ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಕಂಬತ್ತಳ್ಳಿ ದಂಪತಿಗೆ ಅಭಿನಂದನೆ

ಪುಸ್ತಕದ ಅಂಗಡಿಯಲ್ಲಿ ಬೆಳಗ್ಗೆ ಸಂಜೆ ಮಧ್ಯಾಹ್ನ


 
ನೀನು ಮತ್ತೆ ಮತ್ತೆ ಭೇಟಿ ನೀಡಲು ಬಯಸುವ ಜಾಗ ಯಾವುದು ಎಂದು ಕೇಳಿದರೆ, ನಾನು ಥಟ್ಟನೆ ಪುಸ್ತಕದಂಗಡಿ ಎಂದುಬಿಡುತ್ತೇನೆ. ಪುಸ್ತಕಗಳ ನಡುವೆ ಹೊತ್ತು ಕಳೆಯುವ ಸುಖವೇ ಬೇರೆ. ನಮ್ಮೂರಲ್ಲಿ ಪುಸ್ತಕದ ಅಂಗಡಿಗಳೇ ಇರಲಿಲ್ಲ. ಬಸ್ ನಿಲ್ದಾಣದ ಪಕ್ಕದಲ್ಲೇ ದೊಡ್ಡದೊಂದು ಕಟ್ಟಡದಲ್ಲಿ ಸರ್ಕಾರಿ ಗ್ರಂಥಾಲಯ ಒಂದಿತ್ತು. ಮನೆಗಿಂತ ಕಾಲೇಜಿಗಿಂತ ಹೆಚ್ಚಿನ ವೇಳೆಯನ್ನು ನಾನು ಕಳೆದದ್ದು ಅಲ್ಲಿಯೇ ಎಂದು ಹೇಳಬೇಕು.
ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ನಂತರ ದಿನಕ್ಕೊಮ್ಮೆ ಅತ್ರಿ ಬುಕ್ ಸೆಂಟರಿಗೆ ಹೋಗುವುದು ರೂಢಿಯಾಯಿತು. ಆದರೆ ಅಲ್ಲಿ ಹೆಚ್ಚು ಹೊತ್ತು ಕಳೆಯಲು ಧೈರ್ಯವಾಗುತ್ತಿರಲಿಲ್ಲ. ಅಶೋಕವರ್ಧನರು ಗಂಭೀರವಾಗಿ ಕೂತು ಒಳಹೋಗುತ್ತಿದ್ದಂತೆ ಯಾವ ಪುಸ್ತಕ ಬೇಕು ಎಂದು ಕೇಳುತ್ತಿದ್ದರು. ಯಾವ ಪುಸ್ತಕ ಹೇಳಿದರೂ ಅದು ಮೂರನೇ ಕಪಾಟಿನ ಆರನೇ ಸಾಲಲ್ಲಿದೆ ಎಂದೋ, ಎಂಟನೇ ಕಪಾಟಿನ ಮೇಲಿನ ಸಾಲಲ್ಲಿದೆ ಎಂದೋ ಹೇಳುತ್ತಿದ್ದರು. ಅಲ್ಲಿ ಹೋಗಿ ಆ ಪುಸ್ತಕವನ್ನು ಹುಡುಕುವ ನೆಪದಲ್ಲಿ ಪೆಂಗ್ವಿನ್ ಪ್ರಕಾಶನದ ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದೆ. ಆಗೆಲ್ಲ ಅವಕ್ಕೆ ಪೌಂಡ್ ಲೆಕ್ಕದಲ್ಲಿ ಬೆಲೆ. ಅದನ್ನು ಕೊಳ್ಳುವ ತಾಕತ್ತಂತೂ ಇರಲಿಲ್ಲ. ಹೀಗಾಗಿ ಪುಸ್ತಕದ ಬೆನ್ನಿನಲ್ಲಿ ಬರೆದ ಸಾಲುಗಳನ್ನಷ್ಟೇ ಓದಿ, ಅದು ಎಷ್ಟು ಚೆನ್ನಾಗಿರಬಹುದು ಎಂದು ಲೆಕ್ಕಹಾಕುವುದು, ಮುಂದೆ ಯಾವತ್ತಾದರೂ ಅದನ್ನು ಕೊಳ್ಳಬೇಕು ಎಂದು ಕನಸು ಕಾಣುವುದು ಬಿಟ್ಟರೆ ಬೇರೆ ದಾರಿಯಿರಲಿಲ್ಲ.

ಬೆಂಗಳೂರಿಗೆ ಬಂದ ನಂತರವೂ ಪದೇ ಪದೇ ಹೋಗುತ್ತಿದ್ದದ್ದು ಪುಸ್ತಕದಂಗಡಿಗಳಿಗೇ. ಗಾಂಧೀಬಜಾರಿನಲ್ಲಿರುವ ಬಾಕಿನ ಅವರ ಲಿಪಿ ಮುದ್ರಣ ಕೂಡ ಒಂಥರ ಪುಸ್ತಕದಂಗಡಿಯ ಥರವೇ ಇತ್ತು. ಹೊಸ ಹೊಸ ಪುಸ್ತಕಗಳು ಅಲ್ಲಿ ಓದಲು ಸಿಗುತ್ತಿದ್ದವು. ವೈಎನ್ಕೆ ಅಲ್ಲಿಗೆ ಕರೆದೊಯ್ದು ಪರಿಚಯಿಸಿದ ಮೇಲೆ, ಅಲ್ಲಿಗೆ ಹೋಗುವುದಕ್ಕೆ ಆರಂಭಿಸಿದೆ. ಆ ಕಾಲಕ್ಕೆ ಬೆಂಗಳೂರಿನಲ್ಲೂ ಸಾಕಷ್ಟು ಪುಸ್ತಕದ ಅಂಗಡಿಗಳಿರಲಿಲ್ಲ.
ಆಗ ಹಳೆಯ ಪುಸ್ತಕಗಳನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುತ್ತಿದ್ದರು. ಒಮ್ಮೊಮ್ಮೆ ಅಲ್ಲಿ ಅತ್ಯಮೂಲ್ಯ ಪುಸ್ತಕಗಳು ಸಿಗುತ್ತಿದ್ದವು. ನಮಗೆ ಬೇಕಾದ ಪುಸ್ತಕಗಳೆಲ್ಲ ಒಂದೇ ಕಡೆ ಸಿಗುವ ಜಾಗವೊಂದು ಇರಬಾರದೇ ಅನ್ನಿಸುತ್ತಿತ್ತು. ಈ ಮಧ್ಯೆ ಸಪ್ನ ಬುಕ್ ಹೌಸ್ ಕನ್ನಡ ಪುಸ್ತಕಗಳಿಗೆಂದೇ ಒಂದು ಮಳಿಗೆಯನ್ನು ಆರಂಭಿಸಿ ನಮ್ಮ ಅಗತ್ಯಗಳಿಗೆ ನೆರವಾಯಿತು. ಅದು ಬಿಟ್ಟರೆ ಬಳೇಪೇಟೆಯಲ್ಲಿರುವ ಸಾಹಿತ್ಯ ಭಂಡಾರ, ಮೈಸೂರಿಗೆ ಹೋದಾಗ ಗೀತಾ ಬುಕ್ ಹೌಸ್- ಮುಂತಾದ ಜಾಗಗಳು ಗೊತ್ತಾದವು. ಚರ್ಚ್ ಸ್ಚ್ರೀಟಿನಲ್ಲಿ ಮೂರ್ತಿಯವರ ಪ್ರೀಮಿಯರ್ ಬುಕ್ ಹೌಸ್ ಗುರುತಾಯಿತು. ಸ್ಟ್ರಾಂಡ್ ಮುಂತಾದ ಅಂಗಡಿಗಳು ಪರಿಚಯವಾದವು. ಅಲ್ಲಿ ಹಳೆಯ ಹೊಸ ಪುಸ್ತಕಗಳೆಲ್ಲ ಸಿಗುತ್ತಿದ್ದವು.

ಈ ಮಧ್ಯೆ ಅಂಕಿತ ಪುಸ್ತಕ ಆರಂಭವಾಯಿತು. ಅದು ನಮ್ಮ ಮನೆಗೆ ಸಮೀಪದಲ್ಲಿದ್ದುದರಿಂದ ಅಲ್ಲಿಗೆ ಹೋಗುವುದು ರೂಢಿಯಾಯಿತು. ಅಲ್ಲಿ ಪರಿಚಯವಾದವರು ಪ್ರಕಾಶ್ ಕಂಬತ್ತಳ್ಳಿ. ಅವರು ಆ ಕಾಲಕ್ಕೆ ಹೊಸ ಲೇಖಕರನ್ನು ಕೊಂಚ ಗುಮಾನಿಯಿಂದಲೇ ನೋಡುತ್ತಿದ್ದರು. ತುಂಬ ಹೊತ್ತು ನಿಂತಿದ್ದರೆ, ಈತ ಪುಸ್ತಕ ಪ್ರಕಟಿಸಿ ಎಂದು ಕೇಳುತ್ತಾನೇನೋ ಎಂಬ ಆತಂಕ ಅವರಲ್ಲಿ ಬೆಳೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಹೀಗಾಗಿ ಅವರು ಪ್ರಶ್ನೆಗಳಿಗೆ ಎಷ್ಟು ಬೇಕೋ ಅಷ್ಟೇ ಉತ್ತರಿಸಿ ಸಾಗಹಾಕುತ್ತಿದ್ದರು.
ಆದಾದ ನಂತರ, ಪ್ರಕಾಶ್ ನನ್ನ ಪುಸ್ತಕಗಳನ್ನು ಪ್ರಕಟಿಸಿದರು. ಹೀಗಾಗಿ ಅಂಕಿತ ಪುಸ್ತಕ ನನ್ನ ನಿತ್ಯದ ಭೇಟಿಯ ತಾಣವಾಯಿತು. ಅಲ್ಲಿಗೆ ಹಿರಿಯ ಲೇಖಕರೆಲ್ಲ ಬರುತ್ತಿದ್ದರು. ನಾನು ಹೋದಾಗ ಒಬ್ಬರಲ್ಲ ಒಬ್ಬರು ಲೇಖಕರು ಅಲ್ಲಿ ಎದುರಾಗುತ್ತಿದ್ದರು. ಅನೇಕರು ಅವರ ಪುಸ್ತಕಗಳನ್ನು ಓದಿ, ಹೇಗಿದೆ ಹೇಳಿ ಎಂದು ಉಚಿತವಾಗಿಯೇ ಕೊಡುತ್ತಿದ್ದರು. ಹೀಗಾಗಿ ಅಲ್ಲಿಗೆ ಹೋದಾಗೆಲ್ಲ ಒಂದಷ್ಟು ಕಾಂಪ್ಲಿಮೆಂಟರಿ ಪ್ರತಿಗಳನ್ನು ಗಿಟ್ಟಿಸಿಕೊಳ್ಳಬಹುದು ಅನ್ನುವುದು ಗೊತ್ತಾಯಿತು. ಅದರ ಜೊತೆ ಪ್ರಕಾಶ್ ದಂಪತಿ ರುಚಿಯಾದ ಕಾಫಿಯನ್ನೂ, ಗಾಂಧೀಬಜಾರ್ ಮೂಲೆಯಲ್ಲಿ ಸಿಗುತ್ತಿದ್ದ ರುಚಿಯಾದ ಬೋಂಡವನ್ನೂ ಕೊಡಿಸುತ್ತಿದ್ದರು. ಪುಸ್ತಕದಂಗಡಿಯ ಮೇಲಿನ ಪ್ರೀತಿ ಹೆಚ್ಚಲು ಇದೂ ಕಾರಣವಾಗಿರಬೇಕು.
*******
ಪ್ರಕಾಶ್ ಕಂಬತ್ತಳ್ಳಿ ಎನ್‌ಜಿಇಎಫ್ ಸಂಸ್ಥೆಯಲ್ಲಿದ್ದರು. ಪಿಆರ್‌ಓ ಆಗಿದ್ದವರು. ಪತ್ರಿಕೆ ನಡೆಸುತ್ತಿದ್ದವರು. ನಂತರ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕಿದ್ದರು. ಚಂದ್ರಶೇಖರ ಕಂಬಾರರ ಜೊತೆಗೆ ಕೆಲಸ ಮಾಡಿದರು. ಆಮೇಲೆ, ಟಿಎನ್ ಸೀತಾರಾಮ್ ಜೊತೆಗಿದ್ದವರು. ಅವರು ಮತ್ತು ಉಪನ್ಯಾಸಕಿ ಆಗಿದ್ದ ಪತ್ನಿ ಪ್ರಭಾ ಕಂಬತ್ತಳ್ಳಿ, ಉದ್ಯೋಗ ಬಿಟ್ಟು ಪುಸ್ತಕದಂಗಡಿ ಇಡಲು ತೀರ್ಮಾನಿಸುವ ಹೊತ್ತಿಗೆ, ಪುಸ್ತಕ ಪ್ರಕಾಶನ ಮತ್ತು ಮಾರಾಟ ಎಂದರೆ ಕೈ ಸುಟ್ಟುಕೊಳ್ಳುವ ವ್ಯಾಪಾರ ಎಂದೇ ಎಲ್ಲರೂ ನಂಬಿದ್ದರು. ಗಾಂಧೀಬಜಾರಿನಲ್ಲಿ ಪುಸ್ತಕದ ಅಂಗಡಿ ಇಟ್ಟಿದ್ದ ಸುಮತೀಂದ್ರ ನಾಡಿಗರು ನಷ್ಟ ಅನುಭವಿಸಿ, ನೊಂದು ಅಂಗಡಿ ಮುಚ್ಚಿದ್ದರು. ಗಾಂಧೀಬಜಾರಿನ ಮಂದಿಗೆ ಬಜ್ಜಿ,ಬೋಂಡಾ ಮತ್ತು ಮಸಾಲೆದೋಸೆಯ ಮೇಲಿರುವ ಪ್ರೀತಿ ಪುಸ್ತಕಗಳ ಮೇಲಿಲ್ಲ ಅಂತ ಸಾಹಿತಿಗಳು ತಮಾಷೆ ಮಾಡುತ್ತಿದ್ದರು. ಅಂಥ ಹೊತ್ತಲ್ಲಿ ಪ್ರಕಾಶ್ ಕಂಬತ್ತಳ್ಳಿ ಪ್ರಕಾಶನ ಸಂಸ್ಥೆ ಆರಂಭಿಸಿದ್ದರು.
ಅದು ಶುರುವಾಗಿ ಹದಿನೈದು ವರ್ಷಗಳೇ ಆಗಿವೆ. ಗಾಂಧಿ ಬಜಾರಿನ ಅತ್ಯಂತ ಹಳೆಯ ಪುಸ್ತಕದಂಗಡಿ ಎಂಬ ಹೆಸರೂ ಅದಕ್ಕಿದೆ. ಪುಸ್ತಕಗಳನ್ನು ಬಲ್ಲ, ಪುಸ್ತಕಗಳ ಜೊತೆ ಒಡನಾಡುವ ಮಂದಿ ಅಲ್ಲಿದ್ದಾರೆ. ನೀವು ಯಾವುದೇ ಪುಸ್ತಕ ಕೇಳಿದರೂ, ಅದು ಎಲ್ಲಿದೆ, ಇದೆಯೋ ಇಲ್ಲವೋ ಅನ್ನುವುದು ಗೊತ್ತಿರುವ ಸಿಬ್ಬಂದಿಯಿದ್ದಾರೆ. ಇವತ್ತಿಗೂ ಅಲ್ಲಿಗೆ ಲೇಖಕರು ಬರುತ್ತಾರೆ. ಗಂಟೆಗಟ್ಟಲೆ ಹರಟೆಗೆ ಅದೊಂದು ತಾಣವೂ ಆಗಿದೆ. ಇತ್ತೀಚಿಗೆ ಅಲ್ಲಿಗೆ ಅರವಿಂದ್ ಅಡಿಗ ಬಂದಿದ್ದರು. ಅಂಕಿತ ಪುಸ್ತಕದ ಕುರಿತು ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿದ್ದರು. ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯನ್ನು ಕೊಂಡೊಯ್ದು ಓದಿ, ಆ ಕಾದಂಬರಿಯ ಕುರಿತೂ ವಿಸ್ತಾರವಾದ ವಿಮರ್ಶೆ ಬರೆದಿದ್ದರು.
*****
 
ಪುಸ್ತಕದಂಗಡಿಯ ಸಹವಾಸವೇ ಮಜವಾಗಿರುತ್ತದೆ. ಅಂಕಿತ ಪುಸ್ತಕ ಹೆಚ್ಚು ಕಡಿಮೆ ಪ್ರತಿವಾರವೂ ಒಂದಲ್ಲ ಒಂದು, ಒಮ್ಮೊಮ್ಮೆ ಮೂರೋ ನಾಲ್ಕೋ ಪುಸ್ತಕಗಳನ್ನು ಪ್ರಕಟಿಸುವುದರಿಂದ, ಅಲ್ಲಿಗೆ ಎಡತಾಕುವ ಲೇಖಕರನ್ನು ಕವರ್ ಸ್ಟಾರ್ ರಘು ಅಪಾರ ಅಂಕಿತ ಉಗ್ರರು ಅಂತ ತಮಾಷೆಯಾಗಿ ಕರೆದಿದ್ದರು. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಅಂಕಿತ ಪ್ರಕಾಶನದ್ದು ಸರಾಸರಿ ವಾರಕ್ಕೊಂದು ಪುಸ್ತಕವಂತೂ ಬಿಡುಗಡೆ ಆಗುತ್ತದೆ. ಸಾವಿರಾರು ಆಹ್ವಾನ ಪತ್ರಿಕೆ ಮುದ್ರಿಸಿ, ಕಿಟ್ಟಿಯ ಸ್ವಾನ್ ಮುದ್ರಣಾಲಯಕ್ಕೂ ಅಂಗಡಿಗೂ ಓಡಾಡುತ್ತಾ, ಸಮಾರಂಭಕ್ಕೆ ಅತಿಥಿಗಳನ್ನು ಕರೆಯುವುದಕ್ಕೆ ಹೆಣಗಾಡುತ್ತಾ, ರಾತ್ರಿ ನಿದ್ದೆಗೆಟ್ಟು ಪ್ರೂಫ್ ತಿದ್ದುತ್ತಾ ಪ್ರಕಾಶ್ ಪುಸ್ತಕಗಳ ನಡುವೆಯೇ ಜೀವಿಸುವವರು. ಅವರು ಹಾಗೂ ಪ್ರಭಾ ಕಣ್ತಪ್ಪಿಸಿ ಮುದ್ರಾರಾಕ್ಷಸ ಬಚಾವಾಗುವುದು ಕಷ್ಟವಿದೆ.
ನನ್ನ ಇಪ್ಪತ್ತು ಪುಸ್ತಕಗಳನ್ನು ಅಂಕಿತ ಪ್ರಕಟಿಸುವ ಹೊತ್ತಿಗೆ ಅವರೂ ಸಾಕಷ್ಟು ಹೈರಾಣಾಗಿದ್ದರು. ಎಷ್ಟೋ ಕಾದಂಬರಿಗಳ ಕೊನೆಯ ಅಧ್ಯಾಯವನ್ನು ನಾನು ಬರೆದದ್ದು ಅಂಕಿತ ಪುಸ್ತಕದ ನೆಲಮಾಳಿಗೆಯಲ್ಲೇ. ನಾನು ಕಷ್ಟಪಟ್ಟು ನುಗ್ಗಬಹುದಾದ ಕಿರಿದಾದ ಜಾಗದಲ್ಲಿ ಕುಳಿತುಕೊಂಡು ಬರೆಯುತ್ತಿದ್ದರೆ ಜಗತ್ತೇ ಮರೆತುಹೋಗುತ್ತದೆ. ಆಗೆಲ್ಲ ನಾನು ಕೂಡ ಸಲ್ಮಾನ್ ರಶ್ದೀ ಅನ್ನಿಸುತ್ತಿತ್ತು. ಅವನೂ ಕೂಡ ಹಾಗೇ ಬಂಧನದಲ್ಲೇ ಕೂತು ಬರೆಯುತ್ತಿದ್ದಾನೆ ಅಂದುಕೊಳ್ಳುತ್ತಿದ್ದೆ.
ನಾನು ಕಾದಂಬರಿಯ ಕೊನೆಯ ಅಧ್ಯಾಯ ಕೊಡಲು ತಡಮಾಡಿದಾಗೆಲ್ಲ ಪ್ರಕಾಶ್, ಅದನ್ನು ತಾವೇ ಬರೆದುಬಿಡುವುದಾಗಿ ಹೆದರಿಸುತ್ತಿದ್ದರು. ತಾವು ಪ್ರಕಟಿಸುವ ಬಹುತೇಕ ಪುಸ್ತಕಗಳಿಗೆ ಅವರೇ ಸಂಪಾದಕರು ಕೂಡ. ಅದನ್ನು ತಿದ್ದಿ, ಕೆಲವೊಮ್ಮೆ ಕೆಲವು ಭಾಗಗಳನ್ನು ಕೈ ಬಿಟ್ಟು, ಮುಖಪುಟ ಹಾಗಿರಬೇಕು, ಹೀಗಿರಬಾರದು ಅಂತ ಹೇಳುತ್ತಾ, ಪುಸ್ತಕದ ಹೆಸರು ಮೇಲ್ಭಾಗದಲ್ಲಿರಲಿ, ಕತೆಗಾರನ ಹೆಸರು ಇಂಥ ಜಾಗದಲ್ಲೇ ಬರಬೇಕು ಅಂತ ಮುಖಪುಟ ವಿನ್ಯಾಸ ಮಾಡುವವರ ದ್ವೇಷ ಕಟ್ಟಿಕೊಳ್ಳುತ್ತಾ, ಆಗೊಮ್ಮೆ ಈಗೊಮ್ಮೆ ಲೇಖಕರನ್ನು ಅಂಗಡಿಗೇ ಕರೆಸಿ, ಅವರೊಂದಿಗೆ ಸಂವಾದ ಇಟ್ಟುಕೊಳ್ಳುತ್ತಾ ಪ್ರಕಾಶ್ ಕೂಡ ಗ್ರಂಥಸ್ಥರಾಗಿದ್ದಾರೆ. ಗ್ರಂಥಿಗೆ ಅಂಗಡಿ ಪ್ರಸಿದ್ಧವಾಗಿರುವ ಜಾಗದಲ್ಲಿ ಗ್ರಂಥ ಮಾರುವುದು ಕಷ್ಟವೇ. ಪ್ರಕಾಶ್ ಪಠ್ಯಪುಸ್ತಕಗಳನ್ನು ಮಾರುವುದಿಲ್ಲ. ಟಾಪ್ ಟೆನ್ ಪಟ್ಟಿಯಲ್ಲಿ ಅವರ ಪ್ರಕಾಶನದ ಪುಸ್ತಕಗಳನ್ನು ಒಂದು ಸಲಕ್ಕಿಂತ ಹೆಚ್ಚು ಹಾಕುವುದಿಲ್ಲ. ಪುಸ್ತಕ ಪ್ರಕಟವಾದ ದಿನವೇ ಲೇಖಕರಿಗೆ ಪ್ರತಿಗಳನ್ನೂ ಸಂಭಾವನೆಯನ್ನೂ ಕೊಡುತ್ತಾರೆ.
ಅವರ ಬಳಿ ಕನ್ನಡದ ಬಹುತೇಕ ಲೇಖಕರ ದಂತಕತೆಗಳಿವೆ, ಸ್ವಾರಸ್ಯಕರ ಪ್ರಸಂಗಗಳಿವೆ. ಅವನ್ನು ಬರೆದರೂ ಸಾಕು, ಸಾಹಿತ್ಯ ಜಗತ್ತಿನಲ್ಲಿ ಕ್ರಾಂತಿಯಾಗುತ್ತದೆ. ನನ್ನ ಪುಸ್ತಕ ಯಾಕೆ ಪ್ರಕಟಿಸುವುದಿಲ್ಲ ಎಂದು ಸಿಟ್ಟಾದವರು, ಕಾಯಿಸುತ್ತೀರಿ ಎಂದು ಬೇಸರ ಮಾಡಿಕೊಳ್ಳುವವರು, ಹಸ್ತಪ್ರತಿ ತಂದುಕೊಟ್ಟು ಮರು ಮಾತಾಡದೇ ವರ್ಷಗಟ್ಟಲೆ ಕಾಯುತ್ತಾ ಕೂರುವವರು, ನಿಮ್ಮ ಪುಸ್ತಕ ಎರಡನೇ ಮುದ್ರಣ ಕಂಡಿತು ಎಂದು ತಾವಾಗಿಯೇ ಕರೆದು ದುಡ್ಡು ಕೊಟ್ಟಾಗ ಬೆರಗಾಗುವವರು-ಹೀಗೆ ಥರಾವರಿ ಮಂದಿಯನ್ನು ಅವರು ನೋಡಿದ್ದಾರೆ. ಇತ್ತೀಚೆಗೆ ಯು ಆರ್ ಅನಂತಮೂರ್ತಿ ಅವರ ಮನೆಗೆ ಹೋಗಿ ಪ್ರಕಾಶ್ ಐವತ್ತು ಸಾವಿರದ ಚೆಕ್ ಕೊಟ್ಟು ಬಂದರಂತೆ. ಅನಂತಮೂರ್ತಿ ಅವರಿಗೆ ಅದು ಅನಿರೀಕ್ಷಿತವಾಗಿತ್ತು. ನನ್ನ ಪುಸ್ತಕಗಳೂ ಚೆನ್ನಾಗಿ ಮಾರಾಟ ಆಗ್ತವೆ ಅಂತ ಗೊತ್ತಾಯ್ತು ಅಂತ ಅನಂತಮೂರ್ತಿ ಸಂಭ್ರಮದಿಂದ ಹೇಳಿಕೊಂಡಿದ್ದರು.
ನನ್ನ ಪುಸ್ತಕಗಳು ಪ್ರಕಟವಾಗತೊಡಗಿದ ನಂತರ ನಾನು ಗುಪ್ತವಾಗಿ ಅಂಕಿತ ಪುಸ್ತಕದಂಗಡಿಗೆ ಹೋಗಿ, ಮರೆಯಲ್ಲಿ ನಿಂತುಕೊಂಡು ಯಾರಾದರೂ ನನ್ನ ಪುಸ್ತಕಗಳನ್ನು ಕೊಳ್ಳುತ್ತಾರೋ ಎಂದು ಗಮನಿಸುತ್ತಿದ್ದೆ. ಪ್ರತಿ ಗಿರಾಕಿ ಬಂದಾಗಲೂ ಆತ ನನ್ನ ಪುಸ್ತಕ ಕೇಳುತ್ತಾನೆ ಅಂತ ಕಾಯುತ್ತಿದ್ದೆ. ಹೆಚ್ಚಿನವರು ಲಕ್ಷ್ಮೀಸಹಸ್ರನಾಮ, ಜಾತಕಫಲ ಕೊಳ್ಳಲು ಬರುತ್ತಿದ್ದರು. ನಾನು ಹೆಸರೇ ಕೇಳಿರದ ಎಷ್ಟೋ ಪುಸ್ತಕಗಳನ್ನು ಎಷ್ಟೋ ಮಂದಿ ಕೊಳ್ಳುತ್ತಿದ್ದರು. ಪಠ್ಯಪುಸ್ತಕಗಳು, ನೋಟ್ ಬುಕ್ಕುಗಳು, ಮ್ಯಾಪುಗಳು, ಮಕ್ಕಳ ಪುಸ್ತಕಗಳು, ಸೋಬಾನೆ ಹಾಡುಗಳು-ಹೀಗೆ ನಾವೆಲ್ಲ ಯಾವತ್ತೂ ಓದದ ಪುಸ್ತಕಗಳು ಮಾರಾಟವಾಗುವುದನ್ನು ನೋಡಿದ ನಂತರ ನನ್ನ ಭ್ರಮೆ ಇಳಿಯಿತೆಂದೇ ಹೇಳಬೇಕು.
ಒಮ್ಮೆ ನನಗಿಂತ ದಪ್ಪ ಎತ್ತರ ಇರುವವರೊಬ್ಬರು ಬಂದು, ಟೇಬಲ್ ಮೇಲಿಟ್ಟಿದ್ದ ನನ್ನ ಪುಸ್ತಕವನ್ನು ಎತ್ತಿಕೊಂಡರು. ಅದನ್ನು ಅವರು ಕೊಂಡುಕೊಳ್ಳುತ್ತಾರೆ ಎಂದು ನಾನು ಖುಷಿಯಾದೆ. ಅವರು ಆ ಪುಸ್ತಕವನ್ನು ಎತ್ತಿ ತೋರಿಸುತ್ತಾ ಬರೀ ಇಂಥ ಪುಸ್ತಕಾನೇನಾ ನೀವು ಮಾರೋದು ಅಂತ ಕೇಳಿದರು. ಅವರಿಗೆಂಥ ಪುಸ್ತಕ ಬೇಕು ಅನ್ನುವುದು ಕೊನೆಗೂ ನನಗೆ ಅರ್ಥವಾಗಿರಲಿಲ್ಲ.
ನನ್ನ ಪುಸ್ತಕಗಳ ಕುರಿತು ಯಾರೇನು ಹೇಳುತ್ತಾರೆ ಅನ್ನುವುದು ಗೊತ್ತಾಗಿದ್ದೂ ಪ್ರಕಾಶ್ ಅವರಿಂದಲೇ. ಹಿರಿಯರೊಬ್ಬರು ನಾನು ನೂರು ಪುಟಗಳ ಪುಸ್ತಕ ಬರೆದಾಗ ಸಿಟ್ಟಾಗಿ, ನನಗೆ ಫುಲ್ ಮೀಲ್ಸ್ ಬೇಕೂಂತ ಹೇಳ್ರೀ, ಈ ಪ್ಲೇಟ್ ಮೀಲ್ ಬೇಕಾಗಿಲ್ಲ ಅಂದಿದ್ದರಂತೆ. ಹಾಗೇ, ಆ ಲೇಖಕರ ಪುಸ್ತಕ ಚೆನ್ನಾಗಿಲ್ಲ, ಇವರದು ಚೆನ್ನಾಗಿದೆ, ಅದನ್ಯಾಕೆ ಪ್ರಿಂಟ್ ಮಾಡ್ತೀರಿ, ಇದ್ಯಾಕೆ ಬೇಕಿತ್ತು ಅಂತೆಲ್ಲ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಓದುಗರಿದ್ದಾರೆ. ಪ್ರಕಾಶ್ ಅವರನ್ನೆಲ್ಲ ನಿಭಾಯಿಸುವ ರೀತಿಯೇ ಆಶ್ಚರ್ಯಕರ.
ಪುಸ್ತಕದ ಅಂಗಡಿಗಳಿಗೆ ಕಷ್ಟಕಾಲ ಬಂದಿದೆ. ಇಂಗ್ಲಿಷ್ ಪುಸ್ತಕಗಳಂತೂ ಮಾರಾಟ ಆಗುವುದೇ ಇಲ್ಲ. ಎಲ್ಲರೂ ಆನ್‌ಲೈನ್ ಮೊರೆ ಹೋಗುತ್ತಾರೆ. ಕನ್ನಡ ಓದುವವರು ಕಡಿಮೆ ಆಗುತ್ತಿದ್ದಾರೆ. ಇನ್ನೊಂದು ಮೂರೋ ನಾಲ್ಕೋ ವರುಷ ಮಾತ್ರ ನಾವೂ ಈ ವೃತ್ತಿಯಲ್ಲಿ ಮುಂದುವರಿಯಬಹುದು. ಹೊಸ ಹುಡುಗರಿಗೆ ಕನ್ನಡವೇ ಗೊತ್ತಿಲ್ಲ ಅನ್ನುತ್ತಾರೆ ಪ್ರಕಾಶ್. ಹಾಗಂತ ಅವರು ಪುಸ್ತಕದಂಗಡಿಯಲ್ಲಿ ಗ್ರೀಟಿಂಗ್ ಕಾರ್ಡು, ಪಠ್ಯಪುಸ್ತಕ, ಸ್ಟೇಷನರಿ ಇಡುವುದಿಲ್ಲ. ಅದು ಕೇವಲ ಪುಸ್ತಕದ ಅಂಗಡಿ ಮಾತ್ರ. ಪುಸ್ತಕ ಕೊಂಡವರಿಗೆ ಚೆಂದದ ಬುಕ್ ಮಾರ್ಕರ್ ಕೂಡ ಕೊಡುತ್ತಾರೆ ಅವರು.
ಈ ಪುಟ್ಟ ಟಿಪ್ಪಣಿಗೆ ಕಾರಣ ಇಷ್ಟೆ. ಇದೀಗ ಅಂಕಿತ ಪುಸ್ತಕ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ ಐನೂರು. ಐನೂರು ಪುಸ್ತಕಗಳನ್ನು, ಅದರಲ್ಲೂ ಓದಬಲ್ಲ, ಸಾಹಿತ್ಯ ಪ್ರೀತಿಯ ಪುಸ್ತಕಗಳನ್ನು ಪ್ರಕಟಿಸುವುದು ಸಣ್ಣ ಕೆಲಸ ಅಲ್ಲ. ಐನೂರು ಪುಸ್ತಕಗಳನ್ನು ಪ್ರಕಟಿಸಿದ ಅನೇಕ ಪ್ರಕಾಶನ ಸಂಸ್ಥೆಗಳು ಇರಬಹುದು. ಆದರೆ ಪ್ರತಿಯೊಂದು ಪುಸ್ತಕವನ್ನೂ ಓದಿ, ತಾವೇ ಅದರ ಅಚ್ಚಿನ ದೋಷಗಳನ್ನು ತಿದ್ದಿ, ಮುಖಪುಟ ಹೀಗಿರಲಿ ಎಂದು ಸಲಹೆ ಕೊಟ್ಟು, ಶೀರ್ಷಿಕೆ ಬದಲಾಯಿಸಿ, ಅತಿಥಿಗಳನ್ನು ಕರೆದು ಪುಸ್ತಕ ಬಿಡುಗಡೆ ಮಾಡಿ…
ಅದು ಸುಲಭದ ಕೆಲಸ ಅಲ್ಲ. ಅದಕ್ಕೆ ಪುಸ್ತಕ ಪ್ರೀತಿಯೂ ಬೇಕಾಗುತ್ತದೆ. ಇವತ್ತು ಲೇಖಕರು, ಹೊಸ ಬರಹಗಾರರು ಒಂದು ಪುಸ್ತಕವಾದರೂ ಅಂಕಿತದಿಂದ ಬರಲಿ ಅಂತ ಆಶೆಪಡುವುದಕ್ಕೆ ಕಾರಣ ಈ ಅಚ್ಚುಕಟ್ಟುತನ ಮತ್ತು ಪುಸ್ತಕ ಪ್ರೀತಿಯೇ.
ಕಂಬತ್ತಳ್ಳಿ ದಂಪತಿಗೆ ಅಭಿನಂದನೆ.
 
 

‍ಲೇಖಕರು G

7 February, 2013

21 Comments

  1. prakash hegde

    ಅಂಕಿತತ ಪ್ರಕಾಶಕರಿಗೆ…. ಪ್ರಕಾಶರಿಗೆ.. ಅಭಿನಂದನೆಗಳು…
    ಇನ್ನಷ್ಟು ಒಳ್ಳೆಯ ಪುಸ್ತಕಗಳು ಬರಲಿ..
    ಅವಧಿಗೆ ಸ್ಪೆಷಲ್ ಥ್ಯಾಂಕ್ಸೂ…
    ನಮ್ ಜೋಗಿ ಹಿಡಿದ ಪುಸ್ತಕ “ಹೆಸರೇ.. ಬೇಡ..” !!
    ಈ ಫೋಟೊ ಎಲ್ಲಿ ಸಿಕ್ಕಿತು !!

  2. Sunil Rao

    ಎಲ್ಲಕಿಂತಾ ಹೆಚ್ಚಾಗಿ ಡಿಸ್ಕೌಂಟ್ ಸಿಗತ್ತೆ ಎನ್ನೋದೇ ಖುಶಿ ಹ ಹ ಹ!~!
    ಬೇಕಾದ ಪುಸ್ತಕ ತೆಗೆದು ಕೊಡ್ತಾರೆ
    ದೇ ಕೇರ್ ದ ಕಸ್ಟಮರ್ಸ್

  3. sandhya

    ಅಂಕಿತಾಗೆ ಅಭಿನಂದನೆಗಳು 🙂

  4. Swarna

    ಅಲ್ಲಿ ಒಬ್ಬರು ತೋರಿಸುವವರಿದ್ದಾರೆ, ಅವರ ಬಗ್ಗೆನೂ ಒಮ್ಮೆ ಬರೀರಿ.
    ಯಾವುದೇ ಪುಸ್ತಕ ಕೇಳಿದರೂ ಥಟ್ ಅಂತ ಎತ್ತಿ ಕೊಡ್ತಾರೆ, ಅಂಕಿತ ಇಷ್ಟವಾಗಲು ಮತ್ತೊಂದು ಕಾರಣ ಪೂರ್ತಿ ಕನ್ನಡದಲ್ಲೇ ಮಾತಾಡ್ತಾರೆ.
    ಅಂಕಿತಾಗೆ ಭೇಟಿ ಕೊಡದೆ ಹೋದರೆ ಗಾಂಧಿ ಬಜಾರ್ ಭೇಟಿ ಪೂರ್ಣವಾಗದು
    ಅಭಿನಂದನೆಗಳು

  5. veda

    Prabha Prakashge abhinandanegalu. Sada kaalavu nimminda nirantaravagi ollolleya pustakagalu prakatagolluttirali.
    Ankita damapathigalige thakkanthe avaralli kelasa maduva Latha,Surekha kooda bahala chruku. Omme nanange Bannada kaddi pusthaka bekittu ,Idya antha kelidre Medam sadyakke Halage Balapa ide. Modlu adanna kolli nantara Bannada kaddi tharsi kodtivi antha uttarisiddu avra churukutanakke sakshi.

  6. malathi S

    Swarna:
    that is Surekha Neelavara. M. Vyas avara pustaka andidde tada phaTaphuT ella pustakagaLu haajar. ella hidkondu bandu onde sama ella Odi ……hOgli biDi
    @ Avadhi:
    modalu naanu sumne Ankita ondu pustakada angadi antle hogtiddiddu. amele mane hattira aakruti pustaka banda mele nanna hechchina bheTTi allige. aagale parichaya aadavaru Veda. Veda prabha avara tangi, haagu nanna hesaru hELidre discount koDtaare andidru (discount avaraage koDtaarddarinda naa yaavattu kELilla. hindina varSha sumaru 3000+ worth kannada pustakagaLannu c/o Ankita tegedukoDiddeve..:-)but veda nanna best friend aadarinda ankita andre ondtaraha aatmeeya bhavane, asTe alla naavu mooru jana friends (naanu veda mattu Jyothi Kadladi)(innorva friend Srivathsa Joshi bharatakke bandagaloo kooda alle namma behtti) alle bheTTiyaagi nantara vidyarthi bhavanakke hOgodu dose hODilikke (kannada fonts bartilla so englishnalli sorry)
    eega ankita haagu aakruti 50: 50 bheTTi..:-)
    Its really nice of you Girish to write about Prabha and Prakash. loved the write up
    🙂
    malathi S

  7. ಲಕ್ಷ್ಮಣ ಕೊಡಸೆ

    ತುಂಬಾ ಒಳ್ಳೆಯ ನೆನಪು. ಪ್ರಕಾಶ್ ಮತ್ತು ಪ್ರಭಾ ಕನ್ನಡ ಆಧುನಿಕ ಕನ್ನಡ ಪರಿಚಾರಕರು. ಸದಭಿರುಚಿಯ ಪ್ರಕಾಶಕರು

  8. ಡಾ.ನಾಗಮಣಿ.ವಿ.

    ಆತ್ಮೀಯ ವಾತಾವರಣ,ಪುಸ್ತಕಗಳ ಬಗ್ಗೆ ಮಾಹಿತಿ,ಸಲಹೆಯನ್ನೂ ಕೊಡುವ ನಗುಮುಖದ ಪ್ರಭಾ- ಪ್ರಕಾಶ್ ದಂಪತಿ,ಪಾದರಸದಂತೆ ಓಡಾಡುವ ಸಹಾಯಕಿಯರು,ಕೇಳಿದ ತಕ್ಷಣ ಸಿಗುವ ಪುಸ್ತಕಗಳು-ಈ ಎಲ್ಲ ಕಾರಣಗಳಿಂದ ‘ಅಂಕಿತ’ಕ್ಕೆ ಮತ್ತೆ ಮತ್ತೆ ಹೋಗಬೇಕೆನಿಸುತ್ತೆ.’ಅಂಕಿತ’ ಬೆಳೆಯಲಿ,ಇನ್ನಷ್ಟು ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸಲಿ.

    • GURURAJ KATHRIGUPPE

      it will be very sad thing,if ‘ANKITHA’ was not able to run after four or five years.we must prove this wrong,by visiting and buying kannada books regularly.Hats off to prakash-prabha couple,we will assure you,that ANKITHA will release it’s 1000th book,sure

  9. Shama Nandibetta

    “ಇವತ್ತು ಲೇಖಕರು, ಹೊಸ ಬರಹಗಾರರು ಒಂದು ಪುಸ್ತಕವಾದರೂ ಅಂಕಿತದಿಂದ ಬರಲಿ ಅಂತ ಆಶೆಪಡುವುದಕ್ಕೆ ಕಾರಣ ಈ ಅಚ್ಚುಕಟ್ಟುತನ ಮತ್ತು ಪುಸ್ತಕ ಪ್ರೀತಿಯೇ.
    ಕಂಬತ್ತಳ್ಳಿ ದಂಪತಿಗೆ ಅಭಿನಂದನೆ.” – ರಶ್ದಿಯವರೇ, ಇಷ್ಟು ಚೆಂದಗೆ ಬರೆದ ಕಾರಣ ಕೇಳುತ್ತಿದ್ದೇನೆ…
    ನೆಲಮಾಳಿಗೆಯಲ್ಲೇ ಪ್ರ.ಪ್ರ ಅವರ ಬಂಧನದಲ್ಲಿ ಕುಳಿತೇ ಬರೆದಿರಾ ? ಗುಮಾನಿ ನನಗೆ….
    ಅಂದ ಹಾಗೆ ನನ್ನ ಮಗಳ ಮೊದಲ ಪುಸ್ತಕ ಅಂಕಿತದಿಂದ… ಮೊದಲ ಚಾರ್ಟು ಅಂಕಿತದಿಂದ…
    ಅವಳ ಪುಸ್ತಕವನ್ನೂ ಅವರೇ ಪ್ರಕಾಶಿಸಲಿ ಎಂಬ ದುರಾಸೆಯೊಡನೆ…
    ಫ್ರ.ಪ್ರ. ಇಬ್ಬರಿಗೂ ಅಭಿನಂದನೆ… ಅಂಕಿತ ಅನಂತದೆತ್ತರ ಬೆಳೆಯಲಿ

  10. G G Hegde Talekeri

    Thank you for information.

  11. ಸುಧಾ ಚಿದಾನಂದಗೌಡ

    very impressive
    congrats ankita

  12. -ರವಿ ಮೂರ್ನಾಡು.ಕ್ಯಾಮರೂನ್

    ಮೊದಲಿಗೆ ಕಂಬತ್ತಳ್ಳಿ ದಂಪತಿಗಳಿಗೆ ಅಭಿನಂದನೆಗಳು ಕ್ಯಾಮರೂನ್ ಆಫ್ರಿಕಾದಿಂದ .
    ಪುಸ್ತಕ ನೀಡುವ ಪ್ರೀತಿ,ಶಾಂತಿ ಅಂತರ್ಜಾಲ ಓದು ನೀಡುವುದಿಲ್ಲ. ನನ್ನನ್ನು ಶಾಲೆಗೆ ಕಳುಹಿಸಿದ ಪ್ರಥಮ ದಿನ ೧೯೭೯ರ ಒಂದು ಸೋಮಾವಾರದ “ಮುಂಜಾನೆ” ಈಗಲೂ ನೆನಪಿದೆ. ಒಂದನೇ ತರಗತಿಯ ಹೊಸ ಗರಿಗರಿ ಪುಸ್ತಕವನ್ನು ನನ್ನ ಅಜ್ಜಿ ದೇವರ ಭಾವಚಿತ್ರದ ಮುಂದೆ ಇಟ್ಟು ನಮಸ್ಕರಿಸಿ ,ನನ್ನ ಪ್ರಥಮ ಶಾಲಾ ಚೀಲಕ್ಕೆ ತುಂಬಿಸಿ ಕಳುಹಿಸಿಕೊಟ್ಟಳು. ಅದೇ ಜೋಳಿಗೆಯ ಓಡಾಟ ಇಂದಿಗೂ ತಡೆಯಿಲ್ಲದೆ ನಡೆಯುತ್ತಿದೆ. ಆ ಜೋಳಿಗೆಯಲ್ಲಿ ಪುಸ್ತಕವಿಲ್ಲದಿದ್ದರೆ ಜಗತ್ತು ನನ್ನೊಂದಿಗೆ ಇಲ್ಲ ಅನ್ನಿಸುತ್ತದೆ.
    ನನ್ನ ಹುಡುಕಾಟಕ್ಕೆ ಸಿಗದ ಕೆಲವು ಪುಸ್ತಕಗಳು ಕನಸಿನಲ್ಲಿವೆ. ಅದು ಆ ಸಂದರ್ಭದ ಆರ್ಥಿಕ ಸ್ಥಿತಿಯಾಗಿತ್ತು. ಕಂಬತ್ತಳಿ ಪುಸ್ತಕದಂಗಡಿಗೆ ನನ್ನ ಆತುರಗಳು,ಕನಸುಗಳು ಮುಗಿಬೀಳಲು ದಿನಗಳನ್ನು ಕಾಯುತ್ತೇನೆ..ಭಾರತ ನೆಲ ಸ್ಪರ್ಶದ ಕೆಲವೇ ದಿನಗಳಲ್ಲಿ ಹಾಜರಿ ಹಾಕುತ್ತೇನೆ.
    ಕಂಬತ್ತಳ್ಳಿ ಕುಟುಂಬಕ್ಕೆ ತಾಯಿ ಜಗನ್ಮಾತೆಯ ಆಶೀರ್ವಾದಗಳು ಲಭಿಸಲಿ.

  13. ಹರಿ

    ಪ್ರಕಾಶ್-ಪ್ರಭಾ ಕಂಬತ್ತಳ್ಳಿಯವರಿಗೆ ನನ್ನ ಅಭಿನಂದನೆಗಳು.
    ಜೋಗಿಯವರು ಹೇಳಿದ ಮಾತುಗಳು ಸತ್ಯ. “ಅಂಕಿತ” ಕೇವಲ ಪುಸ್ತಕಗಳನ್ನಷ್ಟೆ ಅಲ್ಲ…ಸರ್ವ ಸಾಹಿತಿಗಳ ಸಂಗವನ್ನು ದೊರಕಿಸಿದ “ಅನುಭವ ಮಂಟಪ”.
    ಸೀಮಿತ ಮಾರುಕಟ್ಟೆಯಲ್ಲಿ 500 ಕನ್ನಡ ಪುಸ್ತಕ ಪ್ರಕಟಿಸುವುದು ಹಾಗು ಎಲ್ಲರನ್ನೂ ಸೇರಿಸಿ ಪುಸ್ತಕ ಬಿಡುಗಡೆ ಮಾಡುವುದು ಸರಳ ಸಂಗತಿಯಲ್ಲ. ನಿಜಕ್ಕೂ ಅಭಿನಂದನಾರ್ಹ ಸಂಗತಿ.

  14. u s mahesh

    ಎಲ್ಲಾ ಕ್ಷೇತ್ರಗಳಲ್ಲೂ ಮಾದರಿಗಳು ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ನೀವು ಮಾದರಿಯಾಗಿ ಇದ್ದೀರಿ,ಅಭಿನಂಧನೆಗಳು.

  15. samyuktha

    ‘Ankita’ge hoda takshana doreyuvudu ondu sihiyaada, aapta nageyinda koodida welcome! adara saviyannu munduvaresuvudu avara muddaada collectionnu! abhinandanegalu Ankita.

  16. D.Ravivarma

    ankitaa prakashanada pustike noduvude ondu kushi….kannada hosa barahagararannu gurutisi hosa chintanegalannu,prakatisii,priti inda odisuttiruva.nammannu ondu hosa lokakke kondu oyyutiruva… ii damaptigalige hrudayapurvaka abhinandanegalu…… ye dil mangee more…..

  17. Gopaal Wajapeyi

    ಕನ್ನಡದ ಪ್ರಕಟಣೋದ್ಯಮದಲ್ಲಿ ಹೊಸ ಶಕೆಯನ್ನು ಆರಂಭಿಸಿದಂಥದ್ದು ‘ಅಂಕಿತ’. ಬರೀ ಖ್ಯಾತನಾಮರವಲ್ಲ, ಉದಯೋನ್ಮುಖ ಲೇಖಕರ ಕೃತಿಗಳನ್ನೂ ಪ್ರಕಟಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇನ್ನು ಕಂಬತ್ತಳ್ಳಿ ದಂಪತಿಗಳು ಹಮ್ಮಿಕೊಳ್ಳುವ ಕೃತಿ ಲೋಕಾರ್ಪಣೆಯ ಕಾರ್ಯಕ್ರಮ ಕೇವಲ ಪುಸ್ತಕ ಬಿಡುಗಡೆ ಕಾರ್ಯಕ್ರಮವಾಗಿರುವುದಿಲ್ಲ, ಎಷ್ಟೋ ಸ್ನೇಹಿತರನ್ನು ಭೇಟಿಮಾಡುವ ಒಂದು ಸುವರ್ಣಾವಕಾಶವಾಗಿರುತ್ತದೆ. ಹೊಸ ಪರಿಚಯಗಳಿಗೆ ವೇದಿಕೆಯಾಗಿರುತ್ತದೆ. ಈ ಲೇಖನದ ಮೂಲಕ ಕಂಬತ್ತಳ್ಳಿ ದಂಪತಿಗಳನ್ನು ಇನ್ನಷ್ಟು ಹತ್ತಿರದಿಂದ ಅರಿತುಕೊಳ್ಳುವಂತೆ ಮಾಡಿದ ಜೋಗಿಯವರಿಗೆ ಥ್ಯಾಂಕ್ಸ್.

  18. akshatha humchadakatte

    ಅಭಿನಂದನೆಗಳು ಅಂಕಿತದ ರುವಾರಿಗಳಾದ ಪ್ರಭಾ ಮತ್ತು ಪ್ರಕಾಶ್ ದಂಪತಿಗಳಿಗೆ . ಅಹರ್ನಿಶಿ ಪ್ರಕಾಶನದ ಏಳಿಗೆಯಲ್ಲಿ ನಿಮ್ಮ ಪ್ರೋತ್ಸಾಹ ಅಡಗಿದೆ ಎಂಬುದನ್ನು ನಾನು ಎಂದಿಗೂ ಮರೆಯಲಾರೆ .

  19. ರಾಧಿಕಾ

    I have gone to Ankita only once, 3 years ago. Though I bought books worth 2000+ they never gave any discount. They told they don’t give discount. Good to know now they are giving discount. Best Wishes.

  20. ಕರ್ಕಿ ಕೃಷ್ಣಮೂರ್ತಿ

    ಈ ಒಂದು ಲೇಖನದ ಅಗತ್ಯ ತುಂಬ ಇತ್ತು. ಪ್ರಕಾಶ್ ದಂಪತಿಗಳು ಅಭಿನಂದನೆಗೆ ಖಂಡಿತ ಅರ್ಹರು. ನಮ್ಮೆಲರ ಪರವಾಗಿ ಅಂಕಿತಕ್ಕೆ ಥ್ಯಾಂಕ್ಸ್ ಹೇಳಿದ ಜೋಗಿಗೆ ಥ್ಯಾಂಕ್ಸ್ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading