
ನೀವು ರಾಜಕಾರಣಿಗಳ ಕುರಿತು ಯಾಕೆ ಬರೆಯುವುದಿಲ್ಲ, ರಾಜಕೀಯದ ಬಗ್ಗೆ ಯಾಕೆ ಬರೆಯುವುದಿಲ್ಲ ಅಂತ ಒಂದಷ್ಟು ಗೆಳೆಯರು ಕೇಳಿದರು. ನಾನು ಬರೆಯುವುದೆಲ್ಲ ರಾಜಕಾರಣದ ಕುರಿತೇ ಅಂದುಕೊಂಡಿದ್ದವನಿಗೆ ನಿರಾಸೆಯಾಯಿತು. ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದನ್ನು, ಕುಮಾರಸ್ವಾಮಿ ಅಧಿಕಾರ ಕಳಕೊಂಡದ್ದನ್ನು, ಸಿದ್ಧರಾಮಯ್ಯ ಅರಚುತ್ತಾ ಅರ್ಥಹೀನರಾಗುತ್ತಾ ಸಾಗುತ್ತಿರುವುದನ್ನು, ಶೆಟ್ಟರ್ ನಗುವುದೋ ಅಳುವುದೋ ಎಂದು ಕಂಗಾಲಾಗಿ ಕೂತಿರುವುದನ್ನು, ತಾನೊಬ್ಬ ಮಹಾನ್ ನಾಯಕಿಯಂತೆ ಶೋಭಾ ಕರಂದ್ಲಾಜೆ ಟೀವಿಗಳಲ್ಲಿ ಕುಳಿತು ತಾನೇಕೆ ರಾಜೀನಾಮೆ ಕೊಟ್ಟೆ ಅಂತ ಹೇಳಿಕೊಳ್ಳುವುದನ್ನು ಕುರಿತು ಬರೆಯಬೇಕು ಅನ್ನುವುದು ಅವರ ಆಸೆಯಾಗಿತ್ತು.
ಒಬ್ಬ ಶಾಸಕನೋ ಮಂತ್ರಿಯೋ ರಾಜೀನಾಮೆ ಕೊಟ್ಟ ಎಂದರೆ ಅವನೆಷ್ಟು ನಾಲಾಯಕ್ಕು ಅನ್ನುವುದು ಗೊತ್ತಾಗುತ್ತದೆ. ಅಧಿಕಾರ ಸಿಗಲಿಲ್ಲ ಎಂದು ರಾಜೀನಾಮೆ ಕೊಡುವವನು ಎಷ್ಟು ಕುಬ್ಜ ಎಂದು ಯೋಚಿಸಿ. ಒಂದು ಸಮುದಾಯ ನಿಜಕ್ಕೂ ಪ್ರಾಮಾಣಿಕವಾಗಿ, ನಿಷ್ಕಪಟದಿಂದ ಮತ ನೀಡಲು ಹೊರಟರೆ ಇವತ್ತು ಒಬ್ಬ ಅಭ್ಯರ್ಥಿಯೂ ಕಾಣಿಸುವುದಿಲ್ಲ. ಹಾಗೆ ನಿಷ್ಕಪಟದಿಂದ ಆರಿಸಿದ ನಾಯಕನೊಬ್ಬ ಆರೆಂಟು ತಿಂಗಳಿಗೆಲ್ಲ ಬೆದರುಗೊಂಬೆಯಂತೆ, ಬಪೂನಿನಂತೆ ಕಾಣಿಸತೊಡಗುತ್ತಾನೆ. ಪ್ರಜಾಪ್ರಭುತ್ವದ ದುರಂತ ಇದು. ಇಲ್ಲಿ ನಾಯಕ ಒಂದು ಜನಾಂಗದ ಪ್ರತಿನಿಧಿಯಲ್ಲ. ಒಂದಷ್ಟು ಜನದ ಪ್ರತಿನಿಧಿ. ಅವನಿಗೆ ಮತ ಹಾಕಿದವರಿಗಷ್ಟೇ ಅಲ್ಲ, ಮತ ಹಾಕದೇ ಇದ್ದವರಿಗೂ, ಅವನ ವಿರುದ್ಧ ನಿಂತವನಿಗೆ ಮತ ಹಾಕಿದವನಿಗೂ ಅವನು ನಾಯಕ. ಎಲ್ಲಾ ಮತಗಳನ್ನು ಲೆಕ್ಕ ಹಾಕಿನೋಡಿದರೆ ಅವನು ಕನಿಷ್ಠ ಮತ ಪಡೆದಿದ್ದರೂ ಪಡೆದಿರಬಹುದು. ಕಡಿಮೆ ಅಂಕ ಪಡೆದವನು ಉತ್ತೀರ್ಣನಾದಂತಿದೆ ಈ ತಮಾಷೆ.
ನನ್ನ ಗೆಳೆಯರೊಬ್ಬರು ಚುನಾವಣೆಗೆ ನಿಲ್ಲಬೇಕು ಅಂದುಕೊಂಡಿದ್ದರು. ನಿಂತರೆ ಗೆಲ್ಲುವ ಭರವಸೆಯೂ ಅವರಿಗಿತ್ತು. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಅವರಿಗೆ ಇದೆಲ್ಲ ಅಸಹ್ಯ ಅನ್ನಿಸತೊಡಗಿದೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ತುಂಬ ಖರ್ಚಾಗುತ್ತಾ ಅಂತ ಕೇಳಿದಾಗ, ಪಕ್ಷದ ನಾಯಕರೊಬ್ಬರು ಹತ್ತು ಕೋಟಿ ಸಾಕು ಅಂದರಂತೆ. ಹತ್ತು ಕೋಟಿ ಅಂದರೆ ನೂರು ವರ್ಷಗಳ ಕಾಲ ದಿನಕ್ಕೆ ಐದು ಸಾವಿರ ರುಪಾಯಿ ಖರ್ಚು ಮಾಡುವ ಸ್ವಾತಂತ್ರ್ಯ. ಅದನ್ನು ಚುನಾವಣೆಗೋಸ್ಕರ, ಮೂರೇ ತಿಂಗಳಲ್ಲಿ ಖರ್ಚು ಮಾಡಬೇಕಾ ಎಂದು ಅವರು ಗಾಬರಿಯಾದರು. ಅವರನ್ನು ಮತ್ತೂ ಕಂಗಾಲು ಮಾಡಿದ್ದು, ಆ ಹತ್ತು ಕೋಟಿಯನ್ನು ಪಡೆಯುವುದಕ್ಕೆ ಮಾಡಬೇಕಾದ ಬಾನಗಡಿ. ಏನೂ ಅಲ್ಲದ ನಾನು ಹತ್ತು ಕೋಟಿ ಖರ್ಚು ಮಾಡಿ ನಾಯಕನಾಗಬೇಕು, ಅದನ್ನು ವಾಪಸ್ ಪಡೆಯಲಿಕ್ಕೆ ಭ್ರಷ್ಟನಾಗಬೇಕು, ಆ ಭ್ರಷ್ಟತನ ತೊಲಗಿಸಲಿಕ್ಕೆ ಮತ್ತೆ ಇಪ್ಪತ್ತು ಕೋಟಿ ಖರ್ಚು ಮಾಡಬೇಕು. ಹೀಗೆ ಈ ವಿಷಚಕ್ರ ಮುಂದುವರಿಯುತ್ತಾ ಹೋಗುತ್ತದೆ.
ಹೇಗಿದೆ ನೋಡಿದೆ ತಮಾಷೆ. ನಿಜಕ್ಕೂ ಸಭ್ಯರಾಗಿರುವ ಅವರು ಚುನಾವಣೆಗೋಸ್ಕರ ಹತ್ತು ಕೋಟಿ ಖರ್ಚು ಮಾಡುತ್ತಾರೆ. ಆ ದುಡ್ಡನ್ನು ಮತದಾರರಿಗೆ ಹಂಚುತ್ತಾರೆ. ಮತದಾರ ಭ್ರಷ್ಟನಾಗುತ್ತಾನೆ. ಆ ಭ್ರಷ್ಟ ಮತ ಪಡೆದು ನಾಯಕನಾಗುವವನ ಮೇಲೆ ಮತದಾರನ ಕಣ್ಣು ಇದ್ದೇ ಇರುತ್ತದೆ. ಈತ ನೀಚನೆಂಬುದು ಆ ಮತದಾರನಿಗೆ ಗೊತ್ತಿರುತ್ತದೆ. ತಮಗೆ ಕೊಟ್ಟ ಹತ್ತು ಕೋಟಿಯನ್ನು ಮತ್ತೆಲ್ಲೋ ಈತ ಪಡೆದೇ ಪಡೆಯುತ್ತಾನೆ. ಆದ್ದರಿಂದ ಮುಂದಿನ ಸಲ ಹೆಚ್ಚು ಕೀಳಬೇಕು ಅನ್ನುವ ಲೆಕ್ಕವನ್ನೂ ಮತದಾರ ಹಾಕಿರುತ್ತಾನೆ. ಹೀಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಡುತ್ತಾ, ವಂಚಿಸಿಕೊಳ್ಳುತ್ತಾ, ನಂಬಿಸುತ್ತಾ ಅತ ಬದುಕಬೇಕಾಗುತ್ತದೆ.
ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ರಾಜೀನಾಮೆ ಕೊಡಲು ಪರದಾಡಿದ್ದು, ನಿರ್ಲಜ್ಜ ಸರ್ಕಾರ ಎಂದು ಕರೆದದ್ದು, ಹೇಗಾದರೂ ಮಾಡಿ ಬೋಪಯ್ಯನವರನ್ನು ಪತ್ತೆ ಮಾಡಿ, ರಾಜೀನಾಮೆ ಕೊಟ್ಟು ಸರ್ಕಾರವನ್ನು ಅಸ್ಥಿರಗೊಳಿಸಬೇಕು ಎಂದು ಮೊನ್ನೆ ಮೊನ್ನೆಯಷ್ಟೇ ಕರ್ನಾಟಕವನ್ನು ಆಳಿದ ಮುಖ್ಯಮಂತ್ರಿ ಯೋಚಿಸುತ್ತಿರುವುದು, ಅದು ಸಹಜ ಎಂಬಂತೆ ಉಳಿದವರು ವರ್ತಿಸುತ್ತಿರುವುದು. ಸುಮ್ಮನೆ ಯೋಚಿಸಿದರೆ ಇವರು ಕನಿಷ್ಠ ಮರ್ಯಾದೆ ಪಡೆಯುವುದಕ್ಕೂ ಯೋಗ್ಯರಲ್ಲ ಅನ್ನಿಸುತ್ತದೆ. ಇವರನ್ನು ಯಾವುದಾದರೂ ಸಮಾರಂಭದಲ್ಲಿ ಮಾತಾಡಲು ಕರೆಯುವುದು, ಅವರು ಸತ್ಯ ಹೇಳುತ್ತಾರೆ ಎಂದು ನಂಬುವುದೂ ಕೂಡ ಮೂರ್ಖತನದಂತೆ ಭಾಸವಾಗುತ್ತದೆ. ಕೇವಲ ಅಧಿಕಾರ ಎಂಬುದು ಇವರ ಉದ್ದೇಶ ಆಗಿಬಿಟ್ಟಿದೆ. ಅಧಿಕಾರದ ದಾಹವೇ ಅಂಥದ್ದು. ಅದು ಸಿಗರೇಟಿಗಿಂತ, ಮದ್ಯಕ್ಕಿಂತ ಬಲವಾದ ಚಟ. ಸದಾ ಅಧಿಕಾರದಲ್ಲಿರುವ ಆಸೆ ಇವರನ್ನು ತಾರುಣ್ಯದಲ್ಲೇ ಮುದುಕರನ್ನಾಗಿ ಮಾಡುತ್ತದೆ. ಅವರು ಮಾತಾಡುವುದನ್ನು ಯಾವತ್ತಾದರೂ ಕೇಳಿದ್ದೀರಾ? ನಮ್ಮ ಉಪಮುಖ್ಯಮಂತ್ರಿ ಹೀಗೆ ಮೇಣದಲ್ಲಿ ಮಾಡಿದಂತೆ ಕಾಣಿಸುತ್ತಾರೆ ನೋಡಿ. ಅವರ ಮುಖದ ಕಳೆ ಬತ್ತಿಹೋಗಿದೆ. ಅಧಿಕಾರ ಕಳಕೊಳ್ಳುವ ಭಯ ಅವರ ಕಣ್ಣುಗಳಲ್ಲಿ ಕೂತಿದೆ.
ಅತ್ಯಂತ ಬಡವ, ಅತ್ಯಂತ ಕೆಳಗಿರುವವನು, ಒಂದಕ್ಷರವೂ ಬರದವನು ಅತ್ಯುನ್ನತ ಪದವಿಗೆ ಏರಬಲ್ಲ ಪವಾಡ ಸಾಧ್ಯವಾಗುವಂತೆ ಮಾಡಿದ್ದು ಪ್ರಜಾಪ್ರಭುತ್ವ. ಕುಂಬಾರ ಕುಂಬಾರನಾಗಿಯೇ, ಬಡಗಿ ಬಡಗಿಯಾಗಿಯೇ, ರೈತ ರೈತನಾಗಿಯೇ ಅರ್ಚಕ ಅರ್ಚಕನಾಗಿಯೇ ಉಳಿಯಬೇಕಾಗಿದ್ದ ಸಾಮಾಜಿಕ ವ್ಯವಸ್ಥೆ ಕಳೆದ 65 ವರುಷಗಳ ಹಿಂದೆ ಬದಲಾಯಿತು. ಜಗಜೀವನ್ ರಾಮ್, ಚರಣ್ ಸಿಂಗ್, ದೇವರಾಜ ಅರಸು, ಗುಂಡೂರಾವ್, ವೀರಪ್ಪ ಮೊಯ್ಲಿ-ಹೀಗೆ ಎಲ್ಲೋ ಇದ್ದವರೆಲ್ಲ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಪ್ರಮುಖ ಸ್ಥಾನ ಹಿಡಕೊಂಡರು. ಇದನ್ನು ಸಾಧ್ಯವಾಗಿಸಿದ್ದು ಅವರ ಹಣವಲ್ಲ, ಪ್ರಾಮಾಣಿಕತೆ ಅನ್ನುವುದನ್ನು ಈಗ ಎಲ್ಲರೂ ಮರೆತಿದ್ದಾರೆ. ಇವತ್ತು ಹಣವೊಂದೇ ಎಲ್ಲವನ್ನೂ ಮಾಡಬಲ್ಲದು ಎಂದು ನಂಬಿದ್ದಾರೆ.
ಸಂಪತ್ತು ಮನುಷ್ಯನ ಅತಿ ದೊಡ್ಡ ಶತ್ರು ಎನ್ನುವುದು ಸುಳ್ಳಲ್ಲ. ತುಂಬ ಬಡತನದಲ್ಲಿದ್ದಾಗ ಸಂತೋಷವಾಗಿದ್ದವರು, ಶ್ರೀಮಂತರಾಗುತ್ತಾ ಆಗುತ್ತಾ ನಿಷ್ಕ್ರಿಯರಾಗುತ್ತಾ ಹೋಗಿದ್ದನ್ನು ನಾವು ನೋಡುತ್ತಿದ್ದೇವೆ, ನೋಡಿದ್ದೇವೆ. ಅಧಿಕಾರ ಮತ್ತು ಸಂಪತ್ತು ಹೊಂದಿರುವವನನ್ನು ಬಿಟ್ಟು, ಆತನ ಸುತ್ತ ಇರುವ ಎಲ್ಲರನ್ನೂ ಪೊರೆಯುತ್ತದೆ. ಅದನ್ನು ಹೊಂದಿರುವವನು ಮಾತ್ರ ಅದನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುತ್ತಾನೆ.ಹೇಗಾದರೂ ಮಾಡಿ ಅಧಿಕಾರದಲ್ಲೇ ಉಳಿಯಬೇಕು, ಇಲ್ಲದೇ ಹೋದರೆ ನಾನು ನಾಶವಾಗುತ್ತೇನೆ ಎಂದು ಅವರು ಅಧಿಕಾರದ ಕೇಂದ್ರದಲ್ಲೇ ಉಳಿಯಲು ಹವಣಿಸುತ್ತಾರೆ. ಆ ಪ್ರಯತ್ನದಲ್ಲೇ ನಾಶವಾಗುತ್ತಾ ಹೋಗುತ್ತಾರೆ. ಅವರನ್ನು ದುಡ್ಡಿಗಾಗಿ ಹಂಬಲಿಸುವ, ಜಾತಿಗಾಗಿ ಬೆಂಬಲಿಸುವ, ಅಮಲಿನ ಸ್ಥಿತಿಯಲ್ಲಿ ಧ್ಯಾನಿಸುವ ಕೆಲವರನ್ನು ಬಿಟ್ಟರೆ ಗೃಹಿಣಿಗಾಗಲೀ, ಕಾರ್ಮಿಕನಿಗಾಗಲೀ, ವಿದ್ಯಾರ್ಥಿಗಾಗಲೀ, ತರುಣ, ತರುಣಿಯರಿಗಾಗಲೀ ನಮ್ಮ ಯಾವ ರಾಜಕೀಯ ನಾಯಕನೂ ಬೇಕಿಲ್ಲ.
ಹಾಗೆ ನೋಡಿದರೆ ಬದಲಾವಣೆಯನ್ನೇ ಬಯಸದ ದೇಶ ನಮ್ಮದು. ಸೊರಗಿಹೋಗಿದ್ದ ಫ್ರಾನ್ಸನ್ನು ಚಾರ್ಲ್ಸ್ ಡಿಗಾಲ್ ಮತ್ತು ಪ್ರಾಂಕೋ ಮಿತ್ತೆರಾಂದ್ ಸೇರಿ ಹೇಗೆ ಬೆಳೆಸಿದರು ಅನ್ನುವುದನ್ನು ನಾವು ನೋಡುವುದಕ್ಕೆ ಹೋಗುವುದಿಲ್ಲ. ಕೇವಲ ಸೆಕ್ಸ್ ಟೂರಿಸಮ್ಮನ್ನು ನಂಬಿಕೊಂಡ ಥೈಲ್ಯಾಂಡ್, ಪ್ರವಾಸಿಗರನ್ನು ನಂಬಿಕೊಂಡಿರುವ ಮಲೇಶಿಯಾ, ಒಂದಿಂಚೂ ಜಾಗ ಹೆಚ್ಚಿಸಿಕೊಳ್ಳಲಾಗದ ಸಿಂಗಾಪೂರ್, ನಶ್ವರತೆಯೇ ಸರ್ವಸ್ವ ಎಂದು ನಂಬಿರುವ ಆಸ್ಟ್ರೇಲಿಯಾಗಳೇ ಇವತ್ತು ಶ್ರೀಮಂತ ರಾಷ್ಟ್ರಗಳಾಗುತ್ತಿವೆ. ನಮ್ಮ ದೇಶ ಬಡವಾಗುತ್ತಿದೆ. ದೇಶೀಯರು ಶ್ರೀಮಂತರಾಗುತ್ತಿದ್ದಾರೆ. ಇಂಡಿಯಾ ಈಸ್ ಎ ರಿಚ್ ಕಂಟ್ರಿ ವಿತ್ ಪೂರ್ ಪೀಪಲ್ ಅಂತ ಹೇಳಿಕೊಡುತ್ತಿದ್ದರು. ಈಗ ಅದು ಬದಲಾಗಿದೆ. ನಮ್ಮದು ಶ್ರೀಮಂತರು ತುಂಬಿರುವ ಬಡರಾಷ್ಟ್ರ.
ಇಲ್ಲಿ ವಿವೇಕಾನಂದರಿಗಾಗಿ ಟಿಪ್ಪುವಿಗಾಗಿ ಜಗಳ ಆಗುತ್ತದೆ. ನಮ್ಮವರಲ್ಲದ ವಿವೇಕಾನಂದರ ಬಗ್ಗೆ ಬೆಂಗಾಲಿಗಳಿಂದ ನಾವೇ ಹೆಚ್ಚು ಉದ್ವಿಗ್ನರಾದಂತೆ ಕಾಣಿಸುತ್ತೇವೆ. ಅವರ ಕಾಯಿಲೆಗಳ ಬಗ್ಗೆ ಬರೆವವರು, ಸಾಧನೆಗಳ ಬಗ್ಗೆ ಬರೆವವರು- ಎಲ್ಲರೂ ಅವರನ್ನು ಅವಮಾನಿಸುತ್ತಲೇ ಹೋಗುತ್ತಾರೆ. ಈ ಬರಹಗಳು ಕೂಡ ಆಯಾ ಲೇಖಕನ ಜಾತಿ, ಅವನ ಬೆಂಬಲಿಗರು ಮತ್ತು ಅವರನ್ನು ಮೆಚ್ಚಿಸುವ ಉದ್ದೇಶ ಹೊಂದಿರುತ್ತವೆ. ಇವತ್ತು ಎಸ್ಸೆಸ್ಸೆಲ್ಸಿ ಓದುತ್ತಿರುವ ಹುಡುಗನನ್ನು ನಿಲ್ಲಿಸಿ ವಿವೇಕಾನಂದ ಯಾರು ಅಂತ ಕೇಳಿದರೆ ಆತ ಏನನ್ನೂ ಉತ್ತರಿಸಲಾರ. ನಾವು ಓದುತ್ತಿರುವ ಹೊತ್ತಿಗೆ ಕೂಡ ವಿವೇಕಾನಂದ ನಮಗೆ ಏನೂ ಆಗಿರಲಿಲ್ಲ. ಅವರಿಗಿಂತ ದೊಡ್ಡವರಾಗಿ ಗಾಂಧಿ ಕಾಣುತ್ತಿದ್ದರು, ಡಿವಿಜಿ ಕಾಣಿಸುತ್ತಿದ್ದರು, ಮಾಸ್ತಿ ಕಾಣುತ್ತಿದ್ದರು, ಮಿರ್ಜಾ ಇಸ್ಮಾಯಿಲ್ ಕಾಣುತ್ತಿದ್ದರು.
ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರಿಡುವುದರಿಂದ ಏನನ್ನು ಸಾಧಿಸಿದಂತಾಗುತ್ತದೆ ಎಂಬುದು ಯಾರಿಗಾದರೂ ಗೊತ್ತೇ? ಅದಕ್ಕಾಗಿ ಪುಟಗಟ್ಟಲೆ ಬರೆಯುವವರಿದ್ದಾರೆ. ಆದರೆ ಆ ಕುರಿತು ಮಾತಾಡುವವರೆಲ್ಲ ಎಪ್ಪತ್ತು ದಾಟಿದ ಅಜ್ಜಂದಿರೇ. ಒಬ್ಬ ವಿದ್ಯಾರ್ಥಿಯಾಗಲೀ, ಪ್ರಜೆಯಾಗಲೀ ಆ ಕುರಿತು ಮಾತಾಡಿದ್ದನ್ನು ನಾನು ನೋಡಿಲ್ಲ.
ಇಂಥದ್ದರ ಮಧ್ಯೆ ರಾಜಕಾರಣದ ಕುರಿತು ಬರೆಯಿರಿ ಎಂದು ಹೇಳುವ ಗೆಳೆಯರಿಗೆ ನಾನೇನೂ ಹೇಳಲಾರೆ. ಅದು ಬರೆಯುವುದಕ್ಕೂ ಓದುವುದಕ್ಕೂ ಅರ್ಹ ಸಂಗತಿ ಅಲ್ಲ. ಸಾರ್ವಜನಿಕವಾಗಿ ಕಣ್ಣೀರು ಹಾಕುವ ನಾಯಕ ಮತ್ತು ಅಧಿಕಾರಕ್ಕಾಗಿ ಹಂಬಲಿಸುವ ಪ್ರತಿನಾಯಕ ಇಬ್ಬರೂ ಒಂದು ರಾಜ್ಯವನ್ನು, ದೇಶವನ್ನು ಮತ್ತು ನೈತಿಕತೆಯನ್ನು ಧ್ವಂಸಮಾಡುತ್ತಿರುತ್ತಾರೆ.
ಕರ್ನಾಟಕದಲ್ಲಿ ಆಗುತ್ತಿರುವಂತೆ.
ಜೋಗಿ ಬರೆಯುತ್ತಾರೆ: ಕವಿತೆಯ ನಡುವೆ ಬಿಡುವು ಮಾಡಿಕೊಂಡು..
ನಿಮಗೆ ಇವೂ ಇಷ್ಟವಾಗಬಹುದು…



ರಾಜಕೀಯದ ಬಗ್ಗೆ ಬರೆಯುವುದು ಎಷ್ಟು ನಿರರ್ಥಕ ಅಂತ ಚೆನ್ನಾಗಿ ಹೇಳಿದ್ದೀರಿ.ಆದರೆ ರಾಜಕೀಯ ಅಧಿಕಾರವೇ ಪರಮೋಚ್ಚ ಅಧಿಕಾರವಾಗಿರುವಾಗ ಅದರ ಬಗ್ಗೆ ನಿರಾಶರಾಗುವುದು,ಮಾತನಾಡದೇ ಸುಮ್ಮನಿರುವುದು ಸರಿಯಾದ ನಿಲುವಲ್ಲ ಎಂಬುದು ನನ್ನ ಅನಿಸಿಕೆ.ಅಷ್ಟಕ್ಕೂ ನಿಮ್ಮಂತವರ ಬರವಣಿಗೆ ಅಂತಹಾ ರಾಡಿಯಿಂದ ನಮ್ಮನ್ನು ಹೊರಗಿಡಬಲ್ಲುದು ಎಂಬುದೇ ಸಮಾದಾನ ಜೋಗಿ ಸರ್….
ಹೊಲಸು ರಾಜಕೀಯದ ಬಗ್ಗೆ ಆಸಕ್ತಿ ಕಳೆದುಕೊಂಡು ಸುಮ್ಮನಿರುವುದು ಕೂಡ ತಪ್ಪೆ. ಸಿನಿಕರಾಗುವುದಕ್ಕಿಂತ ಹೀಗೆ ಅವರನ್ನು ವಿಮೆರ್ಶೆ ಮಾಡುವ, ಟೀಕಿಸುವ ಬರಹಗಳು ಸಾಹಿತಿಗಳಿಂದ ದೊಡ್ಡಮಟ್ಟದಲ್ಲಿ ಬರಬೇಕಿದೆ. ಈ ಮಾತಿಗೆ ಲಂಕೇಶ್ ನೆನಪಾಗುತ್ತಾರೆ. ಇದು ಸಾಹಿಯೊತಿಯೊಬ್ಬರ ಸಾಮಾಜಿಕ ಜವಾಬ್ದಾರಿಯೂ ಕೂಡ.
ಹಿರಿಯರೊಬ್ಬರು ಹೇಳುತ್ತಿದ್ದರು ’ ಎಪ್ಪತ್ತರ ದಶಕದಲ್ಲಿನ ಬಂಡಾಯದ ಕಾಲ, ಅದಕ್ಕೂ ಮೊದಲಿನ ಗೋಕಾಕ್ ಚಳುವಳಿಗಳ ಕಾಲಗಳಲ್ಲಿ ಮುಂಚೂಣಿಯಾಗಿ ನಿಂತ ಸಾಹಿತಿಗಳ ತಲೆಮಾರು ಈಗ ಇಲ್ಲವೇ ಇಲ್ಲ’, ಆ ಕಾಲ ಮುಗಿಯಿತು ಎಂದ ಆ ನುಡಿಗಳು ನಿಜದ ಕನ್ನಡಿಯಲ್ಲಿ ನೆನಪಾಗುತ್ತಿವೆ. ಈಗಲೂ ಕಾಲ ಮೀರಿಲ್ಲ. ದೊಡ್ಡಮಟ್ಟದಲ್ಲಿ ನಮ್ಮ ತಲೆಮಾರಿನ ಸಾಹಿತಿಗಳು, ಬರಹಗಾರರು ಆಂದೋಲನಕ್ಕೆ ಇಳಿದಾಗಲೇ ಬದಲಾವಣೆ ಸಾಧ್ಯವೇನೋ ಅನಿಸುತ್ತಿದೆ. ನಿಜವಾಗಲೂ ಹೊರನಾಡಿನಲ್ಲಿದ್ದು ನಮ್ಮ ಕರ್ ನಾಟಕ್ ಕಾ ನಾಟಕ್ ಅನ್ನು ನೋಡಿ, ನೋಡಿ, ಕೇಳಿ ,ಕೇಳಿ ಹೇಸಿಗೆ ಬಂದುಹೋಗಿದೆ. ನಾಡು,ನುಡಿ, ಸಂಸ್ಕೃತಿಯ ಬಗ್ಗೆ ಅಜ್ಞಾನಿಗಳು, ಮತಾಂಧರೂ ಆಡಳಿತದ ದಾಹದಲ್ಲಿ ಮುಳುಗಿ ಸಾಯುತ್ತಿದ್ದಾರೆ…
ಪತ್ರಿಕೆ, ಟೀವಿಯಲ್ಲಿ ಪುಕ್ಕಟೆ ಪ್ರಚಾರ ಸಿಗುವುದರಿ೦ದ ಇಷ್ಟೆಲ್ಲಾ ನಾಟಕ. ಒ೦ದು ವಾರ ರಾಜಕೀಯದ ನ್ಯೂಸ್ ಪ್ರಿ೦ಟ್ ಮಾಡೋದೇ ಬೇಡ. ರಾಜಕೀಯ ವಾರ್ತೆಗಳೂ ಬೇಡ. ಎಲ್ಲವೂ, ಎಲ್ಲರೂ ಚೆನ್ನಾಗಿರಬಹುದು
Jogi sir…. nijavagiyu rajakiya ondu ritiyalli madugattida radiyagide addakke maleniremba swachaaniru bandappalisuvavaregu e radi buda sametha kittogodilla ansatte…
always i had the same question for you sir
yes got an solution. people have become so senseless sometimes that even scandals in lakh might not make any difference to them….they trill(we thrill) only for crore and crores of rupees…
ನಾವು ರಾಜಕಾರಣದ ಬಗ್ಗೆ ಮಾತಾಡಿದರೆ ಮತ್ತೆ ಮತ್ತೆ ಅದದನ್ನೇ ಮಾತಾಡುತ್ತೇವೆ, ಹೆಸರುಗಳ ಬದಾಲಾವಣೆಯೊಂದಿಗೆ. ಸ್ವಚ್ಛ ರಾಜಕಾರಣದ (ಕೇಳೋಕೆ ಇದು ಒಂದು ಮಜಾಕ್ ಅನಿಸಿಬಿಡುತ್ತದಲ್ಲವಾ!? ವಾತಾವರಣ)ನಿರ್ಮಾಣಗೊಳ್ಳಲು ಯುವಕರನ್ನು ಆ ನಿಟ್ಟಿನಲ್ಲಿ ತಯಾರು ಮಾಡಲು ಸಾಧ್ಯವಿಲ್ಲವೇ? (ಯಾರು ತಯಾರು ಮಾಡುವುದು?)
ರಾಜಕಾರಣದ ಬಗ್ಗೆ ಹೆಚ್ಚುಗೊತ್ತಿಲ್ಲದ ಆದರೆ ಓದಿ, ಕೇಳಿ, ಟಿವಿಯಲ್ಲಿ ನೋಡಿರುವ ನಾನು ಹೀಗೆ ಪ್ರತಿಕ್ರಿಯಿಸಿದ್ದು ಬಾಲಿಶ ಅನಿಸಿದಲ್ಲಿ ತಿಳಿಸಿ ಹೇಳಿ.
ಇಂಡಿಯಾ ಈಸ್ ಎ ರಿಚ್ ಕಂಟ್ರಿ ವಿತ್ ಪೂರ್ ಪೀಪಲ್ ಅಂತ ಹೇಳಿಕೊಡುತ್ತಿದ್ದರು. ಈಗ ಅದು ಬದಲಾಗಿದೆ. ನಮ್ಮದು ಶ್ರೀಮಂತರು ತುಂಬಿರುವ ಬಡರಾಷ್ಟ್ರ.- ನಿಜಕ್ಕೂ ಚೆನ್ನಾದ ವಿಶ್ಲೇಷಣೆ.
ರಾಜಕಾರಣಿಗಳ ಕುರಿತು ಬರೆಯುವುದು ಚರ್ಚಿಸುವುದು ವ್ಯರ್ಥಾಲಾಪ. ಆದರೆ ’ರಾಜಕಾರಣ’ ಕುರಿತು ಒಂದೇ ಸ್ಥಿತಿ status ಕಾಪಾಡಿಕೊಳ್ಳುವುದು ಅತಿ ಮುಖ್ಯ. politics ಅನ್ನುವುದು policy making ಆಗಿರುವುದರಿಂದ ಫ್ಯೂಡಲ್ ಮತ್ತು ಸ್ಯೂಡೋಗಳನ್ನು ಹೊರಗಿಟ್ಟು ಚರ್ಚಿಸುವುದು ಈ ಹೊತ್ತಿನ ಅಗತ್ಯ. ರಾಜಕಾರಣವಿಲ್ಲದೆ ಹುಲ್ಲೂ ಅಲುಗಾಡಲಾರದು.
nija raamswamiyavare,raajkaarnavillade hulluu alugaaduvadilla..vaakarike bandu hoogide..!!!!!
Just one mathematical correction: To perish Rs 100000000/- @ Rs.5000/- spent per day will take 54.8 years. For 100 years, one can spend Rs.2740/- per day. Not splitting hair, but thought such a perfect rendition of thoughts should not have a wrong factoid!! Thanks for expressing our mind so clearly.
ನನ್ನ ಮನದಾಳದ ಮಾತುಗಳಿಗೆ ನಿಮ್ಮ ಲೇಖನಿ ಆಸರೆಯಾಗಿದೆ ಜೋಗಿ ಸರ್. ರಾಜಕೀಯ ಬರೆಯುವುದಕ್ಕೂ, ಓದುವುದಕ್ಕೂ ಅರ್ಹ ಸಂಗತಿಯಲ್ಲ! ನೇರ ನುಡಿಯ ಬರಹ, ಮೆಚ್ಚುಗೆಯಾಯ್ತು.
– ಪ್ರಸಾದ್.ಡಿ.ವಿ.
@KIRAN
You have not considered the interest part! 🙂
ಅದು ಬರೆಯುವುದಕ್ಕೂ ಓದುವುದಕ್ಕೂ ಅರ್ಹ ಸಂಗತಿ ಅಲ್ಲ.
ನಿಜ. ಹಾಗೆಂದು ಸುಮ್ಮನಿರುವುದು ಇನ್ನೂ ಅಭಾಸವಾದೀತು.
ಒಳ್ಳೆ ಲೇಖನ.
ನಿಮ್ಮ ತುಮುಲ ಎಲ್ಲರ ತುಮುಲ, ಆದರೆ ಇದಕ್ಕೆ ಪರಿಹಾರವೇ ಇಲ್ಲವೇ!
Good article sir……