ಅವಳಿಗೂ ಗಂಡನಿಗೂ ಸರಿಯಿಲ್ಲ ಎಂದು ಗೊತ್ತಾದಾಗ ಏನು ಮಾತಾಡ್ತಾಳೆ,ಹೆಣ್ತನದ ಒಂದು ಗುಣ ಆದ್ರೂ ಇದ್ಯಾ ಅವಳ ಹತ್ರ. ಅದಕ್ಕೇ ಅವಳ ಗಂಡ ಕಳಚಿಕೊಳ್ಳೋದಕ್ಕೆ ನೋಡ್ತಿರಬೇಕು’ ಎಂದು ತೀರ್ಪು ಕೂಡ ಕೊಟ್ಟುಬಿಟ್ಟಿದ್ದಳು.
ಮಾಲತಿ ಬದಲಾಗಿರಲಿಲ್ಲ. ದಿವಾಕರನ ಕೈ ಹಿಡಕೊಂಡು ನಡುರಸ್ತೆಯಲ್ಲೇ ಮಾತು ಶುರುಮಾಡಿಕೊಂಡಳು. ಕೇಸು ಮುಗೀತು. ನಾನೇ ವಾಪಸ್ ತಗೊಂಡೆ. ಅವನು ಇನ್ನು ಮೇಲೆ ದುಡ್ಡು ಕೇಳೋದಿಲ್ಲ ಮಾರಾಯ್ತಿ ಅಂತ ಕಾಲು ಹಿಡ್ಕೊಂಡ. ಸ್ವಲ್ಪ ದಿನ ನೋಡೋಣ ಅಂತ ನಾನೂ ಸುಮ್ನಿದ್ದೆ.
ಏಳು ತಿಂಗಳ ಬಸುರಿ ಆಗಿದ್ದಾಗ ಕೇಸು ವಾಪಸ್ ತಗೊಂಡೆ. ಬೇರೆ ಆಗೋದಕ್ಕೆ ಅರ್ಜಿ ಹಾಕಿದವಳು, ಇಷ್ಟು ದಪ್ಪ ಹೊಟ್ಟೆ ಹೊತ್ಕೊಂಡು ಕೋರ್ಟಿಗೆ ಹೋಗ್ತಿದ್ದೆ ನೋಡು ದಿವಾಕರ. ಜಡ್ಜೂ ನನ್ನ ನೋಡಿ ನಗೋರು. ಒಂದ್ಸಲ ನಾನು ಕೇಳೇ ಬಿಟ್ಟೆ. ನಗುವಂಥದ್ದೇನಿದೆ. ನೀವು ತೀರ್ಪು ಕೊಡ್ಲೇ ಇಲ್ಲ. ಎಷ್ಟು ದಿನಾ ಅಂತ ಸುಮ್ನಿರೋದು. ಗಂಡಸರನ್ನು ಹಾಗೇ ಬಿಟ್ಟು ಬಿಟ್ರೆ ಅಡ್ಡದಾರಿ ಹಿಡೀತಾರೆ. ಮಕ್ಕಳಾದ್ರೇನಂತೆ.
ಯಾರಿಗೆ ಸೇರಬೇಕು ಅಂತ ಆಮೇಲೆ ನೋಡ್ಕೊಳ್ಳೋಣ ಅಂದೆ. ಯಾಕೆ ಬೇಕು ಕೇಸು, ಬಿಟ್ಟು ಬಿಡಿ ಅಂತ ಅವರ ಕಡೆ ವಕೀಲ್ರೂ ನಮ್ಮ ವಕೀಲ್ರೂ ಕೇಳ್ಕೊಂಡ್ರು. ಹೋಗ್ಲಿ, ಅಂತ ನಾನೂ ಬಿಟ್ಟೆ.
ಮಗನಿಗೆಷ್ಟು ವರ್ಷ ಕೇಳಿದ ದಿವಾಕರ. ಮಗಳಿದ್ದರೂ ಇರಬಹುದಲ್ವ ಅಂತ ಆಮೇಲೆ ಅನ್ನಿಸಿತು. ಹುಟ್ಟೋವಾಗ್ಲೇ ಹೋಗ್ಬಿಡ್ತು ಕಣೋ. ಅವನಂತೂ ತುಂಬಾ ಬೇಜಾರು ಮಾಡ್ಕೊಂಡಿದ್ದ. ಅವನಿಗೆ ಮತ್ತಷ್ಟು ಬೇಜಾರು ಮಾಡೋದು ಬೇಡ ನಾನು ಏನೂ ಆಗದವಳ ಥರ ಇದ್ದುಬಿಟ್ಟೆ. ಹೋಗ್ಲಿ ಬಿಡೋ, ಪುಣ್ಯ ಮಾಡಿತ್ತು ಅಂತ ಕಾಣತ್ತೆ ಅಂದಳು ಮಾಲತಿ. ಅವಳ ಕಣ್ಣಂಚಲ್ಲಿ ನೀರಾಡುತ್ತೇನೋ ಅಂತ ದಿವಾಕರ ನಿರುಕಿಸಿ ನೋಡಿದ. ಅವಳು ಅದನ್ನು ತೋರಗೊಡಲಿಲ್ಲ.
ಇಲ್ಲೆಲ್ಲೋ ಆಫೀಸು ಮಾಡ್ಕೊಂಡಿದ್ದಿಯಂತಲ್ಲ. ಆಫೀಸು ತೋರ‍್ಸೋ ದಿವಾಕರ ಅಂತ ಮಾಲತಿ ಕೇಳಿಕೊಂಡಾಗ, ಒಂದು ಕ್ಷಣ ಆಫೀಸಿಗೆ ಕರೆದುಕೊಂಡು ಹೋಗೋಣ ಅನ್ನಿಸಿತು ದಿವಾಕರನಿಗೆ. ಆಫೀಸು ಮನೆಯೂ ಒಂದೇ ಮಾಡಿದ್ದೀನಿ. ವಯಸ್ಸಾಯ್ತಲ್ಲ, ಮೊದಲಿನ ವ್ಯಾಪಾರ ಇಲ್ಲ ಎಂದವನಿಗೆ ಅವಳು ಮನೆಗೆ ಬರುತ್ತೇನೆ ಅಂತೇನಾದ್ರೂ ಅಂದಾಳೆಂದು ಭಯವಾಯ್ತು.
ಏನು ವಯಸ್ಸೋ ನಿಂಗೆ. ನಂಗಿಂತ ಸಣ್ಣವನಲ್ವೇನೋ ನೀನು. ನೀವು ಗಂಡಸರೇ ಹೀಗೆ. ಮುದುಕರಾದ್ವಿ ಅಂದ್ಕೊಂಡು ಬಿಡ್ತೀರಿ. ಅವಂದೂ ಅದೇ ರೋಗ. ನನ್ನ ಜೊತೆ ಮಲಗದೇ ಮೂರು ವರ್ಷ ಆಯ್ತು. ಸುಸ್ತಾಗ್ತದಂತೆ. ದಮ್ಮು ಬೇರೆ ಅದಕ್ಕೆ. ಮಲಕ್ಕೊಂಡಾಗ ಏನು ಸ್ವರ್ಗ ತೋರಿಸ್ತಿದ್ದ ಅಂತಲ್ಲ ದಿವಾಕರ. ಏನೋ ಒಂದು ಇರೋದು. ಮಕ್ಕಳಂತೂ ಆಗ್ಲಿಲ್ವಾ? ನಾನೂ ಡಾಕ್ಟ್ರು, ದೇವರು ಅಂತ ಹೋಗಲಿಲ್ಲ.
ಮಕ್ಕಳಾಗಿ ಏನು ಮಾಡಬೇಕು. ಇದ್ದಷ್ಟು ದಿನ ಬಾಳೋದು. ಬಾ ಕಾಫೀಯಾದ್ರೂ ಕೊಡ್ಸೋ. ನಿಮ್ಮೂರಿಗೆ ಬಂದಿದ್ದೀನಿ. ಮನೇಗಂತೂ ಕರೀಲಿಲ್ಲ. ಯಾಕೋ ನಿನ್ನ ಹೆಂಡ್ತಿಗೆ ಅನುಮಾನ ಜಾಸ್ತೀನಾ. ಇದ್ದಿದ್ದೇ ಬಿಡು ಹೆಣ್ಮಕ್ಕಳಿಗೆ. ಅವಳು ಯಾರು, ಯಾಕ್ ಕರಕೊಂಡು ಬಂದಿ, ಎಷ್ಟು ದಿನದಿಂದ ಗೊತ್ತು ಅಂತ ಕೇಳ್ತಾನೇ ಇರ್ತಾರೆ. ನೀನು ಬಾ ಅಂದ್ರೂ ನಾನು ಬರಲ್ಲ. ಬಂದು ಯಾಕೆ ಕೆಟ್ಟೋಳಾಗಬೇಕು ಹೇಳು.
ದಿವಾಕರನ ಕೈಯನ್ನು ಎತ್ತಿ ಬಿಸಾಕಿ ಮಾಲತಿಯೇ ಕಾಫಿ ಬಿಲ್ಲು ಕೊಟ್ಟಳು. ಯಾವತ್ತಾರ ಕೋಲಾರಕ್ಕೆ ಬಂದ್ರೆ ಮನೆಗೆ ಬಾ ಅಂದಳು. ನನ್ನ ಗಂಡ ಏನೂ ಅಂದ್ಕೊಳ್ಳೋದಿಲ್ಲ. ಇನ್ನೊಬ್ಬನ ಜೊತೆ ಮಲಿಕ್ಕೊಂಡು ಬಂದೆ ಅಂದ್ರೂ ಅದಕ್ಕೇನೂ ಅನ್ಸಲ್ಲ. ಪಾಪದ್ದು ಎಂದು ಹೇಳಿ, ತಿರುಗಿಯೂ ನೋಡದೇ ಹೊರಟು ಹೋದಳು.
ಹೂವಿನ ಪಕಳೆಗಳು ದಾರಿಯುದ್ದಕ್ಕೂ ಚೆಲ್ಲಾಡಿದ್ದವು. ರಸ್ತೆಯಲ್ಲೆಲ್ಲ ಪಟಾಕಿಯ ಅವಶೇಷಗಳು. ಹಣ್ಣು ಮಾರುವ ಅಂಗಡಿಗಳಿಗೆ ಹೊದಿಸಿದ್ದ ಕೆಂಪು, ನೀಲಿ, ಹಸಿರು ಪ್ಲಾಸ್ಟಿಕ್ ಕವರುಗಳು, ಹಳೇ ಬೋರ್ಡು ಹೊತ್ತು ನಿಂತ ಗ್ರಂಥಿಗೆ ಅಂಗಡಿ,ವಿದ್ಯಾರ್ಥಿ ಭವನದಲ್ಲಿ ತಿಂಡಿ ತಿಂದು ಎಡಗೈಯಿಂದ ತುಟಿಯೊರೆಸಿಕೊಂಡು ಹೊರಬರುತ್ತಿರುವ ಹಿರಿಯರು, ಇವೆಲ್ಲದರ ನಡುವೆ ನಿಂತಿರುವ ತಾನು.
ಮಾಲತಿ ಇರಬೇಕಿತ್ತು ಅಂತ ದಿವಾಕರನಿಗೆ ಸುಮ್ಮನೆ ಅನ್ನಿಸಿತು.






Jogiya barahagale heege, sujigallinanthe seleyuthave. Idannu kathe annuvudakkintha yaaraddo anubhava ennuvanthe mana muttuvanthe barediddare jogi. Abhinandabnegalu.
ಆಲನಹಳ್ಳಿ ಕೃಷ್ಣ ಅವರ ಶೈಲಿ ಹೋಲುತ್ತೆ. ಆದ್ರೆ ಇಲ್ಲಿ ಅಗ್ಗವಾದ ಸೆಕ್ಸ್ ಇಲ್ಲ ಅನ್ನೋದೇ ಸಮಾಧಾನದ ಸಂಗತಿ.
maalati innU svalpa hottu irabEkittu aMta namagU annisuva kate- a good story. Thanks
its very nice……