ಜೋಗಿ ಬರೆಯುತ್ತಾರೆ: ಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತಲಿದ್ದೆ..

ಜೋಗಿ

ಮನಸ್ಸೇ ಮಾರ್ಗದರ್ಶಿ.
ಅದನ್ನು ನಂಬಿಕೊಂಡು ತುಂಬ ದೂರ ಸಾಗಿದ್ದಾಗಿದೆ. ನಡೆದ ದಾರಿ ಸರಿಯೋ ತಪ್ಪೋ ಎಂದು ಹೇಳುವವರೂ ಇಲ್ಲ. ಯಾರನ್ನು ಕೇಳಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ. ಅವರವರಿಗೆ ಅವರವರ ದಾರಿಯ ಚಿಂತೆ. ಅವರ ಪಾಲಿಗೆ ಅವರು ನಡೆಯುತ್ತಿರುವ ದಾರಿಯೇ ಸರಿಯಾದದ್ದೇನೋ? ನಮ್ಮ ದಾರಿ ಅದಲ್ಲ ಅಂತ ಅನೇಕ ಸಲ ಅನ್ನಿಸುತ್ತಿರುತ್ತದೆ.
ಅಪ್ಪ ತಮ್ಮದೇ ದಾರಿಯಲ್ಲಿ ನಡೆದು ಗುರಿ ತಲುಪಿದ್ದಾರೆ. ಗೌರವ ಗಳಿಸಿದ್ದಾರೋ ಇಲ್ಲವೋ ನೆಮ್ಮದಿಯಾಗಂತೂ ಇದ್ದರು. ಅವರು ಪುಟ್ಟ ಹೊಟೆಲು ಇಟ್ಟುಕೊಂಡಿದ್ದರು. ಅಲ್ಲಿಗೆ ಹತ್ತೋ ಹನ್ನೆರಡೋ ಗಿರಾಕಿಗಳು ಬರುತ್ತಿದ್ದರು. ದುಡ್ಡಿದ್ದವರು ದುಡ್ಡು ಕೊಡುತ್ತಿದ್ದರು. ಇಲ್ಲದವರು ಲೆಕ್ಕ ಬರೆಸುತ್ತಿದ್ದರು. ಆ ದುಡ್ಡು ವಾಪಸ್ಸು ಬಂದರೆ ಬಂತು.
ಬೇಡ ಅನ್ನಿಸಿದ ದಿನ ಅವರು ಹೊಟೆಲಿಗೆ ಹೋಗುತ್ತಿರಲಿಲ್ಲ. ಮನೆಯಲ್ಲೇ ನಿದ್ದೆ ಹೊಡೆಯುತ್ತಿದ್ದರು. ಹೊಟೆಲಿನಲ್ಲಿ ತಾವೇ ರುಚಿರುಚಿಯಾದ ಅಡುಗೆ ಮಾಡುತ್ತಿದ್ದ ಅಪ್ಪ ಮನೆಯಲ್ಲಂತೂ ಅಡುಗೆ ಮನೆಗೆ ಕಾಲೇ ಇಡುತ್ತಿರಲಿಲ್ಲ. ಎಲ್ಲವನ್ನೂ ರುಚಿರುಚಿಯಾಗಿ ಮಾಡಿ ಅಮ್ಮನೇ ಬಡಿಸಬೇಕು.
ತುಂಬ ದುಡ್ಡೇನೂ ಉಳಿಯುತ್ತಿರಲಿಲ್ಲ. ಖರ್ಚಿಗೆ ಸಾಕಾಗುವಷ್ಟು ಹೊಂದಿಕೆಯಾಗುತ್ತಿತ್ತು. ಅದೇ ಹೋಟೆಲನ್ನು ಕೊಂಚ ಸಿಂಗರಿಸಿ, ವಿಸ್ತರಿಸಿ, ಒಂದೈದಾರು ಮಂದಿ ಹುಡುಗರನ್ನು ಕೆಲಸಕ್ಕಿಟ್ಟುಕೊಂಡು, ಬೆಳಗ್ಗೆ ಆರುಗಂಟೆಗೇ ತೆರೆದು, ಹತ್ತೂವರೆ ತನಕ ವ್ಯಾಪಾರ ಮಾಡಿದರೆ ಈಗಿನ ವ್ಯಾಪಾರದ ಹತ್ತು ಪಟ್ಟು ಬರುತ್ತದೆ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಅದು ಅಪ್ಪನಿಗೂ ಗೊತ್ತಿತ್ತು. ಅಪ್ಪ ಯಾವತ್ತೂ ಹಾಗೆ ಮಾಡಲಿಲ್ಲ.

ಜಾತ್ರೆಯ ಹೊತ್ತಲ್ಲಿ ಸಾಮಾನ್ಯವಾಗಿ ಆಗುವುದಕ್ಕಿಂತ ನೂರು ಪಟ್ಟು ವ್ಯಾಪಾರ ಆಗುತ್ತಿತ್ತು. ಮೂರು ದಿನದಲ್ಲೇ ಸಾವಿರಾರು ರುಪಾಯಿ ಕೈ ಸೇರುತ್ತಿತ್ತು. ಅಪ್ಪ ಆ ದುಡ್ಡಲ್ಲಿ ಬಟ್ಟೆಬರೆ ತಂದು, ಅಮ್ಮನಿಗೊಂದು ಸರವೋ ಬಳೆಯೋ ಮಾಡಿಸಿಕೊಟ್ಟು, ಹಣ್ಣು ಹಂಪಲು ತಂದಿಟ್ಟು, ಸತ್ಯನಾರಾಯಣ ಪೂಜೆ ಮಾಡಿಸಿ, ನೂರಾರು ಮಂದಿಗೆ ಊಟ ಹಾಕಿ, ಐದೈದು ರುಪಾಯಿ ದಕ್ಷಿಣೆ ಕೊಟ್ಟು ಮಿಕ್ಕ ದುಡ್ಡಲ್ಲಿ ಅರ್ಧದಷ್ಟನ್ನು ಅಮ್ಮನ ಕೈಗಿಟ್ಟು, ಮಿಕ್ಕರ್ಧವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ದೇಶಾಂತರ ಹೊರಟು ಬಿಡುತ್ತಿದ್ದರು. ಮತ್ತೆ ಬರುತ್ತಿದ್ದದ್ದು ಮೂರೋ ನಾಲ್ಕೋ ತಿಂಗಳ ನಂತರ. ಅವರು ಎಲ್ಲಿಗೆ ಹೋಗುತ್ತಿದ್ದರು ಅನ್ನುವುದು ಯಾರಿಗೂ ಗೊತ್ತಿರಲಿಲ್ಲ. ಅದ್ಯಾವುದ್ಯಾವುದೋ ಊರು ಸುತ್ತಿ ತೆಳ್ಳಗಾಗಿ, ಕರ್ರಗಾಗಿ ವಾಪಸ್ಸು ಬರುತ್ತಿದ್ದರು.
ಆ ದುಡ್ಡನ್ನೆಲ್ಲ ತಿಂದು ತೇಗಿ, ದಾನ ಮಾಡಿ, ಊರು ಸುತ್ತುವ ಬದಲು ತಾವೂ ಒಂದು ದೊಡ್ಡ ಮನೆ ಕಟ್ಟಿಸಿಕೊಂಡು ಶ್ರೀಮಂತರಾಗಬಹುದಿತ್ತು ಎಂದು ಅಮ್ಮನಿಗೆ ಸಿಟ್ಟು. ನೆಂಟರಿಷ್ಟರ ಪಾಲಿಗೆ ಅಪ್ಪ ತಮಾಷೆಯ ವಸ್ತು. ಸೋಂಬೇರಿ ಮತ್ತು ತಿರುಗೂಳಿ ಎಂದು ಅವರಿಗೆ ಬಿರುದು. ಜೀವನದಲ್ಲಿ ಉದ್ಧಾರ ಆಗೋದಿಲ್ಲ ಅಂತ ಅವರಿಗೆಲ್ಲ ಸಂತೋಷ. ಹಾಗೆ ಗೇಲಿ ಮಾಡುವವರ ಎದುರು ಒಮ್ಮೆಯಾದರೂ ಸಾಧಿಸಿ ತೋರಿಸಬೇಕು ಅಂತ ಅಮ್ಮನಿಗೆ ಹಠ.
ಕರುಣಾಕರ ಹೀಗೆ ಅವನ ಜೀವನದ ಕತೆ ಹೇಳುತ್ತಾ ಕೂತಿದ್ದ. ಅವನು ಅಪ್ಪನನ್ನು ಧಿಕ್ಕರಿಸಿ ಬೆಳೆದವನು. ಅಪ್ಪನ ಹಾಗೆ ತಾನು ಆಗಬಾರದು ಅಂತ ಹೆಣಗಾಡಿದವನು. ಪಿಯೂಸಿ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಹೋಗಿ ಯಾವುದೋ ಅಂಗಡಿಯಲ್ಲಿ ಲೆಕ್ಕ ಬರೆಯುತ್ತಾ, ಕಾಸಿಗೆ ಕಾಸು ಗಂಟು ಹಾಕಿ, ಸರಿಯಾಗಿ ಊಟ ಕೂಡ ಮಾಡದೇ, ಬಟ್ಟೆ ಬರೆ ಕೊಳ್ಳದೇ, ಕಷ್ಟಪಟ್ಟು ಕಂಪೆನಿ ಸೆಕ್ರೆಟರಿ ಕೋರ್ಸು ಮುಗಿಸಿ, ಈಗ ದೊಡ್ಡದೊಂದು ಕಂಪೆನಿಯಲ್ಲಿ ಕಂಪೆನಿ ಸೆಕ್ರೆಟರಿ. ದಿನನಿತ್ಯ ಮಾಡಿದಷ್ಟೂ ಮುಗಿಯದ ಕೆಲಸ. ಮಕ್ಕಳನ್ನು ಮಾತಾಡಿಸುವುದಕ್ಕೂ ಪುರುಸೊತ್ತಿಲ್ಲ. ವರುಷಕ್ಕೊಮ್ಮೆ ಬಿಡುವು ಮಾಡಿಕೊಂಡು ಎಲ್ಲಿಗಾದರೂ ಪ್ರವಾಸ ಹೋದರೆ ಉಂಟು, ಇಲ್ಲದಿದ್ದರೆ ಇಲ್ಲ. ಅವನ ಕಂಪೆನಿಯ ಬ್ರಾಂಚುಗಳು ಯುರೋಪಿನ ಉದ್ದಗಲಕ್ಕೂ ಇದ್ದಾವೆ. ಅವನು ಅಲ್ಲಿಗೆ ತಿಂಗಳಿಗೆರಡು ಸಾರಿ ಹೋಗಿ ಬರುತ್ತಾನೆ. ವರುಷದಲ್ಲಿ ಏಳೆಂಟು
ತಿಂಗಳು ಪ್ರವಾಸದಲ್ಲೇ ಇರುತ್ತಾನೆ. ತಿಂಗಳಿಗೆ ಸುಮಾರು ಎರಡು ಲಕ್ಷ ಸಂಬಳ. ಅವನ್ನೆಲ್ಲ ತಾನೇ ಮ್ಯಾನೇಜು ಮಾಡುತ್ತಾನೆ. ಬೆಂಗಳೂರಲ್ಲಿ ಏಳು ಸೈಟುಗಳಿವೆ. ಮೈಸೂರಲ್ಲಿ ಎರಡು. ಊರಿನ ನೆಂಟತನ ಬಿಡಬಾರದು ಎಂದು ತನ್ನೂರಿನಲ್ಲೇ ಎಂಟೆಕರೆ ಜಮೀನು ಕೊಂಡಿದ್ದಾನೆ.
ಅವನ ಮಗ ಕಳೆದ ತಿಂಗಳು ತೀರಿಕೊಂಡ. ಗೆಳೆಯರೊಂದಿಗೆ ಪ್ರವಾಸ ಹೋಗಿದ್ದವನು ಇಲೆಕ್ಟ್ರಿಕ್ ವೈರು ಮುಟ್ಟಿ ಪ್ರಾಣಬಿಟ್ಟ. ನಲವತ್ತೆಂಟು ಮಂದಿ ಜೊತೆಯಾಗಿ ಬಸ್ಸಲ್ಲಿ ಪ್ರಯಾಣ ಹೊರಟಿದ್ದರು. ಇವರೊಂದಷ್ಟು ಮಂದಿ ಚೆನ್ನಾಗಿ ಕುಡಿದು, ಬಸ್ಸಿನ ಟಾಪ್‌ನ ಮೇಲೆ ಡಾನ್ಸ್ ಮಾಡುತ್ತಿದ್ದರಂತೆ. ಇವನು ಕೈಯೆತ್ತಿದಾಗ ರಸ್ತೆಗೆ ಅಡ್ಡವಾಗಿ ಸಾಗಿದ ಇಲೆಕ್ಟ್ರಿಕ್ ತಂತಿ ಕೈಗೆ ತಾಗಿದೆ. ಅಲ್ಲೇ ಕರಕಲಾಗಿ ಹೋಗಿದ್ದಾನೆ.
ಆ ಸುದ್ದಿ ಕೇಳಿದ್ದೇ ಹೆಂಡತಿ ಪುಷ್ಪಾ ಕುಸಿದು ಬಿದ್ದಿದ್ದಾಳೆ. ಅವಳಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಯಾರ ಜೊತೆ ಮಾತಾಡುವುದೂ ಇಲ್ಲ. ಬಂಗಲೆಯಂಥ ಮನೆಯಲ್ಲಿ ಇಬ್ಬರೇ ಇರುವುದು. ಒಪ್ಪಿಕೊಂಡ ಕೆಲಸಗಳನ್ನು ಬಿಡುವಂತಿಲ್ಲ. ಹಾಗಂತ ಕೆಲಸ ಮಾಡುವುದರಿಂದ ಯಾವ ಸಂತೋಷವೂ ಲಾಭವೂ ಇಲ್ಲ.
ನಾನು ಇಪ್ಪತ್ತು ವರುಷಗಳ ಹಿಂದೆಯೇ ದುಡಿಯುವುದನ್ನು ನಿಲ್ಲಿಸಬಹುದಾಗಿತ್ತು. ಸ್ವಂತ ಮನೆ ಕೊಂಡುಕೊಂಡಿದ್ದೆ. ದೊಡ್ಡ ಕಂಪೆನಿಯ ಷೇರುಗಳಿದ್ದವು. ಅವುಗಳಿಂದಲೇ ತಿಂಗಳಿಗೆ ಲಕ್ಷ ರುಪಾಯಿ ಬರುತ್ತಿತ್ತು. ಎರಡು ಮನೆ ಬಾಡಿಗೆಗೆ ಕೊಟ್ಟಿದ್ದೆ. ನಲವತ್ತು ಸಾವಿರ ಅದರಿಂದಲೇ ಬರುತ್ತಿತ್ತು. ಆದರೆ, ಅಪ್ಪನ ಹಾಗೆ ಆಗಬಾರದು ಅಂತ ದುಡಿಯುತ್ತಲೇ ಬಂದೆ. ಒಂದೇ ಒಂದು ನಿಮಿಷವೂ ಬಿಡುವು ಕೊಡದೇ ದುಡಿದೆ. ಸಂಪಾದನೆ ಮಾಡುವುದನ್ನು ಬಿಟ್ಟು ಏನೂ ಮಾಡಲಿಲ್ಲ. ನನ್ನ ಮಗ ಸತ್ತಾಗ ಯಾರನ್ನು ತಬ್ಬಿಕೊಂಡು ಅಳಬೇಕು ಅಂತಲೇ ಗೊತ್ತಾಗಲಿಲ್ಲ. ಹಾಗೆ ನನ್ನ ಸಂಕಟ ಹೇಳಿಕೊಳ್ಳಬಲ್ಲವರು ಒಬ್ಬರೂ ಇರಲಿಲ್ಲ. ನನ್ನ ದುಡಿಮೆ ಎಲ್ಲ ಸ್ನೇಹವನ್ನೂ ಸಂಬಂಧವನ್ನೂ ಕೊಂದುಹಾಕಿತ್ತು. ಬಹುಶಃ ನಾನು ಸತ್ತರೂ ಯಾರೂ ನನ್ನ ಹೆಣ ನೋಡಲಿಕ್ಕೆ ಬರಲಿಕ್ಕಿಲ್ಲ. ಯಾಕೆಂದರೆ ಗೆಳೆಯರ ಪಾಲಿಗೆ, ಸಂಬಂಧಿಕರ ಪಾಲಿಗೆ, ನನ್ನವರ ಪಾಲಿಗೆ ನಾನು ಬದುಕಿಯೇ ಇಲ್ಲ. ಅವರಿಗೆ ನಾನೊಬ್ಬ ಕೋಟು ಹಾಕಿಕೊಂಡ, ಲಕ್ಷಾಂತರ ರುಪಾಯಿ ಗಳಿಸುವ, ವಿದೇಶಗಳಿಗೆ ಓಡಾಡುವ, ಇಂಗ್ಲಿಷ್, ಜರ್ಮನಿ, ಫ್ರೆಂಚ್ ಮಾತಾಡಬಲ್ಲ ವ್ಯಕ್ತಿ. ಆಗೀಗ ನಮ್ಮ ಹೋಟ್ಲು ಈಶ್ವರಣ್ಣನ ಮಗ ಹೇಗಾಗಿದ್ದಾನೆ ನೋಡಿದ್ರಾ ಅಂತ ಹಳೇ ಕಾಲದವರು ಮಾತಾಡುತ್ತಾರೆ. ಅದು ಮೊದಲೆಲ್ಲ ತುಂಬ ಇಂಪಾಗಿ ಕೇಳಿಸುತ್ತಿತ್ತು. ಈಗ ಕರ್ಕಶವಾಗಿ ಕೇಳಿಸುತ್ತಿದೆ.
ಅಪ್ಪನಿಗೆ ಭಯ ಇರಲಿಲ್ಲವಾ? ನಾನು ಅವರಿಗಿಂತ ಹೆಚ್ಚು ಹೆದರಿಕೊಂಡಿದ್ದೆನಾ? ನಾನು ಹೆದರಿದ್ದು ಯಾರಿಗೆ? ನಾಳೆಗಾ, ನಿನ್ನೆಗಾ? ಅಪ್ಪನ ಹಾಗೆ ಆಗಬಾರದು ಅಂತ ಹೊರಟು ಇಷ್ಟು ದೂರ ಬಂದುಬಿಟ್ಟೆ. ತಿರುಗಿ ಹೋಗುವುದಕ್ಕೆ ಸಾಧ್ಯವೇ ಇಲ್ಲ. ಎಲ್ಲರೂ ಅಪರಿಚಿತರ ಹಾಗೆ ಕಾಣುತ್ತಾರೆ. ಹೆಂಡತಿ ಕೂಡ. ನಿಜ ಹೇಳಬೇಕು ಅಂದರೆ ಅವಳಿಗೆ ಸ್ಟ್ರೋಕ್ ಆಗಿದೆ. ಮಲಗಿದಲ್ಲೇ ಇದ್ದಾಳೆ. ಸೇವೆ ಮಾಡುವುದಕ್ಕೆ ಅಂತ ಒಬ್ಬಳು ನರ್ಸು ಬಂದು ಹೋಗುತ್ತಾಳೆ.
ನಾನೀಗ ಏನು ಮಾಡಲಿ? ದುಡಿಯುತ್ತಾ ಹೋಗಬೇಕಾ? ಏನೂ ಬೇಡ ಅಂತ ಮನೇಲಿ ಕೂತ್ಕೊಳ್ಳಲಾ? ಬೆಂಗಳೂರಲ್ಲಿರುವ ಒಂದೊಂದು ಮನೆಗೂ ಐದಾರು ಕೋಟಿ ಬರುತ್ತದೆ. ಎಲ್ಲಾ ಮಾರಿ ಎಪ್ಪತ್ತೋ ಎಂಬತ್ತೋ ಕೋಟಿ ಕೈಲಿಟ್ಟುಕೊಂಡು ಊರಿಗೆ ಹೋಗಬಹುದು. ಅಲ್ಲಿರುವ ತೋಟ ನೋಡಿಕೊಂಡು ಇರಬಹುದು. ಆದರೆ ನನ್ನ ಮುಂದೆ ಆಯಸ್ಸಿದೆ. ನನಗಿನ್ನೂ ಐವತ್ತೆಂಟು. ಮೊನ್ನೆ ತಾನೇ ಫುಲ್ ಬಾಡಿ ಚೆಕಪ್ ಮಾಡಿಸಿಕೊಂಡೆ. ಯಾವ ಖಾಯಿಲೆಯೂ ಇಲ್ಲ. ಇನ್ನೂ ಮೂವತ್ತು ವರುಷ ಬದುಕಬಲ್ಲೇ. ಅಷ್ಟೊಂದು ವರುಷಗಳು ನನ್ನ ಮುಂದೆ ಗೊಡ್ಡಾಗಿ ಬಿದ್ದುಕೊಂಡಿದೆ. ನನಗೆ ಅದು ಬೇಕಾಗೇ ಇಲ್ಲ. ದುಡ್ಡೂ ಬೇಕಾಗಿಲ್ಲ. ಈಗ ಅದನ್ನೆಲ್ಲ ದಾನ ಮಾಡಿಬಿಡೋಣ ಅಂತಲೂ ಅನ್ನಿಸೋಕೆ ಶುರು ಆಗಿದೆ. ಅಲ್ಲಿಗೆ ನಾನೂ ಅಪ್ಪನ ಹಾಗೇ ಆಗಿಬಿಟ್ಟೆ. ಅಪ್ಪ ಸಾವಿರಾರು ರುಪಾಯಿ ಬಂದಾಕ್ಷಣ ಪೂಜೆ ಮಾಡಿ ಎಲ್ಲರಿಗೂ
ಊಟ ಹಾಕಿ ದಕ್ಷಿಣೆ ಕೊಟ್ಟು ಕೈ ಖಾಲಿ ಮಾಡಿಕೊಳ್ಳುತ್ತಿದ್ದರು. ಸಂತೋಷವಾಗಿರುತ್ತಿದ್ದರು. ಅಪ್ಪ ಹೊಟೆಲಿನಲ್ಲಿದ್ದಾಗ ಹತ್ತೆಂಟು ಮಂದಿ ಅವರಂಥವರು ಬಂದು ಹರಟೆ ಹೊಡೆಯುತ್ತಿದ್ದರು. ಅಪ್ಪನನ್ನು ಸೋಂಭೇರಿ ಅಂತ ಹಿಂದಿನಿಂದ ಆಡಿಕೊಂಡವರೇ, ಅವರನ್ನು ತುಂಬ ಪ್ರೀತಿಸುತ್ತಿದ್ದರು. ಅಪ್ಪ ಯಾವತ್ತೂ ಕಾಯಿಲೆ ಬೀಳಲಿಲ್ಲ. ದೂರದೂರಿಗೆ ಹೋಗಿ ಬಂದು ಏನೇನೋ ಕತೆ ಹೇಳುತ್ತಿದ್ದರು. ಹಳೆಯ ಅಂಗಿ ಹಾಕಿಕೊಂಡು ಎಂಟು ಗಂಟೆಗೆ ಹೊಟೆಲ್ಲಿಗೆ ಹೊರಟರೆ, ದಾರೀಲಿ ಅವರಿವರ ಜೊತೆ ಮಾತಾಡುತ್ತಾ ಹತ್ತು ಗಂಟೆಗೆ ಹೋಟೆಲು ಸೇರುತ್ತಿದ್ದರು. ಒಂದೂವರೆ ಮೈಲಿ ಹೋಗುವುದಕ್ಕೆ ಎರಡು ಗಂಟೆ ತೆಗೆದುಕೊಳ್ಳುತ್ತಿದ್ದರು.
ನನಗೆ ಆ ನಿಧಾನ ಬೇಕು. ಆ ಜೀವನ ಬೇಕು. ನಾನು ಮೂರ್ಖನಾದೆ. ನಿಜಕ್ಕೂ ಅಪ್ಪನನ್ನು ಸೋಲಿಸುವುದಕ್ಕೆ ಹೋಗಿ, ಸೋತುಹೋದೆ. ಯಾರ ಮುಂದೆ ನಾನು ಗೆದ್ದು ತೋರಿಸಬೇಕು ಅಂತ ಹೋರಾಡಿದೆನೋ ಈಗ ಅವರು ಯಾರೂ ಇಲ್ಲ. ನಾನು ಗೆದ್ದಿದ್ದೇನೆ ನಿಜ. ಆದರೆ ನಮ್ಮಪ್ಪ, ಅವರ ಜೊತೆಗೆ ಬದುಕಿದವರು, ಅವರನ್ನು ಆಡಿಕೊಂಡವರು, ಅವರನ್ನು ತಮಾಷೆ ಮಾಡಿದವರು- ಎಲ್ಲರೂ ತೀರಿಕೊಂಡಿದ್ದಾರೆ ಅಥವಾ ಮುದಿಯಾಗಿ ಒರಗಿದ್ದಾರೆ. ನನ್ನ ವಯಸ್ಸಿನವರೆಲ್ಲ ನನ್ನ ಹಾಗೇ ಆಗಿಹೋಗಿದ್ದಾರೆ. ಎಲ್ಲೆಲ್ಲೋ ಯಾವ್ಯಾವ ದೇಶದಲ್ಲೋ ಇದ್ದಾರೆ.
ನಮ್ಮ ಮೇಲೆ ನಾವೇ ಸೇಡು ತೀರಿಸಿಕೊಳ್ಳಲು ಹೋಗಬಾರದು. ಬದುಕಿಗಿಂತ ಮನುಷ್ಯ ದೊಡ್ಡವನಾಗಲು ಹೊರಡಬಾರದು. ಯಾತನೆಯನ್ನು ಶ್ರೀಮಂತಿಕೆ ಮೀರಲಾರದು. ನೆಮ್ಮದಿ ಎನ್ನುವ ಚಿಲುಮೆ, ಕಷ್ಟವೆಂಬ ಬಂಡೆಗಲ್ಲಿನ ಬುಡದಲ್ಲೇ ಉಕ್ಕುತ್ತಿರಬಹುದು.
ಕರುಣಾಕರ ಇದನ್ನೆಲ್ಲ ಹೇಳಿ ಸುಮ್ಮನೆ ಕುಳಿತ. ನಾನೂ ಸುಮ್ಮನೆ ಕುಳಿತಿದ್ದೆ. ಯಾವ ಮಾತಿನಿಂದ ಅವನಿಗೆ ಸಮಾಧಾನ ಹೇಳಬಹುದು ಎಂದು ಕಾಯತೊಡಗಿದೆ. ನಾವು ನಡೆದ ದಾರಿ ನಿರರ್ಥಕ ಅನ್ನಿಸುವುದು ಯಾವಾಗ ಅಂತ ಯೋಚಿಸಿದೆ.
ಉತ್ತರ ಹೊಳೆಯುತ್ತಿಲ್ಲ.

‍ಲೇಖಕರು G

October 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಕಲಾಗಂಗೋತ್ರಿ ಮಂಜು

    ನಮ್ಮ ಮೇಲೆ ನಾವೇ ಸೇಡು ತೀರಿಸಿಕೊಳ್ಳಲು ಹೋಗಬಾರದು. ಬದುಕಿಗಿಂತ ಮನುಷ್ಯ ದೊಡ್ಡವನಾಗಲು ಹೊರಡಬಾರದು. ಯಾತನೆಯನ್ನು ಶ್ರೀಮಂತಿಕೆ ಮೀರಲಾರದು. “ನೆಮ್ಮದಿ ಎನ್ನುವ ಚಿಲುಮೆ, ಕಷ್ಟವೆಂಬ ಬಂಡೆಗಲ್ಲಿನ ಬುಡದಲ್ಲೇ ಉಕ್ಕುತ್ತಿರಬಹುದು.”
    ಹಿಂದೊಮ್ಮೆ ಓದಿದ್ದೆ, ಈಗ ಮತ್ತೊಮ್ಮೆ ಓದಿದೆ…. ಸತ್ಯ ತಿಳಿದಿದ್ದರೂ ಅತಿಯಾದ ಆಮಿಷಕ್ಕೆಒಳಗಾಗಿ ’ನಾನು, ನನ್ನದು’ ಇಷ್ಟರಲ್ಲೇಇದ್ದು.. ಉಳಿದೆಲ್ಲವೂ,ಉಳಿದವರೆಲ್ಲರನ್ನೂ ಕಡೆಗಣಿಸಿ ನೆಮ್ಮದಿಯಲ್ಲಿದ್ದೇನೆಂದು ಭ್ರಮಿಸಿ, ಭ್ರಮನಿರಸನ ವಾಗುವಾಗ್ಗೆ ಯೋಚಿಸಿದರೇನುಪಯೋಗ ಎನಿಸುತ್ತದೆ.

    ಪ್ರತಿಕ್ರಿಯೆ
  2. ಸುಧಾ ಚಿದಾನಂದಗೌಡ

    “ನನಗೆ ಆ ನಿಧಾನ ಬೇಕು…”
    ಅತ್ಯಂತ ಅರ್ಥಪೂರ್ಣ ಮಾತು.
    ಮೌನದ ಕುರಿತೂ ಈ ಮಾತು ಹೇಳಬಹುದೆಂದು ತೋರುತ್ತದೆ..
    ಸುತ್ತ ಶಬ್ಧಮಯವಾದಂತೆಲ್ಲಾ ಹಾಗನಿಸುತ್ತದೆ.

    ಪ್ರತಿಕ್ರಿಯೆ
  3. ಜೆ.ವಿ.ಕಾರ್ಲೊ, ಹಾಸನ

    ಇಷ್ಟೆಲ್ಲಾ ಓದಿದ ಮೇಲೂ… ನಾನೂ ಕರುಣಾಕರನ ಅಪ್ಪನಂತೆಯೇ ಎನಿಸಿ ದಿಗಿಲಾಯ್ತು!

    ಪ್ರತಿಕ್ರಿಯೆ
  4. Anil Talikoti

    ವಾವ್ – ಒಂದೆ ಉಸಿರಿನಲ್ಲಿ ಓದಿದೆ, ಓದಿದ ಮೇಲೆ ಅನಿಸಿತು ಛೆ, ನಿಧಾನವಾಗಿ recliner ಸೋಪಾದ ಮೇಲೆ ಕೂತು, ಹಬೆಯಾಡುವ ತಾಜೋ ಚಹಾದ ಪರಿಮಳದೊಂದಿಗೆ ಆಸ್ವಾದಿಸಬೇಕಾದ ಲೇಖನವಿದು ಅಂತ. ಜೊತೆಗೆ ಮೆಲ್ಲುವದಕ್ಕೆ ಹುರಿದ ಗೋಡಂಬಿ, ಚಿಪ್ಸ್ ಇದ್ದರೆ ಇನ್ನೂ ಸೊಗಸಾಗಿರುವದು. ಮೆಲ್ಲಗೆ ಕಾಲು ಒತ್ತಲು ಒಬ್ಬಳಿದ್ದರೆ ಸ್ವರ್ಗಾದಪಿ….ಅರೇ, ಅಷ್ಟೆಲ್ಲಾ ಐಷಾರಾಮಿ ಬೇಕೆಂದರೆ ದುಡಿಯಬೇಕು-ಓದಿದ್ದನ್ನು ಖುಷಿಯಿಂದ ಅನುಭವಿಸಲು ಅರಿವಿರಬೇಕು -ಅರಿವು ಗಳಿಸಲು – ಮತ್ತದೆ- ದುಡಿಯಬೇಕು. ಮಾರ್ಗವ ತೋರಿಸು ಮನಸ್ಸೇ. ಉತ್ತರ ಹೊಳೆಯಿತು – ಸದ್ಯಕ್ಕಂತೂ ಸಾಧ್ಯವಾದಷ್ಟು ದುಡಿಯಬೇಕು -ಮುಂದೆ ಟೈಮ ಸಿಕ್ಕಾಗ ಯೋಚಿಸುವಾ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  5. ಮುನಿ ಹೂಗಾರ್

    ಕೆಟ್ಟ ಕನಸಲ್ಲಿ ನಮ್ಮವರು ಸತ್ತಾಗ, ತಬ್ಕೊಂಡು ಅಳೊದಕ್ಕೂ ಸಹಿತ ಒಬ್ಬ ವ್ಯಕ್ತಿ ಸಂಪಾದನೆ ಮಾಡಿಕೊಳ್ದೆ ಇರೋದು ಒಂದು ಜೀವನಾನ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: