ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಕಲ್ಲು ಸಕ್ಕರೆ

ಬೆಳಗ್ಗೆ ಎದ್ದರೆ ಮತ್ತದೇ ಕೆಟ್ಟ ಒಳ್ಳೆಯ ಸುದ್ದಿ. ಯಡಿಯೂರಪ್ಪ ಆಣೆ ಮಾಡುತ್ತಾರಾ ಇಲ್ಲವಾ ಎಂಬ ಚರ್ಚೆ. ಅದು ಜಗತ್ತಿನ ಪರಮೋಚ್ಛ ಸಂಗತಿ ಎಂಬಂತೆ ಚರ್ಚಿಸುವ ನಾವು. ಆಣೆ ಮಾಡುತ್ತೇನೆ ಎಂದು ತಾನೇ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು, ಬಹಿರಂಗವಾಗಿ ಹೇಳಿಕೊಂಡು, ಈಗ ಮಾಡೋಲ್ಲ ಅನ್ನುವ ವಿಹ್ವಲ ಬುದ್ಧಿಯ ಮುಖ್ಯಮಂತ್ರಿಗಳಿಂದ ಆಳಿಸಿಕೊಳ್ಳುವ ನಾವು, ವಿಕಲ್ಪವಾದದ್ದು ಬುದ್ಧಿಯೋ ಧರ್ಮವೋ ಶ್ರದ್ಧೆಯೋ ಮಾನಾಪಮಾನವೋ ಗೊತ್ತಿಲ್ಲ. ನಾಳೆ ಇವರೆಲ್ಲ ರಾಜ್ಯದ ಹಿತಾಸಕ್ತಿಯ ಕುರಿತು ಮಾತಾಡುತ್ತಾರೆ. ಪ್ರಜೆಗಳು ಅದನ್ನು ನಂಬಬೇಕು. ದೇವರಿಗೇ ದೋಖಾ ಮಾಡಿದವರು ಮನುಷ್ಯರನ್ನು ಬಿಡುತ್ತಾರಾ?

ಮತ್ತೆ ನಮ್ಮೂರಿನ ನೆನಪು. ಆಗ ನಮಗೆ ರಾಜಕೀಯ ಆಸಕ್ತಿಯೇ ಇರಲಿಲ್ಲ. ನಾವೊಂದಷ್ಟು ಗೆಳೆಯರು ಸಿನಿಮಾ ನೋಡಿಕೊಂಡು ಅಡ್ಡಾಡಿಕೊಂಡು ಹಾಯಾಗಿದ್ದೆವು. ನಮ್ಮೂರ ಮಂದಿಗೂ ರಾಜಕಾರಣದಲ್ಲಿ ಅಂಥ ಆಸಕ್ತಿಯೇನೂ ಇದ್ದಂತಿರಲಿಲ್ಲ. ಮಹಾನವಮಿ ಹೊತ್ತಿಗೆ ಥರಾವರಿ ವೇಷಹಾಕಿಕೊಂಡು ಬರುವ ಹಗಲುವೇಷದವರ ಹಾಗೇ, ನಾಲ್ಕೋ ಐದೋ ವರ್ಷಕ್ಕೊಮ್ಮೆ ರಾಜಕಾರಣಿಗಳೂ ಬರುತ್ತಿದ್ದರು. ಮನೆಗೆ ಬಂದು ಕೈ ಮುಗಿದು ಮತ ಹಾಕಿ ಅನ್ನುತ್ತಿದ್ದರು. ಯಾವತ್ತೂ ಮುಖ ನೋಡದವರನ್ನು ಅವರು ಮಾತಾಡಿಸುವ ರೀತಿಯೂ ಸೊಗಸಾಗಿತ್ತು. ಒಮ್ಮೆ ನಮ್ಮ ಮನೆಗೆ ಬಂದವರೇ ನಮ್ಮಪ್ಪನ ಹತ್ತಿರ `ರಾಯರೇ, ಹೇಗಿದ್ದೀರಿ, ಹೊಟೆಲು ಹೇಗೆ ನಡೀತಿದೆ. ಮಗ ಯಾವ ಕ್ಲಾಸು’ ಎಂದು ನಾಲ್ಕೈದು ಪ್ರಶ್ನೆಗಳನ್ನು ಕೇಳಿ ಕಂಗಾಲು ಮಾಡಿದ್ದರು. ನಮ್ಮ ಬಗ್ಗೆ ಎಲ್ಲಾ ತಿಳ್ಕೊಂಡಿದ್ದಾರೆ ಎಂದು ಚಿಕ್ಕಪ್ಪನೂ ಹೆಮ್ಮೆಯಿಂದ ಹೇಳಿದ್ದರು. ತಮಿಳುನಾಡು, ಕೇರಳಗಳಲ್ಲಿ ಸಾಕಷ್ಟು ವರ್ಷ ಕಳೆದು ಇಂಥ ಸಾಕಷ್ಟು ನಾಟಕ ನೋಡಿದ್ದ ನಮ್ಮಪ್ಪ `ಥತ್, ಅವನಿಗೆ ನಾನ್ಯಾರು ಅಂತಾನೂ ಗೊತ್ತಿಲ್ಲ. ಪ್ರತಿ ಮನೆಗೆ ನುಗ್ಗುವ ಮುಂಚೆ ಪಕ್ಕದಲ್ಲಿರೋ ಸೆಕ್ರೆಟರಿ ಅದು ಯಾರ ಮನೆ, ಎಷ್ಟು ಮಂದಿ ಇದ್ದಾರೆ, ಅವರ ವೃತ್ತಿ ಏನು ಅಂತ ಹೇಳಿರ್ತಾನೆ. ಹೊಸಿಲು ದಾಟೋ ಹೊತ್ತಿಗೆ ಅದೆಲ್ಲ ಮರೆತುಹೋಗಿರುತ್ತೆ ಅವನಿಗೆ. ಮುಂದಿನ ಮನೆಯವನ ಹೆಸರೇನು ಅಂತ ಕೇಳ್ತಾ ಇರ್ತಾನೆ. ಇದೊಂಥರ ಬೇದಿ ಬಂದವರ ಸಮಸ್ಯೆ. ತಿಂದದ್ದು ಜೀರ್ಣ ಆಗೋದಿಲ್ಲ, ಹಾಗೇ ಹೊರಟು ಹೋಗುತ್ತೆ.. ಇವರಿಗೂ ಅಷ್ಟೇ’ ಎಂದು ಅಸಹ್ಯಪಟ್ಟುಕೊಂಡಿದ್ದರು.

ಆ ಕಾಲಕ್ಕೆ ಅಸಹ್ಯಪಟ್ಟುಕೊಳ್ಳುವಷ್ಟು ರಾಜಕಾರಣಿಗಳು ಕೆಟ್ಟಿರಲಿಲ್ಲ ಅಂತ ಈಗ ಅನ್ನಿಸುತ್ತದೆ. ಇಂದಿರಾಗಾಂಧಿ, ಜೇಪಿ, ಹೆಗಡೆ, ಅರಸು ಮುಂತಾದ ಹೆಸರುಗಳು ಒಂದಿಷ್ಟು ರೋಮಾಂಚ ತುಂಬುತ್ತಿದ್ದವು. ಇಷ್ಟೊಂದು ಭಂಡತನವನ್ನು ಅವರು ಮೈಗೂಡಿಸಿಕೊಂಡಿರಲಿಲ್ಲ. ತಮ್ಮ ಕುರಿತು ಸಣ್ಣದೊಂದು ಸುದ್ದಿ ಪ್ರಕಟವಾದರೂ ಅದಕ್ಕೊಂದು ವಿವರಣೆ, ಪ್ರತಿಹೇಳಿಕೆ ನೀಡುತ್ತಿದ್ದರು. ಕೆಲವರಂತೂ ಭ್ರಷ್ಟ ಎಂದು ಕರೆದರೆ ತುಂಬ ನೊಂದುಕೊಳ್ಳುತ್ತಿದ್ದರು. ಸಂಪಾದನೆ ಮಾಡಬೇಕು ಅನ್ನುವ ಆಶೆ ಮತ್ತು ಯಾರಿಗೂ ಗೊತ್ತಾಗಬಾರದು ಅನ್ನುವ ಎಚ್ಚರ ಎರಡೂ ಸಮಾನವಾಗಿದ್ದ ಕಾಲ ಅದು.

ಹಾಗೆ ನೋಡಿದರೆ ಈ ಸಣ್ಣತನಗಳನ್ನು ಮೀರಿದವರು ಅನೇಕರು ನಮ್ಮೆದುರೇ ಇದ್ದರು. ಜೆ ಎಚ್ ಪಟೇಲರ ಹವ್ಯಾಸಗಳು ಅವರ ಕುರಿತು ರೇಜಿಗೆ ಹುಟ್ಚಿಸುತ್ತಿರಲಿಲ್ಲ. ರಾಮಕೃಷ್ಣ ಹೆಗಡೆಯವರು ಯಾವತ್ತೂ ಘನತೆ ಕಳಕೊಂಡವರಲ್ಲ. ದೇವರಾಜ ಅರಸು ಅವರು ರಾಜ್ಯಕ್ಕೆ ನೆರವಾಗಬಲ್ಲ ಯೋಜನೆಗಳನ್ನು ಹೂಡಬಲ್ಲರು ಎಂಬ ನಂಬಿಕೆ ಹುಟ್ಟಿಸಬಲ್ಲವರಾಗಿದ್ದರು. ನಜೀರ್ ಸಾಬ್ ಥರದವರು ರಾಜಕಾರಣಿಗಳಿಗೆ ಮಾದರಿಯಂತಿದ್ದರು. ಆ ಕಾಲಕ್ಕೆ ಗೋಪಾಲಗೌಡರಂಥವರ ಕುರಿತು ಆಸೆಯಿಂದ ಓದುತ್ತಿದ್ದೆವು. ಲೋಹಿಯಾ ಎಷ್ಟು ಸ್ಪಷ್ಟವಾಗಿ, ಖಚಿತವಾಗಿ ಮತ್ತು ರಾಜಕೀಯ ಲಾಭದ ಆಚೆಗೂ ಯೋಚಿಸಬಲ್ಲರು ಅನ್ನುವುದನ್ನು ನೆನೆಯುತ್ತಾ ಅವರ ಪುಸ್ತಕಗಳನ್ನು ಕಗೆತ್ತಿಕೊಳ್ಳುತ್ತಿದ್ದೆವು. ರಾಜಕಾರಣಿ ಅಪ್ರಾಮಾಣಿಕನಾದಾಗ ಸಗಣಿಹುಳದಂತೆ ಕಾಣಿಸುತ್ತಾನೆ. ಅಸಹ್ಯ ಹುಟ್ಟಿಸುತ್ತಾನೆ.

ಮೂರು ದಿನದಿಂದ ಪತ್ರಿಕೆ ಓದುವುದಕ್ಕೂ ಮನಸ್ಸಾಗುತ್ತಿಲ್ಲ. ಅಲ್ಲೂ ಬರೀ ಆಣೆಭಾಷೆಗಳ ಸದ್ದು. ಟೀವಿಯಲ್ಲೂ ಅದೇ ಮಾತು. ದೇವರ ಮೇಲೆ ಆಣೆ ಹಾಕಿ ಪ್ರಜೆಗಳನ್ನು ನಂಬಿಸಲು ಯತ್ನಿಸುವ ರಾಜಕಾರಣಿಗಳು ಬಹುಶಃ ಕರ್ನಾಟಕದಲ್ಲಿ ಮಾತ್ರ ಸಿಗುತ್ತಾರೋ ಏನೋ? ಕೊಲೆ, ಸುಲಿಗೆ ಮಾಡಿದವರೂ ಇನ್ನು ಆಣೆ ಹಾಕಿ ಶಿಕ್ಷೆಯಿಂದ ಪಾರಾಗಬಹುದೋ ಏನೋ? ಪರ್ಯಾಯ ನ್ಯಾಯಾಂಗ ವ್ಯವಸ್ಥೆ ಜಾರಿಗೆ ಬಂದೀತೆಂದು ನಿರೀಕ್ಷಿಸೋಣವೇ?

ಇದ್ಯಾವುದೂ ಬೇಡ ಎಂದು ಮೊಬೈಲಿನ ಕೆಲೆಂಡರ್ ತಡಕಾಡುತ್ತಿದ್ದರೆ ಎಚ್ ಎಸ್ ವೆಂಕಟೇಶಮೂರ್ತಿ ಮತ್ತು ಹಂಸಲೇಖ ಹುಟ್ಟುಹಬ್ಬದ ನೆನಪು. ಇಬ್ಬರ ಹುಟ್ಟುಹಬ್ಬವೂ ಒಂದೇ ದಿನ. ಹಂಸಲೇಖ ಮೊನ್ನೆ ಮೊನ್ನೆ ತಮ್ಮ ಹುಡುಗರ ಕೈಲಿ ಶಿವರಾತ್ರಿ ನಾಟಕ ಆಡಿಸಿ ಈಗೊಂದು ಸಿನಿಮಾ ನಿರ್ದೇಶಿಸುವ ಹುಮ್ಮಸ್ಸಿನಲ್ಲಿದ್ದಾರೆ. ಮೊನ್ನೆ ಈ ಟೀವಿಯ ಎದೆತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ಹಂಸಲೇಖಾ ಮಕ್ಕಳಿಗೆ ಹಾಡುವುದಕ್ಕೆ ಹೇಗೆ ಬಾಯ್ತೆರೆಯಬೇಕು ಎಂದು ಹೇಳಿಕೊಡುತ್ತಿದ್ದರು. ಅದನ್ನು ಕೇಳಿದ ಎಸ್ಪಿ ಬಾಲಸುಬ್ರಹ್ಮಣ್ಯಂ ಪುಳಕಿತರಾಗಿ, ಹಂಸಲೇಖ ಹೇಳಿದ್ದನ್ನು ಹಾಡಿ ತೋರಿಸಿದರು.

ಈ ಭಾನುವಾರ ಎಚ್ ಎಸ್ ವೆಂಕಟೇಶಮೂರ್ತಿಯವರ ಪುಸ್ತಕ ಬಿಡುಗಡೆ. ಅವರ ಮನೆಯಲ್ಲೇ ಹುಟ್ಟುಹಬ್ಬದ ಸಂಭ್ರಮದ ಜೊತೆ ಪುಸ್ತಕದ ಸಾಂಗತ್ಯ. ಸಂಜೆ ಹೊತ್ತಿಗೆ ಮಣಿಪಾಲದಲ್ಲಿ ಚೆಂದದೊಂದು ಮನೆ ಕಟ್ಟಿಕೊಂಡು, ತಣ್ಣಗೆ ಕಾವ್ಯ ಬರೆಯುತ್ತಾ ಕೂತಿರುವ ಜ್ಯೋತಿ ಮಹಾದೇವ ಅವರ ಪುಸ್ತಕದ ಬಿಡುಗಡೆ. ಅಲ್ಲಿ ಸಾ ಶಿ ಮರುಳಯ್ಯ ಮತ್ತು ಎಚ್ಚೆಸ್ವಿ ಇರುತ್ತಾರೆ. ಅವೆಲ್ಲ ಒಂದು ನೆಪ ಮಾತ್ರ. ಈ ರಾಜಕಾರಣದ ದುರ್ವಾಸನೆಯಿಂದ ಪಾರಾಗಿ ಕಸ್ತೂರಿನ ನೆಲದಲ್ಲಿ ನಿಂತು ಕಾಮನಬಿಲ್ಲು ನೋಡುವುದಕ್ಕೊಂದು ಅವಕಾಶ.

ಕಾರಿನಲ್ಲಿ ಅಚಾನಕ್ ಹುಡುಗರು ಚಿತ್ರದ ಸೀಡಿ ಸಿಕ್ಕಿತು. ಯಾರೋ ಕೊಟ್ಟದ್ದು, ಯಾವತ್ತೋ ಇಟ್ಟದ್ದು ಆ ಮುಂಜಾನೆಯೇ ಯಾಕೆ ಸಿಗಬೇಕಿತ್ತೋ. ಕೇಳಿಸಿಕೊಂಡರೆ ಇಡೀ ದಿನವನ್ನು ಉಲ್ಲಸಿತವಾಗಿಡುವಂಥ ಎರಡು ಗೀತೆಗಳಿದ್ದವು. ಜಯಂತ ಕಾಯ್ಕಿಣಿ ಬರೆದ ಹಾಡಂತೂ ಮನೋಹರ. `ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ. ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ’ ಎಂದು ಬರೆಯುತ್ತಲೇ ಜಯಂತ್, ಮತ್ತೊಂದು ಸಾಲು ರಂಗೋಲಿ ಇಡುತ್ತಾರೆ: ಇಲ್ಲೊಂದು ಸಾಲು ಅಲ್ಲೊಂದು ಸಾಲು ಬೆರೆತಾಗಲೇನೇ ಹಾಡು.

ಅದೇ ಸೀಡಿಯಲ್ಲಿ ಮತ್ತೊಂದು ತುಂಟ ಹಾಡಿದೆ. ಬಹುಶಃ ಯೋಗರಾಜ ಭಟ್ಟರು ಮಾತ್ರ ಬರೆಯಬಲ್ಲಂಥ ಹಾಡು. ಯಾವ್ಯಾವುದೋ ಜವಾರಿ ಹುಡುಗಿಯನ್ನು ನೆನಪಿಸುವ ಪಂಕಜಾ… ಗೀತೆ. ಇದ್ದಕ್ಕಿದ್ದ ಹಾಗೆ ಭಟ್ಟರು ಹುಡುಗರ ಮೇಲೆ ಅನುಕಂಪ ತೋರುತ್ತಾರೆ. `ಕಷ್ಟದಲ್ಲಿ ಇರುವಾಗ ಬೇಕು ಗಂಡ್‍ಮಕ್ಕಳೇ..’ಎಂದು ಆಕೆಯಿಂದ ಹಾಡಿಸುತ್ತಾರೆ.

ಬಾಯಲ್ಲಿರುವಷ್ಟು ಹೊತ್ತೂ ಸಿಹಿಯಾಗುತ್ತಾ ಹೋಗುವ ಕಲ್ಲು ಸಕ್ಕರೆಯ ಹಾಗೆ ನಮ್ಮ ಲೇಖಕರು, ಕಲಾವಿದರು, ನಟರು, ಗಾಯಕರು ನಮ್ಮನ್ನು ಮುದಗೊಳಿಸುವ ರೀತಿಯನ್ನು ನೋಡುತ್ತಾ ಸಂತೋಷವಾಗುತ್ತದೆ. ಇತ್ತ ತಿರುಗಿದರೆ, ಮತ್ತದೇ ಆಣೆ-ಪ್ರಮಾಣದ ಸೋಗಲಾಡಿತನ. ಯಾಕೋ, ಕಲ್ಲು ಸಕ್ಕರೆ ಮರೆತುಹೋಗಿ, ಕಲ್ಲು ಸಿಕ್ಕರೆ ಎತ್ಕೊಳ್ಳಿರೋ ಎಂದು ಮನಸ್ಸು ಚೀರುತ್ತದೆ.

ಚಪ್ಪಾಳೆ

ವಾರಕ್ಕೊಂದೋ ಎರಡೋ ಪುಸ್ತಕದ ಬಗ್ಗೆ ಬರೆಯುತ್ತಿದ್ದೆ. ಅದನ್ನು ಮತ್ತೆ ಶುರುಮಾಡಲು ಅಪ್ಪಣೆಯಾಗಿದೆ. ಪುಸ್ತಕಗಳ ಕುರಿತು ಬರೆಯುವುದು ನನಗೂ ಖುಷಿಯೇ.

ಈ ವಾರ ಕೈಗೆತ್ತಿಕೊಂಡಿದ್ದ ಪುಸ್ತಕ ಚಿದಂಬರ ಬೈಕಂಪಾಡಿಯ `ಇದು ಮುಂಗಾರು’. ಚಿದಂಬರ ನನ್ನ ಹಳೆಯ ಮಿತ್ರ. ಮಂಗಳೂರಿಗೆ ಹೋದಾಗೆಲ್ಲ ಸಿಗುತ್ತಿದ್ದ ಚಿದಂಬರ, ಕೆಲಸ ಬಿಟ್ಟ ನಂತರ ನಾಪತ್ತೆಯಾಗಿದ್ದರು. ನಾನು ಇವರನ್ನು ಮೊದಲ ಸಲ ನೋಡಿದಾಗ ಒಂದು ಪುಟ್ಟ ಕೋಣೆಯಲ್ಲಿ ತಲೆತಗ್ಗಿಸಿ ಬರೆಯುತ್ತಾ ಕೂತಿದ್ದರು. ನನ್ನ ಜೊತೆ ಬಂದಿದ್ದ ಗೋಪಾಲಕೃಷ್ಣ ಕುಂಟಿನಿ ` ಈ ಮನುಷ್ಯ ಇಡೀ ಮಂಗಳೂರನ್ನು ಗಡಗಡ ನಡುಗಿಸ್ತಾನೆ. ಸಿಕ್ಕಾಪಟ್ಟೆ ಸ್ಟ್ರಿಕ್ಟು’ ಎಂದು ಅವರಿಗೂ ಕೇಳಿಸುವಂತೆ, ಆದರೆ ಕೇಳಿಸಕೂಡದು ಎಂಬಂತೆ ಹೇಳಿದ್ದ. ಕುಂಟಿನಿ ಹೊಗಳಿಕೆ ಮುಗಿಯುತ್ತಿದ್ದ ಹಾಗೆ ಚಿದಂಬರ ಒಮ್ಮೆ ತಲೆಯೆತ್ತಿ ನೋಡಿ ಮುಗುಳ್ನಕ್ಕಿದ್ದರು.

ಚಿದಂಬರ ಬೈಕಂಪಾಡಿ ತಮ್ಮ ಮುಂಗಾರು ಪತ್ರಿಕೆಯ ಅನುಭವಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ. ತಮಾಷೆ ಮತ್ತು ವಿಷಾದ ಬೆರೆತ ಸರಳ ಶೈಲಿಯಲ್ಲಿ ಬರೆದಿರುವ ಈ ಕೃತಿ ಒಂದು ಕಾಲದ ಪತ್ರಕರ್ತರ ಸ್ಥಿತಿಗತಿಯನ್ನೂ ವರ್ಣಿಸುತ್ತದೆ. ಆರುನೂರು ರುಪಾಯಿ ಸಂಬಳಕ್ಕೆ ದಿನಕ್ಕೆ ಹದಿನಾರು ಗಂಟೆ ಕೆಲಸ ಮಾಡಬೇಕಾಗಿದ್ದನ್ನು ರಂಜನೀಯವಾಗಿ ಬರೆಯುತ್ತಾರೆ ಚಿದಂಬರ. ಹಾಗೆ ನೋಡಿದರೆ ಪತ್ರಿಕೋದ್ಯಮದಲ್ಲಿ ಕ್ರಾಂತಿಯಾದದ್ದು ಕಳೆದ ನಾಲ್ಕಾರು ವರ್ಷಗಳಿಂದೀಚೆಗೆ. ಅಲ್ಲೀ ತನಕ ಹತ್ತು ಹದಿನೈದು ವರ್ಷ ಅನುಭವ ಇರುವವರೂ ತಿಂಗಳಿಗೆ ಹತ್ತೋ ಹನ್ನೆರಡೋ ಸಾವಿರ ದುಡಿಯುತ್ತಿದ್ದರು ಅಷ್ಟೇ.

 

 

 

‍ಲೇಖಕರು G

25 June, 2011

5 Comments

  1. Badarinath Palavalli

    ೧. ರಾಜಕೀಯ ಲಾಭದ
    ಆಚೆಗೂ ಯೋಚಿಸಬಲ್ಲರು, ಎನ್ನುವ ನಿಮ್ಮ ಮಾತು ಬಹುಶಃ ಎಂ.ಪಿ. ಪ್ರಕಾಶ್ ಅವರಿಗೂ ಅನ್ವಯವಾಗುತ್ತೇನೋ?

    ೨. ಆಹಾ ಪಂಕಜ, ನಿನ್ನ ಹೆಸರೇ ಸಾಕು. ಮೀಟುವುದು ಎದೆ ನೂರು ತಂತಿ!

    ೩. ಆಧುನಿಕ ವಾಙ್ಞೆಯಕಾರ ಹಂಸಲೇಖಾರವರಿಗೂ, ಸರಸ ಕವಿ ಹೆಚ್.ಎಸ್.ವಿಯವರಿಗೂ ಜನ್ಮದಿನ ಶುಭಾಶಯಗಳು.

    ೪. ನನ್ನನ್ನ ಬ್ಲಾಗ್ ಲೋಕಕ್ಕೆ ಪರಿಚಯಿಸಿದ ಜ್ಯೋತಿ ಅಕ್ಕನ ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಯಾಗಲಿ.

    etc.,

  2. vivek

    nice

  3. ಸಿ ಪಿ ನಾಗರಾಜ

    ” ದೇವರಿಗೇ ದೋಖಾ ಮಾಡಿದವರು ಮನುಷ್ಯರನ್ನು ಬಿಡುತ್ತಾರಾ? ” ಇದೇನು ಸ್ವಾಮಿ ಹೀಗೆ ಬರೆದಿದ್ದೀರಿ ? ಮನುಷ್ಯರಿಗೆ ದೋಖಾ ಮಾಡುವುದಕ್ಕಾಗಿಯೇ ಅಲ್ಲವೇ ದೇವರನ್ನು ನಾವು ಸೃಷ್ಟಿಸಿರುವುದು .

  4. Radhika

    Good one!

  5. ರಾಕೇಶ ಜೋಶಿ

    “ಯಾಕೋ, ಕಲ್ಲು ಸಕ್ಕರೆ ಮರೆತುಹೋಗಿ, ಕಲ್ಲು ಸಿಕ್ಕರೆ ಎತ್ಕೊಳ್ಳಿರೋ ಎಂದು ಮನಸ್ಸು ಚೀರುತ್ತದೆ.”
    Awesome…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading