ಜೋಗಿ ಬರೆಯುತ್ತಾರೆ: ಕಾಡಿನ ಕತೆಗಳನ್ನು ಓದುವ ಮುಂಚೆ..

ಕಾಡಿನ ಕತೆಗಳನ್ನು ಓದುವ ಮುಂಚೆ ಒಂದಷ್ಟು ಕಾಡಲ್ಲೂ ಅಲೆದಾಡಿ ತರಗಲೆ ಬಿದ್ದ ಕಾಡು. ಕಾಲಡಿಯಲ್ಲಿ ಮೆತ್ತೆ ಹಾಸಿದ ಹಾಗೆ ಒಣಗಿದ ಎಲೆಗಳು ರಾಶಿ ರಾಶಿ. ಅದರ ಮೇಲೆ ಹೆಜ್ಜೆಯಿಟ್ಟರೆ ಚರಬರ ಸದ್ದು. ಸದ್ದಾಗದಂತೆ ನಡೆಯಲು ಯತ್ನಿಸಿದರೆ ಕೆದಂಬಾಡಿ ಜತ್ತಪ್ಪ ರೈಗಳ ನೆನಪು. ಅವರು ಓಡಾಡಿದ ಜಾಗಗಳಿವು. ಸುಳ್ಯ ಪುತ್ತೂರು ಪಂಜ ಶಿರಾಡಿ ವೇಣೂರಿನ ಕಾಡುಗಳು. ಇಲ್ಲಿಗೆ ಯಾವ ಕೆನ್ನೆತ್ ಅಂಡರ್‌ಸನ್ನೂ ಬರಲಿಲ್ಲ. ಜಿಮ್ ಕಾರ್ಬೆಟ್ ಕಾಲಿಟ್ಟಿರಲಿಲ್ಲ. ಶ್ರೀಮಂತರಾದ ಬಂಟರು ಇಲ್ಲಿಯ ಕಾಡು ಪ್ರಾಣಿಗಳನ್ನು ನಿಯಂತ್ರಿಸಿದ್ದು. ಅವರು ಕೊಂದ ಹುಲಿಗಳ ಲೆಕ್ಕ ಯಮ ನೋಡಿ ನಕ್ಕ! ಹುಲಿ ಕೊಂದವರ ನಾಡಿನಿಂದಲೆ ಬಂದವರು ಹುಲಿ ಸಂರಕ್ಷಣೆಯ ಉಲ್ಲಾಸ ಕಾರಂತರು. ಎರಡು ಪರಸ್ಪರ ವಿರುದ್ಧ ಕಾಲಘಟ್ಟದ ನಿಲುವನ್ನು ಗಮನಿಸಿ. ಒಂದು ಕಾಲದಲ್ಲಿ ಹುಲಿ ಕೊಲ್ಲುವುದು ಅನಿವಾರ್ಯವಾಗಿತ್ತು. ಈ ಉಳಿಸುವುದು ಅನಿವಾರ್ಯವಾಗಿದೆ. ಹಾಗಿದ್ದರೂ ಮಡಿಕೇರಿಯಲ್ಲೊಂದು ನರಭಕ್ಷಕ ಹುಲಿ ಸೇರಿಕೊಂಡಿದೆಯಂತೆ. ಅದನ್ನು ಕೊಲ್ಲುವುದಕ್ಕೂ ಅಪ್ಪಣೆ ಸಿಕ್ಕಿದೆಯಂತೆ. ಕಾಡನ್ನು ಯಾರೂ ಗುಡಿಸುವುದಿಲ್ಲ. ಹೀಗಾಗಿ ಬಿದ್ದ ಎಲೆಯೆಲ್ಲ ಮಳೆಗಾಲದಲ್ಲಿ ಕೊಳೆತು ಮಣ್ಣಾಗಿ, ಮರಕ್ಕೆ ಗೊಬ್ಬರವಾಗಿ ಅಷ್ಟರ ಮಟ್ಟಿಗೆ ಪ್ರತಿಮರವೂ ಸ್ವಾವಲಂಬಿ. ಆ ಮಣ್ಣಲ್ಲಿ ಹುಟ್ಟಿ ಸಾಯುವ ಹೆಸರಿಲ್ಲದ ಗಿಡಗಳೂ ಗೊಬ್ಬರವಾಗಿಯೇ ಸಲ್ಲುತ್ತವೆ. ಆಷಾಢದ ಗಾಳಿ ಆ ತರಗೆಲೆಗಳನ್ನು ಹಾರಿಸಿಕೊಂಡು ಹೋಗಿ, ಮೊದಲ ಮಳೆಗೆ ಅವು ಕೊಚ್ಚಿಕೊಂಡು ಹೋಗಿ ಹತ್ತಿರದ ನದಿಯನ್ನು ಸೇರಿದರೂ ಹಾಗೆ ಹೋಗುವುದು ಸಾಸಿವೆ, ಉಳಿಯುವುದು ಸಾಸಿರ. ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಾಡುಗಳು ಮೊದಲಿನ ಕಾಡುಗಳಾಗಿ ಉಳಿದಿಲ್ಲ. ಮೊನ್ನೆ ಮೊನ್ನೆ ಮಂಗಳೂರಿನ ಅತ್ರಿ ಬುಕ್‌ಹೌಸ್‌ನ ಅಶೋಕ ವರ್ಧನ ಹೇಳುತ್ತಿದ್ದರು. ಬಿಸಲೆ ಘಾಟಿಯಲ್ಲಿ ಬಿಸಲೆ ಹಳ್ಳಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಬಲಕ್ಕೊಂದು ರಸ್ತೆ ಮಾಡಿದ್ದಾರೆ. ಆ ರಸ್ತೆಯಲ್ಲಿ ಸಾಗಿ, ಅದರ ತುದಿ ತಲುಪಿದರೆ ಕುಮಾರಧಾರಾ ನದಿಯ ಪೂರ್ತಿ ಹರಿವು ಕಾಣಿಸುತ್ತದೆ. ಅಂಥ ಜಾಗದಲ್ಲೇ ಯಾರೋ ರೆಸಾರ್ಟ್ ಮಾಡುವುದಕ್ಕೆಂದು ಎಷ್ಟೋ ಎಕರೆ ಕೊಂಡು ಕೊಂಡಿದ್ದಾರೆ. ಅಲ್ಲಿ ರೆಸಾರ್ಟ್ ಕೆಲಸ ಶುರುವಾಗಿಲ್ಲ, ಆದರೆ ಆಗಲೇ ರಸ್ತೆ ಮಾಡಿಟ್ಟಾಗಿದೆ. ಇವತ್ತಲ್ಲ ನಾಳೆ ಅದೂ ಶುರುವಾಗುತ್ತದೆ. ಸರ್ಕಾರ ಪರ್ಮಿಶನ್ ಕೊಡುವ ಹೊತ್ತಿಗೆ ಹಿಂದೆ ಮುಂದೆ ನೋಡುವುದಿಲ್ಲ. ಬಿಸಲೆ ಘಾಟಿಯಲ್ಲಿ ಅವರದೊಂದು ಕಾಡಿದೆ. ಅಲ್ಲಿ ಓಡಾಡಿದ ಫೋಟೋಗಳನ್ನು ನೋಡುತ್ತಿದ್ದಾಗ ಖುಷಿಯಾಯಿತು. ಅಲ್ಲೊಂದು ಕಾಡು ಕೊಂಡಿದ್ದಾರೆ ಅವರು. ಕಾಡು ಕೊಂಡುಕೊಂಡಾಗ ಎಲ್ಲರೂ ಕೇಳಿದ್ದು ಒಂದೇ ಪ್ರಶ್ನೆ: ಇದರಿಂದ ಆರ್ಥಿಕವಾಗಿ ಏನು ಉಪಯೋಗ? ಹಾಕಿದ ದುಡ್ಡು ಹೇಗೆ ಪಡೆಯುತ್ತೀರಿ ಅಂತ? ಎಲ್ಲರೂ ನೋಡುವುದು ಅದೊಂದನ್ನೇ. ಹಾಕಿದ ದುಡ್ಡು ವಾಪಸ್ಸು ಬಂದುಬಿಡಬೇಕು ಅದೇ ರೂಪದಲ್ಲಿ. ಸಲೀಮ್ ಆಲಿ ಜೀವವೈವಿಧ್ಯಕ್ಕೆ ಅದಮ್ಯ ತಾಣವಾಗಬಹುದಾಗಿದ್ದ ದೊಡ್ಡ ಮರವೊಂದನ್ನು ತೋರಿಸಿದಾಗ ಅವರ ಜೊತೆಗೆ ಬಂದಿದ್ದ ವ್ಯಕ್ತಿ ಅದನ್ನು ಕಡಿದರೆ ಎಷ್ಟು ಲಾರಿ ಲೋಡು ಸೌದೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದನಂತೆ. ಅವರವರು ನೋಡುವ ಕ್ರಮವೇ ಬೇರೆ. ದೃಷ್ಟಿಕೋನವೇ ಬೇರೆ ಎಂದು ಅಶೋಕ ವರ್ಧನ ನಿಟ್ಟುಸಿರಿಟ್ಟರು. ****** ನೀವು ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರಸ್ತೆಯಲ್ಲಿ ಶಿರಾಡಿ ಘಾಟಿ ಇಳಿದ ತಕ್ಷಣ ಗುಂಡ್ಯ ಎಂಬ ಚಿಕ್ಕ ಊರು ಸಿಗುತ್ತದೆ. ಅದಕ್ಕೂ ಎರಡು ಕಿಲೋಮೀಟರ್ ಹಿಂದೆ ಸಿಗುವ ಹೆಸರಿಲ್ಲದ ಪುಟ್ಟ ಹೊಟೆಲಿನಲ್ಲಿ ನೀವು ಹುರಿದ ಮೀನು, ಬಿಸಿಬಿಸಿ ಕುಸಬಲಕ್ಕಿ ಅನ್ನ ತಿಂದು ನಿಮ್ಮ ಪ್ರಯಾಣ ಶುರುಮಾಡಬಹುದು. ಸಂಜೆಯ ತನಕ ಅದು ನಿಮ್ಮನ್ನು ಉಲ್ಲಸಿತರನ್ನಾಗಿಡುತ್ತದೆ. ಗುಂಡ್ಯದಲ್ಲಿ ನೀವು ಬಸ್ಸಿನಿಂದಲೋ ನಿಮ್ಮ ಕಾರಿನಿಂದಲೂ ಇಳಿದು, ಅಲ್ಲೊಂದು ಜೀಪು ಬಾಡಿಗೆಗೆ ಪಡೆದುಕೊಂಡೋ, ಅಲ್ಲಿರುವ ಮಲಯಾಳಿ ಅಂಗಡಿಯಲ್ಲಿ ದಾರಿ ತಿಳಿದುಕೊಂಡು ನಡೆದುಕೊಂಡೋ ಹೋಗಿ ಬರಬಹುದಾದ ಎರಡು ಜಾಗಗಳಿವೆ. ಒಂದು ಅರಬೆಟ್ಟ, ಇನ್ನೊಂದು ಶಿರಿಬಾಗಿಲು. ಇವೆರಡನ್ನು ತಲುಪಬೇಕಾದರೆ ಕಾಡಿನ ನಡುವೆ ನಡೆದುಕೊಂಡೇ ಹೋಗಬೇಕು. ಅದನ್ನು ಟ್ರೆಕಿಂಗ್ ಅಂದುಕೊಂಡೋ ಸಾಹಸ ಅಂದುಕೊಂಡೋ ಆದಷ್ಟು ಬೇಗ ಹೋಗಿ ಬರಬೇಕಾದ ಜಾಗ ಅಂದುಕೊಂಡೋ ಹೋಗಬೇಡಿ. ಸುಮಾರು ಎಂಟು ಕಿಲೋಮೀಟರ್ ನಡೆಯುವುದಕ್ಕೆ ತಯಾರಿದ್ದವರು ಯಾರು ಬೇಕಾದರೂ ಹೋಗಬಹುದಾದ ಜಾಗ ಇದು. ಅಲ್ಲೇನಿದೆ ಎಂದು ಕೇಳುವುದಕ್ಕಿಂತ ನಡೆದು ಹೋಗುವ ಹಾದಿಯನ್ನು ಸವಿಯುವುದು ಒಳ್ಳೆಯದು. ಕಾಡನ್ನು ನೋಡಬಾರದು, ಕಾಡಿನ ಒಂದು ಭಾಗವೇ ಆಗಿಬಿಡಬೇಕು. ಅಲ್ಲಿ ಬಿದ್ದ ನೆರಳು, ಕಾಲಡಿಯ ತರಗೆಲೆ, ಹಾದಿಯಲ್ಲದ ಹಾದಿ, ಏದುಸಿರು ತರುವ ಏರು ಇವೆಲ್ಲದರ ನಡುವೆ ನಡೆಯುತ್ತಾ ಕೊನೆಗೆ ತಲುಪಿದರೆ ಅಲ್ಲಿ ಕಾಣಿಸುವುದು ಶಿರಿಬಾಗಿಲು ಎಂಬ ಹಳದಿ ಬೋರ್ಡು. ಅದರೆದುರು ಅನಾಥವಾಗಿ ಬಿದ್ದಂತೆ ಕಾಣುವ ಜೋಡಿ ರೇಲ್ವೆ ಹಳಿ. ಆ ಕಾಡಿನ ನಡುವೆ ಒಂದು ರೇಲ್ವೆ ಸ್ಟೇಷನ್ನು ಯಾಕಿರಬೇಕು. ಅಲ್ಲೊಬ್ಬ ಬಿಹಾರಿ ಸ್ಟೇಷನ್ ಮಾಸ್ಟರ್ ಯಾಕೆ ಹಾಗೆ ನಿದ್ರಾವಸ್ಥೆಯಲ್ಲಿ ಕೂತಿದ್ದಾನೆ. ಹೊರಗಿನ ಬೆಂಚಿನ ಮೇಲೆ ಮಲಗಿರುವ ಕುರುಚಲು ಗಡ್ಡದ ಯುವಕ ಯಾರು? ಅಲ್ಲಿರುವ ನಿರ್ಜನವಾದ ಹತ್ತು ಹನ್ನೆರಡು ಮನೆಗಳು ಹಾಗೇಕೆ ಪಾಳು ಬಿದ್ದಿವೆ. ಆ ಕಡೆ ತಿರುಗಿದರೆ ಕಾಣಿಸುವ ಸುರಂಗ ಎಷ್ಟು ಕಿಲೋಮೀಟರ್ ಉದ್ದವಿದೆ. ಅದರೊಳಗೆ ಹೋದರೆ ಕಳೆದುಹೋಗುತ್ತೇವಾ, ಆ ಕಡೆಯಿಂದ ಹೊರಗೆ ಬರುವುದಕ್ಕಾಗುತ್ತಾ? ಅಲ್ಲಿರುವ ನಡೆಯಲು ಭಯವಾಗುವ ಸೇತುವೆಯಿಂದ ನದಿಗುರುಳಿದ ಆ ರೇಲ್ವೇ ಇಂಜಿನ್ನಿನ ಬೋಗಿಗಳು ಏನಾದವು? ಆ ರೇಲ್ವೆ ಇಂಜಿನ್ನಿನ ಡ್ರೈವರ್ ಬದುಕಿ ಉಳಿದಿದ್ದನಾ? ಆ ರೇಲ್ವೆ ಇಂಜಿನನ್ನು ಯಾಕಿನ್ನೂ ಮೇಲೆತ್ತಿಲ್ಲ. ಅದರ ನೆತ್ತಿಯಲ್ಲಿ ಕಾಣುವ ತುತ್ತೂರಿಯಂಥ ಹಾರ್ನುಗಳನ್ನು ಯಾಕಿನ್ನೂ ಯಾವ ಮಕ್ಕಳೂ ಕಿತ್ತುಕೊಂಡು ಹೋಗಿಲ್ಲ? ಇಂಥ ಅಸಂಖ್ಯ ಪ್ರಶ್ನೆಗಳನ್ನಿಟ್ಟು ಕೂತುಕೊಂಡರೆ ಅಲ್ಲೊಬ್ಬ ಅಪರಿಚಿತ ಪ್ರತ್ಯಕ್ಷನಾಗುತ್ತಾನೆ. ಸೊಗಸಾಗಿ ಕನ್ನಡ ಮಾತಾಡುತ್ತಾನೆ. ಅಲ್ಲೇನು ಕೆಲಸ ಮಾಡುತ್ತಾನೋ ಗೊತ್ತಿಲ್ಲ. ದಿನಕ್ಕೊಮ್ಮೆ ಬರುವ ಬೆಂಗಳೂರು ಮಂಗಳೂರು ರೇಲು ಅಲ್ಲಿ ಒಂದು ನಿಮಿಷ ನಿಲ್ಲುತ್ತದಂತೆ. ಅದೇ ಟ್ರೇನು ವಾಪಸ್ಸು ಹೋಗುವಾಗ ನಿಲ್ಲುವುದಿಲ್ಲ. ಹೀಗಾಗಿ ಅದು ವನ್‌ವೇ ಸ್ಟೇಷನ್ನು. ಇಲ್ಲೆಲ್ಲ ಸುತ್ತಾಡಬೇಡಿ. ಬೆಂಗಳೂರಿಂದ ಬಂದ ಮೂವರು ಯುವಕರು ಇಲ್ಲೇ ಕಾಣೆಯಾದದ್ದು. ಆಮೇಲೆ ಅವರ ಅಸ್ಥಿಪಂಜರವಷ್ಟೇ ಸಿಕ್ಕಿದ್ದು ಎಂದು ಹೆದರಿಸುತ್ತಾನೆ ಅವನು. ಅವರು ಹೇಗೆ ಕಾಣೆಯಾದರು, ಏನಾದರು ಎಂದು ಕೇಳಿದರೆ ಥಟ್ಟನೆ ಮೂರು ಕತೆ ಹೇಳುತ್ತಾನೆ. ಆ ಮೂರರಲ್ಲೂ ಅವನಿಗೇ ನಂಬಿಕೆ ಇಲ್ಲ. ಅವನ ಪ್ರಕಾರ ಅಲ್ಲಿಗೆ ಬಂದ ಬೆಂಗಳೂರಿನ ಚಾರಣಿಗರು ತುಂಬ ಎತ್ತರದ ಪ್ರದೇಶಕ್ಕೆ ಹೋದರು. ಅಲ್ಲಿ ಮೋಡಗಳು ಕೈಗೆ ಸಿಗುವಂತಿದ್ದವು. ಉಸಿರಾಟದ ತೊಂದರೆಯಾಗಿ ಸತ್ತುಹೋದರು. ಅದೇನು ಹಿಮಾಲಯವಾ ಉಸಿರಾಟದ ತೊಂದರೆ ಆಗುವುದಕ್ಕೆ ಎಂದರೆ ಅವನು ಕತೆ ಬದಲಾಯಿಸುತ್ತಾನೆ. ಹಾಗಿದ್ದರೆ, ಬಹುಶಃ ಉಪವಾಸ ಸತ್ತಿರಬೇಕು. ತಿನ್ನುವುದಕ್ಕೆ ಏನು ಸಿಗದೇ ನರಳಿ ನರಳಿ ಸತ್ತಿರಬಹುದು. ಊಟವಿಲ್ಲದೇ ಆರೇಳು ದಿನ ಉಪವಾಸ ಮಾಡಿದರೆ ಯಾರೂ ಸಾಯುವುದಿಲ್ಲ ಕಣಯ್ಯಾ ಎಂದರೆ ರಾತ್ರಿ ಹೆದರಿ ಎದೆಯೊಡೆದು ಸತ್ತಿರಬಹುದು ಎನ್ನುತ್ತಾನೆ. ಬದುಕಿರುವವರಿಗೆ ಸತ್ಯ ಗೊತ್ತಿಲ್ಲ. ಸತ್ಯ ಗೊತ್ತಿದ್ದವರು ಸತ್ತುಹೋಗಿದ್ದಾರೆ. ಯಾವುದೋ ಚಿತ್ರಕಾರ ನಿಗೂಢತೆ ಸಾಧಿಸಲು ಬರೆದಿಟ್ಟಂತಿರುವ ಶಿರಿಬಾಗಿಲು ರೇಲ್ವೇ ಸ್ಟೇಷನ್ನಿನಿಂದ ಹಾಗೇ ನಡೆದುಕೊಂಡು ಏಳೆಂಟು ಕಿಲೋಮೀಟರ್ ನಡೆದರೆ ದಟ್ಟ ಕಾಡಿನ ನಡುವೆಯೇ ಎಡಕುಮೇರಿ ಸ್ಟೇಷನ್ನು ಸಿಗುತ್ತದೆ. ಅದಕ್ಕೂ ಮುಂಚೆ ಅರಬೆಟ್ಟ ಎನ್ನುವ ಮತ್ತೊಂದು ಸ್ಟೇಷನ್ನು ಎದುರಾಗುತ್ತದೆ. ಕಾಡು ದಟ್ಟವಾಗಿದೆ ಎನ್ನುವ ಕಾರಣಕ್ಕೆ ಹೆದರುವ ಅಗತ್ಯವೇ ಇಲ್ಲ. ಅಲ್ಲಿ ಯಾವುದೇ ಕಾಡು ಪ್ರಾಣಿಗಳಿಲ್ಲ. ಆನೆಗಳಿವೆ ಅನ್ನುತ್ತಾರೆ, ನೋಡಿದವರಿಲ್ಲ. ಅಂಥ ಏರುಕಾಡುಗಳಲ್ಲಿ ಪ್ರಾಣಿಗಳಿರುವುದಿಲ್ಲ. ಯಾಕೆಂದರೆ ಅಲ್ಲಿ ಹುಲ್ಲು ಹುಟ್ಟುವುದಿಲ್ಲ. ಹುಲ್ಲು ಹುಟ್ಟದ ಹೊರತು ಜಿಂಕೆಗೆ ಆಹಾರ ಸಿಗುವುದಿಲ್ಲ. ಜಿಂಕೆಗಳಿಲ್ಲದ ಕಾಡಲ್ಲಿ ಹಿಂಸ್ರಪಶುಗಳಿರುವುದಿಲ್ಲ. ಹೀಗಾಗಿ ಕಾಡಿನ ನಡುವೆಯೋ, ಪಕ್ಕದಲ್ಲೋ ದೊಡ್ಡ ಹುಲ್ಲುಗಾವಲಿದ್ದರೆ, ಅಂಥ ಕಾಡು ಹಿಂಸ್ರ ಪ್ರಾಣಿಗಳಿಗೆ ಸರಿಯಾದ ಜಾಗ. ಆದರೆ ದಟ್ಟ ಕಾಡುಗಳಲ್ಲಿ ಹಾವುಗಳಿರುತ್ತವೆ. ಹೀಗೆ ನಡೆದುಹೋಗುತ್ತಿರುವಾಗ ಪಕ್ಕದಲ್ಲೇ ಮಾರುದ್ದದ್ದ ನಾಗರ ಸರಿದುಹೋದರೆ ಬೆಚ್ಚಿಬೀಳಬೇಕಾಗಿಲ್ಲ. ಅದರ ಪಾಡು ಅದಕ್ಕೆ, ನಮ್ಮದು ನಮಗೆ. ಮತ್ತೊಮ್ಮೆ ಹೇಳುತ್ತಿದ್ದೇನೆ- ಕಾಡು ಸುತ್ತುವುದಕ್ಕೆ ಬೇಸಗೆಯಷ್ಟು ಸುಖವಾದ ಕಾಲ ಮತ್ತೊಂದಿಲ್ಲ. ನಿಚ್ಚಳವಾದ ಬೆಳಕು, ಎಲ್ಲೆಂದರಲ್ಲಿ ಮಲಗಬಹುದಾದ ಸೌಲಭ್ಯ, ಮಂಜಿನ ತಂಟೆಯಿಲ್ಲದ ಮುಂಜಾವಗಳು ನಮಗೋಸ್ಕರ ಕಾದಿರುತ್ತವೆ. ಮಂಜಿದ್ದರೆ ಸೊಗಸು ಅನ್ನುವುದೂ ಸರಿಯೇ, ಆದರೆ ಮಂಜು ದೂರದಿಂದ ನೋಡುವುದಕ್ಕೆ ಚೆಂದ. ರಸ್ತೆಯಲ್ಲಿ ಸಾಗುತ್ತಿದ್ದಾಗ ದೂರ ಬೆಟ್ಟದ ನೆತ್ತಿಯ ಮೇಲೆ, ದೂರದ ಕಾಡುಗಳ ಮೇಲೆ ಹಿಮ ಸುರಿಯುತ್ತಿದ್ದರೆ ಅದು ಸೊಗಸು. ಆದ್ರೆ ರಸ್ತೆಯನ್ನೇ ಆವರಿಸಿದ್ದರೆ ಹಿಂಸೆ. ಜಿಮ್ ಕಾರ್ಬೆಟ್‌ನ ಟ್ರೀ ಟಾಪ್ಸ್ ಓದುತ್ತಿದ್ದಾಗ ಇದೆಲ್ಲ ನೆನಪಾಯಿತು. ಅವನು ಕತೆ ಹೇಳುತ್ತಾ ಕಾಡನ್ನು ಕಣ್ಮುಂದೆ ತಂದು ನಿಲ್ಲಿಸುತ್ತಾನೆ. ಕಾಡಿನ ಕತೆಗಳನ್ನು ಓದುವ ಮುಂಚೆ ಒಂದಷ್ಟು ಕಾಡಲ್ಲೂ ಅಲೆದಾಡಿದ್ದರೆ ಆ ಓದುವ ಸುಖವೇ ಬೇರೆ. ಓದುವುದಕ್ಕಿಂತ ನೋಡುವುದೇ ಸೊಗಸು. ಹೊರಡಿ ಮತ್ತೆ, ಕಾಲ್ನಡಿಗೆಗೆ, ಕಾಡಿಗೆ.]]>

‍ಲೇಖಕರು avadhi

February 1, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ugama srinivas

    ಜೋಗಿ ಅವರ ಬರಹಗಳೇ ಹಾಗೆ. ಬೆಳ್ಳಂಬೆಳಗ್ಗೆಯೇ ಕಾಡಿನಷ್ಟೆ ಫ್ರೆಷ್ ಆಗಿರುತ್ತೆ. ನಾನು ಶಿವಮೊಗ್ಗೆಯಲ್ಲಿದ್ದಾಗ ಕಾಡು ಮೇಡು ಸುತ್ತಿದ್ದುಂಟು, ಆಗುಂಬೆ ಘಟ್ಟವನ್ನು ಕಾಲ್ನಡಿಗೆಯಲ್ಲಿ ಇಳಿದದ್ದು ಉಂಟು. ಕೇರಳದಲ್ಲಿನ ದೇವರ ಕಾಡು, ಶೆಟ್ಟಿಕೆರೆ ಅಭಿಯಾರಣ್ಯ, ಮುತ್ತೋಡಿ ಹೀಗೆ ಕಾಡು ಮೇಡು ಸುತ್ತಿದ್ದುಂಟು. ನಿಜಕ್ಕೂ ಕಾಡು ಈಗ ಜುಗಾರಿಗಳ ಅಡ್ಡೆಯಾಗುತ್ತಿದೆ. ನಾಟಕಳ್ಳರ ಬೀಡಾಗಿದೆ. ನಮ್ಮ ತುಮಕೂರಿಗೆ ಸಮೀಪದಲ್ಲೇ ದೇವರಾಯನದುಗ೯ ಕಾಡಿದೆ. ಇದು ಧಾಮಿ೯ಕ ಕೇಂದ್ರವೂ ಹೌದು. ಇಲ್ಲಿ ಹುಲಿ ಇದೆ ಎಂಬ ಪುಕಾರು ಹಬ್ಬಿತ್ತು. ಸರಿ ಜಿಮ್ ಕಾಬೆ೯ಟ್ ನಂತೆ ಕೆಲವರು ಹುಲಿ ಹುಡುಕುವ ದುಸ್ಸಾಹಸಕ್ಕೂ ಹೋಗಿದ್ದರು. ಕಾಡಿನ ಆಳಕ್ಕೆ ಹೋಗಿ ನೋಡಿದಾಗಲೇ ಗೊತ್ತಾಗಿದ್ದು ಎಷ್ಟೊಂದು ಮರಗಳಿಗೆ ಕೊಡಲಿ ಏಟು ಬಿದ್ದಿವೆ ಎಂಬುದು. ನಿಜಕ್ಕೂ ನಮ್ಮಲ್ಲಿ ಬೇಟೆ ಸಾಹಿತ್ಯ ಹೇಳಿಕೊಳ್ಳುವಷ್ಟು ಇಲ್ಲ. ಜೋಗಿ ಅವರು ಪ್ರಸ್ತಾಪಿಸಿರುವ ಹಾಗೆ ಕದಂಬಾಡಿ ಜತ್ತಪ್ಪ ರೈ ಬರೆದಿದ್ದಾರೆ. ಜೋಗಿ ಅವರು ಕಾಡಿನ ಬಗ್ಗೆ ಮತ್ತಷ್ಟು ಬರೆಹವನ್ನು ನಿರೀಕ್ಷಿಸುತ್ತಿದ್ದೇವೆ. ಒಂದೆಡೆ ಕಾಡು ನಾಶವಾಗುತ್ತಿರುವ ಬೆನ್ನಲ್ಲೇ ಶಿವಮೊಗ್ಗ ಜಿಲ್ಲೆ ಸಾಗರ ಸಮೀಪದಲ್ಲಿ ವ್ಯಕ್ತಿಯೊಬ್ಬರು ಸುಮಾರು 9 ಎಕರೆ ಯಷ್ಟು ಜಾಗದಲ್ಲೇ ಕಾಡನ್ನೇ ಬೆಳೆಸಿದ್ದಾರೆ. ಸುತ್ತಮುತ್ತಲ ಪ್ರದೇಶಕ್ಕಿಂತ ಈ ಭಾಗದಲ್ಲೇ ಮಳೆ ಹೆಚ್ಚು ಅಂತಾನೂ ಕೇಳಿದ್ದೇನೆ. ಜೋಗಿ ಅವರ ಬರೆಹ ಓದಿದ ಮೇಲೆ ನೆನಪು ಗಾಂಧಿ ಬಜಾರ್ ಏನ್ನುವ ಹಾಗೆ ಇವೆಲ್ಲಾ ನೆನಪಾಯಿತು.
    ಉಗಮ ಶ್ರೀನಿವಾಸ್
    ತುಮಕೂರು

    ಪ್ರತಿಕ್ರಿಯೆ
  2. ರಂಜಿತ್

    ಮತ್ತೆ ಜೋಗಿ ಅಟ್ ಹಿಸ್ ಬೆಸ್ಟ್!
    ಜೋಗಿ ಕಾಡಿನ ನಿಗೂಢಲೋಕಕ್ಕೆ ನಮ್ಮನ್ನು ಪದಗಳ ದಾರಿಯ ಮೂಲಕ ಹೊತ್ತೊಯ್ಯುತ್ತಾರೆ; ಮತ್ತೆ ಅದೆಷ್ಟು ಸರಾಗವಾಗಿ!

    ಪ್ರತಿಕ್ರಿಯೆ
  3. raghusp

    ಬಯಲು ಸೀಮೆಯವರಾದ ನಮಗೆ ಕಾಡೆಂದರೆ ಸ್ವಲ್ಪ ಭಯವೇ, ಕುವೆಂಪು ಮತ್ತು ತೇಜಸ್ವಿಯವರ ಕಥೆಯೊಂದಿಗೆ ಕಾಡಿನ ಆಳಕ್ಕಿಳಿದು, ಘಟ್ಟ ಹತ್ತಿ ಇಳಿದವನು ನಾನು.
    ಅವೆಲ್ಲ ಓದಿನ ನಂತರ ಜೋಗಿಯವರು ಮತ್ತೆ ಮತ್ತೆ ನಮ್ಮನ್ನು ಕಾಡಿಗೆ ನದಿ ದಂಡೆಗೆ ಕರೆದೊಯುತ್ತಿದ್ದಾರೆ . ಜೋಗಿಯವರಿಗೆ ಕಾಡು ಮತ್ತು ನದಿಯ ಹಂಬಲ ಇನ್ನು ಮುಗಿದಿಲ್ಲ ಅಂತ ಕಾಣಿಸುತ್ತೆ. ಅವರೇ ಹೇಳಿರುವ ಹಾಗೆ “ಚಿಟ್ಟೆ ಹೆಜ್ಜೆಯ ಜಾಡು ” ಅವರ ಕೊನೆಯ ಕಾಡಿನ ಸಂಚಾರವಾಗಬೇಕ್ಕಿತ್ತು.
    ನಿಮ್ಮ ಈ ಬರಹವನ್ನ ನಾನು ನಿಮ್ಮ ಬ್ಲಾಗ್ ನಲ್ಲಿ ಓದಿದ್ದೆ , ಮೊತ್ತಮ್ಮೆ ಓದಿ ಮನಸ್ಸು ಮತ್ತೆ ಕಾಡಿನೆಡೆಗೆ ಓಡಿತು.
    ರಘು ಎಸ್. ಪಿ

    ಪ್ರತಿಕ್ರಿಯೆ
  4. bk sumathi

    jogi, nanna magalu kaadu hudugi. .. andre kaadandre. pancha praana. idannu avalige naane odi helide… maneyalli khushiyaagi kaadu nodida anubhava aayithu.. thanku… nanna magalu nimage namaskaara heliddaale…

    ಪ್ರತಿಕ್ರಿಯೆ
    • jogimane

      ನಿಮ್ಮ ಮಗಳ ಬಗ್ಗೆ ಕೇಳಿದೆ. ಚಿಟ್ಟೆ ಹೆಸರಿನ ಬ್ಲಾಗು ಕೂಡ ನೋಡಿದ್ದೆ. ಆ ಪುಟ್ಟ ಮಗಳಿಗೆ ನನ್ನ ಬರಹ ಭಾರ ಅಂತಲೂ ಗೊತ್ತು. ಅವಳಿಗೆ ಅರ್ಥ ಮಾಡಿಸುವುದಕ್ಕೆ ನೀವು ಕಷ್ಟಪಟ್ಟಿದ್ದೀರಿ. ನಿಮಗೆ ಥ್ಯಾಂಕ್ಸ್. ಮಗಳಿಗೆ ಹಾರೈಕೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: