ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ:ಸಂತಾಪ-ಕೊನೆಯ ಭಾಗ

-ಒಂದೂವರೆ ಗಂಟೆಯ ಕಾರ್ಯಕ್ರಮ. ಏಳೆಂಟು ಕವಿಗಳು ಕವಿತೆ ಓದಿದರು. ಹನಸೋಗೆಯಿಂದ ಬಂದಿದ್ದ ಚಂದ್ರಕಾಂತ ಪಾಟೀಲರು ನಿರ್ಮಲಾ ಜೋಷಿಯ ಕವನ ಸಂಕಲನನ ಬಿಡುಗಡೆ ಮಾಡಿದರು. ಅದಾದ ನಂತರ ಆಕೆಯ ವಿದ್ವತ್ತು, ಪ್ರತಿಭೆಯ ಕುರಿತು ನಾಲ್ಕೈದು ಮಂದಿ ಕಣ್ತುಂಬಿಕೊಂಡು ಮಾತಾಡಿ ಶ್ರದ್ಧಾಂಜಲಿ ಸೂಚಿಸಿದರು. ನಿರ್ಮಲಾ ಜೋಷಿಯದು ಅಕಾಲ ಮೃತ್ಯು. ಆಕೆ ಇನ್ನೂ ಇರಬೇಕಾಗಿತ್ತು. ಕಾವ್ಯ ಜಗತ್ತಿಗೆ ಆಕೆಯ ತೆರವಿನಿಂದ ಬಹುದೊಡ್ಡ ನಷ್ಟವಾಗಿದೆ. ಅವರ ಕವಿತೆಗಳು ಹೊಸಬರಿಗೆ ಸ್ಪೂತರ್ಿಯಾಗಲಿ ಎಂದು ಚಂದ್ರಕಾಂತ ಪಾಟೀಲರು ಭಾಷಣ ಮಾಡಿದರು.ನಂತರ ನಾಗರಾಜ ಮಾತಾಡಿದ. ಇಂಥ ಸಂದರ್ಭದಲ್ಲಿ ಏನು ಮಾತಾಡಬೇಕು ಅನ್ನುವುದನ್ನು ದಾರಿಯುದ್ದಕ್ಕೂ ಯೋಚಿಸಿಕೊಂಡೇ ಬಂದಿದ್ದ. ಅದೆಲ್ಲ ಮರೆತುಹೋಗಿ ಸಭಾಂಗಣ ನೋಡುತ್ತಿದ್ದಂತೆ ಮನಸ್ಸು ಖಾಲಿ ಖಾಲಿ ಅನ್ನಿಸಿತು. ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದಷ್ಟೇ ಹೇಳಿ ಮಾತು ಮುಗಿಸುವುದು ಎಂದುಕೊಂಡವನನ್ನು ಕಾರ್ಯಕ್ರಮ ನಿವರ್ಾಹಕ ಇಕ್ಕಟ್ಟಿಗೆ ಸಿಲುಕಿಸಿದ್ದ.

ಈಗ ಮಾತಾಡಲಿರುವ ನಾಗರಾಜ್ ಅವರು ಬೆಂಗಳೂರಿನಿಂದ ಬಂದಿದ್ದಾರೆ. ನಿರ್ಮಲಾ ಜೋಷಿಯವರನ್ನು ತುಂಬ ಹತ್ತಿರದಿಂದ ನೋಡಿದವರು ಅವರು. ಒಂದು ರೀತಿಯಲ್ಲಿ ನಿರ್ಮಲಾ ಜೋಷಿ ಇವರ ಶಿಷ್ಯೆ ಎಂದರೂ ತಪ್ಪಾಗಲಾರದು. ಅವರು ಈಗ ವಿವರವಾಗಿ ಒಂದಷ್ಟು ಮಾತಾಡಲಿದ್ದಾರೆ ಎಂದುಬಿಟ್ಟ.ನಾಗರಾಜ ಸಭೆಯನ್ನೊಮ್ಮೆ ನೋಡಿದ. ಅರುವತ್ತು ದಾಟಿದ ಮುದುಕರ ಸಭೆ. ಒಂದಷ್ಟು ಯುವ ಕವಿಗಳು ಹಿಂದೆಲ್ಲೋ ಕೂತು ತಮ್ಮಷ್ಟಕ್ಕೇ ನಗುತ್ತಾ ಏನೋ ಮಾತಾಡಿಕೊಳ್ಳುತ್ತಿದ್ದರು. ಮೂರನೆ ಸಾಲಲ್ಲಿ ಕುಳಿತ ತರುಣಿ ನಿಮಷಕ್ಕೆ ನಾಲ್ಕರಂತೆ ಸೀನುತ್ತಿದ್ದಳು. ಅವಳು ಸೀನಿದಾಗ ಇಡೀ ಸಭಾಂಗಣ ತತ್ತರಗುಡುತ್ತಿತ್ತು. ವೇದಿಕೆಯ ಮೇಲೆ ಕುಳಿತವರತ್ತ ತಿರುಗಿ ನೋಡಿದರೆ ಅವರು ತನ್ನ ಮಾತಿಗಾಗಿಯೇ ಕಾಯುತ್ತಿದ್ದಾರೆ ಅನ್ನಿಸತೊಡಗಿತು.ನಿರ್ಮಲಾ ಸೈಕಲ್ಲಿನಲ್ಲಿ ಬ್ಯಾಂಕಿಗೆ ಬರುತ್ತಿದ್ದಳು. ತುಂಬ ಸರಳ ವ್ಯಕ್ತಿತ್ವ ಅವಳದು. ಅವಳನ್ನು ಹತ್ತಿರದಿಂದ ನೋಡದವರಿಗೆ ಅವಳು ಕವಿಯೆಂದಾಗಲೀ ಮಾನವೀಯತೆ ತುಂಬಿ ತುಳುಕುವ ಜೀವ ಎಂದಾಗಲೀ ಗೊತ್ತೇ ಆಗುತ್ತಿರಲಿಲ್ಲ. ನಾನೊಮ್ಮೆ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಾಗ ಆಕೆ ಅದನ್ನು ಅರ್ಥ ಮಾಡಿಕೊಂಡು ಇಪ್ಪತ್ತು ಸಾವಿರ ರುಪಾಯಿ ತಂದು ಮುಂದಿಟ್ಟಿದ್ದಳು. ನಾನು ಅದನ್ನು ಎರಡು ವರ್ಷಗಳ ನಂತರ ಹಿಂದಿರುಗಿಸಿದಾಗ ಬಡ್ಡಿ ಕೂಡ ತೆಗೆದುಕೊಂಡಿರಲಿಲ್ಲ.  ಮಧ್ಯಾಹ್ನಕ್ಕೆಂದು ಮನೆಯಿಂದ ಊಟ ತರುತ್ತಿದ್ದಳು. ಅದನ್ನು ಎಲ್ಲರೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದಳು. ಅವಳು ಎಷ್ಟು ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದಳು ಎಂದರೆ ಅವಳ ಸಂಬಳ, ಸ್ಥಾನಮಾನ ಅವಳನ್ನು ಯಾವತ್ತೂ ಬದಲಾಯಿಸಲೇ ಇಲ್ಲ..ನಾಗರಾಜ ಮಾತಾಡುತ್ತಾ ಹೋದ.

ಇದ್ಯಾವುದು ತಾನು ಆಡಬೇಕಾದ ಮಾತುಗಳಲ್ಲ ಅನ್ನುವುದು ಅವನಿಗೆ ಗೊತ್ತಾಗುತ್ತಿತ್ತು. ಆಡಬಹುದಾದ ಮಾತುಗಳನ್ನಷ್ಟೇ ನಾವು ಆಡುತ್ತೇವೆ. ಆಡಬೇಕಾದ ಮಾತುಗಳನ್ನಲ್ಲ. ಅದಕ್ಕೇ ಬದುಕು ಕ್ಲಿಷ್ಟ ಮತ್ತು ಭಯಾನಕ. ಆಡಬೇಕಾದ ಮಾತುಗಳನ್ನು ಆಡುವುದಕ್ಕೆ ಆಡಿಸುವುದಕ್ಕೆ ಇರುವ ಏಕೈಕ ಸಾಧ್ಯತೆ ಕಾವ್ಯ. ಕವಿತೆ ತನ್ನದೂ ಆಗಿ ಬೇರೆಯವರದ್ದೂ ಆಗಿ ಸರ್ವರದ್ದೂ ಆಗಿಬಿಡಬಹುದು. ಅದು ತನ್ನದು ಎಂದು ತನಗಷ್ಟೇ ಗೊತ್ತಿರುತ್ತೆ. ಬೇರೆಯವರು ಅದನ್ನು ಕಾವ್ಯವಾಗಿ ನೋಡುತ್ತಾರೆ. ಒಳ್ಳೆಯ ಪದ್ಯ ಎಂದು ಮೆಚ್ಚುತ್ತಾರೆ. ಅದು ತನ್ನ ರಕ್ತಮಾಂಸಗಳಿಂದ ಕೂಡಿದ್ದು ಅನ್ನುವುದು ಕವಿಗಷ್ಟೇ ಗೊತ್ತಿರುತ್ತದೆ. ಸತ್ಯ ಹೇಳುವುದಕ್ಕೆ  ಕವಿತೆಯಲ್ಲದೇ ಬೇರೆ ದಾರಿಯಿಲ್ಲ. ನಿರ್ಮಲಾಳ ಬಗ್ಗೆ ತಾನೇನಾದರೂ ಹೇಳೋಕೆ ಸಾಧ್ಯವಿದ್ದರೆ ಅದು ಕವಿತೆಯ ಮೂಲಕ ಮಾತ್ರ. ತಾನು ಅವಳ ಬಗ್ಗೆ ಮಾತಾಡಬಾರದು, ಒಂದು ಕವನ ಬರೆದುಬಿಡಬೇಕು.ಹಾಗಂತ ಯೋಚಿಸುತ್ತಾ ನಾಗರಾಜ ಅವಳು ಅನಾಥ ಮಗುವಿಗೆ ಆಶ್ರಯ ಕೊಟ್ಟದ್ದು, ಸ್ಕೂಲು ಮಕ್ಕಳಿಗೆ ಪುಸ್ತಕ ತೆಗೆದುಕೊಡುತ್ತಿದ್ದದ್ದು, ಅಟೆಂಡರ್ ಶ್ರೀನಿವಾಸನ ಮಗುವಿಗೆ ಕಾಯಿಲೆ ಬಿದ್ದಾಗ ಹನ್ನೆರಡು ಸಾವಿರ ಕೊಟ್ಟದ್ದು- ಹೀಗೆ ಏನೇನೋ ವಿವರಗಳನ್ನು ನೆನಪಿನಿಂದ ಹೆಕ್ಕಿ ತೆಗೆದು ಮಾತಾಡಿದ. ಇವೆಲ್ಲವೂ ನಿರ್ಮಲಾ ಜೋಷಿಯನ್ನು ತ್ಯಾಗಿಯಾಗಿಯೂ ಸಮಾಜ ಸೇವಕಿಯಾಗಿಯೂ ಕಟ್ಟಿಕೊಡುತ್ತಿದೆಯೇ ಹೊರತು, ಅವಳ ತಳಮಳ, ಅಕ್ಕರೆ, ಅವಳು ತನಗೆ ಕೊಟ್ಟ ಪ್ರೀತಿ, ಅವಳು ಕಲಿಸಿದ ಪಾಠಗಳನ್ನೆಲ್ಲ ಸೂಚಿಸುತ್ತಿಲ್ಲ ಅನ್ನಿಸಿ ನಾಗರಾಜ ಮಾತು ಮುಗಿಸಿದ. ಸಭಾಂಗಣ ಚಪ್ಪಾಳೆ ತಟ್ಟಿತು. ಚಂದ್ರಕಾಂತ ಪಾಟೀಲರು ತುಂಬ ಭಾವುಕವಾಗಿ ಮಾತಾಡಿದರಿ. ಗುಡ್ ಗುಡ್ ಎಂದು ಕಿವಿಯಲ್ಲಿ ಕೆಮ್ಮಿದರು

.ಆಮೇಲೆ ಶೈಲಜಾ ಜೋಷಿಯ ಧನ್ಯವಾದ ಸಮರ್ಪಣೆ. ಆಗಲೇ ಎದ್ದು ಹೋಗಲು ಆರಂಭಿಸಿದವರನ್ನು ಶೈಲಜಾ ಮೊದಲ ವಾಕ್ಯದಲ್ಲೇ ತಡೆದು ಕೂರಿಸಿದಳು. ಮಂದಿ ತುಂಬ ಸುಂದರವಾಗಿ ಸುಳ್ಳು ಹೇಳ್ತಾರೆ. ಸುಳ್ಳು ಅಂತ ಗೊತ್ತಿದ್ದೂ ಸುಳ್ಳು ಹೇಳ್ತಾರೆ ಎನ್ನುತ್ತಾ ಶೈಲಜಾ ವೇದಿಕೆಯ ಮೇಲೆ ಕೂತವರತ್ತ ಕೈ ತೋರಿಸಿದಳು. ಸಭೆ ಮೌನವಾಯಿತು. ಶೈಲಜಾ ಮುಂದುವರಿಸಿದಳು.ನಮ್ಮಕ್ಕ ಇದ್ಯಾವುದೂ ಆಗಿರಲಿಲ್ಲ. ಇವರೆಲ್ಲ ಇಷ್ಟು ಹೊತ್ತು ಹೇಳಿದ್ದೆಲ್ಲ ನನ್ನ ಪ್ರಕಾರ ಸುಳ್ಳು. ನಿರ್ಮಲಾ ತುಂಬ ಸ್ವಾಥರ್ಿಯಾಗಿದ್ದಳು.  ಇವರಿಗೆ ಇಪ್ಪತ್ತು ಸಾವಿರ, ಮತ್ಯಾರಿಗೋ ಹನ್ನೆರಡು ಸಾವಿರ, ಮತ್ಯಾವುದೋ ಮಕ್ಕಳಿಗೆ ಬಟ್ಟೆ, ಇನ್ಯಾರಿಗೋ ಊಟ ಕೊಡಿಸುತ್ತಿದ್ದ ಅಕ್ಕ ತನ್ನ ತಂಗಿಗೆ ಏನೂ ಕೊಟ್ಟಿರಲಿಲ್ಲ. ನನ್ನ ಬದುಕು ಕಸಿದುಕೊಂಡಳು. ನನ್ನನ್ನು ಅವಳ ಹಾಗೆ ಅನಾಥಳನ್ನಾಗಿ ಮಾಡಿದಳು. ನಾನು ಕೂಡ ಮದುವೆ ಆಗದ ಹಾಗೆ ಮಾಡಿದಳು. ನನ್ನ ಜೀವನವನ್ನೇ ಹಾಳು ಮಾಡಿದಳು.ಹೀಗೆಲ್ಲ ನಾನು ಹೇಳಿದರೆ ಯಾರೂ ನಂಬ್ತಾ ಇರಲಿಲ್ಲ. ಅವಳ ಸುತ್ತಲೂ ಒಂದು ಪ್ರಭಾವಳಿಯಿತ್ತು. ಕವಿ, ಸೂಕ್ಷ್ಮಜ್ಞೆ, ಭಾವುಕಿ, ಮೃದು ಮನಸ್ಸಿನ ಭಾವಜೀವಿ, ತ್ಯಾಗಮಯಿ, ಕಷ್ಟಜೀವಿ ಅನ್ನೋ ಪ್ರಭಾವಳಿ. ಆ ಬೆಳಕಲ್ಲಿ ನಾನು ಯಾರಿಗೂ ಕಾಣಿಸ್ತಾನೇ ಇರಲಿಲ್ಲ. ನಮ್ಮಮ್ಮ ಇದ್ದಾಗಲೂ ಅಕ್ಕನ ಥರ ಆಗು ಅಂತಿದ್ದಳು. ನಾನು ಪ್ರೀತಿಸಿದ ಹುಡುಗ ಕೂಡ ನೀನು ನಿಮ್ಮಕ್ಕನ ಥರ ಅಲ್ಲ, ತುಂಬ ಸ್ವಾಥರ್ಿ ಅಂದು ಹೊರಟು ಹೋದ. ನನ್ನನ್ನು ಎಲ್ಲರೂ ಅಕ್ಕನ ಜೊತೆ ಹೋಲಿಸಿ ನೋಡೋಕೆ ಶುರು ಮಾಡಿದ್ರು. ನಾನು ಅಕ್ಕನ ಥರ ಆಗೋದಕ್ಕೆ ಹೋದೆ. ಪದ್ಯ ಬರೆದೆ, ಅಕ್ಕನ ಥರ ಬರೀತಾಳೆ ಅಂದ್ರು. ದಾನ ಮಾಡಿದೆ, ಅಕ್ಕ ಕಲಿಸಿಕೊಟ್ಟ ಪಾಠ ಅಂದ್ರು. ಪ್ರೀತಿಸೋಕೆ ಹೋದೆ, ನಿಮ್ಮಕ್ಕನ ಪ್ರೀತಿ ದೊಡ್ಡದು ಅಂದ.  ನಮ್ಮ ನಿರ್ಮಲಾ ತಂಗಿ ಅಂತ ಗುರುತಿಸಿಕೊಂಡು ಸಾಕಾಗಿತ್ತು. ಅಕ್ಕನ ನೆರಳಿನಿಂದ ಪಾರಾಗೋದಕ್ಕೆ ನನಗೆ ಇವತ್ತೂ ಸಾಧ್ಯ ಆಗ್ತಿಲ್ಲ. ಅಕ್ಕ ಉದಾತ್ತವಾಗಿರಬಾರದು. ಅಕ್ಕ ಗ್ರೇಟ್ ಆಗಿರಬಾರದು. ಹೆಣ್ಮಕ್ಕಳಿಗೆ ಅಕ್ಕ ಇರಬಾರದು. ಇದ್ರೂ ಕಾಡ್ತಾರೆ, ಸತ್ರೂ ಕಾಡ್ತಾರೆ. ಅಕ್ಕ ಸಾಯೋ ಬದಲು ನಾನೇ ಸತ್ತಿದ್ರೆ ಎಷ್ಟೋ ಚೆನ್ನಾಗಿತ್ತು….ಮಾತಾಡುತ್ತಾ ಆಡುತ್ತಾ ಆವೇಶಕ್ಕೆ ಒಳಗಾದಂತೆ ತೊನೆದಾಡುತ್ತಿದ್ದಂತೆ ಯಾರೋ ಬಂದು ಅವಳನ್ನು ಹಿಡಿದುಕೊಂಡರು. ಮತ್ಯಾರೋ ಕಾರ್ಯಕ್ರಮ ಮುಗೀತು ಎಂದು ಘೋಷಿಸಿದರು. ಜನ ಮೌನವಾಗಿ ಮರಳುತ್ತಿದ್ದರು.

ನಾಗರಾಜ ಅವಳನ್ನು ನಿರುದ್ಧಿಶ್ಯ ನೋಡುತ್ತಾ ನಿಂತ. ಅವಳು ಹೇಳಬೇಕಾದ್ದನ್ನು ಹೇಳಿದ್ದಾಳೆ ಅನ್ನಿಸಿತು. ಆದರೆ ಕವಿತೆಯ ಮೂಲಕ ಹೇಳುವುದನ್ನು ಮಾತಿನ ಮೂಲಕ ಹೇಳಿದ್ದಾಳಲ್ಲ ಅಂತ ಬೇಸರವಾಯ್ತು. ಇದನ್ನೇ ಕತೆಯಾಗಿಯೋ ಕವಿತೆಯಾಗಿಯೋ ಹೇಳಿದ್ದರೆ ಎಷ್ಟು ಪ್ರಭಾವಶಾಲಿ ಆಗಿರುತ್ತಿತ್ತು ಎಂದು ಯೋಚಿಸುತ್ತಾ ಶೈಲಜಾಳ ಜೊತೆ ನಾಲ್ಕು ಮಾತಾಡಬೇಕು ಎಂದು ಬಯಸಿದ. ಅಷ್ಟು ಹೊತ್ತಿಗಾಗಲೇ ಅವಳನ್ನು ಅವಳ ಕಡೆಯವರು ಬೇರೆಲ್ಲಿಗೋ ಕರೆದುಕೊಂಡು ಹೋಗಿದ್ದರು. ಚಂದ್ರಕಾಂತ ಪಾಟೀಲರು ಫ್ರಸ್ಟ್ರೇಟೆಡ್ ಗಲರ್್. ಐ ಪಿಟಿ ಹರ್ ಎಂದು ಆ ಸನ್ನಿವೇಶಕ್ಕೆ ಹೊಂದುವ ಹೇಳಿಕೆಯೊಂದನ್ನು ಎಸೆದು ಹೊರಟುಬಿಟ್ಟರು.ಸುಡುಗಾಡು ಕಾವ್ಯ. ಹೇಳಬೇಕಾದ್ದನ್ನು ಹೇಳಲಾಗದ ಮಾತು. ಕವಿತೆಯ ಮೂಲಕ ಹೇಳ ಹೊರಟರೂ ಅಡ್ಡಬರುವ ರೂಪಕಗಳು. ಹೇಳಿದ್ದನ್ನು ಮತ್ತೊಂದು ಥರ ಅರ್ಥ ಮಾಡಿಕೊಳ್ಳುವ ಮಂದಿ. ಅದಕ್ಕೆ ನೂರೆಂಟು ಅರ್ಥ ಕಟ್ಟಿ ಹೊಗಳುವ ತೆಗಳುವ ವಿಮರ್ಶಕರು. ಶೈಲಜಾ ಮಾತಾಡಿದ್ದರಲ್ಲಿ ರೂಪಕಗಳೇ ಇರಲಿಲ್ಲ. ಅವಳು ಮುಚ್ಚಿಡುವುದಕ್ಕೂ ಹೋಗಲಿಲ್ಲ. ಮುಚ್ಚಿಟ್ಟುಕೊಂಡು ನಿದ್ದೆಗೆಟ್ಟಿದ್ದರೆ ಅವಳನ್ನು ಮೆಚ್ಚಿಕೊಳ್ಳುತ್ತಿದ್ದರು. ನಿದ್ದೆಗೆಡುವುದು ಮುಖ್ಯ. ನಿದ್ದೆಗೆಡದವನು ನಿಭರ್ಾವುಕ, ಎಲ್ಲವನ್ನೂ ಸಹಜವಾಗಿ ನೋಡುವುದೇ ತಪ್ಪೇನೋ.ಹೀಗೆ ಯೋಚಿಸುತ್ತಾ ನಾಗರಾಜ ಕಾರು ಹತ್ತಿದ. ಡ್ರೈವರ್ ಸಿರಾ ಹತ್ತಿರ ಬರುತ್ತಿದ್ದಂತೆ ಎಳನೀರು ಕುಡೀಯೋದಕ್ಕೆಂದು ಕಾರು ನಿಲ್ಲಿಸಿದ. ರಸ್ತೆ ಬದಿಯಲ್ಲಿ ಎಳನೀರು ಒಟ್ಟಿ ವ್ಯಾಪಾರ ಮಾಡುತ್ತಾ ಕರ್ರಗಿನ ಒಬ್ಬಾತ ನಿಂತಿದ್ದ. ಅವನ ಕೈಲಿ ಹೊಳೆಯುವ ಮಚ್ಚಿತ್ತು. ಒಂದೇ ಏಟಿಗೆ ಎಳನೀರು ಕೊಚ್ಚಿ ಕೊಚ್ಚಿ ಕೊಡುತ್ತಿದ್ದ ಅವನನ್ನೇ ನೋಡುತ್ತಾ ನಾಗರಾಜ, ಸಂಧ್ಯಾಳಿಗೆ ಫೋನ್ ಮಾಡಿದ.ಹೊರಟಿದ್ದೀನಿ. ಕಾರ್ಯಕ್ರಮ ಚೆನ್ನಾಗಾಯ್ತು . ಬರೋದು ರಾತ್ರಿಯಾಗಬಹುದು ಅಂದ. ಸಂಧ್ಯಾ ಊಟಕ್ಕೆ ಕಾಯ್ತಿತರ್ೀನಿ , ಬೇಗ ಬನ್ನಿ ಅಂದಳು.ನಿರ್ಮಲಾ ಜೋಷಿಯ ಸಾವು ಸಂಧ್ಯಾಳನ್ನು ಕವಿಯಾಗಿಸಿದರೆ ಹೇಗಿರುತ್ತೆ ಎಂದು ಯೋಚಿಸುತ್ತಾ ನಾಗರಾಜ ಸುಮ್ಮನೆ ಕೂತ.  ಡ್ರೈವರ್ ಬಂದು ಏನೋ ಕೇಳಿದ್ದೂ ಅವನಿಗೆ ಕೇಳಿಸಲಿಲ್ಲ.ರಸ್ತೆಯ ಎರಡೂ ಬದಿಯಲ್ಲಿ ಹಸಿರು ಹೊಲ. ನಾಗರಾಜ ಕುಳಿತ ಕಾರು ಹಸಿರನ್ನೂ ಬಿಸಿಲನ್ನೂ ಕಾತರವನ್ನೂ ಹಿಮ್ಮೆಟ್ಟಿಸುತ್ತಾ ಧಾವಿಸುತ್ತಿತ್ತು.(ಮುಗಿಯಿತು)

‍ಲೇಖಕರು avadhi

25 August, 2011

13 Comments

  1. balu

    Thank god our jogi is back, choooooooooooo chweeeeeeeeeeeet greeeeeeeeet thanks your sir pl keep writing thins , no picture, no serial , no tive only stories , ah money ???? don’t know take care may god bless you-balu

  2. Vivek

    ಆಡಬಹುದಾದ ಮಾತುಗಳನ್ನಷ್ಟೇ ನಾವು ಆಡುತ್ತೇವೆ. ಆಡಬೇಕಾದ ಮಾತುಗಳನ್ನಲ್ಲ. ಅದಕ್ಕೇ ಬದುಕು ಕ್ಲಿಷ್ಟ ಮತ್ತು ಭಯಾನಕ.

    Very true

    • D.RAVIVARMA

      guruve adbuta naavu ello kaledu hogiddeve namma manasina mate bere adare naavu matanaduva mate bere bahusha kannada kayva lokada nooraru jote samvadisiddene,gundu hakiddene but avara real baduke bere avaru jagattige torisuva baduke bere nanage kelavomme namma maneya mundina watchman uttama anisuttane avanu sullu heluvudilla,ratri kudiyuttane doorada urnalli hendiyannu bittu chalige tatkadadaga discharhe madikolluttane kelavomme hendatiyannu makkalannu nenasikondu aluttane aluttale sarayi kudiyuttane.innu halavomme mukesh hadu hadutta malaguttane d,ravi varma hospet

    • D.RAVIVARMA

      MATTE MATTE ODUVASTU CHENNAGIDE,AVADHIGONDU HATS OFF PATRIKEGALALLI ODALU SADYAVAGA HOSA ADBUTA MAYA LOKAVANNE NAMAGE PARICHAYISUTTIDE NANAGE MATINA BAGGE BASAVANNA MATU NENAPU BARTIDE ” MATU MUTTINA HARADANTIRABEKU.MATU SPATIKADA SALAKEYANTIRABEKU MATU MANIKYADA DEEPTI YANTIRABEKU,MATANADIDARE,LINGAVU MECHHI HAHUDAUDU ENNABEKU NAMMA KADE HALLIOLAGA HIRIYARU YARADARU OBBA OLLE MATUGARANANNU NODIDAGA ” ENU MATADTANARI AVA HASI GODEGA HALLU OGADANGA IRTADE NODRI,HALLU HURIDANGA IRTADA NODRI” ANTA GURUVE BAREYUTTIRI NAVELLO KALEDU HOGADU NAMMA BARAHA,ODINALLE KALEDUHOGANA NIMMINDA EE DIL MANGE MORE D.RAVI VARMA HOSPET

  3. Pradeep

    ಚಂದ್ರಕಾಂತ ಪಾಟೀಲರು…ನಾಗರಾಜ… ee kathe ille yello suttu hoditha idya anta anumana….
    bejarilla…naavella “ಹೇಳಿದ್ದನ್ನು ಮತ್ತೊಂದು ಥರ ಅರ್ಥ ಮಾಡಿಕೊಳ್ಳುವ ಮಂದಿ” saalige serteevi 🙂

  4. Gubbachchi Sathish

    ಕುತೂಹಲದಿಂದ ಓದಿಸಿಕೊಂಡಿತು. ನೈಸ್ ಸರ್. ಥ್ಯಾಂಕ್ಯು.

  5. jogi

    ಕೊಂಚ ಅನುಮಾನದಿಂದಲೇ ಬರೆದಿದ್ದೆ. ನಿಮ್ಮ ಮೆಚ್ಚಿಗೆಯಿಂದ ಖುಷಿಯಾಯಿತು. ಥ್ಯಾಂಕ್ಸ್, ರವಿವರ್ಮ, ಸತೀಶ್, ಪ್ರದೀಪ್, ಬಾಲು ಮತ್ತು ವಿವೇಕ್.

  6. vijayendra kulkarni gulbarga

    good story

  7. ರಂ. ಗೌಡ

    ತುಂಬಾ ಧನ್ಯವಾದಗಳು ಸಾರ್,
    ಮಾತು, ಮನಸು, ಬದುಕು, ಮತ್ತು ಕವನಗಳ ಚಿತ್ರಿಸುವ ಕತೆಯಂತಿರುವ philosophy ಗೆ

  8. vijayaraghavan

    priya Jogi
    yake aadaddakkintha nimma leekhana hechchu bedada probing annisutte

  9. ಶ್ರೀಧರ ಬೇವೂರು

    ಆಡಬೇಕಾದ ಮಾತುಗಳನ್ನೆಲ್ಲ ಆಡುತ್ತ ಹೊರಟರೂ ಬದುಕು ಕ್ಲಿಷ್ಟ ಮತ್ತು ಭಯಾನಕವಾಗಿಯೇ ಇರುತ್ತದಲ್ಲವೆ?

    ನಿಮ್ಮ ಕಥೆಗಳ ಹೆಚ್ಚುಗಾರಿಕೆ ಎಂದರೆ ಅವು ಇಲ್ಲೇ ಎಲ್ಲೋ ಈಗಷ್ಟೇ ಸಂಭವಿಸಿರಬೇಕು ಅನ್ನಿಸತೊಡಗುವುದು!

    ಥ್ಯಾಂಕ್ಸ್!

  10. ಕೇಶವ ಕುಲಕರ್ಣಿ

    ಬದುಕು, ಕವಿತೆ ಮತ್ತು ಮಾತುಗಳ ವಿಚಿತ್ರ ಸಂಬಂಧವನ್ನು ಸರಳಗೊಳಿಸದೇ ಹೇಳಿದ್ದೀರಿ. ಗುಂಯ್ ಗುಡುವ ಕತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading